Tಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಾವೋಸ್ ನಲ್ಲಿಂದು ನಡೆದ ವಿಶ್ವ ಆರ್ಥಿಕ ವೇದಿಕೆ ಸಮಾವೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಅವರು ‘ನಾಲ್ಕನೇ ಕೈಗಾರಿಕಾ ಕ್ರಾಂತಿ – ಮನುಕುಲದ ಒಳಿತಿಗೆ ತಂತ್ರಜ್ಞಾನ’ ಎಂಬ ವಿಷಯ ಕುರಿತಂತೆ ಮಾತನಾಡಿದರು. ಅಲ್ಲದೆ ಪ್ರಧಾನಮಂತ್ರಿ ಅವರು ಕಾರ್ಯಕ್ರಮದ ವೇಳೆ ಸಿಇಒಗಳ ಜೊತೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂತಹ ಆತಂಕದ ವಾತಾವರಣದ ಮಧ್ಯೆಯೇ ತಾನು 1.3 ಬಿಲಿಯನ್ ಭಾರತೀಯರ ಆತ್ಮವಿಶ್ವಾಸ, ಸಕಾರಾತ್ಮಕತೆ ಮತ್ತು ಭರವಸೆಯ ಸಂದೇಶವನ್ನು ತಂದಿದ್ದೇನೆ ಎಂದು ಹೇಳಿದರು. ಸಾಂಕ್ರಾಮಿಕ ನಿರ್ವಹಣೆಯಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಆರಂಭದಲ್ಲಿ ತಪ್ಪು ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅವುಗಳ ನಡುವೆಯೇ ಭಾರತ ಅತ್ಯಂತ ಸಕ್ರಿಯ ಹಾಗೂ ಕ್ರಿಯಾಶೀಲ ಮನೋಭಾವದಿಂದ ಮುನ್ನಡೆಯಿತು ಹಾಗೂ ಕೋವಿಡ್ ನಿರ್ದಿಷ್ಟ ಆರೋಗ್ಯ ಮೂಲಸೌಕರ್ಯ ಬಲವರ್ಧನೆಗೊಳಿಸುವ ಕೆಲಸ ಮಾಡಿತು. ಸಾಂಕ್ರಾಮಿಕ ಎದುರಿಸಲು ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡಲಾಯಿತು ಮತ್ತು ಸೋಂಕು ಪತ್ತೆ ಮತ್ತು ಪರೀಕ್ಷೆಗೆ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲಾಯಿತು ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ಕೊರೊನಾ ವಿರುದ್ಧದ ಸಮರ ಜನಾಂದೋಲನವಾಗಿ ಪರಿವರ್ತನೆಗೊಂಡಿತು ಮತ್ತು ಭಾರತ ಗರಿಷ್ಠ ಸಂಖ್ಯೆಯ ಪ್ರಜೆಗಳ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಯಿತು. ಭಾರತದ ಯಶಸ್ಸು ಜಗತ್ತಿನ ಮೇಲೆ ಪರಿಣಾಮಬೀರಿದೆ ಏಕೆಂದರೆ ಜಗತ್ತಿನ ಜನಸಂಖ್ಯೆಯ ಶೇ.18ರಷ್ಟು ಜನ ಇಲ್ಲಿ ವಾಸಿಸುತ್ತಿದ್ದಾರೆ ಮತ್ತು ಪರಿಣಾಮಕಾರಿ ನಿಯಂತ್ರಣದಿಂದಾಗಿ ಭಾರೀ ದೊಡ್ಡ ದುರಂತದಿಂದ ಮನುಕುಲವನ್ನು ರಕ್ಷಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನದ ಮತ್ತು ಸಾಂಕ್ರಾಮಿಕದ ವೇಳೆ ಭಾರತದ ಜಾಗತಿಕ ಪ್ರಯತ್ನಗಳ ಕುರಿತು ಮಾತನಾಡಿದರು. ಅವರು ವಿಮಾನಯಾನ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಅನ್ಯ ರಾಷ್ಟ್ರಗಳಿಂದ ನಾಗರಿಕರ ಸ್ಥಳಾಂತರ ಮತ್ತು 150ಕ್ಕೂ ಅಧಿಕ ರಾಷ್ಟ್ರಗಳಿಗೆ ಔಷಧಗಳ ಪೂರೈಕೆ ಕುರಿತಂತೆ ಮಾತನಾಡಿದರು. ಭಾರತ ಇಂದು ಆನ್ ಲೈನ್ ತರಬೇತಿ, ಸಾಂಪ್ರದಾಯಿಕ ಔಷಧಗಳ ಕುರಿತ ಜ್ಞಾನ, ಲಸಿಕೆ, ಲಸಿಕೆ ಮೂಲಸೌಕರ್ಯದ ಬಗ್ಗೆ ಅಗತ್ಯ ನೆರವನ್ನು ನೀಡಲಾಗುತ್ತಿದೆ. ಭಾರತದಲ್ಲಿ ಸದಸ್ಯ ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇನ್ನೂ ಹಲವು ಲಸಿಕೆಗಳ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದೆ. ಅದರಿಂದ ಭಾರತ ಇಡೀ ವಿಶ್ವಕ್ಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತ್ತು ವೇಗವಾಗಿ ನೆರವು ನೀಡಬಹುದಾಗಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವರು ಆರ್ಥಿಕ ವಲಯದಲ್ಲಿ ಕೈಗೊಂಡಿರುವ ಹಲವು ಕ್ರಮಗಳ ಕುರಿತು ಮಾಹಿತಿ ನೀಡಿದರು. ಭಾರತ ಬಿಲಿಯನ್ ಗಟ್ಟಲೆ ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಆರಂಭಿಸುವ ಮೂಲಕ ಆರ್ಥಿಕ ಚಟುವಟಿಕೆಗಳನ್ನು ಕಾಯ್ದುಕೊಂಡಿದೆ ಮತ್ತು ಉದ್ಯೋಗ ಸೃಷ್ಟಿಗೆ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದರು. ಈ ಮೊದಲು ನಾವು ಜೀವಗಳನ್ನು ಉಳಿಸಲು ಆದ್ಯತೆ ನೀಡಿದ್ದೆವು. ಇದೀಗ ಪ್ರತಿಯೊಬ್ಬರು ದೇಶದ ಪ್ರಗತಿಯ ಬಗ್ಗೆ ಒತ್ತು ನೀಡುತ್ತಿದ್ದಾರೆ. ಭಾರತದ ಸ್ವಾವಲಂಬಿಯ ಮಹತ್ವಾಕಾಂಕ್ಷೆ ಜಗತ್ತಿನ ಆರ್ಥಿಕ ಸ್ಥಿತಿಯನ್ನು ಬಲವರ್ಧನೆಗೊಳಿಸಲಿದೆ ಮತ್ತು ಕೈಗಾಗಿಕೆ 4.0ಗೆ ನೆರವಾಗಲಿದೆ ಎಂದು ಶ್ರೀ ಮೋದಿ ಹೇಳಿದರು.
ಭಾರತ ಉದ್ಯಮದ 4.0 ನಾಲ್ಕು ಅಂಶಗಳ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ಅವುಗಳೆಂದರೆ ಸಂಪರ್ಕ, ಆಟೋಮೋಷನ್, ಕೃತಕ ಬುದ್ಧಿಮತ್ತೆ ಅಥವಾ ಮಿಷಿನ್ ಕಲಿಕೆ ಮತ್ತು ರಿಯಲ್ ಟೈಮ್ ಡಾಟಾ. ಇಂದು ಅತ್ಯಂತ ಕಡಿಮೆ ದರದಲ್ಲಿ ಡಾಟಾ ಲಭ್ಯವಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಮೊಬೈಲ್ ಸಂಪರ್ಕ ಮತ್ತು ಸ್ಮಾರ್ಟ್ ಫೋನ್ ಸಂಪರ್ಕ ದೇಶದುದ್ದಗಲಕ್ಕೂ ಲಭ್ಯವಾಗುತ್ತಿದೆ. ಭಾರತದ ಆಟೋ ಮೋಷನ್ ವಿನ್ಯಾಸ ಪ್ರತಿಭಾವಂತರ ತಂಡ ಅತಿ ದೊಡ್ಡದಿದೆ ಮತ್ತು ದೇಶ ಕೃತಕ ಬುದ್ಧಿಮತ್ತೆ ಮತ್ತು ಮಿಷನ್ ಕಲಿಕೆ ವಲಯದಲ್ಲಿ ಹೆಗ್ಗುರುತು ಮೂಡಿಸಿದೆ. ಡಿಜಿಟಲ್ ಮೂಲಸೌಕರ್ಯ ಬೆಳವಣಿಗೆ ಹೊಂದುತ್ತಿರುವುದರಿಂದ ಭಾರತದ ಪ್ರತಿ ದಿನ ಡಿಜಿಟಲ್ ಪರಿಹಾರಗಳು ದೊರಕುತ್ತಿವೆ. ಇಂದು ಭಾರತದ 1.3 ಬಿಲಿಯನ್ ಜನರು ವಿಶಿಷ್ಟ ಗುರುತಿನ ಸಂಖ್ಯೆ ಆಧಾರ್ ಹೊಂದಿದ್ದಾರೆ. ಆ ಸಂಖ್ಯೆಯನ್ನು ತಮ್ಮ ಖಾತೆ ಮತ್ತು ಫೋನ್ ಜೊತೆ ಸಂಯೋಜಿಸಲಾಗಿದೆ. ಯುಪಿಐ ಮೂಲಕ ಕಳೆದ ಡಿಸೆಂಬರ್ ತಿಂಗಳೊಂದರಲ್ಲೇ ನಾಲ್ಕು ಟ್ರಿಲಿಯನ್ ರೂಪಾಯಿ ಮೌಲ್ಯದ ವಹಿವಾಟು ನಡೆದಿದೆ. ಭಾರತ ಸಾಂಕ್ರಾಮಿಕದ ವೇಳೆ 760 ಮಿಲಿಯನ್ ಭಾರತೀಯರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಯೋಜನೆಯಡಿ 1.8 ಟ್ರಿಲಿಯನ್ ರೂಪಾಯಿ ನೆರವು ವರ್ಗಾವಣೆ ಮಾಡಿದೆ. ಡಿಜಿಟಲ್ ಮೂಲಸೌಕರ್ಯ ಸಾರ್ವಜನಿಕ ಸೇವೆಯನ್ನು ಸುಲಭಗೊಳಿಸಿದ್ದು, ಪರಿಣಾಮಕಾರಿ ಹಾಗೂ ಪಾರದರ್ಶಕತೆ ಮೂಡಿದೆ. ಭಾರತ ಪ್ರತಿಯೊಬ್ಬ ಪ್ರಜೆಗೂ ವಿಶೇಷ ಆರೋಗ್ಯ ಗುರುತಿನ ಚೀಟಿ ನೀಡುವ ಮೂಲಕ ಆರೋಗ್ಯ ರಕ್ಷಣೆ ಲಭ್ಯವಾಗುವಂತೆ ಅಭಿಯಾನವನ್ನು ಆರಂಭಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಆತ್ಮನಿರ್ಭರ ಭಾರತ ಚಳವಳಿಯ ಮೂಲಕ ಜಾಗತಿಕ ಒಳಿತಿಗೆ ಮತ್ತು ಜಾಗತಿಕ ಪೂರೈಕೆ ಸರಣಿಗೆ ಭಾರತ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಅವರು ವೇದಿಕೆಗೆ ಭರವಸೆ ನೀಡಿದರು. ಭಾರತ ತನ್ನ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯಿಂದ ಜಾಗತಿಕ ಪೂರೈಕೆ ಸರಣಿಯನ್ನು ಬಲವರ್ಧನೆ ಮಾಡುವ ಸಾಮರ್ಥ್ಯ ಹೊಂದಿದೆ. ಅದರ ಬಹುದೊಡ್ಡ ಗ್ರಾಹಕರಿಂದಾಗಿ ಮತ್ತಷ್ಟು ಬೆಳವಣಿಗೆಯಾಗಲಿದೆ ಮತ್ತು ಜಾಗತಿಕ ಆರ್ಥಿಕತೆಗೆ ನೆರವಾಗಲಿದೆ.
ಭಾರತ ತನ್ನೆಲ್ಲಾ ಸಾಧ್ಯತೆಗಳ ನಡುವೆ ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ನಿರಂತರವಾಗಿ ಸುಧಾರಣೆಗಳು ಹಾಗೂ ಸಂಕಷ್ಟ ಆಧಾರಿತ ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೊರೊನಾ ಸಮಯದಲ್ಲಿ ಕೈಗೊಂಡ ಸಾಂಸ್ಥಿಕ ಸುಧಾರಣೆಗಳಿಗೆ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಕ್ರಮಗಳ ಮೂಲಕ ಬೆಂಬಲ ನೀಡಲಾಯಿತು. ಭಾರತ ವ್ಯಾಪಾರಕ್ಕೆ ಪೂರಕ ವಾತಾವರಣವನ್ನು ಒದಗಿಸುತ್ತಿದ್ದು, ತೆರಿಗೆ ಪದ್ಧತಿಯಿಂದ ಎಫ್ ಡಿಐ ನಿಯಮಾವಳಿವರೆಗೆ ಸಂಭಾವ್ಯ ಮತ್ತು ಪರಿಸರಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು ಮತ್ತು ಇದೆಲ್ಲಕ್ಕೂ ಮಿಗಿಲಾಗಿ ಭಾರತ ಹವಾಮಾನ ವೈಪರೀತ್ಯ ಗುರಿಯೊಂದಿಗೆ ತನ್ನ ಬೆಳವಣಿಗೆಯ ಮೇಲೆ ನಿಗಾ ಇರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ತಂತ್ರಜ್ಞಾನ ಸುಲಭ ಜೀವನಕ್ಕೆ ಉಪಕಾರಿಯಾಗಬೇಕೆ ಹೊರತು ತಾನೇ ಸಿಲುಕಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ ಪ್ರಧಾನಮಂತ್ರಿ ಅವರು, ನಮಗೆ ಕೊರೊನಾ ಸಂಕಷ್ಟ ಮಾನವೀಯತೆಯ ಮೌಲ್ಯವನ್ನು ತಿಳಿಸಿಕೊಟ್ಟಿರುವ ಕಾರಣ ನಾವು ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಪ್ರಧಾನಮಂತ್ರಿ ಅವರು, ಸಿಮನ್ಸ್ ನ ಅಧ್ಯಕ್ಷ ಮತ್ತು ಸಿಇಒ ಜೋ ಕೇಸರ್ ಅವರಿಗೆ ಆತ್ಮನಿರ್ಭರ ಭಾರತ ಅಭಿಯಾನದ ಕುರಿತು ವಿವರಣೆ ನೀಡಿದರು ಮತ್ತು ಭಾರತ ಉತ್ಪಾದನಾ ಮತ್ತು ರಫ್ತು ತಾಣವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಅದು ತಮ್ಮ ದೂರದೃಷ್ಟಿಯ ಅತಿ ದೊಡ್ಡ ಭಾಗವಾಗಿದೆ ಎಂದು ತಿಳಿಸಿದರು. 26 ಬಿಲಿಯನ್ ಡಾಲರ್ ಮೊತ್ತದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ(ಪಿಎಲ್ಐ)ಯ ಲಾಭವನ್ನು ಮಾಡಿಕೊಳ್ಳಬೇಕು ಎಂದು ಜಾಗತಿಕ ಕಂಪನಿಗಳಿಗೆ ಆಹ್ವಾನ ನೀಡಿದರು. ಎಬಿಬಿಯ ಸಿಇಒ ಬಿಜ್ರೋನ್ ರೋಸೆನ್ ಗ್ರೇನ್ ಅವರ ಪ್ರಶ್ನೆಗೆ ಉತ್ತರಿಸಿದ ಶ್ರೀ ನರೇಂದ್ರ ಮೋದಿ ಅವರು, ದೇಶದಲ್ಲಿ ಹಾಲಿ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಯೋಜನೆಗಳ ಕುರಿತು ವಿವರ ನೀಡಿದರು ಹಾಗೂ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ 1.5 ಟ್ರಿಲಿಯನ್ ಡಾಲರ್ ಮೌಲ್ಯದ ಯೋಜನೆಗಳನ್ನು ದೇಶದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು. ಮಾಸ್ಟರ್ ಕಾರ್ಡ್ ನ ಸಿಇಒ ಅಜಯ್ ಎಸ್. ಬಂಗಾ ಅವರ ಪ್ರಶ್ನೆಗೆ ಮೋದಿ ಅವರು ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೈಗೊಂಡಿರುವ ಬೃಹತ್ ಪ್ರಮಾಣದ ಹಣಕಾಸು ಸೇರ್ಪಡೆ ಯೋಜನೆಗಳು ಮತ್ತು ಎಂಎಸ್ಎಂಇ ವಲಯದ ಬಲವರ್ಧನೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಐಬಿಎಂನ ಅರವಿಂದ ಕೃಷ್ಣ ಅವರ ವಿಶ್ಲೇಷಣೆಗೆ ಉತ್ತರಿಸಿದ ಪ್ರಧಾನಮಂತ್ರಿ, ಡಿಜಿಟಲ್ ಇಂಡಿಯಾ ಯೋಜನೆಯ ವಿಸ್ತಾರದ ಬಗ್ಗೆ ಪ್ರತಿಪಾದಿಸಿದರು. ಪ್ರಧಾನಮಂತ್ರಿ ಅವರು ದೇಶದ ಡಿಜಿಟಲ್ದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳಿದರು. ಸರ್ಕಾರದ ಮುನ್ನೋಟ ಲಭ್ಯತೆ, ಒಳಗೊಳ್ಳುವಿಕೆ ಮತ್ತು ಸಬಲೀಕರಣದ ಮೂಲಕ ಬದಲಾವಣೆ ತರಬೇಕು ಎಂಬುದಾಗಿದ್ದು, ಆ ವೇಳೆ ಬಳಕೆದಾರರ ಖಾಸಗಿತನ ಕಾಯ್ದುಕೊಳ್ಳಲಾಗುವುದು ಎಂದರು. ಎನ್ಇಸಿ ನಿಗಮದ ಅಧ್ಯಕ್ಷ ನೊಬುಹಿರೊ ಎಂಡೊ ಅವರ ಪ್ರಶ್ನೆಗೆ ಪ್ರಧಾನಮಂತ್ರಿ ಅವರು ನಗರೀಕರಣದಿಂದಾಗಿ ಅವಕಾಶಗಳು ಸೃಷ್ಟಿಯಾಗುತ್ತಿರುವ ಕುರಿತು ಭಾರತದ ನಿಲುವನ್ನು ವಿವರಿಸಿದರು. ಭಾರತ ಸುಗಮ ಜೀವನ ಸಾಗಿಸುವುದು, ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡುವುದು ಮತ್ತು ಪರಿಸರ ಸೂಕ್ಷ್ಮತೆ ಅಭಿವೃದ್ಧಿ ಮೂಲಕ ಸುಸ್ಥಿರ ನಗರೀಕರಣಕ್ಕೆ ಆದ್ಯತೆ ನೀಡಿದೆ ಎಂದು ಹೇಳಿದರು. ಈ ಬದ್ಧತೆಯಿಂದಾಗಿ 2014 ರಿಂದ 2020ರ ನಡುವಿನ ಅವಧಿಯಲ್ಲಿ ನಗರ ಭಾರತದಲ್ಲಿ ಸುಮಾರು 150 ಬಿಲಿಯನ್ ಡಾಲರ್ ಹಣ ಹೂಡಿಕೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.