ಈ ವರ್ಷದ ಬಜೆಟ್ ವಾಸ್ತವದ ಭಾವನೆ ಮತ್ತು ಅಭಿವೃದ್ಧಿಯ ವಿಶ್ವಾಸವನ್ನು ಹೊಂದಿದೆ ಮತ್ತು ಭಾರತದ ಆತ್ಮವಿಶ್ವಾಸವ ತೋರಿಸುತ್ತದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಇದು ಜಗತ್ತಿನಲ್ಲಿ ಹೊಸ ಭರವಸೆಯನ್ನು ತುಂಬುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಆಯವ್ಯಯವನ್ನು ಲೋಕಸಭೆಯಲ್ಲಿ ಮಂಡಿಸಿದ ನಂತರ ಹೇಳಿಕೆ ನೀಡಿರುವ ಪ್ರಧಾನ ಮಂತ್ರಿಯವರು, ಬಜೆಟ್ ಆತ್ಮನಿರ್ಭರತೆ ಮತ್ತು ಪ್ರತಿಯೊಬ್ಬ ನಾಗರಿಕ ಹಾಗೂ ವರ್ಗವನ್ನು ಒಳಗೊಳ್ಳುವ ದೃಷ್ಟಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಬಜೆಟ್ ನ ಹಿಂದಿರುವ ತತ್ವಗಳಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳ ವಿಸ್ತರಣೆ; ಯುವಕರಿಗೆ ಹೊಸ ಅವಕಾಶಗಳು; ಮಾನವ ಸಂಪನ್ಮೂಲಕ್ಕೆ ಹೊಸ ಆಯಾಮವನ್ನು ನೀಡುವುದು; ಮೂಲಸೌಕರ್ಯ ಅಭಿವೃದ್ಧಿ ಮತ್ತು ಹೊಸ ವಲಯಗಳ ಬೆಳವಣಿಗೆಗೆ ನೆರವು ಸೇರಿವೆ ಎಂದು ಅವರು ಹೇಳಿದ್ದಾರೆ.
ಪ್ರಕ್ರಿಯೆ ಮತ್ತು ನಿಯಮಗಳನ್ನು ಸರಳಗೊಳಿಸುವ ಮೂಲಕ ಬಜೆಟ್ ಸಾಮಾನ್ಯ ಜನರಿಗೆ ‘ಸುಲಭ ಜೀವನ’ ದ ಅವಕಾಶವನ್ನು ಹೆಚ್ಚಿಸುತ್ತದೆ. ಬಜೆಟ್ ವ್ಯಕ್ತಿಗಳು, ಹೂಡಿಕೆದಾರರು, ಉದ್ಯಮ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ಎಂದು ಪ್ರಧಾನಿ ಹೇಳಿದರು.
ಬಜೆಟ್ ಮಂಡನೆಯಾದ ಕೆಲವೇ ಗಂಟೆಗಳಲ್ಲಿ ಕಂಡುಬಂದ ಸಕಾರಾತ್ಮಕ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದ ಪ್ರಧಾನಿ. ಬಜೆಟ್ ಗಾತ್ರವನ್ನು ಹೆಚ್ಚಿಸುವಾಗ ಹಣಕಾಸಿನ ಸುಸ್ಥಿರತೆಯ ಕಡೆಗೆ ಸರ್ಕಾರವು ಸೂಕ್ತ ಗಮನವನ್ನು ನೀಡಿದೆ ಎಂದು ಅವರು ಹೇಳಿದರು. ಬಜೆಟ್‌ನ ಪಾರದರ್ಶಕತೆ ಅಂಶವನ್ನು ತಜ್ಞರು ಮೆಚ್ಚಿದ್ದಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅಥವಾ ಆತ್ಮನಿರ್ಭರ ಭಾರತ ಅಭಿಯಾನ ಸಂದರ್ಭದಲ್ಲಿ ಸರ್ಕಾರದ ಸಕ್ರಿಯ ವಿಧಾನದ ಬಗ್ಗೆ ಒತ್ತಿಹೇಳಿದ ಅವರು, ಬಜೆಟ್ ಪ್ರತಿಕ್ರಿಯಾತ್ಮಕ ವಿಧಾನದ ಲವಲೇಶವನ್ನೂ ಹೊಂದಿಲ್ಲ ಎಂದರು. "ನಾವು ಸಕ್ರಿಯತೆಯನ್ನು ಮೀರಿದ್ದೇವೆ ಮತ್ತು ಸಕ್ರಿಯ ಪರವಾದ ಬಜೆಟ್ ನೀಡಿದ್ದೇವೆ" ಎಂದು ಪ್ರಧಾನಿ ಹೇಳಿದರು.
ಬಜೆಟ್ ಸರ್ವತೋಮುಖ ಅಭಿವೃದ್ಧಿಗೆ ನೀಡಿರುವ ಒತ್ತುಗಳನ್ನು ಶ್ಲಾಘಿಸಿದ ಶ್ರೀ ಮೋದಿ, ಇದು ಸಂಪತ್ತು ಮತ್ತು ಸ್ವಾಸ್ಥ್ಯ, ಎಂಎಸ್‌ಎಂಇ ಮತ್ತು ಮೂಲಸೌಕರ್ಯಗಳ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದರು. ಆರೋಗ್ಯ ರಕ್ಷಣೆಗೆ ನೀಡಿರುವ ಅಭೂತಪೂರ್ವ ಗಮನವನ್ನು ಅವರು ಗಮನಿಸಿದರು. ದಕ್ಷಿಣ ರಾಜ್ಯಗಳು, ಈಶಾನ್ಯ ಮತ್ತು ಲೇಹ್ ಲಡ್ಡಾಕ್ ಅಭಿವೃದ್ಧಿ ಅಗತ್ಯಗಳನ್ನು ಬಜೆಟ್ ಗಣನೆಗೆ ತೆಗೆದುಕೊಂಡಿದೆ ಎಂದು ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು. ನಮ್ಮ ಕರಾವಳಿ ರಾಜ್ಯಗಳಾದ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳವನ್ನು ವ್ಯಾಪಾರದ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸುವ ದಿಕ್ಕಿನಲ್ಲಿ ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಅಸ್ಸಾಂನಂತಹ ಈಶಾನ್ಯ ರಾಜ್ಯಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ಬಜೆಟ್ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಸಮಾಜದ ವಿವಿಧ ವರ್ಗಗಳ ಮೇಲೆ ಬಜೆಟ್‌ನ ಪ್ರಭಾವವನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡಿರುವುದು ಯುವಕರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಆರೋಗ್ಯ, ಸ್ವಚ್ಚತೆ, ಪೋಷಣೆ, ಶುದ್ಧ ನೀರು ಮತ್ತು ಸಮಾನ ಅವಕಾಶಗಳಿಗೆ ನೀಡಿರುವ ಒತ್ತು ಜನಸಾಮಾನ್ಯರಿಗೆ ಪ್ರಯೋಜನವಾಗಲಿದೆ. ಹಾಗೆಯೇ, ಮೂಲಸೌಕರ್ಯ ಮತ್ತು ಕಾರ್ಯವಿಧಾನದ ಸುಧಾರಣೆಗಳಲ್ಲಿನ ಹೆಚ್ಚಿ ಹಂಚಿಕೆಯು ಉದ್ಯೋಗ ಸೃಷ್ಟಿ ಮತ್ತು ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಅವರು ಹೇಳಿದರು.
ಕೃಷಿ ಕ್ಷೇತ್ರಕ್ಕೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಬಜೆಟ್‌ನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ರೈತರಿಗೆ ಸುಲಭ ಮತ್ತು ಹೆಚ್ಚಿನ ಸಾಲ ಸಿಗುತ್ತದೆ. ಎಪಿಎಂಸಿ ಮತ್ತು ಕೃಷಿ ಮೂಲಸೌಕರ್ಯ ನಿಧಿಯನ್ನು ಬಲಪಡಿಸಲು ಅವಕಾಶ ಕಲ್ಪಿಸಲಾಗಿದೆ. "ನಮ್ಮ ಹಳ್ಳಿಗಳು ಮತ್ತು ರೈತರು ಈ ಬಜೆಟ್ ನ ಹೃದಯಭಾಗದಲ್ಲಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ" ಎಂದು ಪ್ರಧಾನಿ ಹೇಳಿದರು.
ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ಎಂಎಸ್‌ಎಂಇ ವಲಯದ ಹಂಚಿಕೆಯನ್ನು ದ್ವಿಗುಣಗೊಳಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಹೊಸ ದಶಕಕ್ಕೆ ಬಜೆಟ್ ಬಲವಾದ ಬುನಾದಿ ಹಾಕಲಿದೆ ಎಂದು ಅವರು ಹೇಳಿದರು. ಆತ್ಮನಿರ್ಭರ ಭಾರತ ಬಜೆಟ್ ಪಡೆದಿದ್ದಕ್ಕಾಗಿ ದೇಶವಾಸಿಗಳನ್ನು ಅವರು ಅಭಿನಂದಿಸಿದರು.