ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 72ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲಿನ ವೇದಿಕೆಯಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದರು. ಅವರ ಭಾಷಣದ ಮುಖ್ಯಾಂಶಗಳು ಈ ಕೆಳಕಂಡಂತಿವೆ:

 

•ದೇಶ ಇಂದು ಆತ್ಮವಿಶ್ವಾಸದಿಂದ ಬೀಗುತ್ತಿದೆ. ದೇಶ ಹೊಸ ಎತ್ತರಕ್ಕೆ ಏರುವ ಸಂಕಲ್ಪದೊಂದಿಗೆ ಶ್ರಮಿಸುತ್ತಿದ್ದು ಹೊಸ ಎತ್ತರಕ್ಕೆ ಏರುತ್ತಿದೆ.

•ಉತ್ತರಖಂಡ, ಹಿಮಾಚಲ ಪ್ರದೇಶ, ಮಣಿಪುರ, ತೆಲಂಗಾಣ ಮತ್ತು ಆಂಧ್ರಪ್ರದೇಶ  ರಾಜ್ಯಗಳ ನಮ್ಮ ಪುತ್ರಿಯರು ಸಪ್ತ ಸಾಗರಗಳನ್ನು ಸುತ್ತಿ ಮರಳಿದ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯಹಬ್ಬವನ್ನು ಆಚರಿಸುತ್ತಿದ್ದೇವೆ,

•ಸಪ್ತ ಸಮುದ್ರಗಳನ್ನು ನಮ್ಮ ತ್ರಿವರ್ಣ ಬಣ್ಣಕ್ಕೆ ತಿರುಗಿಸಿ (ಸಪ್ತ ಸಮುದ್ರದಲ್ಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ) ಅವರು ನಮ್ಮಲ್ಲಿಗೆ ಹಿಂತಿರುಗಿ ಬಂದಿದ್ದಾರೆ.

•ದೂರದ ಗುಡ್ಡಗಾಡಿನ ಅರಣ್ಯದಲ್ಲಿ ವಾಸಿಸುವ ನಮ್ಮ ಯುವ ಬುಡಕಟ್ಟು ಮಕ್ಕಳು ಮೌಂಟ್ ಎವರೆಸ್ಟ್ ಮೇಲೆ ಬಾವುಟ ಹಾರಿಸುವ ಮೂಲಕ ತ್ರಿವರ್ಣ ಧ್ವಜದ ವೈಭವ ಹೆಚ್ಚಿಸಿದ್ದಾರೆ.

•ಕಿರುಕುಳಕ್ಕೊಳಗಾದ ಅಥವಾ ಶೋಷಿಸಲ್ಪಟ್ಟ  ದಲಿತರೇ ಇರಲಿ ಅಥವಾ ಬೇರೆ ಯಾರೊಬ್ಬರಾಗಲಿ ಅಥವಾ ವಂಚಿತ ವ್ಯಕ್ತಿಯಾಗಲಿ ಅಥವಾ ಮಹಿಳೆಯರಾಗಿರಲಿ, ಅವರ ಹಿತ ರಕ್ಷಿಸಲು ಸಂಪೂರ್ಣ ಸಂವೇದನಾತ್ಮಕತೆಯಿಂದ ಮತ್ತು ಎಚ್ಚರಿಕೆಯಿಂದನಮ್ಮ ಸಂಸತ್ತು ಸಾಮಾಜಿಕ ನ್ಯಾಯವನ್ನು ಮತ್ತಷ್ಟು ಬಲಪಡಿಸಿದೆ.

•ಓಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಏಳುತ್ತಿತ್ತು. ಈ ಬಾರಿ ನಮ್ಮ ಸಂಸತ್ತು ಹಿಂದುಳಿದ ವರ್ಗಗಳ ಹಿತವನ್ನು ಮತ್ತು ತೀರಾ ಹಿಂದುಳಿದ ವರ್ಗಗಳವರ ಹಿತವನ್ನು ರಕ್ಷಿಸಲು ಓಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನ ನೀಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದೆ.

•ಪ್ರವಾಹದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಮತ್ತು ಬಹಳಷ್ಟು ತೊಂದರೆ ಎದುರಿಸುತ್ತಿರುವ ಜನರಿಗೆ  ದೇಶವು ನಿಮ್ಮೊಂದಿಗಿದ್ದು, ಅವರಿಗೆ ಸಹಾಯ ಮಾಡಲು ಸಂಪೂರ್ಣ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನಾನು ಧೈರ್ಯಹೇಳಲು ಬಯಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರೊಂದಿಗೆ ನನ್ನ ಸಂವೇದನೆ ಇದೆ.

•ಮುಂದಿನ ವರ್ಷ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ 100ನೇ ವರ್ಷವಾಗಿದೆ. ಸಮುದಾಯಗಳು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿವೆ; ಮತ್ತು  ಆ ಶೋಷಣೆ ಎಲ್ಲ ಮಿತಿಗಲನ್ನು ದಾಡಿತ್ತು. ಜಲಿಯನ್ ವಾಲಾಬಾಗ್ ಘಟನೆಯಲ್ಲಿ ತ್ಯಾಗ ಮಾಡಿದ ಧೈರ್ಯಶಾಲಿ ಹೃದಯಗಳು ನಮಗೆ ಸ್ಫೂರ್ತಿ ನೀಡುತ್ತವೆ. ನಾನು ಎಲ್ಲ ತ್ಯಾಗಮಯಿಗಳಿಗೆ ಹೃದಯಾಂತರಾಳದಿಂದ ನಮಿಸುತ್ತೇನೆ.

•ಭಾರತವು ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿದೆ.

•ನಾನು ಇಂದು ಶೌರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಹೃದಯದಿಂದ ಮತ್ತು ದೇಶದ ಜನತೆಯ ಪರವಾಗಿ ನಮನಗಳನ್ನು ಸಲ್ಲಿಸುತ್ತೇನೆ. ರಾಷ್ಟ್ರೀಯ ಧ್ವಜ, ತ್ರಿವರ್ಣದ ವೈಭವವನ್ನು ಮತ್ತು ಘನತೆಯನ್ನು ಕಾಪಾಡಿಡಲು ದಿನ ಮತ್ತು ದಿನವೂ ನಮ್ಮ ಯೋಧರು, ಅರೆ ಮಿಲಿಟರಿ ಪಡೆಗಳವರು ಮತ್ತು ಪೊಲೀಸರು ತಮ್ಮ ಪ್ರಾಣವನ್ನು ತ್ಯಾಗ ಮಾಡುತ್ತಾ ದೇಶದ ಜನರ ಸೇವೆ ಮಾಡುತ್ತಿದ್ದಾರೆ

•ಸ್ವಾತಂತ್ರ್ಯಾನಂತರ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಡಿಯಲ್ಲಿ ಅತ್ಯುತ್ಕೃಷ್ಟ ಸಮಗ್ರ ಸಂವಿಧಾನ ಸಿದ್ಧಪಡಿಸಲಾಯಿತು. ಇದು ನವ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಆಯಿತು.

•ಭಾರತವು ಸ್ವಾವಲಂಬಿಯಾಗಿರಬೇಕು, ಬಲಿಷ್ಠವಾಗಿರಬೇಕು, ಸದಾ ಸುಸ್ಥಿರ ಅಭಿವೃದ್ಧಿಯ ಹಾದಿಯಲ್ಲಿರಬೇಕು. ಈ ಬಗ್ಗೆ ಭಾರತಕ್ಕೆ ಮಾತ್ರ ನಂಬಿಕೆ ಇರಬಾರದು, ಆದರೆ ಭಾರತವು ಜಗತ್ತಿನಲ್ಲಿ ಪರಿಣಾಮಕಾರಿಯಾಗಬೇಕು ಎಂದು ನಾವು ಬಯಸುತ್ತೇವೆ, ನಾವು ಭಾರತವನ್ನು ಹಾಗೆ ಮಾಡುತ್ತೇವೆ.

•125 ಕೋಟಿ ಜನರ ಕನಸು, ಶ್ರಮ ಮತ್ತು ಆಶೋತ್ತರಗಳು ಒಂದಾದರೆ, ಯಾವುದನ್ನು ಸಾಧಿಸಲು ಸಾಧ್ಯವಿಲ್ಲ ಹೇಳಿ?

•2014ರಲ್ಲಿ ಸರ್ಕಾರ ರಚಿಸಲು 125 ಕೋಟಿ ಭಾರತೀಯರು ನಿಂತಿದ್ದಷ್ಟೇ ಅಲ್ಲ, ಅವರು ದೇಶವನ್ನು ಉತ್ತಮಪಡಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದು ಭಾರತದ ಬಲವಾಗಿದೆ.

•ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಕೆಲಸವನ್ನು ನೀವು ಗಣನೆಗೆ ತೆಗೆದುಕೊಳ್ಳುವುದಾದರೆ, ದೇಶದಲ್ಲಿ ಆಗುತ್ತಿರುವ ಪ್ರಗತಿಯಲ್ಲಿ ಸಾಗುತ್ತಿರುವ ವೇಗವನ್ನು ನೋಡಿ ನೀವೇ ಅಚ್ಚರಿಪಡುತ್ತೀರಿ.

•ನಾವು 2013ರ ವೇಗದಲ್ಲೇ ಕೆಲಸ ಮಾಡಿದ್ದರೆ, ಭಾರತವನ್ನು ನೂರರಷ್ಟು ಬಯಲು ಶೌಚಮುಕ್ತ ಮಾಡಲು ಅಥವಾ ಎಲ್ಲ ಭಾಗಕ್ಕೂ ವಿದ್ಯುತ್ ಪೂರೈಸಲು ಅಥವಾ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲ ಮಹಿಳೆಯರಿಗೂ ಎಲ್.ಪಿ.ಜಿ. ಸಂಪರ್ಕ ಕೊಡಲು ಆಗುತ್ತಿತ್ತೆ. ನಾವು 2013ರ ವೇಗದಲ್ಲೇ ಕೆಲಸ ಮಾಡಿದ್ದಿದ್ದರೆ, ದೇಶವನ್ನು ಆಫ್ಟಿಕ್ ಫೈಬರ್ ಮೂಲಕ ಸಂಪರ್ಕಿಸಲು ಒಂದು ಪೀಳಿಗೆಯೇ ಬೇಕಾಗುತ್ತಿತ್ತು. ನಾವು ಈ ಎಲ್ಲ ಗುರಿಗಳನ್ನು ಈಡೇರಿಸಲು ಅಷ್ಟು ವೇಗವಾಗಿ ಸಾಗುತ್ತಿದ್ದೇವೆ.

•ಕಳೆದ ನಾಲ್ಕು ವರ್ಷಗಳಲ್ಲಿ ದೇಶ ಬದಲಾವಣೆಯನ್ನು ಕಾಣುತ್ತಿದೆ. ದೇಶ ಹೊಸ ಹುರುಪು, ಉತ್ಸಾಹ ಮತ್ತು ಧೈರ್ಯದೊಂದಿಗೆ ಪ್ರಗತಿಸಾಧಿಸುತ್ತಿದೆ. ಇದೇ ದೇಶದಲ್ಲಿ ದುಪ್ಪಟ್ಟು ಹೆದ್ದಾರಿಗಳು ಮತ್ತು ನಾಲ್ಕು ಪಟ್ಟಿಗೂ ಹೆಚ್ಚು ಮನೆಗಳು ಹಳ್ಳಿಗಳಲ್ಲಿ ನಿರ್ಮಾಣವಾಗುತ್ತಿದೆ.

•ದೇಶ ದಾಖಲೆಯ ಆಹಾರಧಾನ್ಯ ಉತ್ಪಾದನೆ ಮಾಡುತ್ತಿದೆ ಮತ್ತು ದಾಖಲೆ ಸಂಖ್ಯೆಯ ಮೊಬೈಲ್ ಫೋನ್ ಗಳನ್ನು ತಯಾರು ಮಾಡುತ್ತಿದೆ. ಟ್ರ್ಯಾಕ್ಟರ್ ಗಳ ಮಾರಾಟವು ಹೊಸ ಎತ್ತರ ತಲುಪಿದೆ.

•ಸ್ವಾತಂತ್ರ್ಯಾನಂತರ ದೇಶ ಅತಿ ಹೆಚ್ಚು ಸಂಖ್ಯೆಯ ವಿಮಾನಗಳನ್ನು ಖರೀದಿಸುತ್ತಿದೆ. 

•ಹೊಸ ಐ.ಐ.ಎಂ.ಗಳು, ಐಐಟಿಗಳು ಮತ್ತು ಎಐಐಎಂಎಸ್  ಗಳನ್ನು ದೇಶದಲ್ಲಿ ಸ್ಥಾಪಿಸಲಾಗಿದೆ.

•ಸಣ್ಣ ಊರುಗಳಲ್ಲೂ ಹೊಸ ಕೇಂದ್ರ ತೆರೆಯುವ ಮೂಲಕ ಕೌಶಲ ಅಭಿವೃದ್ಧಿ ಅಭಿಯಾನವನ್ನು ಉತ್ತೇಜಿಸಲಾಗುತ್ತಿದೆ.

•ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ನವೋದ್ಯಮ ಕಾರ್ಯಕ್ರಮಗಳು ತಲೆ ಎತ್ತುತ್ತಿವೆ.

•ದಿವ್ಯಾಂಗರಿಗಾಗಿ “ಕಾಮನ್ ಸೈನ್” ನಿಘಂಟಿನ ಸಂಗ್ರಹಣೆಯ ಪ್ರಯತ್ನ ಪ್ರಗತಿಯಲ್ಲಿದೆ.

•ಕೃಷಿ ರಂಗಕ್ಕೆ ಆಧುನೀಕತೆ ಮತ್ತು ತಂತ್ರಜ್ಞಾನ ಪ್ರವೇಶಿಸಿದೆ. ನಮ್ಮ ರೈತರು ಸೂಕ್ಷ್ಮ ನೀರಾವರಿ, ತುಂತುರು ನೀರಾವರಿ ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಬಳಸುತ್ತಿದ್ದಾರೆ.

•ಒಂದೆಡೆ ನಮ್ಮ ಯೋಧರು ಸಂಕಷ್ಟದಲ್ಲಿರುವವರಿಗೆ ಸಹಾನುಭೂತಿ ಮತ್ತು ಪರಾನುಭೂತಿಯೊಂದಿಗೆ ನೆರವು ನೀಡುತ್ತಾರೆ. ಮತ್ತೊಂದೆಡೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಶತ್ರುಗಳನ್ನು ಸದೆಬಡಿಯಲೂ ಸಮರ್ಥರಾಗಿದ್ದಾರೆ.

•ನಾವು ಸದಾ ಹೊಸ ಉದ್ದೇಶಗಳೊಂದಿಗೆ ಪ್ರಗತಿ ಸಾಧಿಸಬೇಕು. ನಮ್ಮ ಗುರಿಗಳು ಸ್ಪಷ್ಟವಾಗಿಲ್ಲದಿದ್ದಾಗ, ಪ್ರಗತಿ ಸಾಧ್ಯವಿಲ್ಲ. ನಾವು ಆಗ ವರ್ಷಗಟ್ಟಲೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲಾಗದ ಸ್ಥಿತಿಗೆ ಬರುತ್ತೇವೆ.

•ನಾವು ದೊಡ್ಡ ಧೈರ್ಯದೊಂದಿಗೆ ರೈತರ ಉತ್ಪನ್ನಗಳಿಗೆ ಆಕರ್ಷಕ ಬೆಲೆ ನೀಡಲು ನಿರ್ಧರಿಸಿದ್ದೇವೆ. ಹಲವು ಬೆಳೆಗಳ ಗರಿಷ್ಠ ಬೆಂಬಲ ಬೆಲೆಯನ್ನು ಕೃಷಿ ವೆಚ್ಚದ 1.5ಪಟ್ಟಿಗೂ ಹೆಚ್ಚು ಹೆಚ್ಚಿಸಿದ್ದೇವೆ.

•ಸಣ್ಣ ವ್ಯಾಪಾರಸ್ಥರ ನೆರವಿನೊಂದಿಗೆ, ಅವರ ಮುಕ್ತ ಮನೋಭಾವ ಮತ್ತು ಹೊಸತನ್ನು ಅಪ್ಪಿಕೊಳ್ಳುವ ಅವರ ಮನೋವೃತ್ತಿಯೊಂದಿಗೆ, ದೇಶ ಯಶಸ್ವಿಯಾಗಿ ಜಿಎಸ್ಟಿಯನ್ನು ಅನುಷ್ಠಾನಕ್ಕೆ ತಂದಿದೆ. ಅದು ವ್ಯಾಪಾರಸ್ಥರ ನಡುವೆ ಹೊಸ ವಿಶ್ವಾಸವನ್ನು ತಂದಿದೆ.

•ದೇಶದ ಒಳಿತಿಗಾಗಿ ಬೇನಾಮಿ ಆಸ್ತಿ ಕಾನೂನನ್ನು ಶ್ರೇಷ್ಠ ಧೈರ್ಯ ಮತ್ತು ಉದ್ದೇಶದೊಂದಿಗೆ ತರಲಾಗಿದೆ.

•ಭಾರತದ ಆರ್ಥಿಕತೆಯನ್ನು ಅಪಾಯಕಾರಿ ಎಂದು ಜಗತ್ತು ಕರೆಯುತ್ತಿದ್ದ ಕಾಲವೊಂದಿತ್ತು. ಆದರೆ ಇಂದು, ಅದೇ ಜನ ಮತ್ತು ಸಂಸ್ಥೆಗಳು, ನಮ್ಮ ಸುಧಾರಣೆಯ ವೇಗ ನಮ್ಮ ಮೂಲಭೂತತ್ವವನ್ನು ಬಲಪಡಿಸಿದೆ ಎಂದು ತುಂಬು ವಿಶ್ವಾಸದೊಂದಿಗೆ ಹೇಳುತ್ತಿದ್ದಾರೆ.

•ರೆಡ್ ಟೇಪ್ ಬಗ್ಗೆ ಜಗತ್ತು ಮಾತನಾಡುತ್ತಿದ್ದ ಕಾಲವೊಂದಿತ್ತು. ಆದರೆ, ಇಂದು ರತ್ನಗಂಬಳಿ ಸ್ವಾಗತ ನೀಡುವ ಕುರಿತು ಚರ್ಚೆ ಮಾಡಲಾಗುತ್ತಿದೆ. ನಾವು ಸುಗಮ ವಾಣಿಜ್ಯದ ಶ್ರೇಣೀಕರಣದಲ್ಲಿ 100ನೇ ಸ್ಥಾನ ತಲುಪಿದ್ದೇವೆ. ಇಂದು ಇಡೀ ವಿಶ್ವ ನಮ್ಮ ಸಾಧನೆಯತ್ತ ಹೆಮ್ಮೆಯಿಂದ ನೋಡುತ್ತಿದೆ.

•ಒಂದು ಕಾಲವಿತ್ತು, ಆಗ ಇಡೀ ದೇಶ ಭಾರತ ಎಂದರೆ –ಪಾರ್ಶ್ವವಾಯು ಪೀಡಿತ ಮತ್ತು ವಿಳಂಬ ಸುಧಾರಣೆ ಎಂದು ಹೇಳುತ್ತಿದ್ದವು. ಆದರೆ, ಇಂದು ಭಾರತ ಎಂದರೆ– ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ ಎಂದು ಮಾತನಾಡುತ್ತಾರೆ.

•ಒಂದು ಕಾಲವಿತ್ತು, ಆಗ ವಿಶ್ವ ಭಾರತವನ್ನು ಫ್ರಗೈಲ್ ಫೈವ್ ಗಳಲ್ಲಿ ಒಂದಾಗಿ ನೋಡುತ್ತಿತ್ತು. ಇಂದು ವಿಶ್ವ ಏನು ಹೇಳುತ್ತಿದೆ ಗೊತ್ತೆ ಭಾರತವು ಬಹುಕೋಟಿ ಡಾಲರ್ ಹೂಡಿಕೆಯ ನೆಚ್ಚಿನ ತಾಣ ಎಂದು.

•ಭಾರತದ ಆರ್ಥಿಕತೆಯ ಬಗ್ಗೆ ಮಲಗಿರುವ ಆನೆ ಎನ್ನುತ್ತಿದ್ದವರು, ಈಗ ಮಲಗಿದ್ದ ಆನೆ ಎದ್ದಿದೆ, ಎದ್ದು ಓಡುತ್ತಿದೆ ಎನ್ನುತ್ತಿದ್ದಾರೆ. ವಿಶ್ವದ ಆರ್ಥಿಕ ತಜ್ಞರು ಮತ್ತು ಸಂಸ್ಥೆಗಳು ಮುಂದಿನ ಮೂರು ವರ್ಷಗಳ ಕಾಲ ಭಾರತವು ಜಾಗತಿಕ ಆರ್ಥಿಕ ಬಲ ನೀಡುತ್ತದೆ ಎನ್ನುತ್ತಿದ್ದಾರೆ.

•ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಘನತೆ ಹೆಚ್ಚಿದೆ, ಇಂಥ ವೇದಿಕೆಗಳಲ್ಲಿ ಭಾರತ ತನ್ನ ಅಭಿಪ್ರಾಯಗಳನ್ನು ಗಟ್ಟಿ ಧ್ವನಿಯಲ್ಲಿ ಹೇಳಿದೆ.

•ಈ ಹಿಂದೆ, ಹಲವು ಅಂತಾರಾಷ್ಟ್ರೀಯ ಸಂಘಟನೆಗಳ ಸದಸ್ಯತ್ವಕ್ಕೆ ಕಾಯುತ್ತಿತ್ತು. ಈಗ, ಅಸಂಖ್ಯಾತ ಸಂಸ್ಥೆಗಳು ಭಾರತಕ್ಕೆ ಸದಸ್ಯತ್ವ ನೀಡಲು ಮುಂದೆ ಬರುತ್ತಿವೆ. ತಾಪಮಾನ ಏರಿಕೆಗೆ ಸಂಬಂಧಿಸಿದಂತೆ ಭಾರತವು ಇತರ ಎಲ್ಲ ರಾಷ್ಟ್ರಗಳಿಗೆ ಭರವಸೆಯಾಗಿದೆ. ಅಂತಾರಾಷ್ಟ್ರೀಯ ಸೌರ ಸಹಯೋಗಕ್ಕೆ ವಿಶ್ವದಾದ್ಯಂತದಿಂದ ಸ್ವಾಗತ ದೊರೆತಿದೆ.

•ಇಂದು ಕ್ರೀಡಾ ಕ್ಷೇತ್ರದಲ್ಲಿ ಈಶಾನ್ಯದ ಬಗ್ಗೆ ಅದ್ಭುತ ಛಾಯೆ ಮೂಡಿದೆ.

•ಈಶಾನ್ಯದ ಕೊನೆಯ ಹಳ್ಳಿಗೂ ವಿದ್ಯುತ್ ಲಭಿಸಿದೆ.

•ನಾವು ಹೆದ್ದಾರಿ, ರೈಲು ಮಾರ್ಗ, ವಾಯು ಮಾರ್ಗ, ಜಲ ಮಾರ್ಗ ಮತ್ತು ಮಾಹಿತಿ ತಂತ್ರಜ್ಞಾನ ಮಾರ್ಗ – ಐವೇಸ್ ಗೆ ಈಶಾನ್ಯದಿಂದ ಉತ್ತಮ ಪ್ರಗತಿಯ ಸುದ್ದಿ ಕೇಳುತ್ತಿದ್ದೇವೆ.

•ಈಶಾನ್ಯದ ನಮ್ಮ ಯುವಕರು ಬಿಪಿಓಗಳನ್ನು ತಮ್ಮ ಪ್ರದೇಶದಲ್ಲೇ ಸ್ಥಾಪಿಸುತ್ತಿದ್ದಾರೆ.

•ಈಶಾನ್ಯ ವಲಯ ಸಾವಯವ ಕೃಷಿಯ ತಾಣವಾಗಿ ಹೊರಹೊಮ್ಮುತ್ತಿದೆ. ಈಶಾನ್ಯದಲ್ಲಿ ಕ್ರೀಡಾ ಸಚಿವಾಲಯವೂ ಸ್ಥಾಪನೆಯಾಗುತ್ತಿದೆ.

•ಈಶಾನ್ಯ ದೆಹಲಿಗೆ ಅತಿ ದೂರ ಎಂಬ ಭಾವನೆ ಇದ್ದ ಕಾಲವಿತ್ತು, ಕಳೆದ ನಾಲ್ಕು ವರ್ಷಗಳಲ್ಲಿ ನಾವು ಈಶಾನ್ಯವನ್ನು ದೆಹಲಿಯ ಸಂಪರ್ಕ ತೆಕ್ಕೆಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ.

•ನಮ್ಮ ದೇಶದಲ್ಲಿನ ಜನಸಂಖ್ಯೆಯಲ್ಲಿ ಶೇ.65ರಷ್ಟು ಜನ 35 ವರ್ಷದೊಳಗಿನವರಾಗಿದ್ದಾರೆ. ನಮ್ಮ ಯುವಕರು ಕಾರ್ಯ ಸ್ವರೂಪದಲ್ಲಿ ಒಂದು ಮಾದರಿಯ ಬದಲಾವಣೆ ತಂದಿದ್ದಾರೆ. ಅದು ನವೋದ್ಯಮ ಇರಲಿ, ಬಿಪಿಓ ಅಥವಾ ಇ-ವಾಣಿಜ್ಯ ಅಥವಾ ಚಲನಶೀಲತೆಯ ಕ್ಷೇತ್ರವೇ ಇರಲಿ ನಮ್ಮ ಯುವಕರು ಹೊಸ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಈ ದಿನಗಳಲ್ಲಿ ನಮ್ಮ ಯುವಕರು ದೇಶವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲು ಬದ್ಧರಾಗಿದ್ದಾರೆ.

•13 ಕೋಟಿ ಜನರು ಮುದ್ರಾ ಸಾಲ ಪಡೆದುಕೊಂಡಿದ್ದಾರೆ ಇದು ದೊಡ್ಡ ಸಾಧನೆ. ಇದರಲ್ಲಿ 4 ಕೋಟಿ ಯುವಕರು ಇದೇ ಮೊದಲ ಬಾರಿಗೆ ಸಾಲ ಪಡೆದಿದ್ದಾರೆ ಮತ್ತು ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ ಮತ್ತು ಸ್ವತಂತ್ರವಾಗಿ ಪ್ರಗತಿ ಸಾಧಿಸುತ್ತಿದ್ದಾರೆ. ಇದು ಬದಲಾಗುತ್ತಿರುವ ವಾತಾವರಣಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಯುವಜನರು 3 ಲಕ್ಷ ಗ್ರಾಮಗಳಲ್ಲಿ  ಕಾಮನ್ ಸರ್ವೀಸ್ ಕೇಂದ್ರಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅವರು ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಪ್ರತಿಯೊಂದು ಗ್ರಾಮ ಮತ್ತು ನಾಗರಿಕರನ್ನು ಕ್ಷಣ ಮಾತ್ರದಲ್ಲಿ ವಿಶ್ವದೊಂದಿಗೆ ಸಂಪರ್ಕಿಸುತ್ತಿದ್ದಾರೆ. . 

•ನಮ್ಮ ವಿಜ್ಞಾನಿಗಳ ನಾವಿನ್ಯತೆಯ ಸ್ಫೂರ್ತಿಯಿಂದ ನಾವು ನಾವಿಕ್ ಅನ್ನು ಉದ್ಘಾಟಿಸಲಿದ್ದೇವೆ. ಇದು ಮೀನುಗಾರರಿಗೆ ಮತ್ತು ಇತರರಿಗೆ ಅತ್ಯಂತ ಉಪಯುಕ್ತವಾಗಿದೆ.

•ಭಾರತವು 2022ರ ಹೊತ್ತಿಗೆ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಸಂಕಲ್ಪ ಮಾಡಿದೆ. ಅಂಥ ನಾಲ್ಕನೇ ದೇಶ ಭಾರತವಾಗಲಿದೆ.

•ಈಗ ನಾವು ಕೃಷಿ ಕ್ಷೇತ್ರದಲ್ಲಿ ಆಧುನೀಕರಣ ಮತ್ತು ತಂತ್ರಜ್ಞಾನವನ್ನು ತರುವತ್ತ ಗಮನ ಹರಿಸಿದ್ದೇವೆ. ನಾವು 75ನೇ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಕನಸು ಕಂಡಿದ್ದೇವೆ.

•ಆಧುನೀಕರಣದ ನೆರವಿನಿಂದ ನಾವು ಕೃಷಿಯ ದಿಗಂತಗಳನ್ನು ವಿಸ್ತರಿಸಲು ಬಯಸುತ್ತೇವೆ. ನಾವು ಬೀಜದಿಂದ ಮಾರುಕಟ್ಟೆಯವರೆಗೆ ಮೌಲ್ಯವರ್ಧನೆಯನ್ನು ಅಳವಡಿಸಿಕೊಳ್ಳಲು ಇಚ್ಛಿಸಿದ್ದೇವೆ. ಇದೇ ಮೊದಲ ಬಾರಿಗೆ ನಾವು ಕೃಷಿ ರಫ್ತು ನೀತಿಯ ಹಾದಿಯಲ್ಲಿ ಸಾಗಿದ್ದು, ನಮ್ಮ ರೈತರಿಗೆ ಇದು ವಿಶ್ವ ಮಾರುಕಟ್ಟೆಯಲ್ಲಿ ಶಕ್ತಿಶಾಲಿಯಾಗಿ ಹೊರ ಹೊಮ್ಮಲು ನೆರವಾಗಲಿದೆ.

•ಈಗ ಸಾವಯವ ಕೃಷಿ ಕ್ರಾಂತಿ, ಮೀನುಗಾರಿಕೆ ಕ್ರಾಂತಿ, ಸಹಿ ಕ್ರಾಂತಿ, ಸೌರ ಕೃಷಿಯ ಹೊಸ ಹಾದಿಗಳು ತೆರೆದುಕೊಳ್ಳುತ್ತಿವೆ, ಇದರೊಂದಿಗೆ ಮುಂದೆ ಸಾಗಲು ಯೋಜಿಸಿದ್ದೇವೆ.

•ಮೀನುಗಾರಿಕೆಯಲ್ಲಿ ಭಾರತ, ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.

•ಜೇನುತುಪ್ಪದ ರಫ್ತು ದುಪ್ಪಟ್ಟಾಗಿದೆ.

•ನಮ್ಮ ಎಥೆನಾಲ್ ನ ಉತ್ಪಾದನೆಯು ಮೂರು ಪಟ್ಟು ಹೆಚ್ಚಾಗಿದೆ ಎಂಬುದು ಕಬ್ಬು ಬೆಳೆಗಾರರಿಗೆ ಸಂತಸದ ವಿಷಯ.

•ಗ್ರಾಮೀಣ ಆರ್ಥಿಕತೆಯಲ್ಲಿ, ಇತರ ವಲಯಗಳು ಕೂಡ ಅತಿ ಪ್ರಮುಖವಾಗುತ್ತವೆ. ನಾವು ಗ್ರಾಮೀಣ ಪ್ರದೇಶದ ಸಂಪನ್ಮೂಲವನ್ನು ಮಹಿಳಾ ಸ್ವ ಸಹಾಯ ಗುಂಪುಗಳ ರಚನೆಯೊಂದಿಗೆ, ಮತ್ತು ಕೋಟ್ಯಂತರ ರೂಪಾಯಿ ಕ್ರೋಡೀಕರಣದೊಂದಿಗೆ ಹೆಚ್ಚಿಸಲು ಬಯಸುತ್ತೇವೆ. ನಾವು ಗ್ರಾಮಗಳ ಸಾಮರ್ಥ್ಯ ಹೆಚ್ಚಿಸಲು ಇಚ್ಛಿಸುತ್ತೇವೆ ಮತ್ತು ಆ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿದ್ದೇವೆ.

•ಈಗ ಖಾದಿಯ ಮಾರಾಟ ದುಪ್ಪಟ್ಟಾಗಿದೆ.

•ನಮ್ಮ ರೈತರು ಸೌರ ಕೃಷಿಯ ಬಗ್ಗೆ ಗಮನ ಹರಿಸಿದ್ದಾರೆ. ಈ ಮೂಲಕ ಅವರು ಕೃಷಿಗೆ ಕೊಡುಗೆ ನೀಡಬಹುದು ಮತ್ತು ಅದೇ ವೇಳೆ ಸೌರ ಇಂಧನ ಮಾರಾಟದ ಮೂಲಕ ಹಣವನ್ನೂ ಗಳಿಸಬಹುದು.

•ಆರ್ಥಿಕ ಪ್ರಗತಿ ಮತ್ತು ಅಭಿವೃದ್ದಿಯ ಜೊತೆಗೆ ನಾವು ಮಾವನನ ಬದುಕಿನ ಗೌರವಕ್ಕೂ ಗಮನ ನೀಡಿದ್ದು, ಅದು ಸರ್ವೋಚ್ಛವಾಗಿದೆ. ನಾವು ಶ್ರೀಸಾಮಾನ್ಯನಿಗೆ ಹೆಮ್ಮೆಯಿಂದ, ಗೌರವದಿಂದ ಬಾಳ್ವೆ ನಡೆಸಲು ಸಾಧ್ಯವಾಗುವಂಥ ಯೋಜನೆಗಳನ್ನು ರೂಪಿಸುತ್ತಿದ್ದೇವೆ.

•ಡಬ್ಲ್ಯುಎಚ್.ಓ. ವರದಿಯ ರೀತ್ಯ ಸ್ವಚ್ಛ ಭಾರತ ಅಭಿಯಾನದಿಂದ 3 ಲಕ್ಷ ಮಕ್ಕಳ ಜೀವ ರಕ್ಷಣೆಯಾಗಿದೆ. 

•ಸತ್ಯಾಗ್ರಹಿಗಳನ್ನು ಒಗ್ಗೂಡಿಸಿದ ಗಾಂಧೀಜಿ ಅವರಿಂದ ಸ್ಫೂರ್ತಿ ಪಡೆದು, ನಾವು ಸ್ವಚ್ಛಾಗ್ರಹಿಗಳನ್ನು ಕ್ರೋಡೀಕರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಗಾಂಧಿಜಿಯವರ 150ನೇ ಜಯಂತಿಯ ಸಂದರ್ಭದಲ್ಲಿ ಕೋಟ್ಯಂತರ ಸ್ವಚ್ಛಾಗ್ರಹಿಗಳು ಸ್ವಚ್ಛ ಭಾರತದ ಮೂಲಕ ಸಂಕಲ್ಪ ಮತ್ತು ಕಾರ್ಯದ ಮೂಲಕ ಬಾಪೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

•ಬಡ ಜನರಿಗೆ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಭಿಯಾನ ಆರಂಭಿಸಿದೆ. ಈಗ ಈ ಯೋಜನೆಯ ಅಡಿಯಲ್ಲಿ ಯಾವುದೇ ವ್ಯಕ್ತಿ ದೊಡ್ಡ ಆಸ್ಪತ್ರೆಗೆ ಹೋಗುವ ಮೂಲಕ ರೋಗಕ್ಕೆ ಪರಿಹಾರ ಪಡೆಯಬಹುದು.

•ಆಯುಷ್ಮಾನ್ ಭಾರತ ಯೋಜನೆಯಡಿ ದೇಶದ 10 ಕೋಟಿ ಕುಟುಂಬಗಳು ಆರೋಗ್ಯ ವಿಮೆ ಸೌಲಭ್ಯ ಪಡೆಯಲಿವೆ. ಅಂದರೆ, ಸುಮಾರು 50 ಕೋಟಿ ನಾಗರಿಕರಿಗೆ ಪ್ರಯೋಜನ ಆಗಲಿದೆ. ಪ್ರತಿಯೊಂದು ಕುಟುಂಬವೂ ವಾರ್ಷಿಕ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ಸೌಲಭ್ಯ ಪಡೆಯಲಿವೆ.

•ನಾವು ತಂತ್ರಜ್ಞಾನ ಮತ್ತು ಪಾರದರ್ಶಕತೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ತಂತ್ರಜ್ಞಾನ ನಾವಿನ್ಯತೆ ವಿವಿಧ ಸೌಲಭ್ಯ ಪಡೆಯುವಲ್ಲಿ ಇರುವ ತೊಡಕುಗಳನ್ನು ನಿವಾರಣೆ ಮಾಡುತ್ತದೆ. ಈ ಉದ್ದೇಶದೊಂದಿಗೆ ತಂತ್ರಜ್ಞಾನ ಸಾಧನಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ.

•ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನವನ್ನು 2018ರ ಸೆಪ್ಟೆಂಬರ್ 25ರಂದು ಆರಂಭಿಸಲಾಗುತ್ತಿದೆ. ಅದರಿಂದಾಗಿ ಶ್ರೀಸಾಮಾನ್ಯರು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಸಿಗದೆ ನರಳುವ ಅಗತ್ಯ ಬರುವುದಿಲ್ಲ.

•ಮಧ್ಯಮವರ್ಗದ ಕುಟುಂಬಗಳಿಗೆ ಮತ್ತು ಯುವಕರಿಗೆ ಆರೋಗ್ಯ ಕ್ಷೇತ್ರದಲ್ಲಿ ಹೊಸ ಹಾದಿಗಳು ತೆರೆದುಕೊಳ್ಳುತ್ತಿವೆ. ಹೊಸ ಆಸ್ಪತ್ರೆಗಳನ್ನು 2 ಮತ್ತು 3ನೇ ಹಂತದ ನಗರಗಳಲ್ಲಿ ನಿರ್ಮಿಸಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಯನ್ನು ದೊಡ್ಡ ಸಂಖ್ಯೆಯಲ್ಲಿ ರೂಪಿಸಲಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಳವಾಗಲಿವೆ.

•ನಾಲ್ಕು ವರ್ಷಗಳ ಅವಧಿಯಲ್ಲಿ ಬಡವರನ್ನುಸಬಲೀಕರಿಸಲು ನಾವು ಪ್ರಯತ್ನ ಮಾಡಿದ್ದೇವೆ. ಒಂದು ಅಂತಾರಾಷ್ಟ್ರೀಯ ಸಂಸ್ಥೆಯ ವರದಿಯ ರೀತ್ಯ, ಕಳೆದ ಎರಡು ವರ್ಷಗಳಲ್ಲಿ 5 ಕೋಟಿ ಬಡ ಜನರು ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಬಡವರ ಸಬಲೀಕರಣಕ್ಕೆ ಹಲವು ಯೋಜನೆಗಳಿವೆ. ಆದರೆ, ಮಧ್ಯವರ್ತಿಗಳು ಬಡಜನರಿಗೆ ದೊರಕಬೇಕಾದ ಸವಲತ್ತುಗಳನ್ನು ಕಸಿಯುತ್ತಿದ್ದಾರೆ.

•ಸರ್ಕಾರ ಈ ಸೋರಿಕೆ ತಡೆಗೆ ಕ್ರಮ ಕೈಗೊಂಡಿದೆ. ನಾವು ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕುವ ಹಾದಿಯಲ್ಲಿದ್ದೇವೆ. ಈ ಎಲ್ಲ ಪ್ರಯತ್ನಗಳಿಂದ ನಾವು 90000 ಕೋಟಿ ರೂಪಾಯಿ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಉಳಿಸಿದ್ದೇವೆ.

•ಪ್ರಾಮಾಣಿಕ ತೆರಿಗೆದಾರರ ಕೊಡುಗೆಯಿಂದ ಹಲವು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಹೀಗಾಗಿ ಅದರ ಶ್ರೇಯಸ್ಸು ತೆರಿಗೆದಾರರಿಗೆ ಹೋಗುತ್ತದೆಯೇ ಹೊರತು ಸರ್ಕಾರಕ್ಕಲ್ಲ.

•2013ರವರೆಗೆ ಕಳೆದ 70 ವರ್ಷಗಳಲ್ಲಿ ನೇರ ತೆರಿಗೆ ಪಾವತಿದಾರರು ಇದ್ದದ್ದು ಕೇವಲ 4 ಕೋಟಿ. ಈಗ ಆ ಸಂಖ್ಯೆ ದುಪ್ಪಟ್ಟಾಗಿದ್ದು, 7.25 ಕೋಟಿ ಮುಟ್ಟಿದೆ.

•70 ವರ್ಷಗಳ ಅವಧಿಯಲ್ಲಿ, ಪರೋಕ್ಷ ತೆರಿಗೆ ಅಧಿಕಾರಿಗಳು 70 ಲಕ್ಷ ಆದಾಯ ಸಂಗ್ರಹಿಸಿದ್ದರು. ಆದರೆ, ಜಿ.ಎಸ್ಟಿ. ಒಂದೇ ವರ್ಷದ ಅವಧಿಯಲ್ಲಿ 16 ಲಕ್ಷ ಕೋಟಿ ಆದಾಯ ಸಂಗ್ರಹಿಸಿದೆ.

•ನಾವು ಕಪ್ಪುಹಣ ಮತ್ತು ಭ್ರಷ್ಟಾಚಾರ ತಾಳಿಕೊಳ್ಳಲುಸಾಧ್ಯವೇ. ಇದರಲ್ಲಿ ಹಲವು ತೊಡಕುಗಳು ಇರಬಹುದು. ಆದರೂ ನಾವು ಅವರನ್ನು ಬಿಡುವುದಿಲ್ಲ. ಈಗ ದೆಹಲಿಯ ಮಾರ್ಗಗಳಲ್ಲಿ ಶಕ್ತಿಶಾಲಿ ದಲ್ಲಾಳಿಗಳು ಕಾಣುವುದಿಲ್ಲ.

•ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಆನ್ ಲೈನ್ ಪ್ರಕ್ರಿಯೆ ಆರಂಭಿಸಿದ್ದೇವೆ. ನಾವು ಮಾಹಿತಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದೇವೆ.

•ಶಾರ್ಟ್ ಸರ್ವೀಸ್ ಕಮಿಷನ್ ನಿಂದ ನಾವು ಭಾರತದ ಸಶಸ್ತ್ರ ಪಡೆಗಳಿಗೆ ಮಹಿಳಾ ಸಿಬ್ಬಂದಿ ನೇಮಕ ಮಾಡುತ್ತೇವೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲಾಗುತ್ತದೆ. ಮಹಿಳಾ ಅಧಿಕಾರಿಗಳನ್ನು ಅವರ ಪುರುಷ ಸಹವರ್ತಿಗಳ ಮಟ್ಟದಲ್ಲೇ ಪರಿಗಣಿಸಲಾಗುತ್ತದೆ.

•ಅತ್ಯಾಚಾರವೇ ನೋವಿನಿಂದ ಕೂಡಿರುತ್ತದೆ. ಆದರೆ ಸಂತ್ರಸ್ತರು ಅನುಭವಿಸುವ ಮಾನಸಿಕ ಆಘಾತ ಅದಕ್ಕಿಂತ ಹೆಚ್ಚು ನೋವುಕಾರಕ.  ಇದನ್ನು ದೇಶದ ಜನತೆ ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಆಘಾತವನ್ನು ಕಲ್ಪಿಸಿಕೊಳ್ಳಬೇಕು.

•ನಾವು ದೇಶವನ್ನು  ಮತ್ತು ಸಮಾಜವನ್ನು ಈ ನೀಚ ಪ್ರವೃತ್ತಿಯಿಂದ ಮುಕ್ತಗೊಳಿಸಬೇಕಾಗಿದೆ. ಕಾನೂನು ತನ್ನ ಕಾರ್ಯ ಮಾಡುತ್ತಿದೆ. ನಾವು ಇಂಥ ಪ್ರವೃತ್ತಿಯ ಪ್ರಯತ್ನಗಳ ವಿರುದ್ಧ ದಾಳಿ ಮಾಡಬೇಕು. ನಾವು ಇಂಥ ಚಿಂತನೆಗಳ ವಿರುದ್ಧ ದಾಳಿ ಮಾಡಬೇಕು. ನಾವು ಇಂಥ ಅವಕಾಶಗಳನ್ನೇ ತೆಗೆದುಹಾಕಬೇಕು.

•ತ್ರಿವಳಿ ತಲಾಖೆ ಮುಸ್ಲಿಂ ಮಹಿಳೆಯರ ಬದುಕನ್ನು ದುಸ್ತರಗೊಳಿಸಿದೆ. ತಲಾಖ್ ಪಡೆಯದವರು ಕೂಡ ಆತಂಕದಲ್ಲೇ ಬದುಕು ದೂಡುತ್ತಿದ್ದಾರೆ. ನಾವು ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕಾನೂನು ತರುವ ಮೂಲಕ ಮುಸ್ಲಿಂ ಮಹಿಳೆಯರ ಈ ಆತಂಕ ದೂರ ಮಾಡಬೇಕಾಗಿದೆ. ಆದರೆ ಇಂದಿಗೂ ಕೆಲವು ಜನರಿಗೆ ಈ ಮಸೂದೆಗೆ ಅಂಗೀಕಾರ ದೊರೆಯುವುದು ಬೇಕಿಲ್ಲ.

•ನಮ್ಮ ಭದ್ರತಾ ಪಡೆಗಳು ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನದ ಫಲವಾಗಿ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಿಂದಾಗಿ  ಮತ್ತು ಜನರ ಪಾಲ್ಗೊಳ್ಳುವಿಕೆಯಿಂದಾಗಿ ತ್ರಿಪುರ ಮತ್ತು ಮೇಘಾಲಯಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ ಮುಕ್ತಗೊಳಿಸಲಾಗಿದೆ.

•ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ನಮಗೆ ತೋರಿದ ದಾರಿ ಅರ್ಥಪೂರ್ಣ. ನಾವು ಅದೇ ಹಾದಿಯಲ್ಲಿ ಸಾಗ ಬಯಸುತ್ತೇವೆ. ನಮಗೆ ಬೈಗುಳ ಮತ್ತು ಬಂದೂಕಿನ ಗುಂಡುಗಳ ಹಾದಿ ಬೇಕಿಲ್ಲ. ನಾವು ಕಾಶ್ಮೀರದ ದೇಶಪ್ರೇಮಿ ಜನರೊಂದಿಗೆ ಮುಂದಡಿ ಇಡಲು ಇಚ್ಛಿಸುತ್ತೇವೆ.

•ಮುಂಬರುವ ತಿಂಗಳುಗಳಲ್ಲಿ, ಜಮ್ಮು ಕಾಶ್ಮೀರದ ಗ್ರಾಮೀಣ ಜನರು ತಮ್ಮ ಹಕ್ಕುಗಳನ್ನು ಅನುಭವಿಸಲಿದ್ದಾರೆ. ಅವರು ತಮ್ಮನ್ನು ತಾವು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಭಾರತ ಸರ್ಕಾರ ಗ್ರಾಮ ಪಂಚಾಯ್ತಿಗಳಿಗೆ ಸಾಕಷ್ಟು ಹಣ ನೀಡುತ್ತಿದೆ. ಅದು ಅಭಿವೃದ್ಧಿಗೆ ಉಪಯುಕ್ತವಾಗಿದೆ. ನಾವು ಪಂಚಾಯ್ತಿಗಳ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧವಾಗಬೇಕಾಗಿದೆ. ನಾವು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ.

•ಪ್ರತಿಯೊಬ್ಬ ಭಾರತೀಯನ ಕನಸೂ ಸ್ವಂತ ಮನೆ ಹೊಂದುವದಾಗಿದೆ, ಹೀಗಾಗಿ ನಾವು ಸರ್ವರಿಗೂ ಸೂರು ಯೋಜನೆ ತಂದಿದ್ದೇವೆ. ಅವರು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆಯಬಯಸುತ್ತಾರೆ. ಹೀಗಾಗಿ ನಾವು ಎಲ್ಲ ಹಳ್ಳಿಗಳಿಗೂ ವಿದ್ಯುತ್ ತರುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನೂ ಅಡುಗೆ ಮನೆಯಲ್ಲಿ ಹೊಗೆ ಮುಕ್ತರಾಗಲು ಬಯಸುತ್ತಾರೆ. ಇದನ್ನು ಸಾಕಾರಗೊಳಿಸಲು ಸರ್ವರಿಗೂ ಅಡುಗೆ ಅನಿಲ ಯೋಜನೆ ತರಲಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಶುದ್ಧ ಕುಡಿಯುವ ನೀರು ಬೇಕು. ಹೀಗಾಗಿ ಎಲ್ಲರಿಗೂ ನೀರು ಗುರಿ ಇಟ್ಟುಕೊಳ್ಳಲಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಶೌಚಾಲಯದ ಅಗತ್ಯವಿದೆ. ಹೀಗಾಗಿ ಎಲ್ಲರಿಗೂ ನೈರ್ಮಲ್ಯ ನಮ್ಮ ಉದ್ದೇಶವಾಗಿದೆ. ಪ್ರತಿಯೊಬ್ಬ ಭಾರತೀಯನೂ ಕೌಶಲ ಅಭಿವೃದ್ದಿ ಬಯಸುತ್ತಾರೆ. ಹೀಗಾಗಿ ನಾವು ಸರ್ವರಿಗೂ ಕೌಶಲ ವರ್ಧನೆ ಜಾರಿಗೆ ತಂದಿದ್ದೇವೆ. ಪ್ರತಿಯೊಬ್ಬ ಭಾರತೀಯನೂ ಗುಣಮಟ್ಟದ ಆರೋಗ್ಯ ಸೇವೆ ಬಯಸುತ್ತಾನೆ. ಹೀಗಾಗಿ ನಾವು ಸರ್ವರಿಗೂ ಆರೋಗ್ಯ ಯೋಜನೆ ಮಾಡಿದ್ದೇವೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯ ಭದ್ರತೆಯನ್ನು ಬಯಸುತ್ತಾರೆ. ಅದಕ್ಕಾಗಿ ಸರ್ವರಿಗೂ ಆರೋಗ್ಯ ವಿಮೆ ಜಾರಿ ಮಾಡುತ್ತಿದ್ದೇವೆ. ಪ್ರತಿಯೊಬ್ಬ ಭಾರತೀಯನೂ ಇಂಟರ್ ನೆಟ್ ಸೌಲಭ್ಯ ಅಗತ್ಯವೆನ್ನುತ್ತಾರೆ. ಹೀಗಾಗಿ ನಾವು ಎಲ್ಲರಿಗೂ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದೇವೆ. ನಾವು ಸಂಪರ್ಕದ ಮಂತ್ರದೊಂದಿಗೆ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಲು ಇಚ್ಛಿಸುತ್ತೇವೆ.

 

•ನಮಗೆ ಸಂಘರ್ಷದ ಮಾರ್ಗ ಬೇಕಾಗಿಲ್ಲ. ನಮಗೆ ರಸ್ತೆತಡೆಗಳು ಬೇಕಾಗಿಲ್ಲ. ನಾವು ಯಾರ ಮುಂದೆಯೂ ತಲೆಬಾಗಲು ಬಯಸುವುದಿಲ್ಲ. ದೇಶ ಎಂದಿಗೂ ನಿಲ್ಲುವುದಿಲ್ಲ. ಯಾರ ಮುಂದೆಯೂ ತಲೆ ಬಾಗುವುದಿಲ್ಲ, ಎಂದಿಗೂ ದಣಿಯುವುದಿಲ್ಲ. ನಾವು ಹೊಸ ಎತ್ತರಕ್ಕೆ ಏರಬೇಕಿದೆ. ಇದು ನಮ್ಮ ಗುರಿ, ಮುಂಬರುವ ವರ್ಷಗಳಲ್ಲಿ ನಾವು ಸಾಕಷ್ಟು  ಸಾಧಿಸಬೇಕಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."