ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಹ್ರೇನ್ ಸಾಮ್ರಾಜ್ಯದ ಯುವರಾಜ, ಪ್ರಧಾನ ಮಂತ್ರಿ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಅವರೊಂದಿಗೆ ಇಂದು ದೂರವಾಣಿ ಮಾತುಕತೆ ನಡೆಸಿದರು. ಸಲ್ಮಾನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.
ಉಭಯ ನಾಯಕರು ಭಾರತ – ಬಹ್ರೇನ್ ನಡುವಿನ ದ್ವಿಪಕ್ಷೀಯ ಸಂಬಂಧದ ಪರಾಮರ್ಶೆ ನಡೆಸಿ, ವಿವಿಧ ವಲಯಗಳಲ್ಲಿ ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧ ಪ್ರಗತಿಯ ಕಡೆಗೆ ಮುಂದುವರಿಯುತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು. ರಾಜಕೀಯ, ವ್ಯಾಪಾರ, ಹೂಡಿಕೆ, ಇಂಧನ, ಆರೋಗ್ಯ, ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳು ಮತ್ತು ಜನರ ನಡುವೆ ಸಂಪರ್ಕ ಹೆಚ್ಚಾಗುತ್ತಿರುವುದನ್ನು ಇಬ್ಬರೂ ನಾಯಕರು ಮನಗಂಡರು. ಭಾರತ ಮತ್ತು ಬಹ್ರೇನ್ ನಡುವೆ 2021-22ರಿಂದ ರಾಜತಾಂತ್ರಿಕ ಸಂಬಂಧ ಸ್ಥಾಪನೆಯಾಗಿ, ಎರಡೂ ದೇಶಗಳು ಸುವರ್ಣ ಮಹೋತ್ಸವ ಆಚರಿಸುತ್ತಿವೆ.
ಕೋವಿಡ್ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಸಮಯದಲ್ಲಿ ಬಹ್ರೇನ್‌ನಲ್ಲಿರುವ ಭಾರತೀಯ ಸಮುದಾಯದ ರಕ್ಷಣೆಗೆ ಅತ್ಯುತ್ತಮ ಕಾಳಜಿ ವಹಿಸಿದ್ದಕ್ಕಾಗಿ ಮತ್ತು ಅವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಗತ್ಯಗಳನ್ನು ನೋಡಿಕೊಂಡ ಬಹ್ರೇನ್ ನಾಯಕತ್ವಕ್ಕೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು.
ಬಹ್ರೇನ್ ದೊರೆ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯಗಳನ್ನು ತಿಳಿಸಿದರು. ಆದಷ್ಟು ಬೇಗ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಅವರು ಯುವರಾಜ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಅವರಿಗೆ ಆಹ್ವಾನ ನೀಡಿದರು.