#MannKiBaat: PM extends greetings to people of Bangladesh on their independence day
India will always stand shoulder to shoulder with the people of Bangladesh: PM Modi during #MannKiBaat
Jallianwala Bagh massacre in 1919 left a deep impact on Shaheed Bhagat Singh: PM Modi during #MannKiBaat
#MannKiBaat: Bhagat Singh, Sukhdev and Rajguru were not scared of death. They lived and died for our nation, says PM Modi
We are marking 100 years of Champaran Satyagraha. This was one of the earliest Gandhian mass movements in India: PM #MannKiBaat
The Champaran Satyagraha showed us how special Mahatma Gandhi was and how unique his personality was: PM Modi during #MannKiBaat
New India manifests the strength and skills of 125 crore Indians, who will create a Bhavya and Divya Bharat, says the PM #MannKiBaat
India has extended support to the movement towards digital transactions. People of India have rejected corruption & black money: PM Modi
People of India are getting angry as far as dirt is concerned, this will lead to more efforts towards cleanliness: PM Modi during #MannKiBaat
Wastage of food is unfortunate. It is an injustice to the poor: PM Modi during #MannKiBaat
Depression can be overcome. We all can play a role in helping those suffering from depression overcome it: PM Modi during #MannKiBaat
Lets us make the 3rd International Day of Yoga memorable by involving more and more people: PM Modi during #MannKiBaat
PM Modi highlights the benefits of maternity bill during #MannKiBaat

ನನ್ನ ನಲ್ಮೆಯ ದೇಶವಾಸಿಗಳೇ, ನಮಸ್ಕಾರ. ದೇಶದ ಬಹುತೇಕ ಪ್ರದೇಶಗಳ ಪಾಲಕರು ತಮ್ಮ ಮಕ್ಕಳ ಪರೀಕ್ಷೆಗಳಲ್ಲಿ ಮಗ್ನರಾಗಿರಬಹುದು. ಯಾರ ಪರೀಕ್ಷೆಗಳು ಮುಗಿದು ಹೋಗಿವೆಯೋ ಅಲ್ಲಿ ಸ್ವಲ್ಪ ನಿರಾಳ ಇರಬಹುದು, ಆದರೆ ಎಲ್ಲಿ ಪರೀಕ್ಷೆಗಳು ಇನ್ನೂ ನಡೆಯುತ್ತಿವೆಯೋ ಅಲ್ಲಿ ಇನ್ನೂ ಅಲ್ಪ ಸ್ವಲ್ಪ ಒತ್ತಡ ಇರಬಹುದು. ಆದರೂ ಈ ಸಂದರ್ಭದಲ್ಲಿ ನಾನು ಹೇಳಬಯಸುವುದೇನೆಂದರೆ ನನ್ನ ಕಳೆದ ಬಾರಿಯ ಮನ್ ಕಿ ಬಾತ್ ನಲ್ಲಿ ನಾನು ವಿದ್ಯಾರ್ಥಿಗಳಿಗೆ ಹೇಳಿದಂತಹ ಮಾತುಗಳನ್ನು ಇನ್ನೊಮ್ಮೆ ಕೇಳಿ. ಪರೀಕ್ಷೆ ಬರೆಯಲು ಕುಳಿತ ಸಂದರ್ಭದಲ್ಲಿ ಖಂಡಿತ ನಾನು ನೀಡಿದ ಸಲಹೆಗಳು ನಿಮಗೆ ಉಪಯುಕ್ತವಾಗಬಲ್ಲವು.
ಇಂದು ಮಾರ್ಚ್ 26. ಮಾರ್ಚ್ 26 ಬಾಂಗ್ಲಾದೇಶದ ಸ್ವಾತಂತ್ರ್ಯ ದಿವಸ. ಬಂಗ-ಬಂಧು ಅವರ ನೇತೃತ್ವದಲ್ಲಿ ಅನ್ಯಾಯದ ವಿರುದ್ಧ ಹೋರಾಡಿದ ಒಂದು ಐತಿಹಾಸಿಕ ಸಮರ ಮತ್ತು ಬಾಂಗ್ಲಾ ದೇಶದ ಜನತೆಗೆ ಸಿಕ್ಕ ಅಭೂತಪೂರ್ವವಾದ ವಿಜಯವದು. ಇಂದು ಈ ಮಹತ್ವಪೂರ್ಣ ದಿನದಂದು ಬಾಂಗ್ಲಾದೇಶದ ಸೋದರ ಸೋದರಿಯರಿಗೆ, ನಾನು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಬಾಂಗ್ಲಾದೇಶ ಪ್ರಗತಿಯ ಪಥದಲ್ಲಿ ನಡೆಯಲಿದೆ ಎಂಬ ವಿಶ್ವಾಸ ನನಗಿದೆ. ಭಾರತ, ಬಾಂಗ್ಲಾದೇಶದ ಒಂದು ಬಲವಾದ ಪಾಲುದಾರ ಮತ್ತು ಒಬ್ಬ ಉತ್ತಮ ಗೆಳೆಯ ಎಂಬುದನ್ನು ನಾನು ಬಾಂಗ್ಲಾದೇಶದ ನಾಗರಿಕರಿಗೆ ಖಚಿತಪಡಿಸುತ್ತೇನೆ. ಇಡೀ ವಲಯದ ಶಾಂತಿ, ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ನಾವು ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತೇವೆ.

ರವೀಂದ್ರನಾಥ ಟ್ಯಾಗೋರರು, ಮತ್ತು ಅವರ ನೆನಪುಗಳು ನಮ್ಮ ಹಂಚಿಕೆಯ ಪರಂಪರೆ ಎಂಬ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯಿದೆ. ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಕೂಡ ಗುರುದೇವ್ ರವೀಂದ್ರನಾಥ ಟ್ಯಾಗೋರರೇ ರಚಸಿದ್ದು. ಗುರುದೇವ ಟ್ಯಾಗೋರರ ಬಗ್ಗೆ ಒಂದು ಆಸಕ್ತಿದಾಯಕ ವಿಷಯವಿದೆ. ಅದೇನೆಂದರೆ 1913ರಲ್ಲಿ ನೋಬೆಲ್ ಪ್ರಶಸ್ತಿಗೆ ಭಾಜನರಾದ ಅವರು ಏಷ್ಯಾದ ಮೊದಲಿಗರಷ್ಟೇ ಅಲ್ಲ, ಅವರಿಗೆ ಬ್ರಿಟಿಷರು ನೈಟ್ ಹುಡ್ ಗೌರವವನ್ನು ಕೂಡ ಪ್ರದಾನ ಮಾಡಿದ್ದರು. 1919 ರಲ್ಲಿ ಬ್ರಿಟಿಷರು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದಾಗ, ಅವರ ವಿರುದ್ಧ ಪ್ರತಿಭಟನೆಯ ದನಿ ಎತ್ತಿದವರಲ್ಲಿ ರವೀಂದ್ರನಾಥ ಟ್ಯಾಗೋರರೂ ಒಬ್ಬರಾಗಿದ್ದರು. ಮತ್ತು ಇದೇ ಸಮಯದಲ್ಲಿ 12 ವರ್ಷದ ಒಬ್ಬ ಬಾಲಕನ ಮೇಲೆ ಈ ಘಟನೆ ತೀವ್ರವಾದ ಪ್ರಭಾವ ಬೀರಿತು. ಮೈದಾನದಲ್ಲಿ ಕುಣಿದು ಕುಪ್ಪಳಿಸುತ್ತಾ ಉಲ್ಲಾಸದಿಂದ ತನ್ನ ಬಾಲ್ಯವನ್ನು ಕಳೆಯುತ್ತಿದ್ದ ಆ ಬಾಲಕನಿಗೆ ಅಮಾನವೀಯ ಜಲಿಯನ್ ವಾಲಾಬಾಗ್‌ನ ಹತ್ಯಾಕಾಂಡ, ಒಂದು ಹೊಸ ಪ್ರೇರಣೆಯನ್ನು ನೀಡಿತ್ತು ಮತ್ತು 1919 ರಲ್ಲಿ 12 ವರ್ಷದ ಭಗತ್, ನಮ್ಮೆಲ್ಲರ ಪ್ರೀತಿಯ ಮತ್ತು ನಮಗೆ ಪ್ರೇರಣೆಯಾದ ಹುತಾತ್ಮ ಭಗತ್ ಸಿಂಗ್ ಆಗಿ ಹೊರಹೊಮ್ಮಿದ್ದ. ಮಾರ್ಚ್ 23 ರಂದು ಭಗತ್‌ಸಿಂಗ್ ಮತ್ತು ಅವರ ಸ್ನೇಹಿತರಾದ ಸುಖದೇವ್ ಹಾಗೂ ರಾಜ್‌ಗುರು ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ್ದರು. ಅದು ಅವರಿಗೆ ಗೊತ್ತಿತ್ತು. ಅಂದು ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ಮುಖದಲ್ಲಿ ಸಾವಿನ ಭಯವಿರಲಿಲ್ಲ ಬದಲಿಗೆ, ಭಾರತ ಮಾತೆಯ ಸೇವೆ ಮಾಡಿದ ಸಂತೃಪ್ತಿಯಿತ್ತು. ಅವರು ತಮ್ಮ ಜೀವನದ ಎಲ್ಲ ಕನಸುಗಳನ್ನು ತಾಯಿ ಭಾರತಿಯ ಸ್ವತಂತ್ರಕ್ಕಾಗಿ ಅರ್ಪಿಸಿದಂತಿತ್ತು. ಈ ಮೂವರೂ ವೀರರು, ಇಂದಿಗೂ ನಮಗೆ ಪ್ರೇರಣೆಯಾಗಿದ್ದಾರೆ. ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರ ತ್ಯಾಗವನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಬ್ರಿಟಿಷ್ ರಾಜ್ಯ, ಈ ಮೂವರು ಯುವಕರಿಗೆ ಸಂಪೂರ್ಣವಾಗಿ ಹೆದರುತ್ತಿತ್ತು. ಜೈಲಿನಲ್ಲಿ ಬಂಧಿಗಳಾಗಿದ್ದರೂ, ಅವರನ್ನು ಗಲ್ಲಿಗೇರಿಸುವ ನಿರ್ಧಾರವಾಗಿದ್ದರೂ ಅವರನ್ನು ನಿಭಾಯಿಸುವುದು ಹೇಗೆಂಬ ಚಿಂತೆ ಬ್ರಿಟಿಷರನ್ನು ಕಾಡುತ್ತಿತ್ತು. ಹೀಗಾಗಿಯೇ ಅವರಿಗೆ ಗಲ್ಲು ಶಿಕ್ಷೆಯನ್ನು ಮಾರ್ಚ್ ೨೪ಕ್ಕೆ ಜಾರಿ ಮಾಡಬೇಕೆಂಬ ದಿನಾಂಕ ನಿಗದಿ ಆಗಿದ್ದರೂ, ಮಾರ್ಚ್ 23ರಂದೇ ಅವರನ್ನು ನೇಣಿಗೇರಿಸಲಾಯಿತು. ಇದು ಸಾಮಾನ್ಯವಾದ ರೀತಿಯಾಗಿರಲಿಲ್ಲ. ರಹಸ್ಯವಾಗಿ ಈ ಕೆಲಸವನ್ನು ಮಾಡಲಾಗಿತ್ತು. ನಂತರ ಅವರ ಪಾರ್ಥಿವ ಶರೀರವನ್ನು ಇಂದಿನ ಪಂಜಾಬ್‌ಗೆ ತಂದು ಗೌಪ್ಯವಾಗಿ ದಹನ ಮಾಡಲಾಗಿತ್ತು. ಕೆಲವಾರು ವರ್ಷಗಳ ಹಿಂದೆ, ನನಗೆ, ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡುವ ಅವಕಾಶ ಸಿಕ್ಕಿತ್ತು. ಆ ಭೂಮಿಯಲ್ಲಿ ಅದೇನೋ ಒಂದು ರೀತಿಯ ಉತ್ಸಾಹಭಂಜಕ ಕಂಪನವಿದೆ ಎಂಬುದು ನನ್ನ ಅನುಭವಕ್ಕೆ ಬಂತು. ದೇಶದ ಯುವಕರಿಗೆ ನಾನು ಖಚಿತವಾಗಿ ಹೇಳಬಯಸುತ್ತೇನೆ – ನಿಮಗೆ ಅವಕಾಶ ಸಿಕ್ಕಾಗ,ಪಂಜಾಬ್‌ಗೆ ನೀವು ಹೋದಾಗ ಭಗತ್‌ಸಿಂಗ್, ಸುಖದೇವ್ ರಾಜ್‌ಗುರು, ಭಗತ್‌ಸಿಂಗ್ ಅವರ ತಾಯಿ ಮತ್ತು ಬಟುಕೇಶ್ವರ್ ದತ್ತ ಅವರ ಸಮಾಧಿಗೆ ತಪ್ಪದೇ ಭೇಟಿ ನೀಡಿ.

ಇದೇ ಕಾಲಘಟ್ಟದಲ್ಲಿ ಸ್ವಾತಂತ್ರ್ಯದ ಕಿಚ್ಚು, ಅದರ ತೀವ್ರತೆ, ಅದರ ವ್ಯಾಪ್ತಿ ಹೆಚ್ಚುತ್ತಾ ಸಾಗಿತ್ತು. ಒಂದೆಡೆ ಭಗತ್‌ಸಿಂಗ್, ಸುಖದೇವ್ ಹಾಗೂ ರಾಜ್‌ಗುರು ಅವರಂಥ ವೀರರು ಶಸ್ತ್ರ ಸಹಿತ ಕ್ರಾಂತಿಗಾಗಿ ಯುವಕರನ್ನು ಪ್ರೇರೇಪಿಸುತ್ತಿದ್ದರು. ಇನ್ನೊಂದೆಡೆ, ಇಂದಿಗೆ ಸರಿಯಾಗಿ ನೂರು ವರ್ಷಗಳ ಹಿಂದೆ, 1917ರ ಏಪ್ರಿಲ್ 10 ರಂದು, ಮಹಾತ್ಮಾ ಗಾಂಧೀಜಿಯವರು ಚಂಪಾರಣ್ ಸತ್ಯಾಗ್ರಹ ಆರಂಭಿಸಿದ್ದರು. ಇದು ಚಂಪಾರಣ್ ಸತ್ಯಾಗ್ರಹದ ಶತಾಬ್ದಿ ವರ್ಷ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀ ವಿಚಾರ,ಗಾಂಧೀ ಶೈಲಿ ಪ್ರಥಮ ಬಾರಿಗೆ ಪ್ರಕಟವಾದದ್ದು ಇದೇ ಚಂಪಾರಣ್‌ನಲ್ಲಿ. ಸ್ವಾತಂತ್ರ್ಯ ಹೋರಾಟದಲ್ಲಿ, ವಿಶೇಷವಾಗಿ ಹೋರಾಟದ ವಿಧಾನದಲ್ಲಿ ಇದೊಂದು ಮಹತ್ವದ ತಿರುವಾಗಿತ್ತು. ಇದೇ ಕಾಲಘಟ್ಟದಲ್ಲಿ ಚಂಪಾರಣ್ ಸತ್ಯಾಗ್ರಹ, ಖೇಡಾ ಸತ್ಯಾಗ್ರಹ,ಅಹ್ಮದಾಬಾದ್‌ನಲ್ಲಿ ಗಿರಣಿ ಕಾರ್ಮಿಕರ ಧರಣಿ ಇವೆಲ್ಲವುಗಳಲ್ಲಿ ಮಹಾತ್ಮಾ ಗಾಂಧೀ ಅವರ ವಿಚಾರಗಳು ಮತ್ತು ಕಾರ್ಯಶೈಲಿಯ ಗಾಢ ಪ್ರಭಾವ ಸ್ಪಷ್ಟವಾಗಿ ಕಂಡುಬರುತ್ತಿತ್ತು. 1915 ರಲ್ಲಿ ಗಾಂಧೀಜಿ ವಿದೇಶದಿಂದ ಹಿಂದಿರುಗಿದರು ಮತ್ತು 1917 ರಲ್ಲಿ ಬಿಹಾರದ ಒಂದು ಪುಟ್ಟ ಗ್ರಾಮಕ್ಕೆ ತೆರಳಿದ ಅವರು ದೇಶಕ್ಕೆ ಹೊಸ ಸ್ಫೂರ್ತಿ ನೀಡಿದರು. ಇಂದು ನಮ್ಮ ಮನದಲ್ಲಿರುವ ಗಾಂಧೀಜಿಯವರ ಚಿತ್ರಣದ ಆಧಾರದ ಮೇಲೆ ಚಂಪಾರಣ್ ಸತ್ಯಾಗ್ರಹದ ಮೌಲ್ಯಮಾಪನ ಮಾಡಲು ಆಗುವುದಿಲ್ಲ. ಒಬ್ಬ ವ್ಯಕ್ತಿ 1915 ರಲ್ಲಿ ಹಿಂದುಸ್ತಾನಕ್ಕೆ ಮರಳುತ್ತಾರೆ, ಕೇವಲ 2 ವರ್ಷಗಳ ಕಾರ್ಯಾವಧಿ, ದೇಶಕ್ಕೆ ಅವರ ಬಗ್ಗೆ ಗೊತ್ತಿಲ್ಲ, ದೇಶದ ಮೇಲೆ ಅವರ ಪ್ರಭಾವವೂ ಇರಲಿಲ್ಲ. ಅದು ಆರಂಭವಷ್ಟೇ ಆಗಿತ್ತು. ಅವರು ಎಷ್ಟು ಕಷ್ಟಪಟ್ಟಿರಬಹುದು ಎಂಬುದನ್ನ ನಾವು ಊಹಿಸಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಚಂಪಾರಣ್ ಸತ್ಯಾಗ್ರಹದಲ್ಲಿ ಮಹಾತ್ಮಾ ಗಾಂಧೀ ಅವರ ಸಂಘಟನಾ ಕೌಶಲ, ಭಾರತೀಯ ಸಮಾಜದ ನಾಡಿ ಮಿಡಿತವನ್ನು ಅರಿತುಕೊಳ್ಳುವ ಅವರ ಶಕ್ತಿ, ಅವರು ತಮ್ಮ ನಡವಳಿಕೆಯಿಂದ ಕಡು ಬಡವರನ್ನು, ನಿರಕ್ಷರ ಕುಕ್ಷಿಗಳನ್ನು ಸಹ ಬ್ರಿಟಿಷ್ ಆಡಳಿತ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸಿದ್ದು, ಪ್ರೇರೆಪಿಸಿದ್ದು, ಹೋರಾಟಕ್ಕಾಗಿ ಅಖಾಡಕ್ಕೆ ಇಳಿಸಿದ್ದು ಎಲ್ಲವೂ ಅವರ ಅದ್ಭುತ ಅಂತಃಶಕ್ತಿಯ ಪರಿಚಯ ಮಾಡಿಸುತ್ತವೆ. ಹಾಗಾಗಿಯೇ,ಇಂದು ನಾವು ಮಹಾತ್ಮಾ ಗಾಂಧೀಜಿಯವರ ವಿರಾಟ ಸ್ವರೂಪದ ಅನುಭವ ಪಡೆಯುತ್ತೇವೆ. ಆದರೆ, ನೂರು ವರ್ಷಗಳ ಹಿಂದಿನ ಗಾಂಧೀಜಿ ಬಗ್ಗೆ ಯೋಚಿಸುವುದಾದರೆ,ಆ ಚಂಪಾರಣ್ ಸತ್ಯಾಗ್ರಹದ ಗಾಂಧಿ ಬಗ್ಗೆ ಯೋಚಿಸುವುದಾದರೆ ಸಾರ್ವಜನಿಕ ಜೀವನ ಆರಂಭಿಸುವ ಯಾವುದೇ ವ್ಯಕ್ತಿಗೆ ಚಂಪಾರಣ್ ಸತ್ಯಾಗ್ರಹ ಒಂದು ಆಳವಾದ ಅಧ್ಯಯನದ ವಿಷಯವಾಗಿದೆ. ಸಾರ್ವಜನಿಕ ಜೀವನವನ್ನು ಆರಂಭಿಸುವುದು ಹೇಗೆ, ಸ್ವತಃ ಎಷ್ಟು ಶ್ರಮಪಡಬೇಕಾಗುತ್ತದೆ ಮತ್ತು ಗಾಂಧೀಜಿ ಇದನ್ನು ಹೇಗೆ ಮಾಡಿದ್ದರು ಎಂಬುದನ್ನು ನಾವು ಅವರಿಂದ ಕಲಿಯಬಹುದಾಗಿದೆ. ಇಂದು ನಾವು ಕೇಳುವ ದೊಡ್ಡ ದೊಡ್ಡ ನಾಯಕರ ಕಾಲವದು, ರಾಜೇಂದ್ರ ಬಾಬು ಆಗಿರಬಹುದು, ಆಚಾರ್ಯ ಕೃಪಲಾನಿ ಆಗಿರಬಹುದು ಅವರೆಲ್ಲರನ್ನೂ ಅಂದು ಗಾಂಧೀಜಿ ಗ್ರಾಮಗಳಿಗೆ ಕಳುಹಿಸಿದ್ದರು. ಜನರ ಜೊತೆ ಬೆರೆತು,ಜನರು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲೇ ಸ್ವಾತಂತ್ರ್ಯ ಸಂಗ್ರಾಮವಾಗಿ ಪರಿವರ್ತಿಸುವಂಥ ಉಪಾಯಗಳನ್ನು ಕಲಿಸಿದ್ದರು. ಗಾಂಧೀಜಿಯವರ ಕಾರ್ಯವೈಖರಿ ಏನೆಂಬುದನ್ನು ತಿಳಿದುಕೊಳ್ಳಲು ಬ್ರಿಟಿಷರಿಗೆ ಸಾಧ್ಯವಾಗಲೇ ಇಲ್ಲ. ಸಂಘರ್ಷವೂ ನಡೆದಿತ್ತು, ಕೌಶಲವೂ ಇತ್ತು ಇವೆರಡೂ ಒಟ್ಟಿಗೆ ಮುನ್ನಡೆದವು. ಗಾಂಧೀಜಿಯವರು ಸಂಘರ್ಷ ಮತ್ತು ಕೌಶಲವನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಸೃಷ್ಟಿಸಿದ್ದರು. ನಾಣ್ಯದ ಒಂದು ಮುಖ ಸಂಘರ್ಷವಾಗಿದ್ದರೆ, ಇನ್ನೊಂದು ಮುಖ ಕೌಶಲವಾಗಿತ್ತು. ಒಂದೆಡೆ ಜೈಲು ತುಂಬುತ್ತಲಿದ್ದರೆ, ಇನ್ನೊಂದೆಡೆ ರಚನಾತ್ಮಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಸಾಗಿತ್ತು. ಒಂದು ಅದ್ಭುತವಾದ ಸಮತೋಲನ ಗಾಂಧೀಜಿಯವರ ಕಾರ್ಯವೈಖರಿಯಲ್ಲಿತ್ತು. ಸತ್ಯಾಗ್ರಹವೆಂಬ ಶಬ್ದದ ಅರ್ಥವೇನು, ಅಸಮ್ಮತಿ ಏನು ಅರ್ಥ ಸ್ಪುರಿಸುತ್ತದೆ, ಇಂಥ ದೊಡ್ಡ ಸಾಮ್ರಾಜ್ಯದೆದುರು ಅಸಹಕಾರ ಹೇಗಿರತ್ತೆ – ಎಂಬ ಬಗ್ಗೆ ಹೊಸ ವ್ಯಾಖ್ಯಾನವನ್ನೇ ಕೇವಲ ಶಬ್ದಗಳಲ್ಲಿ ಅಲ್ಲದೇ ಒಂದು ಸಫಲ ಪ್ರಯೋಗದ ಮೂಲಕ ಗಾಂಧೀಜಿ ಪ್ರಸ್ತಾಪಿಸಿದ್ದರು.

ಇಂದು ದೇಶ ಚಂಪಾರಣ್ ಸತ್ಯಾಗ್ರಹದ ಶತಾಬ್ದಿಯನ್ನು ಆಚರಿಸುತ್ತಿರುವಾಗ. ಭಾರತದ ಸಾಮಾನ್ಯ ಮಾನವನ ಶಕ್ತಿ ಎಷ್ಟು ಅಪಾರವಾದದ್ದು, ಆ ಅಪಾರ ಶಕ್ತಿಯನ್ನು ಬಳಸಿ ಸ್ವಾತಂತ್ರ್ಯ ಸಂಗ್ರಾಮದಂತೆ, ಸ್ವರಾಜ್ಯದಿಂದ ಸುರಾಜ್ಯ ಯಾತ್ರೆಯಲ್ಲಿಯೂ ಸಹ 125 ಕೋಟಿ ದೇಶವಾಸಿಗಳ ಸಂಕಲ್ಪ ಶಕ್ತಿ, ಪರಿಶ್ರಮದ ಪರಾಕಾಷ್ಠೆ, ಸರ್ವಜನ ಹಿತಾಯ,ಸರ್ವಜನ ಸುಖಾಯ ಎಂಬ ಮೂಲಮಂತ್ರದೊಂದಿಗೆ ದೇಶಕ್ಕಾಗಿ, ಸಮಾಜಕ್ಕಾಗಿ ಏನಾದರೂ ಒಳಿತನ್ನು ಮಾಡಬೇಕು ಎಂಬ ಅಖಂಡ ಪ್ರಯತ್ನವೇ, ಸ್ವತಂತ್ರಕ್ಕಾಗಿ ಬಲಿದಾನ ನೀಡಿದ ಆ ಮಹಾಪುರುಷರ ಕನಸುಗಳನ್ನು ನನಸಾಗಿಸಬಲ್ಲದು ಎಂದು ಈ ಸಂದರ್ಭದಲ್ಲಿ ನಾನು ಹೇಳಬಯಸುತ್ತೇನೆ.
ಇಂದು ನಾವು 21 ನೇ ಶತಮಾನದಲ್ಲಿ ಜೀವಿಸುತ್ತಿದ್ದೇವೆ, ಬದಲಾಗುತ್ತಿರುವಭಾರತವನ್ನು ನೋಡ ಬಯಸದ ಭಾರತೀಯರು ಯಾರಿದ್ದಾರೆ, ಯಾವ ಭಾರತೀಯ ದೇಶ ಬದಲಾವಣೆಯಲ್ಲಿ ಪಾಲುದಾರನಾಗಬಯಸುವುದಿಲ್ಲ, 125 ಕೋಟಿ ದೇಶವಾಸಿಗಳಲ್ಲೂ ಬದಲಾವಣೆಯ ಈ ಬಯಕೆ, ಪ್ರಯತ್ನ, ಇದೇ. ಅದುವೇ ನವ ಭಾರತಕ್ಕೆ ಗಟ್ಟಿಯಾದ ತಳಪಾಯ ಹಾಕಬಲ್ಲದ್ದು. ನ್ಯೂ ಇಂಡಿಯಾ ಅಥವಾ ನವ ಭಾರತ ಎಂಬುದು ಯಾವುದೇ ಸರ್ಕಾರೀ ಕಾರ್ಯಕ್ರಮವೂ ಅಲ್ಲ, ಯಾವುದೇ ರಾಜಕೀಯ ಬಣದ ಪ್ರಣಾಳಿಕೆಯೂ ಅಲ್ಲ ಮತ್ತು ಇದು ಯಾವುದೇ ಯೋಜನೆಯೂ ಅಲ್ಲ. ನ್ಯೂ ಇಂಡಿಯಾ ಎಂಬುದು 125 ಕೋಟಿ ಭಾರತೀಯರ ಸ್ವಾಭಾವಿಕ ನಂಬಿಕೆಯಾಗಿದೆ. ಇದುವೇ, 125 ಕೋಟಿ ದೇಶವಾಸಿಗಳು ಒಗ್ಗಟ್ಟಿನಿಂದ, ಹೇಗೆ ಭವ್ಯ ಭಾರತದ ನಿರ್ಮಾಣ ಮಾಡಬಯಸುತ್ತಾರೆ ಎಂಬ ಭಾವನೆಯಾಗಿದೆ. 125 ಕೋಟಿ ದೇಶವಾಸಿಗಳ ಮನದಲ್ಲಿ ಒಂದು ಆಸೆಯಿದೆ, ಒಂದು ಉತ್ಸಾಹವಿದೆ, ಒಂದು ಸಂಕಲ್ಪವಿದೆ, ಒಂದು ಬಯಕೆಯಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಸ್ವಲ್ಪ ನಮ್ಮ ಖಾಸಗಿ ಜೀವನದಿಂದ ಹೊರಬಂದು ಸಂವೇದನಾಶೀಲರಾಗಿ ಸಮಾಜದ ಆಗು ಹೋಗುಗಳನ್ನು ಗಮನಿಸುವುದಾದರೆ, ನಮ್ಮ ಸುತ್ತ ಮುತ್ತ ಏನಾಗುತ್ತಿದೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ, ಲಕ್ಷಾಂತರ ಜನರು ತಮ್ಮ ಖಾಸಗಿ ಜೀವನದ ಹೊರತಾಗಿ ನಿಸ್ವಾರ್ಥತೆಯಿಂದ ಸಮಾಜದ ಶೋಷಿತ,ಬಲಿಪಶುಗಳಾದ, ಅವಕಾಶವಂಚಿತ ಜನರಿಗಾಗಿ, ಬಡವರಿಗಾಗಿ, ದುಃಖಿತರಿಗಾಗಿ ಒಂದೊಂದು ರೀತಿ ಶ್ರಮಿಸುತ್ತಿರುವುದು ಕಂಡು ಬರುತ್ತದೆ. ಅವರು ಒಬ್ಬ ಮೂಕ ಸೇವಕನಂತೆ, ತಪಸ್ಸನ್ನು ಮಾಡುತ್ತಿರುವವರಂತೆ, ಸಾಧನೆಯನ್ನು ಮಾಡುತ್ತಿರುವವರಂತೆ ಕೆಲಸ ಮಾಡುತ್ತಲೇ ಇರುತ್ತಾರೆ. ಎಷ್ಟೋ ಜನರು ನಿತ್ಯವೂ ಆಸ್ಪತ್ರೆಗಳಿಗೆ ಹೋಗಿರೋಗಿಗಳಿಗೆ ಸಹಾಯ ಮಾಡುತ್ತಾರೆ. ಕೆಲವರು ರಕ್ತದಾನ ಮಾಡಲು ಧಾವಿಸುತ್ತಾರೆ. ಇನ್ನೂ ಕೆಲವು ಜನರು ಹಸಿದವರಿಗೆ ಅನ್ನ ಹಾಕುತ್ತಾರೆ. ನಮ್ಮ ದೇಶ ಕಣ್ಣು ಕೋರೈಸುವಂಥ ನಾಡು. ಜನಸೇವೆಯೇ ಜನಾರ್ದನ ಸೇವೆ ಎಂಬುದು ನಮ್ಮ ರಕ್ತದಲ್ಲಿ ಇದೆ. ನಾವು ಇದನ್ನು ಒಮ್ಮೆ, ಸಾಮೂಹಿಕ ರೂಪದಲ್ಲಿ ಮತ್ತು ಸಂಘಟಿತ ರೂಪದಲ್ಲಿ ನೋಡುವುದಾದರೆ, ಇದು ಒಂದು ಅಗಾಧ ಶಕ್ತಿಯಾಗಿದೆ. ನ್ಯೂ ಇಂಡಿಯಾ ಬಗ್ಗೆ ಮಾತಾಡುವಾಗ ಅದರ ಬಗ್ಗೆ ಯೋಚಿಸುವುದು, ವಿವೇಚನೆ ಮಾಡುವುದು, ವಿಭಿನ್ನ ದೃಷ್ಟಿಕೋನದಿಂದ ಅದನ್ನು ನೋಡುವುದು ಇದೆಲ್ಲ ಬಹಳ ಸ್ವಾಭಾವಿಕವಾಗಿದೆ ಮತ್ತು ಗಣತಂತ್ರದಲ್ಲಿ ಇದು ಅವಶ್ಯಕವೂ ಹೌದು. ಆದರೆ, 125 ಕೋಟಿ ಜನರು ಸಂಕಲ್ಪ ಮಾಡಿದರೆ, ಸಂಕಲ್ಪವನ್ನು ಸಾಧಿಸುವ ಮಾರ್ಗವನ್ನು ನಿರ್ಧರಿಸಿದರೆ, ಒಂದಾದ ನಂತರ ಮತ್ತೊಂದು ಹೆಜ್ಜೆಗಳು ಒಗ್ಗೂಡುತ್ತಾ ಸಾಗಿ ನಮ್ಮ ಕಣ್ಣೆದುರಿಗೇ 125 ಕೋಟಿ ಜನರ ನ್ಯೂ ಇಂಡಿಯಾ ಎಂಬ ಕನಸು ನನಸಾಗುತ್ತದೆ. ಮತ್ತು ಈ ಎಲ್ಲ ಕೆಲಸಗಳೂ ಬಜೆಟ್‌ನಿಂದ,ಸರ್ಕಾರೀ ಯೋಜನೆಗಳಿಂದ, ಸರ್ಕಾರೀ ಹಣದಿಂದ ಆಗಬೇಕು ಎಂದೇನೂ ಅಲ್ಲ.

ಪ್ರತಿಯೊಬ್ಬ ನಾಗರಿಕನೂ, ನಾನು ಸಂಚಾರಿ ನಿಯಮಗಳನ್ನು ಪಾಲಿಸುತ್ತೇನೆ, ನಾನು ನನ್ನ ಜವಾಬ್ದಾರಿಗಳನ್ನು ಸಂಪೂರ್ಣ ನಿಷ್ಠೆಯಿಂದ ಪಾಲಿಸುತ್ತೇನೆ ಎಂದು, ವಾರಕ್ಕೆ ಒಂದು ದಿನ ನನ್ನ ಜೀವನದಲ್ಲಿ ಪೆಟ್ರೋಲ್, ಡಿಸೇಲ್ ಬಳಕೆಯನ್ನು ಮಾಡುವುದಿಲ್ಲ ಎಂದು, ಸಂಕಲ್ಪ ಮಾಡಿದರೆ ನಮ್ಮ ಕಣ್ಣೆದುರೇ ವಿಸ್ಮಯ ನಡೆಯುತ್ತದೆ.ನೋಡಲು ಈ ವಿಷಯಗಳು ಚಿಕ್ಕ ಪುಟ್ಟವಿರಬಹುದು. ನೀವೇ ನೋಡಿ, 125 ಕೋಟಿ ಜನರು ದೇಶವನ್ನು ನ್ಯೂ ಇಂಡಿಯಾ ಆಗಿ ಪರಿವರ್ತಿಸುವ ಕನಸನ್ನೇನು ಕಾಣುತ್ತಿರುವರೋ ಅದು ನಮ್ಮ ಕಣ್ಣೆದುರಿಗೇ ಸಾಕಾರಗೊಳ್ಳುವುದು ಕಂಡುಬರುತ್ತದೆ. ಇದರ ತಾತ್ಪರ್ಯವೇನೆಂದರೆ, ಪ್ರತಿಯೊಬ್ಬ ನಾಗರಿಕನೂ ತನ್ನ ನಾಗರಿಕ ಧರ್ಮವನ್ನು ಪಾಲಿಸಬೇಕು, ಕರ್ತವ್ಯವನ್ನು ಪಾಲಿಸಬೇಕು. ಇದೇ ನ್ಯೂ ಇಂಡಿಯಾದ ಒಂದು ಉತ್ತಮ ಆರಂಭವಾಗಬಹುದಾಗಿದೆ. 2022 ರಲ್ಲಿ ಸ್ವತಂತ್ರ ಭಾರತಕ್ಕೆ 75 ವರ್ಷಗಳು ಪೂರ್ಣಗೊಳ್ಳಲಿವೆ. ಬನ್ನಿ, ಭಗತ್‌ಸಿಂಗ್, ಸುಖದೇವ್,ರಾಜ್‌ಗುರು ಅವರನ್ನು ನೆನೆಯೋಣ. ಚಂಪಾರಣ್ ಸತ್ಯಾಗ್ರಹವನ್ನು ನೆನಪಿಸಿಕೊಳ್ಳೋಣ. ನಾವೂ ಕೂಡ ಯಾಕೆ ಸ್ವರಾಜ್ಯದಿಂದ ಸುರಾಜ್ಯದ ಯಾತ್ರೆಯಲ್ಲಿ ನಮ್ಮ ಜೀವನವನ್ನು ಕ್ರಮಬದ್ಧಗೊಳಿಸಬಾರದು, ಸಂಕಲ್ಪಬದ್ಧರಾಗಿ ಕೈ ಜೋಡಿಸಬಾರದು. ಬನ್ನಿ – ನಾನು ನಿಮ್ಮನ್ನು ಆಮಂತ್ರಿಸುತ್ತಿದ್ದೇನೆ.

ನನ್ನ ಪ್ರಿಯ ದೇಶಬಾಂಧವರೇ, ಇಂದು ನಿಮ್ಮೆಲ್ಲರಿಗೂ ಧನ್ಯವಾದ ಕೂಡ ಹೇಳಬಯಸುತ್ತೇನೆ. ಕೆಲ ದಿನಗಳಿಂದ ನಮ್ಮ ದೇಶದಲ್ಲಿ ಎಂಥ ವಾತಾವರಣ ನಿರ್ಮಾಣವಾಗಿದೆ ಎಂದರೆ ಬಹಳಷ್ಟು ಜನರು ಡಿಜಿಟಲ್ ಪಾವತಿ, ಡಿಜಿಧನ್ ಆಂದೋಲನದಲ್ಲಿ ಪಾಲ್ಗೊಂಡಿದ್ದಾರೆ. ನಗದು ವಹಿವಾಟಿಲ್ಲದೆ ಹೇಗೆ ವ್ಯವಹಾರ ಮಾಡಬೇಕು ಎಂಬ ಬಗ್ಗೆ ಜಿಜ್ಞಾಸೆಯೂ ಬಹಳ ಇದೆ. ಕಡುಬಡವ ಕೂಡಾ ಕಲಿಯುವ ಪ್ರಯತ್ನದಲ್ಲಿದ್ದಾನೆ. ನಿಧಾನವಾಗಿ ಜನರು ನಗದು ರಹಿತಾಗಿ ಹೇಗೆ ವ್ಯವಹಾರ ಮಾಡಬಹುದು ಎಂಬುದರತ್ತ ಮುಂದಡಿಯಿಡುತ್ತಿದ್ದಾರೆ. ಗರಿಷ್ಠ ನೋಟುಗಳ ಅಮಾನ್ಯ ಅಂದರೆ, ನೋಟು ಅಮಾನ್ಯೀಕರಣದ ನಂತರ ಡಿಜಿಟಲ್ ಪಾವತಿಯ ವಿಭಿನ್ನ ಪ್ರಕಾರಗಳಲ್ಲಿ ಸಾಕಷ್ಟು ವೃದ್ಧಿಯಾಗಿರುವುದನ್ನು ಕಾಣಬಹುದಾಗಿದೆ. ಭೀಮ್ ಆಪ್ ಆರಂಭಿಸಿ ಕೇವಲ ಎರಡು ಎರಡೂವರೆ ತಿಂಗಳು ಮಾತ್ರ ಆಗಿದೆ. ಆದರೆ, ಇಲ್ಲಿವರೆಗೆ ಸರಿಸುಮಾರು ಒಂದೂವರೆ ಕೋಟಿ ಜನರು ಇದನ್ನು ಡೌನ್ ಲೋಡ್ ಮಾಡಿಕೊಂಡಿದ್ದಾರೆ.

ನನ್ನ ಪ್ರೀತಿಯ ದೇಶಬಾಂಧವರೇ, ಕಪ್ಪು ಹಣ, ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ನಾವು ಮುಂದುವರಿಸಬೇಕಿದೆ. 125 ಕೋಟಿ ದೇಶವಾಸಿಗಳು ಈ ಒಂದು ವರ್ಷದಲ್ಲಿ ಎರಡೂವರೆ ಸಾವಿರ ಕೋಟಿ ಡಿಜಿಟಲ್ ವ್ಯವಹಾರದ ಕೆಲಸ ಮಾಡುವ ಸಂಕಲ್ಪ ಮಾಡಬಹುದೇ? ನಾವು ಬಜೆಟ್‌ನಲ್ಲಿ ಘೋಷಿಸಿದ್ದೇವೆ. 125 ಕೋಟಿ ದೇಶವಾಸಿಗಳು ಮನಸ್ಸು ಮಾಡಿದರೆ, ಈ ಕೆಲಸಕ್ಕಾಗಿ ಒಂದು ವರ್ಷ ಕಾಯಬೇಕಿಲ್ಲ, ಕೇವಲ ಆರು ತಿಂಗಳಲ್ಲಿ ಮಾಡಬಹುದು. 2500 ಕೋಟಿ ಡಿಜಿಟಲ್ ವ್ಯವಹಾರ-ನಾವು ಶಾಲೆಯ ಶುಲ್ಕ ಪಾವತಿಸುವುದಾದರೆ ಡಿಜಿಟಲ್ ಪಾವತಿ ಮಾಡೋಣ, ರೈಲಿನಲ್ಲಿ ಪ್ರಯಾಣ ಮಾಡುವುದಾದರೆ, ವಿಮಾನದಲ್ಲಿ ಪ್ರಯಾಣ ಮಾಡುವುದಾದರೆ, ಡಿಜಿಟಲ್ ಪಾವತಿ ಮಾಡೋಣ. ಔಷಧಿಗಳನ್ನು ಖರೀದಿಸುವುದಾದರೆ ಡಿಜಿಟಲ್ ಪಾವತಿ ಮಾಡೋಣ, ನಾವು ದವಸಧಾನ್ಯದ ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದೇವೆ ಎಂದಾದರೆ, ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳೋಣ, ನಿತ್ಯ ಜೀವನದಲ್ಲಿ ಇದೆಲ್ಲವನ್ನೂ ನಾವೂ ಮಾಡಬಹುದು. ನಿಮಗೆ ಕಲ್ಪನೆ ಇರಲಿಕ್ಕಿಲ್ಲ ಆದರೆ, ಇದರಿಂದ ನೀವು ದೇಶದ ಬಹುದೊಡ್ಡ ಸೇವೆಯನ್ನು ಮಾಡಿದಂತಾಗುತ್ತದೆ. ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಒಬ್ಬ ವೀರ ಸೇನಾನಿ ನೀವಾಗಬಹುದಾಗಿದೆ. ಕಳೆದ ದಿನಗಳಲ್ಲಿ ಜನರಲ್ಲಿ ಅರಿವು ಮೂಡಿಸಲು, ಜಾಗೃತಿ ಮೂಡಿಸಲು, ಸಾಕಷ್ಟು ಡಿಜಿಧನ್ ಮೇಳಗಳನ್ನು ಆಯೋಜಿಸಸಾಗಿದೆ. ದೇಶವ್ಯಾಪಿ 100 ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪವಿದೆ. 80 ರಿಂದ 85 ಕಾರ್ಯಕ್ರಮಗಳು ಸಂಪನ್ನಗೊಂಡಿವೆ. ಅದರಲ್ಲಿ ಬಹುಮಾನದ ಯೋಜನೆಯೂ ಇತ್ತು. ಸುಮಾರು ಹನ್ನೆರಡೂವರೆ ಲಕ್ಷ ಜನರು ಗ್ರಾಹಕರು ಬಹುಮಾನ ಗೆದ್ದಿದ್ದಾರೆ. 70 ಸಾವಿರ ವ್ಯಾಪಾರಿಗಳೂ, ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ ಮತ್ತು ಪ್ರತಿಯೊಬ್ಬರೂ ಈ ಕೆಲಸವನ್ನು ಮುಂದುವರಿಸುವ ಸಂಕಲ್ಪಗೈದಿದ್ದಾರೆ. ಏಪ್ರಿಲ್ 14 ರಂದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತ್ಯುತ್ಸವ ಇದೆ. ಈ ಹಿಂದೆಯೇ ನಿರ್ಧರಿಸಿದಂತೆ,ಏಪ್ರಿಲ್ 14, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಈ ಡಿಜಿಧನ್ ಮೇಳ ಮುಕ್ತಾಯಗೊಳ್ಳಲಿದೆ. ನೂರು ದಿನಗಳು ಪೂರ್ಣಗೊಳ್ಳುವುದರ ಜೊತೆಗೆ, ಒಂದು ಕೊನೆಯ ಬೃಹತ್ ಪ್ರಮಾಣದ ಕಾರ್ಯಕ್ರಮ ಜರುಗಲಿದೆ. ಬಂಪರ್ ಡ್ರಾ ಕೂಡಾ ಅಂದು ನಡೆಯಲಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿವರೆಗೆ, ನಮ್ಮ ಬಳಿ ಎಷ್ಟು ಸಮಯ ಉಳಿದಿದೆಯೋ, ಅಷ್ಟರಲ್ಲಿ ಸಾಧ್ಯವಿದ್ದಷ್ಟೂ ಭೀಮ್ ಆಪ್ ಪ್ರಚಾರ ಮಾಡುತ್ತೇವೆ ಎಂಬ ವಿಶ್ವಾಸ ನನಗಿದೆ. ನಗದು ರಹಿತ ವ್ಯವಹಾರ ಹೇಗಿರಬೇಕು, ನೋಟುಗಳ ವ್ಯವಹಾರ ಹೇಗೆ ಕಡಿಮೆ ಮಾಡಬೇಕು, ಎಂಬುದರಲ್ಲಿ ನಮ್ಮ ಪಾಲುದಾರಿಕೆಯನ್ನು ನೀಡಬೇಕು.

ನನ್ನ ನಲ್ಮೆಯ ದೇಶಬಾಂಧವರೇ, ನಾನು ಪ್ರತಿ ಬಾರಿಯೂ ಜನರಿಂದ ಮನದಾಳದ ಮಾತಿಗಾಗಿ ಸಲಹೆಗಳನ್ನು ಕೇಳಿದಾಗ, ವಿಭಿನ್ನ ಪ್ರಕಾರದ ಸಲಹೆಗಳು ಹರಿದುಬರುತ್ತವೆ. ಆದರೆ, ನಾನು ಗಮನಿಸಿದ್ದೇನೆ, ಸ್ವಚ್ಛತೆ ಬಗ್ಗೆ ಪ್ರತಿಬಾರಿಯೂ ಜನರು ಆಗ್ರಹಿಸುತ್ತಲೇ ಇರುತ್ತಾರೆ. ನನಗೆ ಡೆಹ್ರಾಡೂನ್‌ನಿಂದ 11 ನೇ ತರಗತಿಯ ವಿದ್ಯಾರ್ಥಿನಿ, ಗಾಯತ್ರಿ ಫೋನ್ ಮೂಲಕ ಸಂದೇಶ ಕಳುಹಿಸಿದ್ದಾಳೆ:-
“ಆದರಣೀಯ ಪ್ರಧಾನಮಂತ್ರಿಗಳೇ, ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ನೀವು ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಕ್ಕೆ ಅಭಿನಂದನೆಗಳು. ನಾನು ನಿಮ್ಮೊಂದಿಗೆ ನನ್ನ ಹೃದಯಕ್ಕೆ ಹತ್ತಿರವಾದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಸ್ವಚ್ಛತೆ ಎಷ್ಟು ಅವಶ್ಯಕ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂದು ಹೇಳಬಯಸುತ್ತೇನೆ. ನಾನು ಪ್ರತಿದಿನ ನದಿಯ ಮೂಲಕ ಪ್ರಯಾಣ ಮಾಡುತ್ತೇನೆ. ಜನರು ನದಿಯಲ್ಲಿ ಕಸ ಸುರಿದು ಕಲುಷಿತಗೊಳಿಸುತ್ತಾರೆ. ಈ ನದಿ ನಮ್ಮ ಮನೆ ದಾಟಿ ಹರಿಯುವ ಮುನ್ನ ರಿಸ್ಪನಾ ಸೇತುವೆ ಕೆಳಗೆ ಹಾದು ಹೋಗುತ್ತದೆ. ಈ ನದಿಯ ರಕ್ಷಣೆಗಾಗಿ ನಾವು ನದಿ ತೀರದ ಜನವಸತಿಗಳಿಗೆ ಹೋಗಿ, ಜನರೊಂದಿಗೆ ಮಾತನಾಡಿ, ರ್‍ಯಾಲಿಗಳನ್ನೂ ಮಾಡಿದ್ದೇವೆ. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನೀವು ನಿಮ್ಮದೇ ತಂಡವನ್ನು ಕಳುಹಿಸಿ ಇಲ್ಲವೇ ಪತ್ರಿಕೆಗಳಲ್ಲಿ ಪ್ರಕಟಿಸಿ ಈ ವಿಷಯದ ಮೇಲೆ ಬೆಳಕು ಚೆಲ್ಲಬೇಕೆಂದು ಕೇಳಿಕೊಳ್ಳುತ್ತೇನೆ. ಧನ್ಯವಾದಗಳು.”

ನೋಡಿ ಸೋದರ ಮತ್ತು ಸೋದರಿಯರೇ, 11 ನೇ ತರಗತಿಯಲ್ಲಿ ಓದುವ ಒಬ್ಬ ಮಗಳಿಗೆ ಕಲುಷಿತವಾಗಿ ಹರಿಯುವ ನದಿ ನೋಡಿ ಎಷ್ಟು ನೋವೆನಿಸುತ್ತಿದೆ. ಆ ನದಿಯಲ್ಲಿ ಕಸ ಸುರಿಯುವುದನ್ನು ನೋಡಿ ಅವಳಿಗೆ ಎಷ್ಟು ಕೋಪ ಬರುತ್ತಿದೆ. ಇದೊಂದು ಉತ್ತಮ ಲಕ್ಷಣ ಎಂದು ನಾನು ಭಾವಿಸುತ್ತೇನೆ. ನಾನು ಇದನ್ನೇ ಅಪೇಕ್ಷಿಸುತ್ತೇನೆ. 125 ಕೋಟಿ ಜನರ ಮನಸ್ಸಿನಲ್ಲಿ ಕೊಳಕನ್ನು ಕಂಡು ಇದೇ ಭಾವನೆ ಬರಲಿ ಎಂದೇ ನಾನು ಬಯಸುತ್ತೇನೆ. ಒಮ್ಮೆ ಕೋಪ ಬಂದರೆ, ಒಮ್ಮೆ ಬೇಜಾರೆನ್ನುವುದು ಹುಟ್ಟಿಕೊಂಡರೆ, ಅದರ ವಿರುದ್ಧ ರೋಷ ಉಕ್ಕಿದರೆ, ನಾವೇ ಕೊಳಕಿನ ವಿರುದ್ಧ ಏನಾದರೂ ಕ್ರಮ ಕೈಗೊಳ್ಳಲಾರಂಭಿಸುತ್ತೇವೆ. ಗಾಯತ್ರಿ ಸ್ವತಃ ತನ್ನ ಕೋಪವನ್ನು ಪ್ರಕಟಪಡಿಸುತ್ತಿದ್ದಾಳೆ, ನನಗೆ ಸಲಹೆ ನೀಡುತ್ತಿದ್ದಾಳೆ ಜೊತೆಗೆ ಅವಳು ಸ್ವತಃ ಸಾಕಷ್ಟು ಪ್ರಯತ್ನಗಳನ್ನೂ ಮಾಡಿದ್ದಾಳೆ. ಆದರೆ, ಸಫಲತೆ ಸಿಕ್ಕಿಲ್ಲ. ಸ್ವಚ್ಛತೆಯ ಆಂದೋಲನ ಆರಂಭವಾದಾಗಿನಿಂದ ಜಾಗರೂಕತೆ ಹೆಚ್ಚಿದೆ. ಪ್ರತಿಯೊಬ್ಬರೂ ಅದರೊಟ್ಟಿಗೆ ಸಕಾರಾತ್ಮಕವಾಗಿ ಕೈ ಜೋಡಿಸುತ್ತಾ ಸಾಗಿದ್ದಾರೆ. ಇದು ಒಂದು ಜನಾಂದೋಲನದ ರೂಪ ತಳೆದಿದೆ. ಕೊಳಕಿನ ವಿರುದ್ಧ ದ್ವೇಷ ಹೆಚ್ಚುತ್ತಾ ಸಾಗಿದೆ. ಜಾಗೃತಿ, ಸಕ್ರಿಯ ಪಾಲ್ಗೊಳ್ಳುವಿಕೆ, ಆಂದೋಲನ, ಆರಂಭವಾದಲ್ಲಿ.. ಅದರದ್ದೇ ಆದ ಮಹತ್ವ ಇದ್ದೇ ಇದೆ. ಆದರೆ ಸ್ವಚ್ಛತೆಯ ಆಂದೋಲನ ಎಂಬುದು ನಮ್ಮ ಅಭ್ಯಾಸಗಳೊಂದಿಗೆ ಹೆಚ್ಚು ಸಂಬಂಧ ಹೊಂದಿದೆ. ಇದು ನಮ್ಮ ಅಭ್ಯಾಸಗಳನ್ನು ಬದಲಿಸುವ ಆಂದೋಲನವಾಗಿದೆ. ಸ್ವಚ್ಛತೆಯ ಅಭ್ಯಾಸ ಹುಟ್ಟುಹಾಕುವ ಆಂದೋಲನವಾಗಿದೆ. ಆಂದೋಲನ ಸಾಮೂಹಿಕ ರೂಪದಿಂದಲೇ ಸಾಧ್ಯ. ಕೆಲಸ ಕಠಿಣವಾದದ್ದೇ. ಆದರೆ ಮಾಡಲೇಬೇಕಿದೆ. ದೇಶದ ಹೊಸ ಪೀಳಿಗೆಯವರಲ್ಲಿ, ಬಾಲಕರಲ್ಲಿ,ವಿದ್ಯಾರ್ಥಿಗಳಲ್ಲಿ ಯುವಕರಲ್ಲಿ ಹುಟ್ಟಿದಂತಹ ಈ ಭಾವನೆಯೇ ಉತ್ತಮ ಫಲಿತಾಂಶದ ಸಂಕೇತವನ್ನು ನೀಡುತ್ತಿದೆ ಎಂಬುದು, ನನ್ನ ವಿಶ್ವಾಸವಾಗಿದೆ. ಇಂದು ನನ್ನ ಮನ್ ಕಿ ಬಾತ್’ನಲ್ಲಿ ಗಾಯತ್ರಿಯ ಮಾತುಗಳನ್ನು ಕೇಳುತ್ತಿರುವ ಎಲ್ಲ ದೇಶ ಬಾಂಧವರಿಗೆ ಗಾಯತ್ರಿಯ ಸಂದೇಶ ನಮ್ಮೆಲ್ಲರಿಗೆ ನೀಡಿದ ಸಂದೇಶವಾಗಬೇಕೆಂದು ಹೇಳಬಯಸುತ್ತೇನೆ.

ನನ್ನ ಪ್ರೀತಿಯ ದೇಶ ಬಾಂಧವರೇ, ನಾನು ’ಮನ್ ಕಿ ಬಾತ್’ ಕಾರ್ಯಕ್ರಮ ಆರಂಭಿಸಿದಂದಿನಿಂದಲೂ, ಪ್ರಾರಂಭದಿಂದಲೂ ಒಂದು ವಿಷಯದ ಬಗ್ಗೆ ನನಗೆ ಸಲಹೆಗಳು ಬರುತ್ತಲೇ ಇವೆ ಮತ್ತು ಜನರು ಹೆಚ್ಚಾಗಿ, ಆಹಾರ ವ್ಯರ್ಥ ಮಾಡುವುದರ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದಾರೆ. ನಾವು ಮನೆಯಲ್ಲೇ ಆಗಲಿ ಅಥವಾ ಸಭೆ, ಸಮಾರಂಭಗಳಲ್ಲೇ ಆಗಲಿ,ಅವಶ್ಯಕತೆಗಿಂತ ಹೆಚ್ಚು ಆಹಾರವನ್ನು ನಮ್ಮ ತಟ್ಟೆಯಲ್ಲಿ ಹಾಕಿ ಕೊಳ್ಳುತ್ತೇವೆ. ಎಷ್ಟು ತಿನಿಸುಗಳು ಕಾಣಿಸುತ್ತವೋ, ಅವೆಲ್ಲವನ್ನೂ ನಮ್ಮ ತಟ್ಟೆಗೆ ಹಾಕಿಕೊಳ್ಳುತ್ತೇವೆ. ಆದರೆ,ತಿನ್ನಲು ಆಗುವುದಿಲ್ಲ. ನಾವು ತಟ್ಟೆಯಲ್ಲಿ ಎಷ್ಟು ಹಾಕಿಕೊಳ್ಳುತ್ತೇವೋ, ಅದರ ಅರ್ಧದಷ್ಟೂ ತಿನ್ನುವುದಿಲ್ಲ. ಹಾಗೂ ಅದನ್ನು ಅಲ್ಲೇ ಬಿಟ್ಟು ಬಿಡುತ್ತೇವೆ. ನಾವು ಬಿಟ್ಟು ಬಿಡುವ ಈ ಎಂಜಲಿನಿಂದ ಎಷ್ಟು ನಷ್ಟಮಾಡುತ್ತಿದ್ದೇವೆಂದು ನೀವು ಎಂದಾದರೂ ಯೋಚಿಸಿದ್ದೀರಾ?ನಾವು ಎಂಜಲು ಮಾಡಿ ಬಿಡದಿದ್ದರೆ, ಎಷ್ಟು ಜನರ ಹೊಟ್ಟೆ ತುಂಬಿಸಬಹುದೆಂದು ನೀವು ಯೋಚಿಸಿದ್ದೀರಾ? ಇದು ಅರ್ಥವಾಗದೇ ಇರುವಂಥ ವಿಷಯವೇನಲ್ಲ. ಹಾಗೇ ನಮ್ಮ ಕುಟುಂಬದಲ್ಲಿ, ಮಕ್ಕಳಿಗೆ ಅಮ್ಮ ಬಡಿಸಿದಾಗ, ಎಷ್ಟು ತಿನ್ನೋಕ್ಕೆ ಆಗುತ್ತೋ ಅಷ್ಟೇ ಹಾಕಿಸಿಕೋ ಅನ್ನುತ್ತಾಳೆ. ಈ ನಿಟ್ಟಿನಲ್ಲಿ ಒಂದು ಪ್ರಯತ್ನ ನಡೆಯುತ್ತಲೇ ಇದೆ. ಆದರೆ, ಈ ವಿಷಯದ ಬಗ್ಗೆ ನಿರ್ಲಕ್ಷ್ಯ ಮಾಡೋದು ಸಮಾಜ ದ್ರೋಹ. ಬಡವರಿಗೆ ಮಾಡುವ ಅನ್ಯಾಯ. ಅಲ್ಲದೆ, ಉಳಿಸಿದರೆ, ಇದರಿಂದ ಕುಟುಂಬಕ್ಕೂ ಆರ್ಥಿಕವಾಗಿ ಲಾಭವೇ. ಸಮಾಜದ ಬಗ್ಗೆ ಯೋಚಿಸುವುದು ಒಳ್ಳೆಯ ವಿಷಯವೇ, ಆದರೇ, ಈ ವಿಷಯ, ಕುಟುಂಬಕ್ಕೂ ಲಾಭ ತರುವಂಥ ವಿಷಯ. ನಾನು ಈ ವಿಷಯದ ಬಗ್ಗೆ ಆಗ್ರಹ ವ್ಯಕ್ತಪಡಿಸುತ್ತಿಲ್ಲ. ಆದರೆ, ಅರಿವು ಮೂಡಬೇಕೆಂಬುದೇ ನನ್ನ ಉದ್ದೇಶವಾಗಿದೆ. ನನಗೆ ಇಂಥ ಆಂದೋಲನ ನಡೆಸುವ ಕೆಲ ಯುವಕರು ಗೊತ್ತು, ಅವರೊಂದು ಮೊಬೈಲ್ ಆಪ್ ತಯಾರಿಸಿದ್ದಾರೆ ಹಾಗೂ ಎಲ್ಲೇ ಹೀಗೆ ಆಹಾರ ಉಳಿದಿದ್ದರೆ, ಜನರು ಇವರನ್ನು ಕರೆಯುತ್ತಾರೆ. ಇವರು ಅದನ್ನೆಲ್ಲ ಸಂಗ್ರಹಿಸಿ ಸದುಪಯೋಗ ಮಾಡುತ್ತಿದ್ದಾರೆ, ಶ್ರಮ ಪಡುತ್ತಿದ್ದಾರೆ ಮತ್ತು ನಮ್ಮ ದೇಶದ ಯುವಕರೇ ಈ ಕೆಲಸ ಮಾಡುತ್ತಿದ್ದಾರೆ. ಹಿಂದೂಸ್ತಾನದ ಪ್ರತಿ ರಾಜ್ಯದಲ್ಲೂ ಇಂಥ ಯುವಕರು ಎಲ್ಲಾದರೂ ಸಿಕ್ಕೇ ಸಿಗ್ತಾರೆ. ಅವರ ಜೀವನವೂ ನಮ್ಮನ್ನು ಆಹಾರ ವ್ಯರ್ಥ ಮಾಡದಂತೆ ಪ್ರೇರೇಪಿಸುತ್ತದೆ. ನಮಗೆ ಎಷ್ಟು ತಿನ್ನ ಬೇಕಿದೆಯೋ ಅಷ್ಟೇ ತೆಗೆದುಕೊಳ್ಳಬೇಕು.

ನೋಡಿ, ಬದಲಾಗಲು ಎಂತಹ ಹಾದಿಗಳಿವೆ, ಹಾಗೂ ಯಾರು ಶರೀರ ಮತ್ತು ಆರೋಗ್ಯದ ಬಗ್ಗೆ ಎಚ್ಚರದಿಂದಿರುತ್ತಾರೋ, ಅವರು ’ಹೊಟ್ಟೆ ಸ್ವಲ್ಪ ಖಾಲಿ ಉಳಿಸಿ, ತಟ್ಟೆಯಲ್ಲೂ ಸ್ವಲ್ಪ ಖಾಲಿ ಉಳಿಸಿ’ ಎನ್ನುತ್ತಾರೆ.ಆರೋಗ್ಯದ ವಿಷಯಕ್ಕೆ ಬಂದರೆ, ಏಪ್ರಿಲ್ 7ನೇ ತಾರೀಖು, ವಿಶ್ವ ಆರೋಗ್ಯ ದಿನ -. ವಿಶ್ವ ಸಂಸ್ಥೆ 2030ರೊಳಗೆ ಎಲ್ಲರಿಗೂ ಆರೋಗ್ಯ ಸೌಲಭ್ಯ ನೀಡುವ ಗುರಿ ಹೊಂದಿದೆ. ಈ ಬಾರಿ, ಏಪ್ರಿಲ್ 7ನೇ ತಾರೀಖು, ವಿಶ್ವ ಆರೋಗ್ಯ ದಿನದಂದು ವಿಶ್ವ ಸಂಸ್ಥೆ, ಖಿನ್ನತೆಯ ವಿಷಯದ ಬಗ್ಗೆ ತನ್ನ ಗಮನ ಕೇಂದ್ರೀಕರಿಸಿದೆ. ಖಿನ್ನತೆ, ಇದು ಈ ಬಾರಿಯ ವಿಷಯವಾಗಿದೆ. ನಮಗೆ ಖಿನ್ನತೆ ಎಂಬ ಶಬ್ಗದ ಪರಿಚಯ ಇದೆ.ಒಂದು ಅಂದಾಜಿನ ಪ್ರಕಾರ, ವಿಶ್ವದಲ್ಲಿ 35 ಕೋಟಿಗಿಂತ ಹೆಚ್ಚಿನ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ನಮ್ಮ ನೆರೆ-ಹೊರೆಯವರಲ್ಲೂ ಈ ಸಮಸ್ಯೆ ಇದ್ದರೂ, ನಾವು ಅದನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಮತ್ತು ಮುಕ್ತವಾಗಿ ಈ ವಿಷಯದ ಕುರಿತು ಚರ್ಚಿಸಲು ಸಹ ಸಂಕೋಚಪಡುತ್ತೇವೆ. ಸ್ವತಃ ಖಿನ್ನತೆ ಅನುಭವಿಸುವವರೂ ಸಹ ಏನೂ ಹೇಳುವುದಿಲ್ಲ,ಯಾಕೆಂದರೆ ಅವರಿಗೆ ಮುಜುಗರ ಎನ್ನಿಸುತ್ತದೆ. ಖಿನ್ನತೆ ಎಂಬುದು ಪರಿಹಾರ ಸಿಗದಿರುವಂಥದ್ದೇನಲ್ಲ.

ನಾನು ದೇಶದ ಜನತೆಗೆ ತಿಳಿಸಲು ಇಚ್ಛಿಸುತ್ತೇನೆ. ಒಂದು ಮಾನಸಿಕವಾಗಿ ಹಿತಕರವಾದ ಪರಿಸರ ನಿರ್ಮಿಸುವುದರಿಂದ ಅದರ ಪರಿಹಾರ ಆರಂಭವಾಗುತ್ತದೆ. ಮೊದಲನೇ ಮಂತ್ರ – ಖಿನ್ನತೆಯನ್ನು ಹತ್ತಿಕ್ಕುವ ಬದಲು ವ್ಯಕ್ತಪಡಿಸುವ ಅವಶ್ಯಕತೆಯಿದೆ. ನಿಮ್ಮ ಸಹಪಾಠಿಗಳ ಜೊತೆ, ಸ್ನೇಹಿತರ ಜೊತೆ, ತಂದೆ-ತಾಯಿ ಜೊತೆ, ಅಣ್ಣ-ತಮ್ಮಂದಿರ ಜೊತೆ, ಶಿಕ್ಷಕರ ಜೊತೆ, ನೀವು ಅನುಭವಿಸುತ್ತಿರುವುದನ್ನು ಮುಕ್ತವಾಗಿ ಹೇಳಿಕೊಳ್ಳಿ. ಕೆಲವೊಮ್ಮೆ, ಅದರಲ್ಲೂ ವಿಶೇಷವಾಗಿ ಹಾಸ್ಟೆಲ್ ನಲ್ಲಿ ಓದುವ ವಿದ್ಯಾರ್ಥಿಗಳನ್ನು ಒಂಟಿತನ ಕಾಡುತ್ತೆ. ನಾವು ಅವಿಭಕ್ತ ಕುಟುಂಬಗಳಲ್ಲಿ, ದೊಡ್ಡ ಕುಟುಂಬಗಳಲ್ಲಿ ಹುಟ್ಟಿ ಬೆಳೆದಿರುವುದು ನಮ್ಮ ದೇಶದ ಸೌಭಾಗ್ಯ. ಅಲ್ಲಿ ಪರಸ್ಪರ ಸಂವಹನವಿರುತ್ತದೆ ಹಾಗಾಗಿ ಖಿನ್ನತೆ ಬರುವ ಅವಕಾಶಗಳೇ ಇರುವುದಿಲ್ಲ. ಆದರೆ, ನಾನು ತಂದೆ-ತಾಯಂದಿರಿಗೆ ಒಂದು ವಿಷಯ ಹೇಳಲು ಇಷ್ಟ ಪಡುತ್ತೇನೆ, ನೀವು ಎಂದಾದರೂ ನಿಮ್ಮ ಮಗನಾಗಲಿ ಅಥವಾ ಮಗಳಾಗಲಿ ಅಥವಾ ಕುಟುಂಬದ ಯಾವುದೇ ಸದಸ್ಯರಾಗಲೀ. ಹೀಗೆ ವರ್ತಿಸುವುದನ್ನು ನೀವು ಗಮನಿಸಿದ್ದೀರಾ…ಊಟ ಮಾಡುವಾಗ, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುತ್ತೀರಿ,ಯಾರಾದರೂ ಈಗ ಬೇಡ, ಆ ಮೇಲೆ ಮಾಡುತ್ತೇನೆ ಎಂದರೆ, ಅವರು ಊಟದ ಮೇಜಿಗೆ ಬಾರದಿದ್ದರೆ,. ಮನೆಯಲ್ಲಿ ಎಲ್ಲರೂ ಎಂದಾದರೂ ಹೊರಗೆ ಹೊರಟಾಗ – ಇಲ್ಲ ಇಲ್ಲ, ನಾನು ಇವತ್ತು ಬರೋದಿಲ್ಲ. ಎಂದರೆ – ಅವರು ಒಂಟಿಯಾಗಿ ಇರುವುದಕ್ಕೆ ಇಷ್ಟಪಡುತ್ತಾರೆ ಎಂದರ್ಥ. ಹೀಗೇಕೆ ಮಾಡುತ್ತಾರೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ?ಅದು ಖಿನ್ನತೆಯ ದಿಕ್ಕಿನೆಡೆಗೆ ಇಡುತ್ತಿರುವ ಮೊದಲ ಹೆಜ್ಜೆಯೆಂದೇ ತಿಳಿಯಿರಿ. ಅವರೇನಾದರೂ ನಿಮ್ಮಗಳ ಜೊತೆಯಲ್ಲಿರಲು ಇಷ ಪಡುವುದಿಲ್ಲ, ಯಾವುದಾದರೂ ಮೂಲೆಗೆ ಹೋಗಿ ಕೂರುತ್ತಿದ್ದಾರೆ ಅಂದಾಗ, ನೀವು ಅದು ಆಗದಂತೆ ತಡೆಯಲು ಪ್ರಯತ್ನಿಸಿ. ಅವರ ಜೊತೆ ಮುಕ್ತವಾಗಿ ಮಾತಾಡುವಂಥ ವ್ಯಕ್ತಿಗಳ ಜೊತೆ, ಅವರು ಇರುವುದಕ್ಕೆ ಅವಕಾಶ ಮಾಡಿಕೊಡಿ. ನಗು-ನಲಿವಿನ ಮಾತುಗಳನ್ನ ಆಡುತ್ತಾ-ಆಡುತ್ತಾ ಅವರು ತಮ್ಮ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಪ್ರೇರೇಪಿಸಿ. ಅವರ ಒಳಗೆ ಯಾವ ನಿರಾಶೆ ಅಡಗಿದೆ ಎಂದು ತಿಳಿದು ಅದನ್ನು ಹೊರ ತೆಗೆಯಿರಿ. ಇದೊಂದು ಉತ್ತಮ ಉಪಾಯ. ಅಲ್ಲದೇ, ಖಿನ್ನತೆ ಶಾರೀರಿಕ ಮತ್ತು ಮಾನಸಿಕ ರೋಗಗಳಿಗೆ ಕಾರಣವಾಗುತ್ತದೆ. ಸಕ್ಕರೆ ಖಾಯಿಲೆ ಹೇಗೆ ಎಲ್ಲ ರೋಗಗಳಿಗೂ ಅಧಿಪತಿ ಆಗುತ್ತೋ,ಹಾಗೇ ಖಿನ್ನತೆ ಸಹ ಎದುರಿಸುವ, ಹೋರಾಡುವ, ಸಾಹಸ ಮಾಡುವ, ನಿರ್ಣಯ ಕೈಗೊಳ್ಳುವ, ನಮ್ಮ ಎಲ್ಲ ಕ್ಷಮತೆಗಳನ್ನೂ ನಾಶಪಡಿಸುತ್ತದೆ. ನಿಮ್ಮ ಸ್ನೇಹಿತರು, ನಿಮ್ಮ ಕುಟುಂಬದವರು, ನಿಮ್ಮ ಪರಿಸರ – ಇವೆಲ್ಲವೂ ಸೇರಿ ನೀವು ಖಿನ್ನತೆಗೆ ಹೋಗುವುದನ್ನು ತಡೆಯಬಹುದು ಹಾಗೂ ಒಳಪಟ್ಟಿದ್ದರೆ ಹೊರ ಹಾಕಬಹುದು. ಮತ್ತೊಂದು ವಿಧಾನವೂ ಇದೆ. ನಿಮ್ಮವರ ಮಧ್ಯೆ ನೀವು ಮುಕ್ತವಾಗಿ ನಿಮ್ಮ ಭಾವನೆ ವ್ಯಕ್ತಪಡಿಸಲು ಆಗದಿದ್ದರೆ,ಒಂದು ಕೆಲಸ ಮಾಡಿ. ಅಕ್ಕ-ಪಕ್ಕ ಎಲ್ಲಾದರೂ ಸೇವಾ-ಭಾವನೆಯಿಂದ ಜನರಿಗೆ ಸಹಾಯ ಮಾಡಲು ಹೋಗಿ. ಶ್ರದ್ಧೆಯಿಂದ ಸಹಾಯ ಮಾಡಿ. ಅವರ ಸುಖ-ದುಃಖಗಳನ್ನು ಹಂಚಿಕೊಳ್ಳಿ, ನೋಡಿ, ನಮ್ಮ ಒಳಗಿನ ನೋವು ಹೇಗೆ ಮಾಯವಾಗಿಬಿಡುತ್ತದೆ. ಅವರ ದುಃಖಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಸೇವಾ ಭಾವನೆಯಿಂದ ಮಾಡಿದರೆ,ನಿಮ್ಮೊಳಗೆ ಒಂದು ಹೊಸ ಆತ್ಮವಿಶ್ವಾಸ ಹುಟ್ಟಿಕೊಳ್ಳುತ್ತದೆ. ಮತ್ತೊಬ್ಬರ ಜೊತೆ ಸೇರುವುದರಿಂದ, ಯಾರದಾದರೂ ಸೇವೆ ಮಾಡುವುದರಿಂದ ಅದೂ ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡಿದರೆ, ನೀವು ನಿಮ್ಮ ಮನಸ್ಸನ್ನು ಬಹಳ ಸುಲಭವಾಗಿ ಹಗುರ ಮಾಡಿಕೊಳ್ಳಬಹುದು.

ಹಾಗೇ, ಯೋಗ ಸಹ ನಿಮ್ಮ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ಒಂದು ಒಳ್ಳೆಯ ಮಾರ್ಗ. ಒಂಟಿತನದಿಂದ ಮುಕ್ತಿ, ಒತ್ತಡದಿಂದ ಮುಕ್ತಿ ಹಾಗೂ ಸಂತೋಷದೆಡೆಗೆ ಪ್ರಯಾಣಕ್ಕೆ – ಯೋಗ ಬಹಳ ಸಹಾಯ ಮಾಡುತ್ತದೆ. ಜೂನ್ 21, ಅಂತಾರಾಷ್ಟ್ರೀಯ ಯೋಗ ದಿನ. ಇದು ಮೂರನೇ ವರ್ಷವಾಗಿದೆ, ನೀವೂ ಈಗಿನಿಂದಲೇ ಸಿದ್ಧತೆ ಆರಂಭಿಸಿ ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ, ಸಾಮೂಹಿಕ ಯೋಗ ಉತ್ಸವವನ್ನು ಆಚರಿಸಬೇಕು. ನಿಮ್ಮ ಮನಸ್ಸಿನಲ್ಲಿ 3ನೇ ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಸಲಹೆಗಳಿದ್ದರೆ, ನೀವು ನನ್ನ ಮೊಬೈಲ್ ಅಪ್ಲಿಕೇಷನ್ ಮೂಲಕ ನಿಮ್ಮ ಸಲಹೆಗಳನ್ನು ನನಗೆ ತಪ್ಪದೇ ಕಳುಹಿಸಿ ಮಾರ್ಗದರ್ಶನ ನೀಡಿ. ಯೋಗಕ್ಕೆ ಸಂಬಂಧಪಟ್ಟ ಗೀತೆಗಳು, ಕಾವ್ಯಾತ್ಮಕ ರಚನೆಗಳು ನೀವು ಸೃಷ್ಟಿಸಲು ಸಾಧ್ಯ, ಮಾಡಲೂ ಬೇಕು. ಏಕೆಂದರೆ, ಅವು ಸಹಜವಾಗಿ ಜನರಿಗೆ ಅರ್ಥವಾಗುತ್ತವೆ.

ಮಾತೆಯರೂ ಮತ್ತು ಸೋದರಿಯರಿಗೂ ಇಂದು, ಒಂದು ಮಾತನ್ನು ಹೇಳಬಯಸುತ್ತೇನೆ,ಏಕೆಂದರೆ ಇಂದು ಆರೋಗ್ಯದ ಬಗ್ಗೆಯೇ ಹೆಚ್ಚು ಮಾತಾಡುತ್ತಿದ್ದೇವೆ. ಕೆಲ ದಿನಗಳ ಹಿಂದೆ ಭಾರತ ಸರ್ಕಾರ ಒಂದು ಮಹತ್ವಪೂರ್ಣ ನಿರ್ಣಯ ಕೈಗೊಂಡಿದೆ. ನಮ್ಮ ದೇಶದ ದುಡಿಯುವ ವರ್ಗದ ಮಹಿಳೆಯರು ಇದ್ದಾರೆ, ದಿನೇ ದಿನೇ ಅವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅವರ ಪಾಲ್ಗೊಳ್ಳುವಿಕೆಯೂ ಹೆಚ್ಚುತ್ತಿದೆ. ಇದು ಸ್ವಾಗತಾರ್ಹವೂ ಹೌದು. ಅದರ ಜೊತೆ ಜೊತೆಗೆ ಮಹಿಳೆಯ ಹೆಗಲ ಮೇಲೆ ವಿಶೇಷವಾದ ಜವಾಬ್ದಾರಿಯೂ ಇದೆ. ಕುಟುಂಬದ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗುತ್ತದೆ. ಮನೆಯ ಆರ್ಥಿಕ ಜವಾಬ್ದಾರಿಯನ್ನೂ ನಿಭಾಯಿಸಬೇಕಾಗುತ್ತದೆ ಮತ್ತು ಇದರಿಂದಾಗಿ ಕೆಲವೊಮ್ಮೆ ನವಜಾತ ಶಿಶುವಿಗೆ ಅನ್ಯಾಯವಾಗುತ್ತದೆ. ಭಾರತ ಸರ್ಕಾರ ಒಂದು ದೊಡ್ಡ ನಿರ್ಣಯ ಕೈಗೊಂಡಿದೆ. ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ಗರ್ಭಧಾರಣೆ, ಹೆರಿಗೆ ಸಮಯದಲ್ಲಿ ಕೊಡುತ್ತಿದ್ದ ಹೆರಿಗೆ ರಜೆಯನ್ನು ಹಿಂದಿನ 12 ವಾರಗಳ ಬದಲಾಗಿ 26 ವಾರಗಳಿಗೆ ಹೆಚ್ಚಿಸಲಾಗಿದೆ. ವಿಶ್ವದಲ್ಲಿ, ಈ ವಿಷಯದಲ್ಲಿ ಕೇವಲ 2 ಅಥವಾ 3 ದೇಶಗಳು ಮಾತ್ರ ನಮಗಿಂತ ಮುಂದಿವೆ. ಭಾರತ ನಮ್ಮ ಈ ಸೋದರಿಯರಿಗಾಗಿ ಬಹುದೊಡ್ಡ ನಿರ್ಣಯವನ್ನು ಕೈಗೊಂಡಿದೆ. ಇದರ ಮೂಲ ಉದ್ದೇಶವೇನೆಂದರೆ, ನವಜಾತ ಶಿಶುವಿಗೆ ಉತ್ತಮ ಆರೈಕೆ ದೊರೆಯಲಿ, ಭಾರತದ ಭವಿಷ್ಯದ ಪ್ರಜೆಯಾದ ಮಗುವಿಗೆ ಜನ್ಮದಿಂದಲೇ, ಆರಂಭಿಕ ಹಂತದಿಂದಲೇ ಉತ್ತಮ ಆರೈಕೆ ದೊರೆಯಲಿ, ತಾಯಿಯ ಸಂಪೂರ್ಣ ಪ್ರೀತಿ ಸಿಗಲಿ, ಇದರಿಂದಲೇ ಆ ಮಗು ದೊಡ್ಡವನಾಗಿ ದೇಶದ ಸಂಪತ್ತಾಗಿ ಮಾರ್ಪಾಡಾಗಲಿ ಎಂಬುದಾಗಿದೆ. ತಾಯಂದಿರ ಆರೋಗ್ಯವೂ ಉತ್ತಮವಾಗಿರುತ್ತದೆ. ಅದಕ್ಕೆಂದೇ ಈ ಮಹತ್ವಪೂರ್ಣ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದಾಗಿ, ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವ ಸುಮಾರು 18 ಲಕ್ಷ ತಾಯಂದಿರಿಗೆ ಲಾಭವಾಗಲಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಏಪ್ರಿಲ್ 5, ರಾಮನವಮಿ. ಪವಿತ್ರ ದಿನವಾಗಿದೆ. ಏಪ್ರಿಲ್ 9ಕ್ಕೆ ಮಹಾವೀರ ಜಯಂತಿಯಿದೆ. ಏಪ್ರಿಲ್ 14 ಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಿದೆ. ಈ ಎಲ್ಲ ಮಹಾಪುರುಷರ ಜೀವನ, ನಮಗೆ ಪ್ರೇರಣೆಯನ್ನು ನೀಡುತ್ತದೆ. ನ್ಯೂ ಇಂಡಿಯಾಗೋಸ್ಕರ ಸಂಕಲ್ಪ ಕೈಗೊಳ್ಳುವ ಶಕ್ತಿ ನೀಡಲಿ. ಎರಡು ದಿನಗಳ ನಂತರ ಚೈತ್ರ ಶುಕ್ಲ ಪ್ರತಿಪದ. ಹೊಸ ಸಂವತ್ಸರ, ಈ ಹೊಸ ವರ್ಷಾಚರಣೆಗೆ ನಿಮಗೆಲ್ಲರಿಗೂ ಅನಂತ ಶುಭಾಶಯಗಳು. ವಸಂತ ಋತುವಿನ ನಂತರ ಫಸಲು ಮಾಗಿ ರೈತಾಪಿ ವರ್ಗಕ್ಕೆ ಅವರ ಶ್ರಮದ ಪ್ರತಿಫಲ ಸಿಗುವಂತಹ ಕಾಲವಿದು. ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ಹೊಸ ವರ್ಷಾಚರಣೆಯನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡವಾ, ಆಂಧ್ರ – ಕರ್ನಾಟಕದಲ್ಲಿ ಯುಗಾದಿ, ಸಿಂಧಿ ಜನ ಚೆಟಿ-ಚಾಂದ್,ಕಾಶ್ಮೀರದವರು ನವರೋಹ ಎಂದು, ಅವಧ್ ಪ್ರದೇಶದಲ್ಲಿ ಸಂವತ್ಸರ ಪೂಜೆ, ಬಿಹಾರದ ಮಿಥಿಲೆಯಲ್ಲಿ ಜುಡ್- ಶೀತಲ್ ಎಂದು ಮತ್ತು ಮಗಧದಲ್ಲಿ ಸತುವಾಣಿ ಎಂಬುದಾಗಿ ಹೊಸ ವರ್ಷವನ್ನು ಆಚರಿಸುತ್ತಾರೆ. ಭಾರತ ಲೆಕ್ಕವಿಲ್ಲದಷ್ಟು ವಿವಿಧತೆಯಿಂದ ಕೂಡಿದ ದೇಶವಾಗಿದೆ. ನನ್ನ ವತಿಯಿಂದ ನಿಮ್ಮೆಲ್ಲರಿಗೂ ಹೊಸ ವರ್ಷದ ಅನಂತ ಅನಂತ ಶುಭಾಷಯಗಳು. ಧನ್ಯವಾದ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.

The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.