ಭಾರತದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಅಹ್ವಾನದ ಮೇರೆಗೆ ನೇಪಾಳದ ಪ್ರಧಾನ ಮಂತ್ರಿಗಳಾದ ಗೌರವಾನ್ವಿತರಾದ ಶ್ರೀ ಕೆ.ಪಿ.ಶರ್ಮಾ ಓಲಿ ಅವರು 2018 ರ ಏಪ್ರಿಲ್ 6 ರಿಂದ 8 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದಾರೆ.
2018 ರ ಏಪ್ರಿಲ್ 7 ರಂದು ಉಭಯ ದೇಶಗಳ ಪ್ರಧಾನ ಮಂತ್ರಿಗಳು ಎರಡೂ ದೇಶಗಳ ನಡುವಿನ ಬಹುಮುಖೀ ಸಂಬಂಧಗಳ ಬಗ್ಗೆ ಸಮಗ್ರವಾದ ಪರಾಮರ್ಶೆ ನಡೆಸಿದರು. ಎರಡು ಸರಕಾರಗಳ ನಡುವೆ ಹೆಚ್ಚುತ್ತಿರುವ ಸಹಭಾಗಿತ್ವ, ಖಾಸಗಿ ವಲಯದಲ್ಲೂ ಅದರ ವಿಸ್ತರಣೆ, ಜನರ ಮಟ್ಟದಲ್ಲಿಯ ಸಹಭಾಗಿತ್ವ ಹೆಚ್ಚಳವನ್ನು ಅವರು ಸ್ವಾಗತಿಸಿದರು. ಸಮಾನತೆ, ಪರಸ್ಪರ ನಂಬಿಕೆ, ವಿಶ್ವಾಸ, ಗೌರವ ಮತ್ತು ಲಾಭದ ಆಧಾರದ ಮೇಲೆ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ನಿರ್ಧಾರ ಕೈಗೊಂಡರು.
ಭಾರತ ಮತ್ತು ನೇಪಾಳದ ಸಂಬಂಧಗಳು ಎರಡೂ ದೇಶಗಳು ಚಾರಿತ್ರಿಕ ಮತ್ತು ಸಾಂಸ್ಕೃತಿಕವಾಗಿ ಮತ್ತು ಜನರು ಪರಸ್ಪರ ಹೊಂದಿರುವ ಸಂಪರ್ಕಗಳ ಬಲವಾದ ನೆಲೆಗಟ್ಟಿನ ಮೇಲೆ ಸ್ಥಾಪಿತವಾಗಿವೆ ಎಂಬುದನ್ನು ಸ್ಮರಿಸಿಕೊಂಡ ಇಬ್ಬರೂ ಪ್ರಧಾನಿಗಳು ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ವೃದ್ದಿಸಲು ನಿಯಮಿತವಾಗಿ ಉನ್ನತ ಮಟ್ಟದ ರಾಜಕೀಯ ವಿನಿಮಯಗಳ ಮಹತ್ವವನ್ನು ಒತ್ತಿ ಹೇಳಿದರು.
ಪ್ರಧಾನ ಮಂತ್ರಿ ಓಲಿ ಅವರು ತಮ್ಮ ಸರಕಾರ ಭಾರತದ ಜತೆ ಸ್ನೇಹ ಸೌಹಾರ್ದತೆಯ ಸಂಬಂಧವನ್ನು ಬಲಪಡಿಸಲು ಗರಿಷ್ಟ ಮಹತ್ವ ನೀಡುತ್ತದೆ ಎಂದರು. ಭಾರತದ ಪ್ರಗತಿಯಿಂದ ಲಾಭವಾಗುವ ರೀತಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲು ನೇಪಾಳ ಸರಕಾರ ಆಶಿಸಿದೆ ಎಂದ ಅವರು ಆ ಮೂಲಕ ಆರ್ಥಿಕ ಪರಿವರ್ತನೆ ಮತ್ತು ಅಭಿವೃದ್ದಿ ಸಾದಿಸಬಹುದು ಎಂಬ ಇರಾದೆ ಇದೆ ಎಂದರು. ಭಾರತದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಭಾರತವು ನೇಪಾಳದ ಜತೆ ಅದರ ಸರಕಾರದ ಆದ್ಯತೆಗಳಿಗೆ ಅನುಗುಣವಾಗಿ ತನ್ನ ಸಹಭಾಗಿತ್ವ ಬಲಪಡಿಸಲು ಬದ್ಧವಾಗಿದೆ ಎಂದರು.
ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಭಾರತ ಸರಕಾರದ ಚಿಂತನೆಯಾದ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” ನೀತಿಯನ್ನು ಪ್ರಸ್ತಾಪಿಸಿ ನೆರೆಯ ರಾಷ್ಟ್ರಗಳ ಜತೆ ಭಾರತದ ಬಾಂಧವ್ಯಕ್ಕೆ ಇದುವೇ ಮಾರ್ಗದರ್ಶಿ ಚೌಕಟ್ಟು ಆಗಿದೆ , ಅದು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ದಿ ಮತ್ತು ಸಮೃದ್ದಿಯನ್ನು ಪ್ರತಿಪಾದಿಸುತ್ತದೆ ಎಂದರು. ಪ್ರಧಾನ ಮಂತ್ರಿ ಶ್ರೀ ಓಲಿ ಅವರು ಮಹತ್ವದ ರಾಜಕೀಯ ಪರಿವರ್ತನೆಯ ಬಳಿಕ, ತಮ್ಮ ಸರಕಾರ ಆರ್ಥಿಕ ಪರಿವರ್ತನೆಯತ್ತ ಹೆಜ್ಜೆ ಇಟ್ಟಿದೆ . “ಸಮೃದ್ಧ ನೇಪಾಳ , ಸುಖೀ ನೇಪಾಳಿ” ಅದರ ಆದ್ಯತೆಯಾಗಿದೆ ಎಂದರು. ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ನೇಪಾಳದಲ್ಲಿ ಸ್ಥಳೀಯ ಮಟ್ಟದಲ್ಲಿ, ಒಕ್ಕೂಟ ಮಟ್ಟದಲ್ಲಿ,ಮತ್ತು ಮೊದಲ ಬಾರಿಗೆ ಪ್ರಾಂತೀಯ ಮಟ್ಟದಲ್ಲಿ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ಜನರನ್ನು ಅಭಿನಂದಿಸಿದರು. ಹಾಗು ಅವರ ಸ್ಥಿರತೆಯ ಮತ್ತು ಅಭಿವೃದ್ದಿಯ ಚಿಂತನೆಯನ್ನು ಶ್ಲ್ಯಾಘಿಸಿದರು.
ನೇಪಾಳದ ಬೀರಗಂಜ್ ನಲ್ಲಿ ಸಮಗ್ರ ತಪಾಸಣಾ ಕೇಂದ್ರವನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು. ಇದರ ತ್ವರಿತ ಕಾರ್ಯಾಚರಣೆಯಿಂದ ಗಡಿಯಾಚೆಗಿನ ವ್ಯಾಪಾರ ವಹಿವಾಟು, ಸರಕು ಸಾಗಾಣಿಕೆ ಹೆಚ್ಚುವ ಆಶಯವನ್ನು ಅವರು ವ್ಯಕ್ತಪಡಿಸಿದರು. ಜನರ ಚಲನ ವಲನ ಹೆಚ್ಚಳದಿಂದಾಗಿ ಎರಡೂ ಕಡೆ ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧಿತವಾಗಬಹುದೆಂದವರು ಅಭಿಪ್ರಾಯಪಟ್ಟರು.
ಇಬ್ಬರು ಪ್ರಧಾನ ಮಂತ್ರಿಗಳು ಮೋತಿಹರಿ – ಅಮ್ಲೇಕ್ ಗುಂಜ್ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಕೊಳವೆಮಾರ್ಗಕ್ಕೆ ಭಾರತದ ಮೋತಿಹರಿಯಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮವನ್ನು ವೀಕ್ಷಿಸಿದರು.
ಇಬ್ಬರೂ ಪ್ರಧಾನ ಮಂತ್ರಿಗಳು ನೇಪಾಳದಲ್ಲಿ ದ್ವಿಪಕ್ಷೀಯ ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರಲ್ಲದೆ , ಈಗಿರುವ ದ್ವಿಪಕ್ಷೀಯ ವ್ಯವಸ್ಥೆಯನ್ನು ವಿವಿಧ ವಲಯಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಪುನರುತ್ತೇಜಿಸಬೇಕಾದ ಅಗತ್ಯವನ್ನೂ ಮನಗಂಡರು.
ಮೂರು ಪ್ರತ್ಯೇಕ ಜಂಟಿ ಹೇಳಿಕೆಗಳನ್ನು ಈ ಕೆಳಗೆ ಕಾಣಿಸಿದಂತಹ ಪರಸ್ಪರ ಹಿತಾಸಕ್ತಿಯ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿ ಹೊರಡಿಸಲಾಗಿದೆ. ( ಅವುಗಳ ಸಂಪರ್ಕ ಕೊಂಡಿಗಳು ಈ ಕೆಳಗಿನಂತಿವೆ.)
-ಭಾರತ –ನೇಪಾಳ: ಕೃಷಿ ಕ್ಷೇತ್ರದಲ್ಲಿ ಹೊಸ ಸಹಭಾಗಿತ್ವ.
-ರೈಲು ಸಂಪರ್ಕದ ವಿಸ್ತರಣೆ: ಭಾರತದ ರಾಕ್ಸಾಲ್ ನಿಂದ ನೇಪಾಳದ ಕಾಠ್ಮಂಡುವಿಗೆ ಸಂಪರ್ಕ.
-ಭಾರತ ಮತ್ತು ನೇಪಾಳ ನಡುವೆ ಒಳನಾಡು ಜಲಸಾರಿಗೆ ಮೂಲಕ ಹೊಸ ಸಂಪರ್ಕ
(· India-Nepal: New Partnership in Agriculture
- Expanding Rail Linkages: Connecting Raxaul in India to Kathmandu in Nepal
- New Connectivity between India and Nepal through Inland Waterways )
ಈ ಭೇಟಿ ಎರಡೂ ದೇಶಗಳ ನಡುವಿನ ಬಹು ಆಯಾಮದ ಸಹಭಾಗಿತ್ವಕ್ಕೆ ಹೊಸ ಆಯಾಮವನ್ನು ಒದಗಿಸಿದೆ ಎಂಬುದನ್ನು ಇಬ್ಬರು ಪ್ರಧಾನ ಮಂತ್ರಿಗಳೂ ಒಪ್ಪಿಕೊಂಡರು.
ಪ್ರಧಾನ ಮಂತ್ರಿ ಓಲಿ ಅವರು ಭಾರತಕ್ಕೆ ಅಹ್ವಾನಿಸಿದುದಕ್ಕಾಗಿ ಮತ್ತು ತಮಗೆ ಹಾಗು ತಮ್ಮ ನಿಯೋಗಕ್ಕೆ ಹಾರ್ದಿಕ ಸ್ವಾಗತ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಧಾನ ಮಂತ್ರಿ ಓಲಿ ಅವರು ನೇಪಾಳಕ್ಕೆ ಸಾಧ್ಯವಾದಷ್ಟು ಬೇಗ ಭೇಟಿ ನೀಡುವಂತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದರು. ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಆಹ್ವಾನವನ್ನು ಒಪ್ಪಿಕೊಂಡಿದ್ದು, ದಿನಾಂಕಗಳನ್ನು ರಾಜತಾಂತ್ರಿಕ ರೀತಿಯಲ್ಲಿ ಅಂತಿಮಗೊಳಿಸಲಾಗುವುದು.