ನಾಗರಿಕ ಸೇವಾ ದಿನದ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನಾಗರಿಕ ಸೇವಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭ ಮೆಚ್ಚುಗೆ ಸೂಚಿಸಲು, ಮೌಲ್ಯಮಾಪನ ಮಾಡಲು ಮತ್ತು ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲ ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿ ಪ್ರಶಸ್ತಿ ನಾಗರಿಕ ಸೇವಾ ಅಧಿಕಾರಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದ ಅವರು, ಪ್ರಶಸ್ತಿ ವಿಜೇತರೆಲ್ಲರನ್ನೂ ಅಭಿನಂದಿಸಿದರು. ಈ ಪ್ರಶಸ್ತಿಗಳು ಸರ್ಕಾರದ ಆದ್ಯತೆಗಳನ್ನು ಸೂಚಿಸುತ್ತವೆ ಎಂದೂ ಸಹ ಅವರು ಹೇಳಿದರು.
ಆದ್ತತಾ ಕಾರ್ಯಕ್ರಮಗಳಾದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ದೀನ್ ದಯಾಳ್ ಉಪಾಧ್ಯಾಯ ಕೌಶಲ್ಯ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಡಿಜಿಟಲ್ ಪಾವತಿ ವಲಯದಲ್ಲಿ ನೀಡಲಾಗಿರುವ ಪ್ರಶಸ್ತಿಗಳು ಅತ್ಯಂತ ಪ್ರಮುಖವಾದವು, ಏಕೆಂದರೆ ಆ ಯೋಜನೆಗಳು ನವ ಭಾರತ ನಿರ್ಮಾಣ ನಿಟ್ಟಿನಲ್ಲಿ ಅತ್ಯಂತ ಮಹತ್ವವಾದವು ಎಂದು ಅವರು ಹೇಳಿದರು. ಅವರು ಇಂದು ಬಿಡುಗಡೆಗೊಂಡ ಪ್ರಧಾನಮಂತ್ರಿಗಳ ಅವಾರ್ಡ್ಸ್ ಮತ್ತು ಮಹತ್ವಾಕಾಂಕ್ಷಿಯ ಜಿಲ್ಲೆಗಳ ನಿರ್ಮಾಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಾದ ಪುಸ್ತಕಗಳ ಬಗ್ಗೆ ಉಲ್ಲೇಖಿಸಿದರು.
ಮಹತ್ವಾಕಾಂಕ್ಷಿ ಜಿಲ್ಲೆಗಳ ವಿಷಯ ಕುರಿತು ಮಾತನಾಡಿದ ಪ್ರಧಾನಮಂತ್ರಿಗಳು, ಈ 115 ಜಿಲ್ಲೆಗಳು ಆಯಾ ರಾಜ್ಯಗಳ ಅಭಿವೃದ್ಧಿಯ ಎಂಜಿನ್ ಗಳಾಗಿ ಕಾರ್ಯನಿರ್ವಹಿಸಲಿವೆ ಎಂದರು. ಅಭಿವೃದ್ಧಿಯಲ್ಲಿ ಸಾರ್ವಜನಿಕ ಸಹಭಾಗಿತ್ವ ಅಥವಾ ಜನರ ಭಾಗಿದಾರಿ ಅತಿ ಮುಖ್ಯ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ 2022ರ ವೇಳೆಗೆ ನಮ್ಮ ಸ್ವಾತಂತ್ರ್ಯ ಯೋಧರು ಕಂಡ ನವ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ ಎಂದು ಹೇಳಿದರು.
ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ಲಭ್ಯವಿರುವ ಎಲ್ಲ ಬಗೆಯ ತಂತ್ರಜ್ಞಾನಗಳನ್ನು ಆಡಳಿತ ಸುಧಾರಣೆಗೆ ಬಳಸಿಕೊಳ್ಳಬೇಕು ಎಂದು ಅವರು ಸಮರ್ಥಿಸಿದರು. ಜಗತ್ತಿನಾದ್ಯಂತ ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನದ ವೇಗಕ್ಕೆ ತಕ್ಕಂತೆ ನಾಗರಿಕ ಸೇವಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದು ಅತಿ ಮುಖ್ಯ ಎಂದರು.
ನಾಗರಿಕ ಸೇವಾ ಅಧಿಕಾರಿಗಳಿಗೆ ಹೆಚ್ಚಿನ ಸಾಮರ್ಥ್ಯವಿದೆ ಎಂದು ಬಣ್ಣಿಸಿದ ಅವರು, ಆ ಸಾಮರ್ಥ್ಯಗಳನ್ನು ರಾಷ್ಟ್ರದ ಅನುಕೂಲಕ್ಕಾಗಿ ಅತ್ಯಂತ ದೊಡ್ಡ ಮಟ್ಟದಲ್ಲಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.