ನಾನು ಈ (ಸಿಯೋಲ್ ಪೀಸ್) ಪ್ರಶಸ್ತಿಗೆ 1.3 ಶತಕೋಟಿ ಜನರಿಗೆ ಅರ್ಪಿಸುತ್ತೇನೆ. ಅವರಿಗೆ ಸೇವೆ ಮಾಡಲು ನನಗೆ ಅವಕಾಶ ನೀಡಿದೆ: ಪ್ರಧಾನಿ ಮೋದಿ
ಭಾರತದ ಅಭಿವೃದ್ಧಿಯ ಗಾಥೆ ಕೇವಲ ಭಾರತದ ಜನತೆಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಉತ್ತಮವಾದದ್ದು : ಪ್ರಧಾನಿ ಮೋದಿ
ಭಯೋತ್ಪಾದಕ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಲ್ಲಾ ಬಲ ಚಿಂತನೆಯ ರಾಷ್ಟ್ರಗಳು ಕೈಗಳನ್ನು ಸೇರಲು ಸಮಯ ಬಂದಿದೆ: ಪ್ರಧಾನಿ ಮೋದಿ

ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶ್ರೀ ಕಾನ್ ಈ ಹ್ಯೋಕ್

ರಾಷ್ಟ್ರೀಯ ಸಭೆಯ ವಕ್ತಾರ ಶ್ರೀ ಮೂನ್ ಹಿ – ಸಾಂಗ್

ಸಾಂಸ್ಕೃತಿಕ ಸಚಿವರಾದ ಶ್ರೀ ಡೊ ಜೊಂಗ್ – ಹಾನ್

ವಿಶ್ವ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಾನ್ ಕಿ ಮೂನ್ ಮತ್ತು ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನದ ಇತರ ಸದಸ್ಯರು

ಗಣ್ಯರೇ

ಮಹಿಳೆಯರೇ ಮತ್ತು ಮಹನೀಯರೇ

ಸ್ನೇಹಿತರೇ ,

ನಮಸ್ಕಾರ!

आन्योंग

हा-सेयो

योरा-बुन्न

ಎಲ್ಲರಿಗೂ ಶುಭಾಷಯಗಳು

ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಪಡೆಯುತ್ತಿರುವುದಕ್ಕೆ ನನ್ನ ಹೃದಯ ತುಂಬಿ ಬಂದಿದೆ. ಈ ಪ್ರಶಸ್ತಿ ವೈಯಕ್ತಿಕವಾಗಿ ನನಗೆ ಸಂಬಂಧಿಸಿದ್ದಲ್ಲ, ಸಂಪೂರ್ಣ ಭಾರತೀಯರಿಗೆ ಸಲ್ಲುವಂಥದ್ದು ಎಂದು ನಾನು ನಂಬಿದ್ದೇನೆ. 1.3 ಶತಕೋಟಿ ಭಾರತೀಯರ ಶಕ್ತಿ ಮತ್ತು ಕೌಶಲ್ಯದ ಬಲದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರತ ಸಾಧಿಸಿದ ಯಶಸ್ಸಿಗೆ ಸಂದ ಗೌರವ ಇದಾಗಿದೆ. ಆದ್ದರಿಂದ ಅವರ ಪರವಾಗಿ ನಾನು ನಮ್ರತೆಯಿಂದ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಪ್ರಶಸ್ತಿ, वसुधैव कुटुम्बकम ಎಂಬ ಸಂದೇಶವನ್ನು ನೀಡಿದ ತತ್ವಶಾಸ್ತ್ರದ ಮನ್ನನೆಯಾಗಿದೆ. ಇದರ ಅರ್ಥ ಸಂಪೂರ್ಣ ವಿಶ್ವ ಒಂದು ಕುಟುಂಬವಿದ್ದಂತೆ. महाभारत ದಲ್ಲಿ ಯುದ್ಧ ಸಮಯದಲ್ಲಿ ಭಗವಾನ್ ಕೃಷ್ಣ ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದಂತೆ ಯುದ್ಧ ಭೂಮಿಯಲ್ಲೂ ಶಾಂತಿ ಸಂದೇಶವನ್ನು ನೀಡಿದುದಕ್ಕಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯು

ॐ द्यौ: शान्तिरन्तरिक्षं शान्ति, पृथ्वी शान्तिराप: शान्तिरोषधय: शान्ति:।
वनस्पतय: शान्तिर्विश्वे देवा: शान्तिर्ब्रह्म शान्ति,सर्वँ शान्ति:, शान्तिरेव शान्ति, सा मा शान्तिरेधि॥
ॐ शान्ति: शान्ति: शान्ति:॥

ಎಂದು ನಮಗೆ ಕಲಿಸಿದ ಭೂಮಿಗೆ ಸಲ್ಲುವಂಥದ್ದು.

ಅಂದರೆ:

ಆಕಾಶ-ಅಂತರಿಕ್ಷದೆಲ್ಲೆಡೆ ಶಾಂತಿ ನೆಲೆಸಲಿ

ಪ್ರಕೃತಿಯಲ್ಲಿ, ನಮ್ಮ ಗ್ರಹದ ಮೇಲೆಲ್ಲಾ

ಶಾಶ್ವತವಾಗಿ ಶಾಂತಿ ನೆಲೆಸಲಿ

ತಮ್ಮ ಅಭಿಲಾಷೆಗಳನ್ನೆಲ್ಲಾ ಬದಿಗಿಟ್ಟು, ಸಾಮಾಜಿಕ ಒಳಿತಿಗಾಗಿ ಶ್ರಮಿಸುತ್ತಿರುವವರಿಗಾಗಿ ಈ ಪ್ರಶಸ್ತಿ. ಮಹಾತ್ಮ ಗಾಂಧಿಯವರ 150ನೇ ಜನ್ಮ ಜಯಂತಿಯನ್ನು ಆಚರಿಸಿಕೊಳ್ಳುತ್ತಿರುವ ಈ ವರ್ಷ ನನಗೆ ಪ್ರಶಸ್ತಿ ದೊರೆಯುತ್ತಿರುವುದು ನನಗೆ ಅಪಾರ ಗೌರವವನ್ನು ತಂದುಕೊಟ್ಟಿದೆ. ನಾನು 200 ಸಾವಿರ ಡಾಲರ್ ಗಳು ಅಂದರೆ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿಗಳ ಪ್ರಶಸ್ತಿಯ ಗೌರವ ಧನವನ್ನು ನಮಾಮಿ ಗಂಗೆ ಯೋಜನೆಗೆ ನಿಧಿಗೆ ನೀಡ ಬಯಸುತ್ತೇನೆ, ಇದರಿಂದ, ಭಾರತದ ಜನರು ಪವಿತ್ರ ಎಂದು ಪರಿಗಣಿಸುವ ನದಿಯನ್ನು ಶುದ್ಧೀಕರಣಗೊಳಿಸುವುದು ಮಾತ್ರವಲ್ಲ, ನನ್ನ ದೇಶದ ಲಕ್ಷಾಂತರ ಪುರುಷರು ಮತ್ತು ಮಹಿಳೆಯರಿಗೆ ಆರ್ಥಿಕ ಜೀವನೋಪಾಯದ ಮಾರ್ಗವಾಗಿದೆ.

ಸ್ನೇಹಿತರೇ,

1988 ರಲ್ಲಿ ಸಿಯೋಲ್ ನಲ್ಲಿ ನಡೆದ 24 ನೇ ಬೇಸಿಗೆ ಒಲಿಂಪಿಕ್ಸ್ ನ ಯಶಸ್ಸು ಮತ್ತು ಉತ್ಸಾಹದ ಸಂಕೇತವಾಗಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ಆ ಪಂದ್ಯಾವಳಿಯನ್ನು ಚೆನ್ನಾಗಿ ನೆನಪಿಟ್ಟುಕೊಂಡಿದೆ. ಏಕೆಂದರೆ ಅದು ಮಹಾತ್ಮಾ ಗಾಂಧಿಯವರ ಜಯಂತಿಯಂದು ಮುಕ್ತಾಯಗೊಂಡಿತ್ತು. ಆ ಪಂದ್ಯಾವಳಿಗಳು ಕೋರಿಯಾದ ಸಂಸ್ಕೃತಿಯ ಅತ್ಯುತ್ತಮ ಪ್ರದರ್ಶನ, ಕೋರಿಯಾದ ಆತಿಥ್ಯದ ಔದಾರ್ಯವನ್ನು ಮತ್ತು ಕೋರಿಯಾದ ಆರ್ಥಿಕತೆಯ ಯಶಸ್ಸನ್ನು ಪ್ರದರ್ಶಿಸಿದವು. ಜಾಗತಿಕ ರಣರಂಗದಲ್ಲಿ ಹೊಸ ಕ್ರೀಡಾ ಉತ್ಸಾಹದ ಅಲೆಯ ಆರಂಭವನ್ನು ಅವು ಹುಟ್ಟು ಹಾಕಿದವು ಎಂಬುದನ್ನು ಮರೆಯಲಾಗದು. ಆದರೆ ವಿಶ್ವದ ಇತಿಹಾಸದಲ್ಲಿ ಈ ಕ್ರೀಡೆಗಳು ಒಂದು ಮಹತ್ವದ ಮೈಲಿಗಲ್ಲಾಗಿದ್ದವು. ಜಾಗತಿಕ ಮಟ್ಟದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿದ್ದ ಸಂದರ್ಭದಲ್ಲಿ 1988 ರ ಒಲಿಂಪಿಕ್ಸ್ ಆಯೋಜಿಸಲಾಗಿತ್ತು. ಆಗ ತಾನೇ ಇರಾನ್ ಇರಾಕ್ ಯುದ್ಧ ಮುಕ್ತಾಯಗೊಂಡಿತ್ತು. ಅಫ್ಘಾನಿಸ್ತಾನದ ಪರಿಸ್ಥಿತಿಗೆ ಸಂಬಂಧಿಸಿದಂತೆ ಆ ವರ್ಷದ ಆರಂಭದಲ್ಲಿ ಜಿನಿವಾ ಒಪ್ಪಂದಕ್ಕೆ ಸಹಿ ಹಾಕಲ್ಪಟ್ಟಿತ್ತು. ಶೀತಲ ಸಮರ ಕೊನೆಗೊಳ್ಳುತ್ತಿತ್ತು, ಮತ್ತು ಒಂದು ಹೊಸ ಸುವರ್ಣ ಯುಗ ಉದಯಿಸುತ್ತದೆ ಎಂಬ ಮಹತ್ತರ ಭರವಸೆಗಳು ಮೂಡಿಬಂದಿದ್ದವು. 1988 ರ ಜಾಗತಿಕ ಬಡತನ ನಿಧಾನವಾಗಿ ಕುಸಿಯುತ್ತಿದ್ದುದಕ್ಕೆ ಹೋಲಿಸಿದರೆ ಇಂದು ಜಗತ್ತು ಹಲವಾರು ವಿಷಯಗಳಲ್ಲಿ ಉತ್ತಮವೆನಿಸಿದೆ. ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದ ಪರಿಣಾಮಗಳು ಸುಧಾರಿಸುತ್ತಿವೆ. ಆದರೂ ಹಲವಾರು ಜಾಗತಿಕ ಸವಾಲುಗಳು ಕಾಡುತ್ತಿದ್ದು ಹಾಗೇ ಉಳಿದಿವೆ. ಕೆಲವು ಹಳೆಯವಾದರೆ ಕೆಲವು ಹೊಸದು. ಸಿಯೋಲ್ ಒಲಿಂಪಿಕ್ಸ್ ಆರಂಭವಾಗುವ ಕೆಲ ತಿಂಗಳುಗಳ ಮೊದಲು ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಹವಾಮಾನ ಬದಲಾವಣೆ ಕುರಿತು ಎಚ್ಚರಿಕೆ ಗಂಟೆ ಮೊಳಗಲಾರಂಭಿಸಿದ್ದವು. ಇಂದು ಇದನ್ನು ಮನುಕುಲಕ್ಕೆ ದೊಡ್ಡ ಅಪಾಯವೆಂದು ಪರಿಗಣಿಸಲಾಗುತ್ತಿದೆ. ಸಿಯೋಲ್ ಒಲಿಂಪಿಕ್ಸ ಗಿಂತ ಕೆಲ ವಾರಗಳ ಮುಂಚೆ ಅಲ್ ಖೈದಾ ಎಂಬ ಸಂಘಟನೆ ಹುಟ್ಟಿಕೊಂಡಿತ್ತು. ಇಂದು ಉಗ್ರವಾದ ಮತ್ತು ಭಯೋತ್ಪಾದನೆ ಜಾಗತೀಕರಣಗೊಂಡಿವೆ ಹಾಗೂ ವಿಶ್ವ ಶಾಂತಿ ಮತ್ತು ಭದ್ರತೆಗೆ ದೊಡ್ಡ ಅಪಾಯವಾಗಿ ಪರಿಣಮಿಸಿವೆ. ಮತ್ತು ವಿಶ್ವಾದ್ಯಂತದ ಲಕ್ಷಾಂತರ ಜನರು ಇಂದಿಗೂ ಉತ್ತಮ ಆಹಾರ, ವಸತಿ, ಆರೋಗ್ಯ ರಕ್ಷಣೆ, ನೈರ್ಮಲ್ಯ, ವಿದ್ಯುತ್, ಇದೆಲ್ಲಕ್ಕೂ ಮಿಗಿಲಾಗಿ ಆತ್ಮ ಗೌರವದಿಂದ ವಂಚಿತರಾಗಿದ್ದಾರೆ. ಇನ್ನೂ ಬಹಳಷ್ಟು ಕೆಲಸ ಮಾಡಬೇಕಿದೆ ಎಂಬುದು ಇದರಿಂದ ಗೋಚರಿಸುತ್ತದೆ. ಕಠಿಣ ಪರಿಶ್ರಮದಿಂದಲೇ ನಾವು ಎದುರಿಸುತ್ತಿರುವ ಕಷ್ಟಗಳಿಗೆ ಪರಿಹಾರ ಸಾಧ್ಯ. ಮತ್ತು ಭಾರತ ತನ್ನ ಪಾತ್ರವನ್ನು ನಿಭಾಯಿಸುತ್ತಿದೆ. ಮತ್ತು ಭಾರತ ತನ್ನ ಪಾತ್ರವನ್ನು ನಿಭಾಯಿಸುತ್ತಿದೆ. ಮಾನವತೆಯ 1/6 ಭಾಗವನ್ನು ನಿರ್ಮಿಸುವ ಭಾರತೀಯ ಜನರ ಸೌಖ್ಯ ವೃದ್ಧಿಗೆ ನಾವು ಶ್ರಮಿಸುತ್ತಿದ್ದೇವೆ. ಶಕ್ತಿಯುತ ಆರ್ಥಿಕ ಮೂಲಾಧಾರಗಳೊಂದಿಗೆ ಭಾರತ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಹುದೊಡ್ಡ ಆರ್ಥಿಕತೆಯಾಗಿದೆ. ಇದು ನಾವು ಕೈಗೊಂಡ ಪ್ರಮುಖ ಆರ್ಥಿಕ ಬದಲಾವಣೆಗಳಿಂದ ಸಾಧ್ಯವಾಗಿದೆ. ಮೇಕ್ ಇನ್ ಇಂಡಿಯಾ, ಕೌಶಲ್ಯ ಭಾರತ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ನಂತಹ ಫ್ಲ್ಯಾಗ್ ಶಿಪ್ ಉಪಕ್ರಮಗಳ ಮೂಲಕ ಸಾಮಾಜಿಕ –ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲಾಗಿದೆ. ಹಣಕಾಸು ಸೇರ್ಪಡೆಗೆ, ಸಾಲದ ಲಭ್ಯತೆಗೆ, ಡಿಜಿಟಲ್ ವ್ಯವಹಾರಕ್ಕೆ, ಕೊನೇ ಮೈಲಿಯವರೆಗಿನ ಸಂಪರ್ಕ ಮತ್ತು ದೇಶಾದ್ಯಂತ ಅಭಿವೃದ್ಧಿ ಪಸರಿಸಲಿ ಮತ್ತು ಭಾರತದ ಎಲ್ಲ ನಾಗರಿಕರಿಗೆ ಪುಷ್ಟಿ ನೀಡುವ ದೃಷ್ಟಿಇಯಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಬೆಂಬಲಿಸುವುದು ಮುಂತಾದ ವಿಷಯಗಳತ್ತ ಹೆಚ್ಚಿನ ಗಮನಹರಿಸಲಾಗಿದೆ. ಸ್ವಚ್ಛ ಭಾರತ ಅಭಿಯಾನ ಭಾರತವನ್ನು ಸ್ವಚ್ಛಗೊಳಿಸುತ್ತಿದೆ. 2014ರಲ್ಲಿ ಸುಮಾರು 38% ನಷ್ಟು ನೈರ್ಮಲ್ಯ ವ್ಯಾಪ್ತಿಯೊಂದಿಗೆ ಆರಂಭಿಸಿ ಇಂದು 98% ತಲುಪಿದೆ. ಸ್ವಚ್ಛ ಅಡುಗೆ ಅನಿಲದ ಬಳಕೆಗೆ ಅನುವು ಮಾಡಿಕೊಟ್ಟ ಉಜ್ವಲಾ ಯೋಜನೆಯಿಂದ ಗ್ರಾಮೀಣ ಮಹಿಳೆಯರ ಆರೋಗ್ಯ ಸುಧಾರಿಸುತ್ತಿದೆ. ಆಯುಷ್ಮಾನ್ ಭಾರತ 500 ಶತಕೋಟಿ ಬಡವರು ಮತ್ತು ದುರ್ಬಲರಿಗೆ ಆರೋಗ್ಯ ರಕ್ಷಣೆ ಮತ್ತು ವಿಮೆ ಸೌಲಭ್ಯ ಒದಗಿಸುತ್ತಿದೆ. ಈ ಉಪಕ್ರಮಗಳ ಮೂಲಕ ಮತ್ತು ಇನ್ನೂ ಹಲವಾರು ಕ್ರಮಗಳ ಮೂಲಕ ನಾವು ಐತಿಹಾಸಿಕ ಅಭಿವೃದ್ಧಿ ಸಾಧಿಸಿದ್ದೇವೆ ಮತ್ತು ವಿಶ್ವ ಸಂಸ್ಥೆಯ ಸಮರ್ಥನೀಯ ಅಭಿವೃದ್ಧಿಯ ಗುರಿಯತ್ತ ದಾಪುಗಾಲಿಕ್ಕಿದ್ದೇವೆ. ಈ ಎಲ್ಲ ಪ್ರಯತ್ನಗಳಲ್ಲಿ ನಾವು ಕಂಡ ಕಡುಬಡವನ ಮತ್ತು ಅಶಕ್ತ ವ್ಯಕ್ತಿಯ ಮುಖವನ್ನು ನೆನೆದು, ನಾವು ಕೈಗೊಳ್ಳುವ ಕ್ರಮ ಆ ವ್ಯಕ್ತಿಗೆ ಯಾವುದೇ ರೀತಿ ಉಪಯುಕ್ತವಾಗಲಿದೆಯೇ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳಬೇಕು ಎಂಬ ಮಹಾತ್ಮಾ ಗಾಂಧೀಜಿಯವರ ಬೋಧನೆಯನ್ನೇ ಮಾರ್ಗದರ್ಶನವಾಗಿ ಅನುಸರಿಸುತ್ತಿದ್ದೇವೆ.

ಸ್ನೇಹಿತರೆ,

ಭಾರತದ ಅಭಿವೃದ್ಧಿಯ ಗಾಥೆ ಕೇವಲ ಭಾರತದ ಜನತೆಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಉತ್ತಮವಾದದ್ದು. ನಾವು ಅತ್ಯಂತ ಹೆಚ್ಚು ಸಂಪರ್ಕ ಹೊಂದಿದ ಪ್ರಪಚದಲ್ಲಿ ವಾಸಿಸುತ್ತಿದ್ದೇವೆ. 3 ನೇ ಬೃಹತ್ ಆರ್ಥಿಕತೆಯ ದೇಶವಾಗಿ ನಮ್ಮ ಅಭಿವೃದ್ಧಿ ಮತ್ತು ಸಮೃದ್ಧಿ ಜಾಗತಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕೈಜೋಡಿಸುವುದು ಅನಿವಾರ್ಯ. ನಾವು ಶಾಂತಿಯುತ, ಸ್ಥಿರ ಮತ್ತು ಆರ್ಥಿಕವಾಗಿ ಅಂತರ್ ಸಂಯೋಜಿತ ವಿಶ್ವ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ. ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯನಾಗಿರುವ ಭಾರತ ಹವಾಮಾನ ಬದಲಾವಣೆಯ ವಿರುದ್ಧ ನಮ್ಮ ಸಾಮೂಹಿಕ ಹೋರಾಟದಲ್ಲಿ ಮುಂಚೂಣಿ ರಾಷ್ಟ್ರವಾಗಿದೆ. ಐತಿಹಾಸಿಕವಾಗಿ ಕಡಿಮೆ ಇಂಗಾಲದ ಡೈ ಆಕ್ಸೈಡ್ ಹೊರ ಸೂಸುವಿಕೆ ಪ್ರಮಾಣ ಹೊಂದಿದ್ದರೂ ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಅರಣ್ಯ ಪ್ರದೇಶ ವ್ಯಪ್ತಿ ಹೆಚ್ಚಳ, ಸಾಂಪ್ರದಾಯಿಕ ಕಾರ್ಬನ್ ಇಂಧನಗಳನ್ನು ಬದಲಿಸಿ ನವೀಕರಿಸಬಹುದಾದ ಇಂಧನಗಳ ಸರಬರಾಜಿನೊಂದಿಗೆ ಹೀಗೆ ಹಲವು ಕ್ರಮಗಳ ರಾಷ್ಟ್ರೀಯ ಕ್ರಿಯಾ ಯೋಜನೆ ಮೂಲಕ ದೇಶೀಯ ಮಟ್ಟದಲ್ಲಿ ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿಯನ್ನು ಸ್ಥಾಪಿಸಲು ನಾವು ಸಮಾನ ಮನಸ್ಕ ರಾಷ್ಟ್ರಗಳೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಇದು ಪಳಿಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಸ್ವಚ್ಛ ಮತ್ತು ಅನಿಯಮಿತ ಸೌರ ಶಕ್ತಿ ಬಳಕೆಯ ಗುರಿ ಹೊಂದಿದೆ. ವಿಶ್ವ ಸಂಸ್ಥೆಯ ಶಾಂತಿ ಸಹಕಾರ ಕಾರ್ಯಾಚರಣೆಗಳಿಗಾಗಿ ನಾವು ಅತಿದೊಡ್ಡ ಕೊಡುಗೆ ನೀಡುವ ದೇಶಗಳ ಗುಂಪಿಗೆ ಸೇರಿದ್ದೇವೆ. ಮತ್ತು ನಾವು ಕೋರಿಯನ್ ಪರ್ಯಾಯ ದ್ವೀಪದಲ್ಲಿ ಶಾಂತಿ ನೆಲೆಸುವಂತೆ ಮಾಡಲು ನಾವು ಕೊಡುಗೆ ನೀಡಿದ್ದಕ್ಕೆ ಹೆಮ್ಮೆಪಡುತ್ತೇವೆ. ಅವಶ್ಯಕತೆಯಿರುವ ದೇಶಗಳಿಗೆ ನಾವು ಸಹಾಯ ಹಸ್ತ ಚಾಚಿದ್ದೇವೆ ಮತ್ತು ಮಾನವೀಯತೆ ಕೆಲಸಗಳಲ್ಲಿ ಹಾಗೂ ವಿಪತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಚುರುಕಾಗಿ ಪಾಲ್ಗೊಂಡಿದ್ದೇವೆ. ಸಂಘರ್ಷದಾಯಕ ವಲಯಗಳಲ್ಲಿ ಕೇವಲ ಭಾರತದಲ್ಲಷ್ಟೇ ಅಲ್ಲ ಬೇರೆ ದೇಶಗಳ ರಾಷ್ಟ್ರೀಯ ವಲಯದಲ್ಲೂ ಕಾರ್ಯಾಚರಣೆ ಕೈಗೊಂಡು ಸುರಕ್ಷತೆ ಒದಗಿಸಿದ್ದೇವೆ. ನಾವು ಇತರ ಅಭಿವೃದ್ಧಿಶೀಲ ರಾಷ್ಟ್ರಗಳ ಸಕ್ರೀಯ ಮತ್ತು ಪರಿಗಣಿತ ಅಭಿವೃದ್ಧಿ ಪಾಲುದಾರ ರಾಷ್ಟ್ರವಾಗಿ ಅವರ ಭೌತಿಕ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಮಾರ್ಗದರ್ಶನ ಸೂತ್ರಗಳನ್ನು ನೀಡಿ ನೆರವಾಗುತ್ತಿದ್ದೇವೆ. ಈ ಪ್ರಯತ್ನಗಳ ಮೂಲಕ ಎಲ್ಲರೂ ಜಾಗತೀಕರಣಗೊಂಡ ಮತ್ತು ಆಂತರಿಕ ಸಂಪರ್ಕ ಹೊಂದಿದ ವಿಶ್ವದ ಲಾಭಗಳು ಎಲ್ಲರಿಗೂ ದೊರೆಯುತ್ತಿವೆ ಎಂಬುದನ್ನು ಖಾತ್ರಿಪಡಿಸುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಸರ್ಕಾರ ಅಂತಾರಾಷ್ಟ್ರೀಯ ಹೊಂದಾಣಿಕೆಯನ್ನು ನವೀಕರಿಸಿ ಖಂಡಗಳ ಉದ್ದಗಲಕ್ಕೂ ಹೊಸ ಪಾಲುದಾರಿಕೆಗೆ ಮುಂದಾಗಿದೆ. ಖಂಡಗಳ ಉದ್ದಗಲಕ್ಕೂ ಹೊಸ ಪಾಲುದಾರಿಕೆಯನ್ನು ಸಂವಹನವನ್ನು ನವೀಕರಿಸಿದೆ. ಪೂರ್ವ ಏಷ್ಯಾ ಗೆ ಸಂಬಂಧ ಪಟ್ಟಂತೆ, ರಿಪಬ್ಲಿಕ್ ಆಫ್ ಕೊರಿಯಾ ಸೇರಿದಂತೆ ನಾವು ಈ ಪ್ರಾಂತ್ಯದ ಎಲ್ಲ ದೇಶಗಳೊಂದಿಗಿನ ಸಂಬಂಧವನ್ನು ಪೂರ್ವ ನೀತಿ ಅಧಿನಿಯಮದೊಂದಿಗೆ ಪುರ್ನ ರಚಿಸಿದ್ದೇವೆ. ರಾಷ್ಟ್ರಪತಿ ಮೂನ್ ರವರ ಹೊಸ ದಕ್ಷಿಣ ನೀತಿಯಲ್ಲಿ ಈ ಅಂಶಗಳು ಪ್ರತಿಧ್ವನಿಸುವುದನ್ನು ನಾನು ಕೇಳಲು ನನಗೆ ಬಹಳ ಹರ್ಷ ತಂದಿದೆ.

ಸ್ನೇಹಿತರೇ,

ಅನಾದಿ ಕಾಲದಿಂದಲೂ ಭಾರತ ಶಾಂತಿಯ ನಾಡಾಗಿದೆ. ಸಾವಿರಾರು ವರ್ಷಗಳಿಂದಲೂ ಭಾರತದ ಜನರು ಶಾಂತಿ ಮತ್ತು ಸಾಮರಸ್ಯದಿಂದ ಸಹ ಬಾಳ್ವೆಯ ಪರಿಕಲ್ಪನೆಯನ್ನು ಪಾಲಿಸುತ್ತಾ ಬಂದವರು. ನೂರಾರು ಭಾಷೆಗಳು ಮತ್ತು ಆಡುಭಾಷೆಗಳು, ಹಲವಾರು ರಾಜ್ಯಗಳು ಮತ್ತು ಪ್ರಮುಖ ಧರ್ಮಗಳನ್ನು ಒಳಗೊಂಡ ಭಾರತ, ವಿಶ್ವದ ವೈವಿಧ್ಯಮಯ ರಾಷ್ಟ್ರಗಳಲ್ಲಿ ಒಂದಾಗಿರುವುದಕ್ಕೆ ಹೆಮ್ಮೆಯಾಗಿರುತ್ತದೆ. ನಮ್ಮ ನಾಡಿನಲ್ಲಿ ಎಲ್ಲಾ ನಂಬಿಕೆಗಳು, ವಿಶ್ವಾಸ ಮತ್ತು ಎಲ್ಲಾ ಸಮುದಾಯದವರೂ ಒಗ್ಗೂಡಿ ಅಭಿವೃದ್ಧಿ ಹೊಂದಬಹುದು ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ. ನಮ್ಮ ಸಮಾಜ ಕೇವಲ ತಾಳ್ಮೆಯಿಂದ ಮಾತ್ರವಲ್ಲ ಬದಲಿಗೆ ತಾರತಮ್ಯಗಳು ಮತ್ತು ಬಗೆಬಗೆಯ ಸಂಸ್ಕೃತಿಗಳನ್ನೂ ಆಚರಿಸುತ್ತೇವೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ.

ಸ್ನೇಹಿತರೇ,

ಕೊರಿಯಾದಂತೆ, ಭಾರತವೂ ಸಹ, ಗಡಿಭಾಗದಲ್ಲಿ ಆಗುವ ಕಲಹದ ನೋವನ್ನು ಅನುಭವಿಸಿದೆ. ಆಗಾಗ ನಡೆಯುತ್ತಿರುವ ಗಡಿಭಾಗದ ಭಯೋತಪಾದನಾ ದಾಳಿಗಳಿಂದಾಗಿ, ಶಾಂತಿಯುತ ಅಭಿವೃದ್ಧಿಯ ಕಡೆಗಿನ ನಮ್ಮ ಪ್ರಯತ್ನಗಳು ಕುಂಟುತಗೊಳ್ಳುತ್ತಿವೆ. ಕಳೆದ 40 ವರ್ಷಗಳಿಂದ ಭಾರತ ಗಡಿಭಾಗದ ಭಯೋತಪಾದನೆಗೆ ಬಲಿಯಾಗುತ್ತಿದ್ದರೆ, ಇಂದು ಎಲ್ಲಾ ರಾಷ್ಟ್ರಗಳೂ ಗಡಿರೇಖೆಯನ್ನು ಗೌರವಿಸದ ಈ ಗಂಭೀರ ಅಪಾಯವನ್ನು ಎದುರಿಸುತ್ತಿವೆ. ಭಯೋತ್ಪಾದಕ ಜಾಲಗಳು ಮತ್ತು ಅವರ ಹಣಕಾಸು, ಅವರ ಸರಬರಾಜಿನ ವ್ಯವಸ್ಥೆಗಳು, ಭಯೋತ್ಪಾದಕ ಸಿದ್ಧಾಂತ ಮತ್ತು ಪ್ರಚಾರಗಳಿಗೆ ತಿರುಗೇಟು ನೀಡಿ ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮಾನವೀಯತೆಯಲ್ಲಿ ನಂಬಿಕೆಯಿರುವವರೆಲ್ಲಾ ಒಂದಾಗಿ ಕೈಜೋಡಿಸುವ ಕಾಲ ಬಂದಿದೆ. ಹೀಗೆ ಮಾಡುವುದರಿಂದ ಮಾತ್ರ ನಾವು ದ್ವೇಷವನ್ನು ಸೌಹಾರ್ದತೆಗೆ / ಸಾಮರಸ್ಯವಾಗಿ; ವಿನಾಶವನ್ನು ಅಭಿವೃದ್ಧಿಯಾಗಿ; ಮತ್ತು ಹಿಂಸಾಚಾರ ಹಾಗೂ ಸೇಡಿನಿಂದ ತುಂಬಿದ ಭೂದೃಶ್ಯಗಳನ್ನು ಶಾಂತಿ ಸಂದೇಶ ತರುವ ಅಂಚೆಯನ್ನಾಗಿ ಬದಲಿಸಬಹುದು.

ಸ್ನೇಹಿತರೇ,

ಕಳೆದ ವರ್ಷ ಕೊರಿಯಾದ ಪರ್ಯಾಯ ದ್ವೀಪದಲ್ಲಿ ಶಾಂತಿಗಾಗಿ ಮಾಡಲಾದ ಪ್ರಗತಿ ಮನಮುಟ್ಟುವಂಥದ್ದು. ಡಿ.ಪಿ.ಆರ್.ಕೆ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ನಡುವಿನ ಅವಿಶ್ವಾಸ ಮತ್ತು ಸಂಶಯಗಳ ಪರಂಪರೆಯನ್ನು ಮರಿಯಲು ಹಾಗೂ ಅವರಿಬ್ಬರನ್ನೂ ಒಂದೆಡೆ ಶಾಂತಿಯುತ ಮಾತುಕತೆ ನಡೆಸಲು ಒಗ್ಗೂಡಿಸಲು, ರಾಷ್ಟ್ರಪತಿ ಮೂನ್ ರವರು ನಿರ್ವಹಿಸಿದ ಪಾತ್ರ ಅಪಾರ ಹಾಗೂ ಎಲ್ಲ ಪ್ರಶಂಸೆಗಳಿಗೂ ಅವರು ಅರ್ಹರಾಗಿದ್ದಾರೆ. ಇದೇನೂ ಚಿಕ್ಕ ಸಾಧನೆಯಲ್ಲ. ಎರಡೂ ಕೊರಿಯಾಗಳು ಹಾಗೂ ಅಮೆರಿಕಾ ಮತ್ತು ಡಿ.ಪಿ.ಆರ್.ಕೆ ನಡುವಿನ ಮಾತೂಕತೆಯ ಪ್ರಕ್ರಿಯೆಗೆ ನಮ್ಮ ಸರ್ಕಾರ ಬಲವಾದ ಬೆಂಬಲ ಸೂಚಿಸುತ್ತದೆ ಎಂದು ನಾನು ಪುನರುಚ್ಛರಿಸಲು ಬಯಸುತ್ತೇನೆ.

ಕೊರಿಯಾದ ಜನಪ್ರಿಯ ಗಾದೆ ಮಾತಿನಂತೆ:

ಶಿಚಾಗಿ ಭನಿಡಾ

“ಒಳ್ಳೆಯ ಆರಂಭ ಅರ್ಧ ಯುದ್ಧ ಗೆದ್ದಂತೆ”

ಕೊರಿಯಾ ಜನರ ಸತತ ಪ್ರಯತ್ನಗಳಿಂದ, ಕೊರಿಯಾದ ಪರ್ಯಾಯ ದ್ವೀಪದಲ್ಲಿ ಶಾಂತಿಗಾಗಿ ಶೀಘ್ರದಲ್ಲೇ ಶಾಂತಿ ನೆಲೆಸಲಿದೆ ಎಂಬ ದೃಢವಾದ ನಂಬಿಕೆ ನನಗಿದೆ. ಸ್ನೇಹಿತರೇ, 1988 ರ ಒಲಂಪಿಕ್ಸ್ ನ ಧ್ಯೇಯ ಹಾಡಿನಿಂದ ಮುಕ್ತಾಯಗೊಳಿಸಲು ಬಯಸುತ್ತೇನೆ ಏಕೆಂದರೆ, ಅದು ನಮ್ಮೆಲ್ಲರಿಗೂ ಉತ್ತಮ ನಾಳೆಯನ್ನು ತರುವಂಥ ಭರವಸೆಯ ಸ್ಫೂರ್ತಿಯನ್ನು ನಿಖರವಾಗಿ ವ್ಯಕ್ತಪಡಿಸುತ್ತದೆ. ಕೈ-ಕೈ ಜೋಡಿಸಿ, ನಾವು ಭೂಮಿಯ ಎಲ್ಲೆಡೆ ನಿಲ್ಲುವೆವು, ನಾವು ಈ ವಿಶ್ವವನ್ನೇ, ಜೀವಿಸಲು ಉತ್ತಮ ತಾಣವಾಗಿಸುವೆವು.

ಗಂಸಾ ಹಮ್ನೀದಾ!

ಧನ್ಯವಾದಗಳು.

ಅನಂತ ಅನಂತ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi