ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕೆವಾಡಿಯಾದ ಏಕತಾ ಪ್ರತಿಮೆಯ ಬಳಿಯಲ್ಲಿಂದು 430 ಕ್ಕೂ ಹೆಚ್ಚು ನಾಗರಿಕ ಸೇವೆಯ ಪ್ರೊಬೇಷನರ್ಗಳು, ಅಧಿಕಾರಿಗಳು ಮತ್ತು ಇತರರ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದರು.
ಇದಕ್ಕೂ ಮೊದಲು ಪ್ರಧಾನ ಮಂತ್ರಿಯವರೊಂದಿಗಿನ ಪ್ರತ್ಯೇಕ ಸಂವಾದದಲ್ಲಿ ಪ್ರೊಬೇಷನರ್ಗಳು ಕೃಷಿ ಮತ್ತು ಗ್ರಾಮೀಣ ಸಬಲೀಕರಣ, ಆರೋಗ್ಯ ಸುಧಾರಣೆಗಳು ಮತ್ತು ನೀತಿ ನಿರೂಪಣೆ; ಸುಸ್ಥಿರ ಗ್ರಾಮೀಣ ನಿರ್ವಹಣಾ ತಂತ್ರಗಳು, ಸಮಗ್ರ ನಗರೀಕರಣ ಮತ್ತು ಶಿಕ್ಷಣದ ಭವಿಷ್ಯ ಸೇರಿದಂತೆ ವಿವಿಧ ವಿಷಯಾಧಾರಿತ ಕ್ಷೇತ್ರಗಳ ಕುರಿತು ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಿದರು.
“ದೇಶದ ವಿವಿಧ ನಾಗರಿಕ ಸೇವೆಗಳ ಈ ರೀತಿಯ ಸಂಯೋಜಿತ ಅಡಿಪಾಯ ಕೋರ್ಸ್ ಒಂದು ರೀತಿಯಲ್ಲಿ ಭಾರತದಲ್ಲಿ ನಾಗರಿಕ ಸೇವೆಗಳಲ್ಲಿ ಹೊಸ ಅಧ್ಯಾಯದ ಆರಂಭವಾಗಿದೆ. ಇಲ್ಲಿಯವರೆಗೆ ನೀವು ಮಸ್ಸೂರಿ, ಹೈದರಾಬಾದ್ ಮತ್ತು ಇತರ ಸ್ಥಳಗಳಲ್ಲಿ ನಿಮ್ಮ ತರಬೇತಿಯನ್ನು ಪಡೆಯುತ್ತಿದ್ದಿರಿ. ನಾನು ಮೊದಲೇ ಹೇಳಿದಂತೆ ನಿಮ್ಮ ತರಬೇತಿಯ ಆರಂಭಿಕ ಹಂತದಲ್ಲಿಯೇ -ಅಧಿಕಾರಶಾಹಿ ಕೆಲಸ ಮಾಡುವ ವಿಧಾನದಲ್ಲಿ – ವಿವಿಧ ಹಳ್ಳಗಳಿಗೆ ಎಸೆಯಲ್ಪಡುತ್ತಿದ್ದಿರಿ” ಎಂದು ಪ್ರಧಾನ ಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದರು.
“ನಾಗರಿಕ ಸೇವೆಗಳ ನಿಜವಾದ ಏಕೀಕರಣವು ನಿಮ್ಮೆಲ್ಲರೊಡನೆ ಈಗ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ. ಈ ಆರಂಭವೇ ಒಂದು ಸುಧಾರಣೆಯಾಗಿದೆ. ಈ ಸುಧಾರಣೆಯು ತರಬೇತಿಯ ಏಕೀಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ದೃಷ್ಟಿಕೋನ ಮತ್ತು ವಿಧಾನವನ್ನು ವಿಸ್ತರಿಸುವುದು ಮತ್ತು ವ್ಯಾಪಕವಾದ ಮಾನ್ಯತೆಯನ್ನು ಹೊಂದಿರುವುದು. ಇದು ನಾಗರಿಕ ಸೇವೆಗಳ ಏಕೀಕರಣ. ಈ ಆರಂಭ ನಿಮ್ಮೊಂದಿಗೆ ಆಗುತ್ತಿದೆ ” ಎಂದು ಅವರ ಪ್ರಯತ್ನವನ್ನು ಶ್ಲಾಘಿಸಿದರು. ಇದರ ಒಂದು ಭಾಗವಾಗಿ ಸಾಮಾಜಿಕ ಮತ್ತು ಆರ್ಥಿಕ ಜಾಗತಿಕ ನಾಯಕರು ಮತ್ತು ತಜ್ಞರೊಂದಿಗೆ ಸಂವಹನ ನಡೆಸಲು ತರಬೇತಿ ಅಧಿಕಾರಿಗಳಿಗೆ ಅವಕಾಶ ನೀಡಲಾಯಿತು ಎಂದು ಅವರು ಹೇಳಿದರು.
ರಾಷ್ಟ್ರ ನಿರ್ಮಾಣದಲ್ಲಿ ನಾಗರಿಕ ಸೇವೆಗಳನ್ನು ಪ್ರಮುಖ ಸಾಧನವನ್ನಾಗಿ ಮಾಡುವುದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೂರದೃಷ್ಟಿಯಾಗಿತ್ತು. ಎಲ್ಲಾ ನಾಗರಿಕ ಸೇವೆಗಳನ್ನು ರಾಷ್ಟ್ರ ನಿರ್ಮಾಣ ಮತ್ತು ಪ್ರಗತಿಯಲ್ಲಿ ಪ್ರಮುಖ ಮಾಧ್ಯಮವನ್ನಾಗಿ ಮಾಡುವುದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಷ್ಟಿಯಾಗಿತ್ತು. ಈ ದೃಷ್ಟಿಯನ್ನು ಸಾಕಾರಗೊಳಿಸಲು ಸರ್ದಾರ್ ಪಟೇಲ್ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿಗಳನ್ನು ಈಗ ರಾಷ್ಟ್ರದ ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದು ಆಗಿನ ಸಾಮಾನ್ಯ ಭಾವನೆಯಾಗಿತ್ತು. ಆದರೆ ಸರ್ದಾರ್ ಪಟೇಲ್ ಅವರು ದೇಶವನ್ನು ಮುಂದೆ ಕೊಂಡೊಯ್ಯುವ ವ್ಯವಸ್ಥೆಯ ಸಾಮರ್ಥ್ಯದ ಬಗ್ಗೆ ನಂಬಿಕೆ ಇಟ್ಟಿದ್ದರು. ಅದೇ ಅಧಿಕಾರಶಾಹಿ ರಾಜ ಸಂಸ್ಥಾನಗಳನ್ನು ದೇಶದಲ್ಲಿ ಒಗ್ಗೂಡಿಸಲು ಸಹಾಯ ಮಾಡಿತು ಎಂದು ಅವರು ಹೇಳಿದರು.
ಜನ ಸಾಮಾನ್ಯರ ಜೀವನದಲ್ಲಿ ಬದಲಾವಣೆಯನ್ನು ತರಲು ಬಲವಾದ ಇಚ್ಛಾ ಶಕ್ತಿ ಮತ್ತು ದೃಢ ನಿಶ್ಚಯದ ಅವಶ್ಯಕತೆಯನ್ನು ಸರ್ದಾರ್ ಪಟೇಲ್ ಅವರು ಹೇಗೆ ಬಹಳಷ್ಟು ಸಾರಿ ಪ್ರದರ್ಶಿಸಿದರು ಎಂಬ ಬಗ್ಗೆ ಪ್ರಧಾನಿಯವರು ಪ್ರೊಬೆಷನರ್ಗಳೊಂದಿಗೆ ಹಂಚಿಕೊಂಡರು.
“ಸುಮಾರು 100 ವರ್ಷಗಳ ಹಿಂದೆಯೇ ಅವರು 10 ವರ್ಷಗಳಲ್ಲಿ ಸೀಮಿತ ಸಂಪನ್ಮೂಲಗಳೊಂದಿಗೆ ಅಹಮದಾಬಾದ್ ಪುರಸಭೆಗೆ ಸುಧಾರಣೆಗಳನ್ನು ತಂದರು ಮತ್ತು ಅವರ ಸಾಮರ್ಥ್ಯವನ್ನು ಸಾಬೀತುಪಡಿಸಿದರು“ ಎಂದು ಅವರು ಸರ್ದಾರ್ ಪಟೇಲ್ ಅವರ ಸಾಮರ್ಥ್ಯವನ್ನು ಉಲ್ಲೇಖಿಸಿ ಹೇಳಿದರು.
“ಈ ದೃಷ್ಟಿಯಿಂದ ಸರ್ದಾರ್ ಪಟೇಲ್ ಅವರು ಸ್ವತಂತ್ರ ಭಾರತದಲ್ಲಿ ನಾಗರಿಕ ಸೇವೆಗಳ ರೂಪುರೇಷೆಗಳನ್ನು ಎಳೆದರು” ಎಂದು ಪ್ರಧಾನಿ ಹೇಳಿದರು.
ನಿಷ್ಪಕ್ಷಪಾತ ಮತ್ತು ನಿಜವಾದ ನಿಸ್ವಾರ್ಥ ಮನೋಭಾವದಿಂದ ಎಲ್ಲ ಪ್ರಯತ್ನಗಳನ್ನು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಪ್ರೊಬೆಷನರ್ಗಳಿಗೆ ಸೂಚಿಸಿದರು.
“ನಿಷ್ಪಕ್ಷಪಾತ ಮತ್ತು ನಿಸ್ವಾರ್ಥತೆಯಿಂದ ಮಾಡುವ ಪ್ರತಿಯೊಂದು ಪ್ರಯತ್ನವೂ ನವಭಾರತಕ್ಕೆ ಬಲವಾದ ಅಡಿಪಾಯವಾಗಿದೆ. ನವ ಭಾರತದ ದೃಷ್ಟಿ ಮತ್ತು ಕನಸುಗಳನ್ನು ಈಡೇರಿಸಲು, ನಮ್ಮ ಅಧಿಕಾರಶಾಹಿ 21 ನೇ ಶತಮಾನದ ಚಿಂತನೆ ಮತ್ತು ವಿಧಾನವನ್ನು ಹೊಂದಿರಬೇಕು. ಸೃಜನಾತ್ಮಕ ಮತ್ತು ರಚನಾತ್ಮಕ, ಕಾಲ್ಪನಿಕತೆ ಮತ್ತು ನಾವೀನ್ಯತೆ, ಪೂರ್ವಭಾವಿ ಮತ್ತು ಸಭ್ಯ, ವೃತ್ತಿಪರ ಮತ್ತು ಪ್ರಗತಿಪರ, ಶಕ್ತಿಯುತ ಮತ್ತು ಶಕ್ತಗೊಳಿಸುವ, ಸಮರ್ಥ ಮತ್ತು ಪರಿಣಾಮಕಾರಿ, ಪಾರದರ್ಶಕ ಮತ್ತು ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ ಅಧಿಕಾರಿ ವರ್ಗ ನಮಗೆ ಬೇಕು ”ಎಂದು ಪ್ರಧಾನಿ ಹೇಳಿದರು.
ರಸ್ತೆ, ವಾಹನ, ದೂರವಾಣಿ, ರೈಲು, ಆಸ್ಪತ್ರೆ, ಶಾಲಾ ಕಾಲೇಜು ಮುಂತಾದ ಸಂಪನ್ಮೂಲಗಳ ಕೊರತೆಯಿದ್ದರೂ ಬಹಳಷ್ಟು ಹಿರಿಯ ಅಧಿಕಾರಿಗಳು ಸಾಕಷ್ಟು ಸಾಧಿಸಿದರು ಎಂದು ಅವರು ಹೇಳಿದರು.
“ಇಂದು ಹಾಗಿಲ್ಲ. ಭಾರತ ಅಗಾಧ ಪ್ರಗತಿಯತ್ತ ಸಾಗುತ್ತಿದೆ. ನಮ್ಮಲ್ಲಿ ಅಗಾಧವಾದ ಯುವ ಶಕ್ತಿ, ಅಗಾಧ ಆಧುನಿಕ ತಂತ್ರಜ್ಞಾನವಿದೆ. ಆಹಾರ ಸಂಪನ್ಮೂಲಗಳ ಕೊರತೆಯಿಲ್ಲ. ನಿಮಗೆ ಈಗ ಪ್ರಮುಖ ಅವಕಾಶಗಳು ಮತ್ತು ಜವಾಬ್ದಾರಿಗಳಿವೆ, ನೀವು ಭಾರತದ ಸಾಮರ್ಥ್ಯವನ್ನು ಹೆಚ್ಚಿಸಬೇಕು ಮತ್ತು ಅದರ ಸ್ಥಿರತೆಯನ್ನು ಬಲಪಡಿಸಬೇಕು. ಪ್ರೊಬೆಷನರ್ಗಳು ರಾಷ್ಟ್ರ ಸೇವೆಗೆ ತಮ್ಮನ್ನು ಅರ್ಪಿಸಿಕೊಳ್ಳಬೇಕು. ನೀವು ವೃತ್ತಿಜೀವನಕ್ಕಾಗಿ ಅಥವಾ ಕೇವಲ ಉದ್ಯೋಗಕ್ಕಾಗಿ ಈ ಹಾದಿಗೆ ಬಂದಿಲ್ಲ. ಸೇವೆಯೇ ಪರಮ ಧರ್ಮ ಎಂಬ ಮಂತ್ರದೊಂದಿಗೆ ಸೇವೆಗಾಗಿ ಇಲ್ಲಿಗೆ ಬಂದಿದ್ದೀರಿ” ಎಂದು ಪ್ರಧಾನಿ ಹೇಳಿದರು.
“ನಿಮ್ಮ ಪ್ರತಿಯೊಂದು ಕ್ರಿಯೆ, ಒಂದು ಸಹಿ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ನಿರ್ಧಾರಗಳು ಸ್ಥಳೀಯ ಮತ್ತು ಪ್ರಾದೇಶಿಕವಾಗಿದ್ದರೂ ಅವುಗಳ ದೃಷ್ಟಿಕೋನವು ರಾಷ್ಟ್ರೀಯವಾಗಿರಬೇಕು. ನಿಮ್ಮ ನಿರ್ಧಾರವು ರಾಷ್ಟ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನೀವು ಯಾವಾಗಲೂ ಯೋಚಿಸಬೇಕು. ”
“ನಿಮ್ಮ ನಿರ್ಧಾರ ಯಾವಾಗಲೂ ಎರಡು ಮೂಲ ತತ್ವಗಳನ್ನು ಆಧರಿಸಿರಬೇಕು. ಒಂದು ಮಹಾತ್ಮ ಗಾಂಧಿಯವರ ನಿಮ್ಮ ನಿರ್ಧಾರವು ಸಮಾಜದ ಅತ್ಯಂತ ಕೆಳಮಟ್ಟದಲ್ಲಿರುವ ಕೊನೆಯ ಮನುಷ್ಯನಿಗೆ ಯಾವುದಾದರೂ ಪ್ರಯೋಜನ ನೀಡುತ್ತದೆಯೇ ಎಂಬುದು ಮತ್ತು ಎರಡನೆಯದು ನಿಮ್ಮ ನಿರ್ಧಾರವು ದೇಶದ ಏಕತೆ, ಸ್ಥಿರತೆ ಮತ್ತು ಅದರ ಶಕ್ತಿಗೆ ಕಾರಣವಾಗುತ್ತದೆಯೇ ಎಂಬುದು” ಎಂದು ಅವರು ಹೇಳಿದರು.
100 ಕ್ಕೂ ಹೆಚ್ಚು ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಎಲ್ಲ ಕ್ಷೇತ್ರಗಳಲ್ಲೂ ಹೇಗೆ ನಿರ್ಲಕ್ಷಿಸಲಾಗಿದೆ, ಅದು ಹೇಗೆ ಭ್ರಮನಿರಸನಕ್ಕೆ ಕಾರಣವಾಗಿದೆ ಎಂಬುದನ್ನು ಪ್ರಧಾನಿ ವಿವರಿಸಿದರು.
“100 ಕ್ಕೂ ಹೆಚ್ಚು ಜಿಲ್ಲೆಗಳು ಅಭಿವೃದ್ಧಿಯ ಓಟದಲ್ಲಿ ಸೋತಿದ್ದವು. ಈಗ ಅವು ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿವೆ. ಅವುಗಳನ್ನು ಎಲ್ಲಾ ಹಂತಗಳಲ್ಲಿ ನಿರ್ಲಕ್ಷಿಸಲಾಗಿತ್ತು ಮತ್ತು ಇದು ದೇಶದಲ್ಲಿ ಭ್ರಮನಿರಸನಕ್ಕೆ ಕಾರಣವಾಯಿತು. ಈಗ ಅವುಗಳ ಅಭಿವೃದ್ಧಿ ಹೆಚ್ಚು ಕಷ್ಟಕರವಾಗಿದೆ. ಈಗ ನಾವು ಎಚ್ಡಿಐನ ಪ್ರತಿಯೊಂದು ಅಂಶಗಳಲ್ಲೂ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವು ತಂತ್ರಜ್ಞಾನದ ಸಹಾಯದಿಂದ ಎಲ್ಲಾ ನೀತಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ. ಈಗ ನೀವು ಈ ಬಗ್ಗೆ ಶ್ರಮಿಸಬೇಕು.ನಾವು ಈ ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಬೇಕು “ ಎಂದರು.
ಒಂದು ಸಮಯದಲ್ಲಿ ಒಂದು ಸಮಸ್ಯೆಯ ಬಗ್ಗೆ ಮಾತ್ರ ಕೆಲಸ ಮಾಡಿ ಮತ್ತು ಅದಕ್ಕೆ ಸಂಪೂರ್ಣ ಪರಿಹಾರವನ್ನು ಕಂಡುಹಿಡಿಯಿರಿ. ಇದು ಜನರ ವಿಶ್ವಾಸ ಮತ್ತು ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ.ಎಂದು ಅವರು ಪ್ರೊಬೆಷನರ್ಗಳಿಗೆ ತಿಳಿಸಿದರು,
“ನಮ್ಮ ಉತ್ಸಾಹ ಮತ್ತು ಆತಂಕದಲ್ಲಿ ನಾವು ಅನೇಕ ರಂಗಗಳಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತೇವೆ ಮತ್ತು ಆದ್ದರಿಂದ ನಮ್ಮ ಸಂಪನ್ಮೂಲಗಳನ್ನು ದುರ್ಬಲಗೊಳಿಸುತ್ತೇವೆ. ಅದರ ಬದಲಾಗಿ ನೀವು ಒಂದು ಸಮಸ್ಯೆಯ ಬಗ್ಗೆ ಕೆಲಸ ಮಾಡಿ. ಅದಕ್ಕೆ ಪರಿಹಾರ ಕಂಡುಕೊಳ್ಳಿ. ಒಂದು ಜಿಲ್ಲೆ ಒಂದು ಸಮಸ್ಯೆ ಮತ್ತು ಸಂಪೂರ್ಣ ಪರಿಹಾರ. ಒಂದು ಸಮಸ್ಯೆಯನ್ನು ಕಡಿಮೆ ಮಾಡಿ. ನಿಮ್ಮ ವಿಶ್ವಾಸವು ವೃದ್ಧಿಸುತ್ತದೆ ಮತ್ತು ಜನರ ವಿಶ್ವಾಸವೂ ಹೆಚ್ಚಾಗುತ್ತದೆ. ಇದು ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. ”
ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಿ ಮತ್ತು ಸಾರ್ವಜನಿಕರಿಗೆ ಯಾವಾಗಲೂ ಲಭ್ಯವಿರಿ ಎಂದು ಅವರು ಯುವ ಪ್ರೊಬೆಷನರ್ಗಳಲ್ಲಿ ವಿನಂತಿ ಮಾಡಿದರು.
“ನೀವು ಕಠಿಣ ಅಧಿಕಾರದ ಬದಲಿಗೆ ಮೃದು ಅಧಿಕಾರವನ್ನು ಚಲಾಯಿಸಬೇಕು. ನೀವು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯರಿರಬೇಕು. ನೀವು ಒಳ್ಳೆಯ ಉದ್ದೇಶದಿಂದ ಕೆಲಸ ಮಾಡಬೇಕು. ನೀವು ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಹೊಂದಿಲ್ಲದಿರಬಹುದು ಆದರೆ ನೀವು ಅವುಗಳನ್ನು ಕೇಳಲು ಸಿದ್ಧರಿರಬೇಕು. ಈ ದೇಶದ ಜನ ಸಾಮಾನ್ಯ ತನ್ನ ಸಮಸ್ಯೆಯನ್ನು ಸರಿಯಾಗಿ ಕೇಳಿಸಿಕೊಂಡ ಮಾತ್ರಕ್ಕೇ ಅನೇಕ ಬಾರಿ ತೃಪ್ತನಾಗುತ್ತಾನೆ. ಅವರು ಗೌರವ ಮತ್ತು ಘನತೆಯನ್ನು ಬಯಸುತ್ತಾರೆ ಮತ್ತು ಅವರ ಸಮಸ್ಯೆಗಳನ್ನು ತಿಳಿಸಲು ಸರಿಯಾದ ವೇದಿಕೆಯನ್ನು ಬಯಸುತ್ತಾರೆ. “
ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಸರಿಯಾದ ಫೀಡ್ ಬ್ಯಾಕ್ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಿ ತಿಳಿಸಿದರು. “ಯಾವುದೇ ವ್ಯವಸ್ಥೆಯಲ್ಲಿ, ಪರಿಣಾಮಕಾರಿಯಾಗಲು ಯಾವುದೇ ಅಧಿಕಾರಶಾಹಿಯಲ್ಲಿ ನೀವು ಸರಿಯಾದ ಫೀಡ್ ಬ್ಯಾಕ್ ವ್ಯವಸ್ಥೆಯನ್ನು ಹೊಂದಿರಬೇಕು. ನಿಮ್ಮ ವಿರೋಧಿಗಳಿಂದಲೂ ನೀವು ಪ್ರತಿಕ್ರಿಯೆಯನ್ನು ಪಡೆಯಲು ಸಾಧ್ಯವಾಗುತ್ತದೆ ಮತ್ತು ಇದು ನಿಮ್ಮ ದೃಷ್ಟಿಕೋನದ ಆಳವನ್ನು ಹೆಚ್ಚಿಸುತ್ತದೆ ಮತ್ತು ಸುಧಾರಣೆಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ “ ಎಂದು ಪ್ರಧಾನಮಂತ್ರಿ ಹೇಳಿದರು.
ತಾಂತ್ರಿಕ ಪರಿಹಾರಗಳೊಂದಿಗೆ ಕೆಲಸ ಮಾಡುವಂತೆ ಮತ್ತು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ದೇಶಕ್ಕೆ ಸಹಾಯ ಮಾಡುವಂತೆ ಪ್ರಧಾನ ಮಂತ್ರಿ ನಾಗರಿಕ ಸೇವಾ ಪ್ರೊಬೆಷನರ್ಗಳಿಗೆ ಸೂಚಿಸಿದರು.
ಇದಕ್ಕೂ ಮೊದಲು ಪ್ರಧಾನ ಮಂತ್ರಿಯವರೊಂದಿಗಿನ ಪ್ರತ್ಯೇಕ ಸಂವಾದದಲ್ಲಿ ಪ್ರೊಬೇಷನರ್ಗಳು ಕೃಷಿ ಮತ್ತು ಗ್ರಾಮೀಣ ಸಬಲೀಕರಣ, ಆರೋಗ್ಯ ಸುಧಾರಣೆಗಳು ಮತ್ತು ನೀತಿ ನಿರೂಪಣೆ; ಸುಸ್ಥಿರ ಗ್ರಾಮೀಣ ನಿರ್ವಹಣಾ ತಂತ್ರಗಳು, ಸಮಗ್ರ ನಗರೀಕರಣ ಮತ್ತು ಶಿಕ್ಷಣದ ಭವಿಷ್ಯ ಸೇರಿದಂತೆ ವಿವಿಧ ವಿಷಯಾಧಾರಿತ ಕ್ಷೇತ್ರಗಳ ಕುರಿತು ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಿದರು.