21ನೇ ಶತಮಾನದಲ್ಲಿ ಜನಿಸಿದವರು ದೇಶದ ಅಭಿವೃದ್ಧಿಗೆ ವೇಗ ನೀಡುವಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದಾರೆ: ಪ್ರಧಾನಮಂತ್ರಿ ಮೋದಿ
ಯುವಜನರು ಯಾವಾಗಲೂ ಚೈತನ್ಯ ಮತ್ತು ಉತ್ಸಾಹದಿಂದ ಇರುತ್ತಾರೆ ಮತ್ತು ಅವರು ದೊಡ್ಡ ಸವಾಲುಗಳನ್ನು ಎದುರಿಸಬಲ್ಲವರಾಗಿದ್ದಾರೆ ಎಂದು ಸ್ವಾಮಿ ವಿವೇಕಾನಂದರು ಸದಾ ಹೇಳುತ್ತಿದ್ದರು: ಪ್ರಧಾನಮಂತ್ರಿ
ವಿವೇಕಾನಂದ ರಾಕ್ ಸ್ಮಾರಕ ಪ್ರತಿಯೊಬ್ಬರಿಗೂ ಬಡವರ ಸೇವೆ ಮಾಡಲು ಸ್ಫೂರ್ತಿ ನೀಡುತ್ತದೆ: ಪ್ರಧಾನಮಂತ್ರಿ ಮೋದಿ
ನಾವು ಸ್ವಾತಂತ್ರ್ಯದ 75ನೇ ವರ್ಷ ಆಚರಿಸುವ 2022ರವರೆಗೆ ಸ್ಥಳೀಯವಾಗಿ ತಯಾರಿಸಲಾದ ಉತ್ಪನ್ನ ಖರೀದಿಸುವ ಸಂಕಲ್ಪ ಮಾಡೋಣ: ಪ್ರಧಾನಮಂತ್ರಿ ಮೋದಿ
ಹಿಮಾಯತ್ ಕಾರ್ಯಕ್ರಮದ ಅಡಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 18,000 ಯುವಜನರಿಗೆ 77 ವಿವಿಧ ಟ್ರೇಡ್ ಗಳಲ್ಲಿ ತರಬೇತಿ ನೀಡಲಾಗಿದೆ: ಮನ್ ಕಿ ಬಾತ್ ವೇಳೆ ಪ್ರಧಾನಮಂತ್ರಿ
ಖಗೋಳ ವಿಜ್ಞಾನ ರಂಗದಲ್ಲಿ ಭಾರತದ ಉಪಕ್ರಮಗಳು ಮಹೋನ್ನತವಾಗಿವೆ: ಪ್ರಧಾನಮಂತ್ರಿ ಮೋದಿ
ಕಳೆದ ಆರು ತಿಂಗಳುಗಳಲ್ಲಿ 17ನೇ ಲೋಕಸಭೆ ಅಪಾರ ಫಲಪ್ರದವಾಗಿದೆ: ಮನ್ ಕಿ ಬಾತ್ ವೇಳೆ ಪ್ರಧಾನಮಂತ್ರಿ

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. 2019 ರ ವಿದಾಯದ ಘಳಿಗೆ ಹತ್ತಿರವಾಗುತ್ತಿದೆ. 3 ದಿನಗಳೊಳಗೆ 2019 ವಿದಾಯ ಪಡೆಯಲಿದೆ ಮತ್ತು ನಾವು ಕೇವಲ 2020ರಲ್ಲಿ ಹೊಸ ವರ್ಷಕ್ಕೆ ಮಾತ್ರ ಪ್ರವೇಶಿಸುತ್ತಿಲ್ಲ, 21 ನೇ ಶತಮಾನದ 3 ನೇ ದಶಕಕ್ಕೆ ಕಾಲಿಡುತ್ತಿದ್ದೇವೆ. ನಾನು ದೇಶದ ಸಮಸ್ತ ಜನತೆಗೆ 2020ರ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇನೆ. ಈ ದಶಕದ ಬಗ್ಗೆ ಒಂದು ಮಾತಂತೂ ಖಚಿತ. ಇದರಲ್ಲಿ 21 ನೇ ಶತಮಾನದಲ್ಲಿ ಜನ್ಮತಳೆದವರು ದೇಶದ ಪ್ರಗತಿಯ ವೇಗ ವೃದ್ಧಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲಿದ್ದಾರೆ – ಈ ಶತಮಾನದ ಮಹತ್ವಪೂರ್ಣ ಸವಾಲುಗಳನ್ನು ಅರಿತುಕೊಳ್ಳುತ್ತಾ ಬೆಳೆಯುತ್ತಿದ್ದಾರೆ. ಅಂತಹ ಯುವಕರನ್ನು ಇಂದು ಬಹಳಷ್ಟು ಹೆಸರುಗಳಿಂದ ಗುರುತಿಸಲಾಗುತ್ತದೆ. ಅವರನ್ನು ಮಿಲೆನಿಯಲ್ಸ್ ಎಂದು ಕೆಲವರು ಗುರುತಿಸಿದರೆ ಇನ್ನು ಕೆಲವರು ಜನರೇಶನ್ ಜಿ ಅಥವಾ ಜೆನ್ ಜಿ ಎಂದೂ ಕರೆಯುತ್ತಾರೆ. ಇದು ಸಾಮಾಜಿಕ ಜಾಲತಾಣದ ಪೀಳಿಗೆಯಾಗಿದೆ ಎಂಬ ವಿಷಯ ವ್ಯಾಪಕವಾಗಿ ಜನರ ಮನದಲ್ಲಿ ಅಚ್ಚೊತ್ತಿದೆ. ನಮ್ಮ ಇಂದಿನ ಪೀಳಿಗೆ ಬಹಳ ಪ್ರತಿಭಾವಂತ ಎಂಬುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ. ಹೊಸತೇನಾದರೂ ಮಾಡುವ ವಿಭಿನ್ನವಾದುದನ್ನೇನಾದರೂ ಮಾಡುವುದು ಇವರ ಕನಸು. ತಮ್ಮದೇ ಆದ ಅಭಿಪ್ರಾಯಗಳಿರುತ್ತವೆ. ಎಲ್ಲಕ್ಕಿಂತ ಸಂತಸದ ವಿಷಯವೆಂದರೆ ಅದರಲ್ಲೂ ವಿಶೇಷವಾಗಿ ಭಾರತದ ಬಗ್ಗೆ ಹೇಳುವುದಾದರೆ ಇಂದಿನ ಯುವ ಜನತೆ ವ್ಯವಸ್ಥೆಯನ್ನು ಇಷ್ಟಪಡುತ್ತಾರೆ. ಅಲ್ಲದೆ ಅವರು ವ್ಯವಸ್ಥೆಯನ್ನು ಅನುಸರಿಸುವುದನ್ನೂ ಇಷ್ಟಪಡುತ್ತಾರೆ. ಕೆಲವೊಮ್ಮೆ ವ್ಯವಸ್ಥೆ ಸೂಕ್ತ ಪ್ರತಿಕ್ರಿಯೆ ನೀಡದಿದ್ದರೆ ಅವರು ದುಗುಡಕ್ಕೊಳಗಾಗುತ್ತಾರೆ. ಅಲ್ಲದೆ ಧೈರ್ಯದಿಂದ ವ್ಯವಸ್ಥೆಗೆ ಸವಾಲೊಡ್ಡುತ್ತಾರೆ. ಇದು ಒಳ್ಳೆಯದೆಂದು ನಾನು ಭಾವಿಸುತ್ತೇನೆ. ಒಂದಂತೂ ನಿಜ, ನಮ್ಮ ದೇಶದ ಯುವಕರು ಅರಾಜಕತೆಯನ್ನು ಸಹಿಸುವುದಿಲ್ಲ ಎಂದು ನಾವು ಹೇಳಬಹುದು. ಅವ್ಯವಸ್ಥೆ, ಅಸ್ಥಿರತೆ ಅವರಿಗೆ ಆಗದು. ಪರಿವಾರವಾದ, ಜಾತಿವಾದ, ನಮ್ಮವರು – ಪರಕೀಯರು, ಸ್ತ್ರೀ – ಪುರುಷ ಎಂಬ ಬೇಧ-ಭಾವವನ್ನು ಇಷ್ಟಪಡುವುದಿಲ್ಲ. ಕೆಲವೊಮ್ಮೆ ವಿಮಾನ ನಿಲ್ದಾಣದಲ್ಲಿ ಇಲ್ಲವೆ ಚಿತ್ರಮಂದಿರದಲ್ಲಿ ಸರದಿಯಲ್ಲಿ ನಿಂತಾಗ ಯಾರಾದರೂ ಮಧ್ಯದಲ್ಲಿ ತೂರಿಕೊಂಡರೆ ಎಲ್ಲರಿಗಿಂತ ಮೊದಲು ಧ್ವನಿ ಎತ್ತುವವರು ಕೂಡಾ ಯುವಕರೇ. ಅಲ್ಲದೆ ಇಂಥ ಘಟನೆ ಜರುಗಿದಲ್ಲಿ ಇತರ ಯುವಕರು ಕೂಡಲೇ ತಮ್ಮ ಮೊಬೈಲ್ ಫೋನ್ ನಿಂದ ಅದರ ವಿಡಿಯೋ ಚಿತ್ರಿಕರಿಸಿಬಿಡುತ್ತಾರೆ. ನೋಡ ನೋಡುತ್ತಿದ್ದಂತೆ ಆ ವಿಡಿಯೋ ವೈರಲ್ ಕೂಡಾ ಆಗಿಬಿಡುತ್ತದೆ ಎಂಬುದನ್ನು ನಾವು ಕಂಡಿದ್ದೇವೆ. ತಪ್ಪು ಮಾಡಿದವರಿಗೆ ಏನು ನಡೆದಿದೆ ಎಂಬುದು ಅರಿವಿಗೆ ಬರುತ್ತದೆ. ಹಾಗಾಗಿ ಒಂದು ಹೊಸ ಬಗೆಯ ವ್ಯವಸ್ಥೆ, ಹೊಸ ಯುಗ ಮತ್ತು ಹೊಸ ಬಗೆಯ ಆಲೋಚನೆಗಳನ್ನು ನಮ್ಮ ಯುವ ಪೀಳಿಗೆ ಮೈಗೂಡಿಸಿಕೊಂಡಿದೆ. ಇಂದು ಈ ಯುವ ಪೀಳಿಗೆ ಮೇಲೆ ಭಾರತಕ್ಕೆ ಬಹಳಷ್ಟು ನಿರೀಕ್ಷೆ ಇದೆ. ಇದೇ ಯುವ ಜನತೆ ದೇಶವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ. “My Faith is in the Younger Generation, the Modern Generation, out of them, will come my workers” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಯುವ ಪೀಳಿಗೆ ಮೇಲೆ, ಈ ಆಧುನಿಕ ಪೀಳಿಗೆ ಮೇಲೆ ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದರು. ಈ ಪೀಳಿಗೆಯಿಂದಲೇ ನನ್ನ ಕಾರ್ಯಕರ್ತರು ಹೊರ ಹೊಮ್ಮಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಯುವಕರ ಬಗ್ಗೆ ಮಾತನಾಡುತ್ತಾ “ಯೌವನದ ಬೆಲೆ ಕಟ್ಟಲಾಗದು ಮತ್ತು ಅದರ ವರ್ಣನೆಯನ್ನೂ ಮಾಡಲಾಗದು” ಎಂದು ಹೇಳಿದ್ದರು. ಇದು ಜೀವನದ ಅತ್ಯಂತ ಮೌಲ್ಯಯುತ ಕಾಲಘಟ್ಟವಾಗಿದೆ. ನಿಮ್ಮ ಭವಿಷ್ಯ ಮತ್ತು ನಿಮ್ಮ ಜೀವನ ನಿಮ್ಮ ಯೌವ್ವನವನ್ನು ಹೇಗೆ ಬಳಸಿಕೊಳ್ಳುವಿರಿ ಎಂಬುದರ ಮೇಲೆ ಆಧರಿಸಿದೆ. ವಿವೇಕಾನಂದರ ಪ್ರಕಾರ ಯಾರು ಶಕ್ತಿ ಮತ್ತು ಚೈತನ್ಯವುಳ್ಳವನೋ ಮತ್ತು ಯಾರು ಬದಲಾವಣೆ ತರುವ ಶಕ್ತಿ ಹೊಂದಿರುತ್ತಾನೋ ಅವನೇ ಯುವಕ, ಭಾರತದಲ್ಲಿ ಈ ದಶಕ ಕೇವಲ ಯುವಜನತೆಯ ವಿಕಾಸದ್ದಾಗಿರದೇ ಯುವಕರ ಸಾಮಥ್ರ್ಯದಿಂದ ದೇಶದ ವಿಕಾಸವನ್ನು ಸಾಬೀತುಪಡಿಸುವಂತಹ ದಶಕವೂ ಆಗಿರುತ್ತದೆ. ಭಾರತದ ಆಧುನೀಕರಣದಲ್ಲಿ ಈ ಪೀಳಿಗೆಯವರ ಪಾತ್ರ ಬಹಳ ಮಹತ್ವವಾದದ್ದು ಎಂಬ ನಂಬಿಕೆ ನನಗಿದೆ. ಮುಂಬರುವ ಜನವರಿ 12 ರಂದು ವಿವೇಕಾನಂದ ಜಯಂತಿಯಂದು ದೇಶ ಯುವದಿನಾಚರಣೆ ಆಚರಿಸುತ್ತಿರುವಾಗ ಪ್ರತಿಯೊಬ್ಬ ಯುವಕ ಈ ದಶಕದಲ್ಲಿ ತಮ್ಮ ಕೊಡುಗೆ ಏನು ಎಂಬ ಬಗ್ಗೆಯೂ ಆಲೋಚಿಸಿ ಮತ್ತು ಈ ದಶಕದಲ್ಲಿ ಪೂರ್ಣಗೊಳಿಸುವ ಸಂಕಲ್ಪವನ್ನೂ ಕೈಗೊಳ್ಳಬೇಕು.

ನನ್ನ ಪ್ರಿಯ ದೇಶಬಾಂಧವರೆ, ಕನ್ಯಾಕುಮಾರಿಯಲ್ಲಿರುವ ಶಿಲೆಯ ಮೇಲೆ ಸ್ವಾಮಿ ವಿವೇಕಾನಂದರು ಧ್ಯಾನದ ಪರಾಕಾಷ್ಟೆ ತಲುಪಿದ್ದರು ಎಂಬುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿದೆ. ಅಲ್ಲಿ ನಿರ್ಮಿಸಲಾದ ವಿವೇಕಾನಂದ ರಾಕ್ ಮೆಮೊರಿಯಲ್ ಗೆ 50 ವರ್ಷ ಪೂರ್ಣಗೊಳ್ಳಲಿವೆ. ಕಳೆದ 5 ದಶಕಗಳಿಂದ ಈ ಸ್ಥಳ ಭಾರತದ ಗೌರವವೆನಿಸಿದೆ. ಕನ್ಯಾಕುಮಾರಿ ದೇಶಕ್ಕೆ ಮಾತ್ರವಲ್ಲ ವಿಶ್ವಕ್ಕೆ ಒಂದು ಆಕರ್ಷಣೆಯ ಕೇಂದ್ರವಾಗಿದೆ. ರಾಷ್ಟ್ರ್ರಭಕ್ತಿಯಿಂದ ತುಂಬಿದ ಆಧ್ಯಾತ್ಮಿಕ ಚೇತನವನ್ನು ಅನುಭವಿಸಬಯಸುವ ಪ್ರತಿಯೊಬ್ಬರಿಗೂ ಇದೊಂದು ತೀರ್ಥ ಕ್ಷೇತ್ರವೆನಿಸಿದೆ. ಶೃದ್ಧೆಯ ಕೇಂದ್ರವಾಗಿದೆ. ಸ್ವಾಮೀಜಿಯವರ ಸ್ಮಾರಕ ಎಲ್ಲ ಪಂಥದ, ಎಲ್ಲ ವಯೋಮಾನದ, ಎಲ್ಲ ವರ್ಗದ ಜನರಲ್ಲಿ ರಾಷ್ಟ್ರ ಭಕ್ತಿಯ ಪ್ರೇರಣೆ ಮೂಡಿಸುತ್ತದೆ. ದರಿದ್ರ ನಾರಾಯಣ ಸೇವೆ ಎಂಬ ಮಂತ್ರದೊಂದಿಗೆ ಜೀವನದ ಮಾರ್ಗವನ್ನು ತೋರಿದೆ. ಅಲ್ಲಿ ಯಾರೇ ಹೋಗಲಿ ಅವರಲ್ಲಿ ಶಕ್ತಿಯ ಸಂಚಾರವಾಗುವುದು. ಸಕಾರಾತ್ಮಕತೆಯ ಭಾವ ಮೂಡವುದು, ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ಛಲ ಮೂಡುವುದು – ಇದು ಸಹಜವೇ. ನಮ್ಮ ಆದರಣೀಯ ರಾಷ್ಟ್ರಪತಿಗಳು ಕೂಡಾ ಕೆಲ ದಿನಗಳ ಹಿಂದೆ ಈ 50 ವರ್ಷದ ಸ್ಮಾರಕ Rock Memorial ನೋಡಿ ಬಂದಿದ್ದಾರೆ. ಅಲ್ಲದೆ ಗುಜರಾತ್‍ನ ರನ್ ಆಫ್ ಕಛ್‍ನಲ್ಲಿ ನಡೆಯುವ ಉತ್ತಮ ರಣೋತ್ಸವದ ಉದ್ಘಾಟನೆಗೆ ನಮ್ಮ ಉಪ ರಾಷ್ಟ್ರಪತಿಗಳು ಹೋಗಿದ್ದರು ಎಂಬುದು ಸಂತಸದ ಸಂಗತಿ. ನಮ್ಮ ರಾಷ್ಟ್ರಪತಿ, ಉಪ ರಾಷ್ಟ್ರಪತಿಗಳು ಕೂಡಾ ಇಂಥ ಮಹತ್ವಪೂರ್ಣ tourist destination ಗಳಿಗೆ ಭೇಟಿ ನೀಡುತ್ತಿದ್ದಾರೆ. ದೇಶದ ಜನತೆಗೆ ಖಂಡಿತ ಇದರಿಂದ ಪ್ರೇರಣೆ ಲಭಿಸುತ್ತಿದೆ. – ನೀವೂ ಖಂಡಿತಾ ಹೋಗಿ.

ನನ್ನ ಪ್ರಿಯ ದೇಶವಾಸಿಗಳೇ, ನಾವು ಬೇರೆ ಬೇರೆ ಕಾಲೇಜುಗಳಲ್ಲಿ ವಿಶ್ವ ವಿದ್ಯಾಲಯಗಳಲ್ಲಿ, ಶಾಲೆಗಳಲ್ಲಿ ಓದುತ್ತೇವೆ. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ/ alumni meet ಒಂದು ಆಹ್ಲಾದಕರ ಅನುಭವವಾಗಿರುತ್ತದೆ ಮತ್ತು ಹಳೆಯ ವಿದ್ಯಾರ್ಥಿಗಳ ಪುನರ್ಮಿಲನದಲ್ಲಿ ಎಲ್ಲ ಯುವಜನತೆ ಹಳೆಯ ನೆನಪುಗಳಲ್ಲಿ ತೇಲಿಹೋಗುತ್ತಾರೆ. 10, 20, 30 ವರ್ಷ ಹಿಂದಕ್ಕೆ ಹೊರಟುಹೋಗುತ್ತಾರೆ. ಕೆಲವೊಮ್ಮೆ ಇಂಥ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಗಳು ವಿಶೇಷ ಆಕರ್ಷಣೆಯ ಮೂಲಗಳಾಗುತ್ತವೆ. ಅದರತ್ತ ಗಮನಹರಿಯುತ್ತದೆ. ದೇಶದ ಗಮನವೂ ಅದರತ್ತ ಹರಿಯುವುದು ಅವಶ್ಯಕ. ಹಳೆಯ ಸ್ನೇಹಿತರನ್ನು ಭೇಟಿ ಆಗುವ, ನೆನಪುಗಳನ್ನು ಮೆಲುಕು ಹಾಕುವ, alumni meet ವಿಭಿನ್ನ ಆನಂದ ನೀಡುತ್ತದೆ. ಇದರ ಜೊತೆಗೆ shared purpose ಇದ್ದರೆ ಸಂಕಲ್ಪವೂ ಇದ್ದರೆ, ಭಾವನಾತ್ಮಕ ಕೊಂಡಿ ಬೆಸೆದುಕೊಂಡರೆ ಅದರಲ್ಲಿ ಅದೆಷ್ಟೋ ಹೊಸ ನಾವೀನ್ಯತೆಯ ರಂಗು ಹೊರಹೊಮ್ಮುತ್ತದೆ. ಹಳೆಯ ವಿದ್ಯಾರ್ಥಿ ಸಮೂಹಗಳು ತಮ್ಮ ಶಾಲೆಗೆ ಏನಾದರೂ ಕೊಡುಗೆ ನೀಡುವುದನ್ನು ನೀವು ನೋಡಿರಬಹುದು. ಒಬ್ಬರು computerization ವ್ಯವಸ್ಥೆ ಮಾಡುತ್ತಾರೆ. ಇನ್ನಾರೋ ಉತ್ತಮ ಗ್ರಂಥಾಲಯ ನಿರ್ಮಿಸುತ್ತಾರೆ. ಇನ್ನು ಕೆಲವರು ಶುದ್ಧ ನೀರಿನ ವ್ಯವಸ್ಥೆ ಮಾಡಿದರೆ ಮತ್ತಾರೋ ಹೊಸ ಕೊಠಡಿಗಳನ್ನು ನಿರ್ಮಿಸುತ್ತಾರೆ. ಕೆಲವರು ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಮುಂದಾಗುತ್ತಾರೆ. ಒಂದಲ್ಲಾ ಒಂದು ಕೊಡುಗೆ ನೀಡುತ್ತಾರೆ. ತಮ್ಮ ಜೀವನ ರೂಪಿಸಿದಂತಹ ಶಾಲೆಗೆ ಏನನ್ನಾದರೂ ಹಿಂದಿರುಗಿಸುವುದು ಅವರಿಗೆ ಆನಂದವನ್ನು ನೀಡುತ್ತದೆ. ಇಂಥ ಭಾವನೆ ಎಲ್ಲರ ಮನದಲ್ಲಿ ಇರುತ್ತದೆ ಮತ್ತು ಇರಲೂ ಬೇಕು ಮತ್ತು ಜನರು ಇದಕ್ಕಾಗಿ ಮುಂದೆಯೂ ಬರುತ್ತಾರೆ. ಆದರೆ ನಾನಿಂದು ಒಂದು ವಿಶೇಷ ಸಮಾರಂಭದ ಕುರಿತು ನಿಮಗೆ ಹೇಳಬಯಸುತ್ತೇನೆ. ಕೆಲ ದಿನಗಳ ಹಿಂದೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಭೈರವಗಂಜ್ ಹೆಲ್ತ್ ಸೆಂಟರ್ ಕಥೆಯನ್ನು ನಾನು ಮಾಧ್ಯಮದಲ್ಲಿ ಕೇಳಿದಾಗ ನನಗೆ ಬಹಳ ಆನಂದವಾಯಿತು. ನನಗೆ ಎಷ್ಟು ಆನಂದವಾಯಿತೆಂದರೆ ನಿಮ್ಮೊಂದಿಗೆ ಅದರ ಪ್ರಸ್ತಾಪ ಮಾಡದೇ ಇರಲಾಗಲಿಲ್ಲ. ಈ ಭೈರವಗಂಜ್ ಹೆಲ್ತ್ ಸೆಂಟರ್ ನಲ್ಲಿ ಉಚಿತ ಆರೊಗ್ಯ ತಪಾಸಣೆ ಮಾಡಿಸಿಕೊಳ್ಳಲು ಸುತ್ತಮುತ್ತಲ ಸಾವಿರಾರು ಜನರು ಬಂದು ಸೇರಿದರು. ಈ ಮಾತು ಕೇಳಿ ನಿಮಗೆ ಆಶ್ಚರ್ಯವೆನ್ನಿಸಲಿಕ್ಕಿಲ್ಲ. ಇದರಲ್ಲೇನು ಹೊಸತಿದೆ? ಜನರು ಬಂದಿರಬಹುದು ಎನ್ನಿಸಬಹುದು. ಅದು ಹಾಗಲ್ಲ. ಇಲ್ಲಿ ಬಹಳಷ್ಟು ಹೊಸತನವಿತ್ತು. ಇದು ಸರ್ಕಾರಿ ಕಾರ್ಯಕ್ರಮವಾಗಿರಲಿಲ್ಲ. ಸರ್ಕಾರದ ಉಪಕ್ರಮವೂ ಅಲ್ಲ. ಅಲ್ಲಿಯ K. R. High School ನ ಹಳೆಯ ವಿದ್ಯಾರ್ಥಿಗಳ alumni meet ಪ್ರಯುಕ್ತ ಹಮ್ಮಿಕೊಳ್ಳಲಾದ ಕಾರ್ಯಕ್ರಮವಾಗಿತ್ತು. ಇದಕ್ಕೆ ‘ಸಂಕಲ್ಪ 95’ ಎಂದು ಹೆಸರಿಡಲಾಗಿತ್ತು. ‘ಸಂಕಲ್ಪ 95’ ಎಂದರೆ ಈ ಶಾಲೆಯ 1995 ರ ಬ್ಯಾಚ್ ವಿದ್ಯಾರ್ಥಿಗಳ ಸಂಕಲ್ಪ ಎಂದು. ಈ ಬ್ಯಾಚ್ ನ ವಿದ್ಯಾರ್ಥಿಗಳು alumni meet ಆಯೋಜಿಸಿದರು ಮತ್ತು ಏನಾದರೂ ವಿಶೇಷವಾಗಿ ಮಾಡಲು ಆಲೋಚಿಸಿದರು. ಇದರಲ್ಲಿ ಹಳೆಯ ವಿದ್ಯಾರ್ಥಿಗಳು ಸಮಾಜಕ್ಕಾಗಿ ಏನನ್ನಾದರೂ ಒಳಿತನ್ನು ಮಾಡಲು ನಿರ್ಧರಿಸಿ ಸಾರ್ವಜನಿಕ ಆರೋಗ್ಯ ಜಾಗೃತಿಯ ಜವಾಬ್ದಾರಿಯನ್ನು ಹೊತ್ತುಕೊಂಡರು. ‘ಸಂಕಲ್ಪ 95’ ನ ಈ ಉಪಕ್ರಮದೊಂದಿಗೆ ಬೆತಿಯಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಇನ್ನೂ ಹಲವಾರು ಆಸ್ಪತ್ರೆಗಳು ಕೈಜೋಡಿಸಿದವು. ತದನಂತರ ಜನರ ಆರೋಗ್ಯದ ಕುರಿತು ಒಂದು ಆಂದೋಲನವೇ ಆರಂಭವಾಯಿತು. ಶುಲ್ಕರಹಿತ ಪರೀಕ್ಷೆ, ಉಚಿತ ಔಷಧಿ ವಿತರಣೆ, ಜಾಗೃತಿ ಮೂಡಿಸಿದ ‘ಸಂಕಲ್ಪ 95’ ಒಂದು ನಿದರ್ಶನದಂತೆ ಹೊರ ಹೊಮ್ಮಿತು. ದೇಶದ ಪ್ರತಿಯೊಬ್ಬ ನಾಗರಿಕ ಒಂದು ಹೆಜ್ಜೆ ಮುಂದಿಟ್ಟರೆ ಈ ದೇಶ 130 ಕೋಟಿ ಹೆಜ್ಜೆ ಮುಂದೆ ಸಾಗುತ್ತದೆ ಎಂದು ನಾವು ಆಗಾಗ ಹೇಳುತ್ತಿರುತ್ತೇವೆ. ಇಂಥ ವಿಷಯಗಳು ಸಮಾಜದಲ್ಲಿ ಪ್ರತ್ಯಕ್ಷವಾಗಿ ನೋಡಲು ಸಿಕ್ಕಾಗ ಕೆಲವರಿಗೆ ಆನಂದವಾಗುತ್ತದೆ ಮತ್ತು ಜೀವನದಲ್ಲಿ ಏನನ್ನಾದರೂ ಮಾಡಬೇಕೆಂಬ ಪ್ರೇರಣೆ ಲಭಿಸುತ್ತದೆ. ಒಂದೆಡೆ ಹಳೆಯ ವಿದ್ಯಾರ್ಥಿಗಳ ಸಮೂಹ ಸ್ವಾಸ್ಥ್ಯ ಸೇವೆಯ ಸಂಕಲ್ಪ ಕೈಗೆತ್ತಿಕೊಂಡಿರೋ ಬಿಹಾರದ ಬೆತಿಯಾ ಆದರೆ, ಅದೇ ರೀತಿ ಉತ್ತರ ಪ್ರದೇಶದ ಫೂಲ್‍ಪುರದ ಕೆಲ ಮಹಿಳೆಯರು ತಮ್ಮ ಜೀವನೋಪಾಯದಿಂದ ಸಂಪೂರ್ಣ ಪ್ರದೇಶಕ್ಕೆ ಪ್ರೇರಣೆ ನೀಡಿದ್ದಾರೆ. ಒಗ್ಗಟ್ಟಿನಿಂದ ಯಾವುದೇ ಸಂಕಲ್ಪಗೈದಲ್ಲಿ ಪರಿಸ್ಥಿತಿಗಳು ಬದಲಾಗುವುದನ್ನು ಯಾರೂ ತಡೆಗಟ್ಟಲಾರರು ಎಂಬುದನ್ನು ಈ ಮಹಿಳೆಯರು ಸಾಬೀತುಪಡಿಸಿದ್ದಾರೆ. ಕೆಲ ಸಮಯದವರೆಗೆ ಫೂಲ್‍ಪುರದ ಈ ಮಹಿಳೆಯರು ಆರ್ಥಿಕ ಮುಗ್ಗಟ್ಟು ಮತ್ತು ಬಡತನದಿಂದ ಬಳಲುತ್ತಿದ್ದರು. ಆದರೆ ಇವರಲ್ಲಿ ತಮ್ಮ ಕುಟುಂಬ ಮತ್ತು ಸಮಾಜಕ್ಕಾಗಿ ಏನನ್ನಾದರೂ ಮಾಡಲೇಬೇಕೆಂಬ ಛಲವಿತ್ತು. ಈ ಮಹಿಳೆಯರು ಕಾದಿಪುರದ ಸ್ವಯಂ ಸಹಾಯ ಗುಂಪು Women Self Help Group ನೊಂದಿಗೆ ಸೇರಿ ಪಾದರಕ್ಷೆಗಳನ್ನು ತಯಾರಿಸುವ ಕೌಶಲ್ಯ ಕಲಿತರು, ಇದರಿಂದ ಅವರು ತಮ್ಮ ಕಾಲಿಗೆ ನೆಟ್ಟ ಅಸಹಾಯಕತೆಯ ಮುಳ್ಳನ್ನು ಮಾತ್ರ ತೆಗೆದುಹಾಕಲಿಲ್ಲ ಜೊತೆಗೆ ಸ್ವಾವಲಂಬಿಯಾಗಿ ಕುಟುಂಬಕ್ಕೂ ಆಸರೆಯಾದರು. ಗ್ರಾಮೀಣ ಆಜೀವಿಕಾ ಮಿಶನ್ ಸಹಾಯದೊಂದಿಗೆ ಈಗ ಇಲ್ಲಿ ಪಾದರಕ್ಷೆಗಳನ್ನು ತಯಾರಿಸುವ ಘಟಕ ಸ್ಥಾಪನೆಗೊಂಡಿದೆ. ಇಲ್ಲಿ ಆಧುನಿಕ ಯಂತ್ರಗಳಿಂದ ಪಾದರಕ್ಷೆಗಳನ್ನು ತಯಾರಿಸಲಾಗುತ್ತಿದೆ. ನಾನು ವಿಶೇಷವಾಗಿ ಸ್ಥಳೀಯ ಪೋಲಿಸ್ ಮತ್ತು ಅವರ ಕುಟುಂಬಗಳಿಗೂ ಅಭಿನಂದಿಸುತ್ತೇನೆ. ಅವರು ತಮಗಾಗಿ ಮತ್ತು ಕುಟುಂಬದವರಿಗೆ ಈ ಮಹಿಳೆಯರಿಂದ ಪಾದರಕ್ಷೆಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿದ್ದಾರೆ. ಇಂದು ಈ ಮಹಿಳೆಯರ ಸಂಕಲ್ಪದಿಂದ ಅವರ ಕುಟುಂಬದ ಆರ್ಥಿಕತೆ ಬಲಗೊಂಡಿದೆ ಅಲ್ಲದೆ ಜೀವನಮಟ್ಟವೂ ಸುಧಾರಿಸಿದೆ. ಫೂಲ್‍ಪುರದ ಪೋಲಿಸರ ಜೀವನದ ಅಥವಾ ಅವರ ಕುಟುಂಬದವರ ಮಾತುಗಳನ್ನು ಕೇಳಿದಾಗ ನಾನು ಆಗಸ್ಟ್ 15 ರಂದು ಕೆಂಪುಕೋಟೆಯಿಂದ ಮಾತನಾಡಿದಾಗ ಒಂದು ವಿಷಯ ಪ್ರಸ್ತಾಪಿಸಿದ್ದೆ, ನಾವೆಲ್ಲರೂ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಬೇಕೆಂದು ಹೇಳಿದ್ದು ನಿಮಗೆ ನೆನಪಿರಬಹುದು. ಸ್ಥಳೀಯ ಉತ್ಪನ್ನಗಳ ಖರೀದಿಗೆ ಪ್ರೋತ್ಸಾಹ ನೀಡಬಹುದೆ? ನಿಮ್ಮ ಖರೀದಿಯಲ್ಲಿ ಅವುಗಳಿಗೆ ಆದ್ಯತೆ ನೀಡಬಹುದೇ? ಸ್ಥಳೀಯ ಉತ್ಪನ್ನಗಳನ್ನು ನಮ್ಮ ಪ್ರತಿಷ್ಠೆ ಮತ್ತು ಗೌರವದೊಂದಿಗೆ ಬೆಸೆಯಬಹುದೇ? ನಾವು ಈ ಭಾವನೆಯೊಂದಿಗೆ ನಮ್ಮ ದೇಶಬಾಂಧವರ ಸಮೃದ್ಧಿಗೆ ಮಾಧ್ಯವಾಗಬಹುದೇ? ಎಂದು ಈ ದಿನ ಮತ್ತೊಮ್ಮೆ ನಾನು ಆಗ್ರಹಿಸುತ್ತೇನೆ. ಸ್ನೇಹಿತರೇ, ಮಹಾತ್ಮಾ ಗಾಂಧಿಯವರು ಸ್ವದೇಶಿ ಭಾವನೆಯನ್ನು ಕಡುಬಡವನ ಜೀವನದಲ್ಲೂ ಸಮೃದ್ಧಿ ತರುವಂತಹ ಹಾಗೂ ಲಕ್ಷಾಂತರ ಜನರ ಜೀವನ ಬೆಳಗಿಸುವ ಆಶಾದೀಪದ ರೂಪದಲ್ಲಿ ಕಂಡಿದ್ದರು. 100 ವರ್ಷಗಳ ಹಿಂದೆ ಗಾಂಧೀಜಿಯವರು ಒಂದು ದೊಡ್ಡ ಜನಾಂದೋಲನ ಆರಂಭಿಸಿದ್ದರು. ಭಾರತೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸುವುದು ಇದರ ಒಂದು ಗುರಿಯಾಗಿತ್ತು. ಸ್ವಾವಲಂಬಿಯಾಗುವ ಈ ಮಾರ್ಗವನ್ನು ಗಾಂಧೀಜಿ ತೋರಿದ್ದರು. 2022 ರಲ್ಲಿ ನಾವು ಸ್ವಾತಂತ್ರ್ಯದ 75 ವರ್ಷ ಪೂರೈಸುತ್ತಿದ್ದೇವೆ. ಯಾವ ಸ್ವತಂತ್ರ ಭಾರತದಲ್ಲಿ ನಾವು ಉಸಿರಾಡುತ್ತಿದ್ದೆವೋ ಆ ಭಾರತವನ್ನು ಸ್ವತಂತ್ರೊಳಿಸಲು ಲಕ್ಷಾಂತರ ಭಾರತ ಮಾತೆಯ ಪುತ್ರರು, ಹೆಣ್ಣು ಮಕ್ಕಳು ಯಾತನೆ ಅನುಭವಿಸಿದ್ದಾರೆ ಮತ್ತು ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಲಕ್ಷಾಂತರ ಜನರ ತ್ಯಾಗ, ತಪಸ್ಸು ಮತ್ತು ಬಲಿದಾನದಿಂದ ಸ್ವತಂತ್ರ ಲಭಿಸಿತು, ಅದರ ಸಂಪೂರ್ಣ ಆನಂದವನ್ನು ನಾವು ಅನುಭವಿಸುತ್ತಿದ್ದೇವೆಯೋ, ಸ್ವತಂತ್ರ ಜೀವನ ನಡೆಸುತ್ತಿದ್ದೇವೆಯೋ ಆ ದೇಶಕ್ಕಾಗಿ ಪ್ರಾಣ ತೆತ್ತ, ದೇಶಕ್ಕಾಗಿ ಜೀವನ ಮುಡಿಪಾಗಿಟ್ಟ ಹೆಸರಾಂತ ಅಥವಾ ಅನಾಮಿಕ ಅಸಂಖ್ಯಾತ ಜನರಿದ್ದಾರೆ. ಅವರಲ್ಲಿ ಕೆಲವರ ಹೆಸರುಗಳನ್ನು ಮಾತ್ರ ನಾವು ಅರಿತಿರಬಹುದು. ಆದರೆ ತಮ್ಮ ಸ್ವತಂತ್ರ ಭಾರತದ ಕನಸಿಗಾಗಿ, ಸಮೃದ್ಧ, ಸುಖಮಯ, ಸಂಪದ್ಭರಿತ, ಸ್ವತಂತ್ರ ಭಾರತಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನಗೈದಿದ್ದಾರೆ.

ನನ್ನ ಪ್ರಿಯ ದೇಶಬಾಂಧವರೆ, ನಾವು 2022 ಕ್ಕೆ ಸ್ವಾತಂತ್ಯಕ್ಕೆ 75ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ಕನಿಷ್ಠ 2-3 ವರ್ಷಗಳಾದರೂ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಸಂಕಲ್ಪ ಮಾಡಬಹುದೇ? ಭಾರತದಲ್ಲಿ ನಿರ್ಮಾಣವಾದ, ನಮ್ಮ ದೇಶಬಾಂಧವರಿಂದ ತಯಾರಿಸಲ್ಪಟ್ಟ, ನಮ್ಮ ದೇಶಬಾಂಧವರ ಬೆವರಿನ ಕಂಪು ತುಂಬಿದ ವಸ್ತುಗಳನ್ನು ಖರೀದಿಸಲು ಮುಂದಾಗಬಹುದೇ? ಸುದೀರ್ಘಾವಧಿವರೆಗೆ ಖರೀದಿಸಿ ಎನ್ನುವುದಿಲ್ಲ. ಕೇವಲ 2022 ರವರೆಗೆ, ಸ್ವತಂತ್ರದ 75 ವರ್ಷ ಪೂರ್ಣಗೊಳ್ಳುವವರೆಗೆ ಮಾತ್ರ. ಇದು ಸರ್ಕಾರಿ ಕೆಲಸವಾಗಕೂಡದು. ಎಲ್ಲೆಡೆ ಯುವಪೀಳಿಗೆ ಮುಂದೆ ಬರಬೇಕು. ಸಣ್ಣ ಪುಟ್ಟ ಸಂಸ್ಥೆಗಳನ್ನು ಕಟ್ಟಿ. ಜನರನ್ನು ಪ್ರೇರೆಪಿಸಿ, ತಿಳಿ ಹೇಳಿ ಮತ್ತು ಬನ್ನಿ ನಾವು ಸ್ಥಳೀಯ ವಸ್ತುಗಳನ್ನು ಖರೀದಿಸೋಣ, ಅವುಗಳಿಗೆ ಶಕ್ತಿ ತುಂಬೋಣ, ಯಾವ ವಸ್ತುಗಳಲ್ಲಿ ದೇಶಬಾಂಧವರ ಬೆವರಿನ ಕಂಪಿದೆಯೋ ಆ ಉತ್ಪನ್ನಗಳನ್ನು ಖರೀದಿಸುವುದು ನನ್ನ ಸ್ವತಂತ್ರ ಭಾರತದ ಮಧುರ ಘಳಿಗೆಯಾಗಲಿ ಎಂದು ನಿಶ್ಚಯಿಸಲಿ ಹಾಗೂ ಈ ಕನಸುಗಳನ್ನು ಹೊತ್ತು ಮುನ್ನಡೆಯಲಿ.

ನನ್ನ ಪ್ರಿಯ ದೇಶವಾಸಿಗಳೇ, ದೇಶದ ನಾಗರಿಕರು, ಆತ್ಮ ವಿಶ್ವಾಸದಿಂದ ಮತ್ತು ಗೌರವದಿಂದ ಜೀವನ ಸಾಗಿಸಲಿ ಎಂಬುದು ನಮ್ಮೆಲ್ಲರಿಗೂ ಮಹತ್ವಪೂರ್ಣವಾಗಿದೆ. ನನ್ನ ಗಮನವನ್ನು ಸೆಳೆದಂತಹ ಒಂದು ಉಪಕ್ರಮದ ಕುರಿತು ನಾನು ಚರ್ಚಿಸಲು ಇಷ್ಟಪಡುತ್ತೇನೆ ಅದೇ, ಜಮ್ಮು-ಕಾಶ್ಮೀರ ಮತ್ತು ಲದಾಖ್‍ನ ‘ಹಿಮಾಯತ್’ ಕಾರ್ಯಕ್ರ್ರಮ. ‘ಹಿಮಾಯತ್’ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟಿದ್ದಾಗಿದೆ. ಇದರಲ್ಲಿ 15 ವರ್ಷದ ಬಾಲಕರಿಂದ 35 ವರ್ಷದ ಯುವಜನರೆಲ್ಲರೂ ಭಾಗವಹಿಸಬಹುದು. ಯಾವುದೋ ಕಾರಣಕ್ಕೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲಾಗದೇ ಮಧ್ಯದಲ್ಲೇ ಶಾಲೆ ಅಥವಾ ಕಾಲೇಜಿನ ವ್ಯಾಸಂಗವನ್ನು ಸ್ಥಗಿತಗೊಳಿಸಿದವರಿಗಾಗಿ ಇದನ್ನು ರೂಪಿಸಲಾಗಿದೆ.

ನನ್ನ ಪ್ರಿಯ ದೇಶಬಂಧವರೆ, ಈ ‘ಹಿಮಾಯತ್’ ಕಾರ್ಯಕ್ರಮದಲ್ಲಿ ಕಳೆದ 2 ವರ್ಷಗಳಲ್ಲಿ 18 ಸಾವಿರ ಯುವಜನತೆ, 77 ಬೇರೆ ಬೇರೆ ಉದ್ಯಮಗಳಲ್ಲಿ ತರಬೇತಿ ಪಡೆದಿದ್ದಾರೆ. ಇವರಲ್ಲಿ ಸುಮಾರು 5 ಸಾವಿರ ಜನರು ಒಂದಲ್ಲಾ ಒಂದೆಡೆ ಉದ್ಯೋಗಕ್ಕೆ ಸೇರಿದ್ದಾರೆ ಮತ್ತು ಬಹುತೇಕರು ಸ್ವಉದ್ಯೋಗದೆಡೆಗೆ ಮುನ್ನಡೆಯುತ್ತಿದ್ದಾರೆ. ಹಿಮಾಯತ್ ಕಾರ್ಯಕ್ರಮದಿಂದ ತಮ್ಮ ಜೀವನವನ್ನು ಬದಲಿಸಿಕೊಂಡ ಇಂಥ ಜನರ ಕಥಾನಕಗಳು ನಿಜಕ್ಕೂ ಹೃದಯಸ್ಪರ್ಶಿಯಾಗಿವೆ.

ಪರ್ವೀನ್ ಫಾತಿಮಾ ತಮಿಳುನಾಡಿನ ತಿರುಪ್ಪುರ್ ನ ಒಂದು ಗಾರ್ಮೆಂಟ್ ಘಟಕದಲ್ಲಿ ಬಡ್ತಿ ಪಡೆದು ಸೂಪರ್‍ವೈಸರ್ ಕಮ್ ಕೊಆರ್ಡಿನೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ವರ್ಷದ ಹಿಂದಿನವರೆಗೂ ಅವರು ಕಾರ್ಗಿಲ್ ನ ಒಂದು ಪುಟ್ಟ ಗ್ರಾಮದಲ್ಲಿ ವಾಸಿಸುತ್ತಿದ್ದರು. ಇಂದು ಅವರ ಜೀವನದಲ್ಲಿ ಒಂದು ದೊಡ್ಡ ಪರಿವರ್ತನೆಯಾಗಿದೆ. ಆತ್ಮವಿಶ್ವಾಸ ತುಂಬಿದೆ – ಅವರು ಸ್ವಾವಲಂಬಿಯಾಗಿದ್ದಾರೆ ಮತ್ತು ಸಂಪೂರ್ಣ ಕುಟುಂಬಕ್ಕೆ ಆರ್ಥಿಕ ಪ್ರಗತಿಯ ಅವಕಾಶ ತಂದಿದ್ದಾರೆ. ಪರ್ವೀನ್ ಫಾತಿಮಾಳಂತೆ ‘ಹಿಮಾಯತ್’ ಕಾರ್ಯಕ್ರಮ ಲೇಹ್ ಲಡಾಕ್ ನ ಪ್ರಾಂತ್ಯದ ಇತರ ಹೆಣ್ಣು ಮಕ್ಕಳ ಭಾಗ್ಯವನ್ನೇ ಬದಲಿಸಿದೆ. ಇವರೆಲ್ಲರೂ ತಮಿಳುನಾಡಿನ ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗೆ ‘ಹಿಮಾಯತ್’ ಡೋಡಾದ ಫಯಾಜ್ ಅಹ್ಮದ್‍ಗೆ ವರದಾನವಾಗಿ ಪರಿಣಮಿಸಿದೆ. ಫಯಾಜ್ 2012 ರಲ್ಲಿ 12 ನೇ ತರಗತಿ ತೇರ್ಗಡೆ ಹೊಂದಿದ್ದ. ಆದರೆ ಅನಾರೋಗ್ಯದಿಂದಾಗಿ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. 2 ವರ್ಷಗಳವರೆಗೆ ಫಯಾಜ್ ಹೃದ್ರೋಗದಿಂದ ನರಳುತ್ತಿದ್ದ. ಇದೇ ವೇಳೆ ಅವರ ಒಬ್ಬ ಸಹೋದರ ಮತ್ತು ಸಹೋದರಿ ಸಾವೀಗೀಡಾದರು. ಒಂದು ರೀತಿ ಅವರ ಕುಟುಂಬ ಕಷ್ಟಕೋಟಲೆಗಳಲ್ಲಿ ಸಿಲುಕಿತ್ತು. ಕೊನೆಗೆ ಅವರಿಗೆ ‘ಹಿಮಾಯತ್’ ನಿಂದ ನೆರವು ಲಭಿಸಿತು. ‘ಹಿಮಾಯತ್’ ನಿಂದ ITES CAzÀgÉ Information Technology enabled services’ ತರಬೇತಿ ಲಭಿಸಿತು ಮತ್ತು ಇಂದು ಅವರು ಪಂಜಾಬ್‍ನಲ್ಲಿ ಉದ್ಯೋಗದಲ್ಲಿದ್ದಾರೆ. ಫಯಾಜ್ ಅಹ್ಮದ್ ತಮ್ಮ ಪದವಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಅದು ಕೂಡಾ ಈಗ ಪೂರ್ಣಗೊಳ್ಳಲಿದೆ. ಇತ್ತೀಚೆಗೆ ‘ಹಿಮಾಯತ್’ನ ಕಾರ್ಯಕ್ರಮವೊಂದರಲ್ಲಿ ತಮ್ಮ ಅನುಭವ ಹಂಚಿಕೊಳ್ಳಲು ಅವರನ್ನು ಆಹ್ವಾನಿಸಲಾಗಿತ್ತು. ತಮ್ಮ ಕಥೆ ಹೇಳುವಾಗ ಅವರ ಕಣ್ಣಲ್ಲಿ ನೀರು ಜಿನುಗಿತು.

ಹೀಗೆಯೇ ಅನಂತನಾಗ್‍ನ ರಕೀಬ್ ಉಲ್ ರೆಹಮಾನ್ ಆರ್ಥಿಕ ಮುಗ್ಗಟ್ಟಿನಿಂದ ತಮ್ಮ ವಿದ್ಯಾಭ್ಯಾಸ ಮುಂದುವರಿಸಲಾಗಲಿಲ್ಲ. ಒಂದು ದಿನ ರಕೀಬ್ ಅವರಿಗೆ ತಮ್ಮ ಬ್ಲಾಕ್‍ನಲ್ಲಿ ಆಯೋಜಿಸಲಾದ mobilisation camp ಮೂಲಕ ‘ಹಿಮಾಯತ್’ ಕಾರ್ಯಕ್ರಮ ಕುರಿತಾದ ಮಾಹಿತಿ ಲಭ್ಯವಾಯಿತು. ರಕೀಬ್ ಕೂಡಲೇ ರಿಟೇಲ್ ಟೀಂ ಲೀಡರ್ ಕೋರ್ಸ್‍ಗೆ ನೊಂದಾಯಿಸಿಕೊಂಡರು. ಇಲ್ಲಿ ತರಬೇತಿ ಪೂರ್ಣಗೊಳಿಸಿದ ಮೇಲೆ ಇಂದು ಅವರು ಒಂದು ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಪರಿವರ್ತನೆಗ ಪ್ರತೀಕವಾದ “ಹಿಮಾಯತ್ ಮಿಷನ್” ನಿಂದ ಲಾಭ ಪಡೆದ ಪ್ರತಿಭಾವಂತ ಯುವಕರ ಹಲವಾರು ಉದಾಹರಣೆಗಳಿವೆ. ಹಿಮಾಯತ್ ಕಾರ್ಯಕ್ರಮ ಸರ್ಕಾರ, ತರಬೇತಿ ಸಹಭಾಗಿತ್ವದ ಸಂಸ್ಥೆಗಳು, ಉದ್ಯೋಗ ನೀಡುವ ಕಂಪನಿಗಳು ಮತ್ತು ಜಮ್ಮು ಕಾಶ್ಮೀರದ ಜನರ ಮಧ್ಯದ ಹೊಂದಾಣಿಕೆಯ ಅತ್ಯುತ್ತಮ ಉದಾಹರಣೆಯಾಗಿದೆ.

ಈ ಕಾರ್ಯಕ್ರಮ ಜಮ್ಮು ಕಾಶ್ಮೀರದ ಯುವಜನತೆಯಲ್ಲಿ ಹೊಸ ಆತ್ಮ ವಿಶ್ವಾಸ ಹುಟ್ಟುಹಾಕಿದ್ದು ಮುಂದೆ ಸಾಗುವ ಹಾದಿಯನ್ನು ಸುಗಮಗೊಳಿಸಿದೆ.

ನನ್ನ ಪ್ರಿಯ ದೇಶಬಾಂಧವರೆ, ಕಳೆದ 26 ನೇ ತಾರೀಖಿನಂದು ನಾವು ಈ ದಶಕದ ಕೊನೆಯ ಸೂರ್ಯಗ್ರಹಣ ವೀಕ್ಷಿಸಿದೆವು. ಬಹುಶಃ ಸೂರ್ಯಗ್ರಹಣದ ಕಾರಣದಿಂದಲೇ ರಿಪುನ್ ಅವರು ಮೈ ಗೌ ನಲ್ಲಿ ಒಂದು ಆಸಕ್ತಿಕರ ಪ್ರಸ್ತಾಪಿಸಿದ್ದ್ದಾರೆ. ಅವರು … “ನಮಸ್ಕಾರ ಸರ್, ನನ್ನ ಹೆಸರು ರಿಪುನ್… ನಾನು ಈಶಾನ್ಯ ಭಾಗದವನಾಗಿದ್ದೇನೆ. ಆದರೆ ಈಗ ನಾನು ದಕ್ಷಿಣ ಭಾರತದಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ಒಂದು ವಿಷಯ ಹಂಚಿಕೊಳ್ಳಬಯಸುತ್ತೇನೆ. ನಮ್ಮ ಪ್ರದೇಶದಲ್ಲಿ ಸ್ವಚ್ಛ ಆಕಾಶವಿರುತ್ತಿದ್ದುದರಿಂದ ನಾವು ಗಂಟೆಗಟ್ಟಲೆ ಆಕಾಶದತ್ತ ದೃಷ್ಟಿ ನೆಟ್ಟಿರುತ್ತಿದ್ದೆವು. star gazing, ನನಗೆ ಬಹಳ ಇಷ್ಟ. ಈಗ ನಾನು ವೃತ್ತಿಪರನಾದ್ದರಿಂದ ನನ್ನ ದಿನಚರಿಯಲ್ಲಿ ಇಂಥ ವಿಷಯಗಳಿಗೆ ಸಮಯ ನೀಡಲಾಗುತ್ತಿಲ್ಲ….ನೀವು ಈ ವಿಷಯದ ಕುರಿತು ಮಾತನಾಡಬಹುದೇ?ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ಖಗೋಳ ವಿಜ್ಞಾನವನ್ನು ಹೇಗೆ ಜನಪ್ರಿಯಗೊಳಿಸಹುದು.

ನನ್ನ ಪ್ರಿಯ ದೇಶಬಾಂಧವರೇ, ನನಗೆ ಹಲವಾರು ಸಲಹೆಗಳು ಬರುತ್ತವೆ ಆದರೆ ಇಂಥ ಒಂದು ಸಲಹೆ ಪ್ರಥಮ ಬಾರಿಗೆ ನನ್ನ ಬಳಿ ಬಂದಿದೆ ಎನ್ನಬಹುದು. ವಿಜ್ಞಾನದ ಬಗ್ಗೆ, ಅದರ ಹಲವು ಆಯಾಮಗಳ ಬಗ್ಗೆ ಮಾತನಾಡುವ ಅವಕಾಶ ಲಭಿಸಿದೆ. ವಿಶೇಷವಾಗಿ ಯುವಜನತೆ ಆಗ್ರಹದ ಮೇರೆಗೆ ಮಾತಾಡುವ ಅವಕಾಶ ಅಪರೂಪ. ಆದರೆ ಈ ವಿಷಯ ಮಾತ್ರ ದೂರ ಉಳಿಯುತ್ತಿತ್ತು. ಕಳೆದ 26 ನೇ ತಾರೀಖಿನಂದು ಸೂರ್ಯಗ್ರಹಣ ಆಗಿರುವುದರಿಂದ ನಿಮಗೂ ಈ ವಿಷಯದಲ್ಲಿ ಆಸಕ್ತಿ ಇರಬಹುದು ಎಂದುಕೊಳ್ಳುತ್ತೇನೆ. ಸಮಸ್ತ ದೇಶಬಾಂಧವರಂತೆ, ವಿಶೇಷವಾಗಿ ಯುವಜನತೆಯಂತೆ 26 ನೇ ತಾರೀಖಿನ ಸೂರ್ಯಗ್ರಹಣದಂದು ನನ್ನ ಮನದಲ್ಲೂ ಉತ್ಸಾಹವಿತ್ತು. ನಾನೂ ಸೂರ್ಯಗ್ರಹಣ ನೋಡಬಯಸಿದ್ದೆ. ಆದರೆ ದುರದೃಷ್ಟವಶಾತ್ ಅಂದು ದೆಹಲಿಯಲ್ಲಿ ಆಕಾಶ ಮೋಡದಿಂದ ಮುಸುಕಿತ್ತು, ನಾನು ಆ ಆನಂದ ಪಡೆಯಲಾಗಲಿಲ್ಲ. ಆದರೆ ಟಿ ವಿಯಲ್ಲಿ ಕೋಳಿóಕೋಡ್ ಮತ್ತು ಭಾರತದ ಇತರ ಭಾಗಗಳ ಸೂರ್ಯಗ್ರಹಣದ ಸುಂದರ ಚಿತ್ರಗಳು ನೋಡಲು ದೊರೆತವು. ಸೂರ್ಯ ಹೊಳೆಯುವ ಉಂಗುರದಂತೆ ಕಾಣಿಸುತ್ತಿದ್ದ. ಅಂದು ಈ ವಿಷಯದ ಪರಿಣಿತರೊಂದಿಗೆ ಸಂವಾದ ನಡೆಸುವ ಅವಕಾಶ ಲಭಿಸಿತು. ಚಂದ್ರ ಭೂಮಿಯಿಂದ ಬಹುದೂರ ಇರುವುದರಿಂದ ಅದರ ಆಕೃತಿ ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚಲು ಆಗುವುದದಿಲ್ಲ. ಹಾಗಾಗಿ ಉಂಗುರದಂತೆ ಗೋಚರಿಸುತ್ತದೆ ಎಂದು ಅವರು ಹೇಳುತ್ತಿದ್ದರು. ಈ ಸೂರ್ಯಗ್ರಹಣ ವಾರ್ಷಿಕ ಸೂರ್ಯಗ್ರಹಣವಾಗಿದ್ದು ಇದನ್ನು ವಲಯ ಗ್ರಹಣ ಇಲ್ಲವೇ ಕುಂಡಲ ಗ್ರಹಣವೆಂದೂ ಕರೆಯುತ್ತಾರೆ. ನಾವು ಭೂಮಿಯ ಮೇಲಿದ್ದು ಅಂತರಿಕ್ಷದಲ್ಲಿ ಸುತ್ತುತ್ತಿದ್ದೇವೆ ಎಂಬುದನ್ನು ಗ್ರಹಣ ನಮಗೆ ತಿಳಿಸುತ್ತದೆ. ಅಂತರಿಕ್ಷದಲ್ಲಿ ಸೂರ್ಯ, ಚಂದ್ರ ಮತ್ತು ಇತರ ಗ್ರಹಗಳಂತೆ ಹಲವು ಆಕಾಶಕಾಯಗಳು ಸುತ್ತುತ್ತಿರುತ್ತವೆ. ಚಂದ್ರನ ನೆರಳಿನಿಂದಲೇ ನಮಗೆ ಗ್ರಹಣದ ಬೇರೆ ಬೇರೆ ರೂಪ ನೋಡಲು ಸಾಧ್ಯವಾಗುತ್ತದೆ. ಸ್ನೇಹಿತರೆ, ಭಾರತದಲ್ಲಿ ಖಗೋಳಶಾಸ್ತ್ರ ಪ್ರಾಚೀನ ಮತ್ತು ಗೌರವಯುತ ಇತಿಹಾಸ ಹೊಂದಿದೆ. ನಮ್ಮ ಪರಂಪರೆ ಎಷ್ಟು ಪುರಾತನವಾದದ್ದೋ ಆಕಾಶದಲ್ಲಿ ಮಿಣುಗುತ್ತಿರುವ ನಕ್ಷತ್ರಗಳೊಂದಿಗೆ ನಮ್ಮ ನಂಟೂ ಅಷ್ಟೇ ಪುರಾತನವಾದದ್ದು. ಭಾರತದ ಹಲವೆವಡೆ ಬಹಳ ಭವ್ಯ ಜಂತರ್‍ಮಂತರ್‍ಗಳಿವೆ ಎಂಬುದು ನಿಮ್ಮಲ್ಲಿ ಬಹಳಷ್ಟು ಜನರಿಗೆ ತಿಳಿದಿರಬಹುದು. ಈ ಜಂತರ್‍ಮಂತರ್‍ಗಳು ಖಗೋಳಶಾಸ್ತ್ರದೊಂದಿಗೆ ಗಾಢ ನಂಟು ಹೊಂದಿವೆ. ಮಹಾನ್ ಆರ್ಯಭಟನ ಅಪ್ರತಿಮ ಪ್ರತಿಭೆ ಬಗ್ಗೆ ಯಾರಿಗೆ ತಿಳಿದಿಲ್ಲ. ತಮ್ಮ ಕಾಲಘಟ್ಟದಲ್ಲಿ ಅವರು ಸೂರ್ಯಗ್ರಹಣದ ಜೊತೆಗೆ ಚಂದ್ರಗ್ರಹಣದ ಬಗ್ಗೆಯೂ ವಿಸ್ತಾರವಾಗಿ ವ್ಯಾಖ್ಯಾನಿಸಿದ್ದಾರೆ. ಅದರಲ್ಲೂ ತಾತ್ವಿಕ ಮತ್ತು ಗಣಿತ ದೃಷ್ಟಿಕೋನದಿಂದ ವ್ಯಾಖ್ಯಾನಿಸಿದ್ದಾರೆ. ಅವರು ಪೃಥ್ವಿಯ ನೆರಳಿನ ಗಾತ್ರವನ್ನು ಹೇಗೆ ಮಾಪನ ಮಾಡಬೇಕೆಂದು ಗಣಿತದ ಮೂಲಕ ತಿಳಿಸಿದ್ದಾರೆ. ಗ್ರಹಣದ ಅವಧಿ ಮತ್ತು ತೀವ್ರತೆ ಕುರಿತು ಹೇಗೆ ಮಾಪನ ಮಾಡಬೇಕೆಂಬುದರ ಕುರಿತು ನಿಖರ ಮಾಹಿತಿ ನೀಡಿದ್ದಾರೆ. ಭಾಸ್ಕರರಂತಹ ಅವರ ಅನೇಕ ಶಿಷ್ಯಂದಿರು ಅದೇ ಹುಮ್ಮಸ್ಸಿನೊಂದಿಗೆ ಜ್ಞಾನಾಭಿವೃದ್ಧಿಗೆ ಸಂಪೂರ್ಣ ಪ್ರಯತ್ನ ಮಾಡಿದ್ದಾರೆ. ನಂತರ 14 ಮತ್ತು 15 ನೇ ಶತಮಾನದಲ್ಲಿ ಕೇರಳದ ಸಂಗಮ ಗ್ರಾಮದ ಮಾಧವ್ ಅವರು ಬ್ರಹ್ಮಾಂಡದಲ್ಲಿರುವ ಗ್ರಹಗಳ ಸ್ಥಿತಿಯ ಗಣನೆಗೆ ಕ್ಯಾಲ್ಕುಲಸ್ ಬಳಸಿದರು. ರಾತ್ರಿ ಕಂಡುಬರುವ ಆಕಾಶ ಕೇವಲ ಜಿಜ್ಞಾಸೆಯ ವಿಷಯವಾಗಿರದೇ ಗಣಿತದ ದೃಷ್ಟಿಯಿಂದ ಆಲೋಚಿಸುವವರಿಗೆ ಮತ್ತು ವಿಜ್ಞಾನಿಗಳಿಗೆ ಇದೊಂದು ಮಹತ್ವಪೂರ್ಣ ಮೂಲವಾಗಿತ್ತು. ಕೆಲ ವರ್ಷಗಳ ಹಿಂದೆ ‘Pre-Modern Kutchi (ಕಚ್ಛಿ) Navigation Techniques and Voyages’, ಎಂಬ ಪುಸ್ತಕ ಬಿಡುಗಡೆ ಮಾಡಿದ್ದೆ. ಈ ಪುಸ್ತಕ ಒಂದು ರೀತಿಯಲ್ಲಿ ಮಾಲಮ್ ಅವರ ಡೈರಿಯಂತಿದೆ. ಮಾಲಮ್ ಒಬ್ಬ ನಾವಿಕನಂತೆ ಏನು ಅನುಭವಿಸಿದ್ದರೋ ಅದನ್ನು ತಮ್ಮದೇ ರೀತಿಯಲ್ಲಿ ಡೈರಿಯಲ್ಲಿ ಬರೆದಿದ್ದಾರೆ. ಆಧುನಿಕ ಯುಗದಲ್ಲಿ ಗುಜರಾತಿ ಪಾಂಡುಲಿಪಿಯ ಸಂಗ್ರಹವಾದ ಮಾಲಮ್ ಅವರ ಆ ಪುಸ್ತಕದಲ್ಲಿ ಪ್ರಾಚೀನ ಸಮುದ್ರಯಾನ ತಂತ್ರಜ್ಞಾನದ ವರ್ಣನೆ ಮಾಡಲಾಗಿದೆ ಮತ್ತು ಪದೇ ಪದೇ “ಮಾಲಮ್ ನಿ ಪೋಥಿ” ಯಲ್ಲಿ ಆಕಾಶದ, ನಕ್ಷತ್ರಗಳ, ನಕ್ಷತ್ರಗಳ ಚಲನೆಯ ವರ್ಣನೆ ಮಾಡಲಾಗಿದೆ. ಸಮುದ್ರ ಪಯಣದಲ್ಲಿ ನಕ್ಷತ್ರಗಳ ಸಹಾಯದೊಂದಿಗೆ ದಿಕ್ಕನ್ನು ಗುರುತಿಸಬಹುದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಗಮ್ಯ ತಲುಪಲು ನಕ್ಷತ್ರಗಳು ದಾರಿಯನ್ನು ತೋರುತ್ತವೆ.

ನನ್ನ ಪ್ರಿಯ ದೇಶವಾಸಿಗಳೇ, ಖಗೋಳ ಶಾಸ್ತ್ರದ ಕ್ಷೇತ್ರದಲ್ಲಿ ಭಾರತ ಬಹಳ ಮುಂದೆ ಇದೆ ಮತ್ತು ನಮ್ಮ ಉಪಕ್ರಮಗಳು ಮುಂಚೂಣಿಯಲ್ಲಿವೆ. ನಮ್ಮ ಬಳಿ ಪುಣೆಯ ಹತ್ತಿರ ಬೃಹತ್ Meter Wave Telescope ಇದೆ. ಇಷ್ಟೇ ಅಲ್ಲದೆ ಕೊಡೈಕೆನಾಲ್, ಉದಗಮಂಡಲಂ, ಗುರು ಶಿಖರ್ ಮತ್ತು ಲಡಾಕ್‍ನ ಹನ್ಲೆಯಲ್ಲೂ ಶಕ್ತಿಯುತವಾದ ಟೆಲಿಸ್ಕೋಪ್‍ಗಳಿವೆ. ಬೆಲ್ಜಿಯಂನ ಅಂದಿನ ಪ್ರಧಾನಿ ಮತ್ತು ನಾನು 2016 ರಲ್ಲಿ ನೈನಿತಾಲ್‍ನಲ್ಲಿ 3.6 ಮೀಟರ್‍ನ ಬೃಹದಾಕಾರದ optical telescope ನ ಉದ್ಘಾಟನೆ ಮಾಡಿದೆವು. ಇದನ್ನು ಏಷಿಯಾದ ಅತ್ಯಂತ ದೊಡ್ಡ ಟೆಲಿಸ್ಕೋಪ್ ಎಂದು ಹೇಳಲಾಗುತ್ತಿದೆ. ಇಸ್ರೋ ಬಳಿ ASTROSAT ಎಂಬ ಖಗೋಳೀಯ ಉಪಗ್ರಹವಿದೆ. ಸೂರ್ಯನ ಕುರಿತ ಅಧ್ಯಯನಕ್ಕೆ ಇಸ್ರೋ ‘ಆದಿತ್ಯ’ ಹೆಸರಿನ ಮತ್ತೊಂದು ಉಪಗ್ರಹ ಉಡ್ಡಯನ ಮಾಡಲಿದೆ. ಖಗೋಳ ಶಾಸ್ತ್ರದ ಕುರಿತು ನಮ್ಮ ಪ್ರಾಚೀನ ಜ್ಞಾನವಾಗಲಿ ಅಥವಾ ಆಧುನಿಕ ಸಾಧನೆಗಳ ಬಗ್ಗೆಯಾಗಲಿ ಅವುಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಹೆಮ್ಮೆ ಪಡಬೇಕು. ಇಂದು ನಮ್ಮ ಯುವ ವಿಜ್ಞಾನಿಗಳಲ್ಲಿ ವ್ಶೆಜ್ಞಾನಿಕ ಇತಿಹಾಸ ಅರಿಯುವ ಹುಮ್ಮಸ್ಸು ಮಾತ್ರವಲ್ಲದೆ ಖಗೋಳಶಾಸ್ತ್ರದ ಭವಿಷ್ಯದ ಕುರಿತೂ ಧೃಡ ಇಚ್ಛಾಶಕ್ತಿ ಕಂಡುಬರುತ್ತದೆ.

ನಮ್ಮ ದೇಶದ ತಾರಾಲಯಗಳು, ರಾತ್ರಿ ಆಕಾಶದ ಬಗ್ಗೆ ತಿಳಿಸುವುದರ ಜೊತೆಗೆ ನಕ್ಷತ್ರ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳಲು ಕೂಡಾ ಪ್ರೋತ್ಸಾಹಿಸುತ್ತಿವೆ. ಹಲವಾರು ಜನರು Amateur telescopes ನ್ನು ತಮ್ಮ ಮಹಡಿಯ ಮೇಲೆ, ಬಾಲ್ಕನಿಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ಗ್ರಾಮೀಣ ಶಿಬಿರಗಳು ಮತ್ತು ಗ್ರಾಮೀಣ ವಿಹಾರಕ್ಕೂ ನಕ್ಷತ್ರ ವೀಕ್ಷಣೆಯಿಂದ ಪ್ರೋತ್ಸಾಹ ಸಿಗಲಿದೆ. ಹಲವಾರು ಶಾಲಾ ಕಾಲೇಜುಗಳು ಖಗೋಳಶಾಸ್ತ್ರ ಕ್ಲಬ್‍ಗಳನ್ನು ರೂಪಿಸಿ ಈ ಪ್ರಯೋಗವನ್ನು ಮುಂದುವರಿಸಿಕೊಂಡು ಹೋಗಬೇಕು.

ನನ್ನ ಪ್ರಿಯ ದೇಶಬಾಂಧವರೆ, ನಮ್ಮ ಸಂಸತ್‍ನ್ನು ಪ್ರಜಾಪ್ರಭುತ್ವದ ಮಂದಿರವೆಂದು ನಾವು ಪರಿಗಣಿಸುತ್ತೇವೆ. ನೀವು ಆಯ್ಕೆ ಮಾಡಿದ ಪ್ರತಿನಿಧಿಗಳು ಕಳೆದ 60 ವರ್ಷಗಳ ದಾಖಲೆಯನ್ನು ಮೀರಿ ಮುಂದೆ ಸಾಗಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಕಳೆದ 6 ತಿಂಗಳಲ್ಲಿ 17 ನೇ ಲೋಕಸಭೆಯ ಉಭಯ ಸದನಗಳು ಬಹಳ ಫಲಪ್ರದವಾಗಿ ಕಾರ್ಯನಿರ್ವಹಿಸಿವೆ. ಲೋಕಸಭೆ 114% ರಷ್ಟು ಕೆಲಸ ಮಾಡಿದ್ದರೆ ರಾಜ್ಯಸಭೆ 94% ರಷ್ಟು ಕೆಲಸ ಮಾಡಿದೆ. ಇದಕ್ಕೂ ಮೊದಲು ಆಯವ್ಯಯ ಅಧಿವೇಶನದಲ್ಲಿ ಶೇಕಡಾ 135 ರಷ್ಟು ಕಾರ್ಯನಿರ್ವಹಿಸಿದ್ದರು. ರಾತ್ರಿ ಸುದೀರ್ಘ ಸಮಯದವರೆಗೆ ಸಂಸತ್ ಸಭೆ ನಡೆಯಿತು. ಎಲ್ಲ ಸಂಸದರೂ ಅಭಿನಂದನೆಗೆ ಪಾತ್ರರು ಎಂದು ಹೇಳಲು ಈ ಮಾತನ್ನು ಪ್ರಸ್ತಾಪಿಸುತ್ತಿದ್ದೇನೆ. ನೀವು ಕಳುಹಿಸಿದ ಜನಪ್ರತಿನಿಧಿಗಳು ಕಳೆದ 60 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ಇಷ್ಟೊಂದು ಕೆಲಸ ಆಗಿರುವುದು ಭಾರತದ ಪ್ರಜಾಸತ್ತಾತ್ಮಕತೆಯ ಶಕ್ತಿಯ ಪ್ರಜಾಸತ್ತಾತ್ಮಕತೆ ಕುರಿತಾದ ಶೃದ್ಧೆಯ ಪ್ರತಿರೂಪವಾಗಿದೆ. ನಾನು ಉಭಯ ಸದನಗಳ ಪೀಠಾಧಿಪತಿಗಳನ್ನು ಎಲ್ಲ ರಾಜಕೀಯ ಪಕ್ಷಗಳನ್ನು, ಎಲ್ಲ ಸಂಸದರನ್ನು ಅವರ ಸಕ್ರೀಯ ಪಾಲ್ಗೊಳ್ಳುವಿಕೆಗೆ ಅನಂತ ಅಭಿನಂದಿಸಬಯಸುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ಸೂರ್ಯ, ಪ್ರಥ್ವಿ, ಚಂದ್ರನ ಚಲನೆಗಳು ಮಾತ್ರ ಗ್ರಹಣ ನಿರ್ಧರಿಸುವುದಿಲ್ಲ, ಇದರೊಂದಿಗೆ ಇನ್ನೂ ಹಲವಾರು ವಿಷಯಗಳು ಸೇರಿವೆ. ಸೂರ್ಯನ ಚಲನೆಯನ್ನು ಆಧರಿಸಿ ಭಾರತದಾದ್ಯಂತ ಜನವರಿಯ ಮಧ್ಯ ಭಾಗದಲ್ಲಿ ವಿಭಿನ್ನ ಉತ್ಸವಗಳನ್ನು ಆಚರಿಸಲಾಗುತ್ತದೆ. ಪಂಜಾಬ್‍ನಿಂದ ತಮಿಳುನಾಡಿನವರೆಗೆ. ಗುಜರಾತ್‍ನಿಂದ ಅಸ್ಸಾಂವರೆಗೆ ಜನರು ವಿಭಿನ್ನ ಉತ್ಸವಗಳನ್ನು ಸಂಭ್ರಮಿಸುತ್ತಾರೆ. ಜನವರಿಯಲ್ಲಿ ಅದ್ದೂರಿಯಾಗಿ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಆಚರಿಸಲಾಗುತ್ತದೆ. ಇವುಗಳನ್ನು ಶಕ್ತಿಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಪಂಜಾಬ್‍ನಲ್ಲಿ ಲೋಹ್ರಿ, ತಮಿಳುನಾಡಿನಲ್ಲಿ ಪೊಂಗಲ್, ಅಸ್ಸಾಂ ನಲ್ಲಿ ಮಾಘ-ಬಿಹು ಆಚರಿಸಲಾಗುತ್ತದೆ. ಈ ಉತ್ಸವಗಳು, ರೈತರ ಸಮೃದ್ಧಿ ಮತ್ತು ಬೆಳೆಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಈ ಉತ್ಸವಗಳು ನಮ್ಮ ಭಾರತದ ಒಗ್ಗಟ್ಟು ಮತ್ತು ಭಾರತದ ವೈವಿಧ್ಯತೆಯನ್ನು ನೆನಪಿಸುತ್ತವೆ. ಪೊಂಗಲ್ ಕೊನೆಯ ದಿನ ಮಹಾನ್ ತಿರುವಳ್ಳುವರ್ ಜಯಂತಿಯನ್ನು ಆಚರಿಸುವ ಸೌಭಾಗ್ಯ ನಮಗೆ ದೊರೆತಿದೆ. ಈ ದಿನ ಮಹಾನ್ ಲೇಖಕ, ವಿಚಾರವಾದಿ, ಸಂತ ತಿರುವಳ್ಳುವರ್ ಅವರಿಗೆ ಮತ್ತು ಅವರ ಜೀವನಕ್ಕೆ ಸಮರ್ಪಿತವಾಗಿದೆ,

ನನ್ನ ಪ್ರಿಯ ದೇಶಬಾಂಧವರೆ, ಇದು 2019 ರ ಕೊನೆಯ ‘ಮನದ ಮಾತು’. 2020 ರಲ್ಲಿ ಮತ್ತೆ ಭೇಟಿಯಾಗೋಣ. ಬನ್ನಿ ಹೊಸ ವರ್ಷ, ಹೊಸ ದಶಕ, ಹೊಸ ಸಂಕಲ್ಪ, ಹೊಸ ಶಕ್ತಿ, ಹೊಸ ಹುರುಪು ಮತ್ತು ಹೊಸ ಉತ್ಸಾಹದೊಂದಿಗೆ ಮುನ್ನಡೆಯೋಣ. ಸಂಕಲ್ಪ ಸಾಕಾರಕ್ಕೆ ಸಾಮಥ್ರ್ಯವನ್ನು ಒಗ್ಗೂಡಿಸೋಣ. ಬಹುದೂರ ಸಾಗಬೇಕಿದೆ. ಬಹಳಷ್ಟು ಮಾಡಬೇಕಿದೆ, ದೇಶವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ. 130 ಕೋಟಿ ನಾಗರಿಕರ ಪ್ರಯತ್ನಗಳ ಬಗ್ಗೆ, ಅವರ ಸಾಮಥ್ರ್ಯದ ಬಗ್ಗೆ, ಅವರ ಸಂಕಲ್ಪದ ಬಗ್ಗೆ, ಅಪಾರ ಶೃದ್ಧೆಯೊಂದಿಗೆ ಬನ್ನಿ ಮುನ್ನಡೆಯೋಣ. ಅನಂತ ಅನಂತ ಧನ್ಯವಾದಗಳು ಮತ್ತು ಅನಂತ ಶುಭಹಾರೈಕೆಗಳು

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಡಿಸೆಂಬರ್ 2024
December 22, 2024

PM Modi in Kuwait: First Indian PM to Visit in Decades

Citizens Appreciation for PM Modi’s Holistic Transformation of India