Food processing is a way of life in India. It has been practiced for ages: PM Modi
India has jumped 30 ranks this year in the World Bank Doing Business rankings: PM Modi
There is also immense potential for food processing and value addition in areas such as organic & fortified foods: PM Modi
Our farmers are central to our efforts in food processing: PM Modi

ಗೌರವಾನ್ವಿತರೇ,

ವ್ಯಾಪಾರ ಮತ್ತು ಉದ್ಯಮ ಸಮೂಹಗಳ ನಾಯಕರೇ,

ಮಹಿಳೆಯರೇ ಮತ್ತು ಮಹನೀಯರೇ

ಆಹಾರ ಸಂಸ್ಕರಣಾ ಕ್ಷೇತ್ರದ ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಮಹಾನುಭಾವರು ಇರುವ ಈ ಮಹಿಮಾನ್ವಿತ ಸಭೆಯಲ್ಲಿ ಪಾಲ್ಗೊಳ್ಳಲು ನಾನು ಬಹಳ ಸಂತೋಷಪಡುತ್ತೇನೆ. ಭಾರತದ ವಿಶ್ವ ಆಹಾರ ಮೇಳ 2017 ಕ್ಕೆ ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ.

ಈ ಕಾರ್ಯಕ್ರಮವು ಭಾರತದಲ್ಲಿ ನಿಮ್ಮನ್ನು ಕಾಯುತ್ತಿರುವ ಅವಕಾಶಗಳ ಬಗ್ಗೆ ಇಣುಕು ನೋಟವನ್ನು ನಿಮಗೆ ಒದಗಿಸುತ್ತದೆ. ಇದು ನಮ್ಮ ಅಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಮೌಲ್ಯ ಸರಪಣಿಯ ಸಾಮರ್ಥ್ಯವನ್ನು ನಿಮಗೆ ತೋರಿಸಿಕೊಡುತ್ತದೆ, ಇದು ವಿವಿಧ ಭಾಗೀದಾರರನ್ನು ಸಂಪರ್ಕಿಸುವ ವೇದಿಕೆಯನ್ನು ಒದಗಿಸುತ್ತದೆ. ಪರಸ್ಪರ ಸಮೃದ್ಧಿಗಾಗಿ ಸಹಯೋಗಕ್ಕೂ ವೇದಿಕೆಯಾಗುತ್ತದೆ. ಮತ್ತು ಇದು ನಿಮಗೆ ವಿಶ್ವದಾದ್ಯಂತ ನಾಲಗೆಯಲ್ಲಿ ನೀರೂರಿಸುವಂತಹ ನಮ್ಮ ಅತ್ಯಂತ ರುಚಿಕರ ಅಡುಗೆ/ ಆಹಾರಗಳನ್ನು ಪರಿಚಯಿಸುತ್ತದೆ.

ಮಹಿಳೆಯರೇ ಮತ್ತು ಮಹನೀಯರೇ,

ಕೃಷಿಯಲ್ಲಿ ಭಾರತದ ಶಕ್ತಿ ಸಾಮರ್ಥ್ಯ ಬಹುವಿಧದ್ದು ಮತ್ತು ವೈವಿಧ್ಯಮಯವಾದುದು. ವ್ಯವಸಾಯ ಯೋಗ್ಯ ಭೂಮಿ ಇರುವ ಎರಡನೇ ಅತಿ ವಿಸ್ತಾರದ ದೇಶವಾಗಿರುವ ನಮ್ಮಲ್ಲಿ 127 ವೈವಿಧ್ಯಮಯ ಕೃಷಿ ವಾತಾವರಣ ವಲಯಗಳಿವೆ. ಬಾಳೆಹಣ್ನು, ಮಾವು, ಗಾವಾ, ಪಪ್ಪಾಯಿ, ಓಕ್ರಾಗಳಂತಹ ಬೆಳೆಗಳು ಸೇರಿದಂತೆ ವೈವಿಧ್ಯಮಯ ಬೆಳೆಗಳಿಂದಾಗಿ ನಾವು ಜಾಗತಿಕ ನಾಯಕ ಸ್ಥಾನದಲ್ಲಿದ್ದೇವೆ. ಅಕ್ಕಿ ಉತ್ಪಾದನೆ, ಗೋಧಿ, ಮೀನು, ಹಣ್ಣು ಹಂಪಲು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ನಾವು ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಹಾಲು ಉತ್ಪಾದನೆಯಲ್ಲಿ ಜಗತ್ತಿನ ಅತೀ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ತೋಟಗಾರಿಕಾ ವಲಯ ವಾರ್ಷಿಕ 5.5 % ಬೆಳವಣಿಗೆ ದಾಖಲಿಸುತ್ತಿದೆ.

ಶತಮಾನಗಳಿಂದ ಭಾರತವು ಬಹಳ ದೂರದ ಪ್ರದೇಶಗಳಿಂದಲೂ ವ್ಯಾಪಾರಿಗಳನ್ನು ಆಕರ್ಶಿಸುತ್ತಿತ್ತು. ಅವರು ನಮ್ಮ ವಿಷಿಷ್ಟ ಸಾಂಬಾರು ಪದಾರ್ಥಗಳನ್ನು ಹುಡುಕಿಕೊಂಡು ಇಲ್ಲಿಗೆ ಬಂದರು. ಭಾರತದತ್ತ ಅವರ ಪ್ರಯಾಣ ಚರಿತ್ರೆಯನ್ನು ರೂಪಿಸಿತು. ಯುರೋಪು ಮತ್ತು ದಕ್ಷಿಣ ಪೂರ್ವ ಏಶಿಯಾದ ಜತೆಗಿನ ವ್ಯಾಪಾರ ಬಾಂಧವ್ಯ ಸಾಂಬಾರು ಮಾರ್ಗದ ಮೂಲಕ ಬಹಳ ಪ್ರಖ್ಯಾತವಾಗಿದೆ. ಕ್ರಿಶ್ಟೋಫರ್ ಕೊಲಂಬಸ್ ಕೂಡಾ ಭಾರತದ ಸಾಂಬಾರು ಪದಾರ್ಥಗಳ ಬಗ್ಗೆ ಆಕರ್ಷಿತನಾಗಿದ್ದ ಮತ್ತು ಭಾರತಕ್ಕೆ ಪರ್ಯಾಯ ಸಮುದ್ರ ಮಾರ್ಗ ಹುಡುಕುವ ಯತ್ನದಲ್ಲಿ ಅಮೇರಿಕಾ ತಲುಪಿದ.

ಭಾರತದಲ್ಲಿ ಆಹಾರ ಸಂಸ್ಕರಣೆ ಒಂದು ಜೀವನ ವಿಧಾನವಾಗಿದೆ. ಹಲವಾರು ಶತಮಾನಗಳಿಂದ ಮನೆ ಮನೆಗಳಲ್ಲಿ ಅದನ್ನು ಅತ್ಯಂತ ಸರಳ ರೀತಿಯಲ್ಲಿ ಮಾಡಲಾಗುತ್ತಿದೆ. ಸರಳವಾಗಿ ಮನೆಯಲ್ಲೇ ಮಾಡಬಹುದಾದ ತಂತ್ರಜ್ಞಾನಗಳಾದ ಬುರುಗುಬರಿಸುವುಕೆ, ಹುಳಿ ಬರಿಸುವಿಕೆಗಳು ನಮ್ಮ ಪ್ರಖ್ಯಾತ ಉಪ್ಪಿನಕಾಯಿ, ಚಟ್ನಿ, ಪಾಪ್ಪಡ್,ಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತವೆ. ಇವು ವಿಶ್ವದಾದ್ಯಂತ ಶಿಷ್ಟರು ಮತ್ತು ಜನಸಾಮಾನ್ಯರ ಬಾಯಲ್ಲಿ ನೀರೂರುವಂತೆ ಮಾಡುತ್ತವೆ.

ಮಹಿಳೆಯರೇ ಮತ್ತು ಮಹನೀಯರೇ,

ನಾವು ಸ್ವಲ್ಪ ದೊಡ್ದ ಚಿತ್ರಣದತ್ತ ಹೊರಳೋಣ.

ಭಾರತ ಇಂದು ತ್ವರಿತಗತಿಯಿಂದ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಒಂದಾಗಿದೆ. ಸರಕು ಮತ್ತು ಸೇವಾ ತೆರಿಗೆ ಅಥವಾ ಜಿ.ಎಸ್.ಟಿ.ಯು ತೆರಿಗೆಯಲ್ಲಿಯ ಬಹುವೈವಿಧ್ಯತೆಯನ್ನು ನಿವಾರಿಸಿದೆ. ವಿಶ್ವಬ್ಯಾಂಕಿನ ವ್ಯವಹಾರ ಸ್ನೇಹಿ ಅಥವಾ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ಇರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಮಾನ 30 ಅಂಶಗಳಷ್ಟು ಮೇಲೇರಿದೆ. ಭಾರತಕ್ಕೆ ಇದು ಹಿಂದೆಂದೂ ಲಭ್ಯವಾಗದ ಗರಿಷ್ಟ ಸುಧಾರಣಾಂಕ. ಮತ್ತು ಈ ವರ್ಷದಲ್ಲಿ ಯಾವುದೇ ರಾಷ್ಟ್ರಕ್ಕೆ ಲಭ್ಯವಾದ ಜಿಗಿತಗಳಲ್ಲಿ ಗರಿಷ್ಟ ಜಿಗಿತ. 2014 ರಲ್ಲಿ ಭಾರತದ ಶ್ರೇಯಾಂಕ 142. ನಾವೀಗ ಶ್ರೇಷ್ಟ ನೂರರಲ್ಲಿದ್ದೇವೆ.

ಗ್ರೀನ್ ಫೀಲ್ಡ್ ಹೂಡಿಕೆಯಲ್ಲಿ (ಅಂದರೆ ಹೊಸದಾಗಿ ಮೂಲಸೌಕರ್ಯದ ಕಾಮಗಾರಿಗಳನ್ನು ನಡೆಸುವಲ್ಲಿ ) 2016ನೇ ವರ್ಷದಲ್ಲಿ ನಾವು ವಿಶ್ವದಲ್ಲಿಯೇ ಒಂದನೇ ಸ್ಥಾನದಲ್ಲಿದ್ದೇವೆ. ಜಾಗತಿಕ ಅನ್ವೇಷಣಾ ಸೂಚ್ಯಂಕದಲ್ಲಿ ಭಾರತ ತ್ವರಿತವಾಗಿ ಪ್ರಗತಿ ಸಾಧಿಸುವ ರಾಷ್ಟ್ರವಾಗಿದೆ. ಜಾಗತಿಕ ಸಾರಿಗೆ ಸೌಕರ್ಯ, ಮತ್ತು ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿಯೂ ಭಾರತದ ಪ್ರಗತಿ ತ್ವರಿತಗತಿಯಲ್ಲಿದೆ. ಭಾರತದಲ್ಲಿ ಹೊಸ ಉದ್ಯಮ ಆರಂಭಿಸುವುದು ಹಿಂದೆಂದಿಗಿಂತಲೂ ಸುಲಭವಾಗಿದೆ. ವಿವಿಧ ಏಜೆನ್ಸಿಗಳಿಂದ ಮಂಜೂರಾತಿ ಪಡೆಯುವ ಪ್ರಕ್ರಿಯೆಗಳನ್ನು ಸರಳೀಕೃತಗೊಳಿಸಲಾಗಿದೆ.ಹಳೆಯ ಪಳೆಯುಳಿಕೆಯಂತಹ ಕಾನೂನುಗಳನ್ನು ತೆಗೆದುಹಾಕಲಾಗಿದೆ. ಬದ್ಧತೆಯ ಭಾರವನ್ನು ಕಡಿಮೆ ಮಾಡಲಾಗಿದೆ.

ನಾನೀಗ ವಿಶೇಷವಾಗಿ ಆಹಾರ ಸಂಸ್ಕರಣೆಯತ್ತ ಬರುತ್ತೇನೆ.

ಸರಕಾರವು ಹಲವು ಪರಿವರ್ತನಾಶೀಲ ಕ್ರಮಗಳನ್ನು ಕೈಗೊಂಡಿದೆ. ಈ ವಲಯದಲ್ಲಿ ಭಾರತ ಈಗ ಅತ್ಯಂತ ಆದ್ಯತೆಯ ಹೂಡಿಕೆ ತಾಣವಾಗಿ ಮೂಡಿ ಬಂದಿದೆ. ನಮ್ಮ ’ಮೇಕ್ ಇನ್ ಇಂಡಿಯಾ” ಕಾರ್ಯಕ್ರಮದಲ್ಲಿ ಇದು ಆದ್ಯತಾ ವಲಯವಾಗಿದೆ. ಶೇಖಡಾ 100 ವಿದೇಶೀ ನೇರ ಹೂಡಿಕೆಗೆ ಅನುಮತಿ ನೀಡಲಾಗಿದೆ. ವ್ಯಾಪಾರಕ್ಕೆ, ಭಾರತದಲ್ಲಿ ತಯಾರಾದ ಆಹಾರೋತ್ಪನ್ನಗಳ ಇ –ವಾಣಿಜ್ಯ ವ್ಯವಹಾರವೂ ಸೇರಿದಂತೆ ಇದರಡಿ ಅವಕಾಶ ಒದಗಿಸಲಾಗಿದೆ. ವಿದೇಶೀ ಹೂಡಿಕೆದಾರರಿಗಾಗಿ ಏಕ ಗವಾಕ್ಷ ವ್ಯವಸ್ಥೆಯನ್ನು ಒದಗಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಆಕರ್ಷಕ ಹಣಕಾಸು ಪ್ರೋತ್ಸಾಹಧನ ನೀಡಲಾಗುತ್ತದೆ. ಆಹಾರ ಮತ್ತು ಕೃಷಿ ಆಧಾರಿತ ಸಂಸ್ಕರಣ ಘಟಕಗಳಿಗೆ, ಶೀತಲೀಕರಣ ಸರಪಳಿಗಳಿಗೆ, ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಅವುಗಳನ್ನು ಆದ್ಯತಾ ರಂಗದ ಸಾಲದ ವರ್ಗಕ್ಕೆ ತರಲಾಗಿದೆ. ಇದರಿಂದ ಸುಲಭದಲ್ಲಿ ಕಡಿಮೆ ಬಡ್ಡಿಯ ಸಾಲ ದೊರೆಯುವುದು ಸಾಧ್ಯವಾಗಿದೆ.

ವಿಶೇಷ ಪೋರ್ಟಲ್-ನಿವೇಶ್ ಬಂಧು-ಅಥವಾ ’ಹೂಡಿಕೆದಾರರ ಸ್ನೇಹಿತ” (ಇನ್ವೆಸ್ಟರ್ ಫ಼್ರೆಂಡ್ ) ಇತ್ತೀಚೆಗಷ್ಟೇ ಆರಂಭಿಸಲಾಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳು , ಆಹಾರ ಸಂಸ್ಕರಣಾ ಕ್ಷೇತ್ರಕ್ಕೆ ಲಭ್ಯ ಇರುವ ಪ್ರೋತ್ಸಾಹಧನ ಇತ್ಯಾದಿ ಮಾಹಿತಿಗಳನ್ನು ಕ್ರೋಢಿಕರಿಸಿ ಒದಗಿಸುತ್ತದೆ. ಅದು ಸ್ತಳೀಯ ಮಟ್ಟದವರೆಗೆ ಸಂಪನ್ಮೂಲಗಳ ಪಟ್ಟಿಯನ್ನು ಸಂಸ್ಕರಣಾ ಆವಶ್ಯಕತೆಗಳೊಂದಿಗೆ ಒದಗಿಸುತ್ತದೆ. ಇದು ರೈತರಿಗೆ, ವ್ಯಾಪಾರಿಗಳಿಗೆ, ಸಂಸ್ಕರಣಗಾರರಿಗೆ ಮತ್ತು ಸಾಗಾಟ ನಿರ್ವಾಹಕರಿಗೆ ವ್ಯವಹಾರ ಜಾಲದ ವೇದಿಕೆಯಾಗಿದೆ.

ಸ್ನೇಹಿತರೇ,

ಮೌಲ್ಯ ಸರಪಣಿಯ ಹಲವು ವಲಯಗಳಲ್ಲಿ ಖಾಸಗಿ ರಂಗದ ಸಹಭಾಗಿತ್ವ ಹೆಚ್ಚುತ್ತಿದೆ. ಆದಾಗ್ಯೂ ಗುತ್ತಿಗೆ ಕೃಷಿಯಲ್ಲಿ ಹೆಚ್ಚಿನ ಬಂಡವಾಳ ಅಗತ್ಯವಿದೆ. ಕಚ್ಚಾ ವಸ್ತುಗಳ ಶೋಧ ಮತ್ತು ಕೃಷಿ ಸಂಪರ್ಕ ಬೆಸೆಯುವಲ್ಲಿ ಹೂಡಿಕೆ ಅಗತ್ಯವಿದೆ.ಭಾರತದಲ್ಲಿರುವ ಹಲವಾರು ಅಂತಾರಾಷ್ಟ್ರೀಯ ಕಂಪೆನಿಗಳು ಗುತ್ತಿಗೆ ಕೃಷಿಯಲ್ಲಿ ಆರಂಭಿಕ ಉಪಕ್ರಮಗಳನ್ನು ಕೈಗೊಂಡಿವೆ.ಇದು ಜಾಗತಿಕ ಸೂಪರ್ ಮಾರುಕಟ್ಟೆ ಸರಪಳಿಗೆ ಭಾರತವನ್ನು ಪ್ರಮುಖ ಹೊರ ಗುತ್ತಿಗೆ ತಾಣವಾಗಿ ಪರಿಗಣಿಸಲು ಇರುವ ಸ್ಪಷ್ಟ ಅವಕಾಶವಾಗಿದೆ.

ಒಂದೆಡೆ ಕೊಯಿಲೋತ್ತರ ನಿರ್ವಹಣೆಯಲ್ಲಿ ಅವಕಾಶಗಳಿವೆ. ಪ್ರಾಥಮಿಕ ಸಂಸ್ಕರಣೆ, ಮತ್ತು ದಾಸ್ತಾನು, ಸಂರಕ್ಷಿಸಿಡುವ ಮೂಲಸೌಕರ್ಯ, ಶೀತಲೀಕರಣ ಸರಪಳಿ ವ್ಯವಸ್ಥೆ ಮತ್ತು ಶೀತಲೀಕೃತ ಸಾಗಾಣಿಕೆ ವ್ಯವಸ್ಥೆಗಳು ಇದರಲ್ಲಿ ಸೇರುತ್ತವೆ. ಇನ್ನೊಂದೆಡೆ ಇಲ್ಲಿ ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ವಿಶೇಷವಾಗಿ ಸಾವಯವ ಮತ್ತು ಸಾರವರ್ಧಕ ಆಹಾರ ಕ್ಷೇತ್ರದಲ್ಲಿ ಬಹಳ ಅವಕಾಶಗಳಿವೆ.

ಹೆಚ್ಚುತ್ತಿರುವ ನಗರೀಕರಣ, ಹೆಚ್ಚುತ್ತಿರುವ ಮಧ್ಯಮ ವರ್ಗದ ಪಲಿತಾಂಶ ಎಂಬಂತೆ ಸಂಪೂರ್ಣ ಸಂಸ್ಕರಿತ ಆಹಾರಕ್ಕೆ ಸದಾ ಕಾಲ ಬೇಡಿಕೆ ಹೆಚ್ಚತೊಡಗಿದೆ. ನಾನು ಬರೇ ಒಂದು ಅಂಕಿ ಅಂಶವನ್ನು ಹಂಚಿಕೊಳ್ಳುತ್ತೇನೆ. ಪ್ರತೀ ದಿನ ಒಂದು ಮಿಲಿಯನ್ ಪ್ರಯಾಣಿಕರು ರೈಲಿನಲ್ಲಿ ಊಟ ಮಾಡುತ್ತಾರೆ. ಆ ಪ್ರತೀಯೊಬ್ಬರೂ ಆಹಾರ ಸಂಸ್ಕರಣಾ ಕೈಗಾರಿಕೆಗೆ ಸಮರ್ಥ ಗ್ರಾಹಕರು. ಇಷ್ಟೊಂದು ಅಗಾಧವಾದ ಅವಕಾಶ ಕಾಯುತ್ತಿದೆ, ಅದನ್ನು ಬಳಸಿಕೊಳ್ಳಬೇಕಿದೆ.

ಮಹಿಳೆಯರೇ ಮತ್ತು ಮಹನೀಯರೇ,

ಜಾಗತಿಕವಾಗಿ ಜೀವನ ಶೈಲಿಯ ಖಾಯಿಲೆಗಳು ಸತತವಾಗಿ ಜಾಗೃತಿಯನ್ನು ಹೆಚ್ಚಿಸುತ್ತಿವೆ. ಅಹಾರದ ಬಳಕೆಯಲ್ಲಿ ಆಹಾರದ ಪ್ರಕೃತಿ ಮತ್ತು ಗುಣಮಟ್ಟದ ಬಗ್ಗೆ ಜನ ಕಾಳಜಿ ವಹಿಸುತ್ತಿದ್ದಾರೆ.ಕೃತಕ ಬಣ್ಣಗಳನ್ನು, ರಾಸಾಯನಿಕಗಳನ್ನು ಮತ್ತು ಆಹಾರ ರಕ್ಷಣೆಗಾಗಿ/ಹಾಳಾಗದಂತೆ ಕಾಪಿಡುವುದಕ್ಕಾಗಿ ಹಾಕುವ ವಸ್ತುಗಳ ಬಗ್ಗೆ ಎಚ್ಚರ ಮೂಡತೊಡಗಿದೆ ಮತ್ತು ಅದನ್ನು ತಿರಸ್ಕರಿಸುವಂತಹ ಸ್ಥಿತಿ ಬಂದಿದೆ.ಭಾರತ ಇಂತಹ ಸಹಭಾಗಿತ್ವದಲ್ಲಿ ಒಂದು ಪರಿಹಾರ ಒದಗಿಸಿಕೊಡಬಲ್ಲುದು.

ಸಾಂಪ್ರದಾಯಿಕ ಭಾರತೀಯ ಆಹಾರ ಮತ್ತು ಆಧುನಿಕ ತಂತ್ರಜ್ಞಾನ , ಸಂಸ್ಕರಣೆ, ಪ್ಯಾಕೇಜಿಂಗ್ ಜತೆ ಸಮ್ಮಿಳಿತಗೊಂಡರೆ ವಿಶ್ವಕ್ಕೆ ಅದರಿಂದ ಆರೋಗ್ಯ ಲಾಭಗಳನ್ನು ಪುನರೂಪಿಸಲು ಸಾಧ್ಯವಾಗಬಹುದು. ಭಾರತೀಯ ಆಹಾರದ ಚೇತೋಹಾರಿಯಾದ ರುಚಿ, ಅದರಲ್ಲಿ ಬಳಸುವ ವಸ್ತುಗಳಾದ, ಉದಾಹರಣೆಗೆ ಅರಸಿನ, ಶುಂಠಿ, ಮತ್ತು ತುಳಸಿ ಮತ್ತಿತರ ವಸ್ತುಗಳ ರುಚಿ ವಿಶೇಷವಾದುದು. ಸ್ವಚ್ಚ/ಶುದ್ಧ, ಪೋಷಕಾಂಶಯುಕ್ತ ಮತ್ತು ರುಚಿಕರ ಸಂಸ್ಕರಿತ ಆಹಾರ, ಆರೋಗ್ಯ ರಕ್ಷಣೆಯ ಲಾಭಗಳೊಂದಿಗೆ ಮಿಳಿತಗೊಂಡಂತೆ ಇಲ್ಲಿ ಭಾರತದಲ್ಲಿ ಆರ್ಥಿಕವಾಗಿ ಮಿತವ್ಯಯದಲ್ಲಿ ತಯಾರಿಸಬಹುದು.

¨ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಭಾರತದಲ್ಲಿ ತಯಾರಾದ ಸಂಸ್ಕರಿತ ಆಹಾರ ಜಾಗತಿಕ ಗುಣಮಟ್ಟ ಮಾನದಂಡಕ್ಕೆ ಸಮನಾಗಿರುವಂತೆ ಖಾತ್ರಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಅಹಾರಕ್ಕೆ ಸೇರ್ಪಡೆಗೊಳಿಸುವ ವಸ್ತುಗಳಿಗೆ ಸಂಬಂಧಿಸಿದ ಗುಣಮಾನಕಗಳು ಕೊಡೆಕ್ಸ್ ನೊಂದಿಗೆ ಹೊಂದಾಣಿಕೆಯಾಗುವಂತೆ ನೋಡಿಕೊಳ್ಳುವ, ಮತ್ತು ವ್ಯಾಪಕ , ಸಮರ್ಥ ಪರೀಕ್ಷಾ ಪ್ರಯೋಗಾಲಯ ಮೂಲಸೌಕರ್ಯ ನಿರ್ಮಿಸುವತ್ತ ನಾವು ಆಹಾರ ಉದ್ಯಮದಲ್ಲಿ ಸೂಕ್ತ ವಾತಾವರಣ ನಿರ್ಮಿಸಲು ಬಹು ದೂರ ಸಾಗಬೇಕಾಗಿದೆ.

ಮಹಿಳೆಯರೇ ಮತ್ತು ಮಹನೀಯರೇ,

ರೈತರು, ಅವರನ್ನು ನಾವು ಗೌರವದಿಂದ “ಅನ್ನ ದಾತ” ಅಥವಾ ಆಹಾರ ಪೂರೈಕೆದಾರ ಎಂದು ಕರೆಯುತ್ತೇವೆ. ಅವರು ನಮ್ಮ ಆಹಾರ ಸಂಸ್ಕರಣೆ ಪ್ರಯತ್ನದ ಕೇಂದ್ರ ಭಾಗವಾಗಿದ್ದಾರೆ. ನಾವು ಐದು ವರ್ಷಗಳಲ್ಲಿ ಕೃಷಿ ಆದಾಯವನ್ನು ದುಪಟ್ಟು ಮಾಡುವ ಗುರಿಯೊಂದಿಗೆ ಕೆಲಸ ಆರಂಭಿಸಿದ್ದೇವೆ. ಇತ್ತೀಚೆಗೆ ನಾವು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ “ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನಾ” ವನ್ನು ವಿಶ್ವ ದರ್ಜೆಯ ಆಹಾರ ಸಂಸ್ಕರಣಾ ಮೂಲಸೌಕರ್ಯ ಒದಗಿಸಲು ಆರಂಭಿಸಿದ್ದೇವೆ. ಇದು 5 ಬಿಲಿಯನ್ ಅಮೇರಿಕನ್ ಡಾಲರ್ ಹೂಡಿಕೆಯ ಲಾಭದ ನಿರೀಕ್ಷೆಯಲ್ಲಿದೆ. ಎರಡು ಮಿಲಿಯನ್ ರೈತರಿಗೆ ಇದರಿಂದ ಲಾಭವಾಗಲಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಅರ್ಧ ಮಿಲಿಯನ್ ಅಧಿಕ ಉದ್ಯೋಗಗಳನ್ನು ನಿರ್ಮಾಣ ಮಾಡಲಿದೆ.

ಮೆಗಾ ಆಹಾರ ಪಾರ್ಕುಗಳ ನಿರ್ಮಾಣ ಈ ಯೋಜನೆಯ ಮುಖ್ಯ ಘಟಕ. ಈ ಆಹಾರ ಪಾರ್ಕುಗಳ ಮೂಲಕ ಕೃಷಿ ಸಂಸ್ಕರಣಾ ಗುಂಪುಗಳನ್ನು ಪ್ರಮುಖ ಉತ್ಪಾದನಾ ಕೇಂದ್ರಗಳ ಜತೆ ಬೆಸೆಯಲಾಗುತ್ತದೆ. ಇದರಿಂದ ಬಟಾಟೆ, ಅನಾನಾಸು,ಕಿತ್ತಳೆ ಮತ್ತು ಆಪಲ್ ಇತ್ಯಾದಿ ಬೆಳೆಗಳಿಗೆ ಉತ್ತಮ ಮೌಲ್ಯ ದೊರೆಯಲಿದೆ. ಈ ಆಹಾರ ಪಾರ್ಕುಗಳಲ್ಲಿ ರೈತರ ಗುಂಪುಗಳಿಗೆ ಘಟಕಗಳನ್ನು ಸ್ಥಾಪಿಸುವಂತೆ ಉತ್ತೇಜನ ನೀಡಲಾಗುವುದು. ಆ ಮೂಲಕ ಹಾಳಾಗುವಿಕೆ/ನಷ್ಟ ಮತ್ತು ಸಾರಿಗೆ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ ಮತ್ತು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಇಂತಹ ಒಂಭತ್ತು ಪಾರ್ಕುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ ಮತ್ತು ಇನ್ನು ಮೂವತ್ತಕ್ಕೂ ಅಧಿಕ ಪಾರ್ಕುಗಳು ದೇಶದ ವಿವಿಧೆಡೆ ತಲೆ ಎತ್ತಲಿವೆ.

ಕೊನೆ ಹಂತದ ತನಕ ಪೂರೈಕೆ ವ್ಯವಸ್ಥೆಗಾಗಿ , ನಾವು ಡಿಜಿಟಲ್ ತಂತ್ರಜ್ಞಾನ ಬಳಕೆ ಮೂಲಕ ಆಡಳಿತವನ್ನು ಸುಧಾರಿಸುತ್ತಿದ್ದೇವೆ. ನಾವು ಬ್ರಾಡ್ ಬ್ಯಾಂಡ್ ಸಂಪರ್ಕದ ಮೂಲಕ , ಸ್ಪಷ್ಟವಾದ ಕಾಲಮಿತಿಯೊಳಗೆ ನಮ್ಮ ಗ್ರಾಮಗಳನ್ನು ಬೆಸೆಯಲು ಯೋಜಿಸಿದ್ದೇವೆ. ನಾವು ಭೂದಾಖಲೆಗಳನ್ನು ಡಿಜಿಟಲೀಕರಿಸಿದ್ದೇವೆ. ಮೊಬೈಲ್ ವೇದಿಕೆಯಲ್ಲಿ ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ಈ ಕ್ರಮಗಳು ವಾಸ್ತವಿಕ ಅವಧಿಯಲ್ಲಿ ಮಾಹಿತಿ ವರ್ಗಾವಣೆ, ರೈತರಿಗೆ ಜ್ಞಾನ ಮತ್ತು ಕೌಶಲ್ಯವನ್ನು ಒದಗಿಸುವ ನಿಟ್ಟಿನಲ್ಲಿ ವೇಗ ಪಡೆದುಕೊಳ್ಳುತ್ತಿವೆ. ಇ-ನಾಮ್, ನಮ್ಮ ರಾಷ್ಟ್ರೀಯ ಕೃಷಿ ಇ-ಮಾರುಕಟ್ಟೆಯಾಗಿದ್ದು, ಅದು ನಮ್ಮ ಕೃಷಿ ಮಾರುಕಟ್ಟೆಗಳನ್ನು ರಾಷ್ಟ್ರವ್ಯಾಪ್ತಿಯಲ್ಲಿ ಬೆಸೆಯುತ್ತಿದೆ, ಆ ಮೂಲಕ ನಮ್ಮ ರೈತರಿಗೆ ಸ್ಪರ್ಧಾತ್ಮಕ ದರದ ಮತ್ತು ಆಯ್ಕೆಯ ಸ್ವಾತಂತ್ರ್ಯದ ಲಾಭವನ್ನು 

ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ನೈಜ ಸ್ಪೂರ್ತಿಯಡಿ ನಮ್ಮ ರಾಜ್ಯ ಸರಕಾರಗಳು ಕೂಡಾ ಪ್ರಕ್ರಿಯೆಗಳನ್ನು ಸರಳಗೊಳಿಸಲು ಕೇಂದ್ರ ಸರಕಾರದ ಪ್ರಯತ್ನಗಳಿಗೆ ಸ್ಪಂದಿಸುತ್ತಿವೆ. ಹೂಡಿಕೆಯನ್ನು ಆಕರ್ಷಿಸಲು ಹಲವು ರಾಜ್ಯಗಳು ಉತ್ತಮ , ಆಕರ್ಶಕ, ಆಹಾರ ಸಂಸ್ಕರಣಾ ನೀತಿಗಳನ್ನು ರೂಪಿಸಿವೆ. ಭಾರತದ ಪ್ರತೀ ರಾಜ್ಯವೂ ತನ್ನ ವಿಶೇಷತೆಯಾಗಿ ಕನಿಷ್ಟ ಒಂದು ಆಹಾರ ಉತ್ಪನ್ನವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಕೋರುತ್ತೇನೆ. ಅದೇ ರೀತಿ ಪ್ರತೀ ಜಿಲ್ಲೆಯೂ ಯಾವುದಾದರೂ ಆಹಾರ ಪದಾರ್ಥವನ್ನು ಉತ್ಪಾದನೆಗೆ ಮತ್ತು ಒಂದನ್ನು ವಿಶೇಷತೆಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ.

ಮಹಿಳೆಯರೇ ಮತ್ತು ಮಹನೀಯರೇ,

ಇಂದು ನಮ್ಮ ಬಲಿಷ್ಟವಾದ ಕೃಷಿ ಮೂಲ ನಮಗೆ ಶಕ್ತಿಶಾಲಿಯಾದ ಆಹಾರ ಸಂಸ್ಕರಣಾ ವಲಯವನ್ನು ನಿರ್ಮಿಸಲು ಒಂದು ವೇದಿಕೆಯನ್ನೊದಗಿಸುತ್ತದೆ. ನಮ್ಮ ವಿಸ್ತಾರವಾದ ಬಳಕೆದಾರ ನೆಲೆ , ಹೆಚ್ಚುತ್ತಿರುವ ಆದಾಯ, ಪೂರಕವಾಗಿರುವ ಹೂಡಿಕೆ ವಾತಾವರಣ ಮತ್ತು ವ್ಯಾಪಾರೋದ್ಯಮಕ್ಕೆ ಅನುಕೂಲಕರ ತಾಣವಾಗಿ ರೂಪಿಸುವಲ್ಲಿ ಸರಕಾರದ ಅರ್ಪಣಾಭಾವ- ಇವೆಲ್ಲವೂ ಭಾರತವನ್ನು ಜಾಗತಿಕ ಆಹಾರ ಸಂಸ್ಕರಣಾ ತಾಣವಾಗಿ ರೂಪಿಸಲು ಸಿದ್ದಮಾಡಿಟ್ಟಿವೆ.

ಭಾರತದ ಆಹಾರ ಉದ್ಯಮದ ಪ್ರತೀ ಉಪವಲಯದಲ್ಲಿ ಬಹಳಷ್ಟು ಅವಕಾಶಗಳಿವೆ. ನಾನು ನಿಮಗೆ ಕೆಲವು ವಿವರಣೆಗಳನ್ನು ಕೊಡಲು ಇಚ್ಚಿಸುತ್ತೇನೆ.

ಹೈನುಗಾರಿಕಾ ಕ್ಷೇತ್ರ ಗ್ರಾಮೀಣ ಆರ್ಥಿಕತೆಯ ಪ್ರಮುಖ ವಲಯವಾಗಿ ಮೂಡಿ ಬಂದಿದೆ. ನಾವೀಗ ಹಾಲಿನ ಬಹು ಉತ್ಪನ್ನ ತಯಾರಿಕೆ ಮಟ್ಟಕ್ಕೆ ಉತ್ಪಾದನೆ ಹೆಚ್ಚಿಸುವ ಮೂಲಕ ಈ ವಲಯವನ್ನು ಇನ್ನೊಂದು ಹಂತಕ್ಕೆ ವಿಸ್ತರಿಸಲು ಹೊರಟಿದ್ದೇವೆ.

ಜೇನು ಮಾನವ ಕುಲಕ್ಕೆ ನಿಸರ್ಗದ ಕೊಡುಗೆ. ಅದು ಹಲವು ಉಪ ಉತ್ಪನ್ನಗಳನ್ನು ಕೊಡುತ್ತದೆ: ಜೇನು ಮೇಣ ಇತ್ಯಾದಿ. ಇದಕ್ಕೆ ಕೃಷಿ ಆದಾಯ ಹೆಚ್ಚಿಸುವ ಸಾಮರ್ಥ್ಯ ಇದೆ. ಪ್ರಸ್ತುತ ನಾವು ಜೇನು ಉತ್ಪಾದನೆ ಮತ್ತು ರಫ್ತಿನಲ್ಲಿ ಆರನೇ ಸ್ಥಾನದಲ್ಲಿದ್ದೇವೆ. ಭಾರತ ಈಗ ಸಿಹಿ ಕ್ರಾಂತಿಗೆ ಪಕ್ವವಾಗಿದೆ.

ಜಾಗತಿಕ ಮೀನು ಉತ್ಪಾದನೆಯಲ್ಲಿ ಭಾರತದ ಪಾಲು ಶೇಖಡಾ ಆರರಷ್ಟಿದೆ. ಸಿಗಡಿ ರಫ್ತಿನಲ್ಲಿ ನಾವು ವಿಶ್ವದ ಎರಡನೇ ದೊಡ್ಡ ರಾಷ್ಟ್ರವಾಗಿದ್ದೇವೆ. ಭಾರತ ಮೀನು ಮತ್ತು ಮೀನುಗಾರಿಕಾ ಉತ್ಪನ್ನಗಳನ್ನು 95 ದೇಶಗಳಿಗೆ ರಫ್ತು ಮಾಡುತ್ತಿದೆ. ನೀಲಿ ಕ್ರಾಂತಿಯ ಮೂಲಕ ನಾವು ಸಾಗರ ಆರ್ಥಿಕತೆಯನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇವೆ. ಈಗಾಗಲೇ ಬಳಸಿಕೊಂಡಿಲ್ಲದ ಕ್ಶೇತ್ರಗಳಲ್ಲಿ ನಾವು ಪ್ರವೇಶಿಸುವ ಗುರಿ ಹೊಂದಿದ್ದೇವೆ. ಅವುಗಳೆಂದರೆ ಅಲಂಕಾರಿಕ ಮೀನುಗಾರಿಕೆ ಮತ್ತು ಅಹಾರಕ್ಕೆ ಉತ್ತಮವೆಂದು ಪರಿಗಣಿಸುವ ಸಿಹಿ ನೀರು ಮೀನುಗಾರಿಕೆ ಅಭಿವೃದ್ಧಿಯತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಹೊಸ ಕ್ಷೇತ್ರಗಳಾದ ಮುತ್ತು ಕೃಷಿಯ ಬಗ್ಗೆಯೂ ಅನ್ವೇಷಣೆ ಮಾಡುವ ಆಶಯ ಹೊಂದಿದ್ದೇವೆ.

ಸಹ್ಯ ಅಭಿವೃದ್ಧಿಗೆ ನಾವು ಬದ್ದರಾಗಿದ್ದೇವೆ. ಸಾವಯವ ಕೃಷಿಯ ಆಶಯ ನಮ್ಮ ಹೃದಯದಲ್ಲಿದೆ. ಈಶಾನ್ಯ ಭಾರತದ ಸಿಕ್ಕಿಂ , ಭಾರತದ ಮೊದಲ ಪೂರ್ಣ ಸಾವಯವ ರಾಜ್ಯವಾಗಿದೆ.ಇಡೀಯ ಈಶಾನ್ಯ ಭಾರತ ಸಾವಯವ ಉತ್ಪಾದನೆಗೆ ಕಾರ್ಯಾಚರಣಾ ಮೂಲಸೌಕರ್ಯ ನಿರ್ಮಾಣದ ಅವಕಾಶಗಳನ್ನು ಒದಗಿಸುತ್ತದೆ.

ಸ್ನೇಹಿತರೇ,

ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು , ಭಾರತದ ಆಹಾರ ಪದ್ಧತಿ ಮತ್ತು ರುಚಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಅಗತ್ಯ. ನಿಮಗೆ ಒಂದು ಸಣ್ಣ ಉದಾಹರಣೆ ಕೊಡಬೇಕೆಂದರೆ, ಹಾಲು ಆಧಾರಿತ ಉತ್ಪನ್ನಗಳು ಮತ್ತು ಹಣ್ಣಿನ ರಸಗಳನ್ನು ಆಧರಿಸಿದ ಪೇಯಗಳು ಭಾರತೀಯ ಆಹಾರ ಅಭ್ಯಾಸದ ಸಹಜ ಭಾಗವಾಗಿವೆ. ಅದರಿಂದಾಗಿ , ನಾನು ಇಂಗಾಲಾಮ್ಲ ಹುದುಗಿಸಿದ ಪೇಯಗಳನ್ನು ತಯಾರಿಸುವ ಉತ್ಪಾದಕರಿಗೆ ಐದು ಶೇಖಡಾದಷ್ಟು ಹಣ್ಣಿನ ರಸವನ್ನು ಅವರ ಉತ್ಪನ್ನಗಳಲ್ಲಿ ಸೇರಿಸುವ ಅವಕಾಶದ ಕುರಿತು ಸಲಹೆ ಮಾಡುತ್ತೇನೆ.

ಪೋಷಕಾಂಶ ಭದ್ರತೆಗೂ ಆಹಾರ ಸಂಸ್ಕರಣೆಯಲ್ಲಿ ಪರಿಹಾರಗಳಿವೆ. ಉದಾಹರಣೆಗೆ ನಮ್ಮ ಅಹಾರಧಾನ್ಯಗಳು, ಸಿರಿಧಾನ್ಯ ಕಾಳುಗಳು ಅತೀ ಹೆಚ್ಚಿನ ಪೋಷಕಾಂಶ ಮೌಲ್ಯವನ್ನು ಹೊಂದಿವೆ. ಅವು ಪ್ರತಿಕೂಲ ಕೃಷಿ ವಾತಾವರಣವನ್ನು ಎದುರಿಸಿಯೂ ಬದುಕಬಲ್ಲವು. ಅವುಗಳನ್ನು “ಅಧಿಕ ಪೋಷಕಾಂಶಯುಕ್ತ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವ” ಬೆಳೆಗಳು ಎಂದು ಕರೆಯಬಹುದು. ನಾವು ಇವುಗಳನ್ನು ಆಧರಿಸಿ ಸಾಹಸವೊಂದನ್ನು ಮಾಡಬಹುದೇ? .ಇದರಿಂದ ನಮ್ಮ ಅತ್ಯಂತ ಬಡ ರೈತರ ಆದಾಯ ಹೆಚ್ಚಳವಾಗುತ್ತದೆ ಮತ್ತು ನಮ್ಮ ಪೋಷಕಾಂಶ ಮಟ್ಟವೂ ಹೆಚ್ಚಳವಾಗುತ್ತದೆ. ಇಂತಹ ಉತ್ಪನ್ನಗಳು ವಿಶ್ವದಾದ್ಯಂತ ಮಾರುಕಟ್ಟೆಯಲ್ಲಿ ಅನುರಣನೆ/ಕಂಪನವನ್ನುಂಟು ಮಾಡಬಲ್ಲವು.

ನಾವು ನಮ್ಮ ಸಾಮರ್ಥ್ಯವನ್ನು ವಿಶ್ವದ ಆವಶ್ಯಕತೆಗೆ ಜೋಡಿಸಿಕೊಳ್ಳಬಲ್ಲೆವೇ ?. ಭಾರತೀಯ ಸಂಪ್ರದಾಯಗಳನ್ನು ಭವಿಷ್ಯದ ಮನುಕುಲದ ಜತೆ ಬೆಸೆಯಬಲ್ಲೆವೇ ?. ಭಾರತದ ರೈತರನ್ನು ವಿಶ್ವದ ಸುತ್ತಲಿನ ಮಾರುಕಟ್ಟೆ ಜತೆ ಸಂಪರ್ಕಿಸಬಲ್ಲೆವೇ ?. ಈ ಕೆಲವು ಪ್ರಶ್ನೆಗಳನ್ನು ನಾನು ನಿಮಗೆ ಬಿಡಲು ಇಚ್ಚಿಸುತ್ತೇನೆ.

ನನಗೆ ಭರವಸೆ ಇದೆ, ವಿಶ್ವ ಭಾರತ ಆಹಾರ ಮೇಳ ಈ ನಿಟ್ಟಿನಲ್ಲಿ ನಮಗೆ ಕೆಲವು ದೃಢ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡಲಿದೆ ಎಂಬುದಾಗಿ. ಇದು ನಮ್ಮ ಶ್ರೀಮಂತ ಪಾಕಯೋಗ್ಯ ವ್ಯವಸ್ಥೆಯ ಬಗ್ಗೆ ಮೌಲ್ಯಯುತ ಒಳನೋಟವನ್ನು ಒದಗಿಸಿಕೊಡಲಿದೆ. ಜತೆಗೆ ನಮ್ಮ ಪ್ರಾಚೀನ ಆಹಾರ ಸಂಸ್ಕರಣಾ ಜ್ಞಾನವನ್ನು ಪ್ರಚುರಪಡಿಸಲಿದೆ.

ಭಾರತೀಯ ಪಾಕಪ್ರಾವೀಣ್ಯವನ್ನು ಮತ್ತು ವೈವಿಧ್ಯತೆಯನ್ನು ವಿವರಿಸುವ 24 ಸಂಸ್ಮರಣಾ ಅಂಚೆ ಚೀಟಿಗಳನ್ನು ಅಂಚೆ ಇಲಾಖೆ ಈ ಸಂಧರ್ಭದಲ್ಲಿ ಹೊರತಂದಿರುವುದಕ್ಕೆ ನಾನು ಸಂತೋಷಪಡುತ್ತೇನೆ.

ಮಹಿಳೆಯರೇ ಮತ್ತು ಮಹನೀಯರೇ,

ನಾನು ನಿಮ್ಮೆಲ್ಲರನ್ನೂ ಭಾರತೀಯ ಆಹಾರ ಸಂಸ್ಕರಣಾ ವಲಯದ ಉತ್ಸಾಹದಾಯಕ ಬೆಳವಣಿಗೆಯ ಪ್ರಯಾಣದಲ್ಲಿ ಭಾಗೀದಾರರಾಗಬೇಕು ಎಂದು ಆಹ್ವಾನಿಸುತ್ತೇನೆ. ಅಗತ್ಯ ಬಿದ್ದಾಗೆಲ್ಲ ನಾನು ನಿಮಗೆ ನನ್ನ ತುಂಬು ಹೃದಯದ ಬೆಂಬಲದ ಭರವಸೆ ನೀಡುತ್ತೇನೆ.

ಬನ್ನಿ , ಭಾರತದಲ್ಲಿ ಹೂಡಿಕೆ ಮಾಡಿ

ಕೃಷಿಕ್ಷೇತ್ರದಿಂದ ಹಿಡಿದು ವ್ಯವಸಾಯದವರೆಗೆ ಇಲ್ಲಿ ಅನಿಯಮಿತ ಅವಕಾಶಗಳಿವೆ.

ಇದು ಉತ್ಪಾದನೆ, ಸಂಸ್ಕರಣೆ ಮತ್ತು ಸಮೃದ್ಧಿಯ ಅವಕಾಶಗಳ ನಾಡು,

ಭಾರತಕ್ಕೆ ಮತ್ತು ಇಡೀ ವಿಶ್ವಕ್ಕೆ.

ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Business Standard poll: Experts see FY26 nominal GDP growth at 10-11%

Media Coverage

Business Standard poll: Experts see FY26 nominal GDP growth at 10-11%
NM on the go

Nm on the go

Always be the first to hear from the PM. Get the App Now!
...
Prime Minister condoles loss of lives due to stampede in Tirupati, Andhra Pradesh
January 09, 2025

The Prime Minister, Shri Narendra Modi has condoled the loss of lives due to stampede in Tirupati, Andhra Pradesh.

The Prime Minister’s Office said in a X post;

“Pained by the stampede in Tirupati, Andhra Pradesh. My thoughts are with those who have lost their near and dear ones. I pray that the injured recover soon. The AP Government is providing all possible assistance to those affected: PM @narendramodi”