ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಗಿಲ್ ವಿಜಯ ದಿವಸ್ ಸ್ಮರಣಾರ್ಥ ಏರ್ಪಟ್ಟ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಮ್ಮ ಭಾಷಣದಲ್ಲಿ ಪ್ರಧಾನ ಮಂತ್ರಿ ಅವರು ಇಂದು ಪ್ರತಿಯೊಬ್ಬ ಭಾರತೀಯರೂ ರಾಷ್ಟ್ರಕ್ಕಾಗಿ ನಡೆದ ಧೈರ್ಯ ಮತ್ತು ಅರ್ಪಣಾ ಭಾವದ ಪ್ರಚೋದನಕಾರಿ ಕಥೆಯನ್ನು ನೆನಪಿಸಿಕೊಳ್ಳುತ್ತಾರೆ ಎಂದರು. ಕಾರ್ಗಿಲ್ ಶಿಖರ ಶ್ರೇಣಿಯಲ್ಲಿ ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಪ್ರಧಾನ ಮಂತ್ರಿ ಅವರು ಗೌರವಾರ್ಪಣೆ ಮಾಡಿದರು. ದೇಶಕ್ಕಾಗಿ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರದ ಜನತೆ ನೀಡಿದ ಸಹಕಾರವನ್ನು ಅವರು ಪ್ರಶಂಸಿಸಿದರು. ಕಾರ್ಗಿಲ್ ಶಿಖರ ಶ್ರೇಣಿಯಲ್ಲಿ 20 ವರ್ಷಗಳ ಹಿಂದೆ ಸಾಧಿಸಿದ ಜಯ ತಲೆಮಾರುಗಳ ಕಾಲ ನಮಗೆ ಪ್ರೇರಣೆದಾಯಕವಾಗಿ ಮುಂದುವರೆಯಲಿದೆ ಎಂದರು.
ಕಾರ್ಗಿಲ್ ವಿಜಯವನ್ನು ಭಾರತದ ಪುತ್ರರು ಮತ್ತು ಪುತ್ರಿಯರ ಶೌರ್ಯಕ್ಕೆ , ಅದರ ದೃಢ ನಿರ್ಧಾರಕ್ಕೆ ಮತ್ತು ಭಾರತದ ಸಾಮರ್ಥ್ಯ ಹಾಗು ಧೈರ್ಯಕ್ಕೆ ಸಂದ ಜಯ ಎಂದು ಪ್ರಧಾನ ಮಂತ್ರಿ ಅವರು ಬಣ್ಣಿಸಿದರು. ಮುಂದುವರೆದು ಅವರು ಭಾರತದ ಘನತೆ ಮತ್ತು ಶಿಸ್ತಿಗೆ ದೊರೆತ ವಿಜಯ ಮತ್ತು ಪ್ರತೀ ಭಾರತೀಯರ ಆಶೋತ್ತರಗಳ ಮತ್ತು ಅರ್ಪಣಾ ಭಾವದ ಕರ್ತವ್ಯಕ್ಕೆ ಸಂದ ವಿಜಯ ಎಂದೂ ಅವರು ವಿವರಿಸಿದರು.
ಯುದ್ದಗಳನ್ನು ಸರಕಾರಗಳು ಮಾತ್ರವೇ ನಡೆಸುವುದಲ್ಲ, ಇಡೀಯ ದೇಶವೇ ಅದರಲ್ಲಿ ಭಾಗಿಯಾಗಿರುತ್ತದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಸೈನಿಕರು ಭವಿಷ್ಯದ ತಲೆಮಾರಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ, ಸೈನಿಕರ ಈ ಕೆಲಸಗಳು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಸಂಗತಿ ಎಂದರು.
2014ರಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಕೆಲವೇ ತಿಂಗಳುಗಳಲ್ಲಿ ತಾವು ಕಾರ್ಗಿಲ್ ಗೆ ಭೇಟಿ ನೀಡಿದ್ದನ್ನು ಪ್ರಧಾನ ಮಂತ್ರಿ ಅವರು ಸ್ಮರಿಸಿಕೊಂಡರು. ಕಾರ್ಗಿಲ್ ಯುದ್ದ ನಡೆದ ಸ್ಥಳಕ್ಕೆ 20 ವರ್ಷಗಳ ಹಿಂದೆ ತಾವು ಭೇಟಿ ನೀಡಿದ್ದನ್ನೂ ಅವರು ನೆನಪಿಸಿಕೊಂಡರು. ಕಾರ್ಗಿಲ್ ನಲ್ಲಿ ಜವಾನರ ಶೌರ್ಯವನ್ನು ನೆನಪಿಸಿಕೊಂಡ ಅವರು ಇಡೀಯ ದೇಶವೇ ಒಟ್ಟಾಗಿ ಸೈನಿಕರ ಜೊತೆ ನಿಂತಿತ್ತು ಎಂದರು. ಯುವಕರು ರಕ್ತ ನೀಡಿದ್ದರು, ಸಣ್ಣ ಮಕ್ಕಳು ಕೂಡಾ ತಮ್ಮ ಕಿಸೆ ಖರ್ಚಿಗೆಂದು ನೀಡಿದ ಹಣವನ್ನು ದಾನ ಮಾಡಿದ್ದರು ಎಂಬುದನ್ನೂ ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು.
ಆಗಿನ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀ ಅವರು ನಾವು ಸೈನಿಕರ ಜೀವನದ ಬಗ್ಗೆ ಕಾಳಜಿ ವಹಿಸದಿದ್ದರೆ ತಾಯ್ನಾಡಿನ ಬಗ್ಗೆ ಕರ್ತವ್ಯ ನಿರ್ವಹಿಸುವಲ್ಲಿ ನಾವು ವಿಫಲರಾಗುತ್ತೇವೆ ಎಂದು ಹೇಳಿದ್ದನ್ನೂ ಅವರು ನೆನಪಿಸಿಕೊಂಡರು. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರಕಾರವು ಸೈನಿಕರ ಕಲ್ಯಾಣಕ್ಕಾಗಿ ಮತ್ತು ಅವರ ಕುಟುಂಬದ ಒಳಿತಿಗಾಗಿ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡುದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಅವರು “ಒಂದು ಹುದ್ದೆ, ಒಂದು ನಿವೃತ್ತಿ ವೇತನ” , ಹುತಾತ್ಮರ ಮಕ್ಕಳ ವಿದ್ಯಾರ್ಥಿ ವೇತನದಲ್ಲಿ ಹೆಚ್ಚಳ , ರಾಷ್ಟ್ರೀಯ ಯುದ್ದ ಸ್ಮಾರಕಗಳನ್ನು ಪ್ರಸ್ತಾಪಿಸಿದರು.
ಕಾಶ್ಮೀರವನ್ನು ವಂಚಿಸಲು ಪಾಕಿಸ್ತಾನವು ಪದೇ ಪದೇ ಪ್ರಯತ್ನಗಳನ್ನು ಮಾಡಿತು. ಮತ್ತು ನಾವು 1999 ರಲ್ಲಿ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಡುವಲ್ಲಿ ಆಗಿನ ಪ್ರಧಾನ ಮಂತ್ರಿ ವಾಜಪೇಯಿ ಅವರ ದೃಢ ನಿರ್ಧಾರವನ್ನು ನೆನಪಿಸಿಕೊಂಡರು. ವೈರಿಗಳು ಇದಕ್ಕೆ ಉತ್ತರ ಕೊಡಲಾರದೆ ಹೋದರು ಎಂದು ಹೇಳಿದ ಅವರು ವಾಜಪೇಯಿ ಸರಕಾರದ ಮೊದಲಿನ ಶಾಂತಿ ಸಂಬಂಧಿ ಉಪಕ್ರಮಗಳು ವಿಶ್ವದಾದ್ಯಂತ ಭಾರತದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಮೂಡಿಸಿದ್ದವು ಎಂದೂ ಹೇಳಿದರು.
ಚರಿತ್ರೆಯಲ್ಲಿ ಎಂದೂ ಭಾರತವು ಆಕ್ರಮಣ ಶೀಲ ರಾಷ್ಟ್ರವಾಗಿರಲಿಲ್ಲ. ಭಾರತದ ಸಶಸ್ತ್ರ ಪಡೆಗಳು ವಿಶ್ವದಾದ್ಯಂತ ಮಾನವತೆಯ ಮತ್ತು ಶಾಂತಿಯ ರಕ್ಷಕರಾಗಿ ಪರಿಗಣಿತರಾಗಿದ್ದಾರೆ ಎಂದು ಪ್ರಧಾನ ಮಂತ್ರಿ ಹೇಳಿದರು. ಭಾರತೀಯ ಪಡೆಗಳು ಇಸ್ರೇಲಿನಲ್ಲಿ ಹೈಫಾವನ್ನು ವಿಮೋಚನೆ ಮಾಡಿದ್ದನ್ನು , ಮೊದಲನೆ ಜಾಗತಿಕ ಸಮರದಲ್ಲಿ ಜೀವ ಕಳೆದುಕೊಂಡ ಭಾರತೀಯ ಸೈನಿಕರಿಗೆ ಫ್ರಾನ್ಸಿನಲ್ಲಿ ಸ್ಮಾರಕ ಇರುವುದನ್ನು ಅವರು ನೆನಪಿಸಿದರು. ಜಾಗತಿಕ ಯುದ್ದಗಳಲ್ಲಿ ಲಕ್ಷಕ್ಕೂ ಅಧಿಕ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿಯೂ ಭಾರತೀಯ ಯೋಧರು ಬಹಳ ದೊಡ್ದ ಸಂಖ್ಯೆಯಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿಯೂ ಸಶಸ್ತ್ರ ಪಡೆಗಳ ಅರ್ಪಣಾ ಭಾವದ ಸೇವೆಯನ್ನು ಪ್ರಸ್ತಾಪಿಸಿದರು.
ಭಯೋತ್ಪಾದನೆ ಮತ್ತು ಛಾಯಾ ಸಮರ ಇಂದು ಇಡೀ ವಿಶ್ವಕ್ಕೆ ಬೆದರಿಕೆಯನ್ನು ಉಂಟು ಮಾಡುತ್ತಿದೆ. ಯುದ್ದದಲ್ಲಿ ಸೋತವರು ಇಂದು ತಮ್ಮ ರಾಜಕೀಯ ಉದ್ದೇಶ ಸಾಧನೆಗಾಗಿ ಛಾಯಾ ಸಮರ ನಡೆಸುತ್ತಿದ್ದಾರೆ ಮತ್ತು ಭಯೋತ್ಪಾದನೆಯನ್ನು ಬೇಂಬಲಿಸುತ್ತಿದ್ದಾರೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಮಾನವತೆಯಲ್ಲಿ ನಂಬಿಕೆ ಇರುವ ಎಲ್ಲರೂ ಸಶಸ್ತ್ರ ಪಡೆಗಳನ್ನು ಬೆಂಬಲಿಸಲು ಎದ್ದು ನಿಲ್ಲುವ ಘಳಿಗೆ ಇದಾಗಿದೆ ಎಂದರು. ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಲು ಇದು ಅವಶ್ಯವಾಗಿದೆ ಎಂದೂ ಪ್ರಧಾನ ಮಂತ್ರಿ ಅವರು ಪ್ರತಿಪಾದಿಸಿದರು.
ಬಾಹ್ಯಾಕಾಶ, ಸೈಬರ್ ಲೋಕದವರೆಗೂ ಬಿಕ್ಕಟ್ಟುಗಳು ತಲುಪಿವೆ. ಆದುದರಿಂದ ಸಶಸ್ತ್ರ ಪಡೆಗಳನ್ನು ಆಧುನೀಕರಿಸಬೇಕಿದೆ . ರಾಷ್ಟ್ರೀಯ ಭದ್ರತೆ ವಿಷಯಬಂದಾಗ ಭಾರತ ಯಾರಿಗೂ ತಲೆಬಾಗದು. ಮತ್ತು ಏನನ್ನಾದರೂ ನಿರೀಕ್ಷಿಸುತ್ತಾ ಕುಳಿತುಕೊಳ್ಳದು ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಅರಿಹಂತ್ ಮೂಲಕ ಭಾರತದ ಅಣು ಶಕ್ತಿ ಸ್ಥಾಪನೆ ಮತ್ತು ಉಪಗ್ರಹ ನಿರೋಧಿ ಪರೀಕ್ಷಾರ್ಥ ನಡೆಸಲಾದ ಎ-ಸ್ಯಾಟ್ ಪರೀಕ್ಷೆಯನ್ನು ಈ ನಿಟ್ಟಿನಲ್ಲಿ ಉದಾಹರಿಸಿದರು. ಸಶಸ್ತ್ರ ಪಡೆಗಳನ್ನು ತ್ವರಿತವಾಗಿ ಆಧುನೀಕರಿಸಲಾಗುತ್ತಿದೆ ಮತ್ತು ರಕ್ಷಣಾ ವಲಯದಲ್ಲಿ “ ಮೇಕ್ ಇನ್ ಇಂಡಿಯಾ” ಕ್ಕಾಗಿ ಖಾಸಗಿ ವಲಯದ ಸಹಭಾಗಿತ್ವವನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ ಅವರು ಸಶಸ್ತ್ರ ಪಡೆಗಳ ಮೂರೂ ವಿಭಾಗಗಳಲ್ಲಿ “ಸಂಯೋಜನೆ”ಯ ಮಹತ್ವವನ್ನೂ ಒತ್ತಿ ಹೇಳಿದರು.
ಗಡಿ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸಲಾಗುತ್ತಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಗಡಿ ಪ್ರದೇಶಗಳ ಅಭಿವೃದ್ದಿಗೆ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮತ್ತು ಅಲ್ಲಿಯ ಜನತೆಯ ಕಲ್ಯಾಣಕ್ಕಾಗಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾತನಾಡಿದರು.
1947ರಲ್ಲಿ ಇಡೀ ದೇಶವು ಸ್ವಾತಂತ್ರ್ಯವನ್ನು ಪಡೆಯಿತು, 1950 ರಲ್ಲಿ ಇಡೀಯ ದೇಶಕ್ಕಾಗಿ ಸಂವಿಧಾನ ಬರೆಯಲಾಯಿತು ಮತ್ತು ಇಡೀಯ ದೇಶಕ್ಕಾಗಿ ಕಾರ್ಗಿಲ್ ನ ಹಿಮಶಿಖರಗಳಲ್ಲಿ 500 ಧೀರ ಸೈನಿಕರು ತಮ್ಮ ಪ್ರಾಣಾರ್ಪಣೆ ಮಾಡಿದರು ಎಂಬುದನ್ನು ಪ್ರಧಾನ ಮಂತ್ರಿ ಅವರು ಸಂಕ್ಷೇಪಿಸಿ ವಿವರಿಸಿದರು.
ಈ ತ್ಯಾಗ ಬಲಿದಾನಗಳು ವ್ಯರ್ಥವಾಗದಂತೆ , ಈ ಹುತಾತ್ಮರ ಕೆಲಸಗಳು ಸದಾ ಪ್ರೇರಣಾದಾಯಕವಾಗಿರುವಂತೆ ಖಾತ್ರಿಪಡಿಸಲು, ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಸಾಮೂಹಿಕ ನಿರ್ಧಾರ ಅಗತ್ಯವೆಂದೂ ಪ್ರಧಾನ ಮಂತ್ರಿ ಅವರು ಪ್ರತಿಪಾದಿಸಿದರು.