ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಬುದಾಬಿಯ ಯುವ ರಾಜಕುಮಾರ ಮತ್ತು ಯುಎಇಯ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜೈದ್ ಅಲ್ ನಹ್ಯಾನ್ ರೊಂದಿಗೆ ದೂರವಾಣಿ ಮೂಲಕ ಸಮಾಲೋಚಿಸಿದರು.
ಉಭಯ ನಾಯಕರು ಪ್ರಾಂತ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕದ ಪರಿಣಾಮಗಳ ಕುರಿತು ಚರ್ಚೆ ನಡೆಸಿದರು ಮತ್ತು ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲೂ ಸಹ ಭಾರತ ಮತ್ತು ಯುಎಇ ನಡುವೆ ಸಹಕಾರ ಸಂಬಂಧ ಸ್ಥಗಿತಗೊಂಡಿಲ್ಲ ಎಂದು ತೃಪ್ತಿ ವ್ಯಕ್ತಪಡಿಸಿದರು.
ಕೋವಿಡ್ ನಂತರದ ಜಗತ್ತಿನಲ್ಲಿ ಭಾರತ – ಯುಎಇ ಪಾಲುದಾರಿಕೆ ಮತ್ತಷ್ಟು ಬಲವರ್ಧನೆಗೆ ಮತ್ತು ಸಹಕಾರ ವೃದ್ಧಿಗೆ ನಿಕಟ ಸಮಾಲೋಚನೆಗಳನ್ನು ಮುಂದುವರಿಸಲು ಉಭಯ ನಾಯಕರು ಒಪ್ಪಿದರು. ವ್ಯಾಪಾರ ಮತ್ತು ಹೂಡಿಕೆಯಲ್ಲಿ ಲಭ್ಯವಿರುವ ಅವಕಾಶಗಳ ಮಾರ್ಗೋಪಾಯಗಳ ಬಗ್ಗೆ ಅವರು ಚರ್ಚಿಸಿದರು.
ಯುಎಇಯಲ್ಲಿರುವ ಭಾರತೀಯ ವಲಸೆ ಸಮುದಾಯದ ಆರೋಗ್ಯದ ಬಗ್ಗೆ ಗೌರವಾನ್ವಿತ ಯುವ ರಾಜಕುಮಾರ ಅವರೇ ಖುದ್ದು ಗಮನಹರಿಸುತ್ತಿರುವುದಕ್ಕೆ ಪ್ರಧಾನಮಂತ್ರಿ ವಿಶೇಷ ಶ್ಲಾಘನೆಯನ್ನು ಮಾಡಿದರು.
ಉಭಯ ನಾಯಕರು ಕೋವಿಡ್ ಬಿಕ್ಕಟ್ಟು ಸದ್ಯದಲ್ಲೇ ಮುಕ್ತಾಯವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು ಮತ್ತು ಮುಂದಿನ ದಿನಗಳಲ್ಲಿ ಮುಖತಃ ಭೇಟಿಯನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು.