"ಮಹಿಳೆಯರು ಅಭಿವೃದ್ಧಿ ಹೊಂದಿದಾಗ, ಜಗತ್ತು ಅಭಿವೃದ್ಧಿ ಹೊಂದುತ್ತದೆ"
"ಭಾರತದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾಯಿತ ಪ್ರತಿನಿಧಿಗಳಲ್ಲಿ 1.4 ದಶಲಕ್ಷ ಅಂದರೆ, 46% ಮಹಿಳೆಯರು"
"ಭಾರತದಲ್ಲಿ ಮಹಿಳೆಯರು 'ಮಿಷನ್ ಲೈಫ್' - ಪರಿಸರಕ್ಕಾಗಿ ಜೀವನಶೈಲಿಯ ಬ್ರಾಂಡ್ ಅಂಬಾಸಿಡರ್ ಗಳಾಗಿದ್ದಾರೆ"
"ಪ್ರಕೃತಿಯೊಂದಿಗೆ ಮಹಿಳೆಯರು ಹೊಂದಿರುವ ನಿಕಟ ಸಂಬಂಧದ ಹಿನ್ನೆಲೆಯಲ್ಲಿ, ಹವಾಮಾನ ಬದಲಾವಣೆಗೆ ನವೀನ ಪರಿಹಾರಗಳ ಕೀಲಿ ಮಹಿಳೆಯರ ಕೈಯಲ್ಲಿದೆ"
"ಮಾರುಕಟ್ಟೆಗಳು, ಜಾಗತಿಕ ಮೌಲ್ಯ ಸರಪಳಿಗಳು ಮತ್ತು ಕೈಗೆಟುಕುವ ಹಣಕಾಸು ಸೌಲಭ್ಯಗಳಿಗೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಅಡೆತಡೆಗಳನ್ನು ತೊಡೆದುಹಾಕಲು ನಾವು ಕೆಲಸ ಮಾಡಬೇಕು"
"ಭಾರತದ ಜಿ-20 ಅಧ್ಯಕ್ಷತೆಯಲ್ಲಿ, 'ಮಹಿಳಾ ಸಬಲೀಕರಣ' ಕುರಿತು ಹೊಸ ಕಾರ್ಯಪಡೆ ಸ್ಥಾಪಿಸಲು ನಿರ್ಧರಿಸಲಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ʻಮಹಿಳಾ ಸಬಲೀಕರಣ ಕುರಿತ ಜಿ-20 ಸಚಿವರ ಸಮ್ಮೇಳನʼವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾತ್ಮಾ ಗಾಂಧಿಯವರ ಹೆಸರಿನಲ್ಲಿರುವ ಗಾಂಧಿನಗರದ ಸಂಸ್ಥಾಪನಾ ದಿನದಂದು ಗಣ್ಯರನ್ನು ನಗರಕ್ಕೆ ಸ್ವಾಗತಿಸಿದರು. ಅಹಮದಾಬಾದಿನ ಗಾಂಧಿ ಆಶ್ರಮಕ್ಕೆ ಭೇಟಿ ನೀಡಲು ಅವಕಾಶ ಅವರಿಗೆ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಸಮಸ್ಯೆಗಳಿಗೆ ತುರ್ತು ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಗಾಂಧೀಜಿಯವರ ಸರಳ ಜೀವನಶೈಲಿಯನ್ನು ಗಾಂಧಿ ಆಶ್ರಮದಲ್ಲಿ ಪ್ರತ್ಯಕ್ಷವಾಗಿ ನೋಡಬಹುದು. ಜೊತೆಗೆ ಸುಸ್ಥಿರತೆ, ಸ್ವಾವಲಂಬನೆ ಮತ್ತು ಸಮಾನತೆ ಕುರಿತಾಗಿ ಗಾಂಧಿ ಅವರು ಹೊಂದಿದ್ದ ದೂರದೃಷ್ಟಿಯ ಪರಿಕಲ್ಪನೆಗಳಿಗೂ ಆಶ್ರಮದಲ್ಲಿ ನಾವು ಸಾಕ್ಷಿಯಾಬಹುದು ಎಂದು ಪ್ರಧಾನಿ ಹೇಳಿದರು. ಗಣ್ಯರು ಇದರಿಂದ ಪ್ರೇರಣೆ ಪಡೆಯುವರೆಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು. ದಂಡಿ ಕುಟೀರ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದ ಅವರು, ಗಾಂಧೀಜಿಯವರ ಪ್ರಸಿದ್ಧ, ನೂಲುವ ಚಕ್ರ ಅಥವಾ ಚರಕವನ್ನು ಹತ್ತಿರದ ಹಳ್ಳಿಯೊಂದರ ಗಂಗಾಬೆನ್ ಎಂಬ ಮಹಿಳೆ ಕಂಡುಹಿಡಿದಿದ್ದಾರೆ ಎಂದು ಮಾಹಿತಿ ನೀಡಿದರು. ಅಂದಿನಿಂದ ಗಾಂಧೀಜಿಯವರು ಖಾದಿ ಧರಿಸಲು ಪ್ರಾರಂಭಿಸಿದರು, ಇದು ಸ್ವಾವಲಂಬನೆ ಮತ್ತು ಸುಸ್ಥಿರತೆಯ ಸಂಕೇತವಾಯಿತು ಎಂದು ಪ್ರಧಾನಿ ಹೇಳಿದರು.

"ಮಹಿಳೆಯರು ಅಭಿವೃದ್ಧಿ ಹೊಂದಿದಾಗ, ಜಗತ್ತು ಅಭಿವೃದ್ಧಿ ಹೊಂದುತ್ತದೆ," ಎಂದು ಹೇಳಿದ ಪ್ರಧಾನಿ, ಮಹಿಳೆಯರ ಆರ್ಥಿಕ ಸಬಲೀಕರಣವು ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಅವರಿಗೆ ಶಿಕ್ಷಣದ ಲಭ್ಯತೆಯು ಜಾಗತಿಕ ಪ್ರಗತಿಯನ್ನು ಪ್ರೇರೇಪಿಸುತ್ತದೆ ಎಂದರು. ಮಹಿಳೆಯರ ನಾಯಕತ್ವವು ಒಳಗೊಳ್ಳುವಿಕೆಯನ್ನು ಬೆಳೆಸುತ್ತದೆ ಮತ್ತು ಅವರ ಧ್ವನಿಗಳು ಸಕಾರಾತ್ಮಕ ಬದಲಾವಣೆಗೆ ಸ್ಫೂರ್ತಿ ನೀಡುತ್ತವೆ ಎಂದು ಅವರು ಹೇಳಿದರು. ಮಹಿಳಾ ನೇತೃತ್ವದ ಅಭಿವೃದ್ಧಿಯು ಮಹಿಳೆಯರನ್ನು ಸಬಲೀಕರಣಗೊಳಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಭಾರತವು ಈ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸ್ವತಃ ಸ್ಫೂರ್ತಿದಾಯಕ ಉದಾಹರಣೆಯಾಗಿದ್ದಾರೆ ಎಂದು ಪ್ರಧಾನಿ ಹೇಳಿದರು. ಶ್ರೀಮತಿ ಮುರ್ಮು ಅವರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಮುನ್ನಡೆಸುತ್ತಾರೆ ಮತ್ತು ಅವರು ವಿನಮ್ರ ಬುಡಕಟ್ಟು ಹಿನ್ನೆಲೆಯಿಂದ ಬಂದಿದ್ದರೂ ವಿಶ್ವದ ಎರಡನೇ ಅತಿದೊಡ್ಡ ರಕ್ಷಣಾ ಪಡೆಯ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಪ್ರಜಾಪ್ರಭುತ್ವದ ತಾಯಿಯಾದ ಭಾರತೀಯ ಸಂವಿಧಾನವು ಮೊದಲಿನಿಂದಲೂ ಮಹಿಳೆಯರು ಸೇರಿದಂತೆ ಎಲ್ಲಾ ನಾಗರಿಕರಿಗೆ 'ಮತದಾನದ ಹಕ್ಕನ್ನು' ಸಮಾನವಾಗಿ ನೀಡಿದೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಸಮಾನತೆಯ ಆಧಾರದ ಮೇಲೆ ನೀಡಲಾಗಿದೆ ಎಂದು ಪ್ರಧಾನಿ ಹೇಳಿದರು. ಚುನಾಯಿತ ಮಹಿಳಾ ಪ್ರತಿನಿಧಿಗಳು ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಬದಲಾವಣೆಯ ಪ್ರಮುಖ ಕಾರ್ಯಕರ್ತರಾಗಿದ್ದಾರೆ. ಭಾರತದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳಲ್ಲಿ 46% ಮಹಿಳೆಯರು, ಅಂದರೆ 1.4 ದಶಲಕ್ಷ ಮಹಿಳೆಯರಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಸ್ವಸಹಾಯ ಗುಂಪುಗಳಿಗೆ ಮಹಿಳೆಯರನ್ನು ಸಜ್ಜುಗೊಳಿಸುವುದರಿಂದ ಬದಲಾವಣೆಗೆ ಶಕ್ತಿ ತುಂಬಬಹುದು ಎಂದು ಒತ್ತಿಹೇಳಿದ ಪ್ರಧಾನಿಯವರು, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಸಮುದಾಯಗಳಿಗೆ ಬೆಂಬಲದ ಆಧಾರಸ್ತಂಭಗಳಾಗಿ ಹೊರಹೊಮ್ಮಿದ ಸ್ವಸಹಾಯ ಗುಂಪುಗಳು ಮತ್ತು ಚುನಾಯಿತ ಮಹಿಳಾ ಪ್ರತಿನಿಧಿಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದರು. ಪ್ರಧಾನಮಂತ್ರಿಯವರು ಮಹಿಳೆಯರ ಸಾಧನೆಗಳ ಹಲವು ಉದಾಹರಣೆಗಳನ್ನು ನೀಡಿದರು. ಮಾಸ್ಕ್ ಮತ್ತು ಸ್ಯಾನಿಟೈಸರ್ಗಳ ತಯಾರಿಕೆ ಹಾಗೂ ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ಅವರ ಪಾತ್ರವನ್ನು ಉಲ್ಲೇಖಿಸಿದರು. ಭಾರತದಲ್ಲಿ ಶೇ.80ಕ್ಕೂ ಹೆಚ್ಚು ದಾದಿಯರು ಮತ್ತು ಶುಶ್ರೂಷಕಿಯರು ಮಹಿಳೆಯರೇ ಆಗಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಅವರೇ ನಮ್ಮ ಮುಂಚೂಣಿ ಕಾರ್ಯಕರ್ತರಾಗಿದ್ದರು. ಅವರ ಸಾಧನೆಗಳ ಬಗ್ಗೆ ನಮಗೆ ಹೆಮ್ಮೆ ಇದೆ", ಎಂದು ಪ್ರಧಾನಿ ಹೇಳಿದರು.

ಮಹಿಳಾ ನೇತೃತ್ವದ ಅಭಿವೃದ್ಧಿಯು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ʻಪ್ರಧಾನ ಮಂತ್ರಿ ಮುದ್ರಾ ಯೋಜನೆʼ ಅಡಿಯಲ್ಲಿ ಗುಡಿ ಕೈಗಾರಿಕೆಗಳನ್ನು ಬೆಂಬಲಿಸಲು ಒದಗಿಸಲಾದ ಒಂದು ದಶಲಕ್ಷ ರೂಪಾಯಿಗಳವರೆಗಿನ ಸಾಲಗಳಲ್ಲಿ ಸುಮಾರು 70% ರಷ್ಟನ್ನು  ಮಹಿಳೆಯರಿಗೆ ಮಂಜೂರು ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಅಂತೆಯೇ, ʻಸ್ಟ್ಯಾಂಡ್ ಅಪ್ ಇಂಡಿಯಾʼ ಅಡಿಯಲ್ಲಿ 80% ಫಲಾನುಭವಿಗಳು ಮಹಿಳೆಯರಾಗಿದ್ದು, ʻಗ್ರೀನ್ ಫೀಲ್ಡ್ʼ ಯೋಜನೆಗಳಿಗಾಗಿ ಬ್ಯಾಂಕ್ ಸಾಲಗಳನ್ನು ಪಡೆಯುತ್ತಿದ್ದಾರೆ ಎಂದರು. ಶುದ್ಧ ಅಡುಗೆ ಇಂಧನವು ಪರಿಸರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಮತ್ತು ಮಹಿಳೆಯರ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ʻಪ್ರಧಾನ ಮಂತ್ರಿ ಉಜ್ವಲ ಯೋಜನೆʼಯನ್ನು ಪ್ರಸ್ತಾಪಿಸಿದರು. ಗ್ರಾಮೀಣ ಮಹಿಳೆಯರಿಗೆ ಸುಮಾರು 100 ದಶಲಕ್ಷ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ, ತಾಂತ್ರಿಕ ಶಿಕ್ಷಣದಲ್ಲಿ ಮಹಿಳೆಯರ ಸಂಖ್ಯೆ 2014 ರಿಂದ ದ್ವಿಗುಣಗೊಂಡಿದೆ, ಭಾರತದಲ್ಲಿ ʻಸ್ಟೆಮ್ʼ(ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಪದವೀಧರರಲ್ಲಿ ಸುಮಾರು 43 ಪ್ರತಿಶತದಷ್ಟು ಮಹಿಳೆಯರೇ ಆಗಿದ್ದಾರೆ. ಅಲ್ಲದೆ, ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಹಿಳೆಯರೇ ಇದ್ದಾರೆ ಎಂದು ಅವರು ಮಾಹಿತಿ ನೀಡಿದರು. "ಚಂದ್ರಯಾನ, ʻಗಗನಯಾನʼ ಮತ್ತು ʻಮಿಷನ್ ಮಂಗಳʼದಂತಹ ನಮ್ಮ ಪ್ರಮುಖ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ಈ ಮಹಿಳಾ ವಿಜ್ಞಾನಿಗಳ ಪ್ರತಿಭೆ ಮತ್ತು ಕಠಿಣ ಪರಿಶ್ರಮವಿದೆ," ಎಂದು ಪ್ರಧಾನಿ ಹೇಳಿದರು. ಇಂದು ಭಾರತದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದರು. ನಾಗರಿಕ ವಿಮಾನಯಾನದಲ್ಲಿ ಭಾರತವು ಅತ್ಯಧಿಕ ಶೇಕಡಾವಾರು ಮಹಿಳಾ ಪೈಲಟ್ ಗಳನ್ನು ಹೊಂದಿದೆ. ಭಾರತೀಯ ವಾಯುಪಡೆಯಲ್ಲಿ ಮಹಿಳಾ ಪೈಲಟ್ ಗಳು ಯುದ್ಧ ವಿಮಾನಗಳನ್ನು ಸಹ ಹಾರಿಸುತ್ತಿದ್ದಾರೆ ಎಂದು ಅವರು ಗಮನಸೆಳೆದರು. ನಮ್ಮ ಎಲ್ಲಾ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಕಾರ್ಯಾಚರಣೆಯ ಪಾತ್ರಗಳಲ್ಲಿ ಮತ್ತು ಹೋರಾಟದ ವೇದಿಕೆಗಳಲ್ಲಿ ನಿಯೋಜಿಸಲಾಗುತ್ತಿದೆ ಎಂದು ಶ್ರೀ ಮೋದಿ ತಿಳಿಸಿದರು.

ಗ್ರಾಮೀಣ ಕೃಷಿ ಕುಟುಂಬಗಳ ಬೆನ್ನೆಲುಬಾಗಿ, ಮತ್ತು ಸಣ್ಣ ವ್ಯಾಪಾರಿಗಳಾಗಿ ಮಹಿಳೆಯರು ವಹಿಸುವ ಪ್ರಮುಖ ಪಾತ್ರಗಳನ್ನು ಪ್ರಧಾನಿ ಪ್ರಸ್ತಾಪಿಸಿದರು. ಪ್ರಕೃತಿಯೊಂದಿಗಿನ ಮಹಿಳೆಯರ ನಿಕಟ ಸಂಬಂಧವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹವಾಮಾನ ಬದಲಾವಣೆಗೆ ನವೀನ ಪರಿಹಾರಗಳ ಕೀಲಿ  ಮಹಿಳೆಯರ ಕೈಯ್ಯಲ್ಲಿದೆ ಎಂದರು. 18ನೇ ಶತಮಾನದಲ್ಲಿ ಅಮೃತಾ ದೇವಿ ನೇತೃತ್ವದ ರಾಜಸ್ಥಾನದ ಬಿಷ್ಣೋಯಿ ಸಮುದಾಯವು ಬೇಕಾಬಿಟ್ಟಿ ಮರ ಕಡಿಯುವುದನ್ನು ತಡೆಗಟ್ಟಲು 'ಚಿಪ್ಕೊ ಚಳವಳಿ' ಪ್ರಾರಂಭಿಸಿದ್ದನ್ನು ಪ್ರಧಾನಿ ಸ್ಮರಿಸಿದರು. ಆ ಮೂಲಕ ಭಾರತದಲ್ಲಿ ಮೊದಲ ಪ್ರಮುಖ ಹವಾಮಾನ ಉಪಕ್ರಮವನ್ನು ಮಹಿಳೆಯರು ಹೇಗೆ ಮುನ್ನಡೆಸಿದರು ಎಂದು ಪ್ರಧಾನಿ ಮಾಹಿತಿ ನೀಡಿದರು. ಪ್ರಕೃತಿಗಾಗಿ ಅಮೃತಾ ದೇವಿ ಅವರು ಇತರ ಹಲವಾರು ಗ್ರಾಮಸ್ಥರೊಂದಿಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಭಾರತದಲ್ಲಿ ಮಹಿಳೆಯರು 'ಮಿಷನ್ ಲೈಫ್- ಪರಿಸರಕ್ಕಾಗಿ ಜೀವನಶೈಲಿ'ಯ ಪ್ರಚಾರ ರಾಯಭಾರಿಗಳಾಗಿದ್ದಾರೆ,ʼʼ ಎಂದು ಪ್ರಧಾನಿ ಹೇಳಿದರು. ಬಳಕೆಯನ್ನು ತಗ್ಗಿಸುವಲ್ಲಿ, ಮರುಬಳಕೆ ಮಾಡುವಲ್ಲಿ  ಮಹಿಳೆಯರ ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಪ್ರಧಾನಿ ಶ್ಲಾಘಿಸಿದರು. ವಿವಿಧ ಉಪಕ್ರಮಗಳ ಅಡಿಯಲ್ಲಿ, ಸೌರ ಫಲಕಗಳು ಮತ್ತು ದೀಪಗಳನ್ನು ತಯಾರಿಸುವಲ್ಲಿ ಮಹಿಳೆಯರು ಸಕ್ರಿಯವಾಗಿ ತರಬೇತಿ ಪಡೆಯುತ್ತಿದ್ದಾರೆ ಎಂದು ಹೇಳಿದರು. ಜಾಗತಿಕ ದಕ್ಷಿಣದ ಪಾಲುದಾರ ರಾಷ್ಟ್ರಗಳೊಂದಿಗೆ ಸಹಯೋಗದಲ್ಲಿ ಯಶಸ್ವಿಯಾಗಿರುವ 'ಸೋಲಾರ್ ಮಾಮಾಸ್' ಉಪಕ್ರಮವನ್ನು ಪ್ರಧಾನಿ ಉಲ್ಲೇಖಿಸಿದರು.

"ಜಾಗತಿಕ ಆರ್ಥಿಕತೆಗೆ ಮಹಿಳಾ ಉದ್ಯಮಿಗಳು ಮಹತ್ವದ ಕೊಡುಗೆ ನೀಡಿದ್ದಾರೆ," ಎನ್ನುವ ಮೂಲಕ ಭಾರತದಲ್ಲಿ ಮಹಿಳಾ ಉದ್ಯಮಿಗಳ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ದಶಕಗಳ ಹಿಂದೆ, 1959ರಲ್ಲಿ ಮುಂಬೈನ ಏಳು ಗುಜರಾತಿ ಮಹಿಳೆಯರು ಒಗ್ಗೂಡಿ ಐತಿಹಾಸಿಕ ಸಹಕಾರಿ ಆಂದೋಲನವನ್ನು ರಚಿಸಿದರು, ಅದೇ - ʻಶ್ರೀ ಮಹಿಳಾ ಗೃಹ ಉದ್ಯೋಗ್ʼ. ಇದು ಲಕ್ಷಾಂತರ ಮಹಿಳೆಯರು ಮತ್ತು ಅವರ ಕುಟುಂಬಗಳ ಜೀವನವನ್ನು ಪರಿವರ್ತಿಸಿದೆ ಎಂದು ಅವರು ಹೇಳಿದರು. ಶ್ರೀ ಮೋದಿ ಅವರು ತಮ್ಮ ಅತ್ಯಂತ ಪ್ರಸಿದ್ಧ ಉತ್ಪನ್ನವಾದ ʻಲಿಜ್ಜತ್ ಪಾಪಡ್ʼ ಬಗ್ಗೆ ಒತ್ತಿ ಹೇಳಿದರು. ಇದು ಬಹುಶಃ ಗುಜರಾತ್‌ನ ಆಹಾರ ಮೆನುಗಳಲ್ಲಿ ಇದ್ದೇ ಇರುತ್ತದೆ ಎಂದು ಹೇಳಿದರು! ಹೈನುಗಾರಿಕೆ ಕ್ಷೇತ್ರದ ಉದಾಹರಣೆಯನ್ನೂ ನೀಡಿದ ಅವರು, ಗುಜರಾತ್ ರಾಜ್ಯವೊಂದರಲ್ಲೇ 3.6 ದಶಲಕ್ಷ ಮಹಿಳೆಯರು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಭಾರತದಲ್ಲಿ, ಸುಮಾರು 15% ʻಯುನಿಕಾರ್ನ್ʼ ನವೋದ್ಯಮಗಳು ಕನಿಷ್ಠ ಒಬ್ಬ ಮಹಿಳಾ ಸಂಸ್ಥಾಪಕರನ್ನು ಹೊಂದಿವೆ ಮತ್ತು ಈ ಮಹಿಳಾ ನೇತೃತ್ವದ ಯೂನಿಕಾರ್ನ್ಗಳ ಸಂಯೋಜಿತ ಮೌಲ್ಯವು 40 ಶತಕೋಟಿ ಡಾಲರ್ಗಿಂತಲೂ ಹೆಚ್ಚಾಗಿದೆ ಎಂದು ಶ್ರೀ ಮೋದಿ ಗಮನಸೆಳೆದರು. ಮಹಿಳಾ ಸಾಧಕರು ಸಾಮಾನ್ಯ ಎಂಬಂತಾಗಲು ವೇದಿಕೆಯನ್ನು ಸೃಷ್ಟಿಸುವ ಅಗತ್ಯವನ್ನು ಪ್ರಧಾನಿ  ಹೇಳಿದರು. ಮಹಿಳೆಯರನ್ನು ಮಾರುಕಟ್ಟೆಗಳು, ಜಾಗತಿಕ ಮೌಲ್ಯ ಸರಪಳಿಗಳು ಮತ್ತು ಕೈಗೆಟುಕುವ ಹಣಕಾಸು ಲಭ್ಯತೆಗೆ ನಿರ್ಬಂಧಿಸುವ ಅಡೆತಡೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇದೇ ವೇಳೆ, ಅವರಿಗೆ ಆರೈಕೆ ಮತ್ತು ಮನೆ ಕೆಲಸದ ಹೊರೆ ಕಡಿಮೆ ಮಾಡುವುದನ್ನು ಖಾತರಿಪಡಿಸಬೇಕು ಎಂದು  ಕರೆ ನೀಡಿದರು. 

ಭಾಷಣದ ಕೊನೆಯಲ್ಲಿ ಪ್ರಧಾನ ಮಂತ್ರಿಗಳು, ಮಹಿಳಾ ಉದ್ಯಮಶೀಲತೆ, ನಾಯಕತ್ವ ಮತ್ತು ಶಿಕ್ಷಣ ಕುರಿತ ಸಚಿವರ ಸಮ್ಮೇಳನದತ್ತ ಗಮನ ಹರಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಮಹಿಳೆಯರ ಡಿಜಿಟಲ್ ಮತ್ತು ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಲು 'ಟೆಕ್-ಈಕ್ವಿಟಿ ವೇದಿಕೆ' ಪ್ರಾರಂಭವಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ, 'ಮಹಿಳಾ ಸಬಲೀಕರಣ' ಕುರಿತು ಹೊಸ ಕಾರ್ಯಪಡೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. ಗಾಂಧಿನಗರದಲ್ಲಿ ನಡೆಯುವ ಅವಿರತ ಪ್ರಯತ್ನಗಳು ವಿಶ್ವದಾದ್ಯಂತದ ಮಹಿಳೆಯರಲ್ಲಿ ಅಪಾರ ಭರವಸೆ ಮತ್ತು ವಿಶ್ವಾಸವನ್ನು ತುಂಬುತ್ತವೆ ಎಂದು ಅವರು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿeech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage