ಸೋಮನಾಥ ಟ್ರಸ್ಟ್ ನ ಟ್ರಸ್ಟಿಗಳ ಮಂಡಳಿಯ ಸಭೆ ಇಂದು ಪ್ರಧಾನಮಂತ್ರಿಯವರ ದೆಹಲಿಯ ಗೃಹದಲ್ಲಿ ನಡೆಯಿತು. ಟ್ರಸ್ಟ್ ನ ಅಧ್ಯಕ್ಷ ಶ್ರೀ ಕೇಶುಭಾಯ್ ಪಟೇಲ್ ಅವರು ಅನಾರೋಗ್ಯದ ಕಾರಣ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಶ್ರೀ ಎಲ್. ಕೆ. ಅಡ್ವಾಣಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಶ್ರೀ ಹರ್ಷವರ್ಧನ್ ನಿಯೋಟಿಯಾ, ಶ್ರೀ ಪಿ.ಕೆ. ಲಹೇರಿ ಹಾಗೂ ಶ್ರೀ ಜೆ.ಡಿ. ಪಾರ್ಮರ್ ಅವರು ಟ್ರಸ್ಟಿಗಳಾಗಿ ಸಭೆಯಲ್ಲಿ ಭಾಗವಹಿಸಿದ್ದರು.
ಹೊಸದಾಗಿ ಟ್ರಸ್ಟಿಯಾಗಿ ನೇಮಕಗೊಂಡಿರುವ ಶ್ರೀ ಅಮಿತ್ ಭಾಯ್ ಶಾ ಅವರನ್ನು ಮಂಡಳಿ ಸ್ವಾಗತಿಸಿತು.
ಸೋಮನಾಥ ಪುರಾತನ ಪಾರಂಪರಿಕ ಯಾತ್ರಾಸ್ಥಳ ಹಾಗೂ ಪ್ರವಾಸೋದ್ಯಮ ತಾಣವಾಗಿದ್ದು, ಇದನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಸೋಮನಾಥಕ್ಕೆ ಭಕ್ತರು ಭೇಟಿ ನೀಡುತ್ತಿರುವುದು ನಿರಂತರವಾಗಿ ಹೆಚ್ಚುತ್ತಿದ್ದು, ವಿವಿಧ ಯೋಜನೆಗಳ ಪ್ರಗತಿಯ ಬಗ್ಗೆ ಟ್ರಸ್ಟ್ ಪರಾಮರ್ಶಿಸಿತು. ಸೋಮನಾಥಕ್ಕೆ ಸುಮಾರು ಒಂದು ಕೋಟಿ ಯಾತ್ರಿಕರು ಭೇಟಿ ನೀಡುತ್ತಿದ್ದು, ಅತ್ಯಾಧುನಿಕ ಸೌಕರ್ಯಕ್ಕಾಗಿ ಸರ್ವತೋಮುಖ ಅಭಿವೃದ್ಧಿಯ ಕಲ್ಪನೆಯನ್ನು ಟ್ರಸ್ಟಿಗಳು ಮುಂದಿಟ್ಟರು. ಸಾಮಾಜಿಕ ತಾಣದಲ್ಲಿ ಸೋಮನಾಥಕ್ಕೆ 2 ದಶಲಕ್ಷಕ್ಕೂ ಹೆಚ್ಚು ಫಾಲೋವರ್ ಗಳು ಇದ್ದಾರೆ. .
ಪ್ರಧಾನಮಂತ್ರಿಯವರು ಕಾಣೆಯಾಗಿರುವ ಹಲವು ಐತಿಹಾಸಿಕ ಕೊಂಡಿಗಳನ್ನು ಸ್ಥಾಪಿಸಲು ಉತ್ಖನನಕ್ಕೆ ಸಲಹೆ ನೀಡಿದರು. ಭವಿಷ್ಯದ ಯೋಜನೆಗಳಲ್ಲಿ ಅತ್ಯಾಧುನಿಕ ಸಾಗರ ಆಕರ್ಷಣೆ ಮತ್ತು ವಾಸ್ತವದ ರಿಯಾಲಿಟಿ ಶೋಗಳನ್ನು ಸೇರಿಸುವುದಾಗಿ ಅವರು ತಿಳಿಸಿದರು. ಗರಿಷ್ಠ ಪ್ರದೇಶಗಳನ್ನು ಸಿಸಿಟಿವಿ ನಿಗಾ ಜಾಲ ವ್ಯಾಪ್ತಿಯೊಳಗೆ ತರುವಂತೆಯೂ ಅವರು ಸಲಹೆ ನೀಡಿದರು.
ಭಾರತ ಸರ್ಕಾರದ ಗೋಲ್ಡ್ ಮಾನಿಟೈಸೇಷನ್ ಯೋಜನೆಯಲ್ಲಿ ಸುಮಾರು 6 ಕೆ.ಜಿ. ಬಂಗಾರವನ್ನು ಠೇವಣಿ ಇಡಲೂ ಸೋಮನಾಥ ಟ್ರಸ್ಟ್ ನಿರ್ಧರಿಸಿತು.