ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಾರಾಣಸಿಯಲ್ಲಿಂದು 3350 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. ಈ ಯೋಜನೆಗಳಲ್ಲಿ ಆರೋಗ್ಯ, ನೈರ್ಮಲೀಕರಣ, ಸ್ಮಾರ್ಟ್ ಸಿಟಿ, ಸಂಪರ್ಕ, ಇಂಧನ ಮತ್ತು ವಸತಿ ವಲಯದ ಯೋಜನೆಗಳೂ ಸೇರಿವೆ. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀ ರಾಮನಾಯಕ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಪ್ರಧಾನಮಂತ್ರಿ ಅವರು ಪುಲ್ವಾಮಾ ಉಗ್ರರ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣತೆತ್ತ ವಾರಾಣಸಿಯ ಯೋಧ ಶ್ರೀ ರಮೇಶ್ ಯಾದವ್ ಗೆ ಶ್ರದ್ಧಾಂಜಲಿ ಸಲ್ಲಿಸಿದರು.
ವಾರಾಣಸಿ ಹೊರವಲಯದ ಅವುರೆ ಗ್ರಾಮದಲ್ಲಿ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ತಮ್ಮ ಸರ್ಕಾರ ಅಭಿವೃದ್ಧಿಗೆ ಇನ್ನಷ್ಟು ಒತ್ತು ನೀಡುವ ನಿಟ್ಟಿನಲ್ಲಿ ಎರಡು ವಿಧದಲ್ಲಿ ಕಾರ್ಯ ನಿರ್ವಹಿಸುತ್ತದೆ. ಮೊದಲನೆಯದಾಗಿ ಹೆದ್ದಾರಿ, ರೈಲ್ವೆ ಮತ್ತಿತರ ಮೂಲಸೌಕರ್ಯವೃದ್ಧಿ ಕೆಲಸ ಮಾಡುತ್ತಿದ್ದರೆ, ಮತ್ತೊಂದು ವಿಧದಲ್ಲಿ ಅಭಿವೃದ್ಧಿಯ ಫಲ ಸಾಮಾನ್ಯ ಜನರಿಗೆ ತಲುಪುವಂತೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
ಇಂದು ಉದ್ಘಾಟಿಸಲಾದ ಯೋಜನೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು, ನವಭಾರತದಲ್ಲಿ ವಾರಾಣಸಿಯನ್ನು ಒಂದು ಪ್ರಮುಖ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಕೈಗೊಂಡ ಪ್ರಯತ್ನಗಳ ಫಲವಾಗಿದೆ ಎಂದರು. ಈ ನಿಟ್ಟಿನಲ್ಲಿ ಅವರು ವಾರಾಣಸಿಯಲ್ಲಿಂದು ಡಿ ಎಲ್ ಡಬ್ಲ್ಯೂನಲ್ಲಿ ಲೋಕೋಮೋಟಿವ್ ರೈಲಿಗೆ ಹಸಿರುನಿಶಾನೆ ತೋರಿದ್ದನ್ನು ಉಲ್ಲೇಖಿಸುತ್ತಾ ‘ಮೇಕ್ ಇನ್ ಇಂಡಿಯಾ’ ಅಭಿಯಾನದಡಿ ಕೈಗೊಂಡಿರುವ ಈ ಯೋಜನೆ ರೈಲ್ವೆ ಸಾಮರ್ಥ್ಯ ಬಲವರ್ಧನೆಗೆ ಸಹಕಾರಿಯಾಗುವುದಲ್ಲದೆ, ಭಾರತೀಯ ರೈಲ್ವೆಯ ವೇಗವನ್ನು ಹೆಚ್ಚಿಸುತ್ತದೆ. ಕಳೆದ ನಾಲ್ಕೂವರೆ ವರ್ಷಗಳಿಂದೀಚೆಗೆ ರೈಲ್ವೆಯಲ್ಲಿ ಪರಿವರ್ತನೆ ತರಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಅವರು, ದೆಹಲಿ-ವಾರಾಣಸಿ ನಡುವಿನ ಭಾರತದ ಮೊದಲ ಅತಿವೇಗದ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದರು. ಈ ಯೋಜನೆಗಳಿಂದ ಕೇವಲ ಸಾರಿಗೆ ವ್ಯವಸ್ಥೆ ಸುಧಾರಣೆಯಾಗುವುದಷ್ಟೇ ಅಲ್ಲದೆ, ವಾರಾಣಸಿ, ಪೂರ್ವಾಂಚಲ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಹೊಸ ಉದ್ದಿಮೆಗಳ ಸ್ಥಾಪನೆಗೆ ನೆರವಾಗಲಿದೆ ಎಂದರು.
ಪ್ರಧಾನಮಂತ್ರಿ ಅವರು, ಇದೇ ವೇಳೆ ನಾನಾ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ಅಲ್ಲದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಐಐಟಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ಮಾರಕ ಅಂಚೆ ಚೀಟಿಯನ್ನು ಅವರು ಬಿಡುಗಡೆ ಮಾಡಿದರು.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಕ್ಯಾನ್ಸರ್ ಕೇಂದ್ರ ಮತ್ತು ಲಹರ್ತಾರಾದ ಬಾಬಾ ಕ್ಯಾನ್ಸರ್ ಆಸ್ಪತ್ರೆಗಳು ಬಿಹಾರ, ಜಾರ್ಖಂಡ್, ಛತ್ತೀಸ್ ಗಢ ಮತ್ತು ಇತರೆ ಸುತ್ತಮುತ್ತಲ ರಾಜ್ಯಗಳ ರೋಗಿಗಳಿಗೆ ಆಧುನಿಕ ಚಿಕಿತ್ಸೆಯನ್ನು ಒದಗಿಸಲಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ಆಯಷ್ಮಾನ್ ಭಾರತ್ ಯೋಜನೆ ಕುರಿತು ಮಾತನಾಡಿದ ಪ್ರಧಾನಮಂತ್ರಿ, ಉತ್ತರಪ್ರದೇಶದ ಸುಮಾರು 38 ಸಾವಿರ ಮಂದಿ ಈ ಯೋಜನೆಯ ಲಾಭವನ್ನು ಈಗಾಗಲೇ ಪಡೆದಿದ್ದಾರೆ ಎಂದರು. ಈ ಯೋಜನೆಯಿಂದ ಉತ್ತರಪ್ರದೇಶದ ಸುಮಾರು ಒಂದು ಕೋಟಿ 20 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕುರಿತು ಮಾತನಾಡಿದ ಅವರು, ಈ ಯೋಜನೆಯಿಂದ ಉತ್ತರಪ್ರದೇಶದ 2.25 ಕೋಟಿ ಬಡಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು. ಪ್ರಧಾನಮಂತ್ರಿ ಅವರು, ರಾಷ್ಟ್ರೀಯ ಕಾಮಧೇನು ಆಯೋಗದ ಕುರಿತು ಉಲ್ಲೇಖಿಸುತ್ತಾ ಇದರಿಂದ ಗೋವು ಮತ್ತು ಅವುಗಳ ಸಂತತಿ ಅಭಿವೃದ್ಧಿ ಮತ್ತು ಸಂರಕ್ಷಣೆಯಾಗಲಿದೆ ಎಂದರು. ತಾವು ಈ ಹಿಂದೆ ವಾರಾಣಸಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿವೆ ಎಂದು ಅವರು ಹೇಳಿದರು. ನಂತರ ಪ್ರಧಾನಮಂತ್ರಿ ದಿವ್ಯಾಂಗರಿಗೆ ನೆರವು ಮತ್ತು ಸಲಕರಣೆಗಳನ್ನು ವಿತರಿಸಿದರು.
ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.