India has Walked the Talk; country has been identified as one of the top reformers: PM Modi
With GST, we are moving towards a modern tax regime, which is transparent, stable and predictable: PM Modi
We are particularly keen to develop India into a knowledge based, skill supported and technology driven society: PM Modi
Our mantra is reform, perform and transform. We want to do better and better: PM Modi

ವಿಶ್ವ ಬ್ಯಾಂಕ್ ನ ಸಿ.ಇ.ಓ. ಕುಮಾರಿ ಕ್ರಿಸ್ಟಲಿನಾ ಜಾರ್ಜಿಯೇವಾ ಅವರೇ; ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳೇ; ಹಿರಿಯ ಅಧಿಕಾರಿಗಳೇ, ವಾಣಿಜ್ಯ ನಾಯಕರೇ;ಮಹನೀಯರೇ ಮತ್ತು ಮಹಿಳೆಯರೇ! 
 
ಇಂದು  ಗುರು ನಾನಕ್ ಜಯಂತಿ  ಪವಿತ್ರ ದಿನವಾಗಿದೆ. ಗುರು ನಾನಕ್ ಅವರ ಪುಣ್ಯ ಸ್ಮರಣೆಯು ದೇಶದ ಏಕತೆ, ಸತ್ಯನಿಷ್ಠೆ ಮತ್ತು ಸತ್ಯ ಮಾರ್ಗದ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಇನ್ನು ಎರಡು ವರ್ಷಗಳಲ್ಲಿ ಗುರು ನಾನಕ್ ಅವರ 550ನೆಯ ಪ್ರಕಾಶ್ ಪರ್ವ ಆಚರಿಸುವ ಅವಕಾಶವು ಇಡೀ ಮನುಕುಲಕ್ಕೆ ದೊರಕಲಿದೆ. ಇಂತಹ ಜಗದ್ಗುರುವಿಗೆ ಪ್ರಣಾಮ ಸಲ್ಲಿಸುತ್ತಾ ನಿಮ್ಮೆಲ್ಲರಿಗೆ ಶುಭಾಶಯಗಳನ್ನು ಕೋರುತ್ತೇನೆ. 
 
ನಾನು ಇಂದು ಇಲ್ಲಿರಲು ಅತೀವ ಸಂತೋಷ ಪಡುತ್ತೇನೆ. ಆಪ್ಯಾಯಮಾನವಾದ ಆಚರಣೆಯ ಮನೋಭಾವವನ್ನು ನಾನಿಲ್ಲಿ ಕಾಣುತ್ತಿದ್ದೇನೆ. ಸುಗಮವಾಗಿ ವಾಣಿಜ್ಯ ನಡೆಸುವುದನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಮಾಡಿರುವ ದೊಡ್ಡ ಕಾರ್ಯವನ್ನು ವಿಶ್ವಬ್ಯಾಂಕ್ ಗುರುತಿಸಿದೆ. ನಾವು ಸುಗಮವಾಗಿ ವಾಣಿಜ್ಯ ನಡೆಸುವ ದೇಶಗಳ ಶ್ರೇಣಿಯಲ್ಲಿ ಮೊದಲ 100 ಸ್ಥಾನದಲ್ಲಿದ್ದೇವೆ. ಮೂರು ವರ್ಷಗಳ ಅಲ್ಪಾವಧಿಯಲ್ಲಿ ನಾವು 42 ಸ್ಥಾನ ಮೇಲೇರಿದ್ದೇವೆ.
ಈ ಸಂಭ್ರಮದ ಸಂದರ್ಭದಲ್ಲಿ ನಮ್ಮ ಜೊತೆ ಇರುವುದಕ್ಕಾಗಿ ನಾನು ಕುಮಾರಿ ಕ್ರಿಸ್ಟಲಿನಾ ಜಾರ್ಜಿಯೇವಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಸಮಾಜಕ್ಕೆ ಮತ್ತು ಆರ್ಥಿಕತೆಗೆ ಲಾಭವಾಗುವಂಥ ಸುಧಾರಣೆಗಳನ್ನು ಕೈಗೊಳ್ಳಲು ದೇಶಗಳಿಗೆ ಉತ್ತೇಜನ ನೀಡುವ ವಿಶ್ವಬ್ಯಾಂಕ್ ನ ಬದ್ಧತೆಯನ್ನು ಇದು ತೋರಿಸುತ್ತದೆ. ಅವರ ಉಪಸ್ಥಿತಿ ಮುಂಬರುವ ದಿನಗಳಲ್ಲಿ ಮತ್ತು ತುಂಗಳುಗಳಲ್ಲಿ ಇನ್ನೂ ಉತ್ತಮ ಕೆಲಸ ಮಾಡಲು ನಮ್ಮ ತಂಡಕ್ಕೆ ಪ್ರೇರಣೆ ನೀಡುತ್ತದೆ. 
ಭಾರತದಲ್ಲಿ ಸುಗಮವಾಗಿ ವಾಣಿಜ್ಯ ನಡೆಸುವುದನ್ನು ಉತ್ತಮಪಡಿಸಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ದೇಶೀಯ ಮತ್ತು ವಿದೇಶೀ ಹೂಡಿಕೆದಾರ ಸಮುದಾಯಕ್ಕೆ ನಾನು  ಕಳೆದ ಮೂರು ವರ್ಷಗಳಿಂದಲೂ ಸತತವಾಗಿ ಹೇಳುತ್ತಾ ಬಂದಿದ್ದೇನೆ.
ಸ್ನೇಹಿತರೇ, ಭಾರತ ನುಡಿದಂತೆ ನಡೆದಿದೆ. 
ಈ ವರ್ಷ ಶ್ರೇಯಾಂಕದಲ್ಲಿ ಭಾರತದ ಜಿಗಿತ ಅತಿ ಹೆಚ್ಚಾಗಿದೆ. ಭಾರತವು ಅಗ್ರ ಸುಧಾರಕರದಲ್ಲಿ ಒಂದೆಂದು ಪರಿಗಣಿತವಾಗಿದೆ. ಇದಕ್ಕೆ ಶ್ರಮಿಸಿದ ಎಲ್ಲರಿಗೂ ಶುಭಾಶಯಗಳು. ನೀವು ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ. 
ಈ ಸುಧಾರಣೆ ಮಹತ್ವದ್ದಾಗಿದೆ: 
•        ಏಕೆಂದರೆ ಇದು ದೇಶದಲ್ಲಿ ಉತ್ತಮ ಆಡಳಿತದ ಸೂಚಕವಾಗಿದೆ;
•        ಏಕೆಂದರೆ ಇದು ನಮ್ಮ ಸಾರ್ವಜನಿಕ ನೀತಿಗಳ ಮಾನದಂಡವಾಗಿದೆ;
•        ಏಕೆಂದರೆ ಪ್ರಕ್ರಿಯೆಗಳ ಪಾರದರ್ಶಕತೆಯ ಮೈಲಿಗಲ್ಲಾಗಿದೆ;
•        ಏಕೆಂದರೆ ಸುಗಮವಾಗಿ ವಾಣಿಜ್ಯ ನಡೆಸುವುದು, ಸುಗಮ ಜೀವನಕ್ಕೂ ಇಂಬು ನೀಡುತ್ತದೆ;
•        ಮತ್ತು ಅಂತಿಮವಾಗಿ  ಇದು ಸಮಾಜದಲ್ಲಿ ಜನರು ಬದುಕುವ, ದುಡಿಯುವ ಮತ್ತು ವ್ಯವಹರಿಸುವುದನ್ನು ಬಿಂಬಿಸುತ್ತದೆ.
ಸ್ನೇಹಿತರೇ! 
 
ಇದೆಲ್ಲವೂ ಸಂಬಂಧಿತ ಬಾಧ್ಯಸ್ಥರ ಪ್ರಯೋಜನಕ್ಕಾಗಿ. ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ದೊಡ್ಡ ಬದಲಾವಣೆ ಸಾಧ್ಯ ಎಂಬುದನ್ನು ವಿಶ್ವಬ್ಯಾಂಕ್ ವರದಿ ನನಗೆ ತೋರಿಸಿದೆ. ನಿರಂತರವಾದ ಪ್ರಯತ್ನ ಇನ್ನೂ ಹೆಚ್ಚಿನ ಸುಧಾರಣೆಗೆ ನೆರವಾಗಲಿದೆ.
ಹಾಗೆಯೇ ನನಗೆ ಬೇರಾವುದೇ ಕೆಲಸವಿಲ್ಲವೆಂದು ನಿಮಗೆ ಗೊತ್ತಿದೆ. ಆದ್ದರಿಂದ ನನಗೆ ಮುಂದೆಯೂ ಮಾಡಬೇಕಾದ ಕೆಲಸಗಳು ಕಾಣುತ್ತಿವೆ. ನನ್ನ ದೇಶ, ನನ್ನ ದೇಶದ ನೂರಾ ಇಪ್ಪತ್ತೈದು ಕೋಟಿ ಜನರ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರುವಲ್ಲಿ ಮತ್ತು ದೇಶವು ನಮ್ಮಿಂದ ಏನನ್ನು ಬಯಸುತ್ತದೋ ಅವುಗಳನ್ನು ಪೂರ್ತಿ ಮಾಡುವಲ್ಲಿ ನಾನು ಯಾವುದೇ ಕೊರತೆ ಮಾಡುವುದಿಲ್ಲ ಎಂದು ನಿಮಗೆ ವಿಶ್ವಾಸ ನೀಡುತ್ತೇನೆ.
ನಾನು ಏಕೆ ಇದನ್ನು ಹೇಳುತ್ತೇನೆ ಎಂದರೆ, ಭಾರತ ಈಗ ತಲುಪಿರುವ ಸ್ಥಾನದಿಂದ ಹೆಚ್ಚಿನ ಸುಧಾರಣೆ ಕಾಣುವುದು ಸುಲಭ. ನಮ್ಮ ಪ್ರಯತ್ನಗಳು ವೇಗ ಪಡೆದಿವೆ. ವ್ಯವಸ್ಥಾಪನಾ ಭಾಷೆಯಲ್ಲಿ ಹೇಳುವುದಾದರೆ, ನಾವು ಏರುಮುಖ ಚಾಲನೆಯಲ್ಲಿ ಮಹತ್ವದ ಸಾಮೂಹಿಕ ತಿರುವು ಪಡೆದಿದ್ದೇವೆ.
ಉದಾಹರಣೆಗೆ, ಈ ವರದಿಯು ಜಿಎಸ್ಟಿ ಅಥವಾ ಸರಕು ಮತ್ತು ಸೇವೆಗಳ ತೆರಿಗೆ ಅನುಷ್ಠಾನವನ್ನು ಗಣನೆಗೆ ತೆಗೆದುಕೊಂಡಿಲ್ಲ. ನೀವೆಲ್ಲರೂ ತಿಳಿದಂತೆ, ಜಿಎಸ್ಟಿ ಭಾರತೀಯ ಆರ್ಥಿಕತೆಯಲ್ಲಿ ಅತಿ ದೊಡ್ಡ ತೆರಿಗೆ ಸುಧಾರಣೆಯಾಗಿದೆ.  ಮತ್ತು ಇದು  ವಾಣಿಜ್ಯದ ಹಲವು ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಜಿಎಸ್ಟಿಯೊಂದಿಗೆ ನಾವು ಆಧುನಿಕ ತೆರಿಗೆ ಆಡಳಿತದತ್ತ ಸಾಗುತ್ತಿದ್ದೇವೆ, ಇದು ಪಾರದರ್ಶಕ, ಸ್ಥಿರ ಮತ್ತು ಊಹೆಗೆ ನಿಲುಕುವಂತಿದೆ.  
 
ಜಿಎಸ್ ಟಿಯ ಕುರಿತು ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಇಲ್ಲಿ ವ್ಯವಹಾರ ಲೋಕದ ಬಹಳಷ್ಟು ಜನರಿದ್ದಾರೆ ಮತ್ತು ನಾನು ಈ Forumನ ಮೂಲಕ ದೇಶದ ಎಲ್ಲ ವ್ಯಾಪಾರಿಗಳಿಗೆ ಇದನ್ನು ಹೇಳಲು ಬಯಸುತ್ತೇನೆ. ಜಿಎಸ್ ಟಿ ಜಾರಿ ತರುವ ಸಂಕಲ್ಪ ಮಾಡಿದಾಗ ಜನರಿಗೆ ಇದು ಜಾರಿಯಾಗುತ್ತದೊ ಇಲ್ಲವೋ, ಜುಲೈ ಒಂದರಂದೇ ಜಾರಿಯಾಗುತ್ತದೊ ಇಲ್ಲವೋ ಎಂಬ ಸಂದೇಹವಿತ್ತು. ಜಾರಿಯಾಯಿತು…ಜಾರಿಯಾದ ನಂತರ ಈ ಮೋದಿ ಯಾವುದೇ ಸುಧಾರಣೆ ಮಾಡುವುದಿಲ್ಲ, ಎಲ್ಲ ನಾಶವಾಯಿತು ಎಂಬ ಟೀಕೆಗಳು ಕೇಳಿ ಬಂದವು. ಆಗ ನಾನು ಮೂರು ತಿಂಗಳು ಇದನ್ನು ಸೂಕ್ಷ್ಮವಾಗಿ ಗಮನಿಸೋಣ. ಏಕೆಂದರೆ ಭಾರತವು ತುಂಬಾ ದೊಡ್ಡ ದೇಶವಾಗಿದೆ ಮತ್ತು ದೆಹಲಿಯಲ್ಲಿ ಮಾತ್ರ ಬುದ್ಧಿವಂತರು ಇದ್ದಾರೆಂದು ಭಾವಿಸಬಾರದೆಂದು ಹೇಳಿದ್ದೆ.
ದೇಶದ ಸಾಮಾನ್ಯ ಮನುಷ್ಯರಿಗೂ ತಿಳಿವಳಿಕೆ ಇದೆ. ನಾವು ಅವರಿಗೆ ಅರ್ಥ ಮಾಡಿಸುತ್ತೇವೆ, ಕಲಿಸುತ್ತೇವೆ, ಸಮಸ್ಯೆಗಳನ್ನು ಅಂದಾಜು ಮಾಡುತ್ತೇವೆ, ದಾರಿ ಹುಡುಕುತ್ತೇವೆ ಮತ್ತು ಮೂರು ತಿಂಗಳ ನಂತರ ಜಿಎಸ್ ಟಿ ಸಮಿತಿಯು ಸಭೆ ಸೇರಿತು. ನಾವು ರಾಜ್ಯಗಳ ಸಚಿವರು ಮತ್ತು ಅಧಿಕಾರಿಗಳ ಸಮಿತಿಗಳನ್ನು ರಚಿಸಿದೆವು. Verbatic ವರದಿ ಇನ್ನೂ ನನ್ನ ಬಳಿ ಬಂದೇ ಇಲ್ಲ, ಆದರೆ ಮಂತ್ರಿಗಳ ಸಮಿತಿ, ಜಿಎಸ್ ಟಿ ಸಮಿತಿಯನ್ನು ಒಮ್ಮತದಿಂದಲೇ ರಚಿಸಲಾಗಿತ್ತು ಮತ್ತು ಮೀಟಿಂಗ್ ನಲ್ಲಿ ಏನಾಯಿತು ಎಂಬುದರ ಸಣ್ಣಪುಟ್ಟ ಮಾಹಿತಿ ನನ್ನ ಬಳಿ ಇದೆ, ಪೂರ್ತಿ ವರದಿ ನನ್ನ ಕೈಸೇರಿಲ್ಲ. ಸಾಮಾನ್ಯ ವ್ಯಾಪಾರಿಗಳು ಎತ್ತಿದ ವಿಚಾರಗಳು, ವ್ಯವಹಾರ ನಡೆಸುವವರಿಂದ ಬಂದ ಸಲಹೆಗಳು. ಹೀಗೆ ಸುಮಾರು ಎಲ್ಲ ವಿಷಯಗಳನ್ನು ಸಕಾರಾತ್ಮಕಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲು ನನಗೀಗ ಸಂತೋಷವಾಗುತ್ತಿದೆ. ಒಂಭತ್ತು ಮತ್ತು ಹತ್ತನೆಯ ದಿನಾಂಕಗಳಂದು ನಡೆಯುವ ಜಿಎಸ್ ಟಿ ಸಮಿತಿಯ ಸಭೆಯಲ್ಲಿ ಯಾವುದೇ ರಾಜ್ಯವು ಸಮಸ್ಯೆಯನ್ನು ಉಂಟು ಮಾಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಭಾರತದ ವ್ಯವಹಾರ ಜಗತ್ತು ಮತ್ತು ಭಾರತದ ಆರ್ಥಿಕ ವ್ಯವಸ್ಥೆಗೆ ಹೊಸ ತಾಕತ್ತು ನೀಡುವಲ್ಲಿ ಸಹ ಅವಶ್ಯಕ ಸುಧಾರಣೆಗಳನ್ನು ಅವರು ಮಾಡುತ್ತಾರೆ. ಅದಾದ ನಂತರವೂ ಮುಂದೆಯೂ ಇಂತಹ ಮಾತುಗಳು ಬರಬಹುದು. ಏಕೆಂದರೆ ಕೊನೆಗೆ ಒಂದು ಹೊಸ ವ್ಯವಸ್ಥೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವರ್ಷಗಳಷ್ಟು ಹಳೆಯ ವ್ಯವಸ್ಥೆಯಿಂದ ಹೊರಗೆ ಬರಬೇಕಾದರೆ ಸರ್ಕಾರದ ಮೆದುಳು ಕೆಲಸ ಮಾಡುತ್ತಿಲ್ಲವೇ ಎಂದುಕೊಳ್ಳುವ ಅಗತ್ಯವಿಲ್ಲ. ಎಲ್ಲ ಪಾಲುದಾರರ ಬುದ್ಧಿ ಕೆಲಸಕ್ಕೆ ಬರುತ್ತದೆ. ಆಗ ಅತ್ಯುತ್ತಮ ಪರಿಣಾಮ ಹೊರ ಬರುತ್ತದೆ. ಜಿಎಸ್ ಟಿ ಸಹ ಎಲ್ಲರ ಭಾವನೆಗಳನ್ನು ಗೌರವಿಸುತ್ತಾ ವ್ಯವಸ್ಥೆಗಳನ್ನು ಸರಳವಾಗಿ ಉಪಯೋಗಕ್ಕೆ ಬರುವಂತೆ ಹೇಗೆ ಮಾಡಬಹುದು ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಲಿದೆ. ಇದು ಜಿಎಸ್ ಟಿ ಬೆಳವಣಿಗೆಯಿಂದ ಗೋಚರವಾಗುತ್ತದೆ.
ವಿಶ್ವ ಬ್ಯಾಂಕ್ ನ ಈ ವರದಿಯಲ್ಲಿ ಮೇ 2017ರವರೆಗಿನ ಸುಧಾರಣೆಯನ್ನು ತೆಗೆದುಕೊಳ್ಳಲಾಗಿದೆ. ಆದರೆ ಜಿಎಸ್ ಟಿ ಜಾರಿಯಾಗಿರುವುದು ಜುಲೈ 2017ರ ನಂತರ. ಆದ್ದರಿಂದ ಜಿಎಸ್ ಟಿ ಆರಂಭವಾದ ನಂತರದ ಎಣಿಕೆ ಮುಂದೆ ಆಗಲಿದೆ ಎಂಬುದನ್ನು ನೀವು ಊಹಿಸಬಹುದು.
ಈಗಾಗಲೇ ಹಲವು ಸುಧಾರಣೆಗಳು ಆಗಿವೆ, ಆದರೆ ಅವುಗಳನ್ನು  ವಿಶ್ವಬ್ಯಾಂಕ್ ಪರಿಗಣಿಸುವ ಮೊದಲು ಅದಕ್ಕೆ ಆರಂಭಿಕಾವಸ್ಥೆ ಮತ್ತು ಸ್ಥಿರೀಕರಣದ ಸಮಯ ಬೇಕಾಗುತ್ತದೆ.  ಇನ್ನು ಕೆಲವು ಸುಧಾರಣೆಗಳಿಗೆ ನಮ್ಮ ತಂಡ ಮತ್ತು ವಿಶ್ವ ಬ್ಯಾಂಕ್ ತಂಡ ಸಮಾನ ನೆಲೆ ಕಂಡುಕೊಳ್ಳಬೇಕಿದೆ.  ಈ ಎಲ್ಲವೂ ಇನ್ನೂ ಉತ್ತಮವಾದ ಕೆಲಸ ಮಾಡುವ ನಮ್ಮ ನಿರ್ಣಯದೊಂದಿಗೆ ಸೇರಿದ್ದು, ವಿಶ್ವಬ್ಯಾಂಕ್ ನ ಮುಂದಿನ ವರ್ಷದ ವರದಿಯಲ್ಲಿ ಮತ್ತು ನಂತರದ ವರದಿಗಳಲ್ಲಿ ಇನ್ನೂ ಉತ್ತಮ ಸ್ಥಾನ ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ.
ವಿಶ್ವಾದ್ಯಂತ ಸುಗಮವಾಗಿ ವಾಣಿಜ್ಯ ನಡೆಸುವುದನ್ನು ಸುಧಾರಣೆ ಮಾಡಲು ದೇಶಗಳೊಂದಿಗೆ ಕೈಜೋಡಿಸಿರುವುದಕ್ಕೆ ವಿಶ್ವಬ್ಯಾಂಕ್ ಅನ್ನು ನಾನು ಅಭಿನಂದಿಸುತ್ತೇನೆ. ಈ ಸಾಲಿನ ಧ್ಯೇಯ‘ಉದ್ಯೋಗ ಸೃಷ್ಟಿಗೆ ಸುಧಾರಣೆ’ಗಾಗಿಯೂ ನಾನು ಅವರನ್ನು ಅಭಿನಂದಿಸುತ್ತೇನೆ. ವಾಣಿಜ್ಯವು ನಮ್ಮ ಬದುಕಿನ ಪ್ರಮುಖ ಶಕ್ತಿ ಎಂಬುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇದು ನಮ್ಮ ಬದುಕನ್ನು ಆರಾಮದಾಯಕಗೊಳಿಸುವ ಪ್ರಗತಿಯ, ಉದ್ಯೋಗ ಸೃಷ್ಟಿಯ, ಆಸ್ತಿ ಸೃಷ್ಟಿಯ ಮತ್ತು ಸರಕು ಮತ್ತು ಸೇವೆಗಳ ಪೂರೈಕೆಯ ಚಾಲಕ ಶಕ್ತಿಯಾಗಿದೆ. 
ನಮ್ಮದು ಯುವಕರ ರಾಷ್ಟ್ರ ಮತ್ತು ಉದ್ಯೋಗ ಸೃಷ್ಟಿ ನಮಗೆ ಅವಕಾಶ ಮತ್ತು ಸವಾಲು ಎರಡೂ ಆಗಿದೆ. ಹೀಗಾಗಿ ಯುವಜನರ ಶಕ್ತಿಯನ್ನು ಬಳಸಿಕೊಳ್ಳಲು ನಾವು ಭಾರತವನ್ನು ನವೋದ್ಯಮ ರಾಷ್ಟ್ರವಾಗಿ ಮತ್ತು ಜಾಗತಿಕ ಉತ್ಪಾದನಾ ತಾಣವಾಗಿ ರೂಪಿಸಿದ್ದೇವೆ. ಈ ಉದ್ದೇಶಕ್ಕಾಗಿ, ನಾವು ಮೇಕ್ ಇನ್ ಇಂಡಿಯಾ ಮತ್ತು ನವೋದ್ಯಮದಂಥ ವಿವಿಧ ಉಪಕ್ರಮಗಳನ್ನು ಆರಂಭಿಸಿದ್ದೇವೆ.
ಔಪಚಾರಿಕ ಆರ್ಥಿಕತೆ ಮತ್ತು ಏಕರೂಪ ತೆರಿಗೆ ಆಡಳಿತದ ಹೊಸ ಪರಿಸರ ವ್ಯವಸ್ಥೆಯ  ಈ ಉಪಕ್ರಮಗಳ ಮೂಲಕ, ನಾವು, ಅಗತ್ಯವಿರುವವರ ಅನುಕೂಲಕ್ಕಾಗಿ ಅವಕಾಶಗಳನ್ನು ರೂಪಿಸುವ ಮತ್ತು ಬಳಸಿಕೊಳ್ಳುವ ನವ ಭಾರತ ನಿರ್ಮಾಣ ಮಾಡಲು ಪ್ರಯತ್ನದಲ್ಲಿದ್ದೇವೆ.  ನಾವು ಭಾರತವನ್ನು ಜ್ಞಾನಾಧಾರಿತ, ಕೌಶಲ ಬೆಂಬಲಿತ ಮತ್ತು ತಂತ್ರಜ್ಞಾನ ಚಾಲಿತ ಸಮಾಜವಾಗಿ ಅಭಿವೃದ್ಧಿಪಡಿಸಲು ಉತ್ಸುಕರಾಗಿದ್ದೇವೆ. ಇದಕ್ಕೆ ಡಿಜಿಟಲ್ ಇಂಡಿಯಾ ಮತ್ತು ಕೌಶಲ ಭಾರತ ಉಪಕ್ರಮಗಳ ಮೂಲಕ ಶುಭಾರಂಭ ಮಾಡಿದ್ದೇವೆ.
ಸ್ನೇಹಿತರೇ, 
ಭಾರತವು ಉತ್ತಮವಾಗಿ ತ್ವರಿತವಾಗಿ ಬದಲಾಗುತ್ತಿದೆ. ಇದನ್ನು ಸೂಚಿಸುವ ಇನ್ನೂ ಕೆಲವು ಜಾಗತಿಕ ಮಾನ್ಯತೆಗಳನ್ನು ನಾನು ಪಟ್ಟಿ ಮಾಡ ಬಯಸುತ್ತೇನೆ: 
•        ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ನಾವು ಕಳೆದ ಮೂರು ವರ್ಷಗಳಲ್ಲಿ 32 ಸ್ಥಾನ ಮೇಲೇರಿದ್ದೇವೆ. ಇದು ಯಾವುದೇ ದೇಶಕ್ಕೆ ಅತ್ಯಂತ ಹೆಚ್ಚಾದುದಾಗಿದೆ;
•        ಎರಡು ವರ್ಷಗಳಲ್ಲಿ ಡಬ್ಲ್ಯು.ಐ.ಪಿ.ಓ.ದ ಜಾಗತಿಕ ನಾವಿನ್ಯತೆಯ ಸೂಚ್ಯಂಕದಲ್ಲಿ ನಾವು 21 ಸ್ಥಾನ ಮುಂದೆ ಸಾಗಿದ್ದೇವೆ;
•        ವಿಶ್ವಬ್ಯಾಂಕ್ ನ 2016ನೇ ಸಾಲಿನ ಸರಕು ಸಾಗಣೆ ಸಾಮರ್ಥ್ಯ ಸೂಚ್ಯಂಕದಲ್ಲಿ ನಾವು 19 ಸ್ಥಾನ ಮೇಲೇರಿದ್ದೇವೆ; 
•        ಯು.ಎಸ್. ಸಿಟಿಎಡಿ ಪಟ್ಟಿ ಮಾಡಿರುವ ಮುಂಚೂಣಿಯ ಎಫ್.ಡಿ.ಐ. ತಾಣಗಳಲ್ಲಿ ನಾವೂ ಒಬ್ಬರಾಗಿದ್ದೇವೆ. 
 
ಕೆಲವು ಜನರಿಗೆ ಭಾರತದ Ranking 142ರಿಂದ 100ಕ್ಕೇರಿರುವ ವಿಷಯ ಅರ್ಥವಾಗುವುದಿಲ್ಲ. ಇವರಲ್ಲಿ ಕೆಲವರು ಮೊದಲೇ ವಿಶ್ವ ಬ್ಯಾಂಕ್ ನಲ್ಲಿ ಇದ್ದವರಾಗಿದ್ದಾರೆ. ಈಗಲೂ ಅವರು ಭಾರತದ Ranking ಕುರಿತು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇನ್ ಸಾಲ್ವೆನ್ಸಿ ಕೋಡ್, ಬ್ಯಾಂಕರಪ್ಟಸಿ ಕೋಡ್, ಕಮರ್ಷಿಯಲ್ ಕೋರ್ಟ್ ನಂತಹ ಕಾನೂನು ಸುಧಾರಣೆಗಳು ನಿಮ್ಮ ಕಾಲದಲ್ಲೇ ಆಗಿದ್ದಿದ್ದರೆ ನಮ್ಮ Ranking ನಲ್ಲಿ ಹಿಂದೆಯೇ ಸುಧಾರಣೆಯಾಗಿರುತ್ತಿತ್ತು. ಈ Rankingನ ಸೌಭಾಗ್ಯ ನಿಮಗೆ ಸಿಕ್ಕಿರುತ್ತಿತ್ತು. ದೇಶದ ಸ್ಥಿತಿ ಸುಧಾರಿಸಿರುತ್ತಿತ್ತಲ್ಲವೇ? ತಾವೇನೂ ಮಾಡದಿದ್ದರೂ ಈಗ ಅದನ್ನು ಕುರಿತು ಪ್ರಶ್ನೆ ಕೇಳುತ್ತಿದ್ದಾರೆ.
ವಿಶ್ವ ಬ್ಯಾಂಕ್ Ease of Doing Businessನ ಪ್ರಕ್ರಿಯೆ 2004ರಲ್ಲಿ ಆರಂಭಿಸಿತ್ತು. ಇದಾದ ನಂತರ 2014ರವರೆಗೆ ದೇಶದಲ್ಲಿ ಯಾರ ಸರ್ಕಾರವಿತ್ತು ಎಂದು ನಿಮಗೆಲ್ಲ ಗೊತ್ತೇ ಇದೆ.
ನಾನು ವಿಶ್ವ ಬ್ಯಾಂಕ್ ಕಟ್ಟಡ ಸಹ ನೋಡಿರದ ಪ್ರಧಾನ ಮಂತ್ರಿಯಾಗಿದ್ದೇನೆ. ಆದರೆ ಹಿಂದೆ ವಿಶ್ವ ಬ್ಯಾಂಕ್ ನಲ್ಲಿ ಇದ್ದ ಜನರು ಇಲ್ಲಿ ಬಂದು ಕುಳಿತಿರುತ್ತಿದ್ದರು.
ನೀವು ವಿಶ್ವ ಬ್ಯಾಂಕ್ ನ ಈ Ranking ಕುರಿತು ಪ್ರಶ್ನೆ ಎತ್ತುವುದರ ಬದಲು ನಮ್ಮ ದೇಶವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸಹಕಾರ ನೀಡಿ, ನವಭಾರತವನ್ನು ನಿರ್ಮಿಸಲು ಜೊತೆಯಾಗಿ ಸಾಗುವ ಸಂಕಲ್ಪ ಮಾಡಿ ಎಂದು ನಾನು ಕೇಳುತ್ತೇನೆ. 
ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ ನಮ್ಮ ಮಂತ್ರವಾಗಿದೆ. ನಾವು ಇನ್ನೂ ಉತ್ತಮೋತ್ತಮ ಪ್ರದರ್ಶನ ನೀಡಲಿಚ್ಛಿಸುತ್ತೇವೆ. ಇದೇ ಮೊದಲ ಬಾರಿಗೆ ವಿಶ್ವ ಬ್ಯಾಂಕ್ ಈ ಕಸರತ್ತಿನಲ್ಲಿ ಉಪ ರಾಷ್ಟ್ರೀಯ ಮಟ್ಟದಲ್ಲಿ ಕೂಡ ನೆರವಿಗೆ ಬರುತ್ತಿದೆ.  ಭಾರತದಂಥ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವದಲ್ಲಿ, ಸುಧಾರಣೆಯನ್ನು ಕೈಗೊಳ್ಳುವಾಗ ಎಲ್ಲ ಬಾಧ್ಯಸ್ಥರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸುಲಭದ ಮಾತಲ್ಲ. ಆದಾಗ್ಯೂ, ಕಳೆದ ಮೂರು ವರ್ಷಗಳಲ್ಲಿ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ಕಣ್ಣಿಗೆ ಕಾಣುವಂಥ ಬದಲಾವಣೆ ಆಗುತ್ತಿದೆ. ರಾಜ್ಯ ಸರ್ಕಾರಗಳು ಕೂಡ ವಾಣಿಜ್ಯ ಸ್ನೇಹಿ ವಾತಾವರಣ ಸೃಷ್ಟಿಸಲು ತಮ್ಮದೇ ನಾವಿನ್ಯಪೂರ್ಣ ಮಾರ್ಗ ಹುಡುಕುತ್ತಿವೆ. ವಾಣಿಜ್ಯ ಸುಧಾರಣೆಗಳನ್ನು ಅನುಷ್ಠಾನಗೊಳಿಸುವಲ್ಲಿ ತಮ್ಮಲ್ಲೇ ಸ್ಪರ್ಧೆ ಒಡ್ಡಿರುವ ಅವು, ಅದರ ಜಾರಿಗೂ ಪರಸ್ಪರ ನೆರವಾಗುತ್ತಿವೆ. ಸಹಕಾರ ಮತ್ತು ಸ್ಪರ್ಧಾತ್ಮಕತೆ ಉಳಿದಿರುವ ಅದ್ಭುತ ಜಗತ್ತು ಇದಾಗಿದೆ.

.

ಸ್ನೇಹಿತರೇ,
ಪ್ರಗತಿ ಮತ್ತು ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮಕ್ಕೆ ಹಲವು ರಚನಾತ್ಮಕ ಬದಲಾವಣೆಗಳ, ಹಲವು ಕಠಿಣ ನಿರ್ಧಾರಗಳ ಮತ್ತು ಹೊಸ ನಿಯಂತ್ರಣಗಳ ಅಗತ್ಯವಿದೆ. ಇದರ ಜೊತೆಗೆ ಪ್ರಾಮಾಣಿಕವಾಗಿ ಮತ್ತು ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಆಡಳಿತ ಶಾಹಿಯ ಮನೋಸ್ಥಿತಿಯ ಬದಲಾವಣೆಯ ಅಗತ್ಯವೂ ಇದೆ. ಕಳೆದ ಮೂರು ವರ್ಷಗಳಲ್ಲಿ, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಹಲವು ಕಾರ್ಯ ಮಾಡಿದೆ. ಕಂಪನಿಗಳು ಮತ್ತು ವಾಣಿಜ್ಯೋದ್ಯಮಗಳು ಎದುರಿಸುತ್ತಿದ್ದ ಹಲವು ನೀತಿ ಮತ್ತು ನಿಯಂತ್ರಣ ಸಮಸ್ಯೆಗಳನ್ನು ನಾವು ಬಗೆಹರಿಸಿದ್ದೇವೆ. 
ಉತ್ಪಾದನೆಯ ಜೊತೆಗೆ, ಮೂಲಸೌಕರ್ಯ ವಲಯದ ಪ್ರಗತಿಗೂ ನಾವು ಇಂಬು ನೀಡುತ್ತಿದ್ದೇವೆ. ಹೀಗಾಗಿ, ನಾವು ನಮ್ಮ ಹೂಡಿಕೆಯ ವಾತಾವರಣ ಸುಧಾರಣೆಗೆ ಶ್ರಮಿಸುತ್ತಿದ್ದೇವೆ. ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ನಾವು, 87 ನೀತಿ ಕ್ಷೇತ್ರ ವ್ಯಾಪ್ತಿಯ 21 ವಲಯಗಳಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆ ಕುರಿತಂತೆ ಕಠಿಣ ಸುಧಾರಣೆಗಳನ್ನು ಕೈಗೊಂಡಿದ್ದೇವೆ.,  
ಸತತ ಎರಡು ವರ್ಷಗಳವರೆಗೆ ಬಿಗ್ ಬ್ಯಾಂಗ್…ಬಿಗ್ ಬ್ಯಾಂಗ್…ರಿಫಾರ್ಮ್ಸ್…ಎಂಬುದನ್ನು ಕೇಳುತ್ತಲೇ ಇದ್ದೆ, ಈಗ ನಿಂತಿದೆ.. ಏಕೆಂದರೆ ಸುಧಾರಣೆಯ ವೇಗ, ಮಟ್ಟ ಮತ್ತು ಗಾತ್ರ ಹೇಗಿರುತ್ತದೆಂದರೆ ಟೀಕೆ ಮಾಡುವವರಿಗೆ ಪಂದ್ಯವನ್ನು ಆಡಲು ಆಗುತ್ತಿಲ್ಲ.
 
 
ಈ ಸುಧಾರಣೆಗಳು ರಕ್ಷಣೆ, ರೈಲು, ನಿರ್ಮಾಣ, ಅಭಿವೃದ್ಧಿ, ವಿಮೆ, ಪಿಂಚಣಿ, ನಾಗರಿಕ ವಿಮಾನಯಾನ ಮತ್ತು ಔಷಧದಂಥ ಗಣನೀಯ ಕ್ಷೇತ್ರಗನ್ನೂ ಈ ಸುಧಾರಣೆ ಮುಟ್ಟಿದೆ. ಶೇಕಡ 90ಕ್ಕೂ ಹೆಚ್ಚು ಎಫ್.ಡಿ. ಐ. ಅನುಮೋದನೆಗಳು ಸ್ವಯಂ ಚಾಲಿತ ಮಾರ್ಗದಲ್ಲಿ ನಡೆಯುತ್ತಿವೆ. ಇದು ಅತಿ ದೊಡ್ಡ ವಿಷಯ. ಇಂದು ನಾವು ಎಫ್.ಡಿ.ಐ.ನಲ್ಲಿ ಬಹಳ ಮುಕ್ತ ಆರ್ಥಿಕತೆಯಲ್ಲಿ ಒಂದಾಗಿದ್ದೇವೆ.
ಇದು ಎಫ್.ಡಿ.ಐ. ಹರಿವಿನ ಹೆಚ್ಚಳಕ್ಕೆ ಕಾರಣವಾಗಿದೆ, ವರ್ಷದಿಂದ ವರ್ಷಕ್ಕೆ ಇದು ಹೊಸ ದಾಖಲೆ ಮಾಡುತ್ತಿದೆ. ಮಾರ್ಚ್ 2016ಕ್ಕೆ ಕೊನೆಗೊಂಡ ವರ್ಷದಲ್ಲಿ 55.6 ಶತಕೋಟಿ ಅಮೆರಿಕನ್ ಡಾಲರ್ ವಿದೇಶೀ ನೇರ ಬಂಡವಾಳ ಹರಿವು ಬಂದಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ನಂತರದ ವರ್ಷದಲ್ಲಿ ಭಾರತ ಭಾರತ 60.08 ಶತಕೋಟಿ ಅಮೆರಿಕನ್ ಡಾಲರ್ ಎಫ್.ಡಿ.ಐ. ಹರಿವು ದಾಖಲಿಸಿದ್ದು, ಇದು ಇನ್ನೂ ಹೊಸ ಎತ್ತರಕ್ಕೆ ಸಾಗಿದೆ. ಇದರ ಫಲವಾಗಿ, ಮೂರು ವರ್ಷಗಳ ಅಲ್ಪಾವಧಿಯಲ್ಲಿ ದೇಶದಲ್ಲಿ ಒಟ್ಟಾರೆ ಎಫ್.ಡಿ.ಐ. ಪ್ರಮಾಣ ಶೇ.67ರಷ್ಟು ಹೆಚ್ಚಳವಾಗಿದೆ. 
ಪ್ರಸಕ್ತ ಹಣಕಾಸು ವರ್ಷದಲ್ಲಿ ಆಗಸ್ಟ್ ವರೆಗೆ ಒಟ್ಟಾರೆ 30.38 ಶತಕೋಟಿ ಅಮೆರಿಕನ್ ಡಾಲರ್  ಬಂದಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡ 30ರಷ್ಟು ಹೆಚ್ಚಳವಾಗಿದೆ. 2017ರ ಆಗಸ್ಟ್ ನಲ್ಲಿ ಭಾರತಕ್ಕೆ 9.64 ಶತಕೋಟಿ ಅಮೆರಿಕನ್ ಡಾಲರ್ ಎಫ್.ಡಿ.ಐ. ಬಂದಿದ್ದು, ಒಂದು ತಿಂಗಳಲ್ಲಿ ಬಂದ ಅತಿ ಹೆಚ್ಚು ಎಫ್.ಡಿ.ಐ. ಆಗಿದೆ. 
ಸ್ನೇಹಿತರೆ! 
ಕಳೆದ ಮೂರು ವರ್ಷಗಳ ಅವಧಿಯಲ್ಲಿ, ನಾವು ವ್ಯವಸ್ಥಿತವಾಗಿ ಮತ್ತು ಪ್ರಮುಖವಾಗಿ ವಾಣಿಜ್ಯ ನಿಯಂತ್ರಣಗಳ ಮೌಲ್ಯ ಮಾಪನ ಮಾಡಿದ್ದೇವೆ. ಸರ್ಕಾರದೊಂದಿಗೆ ವ್ಯವಹರಿಸುವಾಗ ವಾಣಿಜ್ಯೋದ್ಯಮ ಎದುರಿಸುತ್ತಿದ್ದ ನೋವಿನ ಅಂಶವನ್ನು ಅರ್ಥ ಮಾಡಿಕೊಂಡಿದ್ದೇವೆ. ನಾವು ವಾಣಿಜ್ಯದೊಂದಿಗೆ ನಿರಂತರವಾಗಿ ಸಂಪರ್ಕ ಹೊಂದಿದ್ದು, ಅವರ ಕಾಳಜಿಯನ್ನು ಅರ್ಥ ಮಾಡಿಕೊಂಡಿದ್ದೇವೆ ಮತ್ತು ಅವರ ಕಳವಳ ನಿವಾರಿಸಲು ನಿಯಂತ್ರಣಗಳಿಗೆ ಮಾರ್ಪಾಡು ಮಾಡಿದ್ದೇವೆ. 
ನಾನು ಆಡಳಿತವನ್ನು ಸುಧಾರಣೆ ಮಾಡಲು ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಪ್ರತಿಪಾದಿಸುತ್ತಿರುತ್ತೇನೆ. ತಂತ್ರಜ್ಞಾನದ ಬಳಕೆ, ಭೌದ್ಧಿಕ ಮುಖಾಮುಖಿ ತಪ್ಪಿಸಿ, ಕಾಲಮಿತಿಯೊಳಗೆ ನಿರ್ಧಾರಕ್ಕೆ ಅವಕಾಶ ಕೊಡುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಇಲಾಖೆಗಳು ಸೇವೆಯನ್ನು ಒದಗಿಸಲು ಮತ್ತು ಆಡಳಿತ ಸುಧಾರಣೆಗೆ ತಂತ್ರಜ್ಞಾನ ಅಳವಡಿಕೆ ಮಾಡುತ್ತಿವೆ. 
ವಾಣಿಜ್ಯದೊಂದಿಗೆ ವ್ಯವಹರಿಸುವಾಗ ತಂತ್ರಜ್ಞಾನದ ಸಾಧನಗಳೊಂದಿಗೆ, ನಮ್ಮ ಮನೋಸ್ಥಿಯನ್ನು ಸಂಪೂರ್ಣವಾಗಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವೂ ಇದೆ. ಮನಸ್ಸು ಮತ್ತು ಯಂತ್ರದ ಮಟ್ಟಗಳೆರಡರಲ್ಲೂ ಒಟ್ಟಾರೆ ಪುನರ್ ಎಂಜಿನಿಯರಿಂಗ್ ಅಗತ್ಯವಿದೆ. ಹಿಂದಿನ ಅತಿಯಾದ ನಿಯಂತ್ರಣದ ಮನೋಸ್ಥಿತಿಯನ್ನು ಕನಿಷ್ಠ ಶಾಸನ ಗರಿಷ್ಠ ಆಡಳಿತಕ್ಕೆ ಬದಲಾಯಿಸುವ ಅಗತ್ಯವಿದೆ. ಇದು ನಮ್ಮ ಗುರಿ ಮತ್ತು ನನ್ನ ಸರ್ಕಾರ ಈ ಉದ್ದೇಶ ಈಡೇರಿಕೆಗೆ ಬದ್ಧವಾಗಿದೆ. 
ಈ ಉದ್ದೇಶದೊಂದಿಗೆ, ವಾಣಿಜ್ಯ ವಾತಾವರಣವನ್ನು ಸರಳೀಕರಿಸುವ ಮತ್ತು ಹೆಚ್ಚು  ಅನುಕೂಲಕರಗೊಳಿಸಲು ಕಾನೂನನ್ನು ಪುನರ್ ರೂಪಿಸುವ ಮತ್ತು ಸರ್ಕಾರದ ಪ್ರಕ್ರಿಯೆಗಳನ್ನು ಪುನರ್ ವಿನ್ಯಾಸಗೊಳಿಸುವ ವ್ಯಾಪಕ ಕ್ರಮ ಕೈಗೊಂಡಿದ್ದೇವೆ. ಭಾರತೀಯ ನಿಯಂತ್ರಣ ಪರಿಸರವನ್ನು ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳಿಗೆ ಸರಿಹೊಂದಿಸುವ ಪ್ರಯತ್ನ ಮಾಡಿದ್ದೇವೆ. ನಾವು ವ್ಯಾಪಾರ ವ್ಯವಹಾರದಲ್ಲಿ ಭಾರತದ ಶ್ರೇಣಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ ಆದರೂ, ಸರ್ಕಾರವು ಕೈಗೊಂಡ ಸುಧಾರಣೆಗಳು ಹೆಚ್ಚು ವ್ಯಾಪಕವಾಗಿವೆ. ಒಂದು ಉದಾಹರಣೆ ನೀಡುವುದಾದರೆ, ನಾವು ಆಡಳಿತಕ್ಕೆ ಸಂಕೀರ್ಣವಾಗಿದ್ದ 1200ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ಮತ್ತು ಕಾಯಿದೆಗಳನ್ನು ರದ್ದು ಮಾಡಿದ್ದೇವೆ. ಅವುಗಳನ್ನು ಶಾಸನದ ಪುಸ್ತಕದಿಂದ ತೆಗೆದು ಹಾಕಿದ್ದೇವೆ. ಅದೇ ರೀತಿ ಸಾವಿರಾರು ಮಹತ್ವದ ಸುಧಾರಣೆಗಳನ್ನು ರಾಜ್ಯಗಳೂ ಕೈಗೊಂಡಿವೆ. ಈ ಹೆಚ್ಚುವರಿ ಪ್ರಯತ್ನಗಳು ವಿಶ್ವಬ್ಯಾಂಕ್ ನ ಅಗತ್ಯದ ಭಾಗವಾಗಿಲ್ಲ.
ಕೇಂದ್ರ ಸರ್ಕಾರದ ಎಲ್ಲ ಸಚಿವಾಲಯಗಳೂ, ಸಾರ್ವಜನಿಕ ಉದ್ದಿಮೆಗಳು, ರಾಜ್ಯ ಸರ್ಕಾರಗಳು ಮತ್ತು ನಿಯಂತ್ರಕರು ಕೂಡ ಅಂತಾರಾಷ್ಟ್ರೀಯವಾದ ಉತ್ತಮ ಪದ್ಧತಿಗಳನ್ನು ಗುರುತಿಸಬೇಕು, ತಮ್ಮ ಬಾಧ್ಯಸ್ಥರನ್ನು ಸಂಪರ್ಕಿಸಬೇಕು ಮತ್ತು ತಮ್ಮ ನಿಯಂತ್ರಣಗಳನ್ನು ಅದಕ್ಕೆ ಸಹಿ ಹೊಂದಿಸಬೇಕು ಮತ್ತು ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳ ಪ್ರಕ್ರಿಯೆಗೆ ಸರಿದೂಗಿಸಬೇಕು. ಈ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜನರು, ಸಾರ್ವಜನಿಕರ ಸೇವೆಗೆ ತಮ್ಮ ಸಾಮರ್ಥ್ಯ ಮತ್ತು ಬದ್ಧತೆಗೆ ಸಂಬಂಧಿಸಿದಂತೆ ಜಗತ್ತಿನಲ್ಲಿ ಯಾರಿಗೂ ಕಡಿಮೆ ಇಲ್ಲ ಎಂಬುದರಲ್ಲಿ ನನಗೆ ಸಂದೇಹವಿಲ್ಲ.
 
ಸ್ನೇಹಿತರೆ, ಈ Ranking ಅನ್ನು Ease of doing Business ಎನ್ನುತ್ತಾರೆ. ಆದರೆ ಇದು Ease of doing Business ಜೊತೆಗೆ Ease of Living Lifeನ Ranking ಸಹ ಆಗಿದೆ ಎಂದು ನಾನು ಭಾವಿಸುತ್ತೇನೆ.
ಈ Rankingಗಾಗಿ ಆರಿಸಲಾಗುವ Parameters ಗಳು  ಬಹುತೇಕ ಸಾಮಾನ್ಯ ನಾಗರಿಕರು, ದೇಶದ ಯುವಜನರ ಜೀವನದೊಂದಿಗೆ ಸೇರಿವೆ.
ಕಳೆದ ಮೂರು ವರ್ಷಗಳಿಂದ ದೇಶದ ಸಾಮಾನ್ಯ ನಾಗರಿಕರ ಜೀವನದಲ್ಲಿ ಉಂಟಾಗುವ ಕಷ್ಟಗಳನ್ನು ಕಡಿಮೆ ಮಾಡಲು ಸರ್ಕಾರವು ಸುಧಾರಣೆಯ ಮಾರ್ಗವನ್ನು ತನ್ನದಾಗಿಸಿಕೊಂಡಿದೆ. ಭಾರತದ Rankingನಲ್ಲಿ ಇಷ್ಟೊಂದು ಸುಧಾರಣೆ ಉಂಟಾಗಿದೆ. ಮೂರು ವರ್ಷಗಳಲ್ಲಿ ತೆರಿಗೆ ತುಂಬುವ ಪ್ರಕ್ರಿಯೆಯಲ್ಲಿ ಹೆಚ್ಚು ಸುಧಾರಣೆಯಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಈಗ ತಿಂಗಳುಗಳವರೆಗೆ ಕಾಯಬೇಕಾಗಿಲ್ಲ. ಪಿಎಫ್ ನೋಂದಣಿ ಮತ್ತು ಪಿಎಫ್ ನ ಹಣ ತೆಗೆಯಲು ಮೊದಲು ನೀವು ಕಚೇರಿಗಳಿಗೆ ಅಲೆಯಬೇಕಾಗಿತ್ತು. ಈಗ ಎಲ್ಲವೂ ಆನ್ ಲೈನ್ ಆಗಿದೆ.
ನನ್ನ ನೆಚ್ಚಿನ ಯುವಜನರೆ, ನೀವೀಗ ಕೇವಲ ಒಂದೇ ದಿನದಲ್ಲಿ ನಿಮ್ಮ ಹೊಸ ಕಂಪನಿಯನ್ನು ನೋಂದಣಿ ಮಾಡಿಸಬಹುದು. ವ್ಯಾವಹಾರಿಕ ಮೊಕದ್ದಮೆಗಳ ಆಲಿಸುವಿಕೆ ಸಹ ಸುಲಭವಾಗಿದೆ. ಈ ಮೂರು ವರ್ಷಗಳಲ್ಲಿ ಭಾರತದಲ್ಲಿ ನಿರ್ಮಾಣದ ಪರ್ಮಿಟ್ ಪಡೆಯುವುದು ಸುಲಭವಾಗಿದೆ. ವಿದ್ಯುತ್ ಸಂಪರ್ಕ ಪಡೆಯುವುದು ಸುಲಭವಾಗಿದೆ. ರೈಲು ಟಿಕೆಟ್ ರಿಸರ್ವೇಷನ್ ಮಾಡಿಸುವುದು ಸುಲಭವಾಗಿದೆ. ಹಿಂದೆ ಪಾಸ್ ಪೋರ್ಟ್ ಪಡೆಯಲು ತಿಂಗಳುಗಳೇ ಹಿಡಿಯುತ್ತಿತ್ತು, ಈಗ ಒಂದು ವಾರದ ಒಳಗೆ ಸಿಗುತ್ತದೆ. ಇದು Ease of Living Life ಅಲ್ಲದೆ ಮತ್ತೇನು?
 
 
ಎಲ್ಲ ವ್ಯಾಪಾರಗಳಿಗೂ ಸುಗಮವಾಗಿ ವಾಣಿಜ್ಯ ನಡೆಸುವುದು ಮಹತ್ವದ್ದಾಗಿದೆ, ಇದು ಸಣ್ಣ ಉತ್ಪಾದಕರೂ ಸೇರಿದಂತೆ ಸಣ್ಣ ವ್ಯಾಪಾರಗಳಿಗೂ ಮುಖ್ಯವಾಗಿದೆ ಎಂಬುದನ್ನು ನಾನು ವಿಶೇಷವಾಗಿ ಉಲ್ಲೇಖಿಸುತ್ತೇನೆ.  ಈ ವಲಯವು ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಒದಗಿಸುತ್ತದೆ ಮತ್ತು ಅವುಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುತ್ತದೆ, ನಾವು ವಾಣಿಜ್ಯ ನಡೆಸುವ ವೆಚ್ಚವನ್ನು ತಗ್ಗಿಸಬೇಕಾಗಿದೆ. ಸುಗಮವಾಗಿ ವಾಣಿಜ್ಯ ನಡೆಸುವ ಕಾರ್ಯವು, ಸಣ್ಣ ಉತ್ಪಾದಕರು ಮತ್ತು ವ್ಯಾಪಾರಿಗಳ ಸಮಸ್ಯೆಯನ್ನೂ ಪರಿಹರಿಸಬೇಕಾಗಿದೆ.
ಸುಗಮ ವಾಣಿಜ್ಯ ನಡೆಸುವುದಕ್ಕೆ ಬದ್ಧತೆಯಿಂದ ಮತ್ತು ಸಮರ್ಪಣೆಯಿಂದ ವಿವಿಧ ಅಂಶಗಳಲ್ಲಿ ಶ್ರಮಿಸುತ್ತಿರುವ ತಂಡಕ್ಕೆ ಮತ್ತೊಮ್ಮೆ, ನಾನು ಅಭಿನಂದನೆ ಸಲ್ಲಿಸುತ್ತೇನೆ. ನಾವೆಲ್ಲರೂ ಒಗ್ಗೂಡಿ ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಬಹುದು ಮತ್ತು ಭಾರತವನ್ನು ಪರಿವರ್ತಿಸಬಹುದು ಎಂದು ನಾನು ಖಾತ್ರಿಯಿಂದ ಹೇಳುತ್ತೇನೆ, ಇದರಿಂದ ನಮ್ಮ ಜನರ ಆಶೋತ್ತರಗಳಿಗೆ ಹಾಗೂ ಕನಸುಗಳಿಗೆ ರೆಕ್ಕೆ ಮೂಡಲಿದೆ. 
ಸುಗಮವಾಗಿ ವಾಣಿಜ್ಯ ನಡೆಸುವ ನಮ್ಮ ಪ್ರಯತ್ನಕ್ಕೆ ಮಾರ್ಗದರ್ಶನ ನೀಡಿದ ವಿಶ್ವ ಬ್ಯಾಂಕ್ ಗೆ ಮತ್ತೆ ನಾನು ಧನ್ಯವಾದ ಅರ್ಪಿಸಲು ಇಚ್ಛಿಸುತ್ತೇನೆ. ಭಾರತದಂಥ ದೊಡ್ಡ ರಾಷ್ಟ್ರದಲ್ಲಿ ಪ್ರಗತಿಯ ಪ್ರಕ್ರಿಯೆಗೆ ತೊಡಕಾಗದ ರೀತಿಯಲ್ಲಿ ನಿರ್ಣಾಯಕ ಬದಲಾವಣೆ ತರುವ ಅನುಭವ ಇತರ ಹಲವು ರಾಷ್ಟ್ರಗಳಿಗೆ ಮಾದರಿಯಾಗಿದೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಇತರರಿಂದ ಕಲಿಯಲು ಸದಾ ಅವಕಾಶ ಇರುತ್ತದೆ. ಅಗತ್ಯಬಿದ್ದಲ್ಲಿ, ನಾವು ನಮ್ಮ ಅನುಭವವನ್ನು ಇತರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಸಂತೋಷಿಸುತ್ತೇವೆ.
ಧನ್ಯವಾದಗಳು! 
 
ತುಂಬಾ ತುಂಬಾ ಧನ್ಯವಾದಗಳು!!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones