ಜಮ್ಮು ಮತ್ತು ಕಾಶ್ಮೀರಕ್ಕೆ ತಮ್ಮ ಎರಡನೇ ಹಂತದ ಭೇಟಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಜಮ್ಮುವಿಗೆ ಭೇಟಿ ನೀಡಿದರು. ಅವರು ರಾಜ್ಯದಲ್ಲಿ ಮೂಲಸೌಕರ್ಯಗಳಿಗೆ ಉತ್ತೇಜನ ನೀಡುವ ಸರಣಿ ಅಭಿವೃದ್ದಿ ಯೋಜನೆಗಳನ್ನು ಅನಾವರಣ ಮಾಡಿದರು. ಪ್ರಧಾನ ಮಂತ್ರಿ ಅವರು ಲೇಹ್, ಜಮ್ಮು, ಮತ್ತು ಶ್ರೀನಗರಗಳಿಗೆ ಏಕ ದಿನ ಭೇಟಿ ನೀಡಿದರು.
ಜಮ್ಮು ಭೇಟಿಯಲ್ಲಿ ಪ್ರಧಾನಮಂತ್ರಿ ಅವರು ವಿಜಯಪುರ, ಸಾಂಬಾಗಳಲ್ಲಿ ಎ.ಐ.ಐ.ಎಂ.ಎಸ್. ಗಳಿಗೆ ಶಿಲಾನ್ಯಾಸ ಮಾಡಿದರು. ಎ.ಐ.ಐ.ಎಂ.ಎಸ್. ಗಳ ಸ್ಥಾಪನೆಯಿಂದ ಜನತೆಗೆ ಗುಣಮಟ್ಟದ ಆರೋಗ್ಯ ರಕ್ಷಣಾ ಸೇವೆ ಲಭಿಸಲಿದೆ ಮತ್ತು ಇದರಿಂದ ಈ ವಲಯದಲ್ಲಿ ಆರೋಗ್ಯ ರಕ್ಷಣಾ ವೃತ್ತಿಪರರ ಕೊರತೆ ನೀಗಲಿದೆ ಎಂದರು. ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಶೀಘ್ರದಲ್ಲಿಯೇ ಮತ್ತೆ 500 ಸೀಟುಗಳನ್ನು ಸೃಜಿಸಲಾಗುವುದು ಎಂದು ಪ್ರಧಾನಮಂತ್ರಿ ಅವರು ಘೋಷಿಸಿದರು.
ಕಥುವಾದಲ್ಲಿಂದು ವಿಶ್ವವಿದ್ಯಾಲಯ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ಅವರು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 10 % ಮೀಸಲು ಕೋಟಾದಿಂದ ಜಮ್ಮುವಿನ ಯುವಕರಿಗೆ ಲಾಭವಾಗಲಿರುವ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದರು.
ಜಮ್ಮುವಿನಲ್ಲಿ ಭಾರತೀಯ ಸಮೂಹ ಸಂವಹನ ಸಂಸ್ಥೆಯ ಉತ್ತರ ಪ್ರಾದೇಶಿಕ ಕೇಂದ್ರದ ಕ್ಯಾಂಪಸ್ಸಿಗೆ ಅವರು ಶಿಲಾನ್ಯಾಸ ಮಾಡಿದರು. ಜಮ್ಮುವಿನಲ್ಲಿ ಕ್ಯಾಂಪಸ್ಸನ್ನು 2012-13 ರ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲಾಗಿದ್ದು, ಅಂದಿನಿಂದ ಅದು ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ.
ಪ್ರಧಾನಮಂತ್ರಿ ಅವರು 624 ಮೆ.ವಾ. ಕಿರು ಜಲವಿದ್ಯುತ್ ಯೋಜನೆಗೆ ಮತ್ತು ಜಮ್ಮುವಿನ ಕಿಸ್ತ್ವಾರದಲ್ಲಿ 850 ಮೆಗಾವಾಟ್ ಜಲವಿದ್ಯುತ್ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರು. “ಹೊಸ ವಿದ್ಯುತ್ ಯೋಜನೆಗಳು ಈ ವಲಯದಲ್ಲಿ ಯುವಕರಿಗೆ ಉದ್ಯೋಗ ಒದಗಿಸುತ್ತವೆ ಎಂದವರು ನುಡಿದರು. ಈ ಸಂದರ್ಭ ಪ್ರಧಾನ ಮಂತ್ರಿ ಅವರು ಸೌಭಾಗ್ಯ ಯೋಜನೆ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ 100 % ಮನೆಗಳ ವಿದ್ಯುದ್ದೀಕರಣವನ್ನು ಘೋಷಿಸಿದರು.
ಕಾಶ್ಮೀರಿ ವಲಸೆಗಾರ ಸಿಬ್ಬಂದಿಗಳಿಗೆ ಕಾಶ್ಮೀರ ಕಣಿವೆಯಲ್ಲಿ ಟ್ರಾನ್ಸಿಟ್ ವಾಸ್ತವ್ಯ ಒದಗಿಸುವ ಕಾಮಗಾರಿಗೆ ಪ್ರಧಾನ ಮಂತ್ರಿಗಳು ಇಂದು ಅಡಿಗಲ್ಲು ಹಾಕಿದರು. ನಿರಾಶ್ರಿತ ಮತ್ತು ಸ್ಥಳಾಂತರಿತ ಕಾಶ್ಮೀರಿಗಳನ್ನು 3000 ಹುದ್ದೆಗಳಿಗೆ ನೇಮಕ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಘೋಷಿಸಿದ ಅವರು “ ಪಂಡಿತರನ್ನು, ಅವರ ಮನೆಗಳನ್ನು ತೊರೆಯುವಂತೆ ಮಾಡಿದ ಪರಿಸ್ಥಿತಿಯನ್ನು ಭಾರತ ಮರೆಯದು “ ಎಂದರು. ನೆರೆಯ ದೇಶಗಳಿಂದ ಕಿರುಕುಳಕ್ಕೀಡಾದವರ ಪರವಾಗಿ ದೇಶವು ನಿಲ್ಲಬೇಕಾಗುತ್ತದೆ ಎಂದೂ ಅವರು ನುಡಿದರು.
ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ (ಎನ್.ಆರ್.ಸಿ.ಪಿ.) ಅಡಿಯಲ್ಲಿ ದೇವಕಿ ಮತ್ತು ತಾವಿ ನದಿಗಳ ಮಾಲಿನ್ಯ ನಿಯಂತ್ರಿಸುವ ಯೋಜನೆಗೂ ಅವರು ಶಿಲಾನ್ಯಾಸ ಮಾಡಿದರು. ಈ ಯೋಜನೆ 2021ರ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ನಮ್ಮ ಸೈನಿಕರ ಸುರಕ್ಷೆಗಾಗಿ ಗಡಿಯುದ್ದಕ್ಕೂ 14,000 ಬಂಕರುಗಳನ್ನು ನಿರ್ಮಾಣ ಮಾಡಲಾಗಿದೆ ಎಂದೂ ಪ್ರಧಾನ ಮಂತ್ರಿ ಅವರು ತಿಳಿಸಿದರು. ಹಿಂದಿನ ಸರಕಾರ ಒ.ಆರ್.ಒ.ಪಿ. ಗೆ 500 ಕೋ.ರೂ. ಒದಗಿಸಿ ಮಂಕು ಬೂದಿ ಎರಚುವ ಕೆಲಸ ಮಾಡಿದ್ದರೆ, ನಾವು 35000 ಕೋ.ರೂ.ಗಳನ್ನು ಒದಗಿಸಿದ್ದೇವೆ ಎಂದರು. ಹಿಂದಿನ ಆಡಳಿತಗಾರರು ಕರ್ತಾರ್ಪುರ ಸಾಹೀಬ್ ಪರವಾಗಿ ಕಾರ್ಯಾಚರಿಸಿದ್ದರೆ ಅದು ಭಾರತದ ಭಾಗವಾಗಿರುತ್ತಿತ್ತು, ಎಂದೂ ಅವರು ನುಡಿದರು.
ಜಮ್ಮುವಿಗೆ ಇಂದು ನೀಡಿದ ಭೇಟಿಯ ಮತ್ತೊಂದು ವಿಶೇಷವೆಂದರೆ ಪ್ರಧಾನ ಮಂತ್ರಿ ಅವರು ಸಜ್ವಾಲ್ ನಲ್ಲಿ ಚೇನಾಬ್ ನದಿಗೆ ಅಡ್ಡಲಾಗಿ ನಿರ್ಮಿಸುವ 1640 ಮೀಟರ್ ಉದ್ದದ ದ್ವಿಪಥ ಸೇತುವೆಗೆ ಶಿಲಾನ್ಯಾಸ ಮಾಡಿದರು. ಇದು ಸಜ್ವಾಲ್ ಮತ್ತು ಇಂದ್ರಿ ಪಟ್ಟಿಯಾನ್ ಜನತೆಗೆ ಪರ್ಯಾಯ ಮಾರ್ಗವನ್ನು ಒದಗಿಸುತ್ತದೆ, ಎರಡು ಸ್ಥಳಗಳ ನಡುವಿನ ಪ್ರಯಾಣದ ದೂರವನ್ನು 47 ಕಿ.ಮೀ.ಗಳಿಂದ 5 ಕಿ.ಮೀ.ಗೆ ಇಳಿಸುತ್ತದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕ ಸುಧಾರಣೆಗೆ 40000 ಕೋ.ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದರು.