ಬುಡಕಟ್ಟು ಅತಿಥಿಗಳು, ಎನ್.ಸಿ.ಸಿ. ಕೆಡೆಟ್ಸ್, ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಗಣರಾಜ್ಯೋತ್ಸವ ಪೆರೇಡ್ ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಸ್ಥಬ್ದ ಚಿತ್ರ ಕಲಾವಿದರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ ಅಟ್ ಹೋಮ್ “ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದರು.
ಕೇಂದ್ರ ಸಚಿವರಾದ ಶ್ರೀ ರಾಜನಾಥ್ ಸಿಂಗ್, ಶ್ರೀ ಅರ್ಜುನ್ ಮುಂಡಾ, ಶ್ರೀ ಕಿರೆಣ್ ರಿಜಿಜು ಮತ್ತು ಶ್ರೀಮತಿ ರೇಣುಕಾ ಸಿಂಗ್ ಸರುತ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಗಣರಾಜ್ಯೋತ್ಸವ ಸಮಾರಂಭದಲ್ಲಿ ಬುಡಕಟ್ಟು ಅತಿಥಿಗಳು, ಕಲಾವಿದರು, ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಕೆಡೆಟ್ಸ್ ಗಳು ಭಾಗವಹಿಸುತ್ತಿರುವುದರಿಂದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಶಕ್ತಿ ತುಂಬಿಸುತ್ತದೆ. ಇವರ ಪ್ರದರ್ಶನ ದೇಶದ ಶ್ರೀಮಂತ ವೈವಿದ್ಯತೆಯನ್ನು ಪ್ರತಿಬಿಂಬಿಸಲಿದ್ದು, ಪ್ರತಿಯೊಬ್ಬರಲ್ಲೂ ಹೆಮ್ಮೆ ತರುತ್ತದೆ ಎಂದರು.
ಗಣರಾಜ್ಯೋತ್ಸವ ದಿನದ ಪೆರೇಡ್ ದೇಶದ ಶ್ರೇಷ್ಠ ಸಾಮಾಜಿಕ – ಸಾಂಸ್ಕೃತಿಕ ಪರಂಪರೆಗೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಜೀವ ನೀಡುವುದಲ್ಲದೇ ಸಂವಿಧಾನಕ್ಕೆ ಗೌರವ ತರುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಈ ವರ್ಷ ಅತ್ಯಂತ ಮಹತ್ವದ್ದಾಗಿದ್ದು, ದೇಶ 75 ನೇ ಸ್ವಾತಂತ್ರ್ಯೋತ್ಸವದ ವರ್ಷಕ್ಕೆ ಪ್ರವೇಶಿಸುತ್ತಿದೆ ಮತ್ತು ಈ ವರ್ಷ ಪ್ರಕಾಶ್ ಪುರಬ್ ಆಪ್ ಗುರು ತೇಜ್ ಬಹಾದೂರ್ ಅವರ 400 ನೇ ವರ್ಷಾಚರಣೆಯಾಗಿದೆ. ಅಲ್ಲದೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ವರ್ಷವಾಗಿದ್ದು, ಈ ದಿನವನ್ನು ಪರಾಕ್ರಮ ದಿವಸ್ ಎಂದು ಘೋಷಿಸಲಾಗಿದೆ. ಈ ಘಟನೆಗಳು ನಮ್ಮ ದೇಶಕ್ಕೆ ನಮ್ಮನ್ನು ಮತ್ತೊಮ್ಮೆ ಸಮರ್ಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಇವು ದೇಶವಾಸಿಗಳ ಆಕಾಂಕ್ಷೆಯ, ಸಾಮೂಹಿಕ ಶಕ್ತಿಯ ಸ್ಫೂರ್ತಿಯ ಸಾಕಾರವಾಗಿದೆ ಎಂದು ತಮ್ಮ ಯುವ ಅತಿಥಿಗಳನ್ನು ಉದ್ದೇಶಿಸಿ ಹೇಳಿದರು. ಭಾರತ ಎಂದರೆ ಹಲವು ರಾಜ್ಯಗಳು ಒಂದು ದೇಶ. ಹಲವು ಸಮುದಾಯಗಳು ಒಂದು ಭಾವನೆ, ಹಲವು ಭಾಷೆಗಳು ಒಂದು ಅಭಿವ್ಯಕ್ತಿ ಮತ್ತು ಹಲವು ಬಣ್ಣಗಳು ಒಂದೇ ತ್ರಿವರ್ಣ. ಮತ್ತು ಇದನ್ನು ತಲುಪುವ ದಾರಿ ಎಂದರೆ “ ಎಕ್ ಭಾರತ್ – ಶ್ರೇಷ್ಠ ಭಾರತ್ ಎಂದು ಹೆಮ್ಮೆಯಿಂದ ಹೇಳಿದರು. ” ಇಲ್ಲಿ ಬಂದಿರುವ ಯುವ ಅತಿಥಿಗಳು ಪರಸ್ಪರರ ಪದ್ಧತಿಗಳು, ಭಾಷೆಗಳು ಮತ್ತು ಕಲೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. “ ವೋಕಲ್ ಫಾರ್ ಲೋಕಲ್ “ ಆಂದೋಲನಕ್ಕೆ “ ಏಕ್ ಭಾರತ್ – ಶ್ರೇಷ್ಠ ಭಾರತ್ “ ಶಕ್ತಿ ನೀಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಒಂದು ಭಾಗದ ಉತ್ಪನ್ನದ ಬಗ್ಗೆ ಮತ್ತೊಂದು ಭಾಗದ ಜನರಿಗೆ ಹೆಮ್ಮೆಯಾದರೆ ಅದನ್ನು ಉತ್ತೇಜಿಸಬೇಕು. ಹೀಗಾಗಾದ ಮಾತ್ರ ಸ್ಥಳೀಯ ಉತ್ಪನ್ನಗಳು ರಾಷ್ಟ್ರೀಯ ಮತ್ತು ಅಂತಾಷ್ಟ್ರೀಯ ಹಂತಕ್ಕೆ ತಲುಪಲು ಸಾಧ್ಯವಾಗಲಿದೆ. “ ವೋಕಲ್ ಫಾರ್ ಲೋಕಲ್ “ ಮತ್ತು ಆತ್ಮ ನಿರ್ಭರ್ ಭಾರತ್ ಅಭಿಯಾನದ ಯಶಸ್ಸು ನಮ್ಮ ಯುವ ಸಮೂಹದ ಮೇಲೆ ಅವಲಂಬಿತವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಯುವ ಸಮುದಾಯದಲ್ಲಿ ಸೂಕ್ತ ಕೌಶಲ್ಯ ರೂಪುಗೊಳ್ಳಬೇಕು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, 2014 ರಲ್ಲಿ ಕೌಶಲ್ಯ ಸಚಿವಾಲಯ ಅಸ್ಥಿತ್ವಕ್ಕೆ ಬಂತು ಮತ್ತು 5.5 ಕೋಟಿ ಜನರಿಗೆ ವಿಭಿನ್ನ ಕೌಶಲ್ಯಗಳನ್ನು ಕಲಿಸಿದೆ. ಇದರಿಂದ ಇವರು ಸ್ವಯಂ ಉದ್ಯೋಗ ಮತ್ತು ಉದ್ಯೋಗ ಪಡೆಯಲು ಸಹಕಾರಿಯಾಗಿದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯದ ಅಂಶ ಸ್ಪಷ್ಟವಾಗಿದ್ದು, ಇಲ್ಲಿ ಜ್ಞಾನದ ಅನ್ವಯಕ್ಕೆ ಒತ್ತು ನೀಡಲಾಗುತ್ತದೆ. ವಿಷಯಗಳ ಆಯ್ಕೆಯಲ್ಲಿ ಹೊಂದುಕೊಳ್ಳುವಿಕೆ ಇದ್ದು, ಆಯ್ಕೆಗೆ ಈ ನೀತಿಯಲ್ಲಿ ಅವಕಾಶಗಳಿಗೆ. ಮುಖ್ಯವಾಹಿನಿಯ ಶಿಕ್ಷಣದಲ್ಲಿ ವೃತ್ತಿ ಶಿಕ್ಷಣ ತರುವ ಕುರಿತು ಮೊದಲ ಬಾರಿಗೆ ಗಂಭೀರ ಪ್ರಯತ್ನಗಳು ನಡೆಯುತ್ತಿವೆ. 6 ನೇ ತರಗತಿ ನಂತರ ವಿದ್ಯಾರ್ಥಿಗಳು ಸ್ಥಳೀಯ ಅಗತ್ಯತೆ ಮತ್ತು ವ್ಯವಹಾರಕ್ಕೆ ಅನುಗುಣವಾಗಿ ತಮಗೆ ಇಷ್ಟವಾಗುವ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ತರುವಾಯ ಮಾಧ್ಯಮಿಕ ಹಂತದಲ್ಲಿ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ವಿಷಯಗಳನ್ನು ಏಕೀಕರಣಗೊಳಿಸಲು ಪ್ರಸ್ತಾಪಿಸಲಾಗಿದೆ ಎಂದರು.
ಈಗಿನ ಕಾಲಘಟ್ಟದಲ್ಲಿ ಮತ್ತು ವಿಶೇಷವಾಗಿ ಕೊರೋನಾ ಸಮಯದಲ್ಲಿ ಎನ್.ಸಿ. ಸಿ ಮತ್ತು ಎನ್..ಎಸ್.ಎಸ್ ಕೊಡುಗೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಈ ಪ್ರಯತ್ನವನ್ನು ಕೊರೋನಾ ಸಾಂಕ್ರಾಮಿಕದ ವಿರುದ್ಧದ ಮುಂದಿನ ಹೋರಾಟಕ್ಕೂ ಸಹ ಕೊಂಡೊಯ್ಯುವಂತೆ ಸಲಹೆ ಮಾಡಿದರು. ಕೊರೋನಾ ಲಸಿಕೆ ಅಭಿಯಾನದ ಜತೆ ಕೈಜೋಡಿಸಬೇಕು ಮತ್ತು ಸಮಾಜದ ಪ್ರತಿಯೊಬ್ಬರಿಗೂ, ಮೂಲೆ ಮೂಲೆಯಲ್ಲೂ ಲಸಿಕೆ ಕುರಿತು ಜಾಗೃತಿ ಮೂಡಿಸಲು ಎನ್.ಸಿ. ಸಿ ಮತ್ತು ಎನ್..ಎಸ್.ಎಸ್ ಕೆಡೆಟ್ಸ್ ಗಳು ಮುಂದಾಗಬೇಕು. “ ನಮ್ಮ ವಿಜ್ಞಾನಿಗಳು ಲಸಿಕೆ ಸಿದ್ಧಪಡಿಸುವ ಮೂಲಕ ತಮ್ಮ ಕರ್ತವ್ಯವನ್ನು ಪೂರೈಸಿದ್ದಾರೆ. ಈಗ ನಮ್ಮ ಅವಧಿ ಆರಂಭವಾಗಿದೆ. ಈಗ ಸುಳ‍್ಳು ಮತ್ತು ವದಂತಿಯನ್ನು ಹರಡುವ ಪ್ರತಿಯೊಂದು ಪ್ರಯತ್ನವನ್ನು ನಾವು ಸೋಲಿಸಬೇಕು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.