#MannKiBaat: PM Modi expresses concern over floods in several parts of country, urges for faster relief operations
#MannKiBaat: Technology can help in accurate weather forecast and preparedness, says PM Modi
#MannKiBaat: #GST is Good and Simple Tax, can be case study for economists worldwide, says PM Modi
#MannKiBaat: PM Modi appreciates Centre-State cooperation in smooth rollout of #GST
#GST demonstrates the collective strength of our country, says PM Modi during #MannKiBaat
August is the month of revolution for India, cannot forget those who fought for freedom: PM Modi during #MannKiBaat
Mahatma Gandhi’s clarion call for ‘do or die’ instilled confidence among people to fight for freedom: PM during #MannKiBaat
By 2022, let us resolve to free the country from evils like dirt, poverty, terrorism, casteism & communalism: PM during #MannKiBaat
Let us pledge that in 2022, when we mark 75 years of independence, we would take the country t greater heights: PM during #MannKiBaat
Festivals spread the spirit of love, affection & brotherhood in society: PM Modi during #MannKiBaat
Women of our country are shining; they are excelling in every field: PM Modi during #MannKiBaat

ನನ್ನ ಪ್ರಿಯ ದೇಶಬಾಂಧವರೇ, ನಮಸ್ಕಾರ. ಮನುಷ್ಯನ ಮನಸ್ಸೇ ಹೀಗೆ, ಮಳೆಗಾಲ ಮನಸ್ಸಿಗೆ ತುಂಬಾ ಮುದ ನೀಡುವಂಥದ್ದು. ಪ್ರಾಣಿ, ಪಕ್ಷಿ, ಗಿಡಮರ, ನಿಸರ್ಗ- ಎಲ್ಲರೂ ಮಳೆಗಾಲ ಬಂತೆಂದರೆ ಉತ್ತೇಜಿತರಾಗುತ್ತಾರೆ. ಆದರೆ ಕೆಲವೊಮ್ಮೆ ಮಳೆಯೂ ವಿಕೃತ ರೂಪ ತಾಳುತ್ತದೆ. ಆಗ ನೀರಿಗೆ ಎಂಥ ವಿನಾಶಕಾರಿ ಶಕ್ತಿ ಇದೆ ಎಂಬುದು ನಮಗೆ ಅರ್ಥವಾಗುತ್ತದೆ. ಪ್ರಕೃತಿ ನಮಗೆ ಜೀವನವನ್ನು ನೀಡುತ್ತದೆ. ನಮ್ಮನ್ನು ಪೋಷಿಸುತ್ತದೆ. ಆದರೆ ಕೆಲವೊಮ್ಮೆ ಪ್ರವಾಹ, ಭೂಕಂಪನದಂತಹ ಪ್ರಾಕೃತಿಕ ವಿಕೋಪಗಳು, ಅದರ ಭಯಂಕರ ಸ್ವರೂಪ ವಿನಾಶವನ್ನು ತಂದೊಡ್ಡುತ್ತವೆ. ಬದಲಾಗುತ್ತಿರುವ ಹವಾಮಾನ ಮತ್ತು ಪರಿಸರದಲ್ಲಿ ಕಂಡುಬರುತ್ತಿರುವ ಬದಲಾವಣೆ ಬಹಳ ಋಣಾತ್ಮಕ ಪರಿಣಾಮ ಬೀರುತ್ತಿದೆ. ಕಳೆದ ಕೆಲವು ದಿನಗಳಿಂದ ಭಾರತದ ಕೆಲವು ಭಾಗಗಳಲ್ಲಿ ವಿಶೇಷವಾಗಿ ಅಸ್ಸಾಂ, ಈಶಾನ್ಯ ಭಾಗ, ಗುಜರಾತ್, ರಾಜಸ್ತಾನ, ಪಶ್ಚಿಮ ಬಂಗಾಳದ ಕೆಲ ಭಾಗಗಳು, ಅತಿವೃಷ್ಟಿಯಿಂದಾಗಿ ಪ್ರಾಕೃತಿಕ ವಿಕೋಪವನ್ನು ಎದುರಿಸುತ್ತಿವೆ. ಪ್ರವಾಹಪೀಡಿತ ಪ್ರದೇಶದ ಸಂಪೂರ್ಣ ಅವಲೋಕನ ಕೈಗೊಳ್ಳಲಾಗುತ್ತಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಮಂತ್ರಿಮಂಡಲದ ನನ್ನ ಸ್ನೇಹಿತರೂ ತಲುಪುತ್ತಿದ್ದಾರೆ. ರಾಜ್ಯ ಸರ್ಕಾರಗಳೂ ಕೂಡ ತಮ್ಮದೇ ರೀತಿಯಲ್ಲಿ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಸಾಮಾಜಿಕ ಸಂಘ ಸಂಸ್ಥೆಗಳು, ಸಾಂಸ್ಕೃತಿಕ ಸಂಘಗಳು, ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ನಾಗರಿಕರು, ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡುವಂಥ ಕಠಿಣ ಪರಿಶ್ರಮದಲ್ಲಿ ತೊಡಗಿದ್ದಾರೆ. ಭಾರತ ಸರ್ಕಾರದ ಪರವಾಗಿ, ಸೇನೆಯಾಗಿರಲಿ, ವಾಯುಪಡೆಯಾಗಿರಲೀ, ಎನ್‌ಡಿಆರ್‌ಎಫ್‌ನವರಾಗಲೀ, ಅರೆಸೇನಾ ಪಡೆಗಳಾಗಲೀ, ಇಂಥ ಸಮಯದಲ್ಲಿ ಎಲ್ಲರೂ ಸಂತ್ರಸ್ತರ ಸೇವೆಗಾಗಿ ತನುಮನದಿಂದ ಕಾರ್ಯನಿರ್ವಹಿಸುತ್ತಾರೆ. ಪ್ರವಾಹದಿಂದಾಗಿ ಜನಜೀವನ ಬಹಳ ಅಸ್ತವ್ಯಸ್ತಗೊಳ್ಳುತ್ತದೆ. ಫಸಲು, ಜಾನುವಾರುಗಳು, ಮೂಲಸೌಕರ್ಯ, ರಸ್ತೆ, ವಿದ್ಯುತ್, ಸಂಪರ್ಕ ಜಾಲ ಎಲ್ಲದರ ಮೇಲೆ ಪ್ರಭಾವ ಉಂಟಾಗುತ್ತದೆ. ವಿಶೇಷವಾಗಿ ನಮ್ಮ ರೈತಬಾಂಧವರಿಗೆ, ಫಸಲಿಗೆ, ಹೊಲಗದ್ದೆಗಳಿಗೆ ಬಹಳ ನಷ್ಟ ಉಂಟಾಗುತ್ತದೆ. ಹಾಗಾಗಿ ರೈತರ ಪರಿಹಾರಧನ ತ್ವರಿತಗತಿಯಲ್ಲಿ ದೊರೆಯಲಿ ಎಂಬುದಕ್ಕಾಗಿ ಪ್ರಸ್ತುತ ವಿಮಾ ಕಂಪನಿಗಳಿಗೆ ಅದರಲ್ಲೂ ವಿಶೇಷವಾಗಿ ಬೆಳೆ ವಿಮಾ ಕಂಪನಿಗಳಿಗೆ ಸಕ್ರಿಯವಾಗಿ ಕೆಲಸ ಮಾಡುವಂತೆ ಯೋಜನೆ ರೂಪಿಸಿದ್ದೇವೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು 24X7 ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ 1078 ಸತತವಾಗಿ ಕಾರ್ಯನಿರ್ವಹಿಸುತ್ತಿದೆ. ಜನರು ತಮ್ಮ ಸಂಕಷ್ಟಗಳನ್ನು ಹಂಚಿಕೊಳ್ಳುತ್ತಾರೆ. ಮಳೆಗಾಲಕ್ಕೆ ಮೊದಲೇ ಸಾಕಷ್ಟು ಸ್ಥಳಗಳಲ್ಲಿ ತಾಲೀಮು ಮಾಡಿ ಸಂಪೂರ್ಣ ಸರ್ಕಾರದ ಕಾರ್ಯ ಯೋಜನೆಗಳನ್ನು ಸಿದ್ಧಗೊಳಿಸಲಾಗಿದೆ. ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ.

ಅಲ್ಲಲ್ಲಿ ವಿಪತ್ತುಸ್ನೇಹಿ ಕೇಂದ್ರ ನಿರ್ಮಾಣ ಮತ್ತು ವಿಪತ್ತುಸ್ನೇಹಿ ಮಾಡಬೇಕಾದ್ದು ಮತ್ತು ಮಾಡಬಾರದ್ದರ ಬಗ್ಗೆ ತರಬೇತಿ ನೀಡುವುದು, ಸ್ವಯಂಸೇವಕರನ್ನು ನಿಯೋಜಿಸುವುದು, ಜನರ ಸಮೂಹವನ್ನು ಸಂಘಟಿಸಿ ಇಂಥ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವುದು ಮಾಡಲಾಗುತ್ತಿದೆ. ಇಂದಿನ ದಿನಗಳಲ್ಲಿ ಹವಾಮಾನ ವರದಿ ಮುಂಚಿತವಾಗಿಯೇ ಲಭಿಸುತ್ತದೆ, ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ, ಅಂತರಿಕ್ಷ ವಿಜ್ಞಾನದ ಕೊಡುಗೆಯೂ ತುಂಬಾ ಇದೆ. ಇವೆಲ್ಲವುಗಳಿಂದಾಗಿ ಸರಿಯಾದ ಅಂದಾಜು ದೊರೆಯುತ್ತದೆ. ಕ್ರಮೇಣ ಹವಾಮಾನ ಮುನ್ಸೂಚನೆಯನ್ನು ಆಧರಿಸಿ ನಮ್ಮ ಕಾರ್ಯಕಲಾಪಗಳನ್ನು ರೂಪಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಹಾನಿಯಾಗುವುದನ್ನು ತಪ್ಪಿಸಬಹುದು.

ನಾನು ಮನದ ಮಾತಿಗೆ ಸಿದ್ಧತೆಯಲ್ಲಿ ತೊಡಗಿದಾಗಲೆಲ್ಲ, ದೇಶದ ಜನತೆ ನನಗಿಂತಲೂ ಹೆಚ್ಚಿನ ತಯಾರಿಯಲ್ಲಿ ತೊಡಗುವುದನ್ನು ನಾನು ಗಮನಿಸುತ್ತಿದ್ದೇನೆ. ಈ ಬಾರಿಯಂತೂ ಜಿಎಸ್‌ಟಿ ಕುರಿತು ಸಾಕಷ್ಟು ಪತ್ರಗಳು ಬಂದಿವೆ, ದೂರವಾಣಿ ಕರೆಗಳು ಬಂದಿವೆ ಮತ್ತು ಜನರು ಈಗಲೂ ಜಿಎಸ್‌ಟಿ ಕುರಿತು ಸಂತಸ ವ್ಯಕ್ತಪಡಿಸುತ್ತಾರೆ, ಕುತೂಹಲ ತೋರುತ್ತಾರೆ. ಒಂದು ಕರೆಯನ್ನು ನಿಮಗೂ ಕೇಳಿಸಬಯಸುತ್ತೇನೆ: –

ನಮಸ್ಕಾರ ಪ್ರಧಾನಮಂತ್ರಿಗಳೇ, ನಾನು ಗುಡ್‌ಗಾಂವ್‌ನಿಂದ ನೀತು ಗರ್ಗ್ ಮಾತಾಡುತ್ತಿದ್ದೇನೆ. ನಾನು ಲೆಕ್ಕಪರಿಶೋಧಕರ ದಿನದಂದು ನೀವು ಮಾಡಿದ ಭಾಷಣ ಕೇಳಿದ್ದೇನೆ ಮತ್ತು ಪ್ರಭಾವಿತಳಾಗಿದ್ದೇನೆ. ನಮ್ಮ ದೇಶದಲ್ಲಿ ಕಳೆದ ತಿಂಗಳು ಇದೇ ದಿನಾಂಕದಂದು ಸರಕುಗಳು ಮತ್ತು ಸೇವಾ ತೆರಿಗೆ – ಜಿಎಸ್‌ಟಿ ಜಾರಿಗೆ ಬಂತು. ಸರ್ಕಾರ ನಿರೀಕ್ಷಿಸಿದಂತೆ ಒಂದು ತಿಂಗಳ ನಂತರ ಅದರ ಪರಿಣಾಮವಾಗುತ್ತಿದೆಯೋ ಇಲ್ಲವೋ ಎಂದು ತಾವು ತಿಳಿಸಬಹುದೇ? ಈ ಕುರಿತು ನಿಮ್ಮ ವಿಚಾರವನ್ನು ತಿಳಿಯಬಯಸುತ್ತೇನೆ. ಧನ್ಯವಾದಗಳು.

ಜಿಎಸ್‌ಟಿ ಆರಂಭವಾಗಿ ಸುಮಾರು ಒಂದು ತಿಂಗಳಾಯ್ತು ಮತ್ತು ಅದರ ಪ್ರಯೋಜನ ಗೋಚರಿಸಲಾರಂಭಿಸಿದೆ. ಒಬ್ಬ ಬಡವ ನನಗೆ ಪತ್ರ ಬರೆದು ಜಿಎಸ್‌ಟಿಯಿಂದಾಗಿ ಹೇಗೆ ಅವನ ಅವಶ್ಯಕ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಹೇಳುತ್ತಾನೋ ಅದರಿಂದ ನನಗೆ ಬಹಳ ಸಂತೋಷವಾಗುತ್ತದೆ.

ಈಶಾನ್ಯ ಭಾಗದ ದೂರದ ಬೆಟ್ಟದ ತಪ್ಪಲಲ್ಲಿ ಅರಣ್ಯದಲ್ಲಿರುವವ ಪತ್ರ ಬರೆದು ಆರಂಭದಲ್ಲಿ ಇದೇನಿರಬಹುದು ಎಂದು ಭಯವಾಗುತ್ತಿತ್ತು ಆದರೆ ಈಗ ನಾನು ಕಲಿಯಲು, ತಿಳಿದುಕೊಳ್ಳಲು ಆರಂಭಿಸಿದ ಮೇಲೆ ನನಗನ್ನಿಸುತ್ತದೆ ಮೊದಲಿಗಿಂತ ಇದು ತುಂಬಾ ಸರಳವಾಗಿದೆ, ವ್ಯಾಪಾರ ಇನ್ನಷ್ಟು ಸರಳವಾಗಿದೆ, ಎಂದು ಹೇಳುತ್ತಾನೆ. ಎಲ್ಲಕ್ಕಿಂತ ಹೆಚ್ಚಾಗಿ ವ್ಯಾಪಾರಿಗಳ ಮೇಲೆ ಗ್ರಾಹಕರ ನಂಬಿಕೆ ಹೆಚ್ಚಿದೆ. ಸಾರಿಗೆ ಮತ್ತು ಸರಕು ಸಾಗಣೆ ಮೇಲೆ ಜಿಎಸ್‌ಟಿ ಪರಿಣಾಮ ಏನು ಎಂಬುದನ್ನು ನಾನು ಗಮನಿಸುತ್ತಿದ್ದೇನೆ. ಈಗ ಟ್ರಕ್‌ಗಳ ವೇಗ ಹೆಚ್ಚಿದೆ, ಹೆದ್ದಾರಿಗಳು ಅಡಚಣೆ ಮುಕ್ತ ಆಗಿವೆ. ಟ್ರಕ್‌ಗಳ ವೇಗ ಹೆಚ್ಚಿದ ಕಾರಣ ಮಾಲಿನ್ಯವೂ ತಗ್ಗಿದೆ. ವಸ್ತುಗಳು ತ್ವರಿತಗತಿಯಲ್ಲಿ ತಲುಪುತ್ತಿವೆ. ಈ ಅನುಕೂಲ ಇದ್ದೇ ಇದೆ, ಆದರೆ ಅದರ ಜೊತೆಗೆ ಆರ್ಥಿಕ ಸಬಲತೆಯೂ ಲಭಿಸುತ್ತದೆ. ಈ ಹಿಂದೆ ಬೇರೆಬೇರೆ ತೆರಿಗೆ ಪದ್ಧತಿ ಇದ್ದುದರಿಂದ ಸಾರಿಗೆ ಮತ್ತು ಸರಕು ಸಾಗಣೆ ವಲಯದ ಅತಿ ಹೆಚ್ಚು ಸಮಯ ಸಂಪನ್ಮೂಲ ಕಾಗದಪತ್ರ ನಿರ್ವಹಣೆ ಮಾಡುವುದರಲ್ಲೇ ವ್ಯಯವಾಗುತ್ತಿತ್ತು ಮತ್ತು ಪ್ರತಿ ರಾಜ್ಯದಲ್ಲೂ ಅದು ತನ್ನದೇ ಗೋದಾಮುಗಳನ್ನು ನಿರ್ಮಿಸಬೇಕಾಗುತ್ತಿತ್ತು.

ಜಿಎಸ್‌ಟಿ – ಯಾವುದನ್ನು ನಾನು ಉತ್ತಮ ಮತ್ತು ಸರಳ ತೆರಿಗೆ ಎಂದು ಕರೆಯುತ್ತೇನೆಯೋ ಅದು ನಿಜವಾಗಿಯೂ ನಮ್ಮ ಅರ್ಥವ್ಯವಸ್ಥೆಯಲ್ಲಿ ಒಂದು ಸಕಾರಾತ್ಮಕ ಪ್ರಭಾವವನ್ನು ಬಹಳ ಕಡಿಮೆ ಸಮಯದಲ್ಲೇ ಬೀರಿದೆ. ಯಾವ ವೇಗದಲ್ಲಿ ಸುಗಮ ವರ್ಗಾವಣೆ ಆಗಿದೆ, ಯಾವ ವೇಗದಲ್ಲಿ ಸ್ಥಳಾಂತರ ಆಗಿದೆ, ಯಾವ ವೇಗದಲ್ಲಿ ನೋಂದಣಿ ಆಗಿದೆ ಅಂದರೆ ಇದು ಸಂಪೂರ್ಣ ರಾಷ್ಟ್ರದಲ್ಲಿ ಒಂದು ಹೊಸ ವಿಶ್ವಾಸ ಮೂಡಿಸಿದೆ. ಮುಂದೊಂದು ದಿನ ಅರ್ಥವ್ಯವಸ್ಥೆಯ ಪ್ರಾಜ್ಞರು, ನಿರ್ವಹಣಾ ಪಂಡಿತರು, ತಂತ್ರಜ್ಞಾನದ ಜ್ಞಾನಿಗಳು ಭಾರತದ ಜಿಎಸ್‌ಟಿ ಪ್ರಯೋಗವನ್ನು ಸಂಶೋಧನೆ ಮಾಡಿ ವಿಶ್ವದೆದುರು ಒಂದು ಮಾದರಿಯ ರೂಪದಲ್ಲಿ ಖಂಡಿತ ದಾಖಲಿಸಲಿದ್ದಾರೆ. ವಿಶ್ವದ ಹಲವಾರು ವಿಶ್ವವಿದ್ಯಾಲಯಗಳಿಗೆ ಇದೊಂದು ಮಾದರಿ ಅಧ್ಯಯನ ಆಗುವುದು. ಏಕೆಂದರೆ ಇಷ್ಟು ದೊಡ್ಡ ಮಟ್ಟದಲ್ಲಿ ಇಂಥ ಭಾರೀ ಬದಲಾವಣೆ ಮತ್ತು ಇಷ್ಟೊಂದು ಕೋಟಿಗಟ್ಟಲೆ ಜನರ ಸಹಭಾಗಿತ್ವದೊಂದಿಗೆ ಇಂಥ ದೊಡ್ಡ ದೇಶದಲ್ಲಿ ಅದನ್ನು ಜಾರಿಗೆ ತರುವುದು ಮತ್ತು ಸಫಲತೆಯೊಂದಿಗೆ ಮುನ್ನಡೆಸುವುದು, ಇದು ಸ್ವಯಂ ತಾನೇ ಸಫಲತೆಯ ಒಂದು ಉತ್ತುಂಗ ಶಿಖರ. ವಿಶ್ವ ಖಂಡಿತ ಇದರ ಅಧ್ಯಯನ ಮಾಡುತ್ತದೆ. ಜಿಎಸ್‌ಟಿ ಜಾರಿಗೆ ತರಲಾಗಿದೆ. ಎಲ್ಲ ರಾಜ್ಯಗಳ ಪಾಲುದಾರಿಕೆಯೂ ಇದರಲ್ಲಿದೆ. ಎಲ್ಲ ರಾಜ್ಯಗಳ ಜವಾಬ್ದಾರಿಯೂ ಇದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಸಂಪೂರ್ಣ ಸಹಮತದೊಂದಿಗೆ ಎಲ್ಲ ನಿರ್ಣಯಗಳನ್ನೂ ಕೈಗೊಂಡಿವೆ. ಅದರ ಪರಿಣಾಮವಾಗಿಯೇ ಬಡವರ ಮೇಲೆ ಯಾವುದೇ ಬಗೆಯ ಒತ್ತಡವಾಗದಂತೆ ನೋಡಿಕೊಳ್ಳುವುದಕ್ಕೆ ಎಲ್ಲ ಸರ್ಕಾರಗಳೂ ಆದ್ಯತೆ ನೀಡಿವೆ. ಜಿಎಸ್‌ಟಿ ಆಪ್ ಮೂಲಕ ಜಿಎಸ್‌ಟಿಗೆ ಮೊದಲು ಯಾವ ವಸ್ತುವಿನ ಬೆಲೆ ಎಷ್ಟಿತ್ತು ಮತ್ತು ಹೊಸ ಪರಿಸ್ಥಿತಿಯಲ್ಲಿ ಅದರ ಬೆಲೆ ಎಷ್ಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಇದೆಲ್ಲ ನಿಮ್ಮ ಮೊಬೈಲ್ ಫೋನ್‌ನಲ್ಲೇ ಲಭ್ಯ. ಒಂದು ದೇಶ – ಒಂದು ತೆರಿಗೆ ಎಂಥ ದೊಡ್ಡ ಕನಸು ನನಸಾಗಿದೆ. ತಾಲೂಕಿನಿಂದ ಹಿಡಿದು ಕೇಂದ್ರ ಸರ್ಕಾರದವರೆಗಿನ ಸರ್ಕಾರಿ ಅಧಿಕಾರಿಗಳು ಎಷ್ಟೊಂದು ಪರಿಶ್ರಮವಹಿಸಿದ್ದಾರೆ, ಎಷ್ಟೊಂದು ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದ್ದಾರೆ ಎನ್ನುವುದನ್ನು ಗಮನಿಸಿದ್ದೇನೆ. ಒಂದು ರೀತಿಯಲ್ಲಿ ಸರ್ಕಾರ ಮತ್ತು ವ್ಯಾಪಾರಿಗಳು ಮತ್ತು ಗ್ರಾಹಕರ ಮಧ್ಯೆ ಸ್ನೇಹಮಯ ವಾತಾವರಣ ಏರ್ಪಟ್ಟಿತ್ತು. ಅದು ವಿಶ್ವಾಸ ವೃದ್ಧಿಸುವಲ್ಲಿ ಬಹಳ ದೊಡ್ಡ ಪಾತ್ರವಹಿಸಿದೆ. ಈ ಕೆಲಸದಲ್ಲಿ ತೊಡಗಿಸಿಕೊಂಡಂತಹ ಎಲ್ಲ ಖಾತೆಗಳನ್ನು, ಎಲ್ಲ ವಿಭಾಗಗಳನ್ನು, ಕೇಂದ್ರ ಮತ್ತು ರಾಜ್ಯದ ಸರ್ಕಾರಗಳ ಎಲ್ಲ ನೌಕರರನ್ನೂ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಜಿಎಸ್‌ಟಿ ಭಾರತದ ಸಾಮೂಹಿಕ ಶಕ್ತಿಯ ಸಫಲತೆಯ ಒಂದು ಉತ್ತಮ ಉದಾಹರಣೆಯಾಗಿದೆ. ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಮತ್ತು ಇದು ಕೇವಲ ತೆರಿಗೆ ಸುಧಾರಣೆ ಆಗಿರದೆ ಒಂದು ಹೊಸ ಪ್ರಾಮಾಣಿಕತೆಯ ಸಂಸ್ಕೃತಿಗೆ ಶಕ್ತಿಯನ್ನು ನೀಡುವಂತಹ ಅರ್ಥವ್ಯವಸ್ಥೆಯಾಗಿದೆ. ಒಂದು ರೀತಿಯಲ್ಲಿ ಸಾಮಾಜಿಕ ಸುಧಾರಣೆಯ ಅಭಿಯಾನವೂ ಆಗಿದೆ. ನಾನು ಇನ್ನೊಮ್ಮೆ ಇಂಥ ದೊಡ್ಡ ಪ್ರಯತ್ನವನ್ನು ಸಫಲತೆಯೊಂದಿಗೆ ಸಾಕಾರಗೊಳಿಸಿದ್ದಕ್ಕೆ ದೇಶದ ಕೋಟಿಕೋಟಿ ಜನರಿಗೆ ಕೋಟಿಕೋಟಿ ವಂದನೆಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ಆಗಸ್ಟ್ ತಿಂಗಳು ಕ್ರಾಂತಿಯ ತಿಂಗಳಾಗಿದೆ. ಇದನ್ನು ಸಹಜವಾಗಿಯೇ ನಾವೆಲ್ಲ ಬಾಲ್ಯದಿಂದಲೂ ಕೇಳುತ್ತಾ ಬಂದಿದ್ದೇವೆ. ಅದಕ್ಕೆ ಕಾರಣವೇನೆಂದರೆ 1920ರ ಆಗಸ್ಟ್ 1ರಂದು ಅಸಹಕಾರ ಆಂದೋಲನ ಆರಂಭವಾಗಿತ್ತು. 1942ರ ಆಗಸ್ಟ್ 9ರಂದು ಭಾರತ ಬಿಟ್ಟು ತೊಲಗಿ ಆಂದೋಲನ ಆರಂಭವಾಯಿತು. ಅದನ್ನು ಅಗಸ್ಟ್ ಕ್ರಾಂತಿಯ ಹೆಸರಿನಲ್ಲಿ ಗುರುತಿಸಲಾಗುತ್ತದೆ. ಆಗಸ್ಟ್ 15, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಈ ವರ್ಷ ಭಾರತ ಬಿಟ್ಟು ತೊಲಗಿ ಆಂದೋಲನದ 75ನೇ ವರ್ಷವನ್ನು ಆಚರಿಸಲಿದ್ದೇವೆ. ಆದರೆ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯನ್ನು ಡಾ. ಯುಸುಫ್ ಮೆಹರ್ ಅಲಿಯವರು ನೀಡಿದ್ದರು ಎಂಬ ವಿಷಯ ಕೆಲವೇ ಜನರಿಗೆ ಮಾತ್ರ ಗೊತ್ತು. ನಮ್ಮ ಹೊಸ ಪೀಳಿಗೆ ಆಗಸ್ಟ್ 9, 1942ರಂದು ಏನಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. 1857ರಿಂದ 1942ರವರೆಗೆ ಸ್ವಾತಂತ್ರ್ಯದ ಹುರುಪಿನೊಂದಿಗೆ ಹೇಗೆ ಜನರು ಒಗ್ಗೂಡುತ್ತಿದ್ದರು, ಸಂಕಷ್ಟಗಳನ್ನು ಎದುರಿಸುತ್ತಿದ್ದರು ಎಂಬ ಇತಿಹಾಸದ ಪುಟಗಳು ಭವ್ಯ ಭಾರತದ ನಿರ್ಮಾಣಕ್ಕೆ ನಮಗೆ ಪ್ರೇರಣೆಯಾಗಿವೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನೀಡಿದ ತ್ಯಾಗ, ಬಲಿದಾನಕ್ಕಿಂತ ದೊಡ್ಡ ಪ್ರೇರಣೆ ಬೇರೆ ಯಾವುದಿದೆ? ಭಾರತ ಬಿಟ್ಟು ತೊಲಗಿ ಆಂದೋಲನ ಸ್ವಾತಂತ್ರ್ಯದ ಆಂದೋಲನದ ಮಹತ್ವಪೂರ್ಣ ಸಂಘರ್ಷವಾಗಿತ್ತು. ಇದೇ ಆಂದೋಲನ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಹೊಂದಲು ಸಂಪೂರ್ಣ ದೇಶ ಸಂಕಲ್ಪ ಕೈಗೊಳ್ಳುವಂತೆ ಮಾಡಿತು. ಬ್ರಿಟಿಷ್ ಆಡಳಿತದ ವಿರುದ್ಧ ಭಾರತೀಯ ಜನಸಮೂಹ ಹಳ್ಳಿಯಾಗಲಿ, ಪಟ್ಟಣವಾಗಲಿ, ಅಕ್ಷರಸ್ಥರಾಗಿರಲಿ, ಅನಕ್ಷರಸ್ಥರಾಗಿರಲಿ, ಬಡವ ಬಲ್ಲಿದರಾಗಿರಲಿ ಎಲ್ಲರೂ ಹಿಂದೂಸ್ತಾನದ ಮೂಲೆ ಮೂಲೆಯಿಂದ ಹೆಗಲಿಗೆ ಹೆಗಲು ಸೇರಿಸಿ ಒಗ್ಗೂಡಿ ಭಾರತ ಬಿಟ್ಟು ತೊಲಗಿ ಆಂದೋಲನದ ಭಾಗವಾಗಿದ್ದರು.

ಜನರ ಆಕ್ರೋಶ ಮುಗಿಲು ಮುಟ್ಟಿತ್ತು. ಮಹಾತ್ಮ ಗಾಂಧೀಜಿಯವರ ಆಹ್ವಾನದ ಮೇರೆಗೆ ಲಕ್ಷಾಂತರ ಭಾರತೀಯರು ಮಾಡು ಇಲ್ಲವೆ ಮಡಿ ಮಂತ್ರದೊಂದಿಗೆ ತಮ್ಮ ಜೀವನವನ್ನು ಸಂಘರ್ಷಕ್ಕೆ ಒಡ್ಡುತ್ತಿದ್ದರು. ದೇಶದ ಲಕ್ಷಾಂತರ ಯುವಕರು ತಮ್ಮ ವಿದ್ಯಾಭ್ಯಾಸ ತೊರೆದಿದ್ದರು. ಪುಸ್ತಕಗಳನ್ನು ತೊರೆದಿದ್ದರು. ಸ್ವಾತಂತ್ರ್ಯದ ಕಹಳೆ ಮೊಳಗಿತ್ತು. ಅವರು ಹೊರಟು ನಿಂತಿದ್ದರು. ಆಗಸ್ಟ್ 9ರಂದು ಭಾರತ ಬಿಟ್ಟು ತೊಲಗಿ ಆಂದೋಲನಕ್ಕೆ ಮಹಾತ್ಮ ಗಾಂಧೀ ಆಹ್ವಾನವನ್ನೇನೋ ನೀಡಿದರು, ಆದರೆ ಬ್ರಿಟಿಷ್ ಸರ್ಕಾರ ದೊಡ್ಡ ನೇತಾರರನ್ನೊಳಗೊಂಡಂತೆ ಎಲ್ಲರನ್ನೂ ಜೈಲಿಗೆ ಅಟ್ಟಿತು. ಅದೇ ಕಾಲಘಟ್ಟದಲ್ಲಿ ಎರಡನೇ ಹಂತದ ನಾಯಕತ್ವದಲ್ಲಿ ಡಾ. ಲೋಹಿಯಾ, ಜಯಪ್ರಕಾಶ್ ನಾರಾಯಣ್‌ರಂತಹ ಮಹಾಪುರುಷರು ಮಹತ್ವಪೂರ್ಣ ಪಾತ್ರಹಿಸಿದ್ದರು. ಅಸಹಕಾರ ಆಂದೋಲನ ಮತ್ತು ಭಾರತ ಬಿಟ್ಟು ತೊಲಗಿ ಆಂದೋಲನ ಮಹಾತ್ಮ ಗಾಂಧೀಯವರ ಎರಡು ವಿಭಿನ್ನ ರೂಪಗಳನ್ನು ಸಾದರಪಡಿಸುತ್ತವೆ. ಅಸಹಕಾರ ಆಂದೋಲನದ ರೂಪವೇ ಬೇರೆಯಾಗಿತ್ತು ಮತ್ತು 1942ರಲ್ಲಿ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ಮಹಾತ್ಮಾ ಗಾಂಧೀಜಿಯಂಥ ಮಹಾಪುರುಷರು ಮಾಡು ಇಲ್ಲವೆ ಮಡಿ ಎಂಬ ಮಂತ್ರವನ್ನಿತ್ತರು. ಈ ಸಂಪೂರ್ಣ ಸಫಲತೆ ಹಿಂದೆ ಜನಸಮರ್ಥನೆಯಿತ್ತು, ಜನರ ಸಾಮರ್ಥ್ಯವಿತ್ತು, ಜನರ ಸಂಕಲ್ಪವಿತ್ತು, ಜನರ ಸಂಘರ್ಷವಿತ್ತು. ಸಂಪೂರ್ಣ ದೇಶವೇ ಒಗ್ಗಟ್ಟಿನಿಂದ ಹೋರಾಡುತ್ತಿತ್ತು. ನಾನು ಕೆಲವೊಮ್ಮೆ ಯೋಚಿಸುತ್ತೇನೆ. ಒಂದೊಮ್ಮೆ ಇತಿಹಾಸದ ಪುಟಗಳನ್ನು ಜೋಡಿಸಿ ನೋಡಿದರೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ಆಯಿತು. 1857ರಲ್ಲಿ ಆರಂಭವಾದ ಸ್ವಾತಂತ್ರ್ಯ ಸಂಗ್ರಾಮ 1942ರವರೆಗೆ ಪ್ರತಿ ಕ್ಷಣವೂ ದೇಶದ ಒಂದಲ್ಲ ಒಂದು ಮೂಲೆಯಲ್ಲಿ ಜಾಗೃತವಾಗಿತ್ತು. ಈ ಸುದೀರ್ಘ ಕಾಲಘಟ್ಟ ದೇಶದ ಜನರ ಮನದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹುಟ್ಟುಹಾಕಿತು. ಪ್ರತಿಯೊಬ್ಬರೂ ಏನಾದರೊಂದು ಮಾಡಲು ಬದ್ಧರಾಗಿ ನಿಂತರು. ಪೀಳಿಗೆ ಬದಲಾದರೂ ಸಂಕಲ್ಪ ಮಾತ್ರ ಅಚಲವಾಗಿತ್ತು. ಜನರು ಬರುತ್ತಲೇ ಇದ್ದರು, ಒಗ್ಗೂಡುತ್ತಲೇ ಇದ್ದರು, ಹೋಗುತ್ತಿದ್ದರು, ಮತ್ತೆ ಹೊಸಬರು ಬರುತ್ತಿದ್ದರು, ಒಗ್ಗೂಡುತ್ತಿದ್ದರು. ಬ್ರಿಟಿಷ್ ಸರ್ಕಾರವನ್ನು ಕಿತ್ತೊಗೆಯಲು ಪ್ರತಿ ಕ್ಷಣವೂ ಪ್ರಯತ್ನಗಳು ನಡೆದೇ ಇದ್ದವು. 1857ರಿಂದ 1942ರ ವರೆಗೆ ನಡೆದ ಪ್ರಯತ್ನ, ಆಂದೋಲನ ಎಂಥ ಸ್ಥಿತಿ ನಿರ್ಮಾಣ ಮಾಡಿತೆಂದರೆ 1942ರಲ್ಲಿ ಅದು ಪರಾಕಾಷ್ಟೆಯ ಹಂತ ತಲುಪಿತು ಮತ್ತು ಭಾರತ ಬಿಟ್ಟು ತೊಲಗಿ ಎಂಬ ಕಹಳೆ ಎಷ್ಟು ತೀವ್ರತರವಾಗಿ ಮೊಳಗಿತೆಂದರೆ ಮುಂದಿನ 5 ವರ್ಷಗಳಲ್ಲಿ ಅಂದರೆ 1947ರಲ್ಲಿ ಬ್ರಿಟಿಷರು ಭಾರತ ಬಿಟ್ಟು ಹೋಗಬೇಕಾಯಿತು. 1857ರಿಂದ 1942ರ ವರೆಗೆ ಸ್ವಾತಂತ್ರ್ಯದ ಬಿಸಿ ಪ್ರತಿಯೊಬ್ಬರನ್ನೂ ತಟ್ಟಿತು. 1942ರಿಂದ 1947ರ ವರೆಗಿನ 5 ವರ್ಷಗಳಲ್ಲಿ ಜನರ ಮನಸ್ಸು ಹೇಗೆ ಸಿದ್ಧಗೊಂಡಿತ್ತು ಎಂದರೆ ಸಂಕಲ್ಪ ಸಿದ್ಧಿಯ 5 ನಿರ್ಣಾಯಕ ವರ್ಷಗಳಂತೆ ಸಫಲತೆಯೊಂದಿಗೆ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಕಾರಣವಾಯಿತು. ಈ 5 ವರ್ಷಗಳು ನಿರ್ಣಾಯಕ ವರ್ಷಗಳಾಗಿದ್ದವು.

ಈಗ ನಿಮ್ಮನ್ನು ಈ ಗಣಿತದೊಂದಿಗೆ ಒಗ್ಗೂಡಿಸಬಯಸುತ್ತೇನೆ. 1947ರಲ್ಲಿ ನಾವು ಸ್ವತಂತ್ರರಾದೆವು. ಇಂದು 2017. ಸುಮಾರು 70 ವರ್ಷಗಳಾಗಿವೆ. ಸರ್ಕಾರಗಳು ಬಂದವು, ಹೋದವು. ವ್ಯವಸ್ಥೆಗಳು ನಿರ್ಮಾಣಗೊಂಡವು, ಬದಲಾದವು, ಪೋಷಿತಗೊಂಡವು, ವೃದ್ಧಿಗೊಂಡವು. ದೇಶವನ್ನು ಸಮಸ್ಯೆಗಳಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಪ್ರಯತ್ನಿಸಿದರು. ದೇಶದಲ್ಲಿ ಉದ್ಯೋಗಾಭಿವೃದ್ಧಿಗೆ, ಬಡತನ ನಿರ್ಮೂಲನೆಗೆ, ವಿಕಾಸಕ್ಕಾಗಿ ಪ್ರಯತ್ನಗಳು ನಡೆದವು. ತಮ್ಮತಮ್ಮ ರೀತಿಯಲ್ಲಿ ಪ್ರಯತ್ನಗಳೂ ನಡೆದವು. ಸಫಲತೆಯೂ ದೊರೆಯಿತು. ಅಪೇಕ್ಷೆಯೂ ಹುಟ್ಟಿಕೊಂಡವು. 1942ರಿಂದ 1947ರ ವರೆಗೆ ಸಂಕಲ್ಪದಿಂದ ಸಿದ್ಧಿವರೆಗೆ ನಿರ್ಣಾಯಕವಾದ 5 ವರ್ಷಗಳಾಗಿದ್ದಂತೆ, 2017ರಿಂದ 2022ರ ವರೆಗೆ ಮತ್ತೊಮ್ಮೆ ಸಂಕಲ್ಪದಿಂದ ಸಿದ್ಧಿವರೆಗಿನ 5 ವರ್ಷಗಳ ಕಾಲಘಟ್ಟ ನಮ್ಮ ಮುಂದಿದೆ. ಈ 2017ರ ಆಗಸ್ಟ್ 15ನ್ನು ’ಸಂಕಲ್ಪ ಪರ್ವ’ವಾಗಿ ಆಚರಿಸೋಣ. 2022ಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಳ್ಳುತ್ತವೆ, ಆಗ ಈ ಸಂಕಲ್ಪವನ್ನು ಸಾಧಿಸಿಯೇ ತೀರುತ್ತೇವೆ.

ಆಗಸ್ಟ್ 9ರ ಕ್ರಾಂತಿ ದಿವಸವನ್ನು ನೆನೆದು ದೇಶದ 125 ಕೋಟಿ ಜನತೆ ಆಗಸ್ಟ್ 15ರಂದು ಸಂಕಲ್ಪ ಮಾಡಲಿ – ವ್ಯಕ್ತಿಗತವಾಗಿ, ನಾಗರಿಕನಾಗಿ ನಾನು ದೇಶಕ್ಕಾಗಿ ಇಷ್ಟು ಕೆಲಸ ಮಾಡಿಯೇ ತೀರುವೆ, ಕುಟುಂಬದ ರೂಪದಲ್ಲಿ ಇದನ್ನು ಮಾಡುವೆ, ಸಮಾಜದ ರೂಪದಲ್ಲಿ ಮಾಡುವೆ, ಗ್ರಾಮ ಮತ್ತು ನಗರದ ರೂಪದಲ್ಲಿ ಮಾಡುವೆ, ಸರ್ಕಾರದ ಭಾಗವಾಗಿ ಇದನ್ನು ಮಾಡುವೆ, ಸರ್ಕಾರದ ಪರವಾಗಿ ಇದನ್ನು ಮಾಡುವೆ ಎಂದು. ಹೀಗೆ ಕೋಟ್ಯಂತರ ಸಂಕಲ್ಪಗಳಾಗಲಿ. ಕೋಟ್ಯಂತರ ಸಂಕಲ್ಪಗಳನ್ನು ಪರಿಪೂರ್ಣಗೊಳಿಸುವ ಪ್ರಯತ್ನಗಳಾಗಲಿ. ಅಂದರೆ 1942ರಿಂದ 1947ರ ವರೆಗಿನ ಕಾಲಘಟ್ಟ ದೇಶದ ಸ್ವಾತಂತ್ರ್ಯಕ್ಕೆ ಹೇಗೆ ನಿರ್ಣಾಯಕ ಪಾತ್ರವಹಿಸಿತ್ತೋ, ಹಾಗೆಯೇ 2017ರಿಂದ 2022ರ ವರೆಗಿನ 5 ವರ್ಷಗಳು ಭಾರತದ ಭವಿಷ್ಯಕ್ಕೆ ನಿರ್ಣಾಯಕವಾಗಲಿವೆ ಮತ್ತು ಮಾಡಲೇಬೇಕಾಗಿದೆ. 5 ವರ್ಷಗಳ ನಂತರ ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಿಸೋಣ. ಅದಕ್ಕಾಗಿ ನಾವೆಲ್ಲಾ ಇಂದು ದೃಢಸಂಕಲ್ಪ ಕೈಗೊಳ್ಳಬೇಕಿದೆ. 2017ನ್ನು ನಮ್ಮ ಸಂಕಲ್ಪದ ವರ್ಷವನ್ನಾಗಿಸಬೇಕಿದೆ. ಇದೇ ಆಗಸ್ಟ್ ತಿಂಗಳಲ್ಲಿ ನಾವು ಸಂಕಲ್ಪಬದ್ಧರಾಗಬೇಕಿದೆ ಮತ್ತು ಮಾಲಿನ್ಯ ದೇಶದಿಂದ ತೊಲಗು, ಬಡತನ ದೇಶಬಿಟ್ಟು ತೊಲಗು, ಭ್ರಷ್ಟಾಚಾರ ದೇಶಬಿಟ್ಟು ತೊಲಗು, ಭಯೋತ್ಪಾದನೆ ದೇಶಬಿಟ್ಟು ತೊಲಗು, ಜಾತೀಯತೆ ದೇಶಬಿಟ್ಟು ತೊಲಗು ಎಂಬ ಸಂಕಲ್ಪ ಕೈಗೊಳ್ಳಬೇಕಿದೆ. ಇಂದು ‘ಮಾಡುತ್ತೇವೆ, ಇಲ್ಲವೆ ಮಡಿಯುತ್ತೇವೆ’ ಎಂಬುದರ ಅವಶ್ಯಕತೆಯಿಲ್ಲ. ಬದಲಾಗಿ ನವ ಭಾರತದ ಸಂಕಲ್ಪದೊಂದಿಗೆ ಒಗ್ಗೂಡುವ, ಶ್ರಮಿಸುವ, ತನುಮನದಿಂದ ಸಾಧಿಸುವ ಅವಶ್ಯಕತೆಯಿದೆ. ಸಂಕಲ್ಪದೊಂದಿಗೆ ಬದುಕಬೇಕಿದೆ, ಶ್ರಮಿಸಬೇಕಿದೆ. ಬನ್ನಿ, ಆಗಸ್ಟ್ 9ರಿಂದ ಸಂಕಲ್ಪದಿಂದ ಸಿದ್ಧಿಯೆಡೆಗೆ ಸಾಗುವ ಮಹಾ ಅಭಿಯಾನವನ್ನು ಆರಂಭಿಸೋಣ. ಪ್ರತಿಯೊಬ್ಬ ಭಾರತೀಯ, ಸಾಮಾಜಿಕ ಸಂಸ್ಥೆಗಳು, ಸ್ಥಳೀಯ ಘಟಕಗಳ ಅಂಗಸಂಸ್ಥೆಗಳು, ಶಾಲಾಕಾಲೇಜುಗಳು, ವಿವಿಧ ಸಂಘಟನೆಗಳು ಎಲ್ಲರೂ ನವ ಭಾರತಕ್ಕಾಗಿ ಒಂದಲ್ಲ ಒಂದು ಸಂಕಲ್ಪ ಕೈಗೊಳ್ಳಬೇಕು. ಎಂಥ ಸಂಕಲ್ಪಗೈಯಬೇಕೆಂದರೆ ಮುಂದಿನ 5 ವರ್ಷಗಳಲ್ಲಿ ಅದನ್ನು ನಾವು ಸಾಧಿಸಿ ತೋರಿಸಬೇಕು. ಯುವ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು ಮುಂತಾದವು ಸಾಮೂಹಿಕ ಚರ್ಚೆಗೆ ವೇದಿಕೆ ಸಿದ್ಧಗೊಳಿಸಬಹುದು. ಹೊಸಹೊಸ ಉಪಾಯಗಳನ್ನು ಹುಟ್ಟುಹಾಕಬಹುದು. ಒಂದು ರಾಷ್ಟ್ರದಂತೆ ನಾವು ಏನು ಸಾಧಿಸಬೇಕಿದೆ. ಒಬ್ಬ ವ್ಯಕ್ತಿಯಾಗಿ ಅದರಲ್ಲಿ ನನ್ನ ಕೊಡುಗೆ ಏನು? ಬನ್ನಿ, ಈ ಕುರಿತ ಸಂಕಲ್ಪಪರ್ವದೊಂದಿಗೆ ಕೈಜೋಡಿಸೋಣ.

ನಾನು ಇಂದು ವಿಶೇಷವಾಗಿ ಆನ್‌ಲೈನ್ ಜಗತ್ತಿನ ಬಗ್ಗೆ ಹೇಳಲು ಇಷ್ಟಪಡುತ್ತೇನೆ, ಏಕೆಂದರೆ, ನಾವೆಲ್ಲೇ ಇದ್ದರೂ ಅಥವಾ ಇಲ್ಲದಿದ್ದರೂ, ಆನ್‌ಲೈನ್ ಖಂಡಿತಾ ಇರುತ್ತೆ. ಈ ಆನ್‌ಲೈನ್ ಪ್ರಪಂಚದಲ್ಲಿ, ಅದರಲ್ಲೂ ವಿಶೇಷವಾಗಿ ನನ್ನ ಯುವ ಸ್ನೇಹಿತರಿಗೆ, ತಮ್ಮ ಅನುಶೋಧನಾತ್ಮಕ ವಿಧಾನಗಳಿಂದ ನವ ಭಾರತವನ್ನು ನಿರ್ಮಿಸಲು ಮುಂದೆ ಬರಲು ನಾನು ಆಹ್ವಾನಿಸುತ್ತೇನೆ. ತಂತ್ರಜ್ಞಾನವನ್ನು ಉಪಯೋಗಿಸಿ ವೀಡಿಯೋ ಪೋಸ್ಟ್, ಬ್ಲಾಗ್, ಲೇಖನ ಮತ್ತು ಹೊಸಹೊಸ ಕಲ್ಪನೆಗಳನ್ನು ಹೊತ್ತು ತರಲಿ. ಈ ಅಭಿಯಾನವನ್ನು ಒಂದು ಜನಾಂದೋಲನವನ್ನಾಗಿ ಪರಿವರ್ತಿಸೋಣ. ನರೇಂದ್ರ ಮೋದಿ ಆಪ್‌ನಲ್ಲೂ ನನ್ನ ಯುವ ಸ್ನೇಹಿತರಿಗಾಗಿ ಕ್ವಿಟ್ ಇಂಡಿಯಾ ರಸಪ್ರಶ್ನೆಗೆ ಚಾಲನೆ ನೀಡಲಾಗುವುದು. ಈ ಕ್ವಿಝ್ ಯುವಕರನ್ನು ನಮ್ಮ ದೇಶದ ಗೌರವಪೂರ್ಣ ಇತಿಹಾಸದೊಂದಿಗೆ ಬೆಸೆಯುವ ಮತ್ತು ಅವರಿಗೆ ಸ್ವಾತಂತ್ರ್ಯ ಸಂಗ್ರಾಮದ ನಾಯಕರನ್ನು ಪರಿಚಯಿಸುವ ಒಂದು ಪ್ರಯತ್ನವಾಗಿದೆ. ನೀವು ಖಂಡಿತಾ ಇದರ ವ್ಯಾಪಕ ಪ್ರಚಾರ ಮತ್ತು ಪ್ರಸಾರ ಮಾಡುತ್ತೀರಿ ಎಂದು ನಾನು ನಂಬಿದ್ದೇನೆ.

ನನ್ನ ಪ್ರಿಯ ದೇಶಬಾಂಧವರೇ, ಆಗಸ್ಟ್ 15ರಂದು, ನನಗೆ ದೇಶದ ಪ್ರಧಾನ ಸೇವಕನ ರೂಪದಲ್ಲಿ ಕೆಂಪು ಕೋಟೆಯಿಂದ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶ ದೊರೆಯುತ್ತದೆ. ನಾನೊಬ್ಬ ನಿಮಿತ್ತ ಮಾತ್ರ. ಅಲ್ಲ್ಲಿ ಒಬ್ಬ ವ್ಯಕ್ತಿಯಾಗಿ ಮಾತನಾಡುವುದಿಲ್ಲ. ಕೆಂಪು ಕೋಟೆಯಿಂದ 125 ಕೋಟಿ ಜನರ ಕೂಗು ಪ್ರತಿಧ್ವನಿಸುತ್ತದೆ. ಜನರ ಕನಸುಗಳನ್ನ ಶಬ್ದದ ರೂಪದಲ್ಲಿ ಹೊರಹಾಕುವ ಒಂದು ಪ್ರಯತ್ನವಾಗುತ್ತದೆ ಮತ್ತು ಕಳೆದ 3 ವರ್ಷಗಳಿಂದ ಸತತವಾಗಿ ಆಗಸ್ಟ್ 15ರ ಪ್ರಯುಕ್ತ ನಾನು ಏನು ಮಾತನಾಡಬೇಕು, ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ದೇಶದ ಮೂಲೆಮೂಲೆಗಳಿಂದಲೂ ನನಗೆ ಸಲಹೆಗಳು ಲಭಿಸುತ್ತಿವೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಮೈಗೌನಲ್ಲಿ ಅಥವಾ ನರೇಂದ್ರ ಮೋದಿ ಆಪ್‌ನಲ್ಲಿ ನೀವು ನಿಮ್ಮ ಸಲಹೆಗಳನ್ನು ನನಗೆ ಖಂಡಿತಾ ಕಳುಹಿಸಲು ಈ ಬಾರಿಯೂ ಆಹ್ವಾನಿಸುತ್ತೇನೆ. ನಾನು ಸ್ವತಃ ಅದನ್ನು ಓದುತ್ತೇನೆ ಮತ್ತು ಆಗಸ್ಟ್ 15ರಂದು ನನ್ನ ಬಳಿ ಇರುವಂಥ ಸಮಯದಲ್ಲಿ, ನಾನು ಅದನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತೇನೆ. ನನ್ನ ಕಳೆದ 3 ವರ್ಷಗಳ ಆಗಸ್ಟ್ 15ರ ಭಾಷಣಗಳು ಸ್ವಲ್ಪ ದೀರ್ಘವಾಗಿರುವುದರ ಆಕ್ಷೇಪಣೆ ಕೇಳಿಬಂದಿದೆ. ನಾನು ಈ ಬಾರಿ ಅದನ್ನು ಚಿಕ್ಕದಾಗಿಸಬೇಕೆಂದು ಮನಸ್ಸಿನಲ್ಲಿ ಅಂದುಕೊಂಡಿದ್ದೇನೆ. ಹೆಚ್ಚೆಂದರೆ 40-45-50 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕೆಂದು. ನಾನು ನನಗೇ ನಿಯಮಗಳನ್ನು ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅದನ್ನು ಮಾಡಲಾಗುತ್ತದೋ ಅಥವಾ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನ್ನ ಪ್ರಯತ್ನದಲ್ಲಿ ಯಶಸ್ಸು ಸಿಗುತ್ತದೆಯೋ ಇಲ್ಲವೋ ಎಂಬುದನ್ನು ನೋಡೋಣ.

ನಾನು ದೇಶಬಾಂಧವರೇ, ಇಂದು ಮತ್ತೊಂದು ಮಾತನ್ನೂ ಹೇಳಲು ಇಚ್ಛಿಸುತ್ತೇನೆ. ಭಾರತದ ಆರ್ಥಿಕತೆಯಲ್ಲಿ ಒಂದು ಸಾಮಾಜಿಕ ಅರ್ಥಶಾಸ್ತ್ರವೂ ಇದೆ. ನಾವು ಅದನ್ನು ಎಂದಿಗೂ ಗೌಣ ಎಂದು ಅಂದಾಜಿಸಬಾರದು. ನಮ್ಮ ಹಬ್ಬಗಳು, ನಮ್ಮ ಉತ್ಸವಗಳು, ಇವು ಕೇವಲ ಆನಂದ ಮತ್ತು ಮೋಜಿನ ಸಂದರ್ಭಗಳಾಗಿವೆ ಎಂದಲ್ಲ. ನಮ್ಮ ಹಬ್ಬಗಳು, ನಮ್ಮ ಉತ್ಸವಗಳು ಸಾಮಾಜಿಕ ಸುಧಾರಣೆಯ ಒಂದು ಅಭಿಯಾನವೂ ಆಗಿವೆ. ಆದರೆ ಅದರ ಜೊತೆಜೊತೆಗೆ ನಮ್ಮ ಪ್ರತಿಯೊಂದು ಉತ್ಸವ, ಬಡವರ ಆರ್ಥಿಕ ಜೀವನದ ಜೊತೆ ನೇರ ಸಂಬಂಧ ಹೊಂದಿದೆ. ಕೆಲವೇ ದಿನಗಳ ನಂತರ ರಕ್ಷಾಬಂಧನ, ಜನ್ಮಾಷ್ಟಮಿ, ಅದರ ನಂತರ ಗಣೇಶ ಹಬ್ಬ, ಆಮೇಲೆ ಚೌತಿಯ ಚಂದ್ರ, ನಂತರ ಅನಂತ ಚತುರ್ದಶಿ, ದುರ್ಗಾ ಪೂಜೆ, ದೀಪಾವಳಿ – ಒಂದರ ನಂತರ ಒಂದು, ಒಂದರ ನಂತರ ಒಂದು ಬರುತ್ತವೆ. ಹಾಗೂ ಈ ಸಮಯವೇ ಒಬ್ಬ ಬಡವನಿಗೆ ಆದಾಯವನ್ನು ಗಳಿಸಲು ಅವಕಾಶ ನೀಡುತ್ತದೆ. ಈ ಹಬ್ಬಗಳಲ್ಲಿ ಒಂದು ಸಹಜ ಮತ್ತು ಸ್ವಾಭಾವಿಕವಾದ ಆನಂದವೂ ಬೆರೆತುಹೋಗುತ್ತದೆ. ಹಬ್ಬಗಳು ಸಂಬಂಧಗಳಲ್ಲಿ ಮಾಧುರ್ಯವನ್ನು, ಕುಟುಂಬದಲ್ಲಿ ಸ್ನೇಹವನ್ನು, ಸಮಾಜದಲ್ಲಿ ಭ್ರಾತೃತ್ವವನ್ನು ತರುತ್ತವೆ. ಒಬ್ಬ ವ್ಯಕ್ತಿ ಮತ್ತು ಸಮಾಜವನ್ನು ಸೇರಿಸುತ್ತದೆ. ಒಬ್ಬ ವ್ಯಕ್ತಿಯಿಂದ ಸಮಾಜದವರೆಗೆ ಒಂದು ಸಹಜ ಯಾತ್ರೆಯಂತೆ ನಡೆಯುತ್ತದೆ. ’ನಾನು ಎಂಬುದರಿಂದ ನಾವು’ ಎನ್ನುವುದರೆಡೆಗೆ ಹೋಗಲು ಒಂದು ಅವಕಾಶ ಕಲ್ಪಿಸುತ್ತದೆ. ಆರ್ಥಿಕತೆಗೆ ಸಂಬಂಧಪಟ್ಟಂತೆ, ರಾಖಿ ಹಬ್ಬದ ಹಲವು ತಿಂಗಳುಗಳ ಮೊದಲೇ ನೂರಾರು ಚಿಕ್ಕ-ಚಿಕ್ಕ ಕುಟುಂಬಗಳಲ್ಲಿ ರಾಖಿಯನ್ನು ತಯಾರಿಸುವ ಗುಡಿಕೈಗಾರಿಕಾ ಪ್ರಕ್ರಿಯೆ ಆರಂಭವಾಗುತ್ತದೆ. ಖಾದಿಯಿಂದ ರೇಷ್ಮೆಯ ನೂಲಿನವರೆಗೆ, ಎಷ್ಟೊಂದು ಬಗೆಯ ರಾಖಿಗಳು ಮತ್ತು ಈ ನಡುವೆ ಜನರು ಮನೆಯಲ್ಲೇ ತಯಾರಿಸಿದ ರಾಖಿಗಳನ್ನು ಹೆಚ್ಚು ಇಷ್ಟಪಡುತ್ತಾರೆ. ರಾಖಿ ತಯಾರಿಸುವವರು, ರಾಖಿ ಮಾರುವವರು, ಮಿಠಾಯಿ ಅಂಗಡಿಯವರು – ನೂರಾರು, ಸಾವಿರಾರು ಜನರ ವ್ಯಾಪಾರ ಒಂದು ಉತ್ಸವದ ಜೊತೆ ಸೇರುತ್ತದೆ. ನಮ್ಮ ಬಡ ಸೋದರ-ಸೋದರಿಯರ ಸಂಸಾರ ಇದರಿಂದಲೇ ನಡೆಯುತ್ತದೆ ಅಲ್ಲವೇ? ನಾವು ದೀಪಾವಳಿಗೆ ದೀಪ ಬೆಳಗುತ್ತೇವೆ. ಅದು ಕೇವಲ ಒಂದು ಬೆಳಕಿನ ಹಬ್ಬ ಎಂದಲ್ಲ, ಅದು ಒಂದು ಉತ್ಸವ, ಮನೆಗೆ ಶೋಭೆ ನೀಡುತ್ತದೆ ಎಂದಲ್ಲ. ಅದರ ನೇರ ಸಂಬಂಧ ಮಣ್ಣಿನಿಂದ ಪುಟ್ಟಪುಟ್ಟ ಹಣತೆಗಳನ್ನು ತಯಾರಿಸುವ ಆ ಬಡ ಕುಟುಂಬಗಳೊಂದಿಗೆ ಹೊಂದಿದೆ. ಆದರೆ, ನಾನು ಇಂದು ಹಬ್ಬಗಳು ಮತ್ತು ಅದರೊಂದಿಗೆ ಸೇರಿರುವ ಬಡಜನರ ಆರ್ಥಿಕತೆಯ ಬಗ್ಗೆ ಮಾತಾಡುವಾಗ ಅದರ ಜೊತೆಗೆ ಪರಿಸರದ ಬಗ್ಗೆಯೂ ಮಾತನಾಡಲು ಇಷ್ಟಪಡುತ್ತೇನೆ.

ನನಗಿಂತ ದೇಶವಾಸಿಗಳು ಹೆಚ್ಚು ಜಾಗರೂಕರಾಗಿದ್ದಾರೆ ಮತ್ತು ಸಕ್ರಿಯವಾಗಿದ್ದಾರೆಂಬುದನ್ನು ನಾನು ನೋಡಿದ್ದೇನೆ. ಕಳೆದ ಒಂದು ತಿಂಗಳಿನಿಂದ ಜಾಗೃತ ನಾಗರಿಕರು ಪರಿಸರದ ಕುರಿತು ನನಗೆ ಪತ್ರಗಳನ್ನು ಬರೆದಿದ್ದಾರೆ. ನೀವು ಗಣೇಶ ಚತುರ್ಥಿಗೆ ಪರಿಸರಸ್ನೇಹಿ ಗಣೇಶ ಮೂರ್ತಿಗಳ ಕುರಿತು ಜನರಿಗೆ ಮೊದಲೇ ತಿಳಿಸಿ. ಅದರಿಂದ ಜನರು ಮಣ್ಣಿನ ಗಣೇಶನನ್ನು ಇಷ್ಟಪಡುವ ಕುರಿತು ಈಗಿಂದಲೇ ಯೋಜನೆ ರೂಪಿಸಲಿ ಎಂದು ಆಗ್ರಹಿಸಿದ್ದಾರೆ. ನಾನು ಮೊದಲು ಇಂತಹ ಜಾಗರೂಕ ನಾಗರಿಕರಿಗೆ ಕೃತಜ್ಞನಾಗಿದ್ದೇನೆ. ನಾನು ಸಮಯಕ್ಕಿಂತ ಮೊದಲೇ ಆ ವಿಷಯದ ಕುರಿತು ಮಾತನಾಡಬೇಕೆಂದು ಇವರು ಆಗ್ರಹಿಸಿದ್ದಾರೆ. ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ ಒಂದು ವಿಶೇಷವಾದ ಮಹತ್ವವನ್ನು ಪಡೆದಿದೆ. ಲೋಕಮಾನ್ಯ ತಿಲಕ್ ಅವರು ಈ ಮಹಾನ್ ಪರಂಪರೆಯನ್ನು ಪ್ರಾರಂಭಿಸಿದ್ದರು. ಈ ಬಾರಿಯ ಸಾರ್ವಜನಿಕ ಗಣೇಶೋತ್ಸವ 125ನೇ ವರ್ಷದ್ದಾಗಿದೆ. ದೇಶದ ಜನತೆ ಲೋಕಮಾನ್ಯ ತಿಲಕ್ ಅವರು ಯಾವ ಮೂಲ ಉದ್ದೇಶದಿಂದ ಸಾಮಾಜಿಕ ಏಕತೆ ಮತ್ತು ಸಾಮಾಜಿಕ ಜಾಗೃತಿಗಾಗಿ, ಸಾಮೂಹಿಕ ಸಂಸ್ಕೃತಿಗಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದ್ದರು ಎಂಬುದನ್ನು ಮನಗಾಣಬೇಕು. ನಾವು ಮತ್ತೊಮ್ಮೆ ಈ ವರ್ಷದ ಗಣೇಶ ಹಬ್ಬಕ್ಕೆ ಪ್ರಬಂಧ ಸ್ಪರ್ಧೆಗಳನ್ನು ನಡೆಸೋಣ, ಚರ್ಚೆಯ ಸಭೆಗಳನ್ನು ಆಯೋಜಿಸೋಣ, ಲೋಕಮಾನ್ಯ ತಿಲಕ್ ಅವರ ಕೊಡುಗೆಯನ್ನು ನೆನೆಯೋಣ ಮತ್ತು ತಿಲಕ್ ಅವರ ಕಲ್ಪನೆಯ ದಿಕ್ಕಿನಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಹೇಗೆ ಮುಂದುವರಿಸಬೇಕು, ಅವರ ಯೋಚನೆಗಳಿಗೆ ಹೇಗೆ ಪುಷ್ಟಿ ನೀಡಬೇಕು ಎಂದು ಚಿಂತಿಸೋಣ. ಪರಿಸರದ ರಕ್ಷಣೆಗಾಗಿ ಪರಿಸರಸ್ನೇಹಿ ಗಣೇಶ, ಮಣ್ಣಿನಿಂದ ಮಾಡಿದಂತಹ ಗಣೇಶ ಮೂರ್ತಿಗಳನ್ನೇ ಬಳಸೋಣ ಎಂಬುದು ನಮ್ಮ ಸಂಕಲ್ಪವಾಗಿರಲಿ. ಈ ಬಾರಿ ನಾನು ಬಹಳ ಬೇಗ ತಿಳಿಸಿದ್ದೇನೆ. ಇದರಿಂದ ಮೂರ್ತಿಯನ್ನು ತಯಾರಿಸುವ ನಮ್ಮ ಬಡ ಕುಶಲಕರ್ಮಿಗಳು, ಬಡ ಕಲಾವಿದರಿಗೆ ಉದ್ಯೋಗ ದೊರೆಯುತ್ತದೆ, ಅವರ ಹೊಟ್ಟೆ ತುಂಬುತ್ತದೆ. ಇದರಲ್ಲಿ ನೀವೆಲ್ಲರೂ ನನ್ನ ಜೊತೆ ಸೇರುತ್ತೀರಿ ಎಂಬ ನಂಬಿಕೆ ನನಗಿದೆ. ಬನ್ನಿ, ನಾವು ನಮ್ಮ ಹಬ್ಬಗಳನ್ನು ಬಡವರ ಜೊತೆ ಹಂಚಿಕೊಳ್ಳೋಣ, ಬಡವರ ಆರ್ಥಿಕತೆಯ ಜೊತೆ ಹೊಂದಿಸೋಣ, ಹಬ್ಬದ ನಮ್ಮ ಸಂತೋಷ, ಬಡವನ ಮನೆಯ ಸಮೃದ್ಧಿಯ ಹಬ್ಬವಾಗಲಿ ಎಂಬುದು ನಮ್ಮೆಲ್ಲರ ಪ್ರಯತ್ನವಾಗಬೇಕು. ನಾನು ಎಲ್ಲ ದೇಶಬಾಂಧವರಿಗೆ ಮುಂಬರುವ ಎಲ್ಲ ಹಬ್ಬಗಳಿಗೆ, ಉತ್ಸವಗಳಿಗೆ ಶುಭಹಾರೈಸುತ್ತೇನೆ

ನನ್ನ ಪ್ರಿಯ ದೇಶವಾಸಿಗಳೇ, ಶೈಕ್ಷಣಿಕ ರಂಗದಲ್ಲಾಗಲೀ, ಆರ್ಥಿಕ, ಸಾಮಾಜಿಕ ಇಲ್ಲವೇ ಕ್ರೀಡಾ ರಂಗದಲ್ಲೇ ಆಗಲೀ ನಮ್ಮ ಹೆಣ್ಣುಮಕ್ಕಳು ನಿರಂತರವಾಗಿ ದೇಶದ ಕೀರ್ತಿಯನ್ನು ಬೆಳಗುತ್ತಿದ್ದಾರೆಂಬುದನ್ನು ನಾವು ನೋಡುತ್ತಿದ್ದೇವೆ. ಹೊಸಹೊಸ ಸಾಧನೆಗಳನ್ನು ಮಾಡುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳ ಮೇಲೆ ದೇಶಬಾಂಧವರಿಗೆಲ್ಲ ಹೆಮ್ಮೆ ಎನಿಸುತ್ತಿದೆ. ಇತ್ತೀಚೆಗೆ ನಮ್ಮ ಹೆಣ್ಣು ಮಕ್ಕಳು ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ನನಗೆ ಇದೇ ವಾರ ಆ ಎಲ್ಲ ಕ್ರೀಡಾಪಟುಗಳೊಂದಿಗೆ ಭೇಟಿಯಾಗುವ ಅವಕಾಶ ಲಭಿಸಿತು. ಅವರೊಂದಿಗೆ ಮಾತಾಡಿ ನನಗೆ ಬಹಳ ಆನಂದವಾಯಿತು. ಆದರೆ ವಿಶ್ವಕಪ್ ಗೆಲ್ಲಲಿಲ್ಲ ಎನ್ನುವ ವಿಷಾದ ಅವರಲ್ಲಿ ಬೇರೂರಿತ್ತು ಎಂಬುದು ನನ್ನ ಅನುಭವಕ್ಕೆ ಬಂತು. ಅವರ ಮುಖದ ಮೇಲೆ ಆ ಒತ್ತಡ ಇತ್ತು. ಆತಂಕವಿತ್ತು. ಆ ಹೆಣ್ಣುಮಕ್ಕಳಿಗೆ ನಾನು ಬೇರೆಯೇ ಲೆಕ್ಕಾಚಾರ ಹೇಳಿದೆ. ಅವರಿಗೆ ಹೀಗೆ ಹೇಳಿದೆ. ನೋಡಿ, ಇದು ಮಾಧ್ಯಮ ಯುಗ, ಇದು ಅಪೇಕ್ಷೆಗಳನ್ನು ಎಷ್ಟು ಹೆಚ್ಚಿಸಿದೆ ಎಂದರೆ ಸಫಲತೆ ಸಿಗದೇ ಹೋದಾಗ ಅದು ಆಕ್ರೋಶವಾಗಿಯೂ ಪರಿವರ್ತನೆಗೊಳ್ಳುತ್ತದೆ. ಭಾರತದ ಕ್ರೀಡಾಳುಗಳು ವಿಫಲವಾದಾಗ ದೇಶದ ಜನತೆಯ ಕೋಪ ಅವರ ಮೇಲೆ ವ್ಯಕ್ತವಾದಂತಹ ಎಷ್ಟೋ ಕ್ರೀಡೆಗಳನ್ನು ನಾವು ನೋಡಿದ್ದೇವೆ. ಕೆಲವರಂತೂ ಗೌರವದ ಎಲ್ಲೆಮೀರಿ ಮನಸ್ಸಿಗೆ ನೋವಾಗುವಂತಹ ಮಾತುಗಳನ್ನಾಡಿಬಿಟ್ಟಾಗ, ಬರೆದುಬಿಟ್ಟಾಗ ಬಹಳ ನೋವಾಗುತ್ತದೆ. ಆದರೆ ನಮ್ಮ ಹೆಣ್ಣುಮಕ್ಕಳು ವಿಶ್ವಕಪ್ ಗೆಲ್ಲುವಲ್ಲಿ ವಿಫಲರಾದಾಗ ಆ ಸೋಲನ್ನು 125 ಕೋಟಿ ದೇಶವಾಸಿಗಳು ತಮ್ಮ ಹೆಗಲ ಮೇಲೆ ಹೊತ್ತುಕೊಂಡದ್ದು ಮಾತ್ರ ಇದೇ ಮೊದಲ ಬಾರಿ. ಆ ಭಾರವನ್ನು ನಮ್ಮ ಹೆಣ್ಣುಮಕ್ಕಳ ಹೆಗಲಿಗೇರಿಸಲಿಲ್ಲ. ಅಷ್ಟೇ ಅಲ್ಲ, ನಮ್ಮ ಹೆಣ್ಣುಮಕ್ಕಳ ಪ್ರದರ್ಶನವನ್ನು ಕೊಂಡಾಡಿದರು, ಅವರನ್ನು ಗೌರವಿಸಿದರು. ನಾನು ಇದನ್ನೊಂದು ಧನಾತ್ಮಕ ಬದಲಾವಣೆ ರೂಪದಲ್ಲಿ ನೋಡುತ್ತೇನೆ. ಇಂಥ ಸೌಭಾಗ್ಯ ಕೇವಲ ನಿಮಗೆ ಮಾತ್ರ ದೊರೆತಿದೆ, ನೀವು ಸಫಲರಾಗಿಲ್ಲ ಎಂಬುದನ್ನು ಮನಸ್ಸಿನಿಂದ ತೆಗೆದು ಹಾಕಿ, ಪಂದ್ಯ ಗೆಲ್ಲಲಿ ಗೆಲ್ಲದೇ ಇರಲಿ ನೀವು 125 ಕೋಟಿ ಜನರ ಮನ ಗೆದ್ದಿದ್ದೀರಿ ಎಂದು ಅವರಿಗೆ ನಾನು ಹೇಳಿದೆ. ನಮ್ಮ ದೇಶ ಬೆಳಗುವಲ್ಲಿ ದೇಶದ ಯುವ ಪೀಳಿಗೆ, ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ನಾನು ಮತ್ತೊಮ್ಮೆ ಯುವ ಪೀಳಿಗೆಯನ್ನು, ವಿಶೇಷವಾಗಿ ಹೆಣ್ಣುಮಕ್ಕಳನ್ನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಶುಭ ಹಾರೈಸುತ್ತೇನೆ.

ನನ್ನ ಪ್ರಿಯ ದೇಶಬಾಂಧವರೇ, ಆಗಸ್ಟ್ ಕ್ರಾಂತಿಯನ್ನು ಮತ್ತೊಮ್ಮೆ ಸ್ಮರಿಸುತ್ತಿದ್ದೇನೆ, ಮತ್ತೊಮ್ಮೆ ಆಗಸ್ಟ್ 9ರ ಬಗ್ಗೆ ನೆನಪಿಸುತ್ತಿದ್ದೇನೆ, ಆಗಸ್ಟ್ 15ರ ಬಗ್ಗೆ ನೆನಪಿಸುತ್ತಿದ್ದೇನೆ, 2022 ಸ್ವಾತಂತ್ರ್ಯದ 75ನೇ ವರ್ಷಾಚರಣೆ ಎಂದು ಮತ್ತೆ ನೆನಪಿಸುತ್ತಿದ್ದೇನೆ. ಪ್ರತಿಯೊಬ್ಬ ದೇಶವಾಸಿಯೂ ಸಂಕಲ್ಪ ಕೈಗೊಳ್ಳಲಿ, 5 ವರ್ಷಗಳಲ್ಲಿ ಆ ಸಂಕಲ್ಪ ಸಾಧಿಸುವ ಮಾರ್ಗಸೂಚಿಯನ್ನು ಸಿದ್ಧಪಡಿಸಲಿ. ನಾವೆಲ್ಲರೂ ದೇಶವನ್ನು ಇನ್ನಷ್ಟು ಉತ್ತುಂಗಕ್ಕೇರಿಸಬೇಕಿದೆ. ಬನ್ನಿ, ನಾವೆಲ್ಲ ಒಂದಾಗಿ ಸಾಗೋಣ. ಏನಾದರೂ ಕೆಲಸ ಮಾಡುತ್ತಲೇ ಸಾಗೋಣ. ದೇಶದ ಭಾಗ್ಯ, ಭವಿಷ್ಯ ಉಜ್ವಲಗೊಳ್ಳುತ್ತದೆ ಎಂಬ ದೃಢ ವಿಶ್ವಾಸದೊಂದಿಗೆ ಮುನ್ನಡೆಯೋಣ. ಶುಭ ಹಾರೈಕೆಗಳು, ಅನಂತ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
PM to attend Christmas Celebrations hosted by the Catholic Bishops' Conference of India
December 22, 2024
PM to interact with prominent leaders from the Christian community including Cardinals and Bishops
First such instance that a Prime Minister will attend such a programme at the Headquarters of the Catholic Church in India

Prime Minister Shri Narendra Modi will attend the Christmas Celebrations hosted by the Catholic Bishops' Conference of India (CBCI) at the CBCI Centre premises, New Delhi at 6:30 PM on 23rd December.

Prime Minister will interact with key leaders from the Christian community, including Cardinals, Bishops and prominent lay leaders of the Church.

This is the first time a Prime Minister will attend such a programme at the Headquarters of the Catholic Church in India.

Catholic Bishops' Conference of India (CBCI) was established in 1944 and is the body which works closest with all the Catholics across India.