ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್‌ಕೋಟ್ ಏಮ್ಸ್ ಗೆ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಡಾ.ಹರ್ಷವರ್ಧನ್, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು, ಮಾನವ ಸಂಕುಲವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಲಕ್ಷಾಂತರ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರು ಮತ್ತು ಇತರ ಮುಂಚೂಣಿ ಕೊರೊನಾ ಯೋಧರ ಶ್ರಮವನ್ನು ಸ್ಮರಿಸಿಕೊಂಡರು. ಈ ಸಂಕಷ್ಟದ ಸಮಯದಲ್ಲಿ ವಿಜ್ಞಾನಿಗಳು ಮತ್ತು ಬಡವರಿಗೆ ಆಹಾರವನ್ನು ಪೂರೈಸಿದ ಎಲ್ಲರ ಶ್ರಮವನ್ನು ಅವರು ಶ್ಲಾಘಿಸಿದರು.
ಭಾರತವು ಒಗ್ಗಟ್ಟಾಗಿ ಅತ್ಯಂತ ಕಷ್ಟಕರವಾದ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಬಲ್ಲದು ಎಂಬುದನ್ನು ಈ ವರ್ಷ ತೋರಿಸಿಕೊಟ್ಟಿದೆ ಎಂದು ಪ್ರಧಾನಿ ಹೇಳಿದರು. ಕೊರೊನಾ ವಿರುದ್ಧದ ಪರಿಣಾಮಕಾರಿ ಕ್ರಮಗಳ ಪರಿಣಾಮವಾಗಿ ಭಾರತವು ಉತ್ತಮ ಸ್ಥಾನದಲ್ಲಿದೆ ಮತ್ತು ಕೊರೊನಾ ಸೋಂಕು ಹೊಂದಿದವರ ಜೀವವನ್ನು ಉಳಿಸುವಲ್ಲಿಯೂ ಭಾರತದ ದಾಖಲೆ ಇತರ ದೇಶಗಳಿಗಿಂತ ಉತ್ತಮವಾಗಿದೆ ಎಂದು ಅವರು ಹೇಳಿದರು.
ಭಾರತದಲ್ಲಿ, ಲಸಿಕೆಯನ್ನು ಕುರಿತಂತೆ ಎಲ್ಲ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಭಾರತದ ಲಸಿಕೆ ತಯಾರಿ ಅಂತಿಮ ಹಂತದಲ್ಲಿದೆ, ದೇಶದ ಪ್ರತಿ ಮೂಲೆ ಮೂಲೆಗೂ ಅದು ವೇಗವಾಗಿ ತಲುಪುತ್ತದೆ ಎಂದು ಅವರು ಹೇಳಿದರು. ವಿಶ್ವದ ಅತಿದೊಡ್ಡ ರೋಗನಿರೋಧಕ ಅಭಿಯಾನವನ್ನು ನಡೆಸಲು ಭಾರತ ಸಿದ್ಧತೆ ನಡೆಸಿದೆ ಎಂದು ಅವರು ಹೇಳಿದರು. ಕಳೆದ ವರ್ಷ ನಾವು ಸೋಂಕನ್ನು ತಡೆಗಟ್ಟಲು ಪ್ರಯತ್ನಿಸಿದ ರೀತಿಯಲ್ಲಿಯೇ ಲಸಿಕೆ ನೀಡುವಲ್ಲಿಯೂ ಯಶಸ್ವಿಯಾಗಲು ಒಟ್ಟಾಗಿ ಮುಂದುವರಿಯಬೇಕು ಎಂದು ಅವರು ಕರೆ ನೀಡಿದರು.
ಏಮ್ಸ್ ರಾಜ್‌ಕೋಟ್ ಆರೋಗ್ಯ ಮೂಲಸೌಕರ್ಯ, ವೈದ್ಯಕೀಯ ಶಿಕ್ಷಣವನ್ನು ಹೆಚ್ಚಿಸುತ್ತದೆ ಮತ್ತು ಗುಜರಾತ್‌ನಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು. ಇದು ಸುಮಾರು 5 ಸಾವಿರ ನೇರ ಉದ್ಯೋಗಗಳು ಮತ್ತು ಅನೇಕ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಗುಜರಾತ್‌ನ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಿ, ಕೋವಿಡ್ ವಿರುದ್ಧ ಹೋರಾಡುವ ಮಾರ್ಗವನ್ನು ಗುಜರಾತ್ ತೋರಿಸಿಕೊಟ್ಟಿದೆ ಎಂದು ಹೇಳಿದರು. ಕೊರೊನಾ ಸವಾಲನ್ನು ಗುಜರಾತ್ ಉತ್ತಮವಾಗಿ ನಿಭಾಯಿಸಿದ ಶ್ರೇಯ, ಗುಜರಾತ್‌ನಲ್ಲಿರುವ ಬಲವಾದ ವೈದ್ಯಕೀಯ ಮೂಲಸೌಕರ್ಯಕ್ಕೆ ಸಲ್ಲಬೇಕು ಎಂದು ಅವರು ಹೇಳಿದರು. ವೈದ್ಯಕೀಯ ಕ್ಷೇತ್ರದಲ್ಲಿ ಗುಜರಾತ್‌ನ ಈ ಯಶಸ್ಸಿನ ಹಿಂದೆ ಎರಡು ದಶಕಗಳ ಸತತ ಪ್ರಯತ್ನ, ಸಮರ್ಪಣೆ ಮತ್ತು ಸಂಕಲ್ಪವಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ನಂತರದ ಹಲವು ದಶಕಗಳ ನಂತರವೂ ದೇಶದಲ್ಲಿ ಕೇವಲ 6 ಏಮ್ಸ್ ಸ್ಥಾಪಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 2003 ರಲ್ಲಿ ಅಟಲ್ ಜಿ ಅವರ ಸರ್ಕಾರದ ಅವಧಿಯಲ್ಲಿ, ಇನ್ನೂ 6 ಏಮ್ಸ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಯಿತು. ಕಳೆದ 6 ವರ್ಷಗಳಲ್ಲಿ, 10 ಹೊಸ ಏಮ್ಸ್ ಸ್ಥಾಪನೆಯ ಕೆಲಸ ಪ್ರಾರಂಭವಾಗಿದೆ ಮತ್ತು ಇವುಗಳಲ್ಲಿ ಅನೇಕ ಏಮ್ಸ್ ಗಳನ್ನು ಉದ್ಘಾಟಿಸಲಾಗಿದೆ. ಏಮ್ಸ್ ಜೊತೆಗೆ 20 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.
2014 ಕ್ಕೂ ಮೊದಲು ನಮ್ಮ ಆರೋಗ್ಯ ಕ್ಷೇತ್ರವು ವಿಭಿನ್ನ ದಿಕ್ಕುಗಳು ಮತ್ತು ವಿಧಾನಗಳತ್ತ ಕೆಲಸ ಮಾಡುತ್ತಿತ್ತು ಎಂದು ಪ್ರಧಾನಿ ಒತ್ತಿ ಹೇಳಿದರು. 2014 ರ ನಂತರ, ಆರೋಗ್ಯ ಕ್ಷೇತ್ರವು ಸಮಗ್ರವಾಗಿ ಕೆಲಸ ಮಾಡುತ್ತಿದೆ ಮತ್ತು ರೋಗ ತಡೆಗಟ್ಟುವ ಕಡೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಆಧುನಿಕ ಚಿಕಿತ್ಸಾ ಸೌಲಭ್ಯಗಳಿಗೆ ಸಹ ಆದ್ಯತೆ ನೀಡಲಾಗಿದೆದೆ ಎಂದು ಅವರು ಹೇಳಿದರು. ಸರ್ಕಾರವು ಬಡವರಿಗೆ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಿದೆ ಮತ್ತು ಅದೇ ಸಮಯದಲ್ಲಿ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲು ಒತ್ತು ನೀಡಿದೆ ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ದೂರ ಪ್ರದೇಶಗಳಲ್ಲಿ 15 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಮತ್ತು ಸುಮಾರು 50,000 ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಆ ಪೈಕಿ ಸುಮಾರು 5 ಸಾವಿರ ಕೇಂದ್ರಗಳು ಗುಜರಾತ್‌ನಲ್ಲಿಯೇ ಇವೆ ಎಂದು ಪ್ರಧಾನಿ ಹೇಳಿದರು. ಸುಮಾರು 7000 ಜನೌಷಧಿ ಕೇಂದ್ರಗಳು ಸುಮಾರು 3.5 ಲಕ್ಷ ಬಡ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ಒದಗಿಸುತ್ತಿವೆ ಎಂದು ಅವರು ಹೇಳಿದರು. ಜನರ ಆರೋಗ್ಯ ಸುಧಾರಣೆಗೆ ಸರ್ಕಾರ ಕೈಗೊಂಡ ಉಪಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು.
2020 ಆರೋಗ್ಯ ಸವಾಲುಗಳ ವರ್ಷವಾಗಿತ್ತು, 2021 ಆರೋಗ್ಯ ಪರಿಹಾರಗಳ ವರ್ಷವಾಗಲಿದೆ ಎಂದು ಪ್ರಧಾನಿ ಹೇಳಿದರು. ಉತ್ತಮ ತಿಳುವಳಿಕೆಯೊಂದಿಗೆ ಜಗತ್ತು ಆರೋಗ್ಯ ಪರಿಹಾರಗಳತ್ತ ಸಾಗಲಿದೆ. 2020 ರ ಸವಾಲುಗಳನ್ನು ಎದುರಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು. 2021 ರ ಆರೋಗ್ಯ ಪರಿಹಾರಗಳಿಗಳಲ್ಲಿ ಭಾರತದ ಕೊಡುಗೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಭಾರತೀಯ ವೈದ್ಯಕೀಯ ವೃತ್ತಿಪರರ ಸಾಮರ್ಥ್ಯ ಮತ್ತು ಸೇವಾ ಮನೋಭಾವವನ್ನು ಗಮನಿಸಿದರೆ, ಸಾಮೂಹಿಕ ರೋಗನಿರೋಧಕ ಅನುಭವದಂತಹ ಪರಿಣತಿಯೊಂದಿಗೆ ಭಾರತವು ಜಗತ್ತಿಗೆ ಉತ್ತಮ ಮತ್ತು ಒಳ್ಳೆಯ ಪರಿಹಾರಗಳನ್ನು ಒದಗಿಸುತ್ತದೆ. ಆರೋಗ್ಯ ನವೋದ್ಯಮಗಳು ಆರೋಗ್ಯ ಪರಿಹಾರಗಳು ಮತ್ತು ತಂತ್ರಜ್ಞಾನವನ್ನು ಸಂಯೋಜಿಸುತ್ತಿವೆ ಮತ್ತು ಆರೋಗ್ಯ ರಕ್ಷಣೆಯು ಲಭ್ಯವಾಗುವಂತೆ ಮಾಡುತ್ತಿವೆ ಎಂದರು. "ಭವಿಷ್ಯದ ಆರೋಗ್ಯ ಮತ್ತು ಆರೋಗ್ಯದ ಭವಿಷ್ಯ ಎರಡರಲ್ಲೂ ಭಾರತ ಪ್ರಮುಖ ಪಾತ್ರ ವಹಿಸಲಿದೆ" ಎಂದು ಶ್ರೀ ಮೋದಿ ಹೇಳಿದರು.
ರೋಗಗಳು ಜಾಗತೀಕರಣಗೊಳ್ಳುತ್ತಿರುವಾಗ, ಜಾಗತಿಕ ಆರೋಗ್ಯ ಪರಿಹಾರಗಳಿಗಾಗಿ ಸಂಘಟಿತ ಜಾಗತಿಕ ಪ್ರತಿಕ್ರಿಯೆಗಳ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಜಾಗತಿಕ ಪಾಲುದಾರನಾಗಿ ಭಾರತ ಇದನ್ನು ಮಾಡಿದೆ. ಭಾರತವು ಬೇಡಿಕೆಗೆ ಅನುಗುಣವಾಗಿ ಹೊಂದಿಕೊಳ್ಳುವುದು, ವಿಕಸನಗೊಳ್ಳುವುದು ಮತ್ತು ವಿಸ್ತರಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಭಾರತವು ಜಗತ್ತಿನೊಂದಿಗೆ ಸಾಗಿದೆ ಮತ್ತು ಸಾಮೂಹಿಕ ಪ್ರಯತ್ನಗಳ ಮೌಲ್ಯವರ್ಧನೆ ಮಾಡಿದೆ. ಭಾರತವು ಜಾಗತಿಕ ಆರೋಗ್ಯ ಕೇಂದ್ರವಾಗಿ ಹೊರಹೊಮ್ಮುತ್ತಿದೆ. 2021 ರಲ್ಲಿ ನಾವು ಭಾರತದ ಈ ಪಾತ್ರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.