ನೀವು ಉತ್ತಮ ಪರಿಹಾರಗಳನ್ನು ಕಂಡುಹಿಡಿಯಲು ಕಾರ್ಯ ನಿರ್ವಹಿಸುತ್ತಿದ್ದೀರಿ. ನೀವು ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತಿರುವುದಲ್ಲದೆ, ದತ್ತಾಂಶ, ಡಿಜಿಟಲೀಕರಣ ಮತ್ತು ಹೈಟೆಕ್ ಭವಿಷ್ಯದ ಭಾರತದ ಆಶೋತ್ತರಗಳನ್ನು ಬಲವರ್ಧನೆಗೊಳಿಸಲು ನೆರವಾಗುತ್ತಿದ್ದೀರಿ.
ಮಿತ್ರರೇ,
ನಮಗೆ ಸದಾ ಹಿಂದಿನ ಶತಮಾನಗಳ ಬಗ್ಗೆ ಹೆಮ್ಮೆ ಇದೆ. ಕಾರಣ ನಾವು ಜಗತ್ತಿಗೆ ಉತ್ತಮ ವಿಜ್ಞಾನಿಗಳು, ಉತ್ತಮ ತಂತ್ರಜ್ಞರು ಮತ್ತು ತಂತ್ರಜ್ಞಾನ ಉದ್ಯಮಶೀಲ ನಾಯಕರನ್ನು ನೀಡಿದ್ದೇವೆ. ಆದರೆ ಇದು 21ನೇ ಶತಮಾನ ಮತ್ತು ಇದು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಭಾರತ ಅದೇ ರೀತಿ ಪರಿಣಾಮಕಾರಿ ಕಾರ್ಯವನ್ನು ನಿರ್ವಹಿಸಬೇಕಾದರೆ ದೇಶ ಕೂಡ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಬದಲಾಗಬೇಕಿದೆ.
ಈ ಆಲೋಚನೆಯೊಂದಿಗೆ ಆವಿಷ್ಕಾರ, ಸಂಶೋಧನೆ, ವಿನ್ಯಾಸ, ಅಭಿವೃದ್ಧಿ ಮತ್ತು ಉದ್ಯಮಶೀಲತೆಗೆ ಅಗತ್ಯ ಪೂರಕ ವಾತಾವರಣವನ್ನು ನಿರ್ಮಿಸುವ ಕಾರ್ಯ ದೇಶದಲ್ಲಿ ಅತ್ಯಂತ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಇದೀಗ 21ನೇ ಶತಮಾನದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. 21ನೇ ಶತಮಾನದ ಅಗತ್ಯತೆಗಳಿಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಕೂಡ ಅಷ್ಟೇ ಪ್ರಮುಖವಾದ ವಿಚಾರವಾಗಿದೆ.
ಅದು ಪ್ರಧಾನಮಂತ್ರಿಗಳ ಇ-ಕಲಿಕಾ ಕಾರ್ಯಕ್ರಮವಾಗಿರಬಹುದು ಅಥವಾ ಅಟಲ್ ನಾವಿನ್ಯ ಮಿಷನ್ ಆಗಿರಬಹುದು. ಅವುಗಳ ಮೂಲಕ ದೇಶದಲ್ಲಿ ವೈಜ್ಞಾನಿಕ ಮನೋಭಾವ ವೃದ್ಧಿಗೆ ಹಲವು ವಲಯಗಳಲ್ಲಿ ವಿದ್ಯಾರ್ಥಿವೇತನ ಯೋಜನೆಗಳನ್ನು ವಿಸ್ತರಿಸಲಾಗಿದೆ ಅಥವಾ ಕ್ರೀಡಾ ಪ್ರತಿಭೆ ಬೆಂಬಲಕ್ಕೆ ಆಧುನಿಕ ಸೌಕರ್ಯ ನಿರ್ಮಾಣ ಮತ್ತು ಆರ್ಥಿಕ ಬೆಂಬಲ, ಸಂಶೋಧನಾ ಉತ್ತೇಜನಕ್ಕೆ ಹಲವು ಯೋಜನೆಗಳು ಅಥವಾ ಭಾರತದಲ್ಲಿ ವಿಶ್ವದರ್ಜೆಯ 20 ಜೇಷ್ಠತಾ ಕೇಂದ್ರಗಳ ಸ್ಥಾಪನೆ ಯೋಜನೆ ಅಥವಾ ಆನ್ ಲೈನ್ ಶಿಕ್ಷಣಕ್ಕೆ ಹೊಸ ಸಂಪನ್ಮೂಲಗಳ ಸೃಷ್ಟಿ ಅಥವಾ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನಂತಹ ಅಭಿಯಾನ ಮತ್ತಿತರ ಪ್ರಯತ್ನಗಳ ಮೂಲಕ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಆಧುನೀಕರಣಗೊಳಿಸಲಾಗುತ್ತಿದೆ ಮತ್ತು ಆ ಮೂಲಕ ಪ್ರತಿಭೆಗೆ ತಕ್ಕ ಅವಕಾಶಗಳನ್ನು ದೊರಕಿಸಿಕೊಡಲು ಪ್ರಯತ್ನ ನಡೆದಿವೆ.
ಮಿತ್ರರೇ,
ಕೆಲವು ದಿನಗಳ ಹಿಂದೆ ಇದೇ ನಿಟ್ಟಿನಲ್ಲಿ ದೇಶದಲ್ಲಿ ಹೊಸ ಶಿಕ್ಷಣ ನೀತಿಯನ್ನು ಪ್ರಕಟಿಸಲಾಯಿತು. ಈ ನೀತಿಯನ್ನು ಸಿದ್ಧಪಡಿಸಲು ಬೃಹತ್ ಪ್ರಯತ್ನವನ್ನು ನಡೆಸಲಾಯಿತು. ಆ ವೇಳೆ 21ನೇ ಶತಮಾನದ ಯುವಜನಾಂಗದ ಆಲೋಚನೆ, ಅಗತ್ಯತೆಗಳು, ಭರವಸೆ ಮತ್ತು ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ನೀತಿಯನ್ನು ರೂಪಿಸಲಾಗಿದೆ. ಐದು ವರ್ಷಗಳ ಕಾಲ ದೇಶಾದ್ಯಂತ ಪ್ರತಿಯೊಂದು ಹಂತದಲ್ಲಿ ಪ್ರತಿಯೊಂದು ಅಂಶದ ಬಗ್ಗೆ ವ್ಯಾಪಕ ಚರ್ಚೆಗಳು ಮತ್ತು ಸಂವಾದಗಳು ನಡೆದಿವೆ. ಆನಂತರವೇ ನೀತಿ ರೂಪುಗೊಂಡಿವೆ.
ನಿಜವಾದ ಅರ್ಥದಲ್ಲಿ ನವಭಾರತದ ಶಿಕ್ಷಣ ನೀತಿ ಭಾರತದ ಭವಿಷ್ಯದ ಪೀಳಿಗೆಯ ಕನಸುಗಳನ್ನು, ಭರವಸೆಗಳನ್ನು ಮತ್ತು ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಪ್ರದೇಶದ ವಿದ್ವಾಂಸರ ಅಭಿಪ್ರಾಯಗಳು ಒಳಗೊಂಡಿವೆ. ಆದ್ದರಿಂದ ಇದು ಕೇವಲ ನೀತಿಯ ದಾಖಲೆಯಲ್ಲ. 130 ಕೋಟಿ ಭಾರತೀಯ ಆಶೋತ್ತರಗಳನ್ನು ಪ್ರತಿಬಿಂಬಿಸಲಿದೆ.
ಮಿತ್ರರೇ,
ನೀವು ಇಂದಿಗೂ ಹಲವು ಮಕ್ಕಳನ್ನು ಅವರಿಗೆ ಆಸಕ್ತಿ ಇಲ್ಲದ ವಿಷಯಗಳನ್ನು ಆಧರಿಸಿ ಅವರನ್ನು ಅಳೆಯುವುದನ್ನು ನಾವು ನೋಡಿದ್ದೇವೆ. ಅವರಿಗೆ ಪೋಷಕರು, ಬಂಧುಗಳು ಮತ್ತು ಮಿತ್ರರಿಂದ ಒತ್ತಡ ಸೃಷ್ಟಿಯಾಗಿರುತ್ತದೆ ಮತ್ತು ಇಡೀ ವಾತಾವರಣದಿಂದಾಗಿ ಅವರು ಬೇರೆಯವರು ಆಯ್ಕೆ ಮಾಡಿದ ವಿಷಯಗಳನ್ನು ಓದಲು ತೊಡಗುತ್ತಾರೆ. ಈ ಮನೋಭಾವ ದೇಶದ ಬಹುದೊಡ್ಡ ಜನಸಂಖ್ಯೆಯಲ್ಲಿ ಇದೆ. ಬಹುತೇಕ ಜನಸಂಖ್ಯೆ ತುಂಬಾ ಶಿಕ್ಷಿತರು. ಆದರೆ ಬಹುತೇಕ ಅವರು ಓದಿರುವ ವಿಚಾರಗಳು ಅವರಿಗೆ ಕೆಲಸಕ್ಕೆ ಬರುತ್ತಿಲ್ಲ. ಹಲವು ಪದವಿಗಳನ್ನು ಪಡೆದವರೂ ಸಹ ತಮಗೆ ತಾವೇ ಅಪೂರ್ಣರು ಎಂದು ಭಾವಿಸಿಕೊಳ್ಳುತ್ತಾರೆ. ಅವರಲ್ಲಿ ಸ್ವತಃ ಎಷ್ಟು ವಿಶ್ವಾಸ ಇರಬೇಕೋ ಅಷ್ಟು ಇರದೆ ಕೊರತೆ ಕಾಣುತ್ತದೆ. ಇದು ಆತನ ಇಡೀ ಜೀವನದ ಪಯಣದ ಮೇಲೆ ಪರಿಣಾಮ ಬೀರುತ್ತದೆ.
ಮಿತ್ರರೇ, ಹೊಸ ಶಿಕ್ಷಣ ನೀತಿಯ ಮೂಲಕ ಆ ಮನೋಭಾವವನ್ನು ಬದಲಾಯಿಸಲು ಪ್ರಯತ್ನಿಸಲಾಗುತ್ತಿದೆ. ಹಿಂದಿನ ನ್ಯೂನತೆಗಳನ್ನು ಸರಿಪಡಿಸಲಾಗಿದೆ. ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯವಸ್ಥಿತ ಸುಧಾರಣೆಗಳನ್ನು ತರುವ ಪ್ರಯತ್ನಗಳು ಇದೀಗ ನಡೆದಿವೆ ಮತ್ತು ಶಿಕ್ಷಣದ ಪಠ್ಯ ಹಾಗೂ ಉದ್ದೇಶ ಎರಡನ್ನೂ ಪರಿವರ್ತಿಸುವ ಪ್ರಯತ್ನವೂ ನಡೆದಿದೆ.
ಮಿತ್ರರೇ,
21ನೇ ಶತಮಾನ ಜ್ಞಾನದ ಯುಗ, ಇದು ಕಲಿಕೆ, ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಸಮಯ. ಇದೇ ಕೆಲಸವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾಡಲಿದೆ. ಈ ನೀತಿ ನಮ್ಮ ಶಾಲೆ, ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳು, ಫಲಪ್ರದ, ವಿಸ್ತಾರ ಆಧಾರಿತ, ಅದು ನಿಮ್ಮ ಹಾಗೂ ನಿಮ್ಮ ಸ್ವಭಾವತಃ ಪ್ಯಾಷನ್ (ಆಸಕ್ತಿ) ಗಳಿಗೆ ಮಾರ್ಗದರ್ಶನ ನೀಡುವ ಅನುಭವವನ್ನು ನೀಡುತ್ತವೆ.
ಮಿತ್ರರೇ,
ನೀವು ಭಾರತದ ಅತ್ಯುತ್ತಮ ಮತ್ತು ಪ್ರತಿಭಾವಂತರಾಗಿದ್ದೀರಿ. ಈ ಹ್ಯಾಕಥಾನ್ ನೀವು ಪರಿಹರಿಸಲು ಪ್ರಯತ್ನಿಸಿರುವ ಮೊದಲ ಸಮಸ್ಯೆ ಅಲ್ಲ ಮತ್ತು ಕೊನೆಯ ಸಮಸ್ಯೆಯೂ ಅಲ್ಲ. ನಾನು ನಿಮ್ಮನ್ನು ಮತ್ತು ನಿಮ್ಮಂತಹ ಯುವಕರನ್ನು ಮೂರು ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಬೇಡಿ ಎಂದು ಹೇಳುತ್ತೇನೆ. ಅವುಗಳೆಂದರೆ ಕಲಿಕೆ, ಪ್ರಶ್ನಿಸುವುದು ಮತ್ತು ಪರಿಹಾರ ಕಂಡುಕೊಳ್ಳುವುದು.
ನೀವು ಕಲಿತರೆ, ನಿಮ್ಮಲ್ಲಿ ಪ್ರಶ್ನಿಸುವ ವಿವೇಕ ಮೂಡುತ್ತದೆ. ನೀವು ಪ್ರಶ್ನಿಸಿದರೆ ಸಮಸ್ಯೆಗಳನ್ನು ಬಗೆಹರಿಸಲು ನೀವು ಚೌಕಟ್ಟಿನಿಂದಾಚೆ ಯೋಚಿಸುತ್ತೀರಿ. ಅವುಗಳನ್ನೆಲ್ಲಾ ನೀವು ಮಾಡಬೇಕೆಂದರೆ ನೀವು ಬೆಳೆಯಬೇಕು. ನಿಮ್ಮ ಪ್ರಯತ್ನಗಳು ಮುಖ್ಯ. ನಮ್ಮ ರಾಷ್ಟ್ರ ಬೆಳವಣಿಗೆಯಾಗಬೇಕು ಮತ್ತು ನಮ್ಮ ಭೂಮಿ ಏಳಿಗೆ ಹೊಂದಬೇಕು.
ಮಿತ್ರರೇ, ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ಈ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ. ನಾವು ಶಾಲಾ ಪುಸ್ತಕ ಚೀಲದ(ಬ್ಯಾಗ್) ಹೊರೆಯನ್ನು ಇಳಿಸುವತ್ತ ವರ್ಗಾವಣೆಗೊಳ್ಳುತ್ತಿದ್ದೇವೆ. ಅದು ಶಾಲೆಯಿಂದ ದೂರ ಆಗಬಾರದು. ಅದು ಜೀವನ ಕಲಿಕೆಗೆ ಸಹಾಯಕವಾಗಬೇಕು; ಸುಮ್ಮನೆ ಸರಳವಾಗಿ ಪಠಣ ಮಾಡುವ ಬದಲು ಗಂಭೀರವಾಗಿ ಚಿಂತಿಸುವುದರತ್ತ ಬದಲಾಗಬೇಕಿದೆ. ಹಲವು ವರ್ಷಗಳ ಕಾಲ ವ್ಯವಸ್ಥೆಯಲ್ಲಿನ ಇತಿಮಿತಿಗಳು, ವಿದ್ಯಾರ್ಥಿಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿವೆ. ಅವುಗಳಿಗೆ ಇನ್ನು ಜಾಗವಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ, ಯುವ ಭಾರತದ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ. ಅದು ವ್ಯವಸ್ಥೆ ಕೇಂದ್ರಿತವಲ್ಲ. ಅದು ಜನ ಕೇಂದ್ರಿತ ಮತ್ತು ಭವಿಷ್ಯ ಕೇಂದ್ರಿತವಾಗಿದೆ.
ಮಿತ್ರರೇ,
ನೀತಿಯ ಅತ್ಯಂತ ಪ್ರಮುಖ ಕುತೂಹಲಕರ ಸಂಗತಿ ಎಂದರೆ ಬಹುಶಿಸ್ತೀಯ(ಬಹುಬಗೆಯ ಕೌಲಶ್ಯ) ಅಧ್ಯಯನಕ್ಕೆ ಒತ್ತು ನೀಡಿರುವುದು. ಈ ಪರಿಕಲ್ಪನೆ ಜನಪ್ರಿಯವಾಗುತ್ತಿದೆ ಮತ್ತು ಅದು ನಿಜವಾಗಿಯೂ ಸರಿ ಇದೆ. ಒಂದು ಗಾತ್ರ ಎಲ್ಲರಿಗೂ ಹೊಂದುವುದಿಲ್ಲ. ಒಂದು ವಿಷಯದಲ್ಲಿ ನೀವು ಯಾರು ಎಂಬುದನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಹೊಸದನ್ನು ಕಂಡುಹಿಡಿಯಲು ಯಾವುದೇ ಮಿತಿಗಳು ಇಲ್ಲ. ಮಾನವರ ಇತಿಹಾಸದಲ್ಲಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಮೆರೆದ ಹಲವು ದಿಗ್ಗಜರನ್ನು ಉದಾಹರಣೆಗಳನ್ನು ಕಾಣಬಹುದಾಗಿದೆ. ಅದು ಆರ್ಯಭಟ, ಲಿಯನಾರ್ಡೊ ಡಾವಿಂಚಿ, ಹೆಲನ್ ಕೆಲ್ಲರ್, ಗುರುದೇವ ಠ್ಯಾಗೂರ್ ಅವರುಗಳಾಗಿರಬಹುದು. ನಾವು ಇದೀಗ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಲಯಗಳಲ್ಲಿ ಸಾಂಪ್ರದಾಯಿಕ ಗಡಿಗಳನ್ನು ದಾಟಿದ್ದೇವೆ. ಯಾವುದಾದರೂ ವಿದ್ಯಾರ್ಥಿ ಆಸಕ್ತಿ ಇದ್ದರೆ ಆತ ಗಣಿತದ ಜೊತೆ ಸಂಗೀತವನ್ನೂ ಸಹ ಕಲಿಯಬಹುದಾಗಿದೆ ಅಥವಾ ಕೋಡಿಂಗ್ ಜೊತೆ ರಾಸಾಯನಶಾಸ್ತ್ರವನ್ನೂ ಸಹ ಒಟ್ಟಿಗೆ ಕಲಿಯಬಹುದಾಗಿದೆ. ಇದು ವಿದ್ಯಾರ್ಥಿಗಳು ಏನನ್ನು ಬಯಸುತ್ತಾರೋ ಅದನ್ನು ಕಲಿಸಲು ಒತ್ತು ನೀಡುತ್ತದೆ. ಆದರೆ ಇಲ್ಲಿ ಸಮಾಜ ವಿದ್ಯಾರ್ಥಿಯಿಂದ ಏನನ್ನು ಬಯಸುತ್ತದೋ ಅದನ್ನು ಕಲಿಯುವುದಕ್ಕೆ ಅವಕಾಶವಿಲ್ಲ. ಬಹುಶಿಸ್ತೀಯ ಅಧ್ಯಯನ ನಿಮ್ಮಲ್ಲಿ ನಿಯಂತ್ರಣ ಇಡುತ್ತದೆ. ಈ ಪ್ರಕ್ರಿಯೆಯಲ್ಲಿ ನೀವು ನಿಮ್ಮನ್ನು ಸರಳ ಮತ್ತು ಸುಲಭಗೊಳಿಸುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿ ಅತ್ಯಂತ ಸರಳವಾಗಿದ್ದು, ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಲವು ಪ್ರವೇಶ ಮತ್ತು ನಿರ್ಗಮನದ ಅಂಶಗಳನ್ನು ಒದಗಿಸಲಾಗಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ವಿದ್ಯಾರ್ಥಿಗಳಿಗೆ ಬೀದಿಗೆ ಇಳಿದಂತೆ, ತಮಗೆ ಬೇಕೆನಿಸಿದ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಪದವಿ ಅನುಭವ ಮೂರು ವರ್ಷ ಅಥವಾ ನಾಲ್ಕು ವರ್ಷದ ಪಯಣವಾಗಿರಬಹುದು. ಆದರೆ ವಿದ್ಯಾರ್ಥಿ ಶೈಕ್ಷಣಿಕ ಗಳಿಕೆ ಬ್ಯಾಂಕ್ ನಿಂದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾನೆ. ಅವು ಶೈಕ್ಷಣಿಕ ಅಂಕಗಳ ರೀತಿ ಹೊಂದಲು ಅವಕಾಶವಿದೆ. ಅವುಗಳನ್ನು ವರ್ಗಾಯಿಸಿಕೊಳ್ಳಬಹುದು ಮತ್ತು ಅಂತಿಮ ಪದವಿಗೆ ಲೆಕ್ಕವಿಟ್ಟುಕೊಳ್ಳಬಹುದು. ಇಂತಹ ಸರಳ ವ್ಯವಸ್ಥೆ ನಮ್ಮ ಶಿಕ್ಷಣ ವ್ಯವಸ್ಥೆಗೆ ತುಂಬಾ ಹಿಂದೆಯೇ ಬೇಕಾಗಿತ್ತು. ಈ ಅಂಶವನ್ನು ನಮ್ಮ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಗುರುತಿಸಿ ಅದಕ್ಕೆ ಪರಿಹಾರವನ್ನು ನೀಡಿರುವುದಕ್ಕೆ ಸಂತೋಷವಾಗಿದೆ.
ಮಿತ್ರರೇ,
ರಾಷ್ಟ್ರೀಯ ಶಿಕ್ಷಣ ನೀತಿ, ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಬಹುದೊಡ್ಡ ಲಭ್ಯತೆಯನ್ನು ಒದಗಿಸಲಿದೆ. ಉನ್ನತ ಶಿಕ್ಷಣದಲ್ಲಿ 2035ರ ವೇಳೆಗೆ ಒಟ್ಟು ಪ್ರವೇಶ ಪ್ರಮಾಣ ಶೇ.50ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಅಲ್ಲದೆ ಲಿಂಗ ಸೇರ್ಪಡೆ ನಿಧಿ, ವಿಶೇಷ ಶಿಕ್ಷಣ ವಲಯ, ಮುಕ್ತ ಹಾಗೂ ದೂರಶಿಕ್ಷಣ ಕಲಿಕೆಯ ಆಯ್ಕೆ ಮತ್ತಿತರ ಕ್ರಮಗಳ ಪ್ರಯತ್ನಗಳು ಇದಕ್ಕೆ ಸಹಕಾರಿಯಾಗಲಿವೆ.
ಮಿತ್ರರೇ, ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ದೇಶದ ಶ್ರೇಷ್ಠ ಶಿಕ್ಷಣ ತಜ್ಞರು ಮತ್ತು ಭಾರತದ ಸಂವಿಧಾನದ ಶಿಲ್ಪಿ. ಅವರು ಶಿಕ್ಷಣವೆಂದರೆ ಅದು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತಿರಬೇಕು ಎಂದು ಹೇಳಿದ್ದರು. ಈ ಶಿಕ್ಷಣ ನೀತಿಯೂ ಸಹ ಅದೇ ಆದರ್ಶಕ್ಕೆ ಸಮರ್ಪಿಸಲಾಗಿದೆ. ಈ ಶಿಕ್ಷಣ ನೀತಿ ಉದ್ಯೋಗ ಬಯಸುವವರಿಗಿಂತ ಉದ್ಯೋಗವನ್ನು ಸೃಷ್ಟಿಸುವುದಕ್ಕೆ ಒತ್ತು ನೀಡಲಿದೆ. ಆ ಮೂಲಕ ಅದು ನಮ್ಮ ಮನೋಭಾವ ಮತ್ತು ನಮ್ಮ ಧೋರಣೆಗಳಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನವಾಗಿದೆ. ಈ ನೀತಿಯ ಉದ್ದೇಶವೆಂದರೆ ಸ್ವಾವಲಂಬಿ ಯುವಕರನ್ನು ಸೃಷ್ಟಿಸುವುದು, ಅವರು ತಾವೇ ಉದ್ಯೋಗ ಮಾಡಬೇಕೆ ಅಥವಾ ಸೇವೆ ಮಾಡಬೇಕೆ ಅಥವಾ ಉದ್ಯಮಿಯಾಗಬೇಕೆ ಎಂಬುದನ್ನು ಅವರುಗಳೇ ನಿರ್ಧರಿಸುತ್ತಾರೆ.
ಮಿತ್ರರೇ,
ನಮ್ಮ ದೇಶದಲ್ಲಿ ಭಾಷೆ ಎನ್ನುವುದು ಸದಾ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ನಾವು ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಗಳ ಭವಿಷ್ಯವನ್ನು ಅವುಗಳ ಪಾಡಿಗೆ ಅವುಗಳನ್ನು ಬಿಟ್ಟುಬಿಟ್ಟಿದ್ದೇವೆ. ಅವುಗಳಿಗೆ ಬೆಳೆಯಲು ಮತ್ತು ಉಳಿಯಲು ಸ್ವಲ್ಪೇ ಸ್ವಲ್ಪ ಸಾಧ್ಯತೆಗಳಿವೆ. ಇದೀಗ ಶಿಕ್ಷಣ ನೀತಿಯಲ್ಲಿ ಬದಲಾವಣೆಗಳನ್ನು ತಂದಿರುವುದರಿಂದ ಭಾರತೀಯ ಭಾಷೆಗಳು ಅಭಿವೃದ್ಧಿ ಹೊಂದಲಿವೆ ಮತ್ತು ಅವು ಮತ್ತಷ್ಟು ಬೆಳವಣಿಗೆಯಾಗಲಿವೆ. ಇವು. ಭಾರತದ ಬಗೆಗಿನ ಜ್ಞಾನ ಹೆಚ್ಚಿಸಲು ಸಹಕಾರಿಯಾಗುವುದಲ್ಲದೆ, ಭಾರತದ ಏಕತೆಯನ್ನು ಬಲವರ್ಧನೆಗೊಳಿಸಲಿವೆ. ನಮ್ಮ ಭಾರತೀಯ ಭಾಷೆಗಳಲ್ಲಿ ಅತ್ಯಂತ ಶ್ರೀಮಂತವಾಗಿವೆ, ನಮ್ಮಲ್ಲಿ ಶತಮಾನಗಳಷ್ಟು ಹಿಂದಿನ ಜ್ಞಾನ ಮತ್ತು ಅನುಭವವಿದ್ದು, ನಾವೆಲ್ಲಾ ಇನ್ನಷ್ಟು ವಿಸ್ತಾರಗೊಳ್ಳಬೇಕಿದೆ. ಇದರಿಂದ ಜಗತ್ತಿಗೆ ಭಾರತೀಯ ಭಾಷೆಗಳ ಶ್ರೀಮಂತಿಕೆಯ ಪರಿಚಯವಾಗಲಿದೆ. ಅದಕ್ಕಿಂತ ಮುಖ್ಯವಾದ ಪ್ರಯೋಜನವೆಂದರೆ ವಿದ್ಯಾರ್ಥಿಗಳು ಬಾಲ್ಯದಿಂದಲೇ ತಮ್ಮ ಮಾತೃ ಭಾಷೆಯಲ್ಲಿಯೇ ಕಲಿಯಬಹುದಾಗಿದೆ.
ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಲಭ್ಯವಾಗಲಿವೆ ಮತ್ತು ಅವರು ತಮ್ಮ ಪ್ರತಿಭೆಯನ್ನು ಅರಳಿಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ತುಂಬಾ ಸುಲಭ ಮತ್ತು ಸೂಕ್ತ ವಾತಾವರಣದಲ್ಲಿ ಯಾವುದೇ ಒತ್ತಡವಿಲ್ಲದೆ, ಹೊಸ ಸಂಗತಿಗಳನ್ನು ಕಲಿಯಲು ಉತ್ತೇಜನ ದೊರಕುತ್ತದೆ ಮತ್ತು ಅದು ಶಿಕ್ಷಣದ ಜೊತೆ ಸಂಪರ್ಕ ಬೆಸೆಯಲು ಸಾಧ್ಯವಾಗಲಿದೆ. ಜಿಡಿಪಿ ಆಧಾರದಲ್ಲಿ ಜಗತ್ತಿನ 20 ಅಗ್ರ ರಾಷ್ಟ್ರಗಳನ್ನು ನಾವು ನೋಡುವುದಾದರೆ ಬಹುತೇಕ ದೇಶಗಳು ಶಿಕ್ಷಣವನ್ನು ತಮ್ಮ ಮಾತೃ ಭಾಷೆಯಲ್ಲಿಯೇ ನೀಡುತ್ತಿರುವುದನ್ನು ನಾವು ಕಾಣಬಹುದಾಗಿದೆ. ಆ ದೇಶಗಳು ಯುವಕರು ತಮ್ಮದೇ ಆದ ಭಾಷೆಯಲ್ಲಿ ಯೋಚಿಸುವುದನ್ನು ಮತ್ತು ಅರ್ಥ ಮಾಡಿಕೊಳ್ಳುವುದನ್ನು ಕಲಿಯುವುದನ್ನು ಅಭಿವೃದ್ಧಿಪಡಿಸಿದೆ ಮತ್ತು ಇತರೆ ಭಾಷೆಗಳನ್ನು ಕಲಿತು, ಅದನ್ನು ಜಗತ್ತಿನ ಇತರರೊಂದಿಗೆ ಸಂವಹನ ನಡೆಸುವುದಕ್ಕೆ ಒತ್ತು ನೀಡಲಾಗಿದೆ. ಅದೇ ನೀತಿ ಮತ್ತು ಕಾರ್ಯತಂತ್ರ 21ನೇ ಶತಮಾನದ ಭಾರತಕ್ಕೂ ಅತ್ಯಂತ ಉಪಯುಕ್ತವಾಗಿದೆ. ಭಾರತದಲ್ಲಿ ಭಾಷೆಗಳ ಅದ್ಭುತ ಭಂಡಾರವೇ ಇದೆ. ಅವುಗಳನ್ನು ಕಲಿಯಲು ಒಂದು ಜೀವನ ಸಾಕಾಗುವುದಿಲ್ಲ ಮತ್ತು ಇಂದು ಇಡೀ ವಿಶ್ವವೇ ಅದಕ್ಕಾಗಿ ಕಾಯುತ್ತಿದೆ.
ಮಿತ್ರರೇ,
ಹೊಸ ಶಿಕ್ಷಣ ನೀತಿ ಮತ್ತೊಂದು ವಿಶೇಷ ಅಂಶವನ್ನು ಒಳಗೊಂಡಿದೆ. ಅದರಲ್ಲಿ ಜಾಗತಿಕದ ಜೊತೆ ಸ್ಥಳೀಯತೆಗೂ ಸೇರಿಸಿ ಒತ್ತು ನೀಡಲಾಗಿದೆ. ಸ್ಥಳೀಯ ಅಥವಾ ಪ್ರಾದೇಶಿಕ, ಜನಪದ ಹಾಗೂ ವಿವಿಧ ಪ್ರಾಕಾರಗಳು, ಸಾಂಪ್ರದಾಯಿಕ ಕಲೆ ಮತ್ತು ಜ್ಞಾನಕ್ಕೆ ಒತ್ತು ನೀಡಲಾಗಿದ್ದು, ಭಾರತದಲ್ಲಿ ಮುಕ್ತ ಕ್ಯಾಂಪಸ್ ಗಳನ್ನು ತೆರೆಯಲು ಜಾಗತಿಕ ಸಂಸ್ಥೆಗಳನ್ನೂ ಸಹ ಆಹ್ವಾನಿಸಲಾಗಿದೆ. ಇದರೊಂದಿಗೆ ನಮ್ಮ ಯುವಕರು ವಿಶ್ವ ದರ್ಜೆಗೆ ತಮ್ಮನ್ನು ತಾವು ತೆರೆದುಕೊಳ್ಳುವುದಲ್ಲದೇ ಅವರಿಗೆ ಭಾರತದಲ್ಲೇ ಅಂತಹ ಅವಕಾಶಗಳು ಸಿಗುತ್ತವೆ ಮತ್ತು ಅವರು ಜಾಗತಿಕ ಸ್ಪರ್ಧೆಗಳಿಗೆ ಸಜ್ಜಾಗುತ್ತಾರೆ. ಇದರಿಂದ ಭಾರತದಲ್ಲಿ ವಿಶ್ವ ದರ್ಜೆಯ ಸಂಸ್ಥೆಗಳನ್ನು ನಿರ್ಮಾಣ ಮಾಡಲು ಸಹಕಾರಿಯಾಗುವುದಲ್ಲದೆ ಭಾರತವನ್ನು ಜಾಗತಿಕ ಶಿಕ್ಷಣದ ತಾಣವನ್ನಾಗಿ ರೂಪಿಸಲು ಸಹಾಯಕವಾಗಲಿದೆ.
ಮಿತ್ರರೇ, ನಾನು ಸದಾ ದೇಶದ ಯುವಶಕ್ತಿಯ ಮೇಲೆ ವಿಶ್ವಾಸ ಇರಿಸಿದ್ದೇನೆ. ದೇಶದ ಯುವಜನರು ನಾನು ಏಕೆ ಅವರ ಮೇಲೆ ವಿಶ್ವಾಸ ಇಟ್ಟಿದ್ದೇನೆ ಎಂಬುದನ್ನು ಪದೇ ಪದೇ ನಿರೂಪಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ಕೊರೊನಾ ವಿರುದ್ಧದ ಹೋರಾಟದ ವೇಳೆ ಮುಖ ರಕ್ಷಾ ಕವಚ(ಫೇಸ್ ಶೀಲ್ಡ್)ಗಳಿಗೆ ಭಾರೀ ಬೇಡಿಕೆ ಎದುರಾಗಿತ್ತು. ಈ ಬೇಡಿಕೆ ಎದುರಿಸಲು ದೇಶದ ಯುವಜನರು ದೊಡ್ಡ ಸಂಖ್ಯೆಯಲ್ಲಿ ಮುಂದೆ ಬಂದರು ಮತ್ತು 3ಡಿ ಪ್ರಿಂಟಿಂಗ್ ತಂತ್ರಜ್ಞಾನವನ್ನು ದೊಡ್ಡ ಮಟ್ಟದಲ್ಲಿ ಬಳಕೆ ಮಾಡಿದರು. ಯುವ ಆವಿಷ್ಕಾರಿಗಳು, ಯುವ ಉದ್ಯಮಿಗಳು, ಪಿಪಿಇಗಳು ಮತ್ತು ಇತರೆ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬರುತ್ತಿರುವ ಬಗ್ಗೆ ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಆರೋಗ್ಯ ಸೇತು ಆಪ್ ಮೂಲಕ ಅಲ್ಪಾವಧಿಯಲ್ಲಿ ಕೋವಿಡ್ ಪತ್ತೆಗೆ ಶ್ರೇಷ್ಠ ಸಾಧನಗಳನ್ನು ಅಭಿವೃದ್ಧಿಪಡಿಸಲು ಯುವಕರು ಮುಂದಾಗುತ್ತಿದ್ದಾರೆ.
ಮಿತ್ರರೇ, ನೀವೆಲ್ಲಾ ಸ್ವಾವಲಂಬಿ ಭಾರತದ ಯುವಜನತೆಗೆ ಸ್ಫೂರ್ತಿಯ ಸೆಲೆಗಳಾಗಿದ್ದೀರಾ.! ಜೀವನ ಸುಗಮಗೊಳಿಸಲು ಮತ್ತು ದೇಶದಲ್ಲಿ ಬಡಜನರು ಉತ್ತಮ ರೀತಿಯಲ್ಲಿ ಜೀವನ ನಡೆಸುವಂತೆ ಮಾಡುವ ಗುರಿ ಸಾಧನೆಯಲ್ಲಿ ಯುವಕರ ಪಾತ್ರ ಅತ್ಯಂತ ಪ್ರಮುಖವಾದುದು. ನಮ್ಮ ಯುವಕರು ಎದುರಿಸಲಾಗದಂತಹ ಯಾವುದೇ ಸವಾಲುಗಳು ನಮ್ಮ ದೇಶದಲ್ಲಿ ಇಲ್ಲ ಎಂದು ನಾನು ನಂಬಿದ್ದೇನೆ. ಅಂದರೆ ಅವರು ಪರಿಹಾರವನ್ನು ಕಂಡುಹಿಡಿಯಲಾಗದ ಯಾವುದೇ ಸಮಸ್ಯೆಗಳು ಇಲ್ಲ. ದೇಶದಲ್ಲಿ ಯಾವುದೇ ಅಗತ್ಯ ಸಂದರ್ಭಗಳು ಎದುರಾದಾಗಲೂ ನಾವು ನಮ್ಮ ಯುವ ಆವಿಷ್ಕಾರಿಗಳತ್ತ ನೋಡುತ್ತೇವೆ. ಅವರು ನಮ್ಮನ್ನು ನಿರಾಸೆಗೊಳಿಸುವುದಿಲ್ಲ.
ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಮೂಲಕ ದೇಶ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಆವಿಷ್ಕಾರಿಗಳನ್ನು ಪಡೆಯುತ್ತಿದೆ. ಈ ಹ್ಯಾಕಥಾನ್ ನಂತರವೂ ಕೂಡ ಎಲ್ಲಾ ಯುವ ಮಿತ್ರರೂ ದೇಶದ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಲಿದ್ದಾರೆ ಮತ್ತು ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಹೊಸ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿದ್ದಾರೆ ಎಂಬ ವಿಶ್ವಾಸ ನನಗಿದೆ.
ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಶುಭಾಶಯಗಳು, ಒಳ್ಳೆಯದಾಗಲಿ !
ತುಂಬಾ ಧನ್ಯವಾದಗಳು.