ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಅಧ್ಯಕ್ಷತೆಯಲ್ಲಿ 2020ರ ನವೆಂಬರ್ 17ರಂದು ವರ್ಚುವಲ್ ರೂಪದಲ್ಲಿ ನಡೆದ 12ನೇ ಬ್ರಿಕ್ಸ್ ಶೃಂಗಸಭೆಯ ಭಾರತದ ಪಾಲ್ಗೊಳ್ಳುವಿಕೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುನ್ನಡೆಸಿದರು. ಈ ಶೃಂಗಸಭೆಯ ಘೋಷ ವಾಕ್ಯ “ಜಾಗತಿಕ ಸ್ಥಿರತೆ, ಹಂಚಿಕೆಯ ಭದ್ರತೆ ಮತ್ತು ನಾವಿನ್ಯ ಬೆಳವಣಿಗೆ’’ ಎಂಬುದಾಗಿತ್ತು. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೋನಾರೋ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸೈರಿಲ್ ರಾಮಫೋಸ ಮತ್ತಿತರರು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಪ್ರಧಾನಮಂತ್ರಿ ಅವರು, ಕೋವಿಡ್–19 ಸಾಂಕ್ರಾಮಿಕದ ನಡುವೆಯೂ ರಷ್ಯಾದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಚಟುವಟಿಕೆಗಳಿಗೆ ಚುರುಕು ನೀಡಿರುವ ಅಧ್ಯಕ್ಷ ಪುತಿನ್ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಮತ್ತು ಜಾಗತಿಕ ಆರ್ಥಿಕತೆ ಉತ್ತೇಜನದಲ್ಲಿ ಬ್ರಿಕ್ಸ್ ಅತ್ಯಂತ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಉಲ್ಲೇಖಿಸಿದರು. ಅಲ್ಲದೆ, ಪ್ರಧಾನಿ ಅವರು, ವಿಶ್ವಸಂಸ್ಥೆಯಲ್ಲಿ ವಿಶೇಷವಾಗಿ ಭದ್ರತಾ ಮಂಡಳಿಯಲ್ಲಿ ಹಾಗೂ ಡಬ್ಲೂಟಿಒ, ಐಎಂಎಫ್, ಡಬ್ಲೂಎಚ್ ಒ ಮತ್ತಿತರ ಸಂಸ್ಥೆಗಳಲ್ಲಿ ಸಮಕಾಲೀನ ವಾಸ್ತವತೆಗಳಿಗೆ ಹೊಂದುವಂತೆ ಅಗತ್ಯ ಸುಧಾರಣೆಗಳನ್ನು ತರಬೇಕು ಎಂದು ಪ್ರತಿಪಾದಿಸಿದರು.
ಕೋವಿಡ್–19 ಸಾಂಕ್ರಾಮಿಕ ಎದುರಿಸಲು ಸಹಕಾರ ಅತ್ಯಗತ್ಯ ಎಂದು ಪ್ರತಿಪಾದಿಸಿದ ಪ್ರಧಾನಿ ಅವರು, ಆ ನಿಟ್ಟಿನಲ್ಲಿ ಭಾರತ ಸುಮಾರು 150ಕ್ಕೂ ಅಧಿಕ ರಾಷ್ಟ್ರಗಳಿಗೆ ಅಗತ್ಯ ಔಷಧಗಳನ್ನು ಪೂರೈಕೆ ಮಾಡಿದೆ ಎಂದು ಹೇಳಿದರು. ಭಾರತ 2021ಕ್ಕೆ ಬ್ರಿಕ್ಸ್ ಅಧ್ಯಕ್ಷತೆ ವಹಿಸಲಿದ್ದು, ಆ ವೇಳೆ ಸಾಂಪ್ರದಾಯಿಕ ಔಷಧಗಳು ಮತ್ತು ಡಿಜಿಟಲ್ ಆರೋಗ್ಯ, ಜನ ಜನರ ನಡುವಿನ ಸಂಬಂಧ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ಅಂತರ ಬ್ರಿಕ್ಸ್ ಸಹಕಾರ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ ಎಂದರು.
ಶೃಂಗಸಭೆಯ ಮುಕ್ತಾಯದ ವೇಳೆ, ಬ್ರಿಕ್ಸ್ ನಾಯಕರು “ಮಾಸ್ಕೋ ಘೋಷಣೆ”ಯನ್ನು ಒಪ್ಪಿಕೊಂಡರು.