ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ 10 ಕೋಟಿ 70 ಲಕ್ಷ ಬಡ ಕುಟುಂಬಗಳಿಗೆ ಆರೋಗ್ಯದ ಖಾತ್ರಿ ಒದಗಿಸುವ ಗುರಿ ಹೊಂದಿರುವ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್ ಭಾರತ ನೂತನ ಮೊಬೈಲ್ ಆಪ್ ಅನ್ನು ಉದ್ಘಾಟಿಸಿದರು.
ನವದೆಹಲಿಯಲ್ಲಿಂದು ಆರೋಗ್ಯ ಮಂಥನ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿಯವರು ವಹಿಸಿದ್ದರು.
ಆಯುಷ್ಮಾನ್ ಭಾರತ – ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ ಪಿಎಂ ಜೆಎವೈ ನ ಆಯ್ದ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಿದರು.
ಕಳೆದ ಒಂದು ವರ್ಷದ ಸಾಧನೆಯನ್ನು ಸಾರುವ ಪಿಎಂ ಜೆಎವೈನ ವಸ್ತು ಪ್ರದರ್ಶನಕ್ಕೂ ಅವರು ಭೇಟಿ ನೀಡಿದರು.
ಇದೇ ವೇಳೆ ಅವರು ಆಯುಷ್ಮಾನ್ ಭಾರತ ಸ್ಟಾರ್ಟ್ ಅಪ್ ಗ್ರಾಂಡ್ ಛಾಲೆಂಜ್ ಗೂ ಚಾಲನೆ ನೀಡಿ, ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, “ಆಯುಷ್ಮಾನ್ ಭಾರತದ ಪ್ರಥಮ ವರ್ಷವು ಸಂಕಲ್ಪ, ಸಮರ್ಪಣೆ ಮತ್ತು ಪರಸ್ಪರ ಕಲಿಕೆಯದಾಗಿತ್ತು ಎಂದರು. ನಾವು ನಮ್ಮ ದೃಢ ಸಂಕಲ್ಪದಿಂದಾಗಿ ಭಾರತದಲ್ಲಿ ವಿಶ್ವದ ಅತಿ ದೊಡ್ಡ ಆರೋಗ್ಯ ಆರೈಕೆ ವಿಮಾ ಯೋಜನೆಯನ್ನು ಯಶಸ್ವಿಯಾಗಿ ನೆಡೆಸುತ್ತಿದ್ದೇವೆ” ಎಂದರು..
ದೇಶದ ಪ್ರತಿಯೊಬ್ಬ ನಾಗರಿಕರಿಗೂ ಮತ್ತು ಪ್ರತಿ ಬಡವರಿಗೂ ಸುಲಭವಾಗಿ ವೈದ್ಯಕೀಯ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಅವರು ಹೇಳಿದರು.
ಈ ಯಶಸ್ಸಿನ ಹಿಂದೆ ಸಮರ್ಪಣೆಯ ಪ್ರಜ್ಞೆಯಿದ್ದು, ಇದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ದೃಢ ನಿಶ್ಚಯದಿಂದ ಸಾಧ್ಯವಾಯಿತು ಎಂದರು.
ಕಾಯಿಲೆಗಳಿಂದ ಚೇತರಿಸಿಕೊಳ್ಳಲು ದೇಶದ ಲಕ್ಷಾಂತರ ಜನರಲ್ಲಿ ಭರವಸೆಯನ್ನು ಜಾಗೃತಗೊಳಿಸುವ ದೊಡ್ಡ ಸಾಧನೆ ಇದಾಗಿದೆ ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಲ್ಲಿ ಯಾವುದೇ ಬಡ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗಾಗಿ ಭೂಮಿ, ಮನೆ, ಆಭರಣಗಳು ಅಥವಾ ಇನ್ನಾವುದೇ ವಸ್ತುಗಳನ್ನು ಅಡಮಾನ ಅಥವಾ ಮಾರಾಟವಾಗದೆ ಉಳಿದಿದ್ದರೆ, ಅದು ಆಯುಷ್ಮಾನ್ ಭಾರತದ ದೊಡ್ಡ ಯಶಸ್ಸು ಎಂದು ಪಿಎಂ ಮೋದಿ ಹೇಳಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ 50 ಸಾವಿರ ಬಡಜನರು ತಮ್ಮ ಜಿಲ್ಲೆ ಮತ್ತು ರಾಜ್ಯದ ಆಚೆಯೂ ಪಿಎಂಜೆಎವೈ ಅಡಿಯಲ್ಲಿ ಸೌಲಭ್ಯ ಪಡೆದುಕೊಂಡಿದ್ದಾರೆ, ಉತ್ತಮ ಸೌಲಭ್ಯ ಅವರಿಗೆ ದೊರೆತಿದೆ ಎಂದರು.
ಆಯುಷ್ಮಾನ್ ಭಾರತ ನವ ಭಾರತದ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದ ಪ್ರಧಾನಮಂತ್ರಿ ಮೋದಿ, ಇದು ಕೇವಲ ಬಡ ವ್ಯಕ್ತಿಯ ಜೀವವನ್ನು ಉಳಿಸುವ ಮಹತ್ಕಾರ್ಯವನ್ನಷ್ಟೇ ಮಾಡುತ್ತಿಲ್ಲ, ಜೊತೆಗೆ ದೇಶದ 130 ಕೋಟಿ ಜನರ ಶಕ್ತಿ ಮತ್ತು ಸಂಕಲ್ಪದ ಸಂಕೇತವಾಗಿದೆ ಎಂದರು.
ಆಯುಷ್ಮಾನ್ ಭಾರತ ಇಡೀ ಭಾರತಕ್ಕೆ ಸಮಗ್ರ ಪರಿಹಾರವಾಗಿದೆ ಜೊತೆಗೆ ಸ್ವಾಸ್ಥ್ಯ ಭಾರತಕ್ಕೂ ಸಮಗ್ರ ಪರಿಹಾರವಾಗಿದೆ ಎಂದರು. ಇದು ಸರ್ಕಾರದ ಚಿಂತನೆಯ ವಿಸ್ತರಣೆಯಾಗಿದ್ದು, ಭಾರತದ ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸಲು ನಾವು ಬಿಡಿಬಿಡಿಯಾಗಿ ಚಿಂತಿಸುವುದನ್ನು ಬಿಟ್ಟು ಒಗ್ಗೂಡಿ ಶ್ರಮಿಸುತ್ತಿದ್ದೇವೆ ಎಂದು ಹೇಳಿದರು. ಆಯುಷ್ಮಾನ್ ಭಾರತ ದೇಶದ ಯಾವುದೇ ಭಾಗದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸುತ್ತದೆ ಎಂದು ಹೇಳಿದರು.
ಆಯುಷ್ಮಾನ್ ಭಾರತ ಪಿಎಂ ಜೆಎವೈ ವರ್ಷ ಪೂರೈಸಿದ ಅಂಗವಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಎರಡು ದಿನಗಳ ಕಾರ್ಯಕ್ರಮವಾದ ಆರೋಗ್ಯ ಮಂಥನವನ್ನು ಆಯೋಜಿಸಿತ್ತು. ಪಿಎಂಜೆಎವೈನ ಎಲ್ಲ ಪ್ರಮುಖ ಬಾಧ್ಯಸ್ಥರು ಒಂದೇ ವೇದಿಕೆಯಲ್ಲಿ ಕಲೆತು ಕಳೆದ ಒಂದು ವರ್ಷದಲ್ಲಿ ಯೋಜನೆಯ ಜಾರಿಯಲ್ಲಿ ಎದುರಿಸಿದ ಸಮಸ್ಯೆಗಳ ಕುರಿತಂತೆ ಚರ್ಚಿಸಲು ಮತ್ತು ಯೋಜನೆ ಅನುಷ್ಠಾನದಲ್ಲಿನ ಸುಧಾರಣೆಗಳ ಕುರಿತಂತೆ ಹೊಸ ಅರಿವಿಗಾಗಿ ಚರ್ಚಿಸುವ ಅವಕಾಶ ಕಲ್ಪಿಸುವುದು ಆರೋಗ್ಯಮಂಥನ ಕಾರ್ಯಕ್ರಮದ ಉದ್ದೇಶವಾಗಿತ್ತು.