ನನ್ನ ಸಹದ್ಯೋಗಿ ಸಚಿವರುಗಳಾದ ಡಾ|| ಹರ್ಷವರ್ಧನ್, ಡಾ|| ಮಹೇಶ್ ಶರ್ಮ, ಶ್ರೀ ಮನೋಜ್ ಸಿನ್ಹಾ
ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮದ ಕಾರ್ಯಕಾರಿ ನಿರ್ದೇಶಕರೇ,
ಪರಿಸರ, ಅರಣ್ಯ, ಹವಾಮಾನ ವೈಪರೀತ್ಯ ಸಚಿವಾಲಯದ ಕಾರ್ಯದರ್ಶಿಗಳೇ,
ಭಾರತ ಮತ್ತು ವಿದೇಶಗಳಿಂದ ಬಂದಿರುವ ಇತರೆ ಗಣ್ಯರೇ,
ಸಹೋದರ, ಸಹೋದರಿಯರೇ,
120 ಕೋಟಿ ಭಾರತೀಯರ ಪರವಾಗಿ ನಾನು ನಿಮ್ಮನ್ನೆಲ್ಲ ನವದೆಹಲಿಗೆ ಸ್ವಾಗತಿಸಲು ತುಂಬಾ ಹರ್ಷಿತನಾಗಿದ್ದೇನೆ.
ಈ ಕಾರ್ಯಕ್ರಮದ ನಂತರ ವಿದೇಶದಿಂದ ಇಲ್ಲಿಗೆ ಬಂದಿರುವ ಪ್ರತಿನಿಧಿಗಳು ಸ್ವಲ್ಪ ಬಿಡುವು ಮಾಡಿಕೊಂಡು ದೆಹಲಿಯ ಇತಿಹಾಸ ಮತ್ತು ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆಂದು ಭಾವಿಸಿದ್ದೇನೆ.
ವಿಶ್ವ ಪರಿಸರ ದಿನ – 2018ನ ಜಾಗತಿಕ ಆತಿಥ್ಯ ವಹಿಸುತ್ತಿರುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ.
ಇಂದು ನಾವು ಅತ್ಯಂತ ಪ್ರಮುಖ ದಿನವನ್ನು ಆಚರಿಸುತ್ತಿದ್ದೇವೆ. ನಾವು ನಮ್ಮ ಪೂರ್ವಜರು ಬಿಟ್ಟುಹೋದ ತತ್ವ ವಿಶ್ವ ಭ್ರಾತೃತ್ವವನ್ನು ಸ್ಮರಿಸುತ್ತಿದ್ದೇವೆ.
ಸಂಸ್ಕೃತದ ಜನಪ್ರಿಯ ವಾಕ್ಯದಲ್ಲಿ 'ವಸುದೈವ ಕುಟುಂಬಕಂ' – ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾವಿಸಲಾಗುವುದು.
ಕೆಲವು ತತ್ವಗಳನ್ನು ನಾವು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಉತ್ತರದಾಯಿತ್ವ ಸಿದ್ಧಾಂತದಲ್ಲಿ ಪ್ರತಿಫಲನಗೊಳ್ಳುತ್ತದೆ. ಅವರು 'ಭೂಮಿ ಪ್ರತಿಯೊಬ್ಬರ ಅಗತ್ಯತೆಗಳನ್ನು ತೃಪ್ತಿಗೊಳಿಸುತ್ತದೆ, ಆದರೆ ಅದುಪ್ರತಿಯೊಬ್ಬರ ಆಸೆಬುರುಕ ತನವನ್ನಲ್ಲ' ಎಂದು ಹೇಳಿದ್ದಾರೆ.
ನಮ್ಮ ಪರಂಪರೆಯಲ್ಲಿ ನಿಸರ್ಗದೊಡನೆ ಸೌಹಾರ್ದತೆಯಿಂದ ಜೀವಿಸುವ ಪ್ರಾಮುಖ್ಯತೆಯನ್ನು ಬಹಳ ದೀರ್ಘಕಾಲದಿಂದಲೂ ಕಾಣಬಹುದಾಗಿದೆ.
ಅದನ್ನು ನಮ್ಮ ನಿಸರ್ಗದ ನಿಯಮಗಳಲ್ಲೂ ಕೂಡ ಪ್ರತಿಫಲನಗೊಂಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ನಮ್ಮ ಹಬ್ಬ ಹರಿದಿನಗಳಲ್ಲಿ ಮತ್ತು ಪುರಾತನ ಪಠ್ಯಗಳಲ್ಲೂ ಅದನ್ನು ಕಾಣಬಹುದಾಗಿದೆ.
ಸಹೋದರ ಸಹೋದರಿಯರೇ,
ಭಾರತ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆ ಹೊಂದಿದೆ. ನಾವು ನಮ್ಮ ಜನರ ಜೀವನಮಟ್ಟ ಸುಧಾರಿಸಲು ಬದ್ಧವಾಗಿದ್ದೇವೆ.
ಸುಸ್ಥಿರ ಮತ್ತು ಹಸಿರು ಮಾರ್ಗದಲ್ಲಿ ನಾವು ನುಡಿದಂತೆ ನಡೆಯುತ್ತ ಅದಕ್ಕೆ ಬದ್ಧವಾಗಿದ್ದೇವೆ.
ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದೀಚೆಗೆ ನಾವು 40 ಮಿಲಿಯನ್ ಹೊಸ ಅಡುಗೆ ಅನಿಲ ಸಂಪರ್ಕಗಳನ್ನು ನೀಡಿದ್ದೇವೆ.
ಇದರಿಂದ ಗ್ರಾಮೀಣ ಭಾಗದ ಮಹಿಳೆಯರನ್ನು ವಿಷಕಾರಿ ಹೊಗೆ ಸೇವನೆಯಿಂದ ಮುಕ್ತಗೊಳಿಸಲಾಗಿದೆ.
ಅಲ್ಲದೆ ಉರುವಲು ಮೇಲಿನ ಅವಲಂಬನೆಯನ್ನೂ ಸಹ ನಿರ್ಮೂಲನೆ ಮಾಡಲಾಗಿದೆ.
ಅದೇ ಬದ್ಧತೆಯೊಂದಿಗೆ ಭಾರತದಾದ್ಯಂತ 300 ಮಿಲಿಯನ್ ಎಲ್ಇಡಿ ಬಲ್ಬ್ ಗಳನ್ನು ಅಳವಡಿಸಲಾಗಿದೆ. ಇದರಿಂದ ವಿದ್ಯುತ್ ಉಳಿತಾಯದ ಜತೆಗೆ, ವಾತಾವರಣಕ್ಕೆ ಸೇರಿಸುತ್ತಿದ್ದ
ಭಾರೀ ಪ್ರಮಾಣದ ಇಂಗಾಲದ ಅನಿಲವನ್ನು ನಿಯಂತ್ರಿಸಲಾಗಿದೆ.
ನಾವು ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುವ ಕಾರ್ಯದಲ್ಲಿ ನಿರತರಾಗಿದ್ದೇವೆ. 2020ರ ವೇಳೆಗೆ ಸೌರ ಮತ್ತು ಪವನ ವಿದ್ಯುತ್ ಮೂಲಗಳಿಂದ 175ಗಿಗಾವ್ಯಾಟ್ಸ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದೇವೆ.
ಭಾರತ ಈಗಾಗಲೇ ಸೌರ ವಿದ್ಯುತ್ ಉತ್ಪಾದನೆಯಲ್ಲಿ ವಿಶ್ವದಲ್ಲೇ 5ನೇ ಅತಿದೊಡ್ಡ ರಾಷ್ಟ್ರವಾಗಿದೆ. ಅಲ್ಲದೆ ನವೀಕರಿಸಬಹುದಾದ ಇಂಧನ ವಲಯದಲ್ಲೂ ಸಹ ಭಾರತ ಆರನೇ ಅತಿ ಹೆಚ್ಚು ಉತ್ಪಾದಿಸುವರಾಷ್ಟ್ರವಾಗಿದೆ.
ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಇದರಿಂದಾಗಿ ಪರಿಸರಕ್ಕೆ ಹಾನಿಯಾಗುವಂತಹ ಇಂಧನಗಳ ಅವಲಂಬನೆ ಕಡಿಮೆ ಮಾಡಲಾಗಿದೆ.
ನಾವು ಫಾಸಿಲ್ ಫುಯಲ್ ಅವಲಂಬನೆ ತಗ್ಗಿಸುತ್ತಿದ್ದೇವೆ. ಸಾಧ್ಯವಿರುವಂತಹ ಇಂಧನ ಮೂಲಗಳಿಗೆ ನಾವು ವರ್ಗಾವಣೆಗೊಳ್ಳುತ್ತಿದ್ದೇವೆ. ನಾವು ನಗರಗಳನ್ನು ಮತ್ತು ಸಾಮೂಹಿಕ ಸಾರಿಗೆಯನ್ನು ಪರಿವರ್ತಿಸುತ್ತಿದ್ದೇವೆ.
ನಮ್ಮದು ಯುವ ರಾಷ್ಟ್ರ. ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಭಾರತವನ್ನು ಜಾಗತಿಕ ಉತ್ಪಾದನಾ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ.
ನಾವು ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಆರಂಭಿಸಿದ್ದೇವೆ. ಆ ಮೂಲಕ ನಾವು ಶೂನ್ಯ ಕೊರತೆ ಮತ್ತು ಶೂನ್ಯ ಪರಿಣಾಮದ ವಸ್ತುಗಳ ಉತ್ಪಾದನೆಗೆ ಒತ್ತು ನೀಡುತ್ತಿದ್ದೇವೆ ಅಂದರೆ, ಯಾವುದೇ ದೋಷವಿಲ್ಲದೆವಸ್ತುಗಳನ್ನು ಉತ್ಪಾದಿಸುವುದು ಮತ್ತು ಅದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವುದಾಗಿದೆ.
2005ರಿಂದ 2030ರ ನಡುವಿನ ಅವಧಿಯಲ್ಲಿ ಮಾಲಿನ್ಯದ ತೀವ್ರತೆಯನ್ನು 33 ರಿಂದ 35ರಷ್ಟು ಇಳಿಕೆ ಮಾಡಲು ಭಾರತ ಬದ್ಧವಾಗಿದೆ. 2030ರ ವೇಳೆಗೆ ನಾವು ರಾಷ್ಟ್ರೀಯ ನಿಗದಿತ ಗುರಿಯನ್ನು ತಲುಪುವಮಾರ್ಗದಲ್ಲಿದ್ದೇವೆ.
ಯು ಎನ್ ಇ ಪಿ ಗ್ಯಾಪ್ ವರದಿಯ ಪ್ರಕಾರ ಭಾರತ ಕೂಪನ್ ಹೇಗನ್ ಒಪ್ಪಂದದ ಅನುಷ್ಠಾನದ ಮಾರ್ಗದಲ್ಲಿದೆ. 2005 ರಿಂದ 2020ರ ನಡುವಿನ ಅವಧಿಯಲ್ಲಿ 20ರಿಂದ 25ರಷ್ಟು ಮಾಲಿನ್ಯದ ತೀವ್ರತೆಕಡಿತಗೊಳಿಸಲಾಗುವುದು.
ನಾವು ಉತ್ಕೃಷ್ಟ ರಾಷ್ಟ್ರೀಯ ಜೀವವೈವಿಧ್ಯ ಕಾರ್ಯತಂತ್ರವನ್ನು ಹೊಂದಿದ್ದೇವೆ. ನಾವು ಜಗತ್ತಿನ ಒಟ್ಟು ಭೂಪ್ರದೇಶದ ಶೇಕಡ 2.4ರಷ್ಟು ಭೂಪ್ರದೇಶವನ್ನು ಹೊಂದಿದ್ದು, ಭಾರತದಲ್ಲಿ ಶೇಕಡ 7 ರಿಂದ 8ರಷ್ಟುಜೀವವೈವಿಧ್ಯ ರಾಶಿಯಿದೆ. ಅದೇ ವೇಳೆ ಭಾರತ ಶೇ.18ರಷ್ಟು ಜನಸಂಖ್ಯೆಗೆ ನೆರವು ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದೀಚೆಗೆ ನಮ್ಮ ಮರ ಮತ್ತು ಅರಣ್ಯವ್ಯಾಪ್ತಿ ಶೇ.1ರಷ್ಟು ಹೆಚ್ಚಾಗಿದೆ.
ವನ್ಯಜೀವಿ ಸಂರಕ್ಷಣೆ ಕ್ಷೇತ್ರದಲ್ಲೂ ನಾವು ಉತ್ತಮ ಕೆಲಸ ಮಾಡುತ್ತಿದ್ದೇವೆ. ಹುಲಿ, ಆನೆ, ಸಿಂಹ ಮತ್ತಿತರ ವನ್ಯಜೀವಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ.
ನೀರಿನ ಲಭ್ಯತೆ ಸಮಸ್ಯೆ ಬಗೆಹರಿಸುವ ವಿಷಯವನ್ನೂ ಸಹ ನಾವು ಗುರುತಿಸಿದ್ದೇವೆ. ಇದು ಭಾರತದಲ್ಲಿ ಅತ್ಯಂತ ಪ್ರಮುಖ ಸವಾಲಾಗಿದೆ. ನಾವು ನಮಾಮಿ ಗಂಗೆ ಅಭಿಯಾನವನ್ನು ಕೈಗೆತ್ತಿಕೊಂಡಿದ್ದೇವೆ. ಈಕಾರ್ಯಕ್ರಮ ಈಗಾಗಲೇ ಫಲ ನೀಡುತ್ತಿದ್ದು, ನಮ್ಮ ಅತ್ಯಂತ ಪವಿತ್ರ ನದಿ ಗಂಗಾ ಸದ್ಯದಲ್ಲೇ ಪುನರುಜ್ಜೀವನ ಪಡೆದುಕೊಳ್ಳಲಿದೆ.
ಭಾರತ ಮೂಲತಃ ಕೃಷಿಯನ್ನಾಧರಿಸಿದ ದೇಶ. ಕೃಷಿಗೆ ನೀರನ್ನು ಒದಗಿಸಲು ಸತತವಾಗಿ ಪ್ರಾಮುಖ್ಯತೆ ನೀಡಲಾಗುತ್ತಿದೆ. ತೋಟಗಳೀಗೆ ನೀರು ಒದಗಿಸಲು ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಯನ್ನುಆರಂಭಿಸಲಾಗಿದೆ. 'ಪ್ರತಿ ಹನಿಗೂ ಹೆಚ್ಚು ಬೆಳೆ', ನಮ್ಮ ಧ್ಯೇಯವಾಗಿದೆ.
ನಮ್ಮ ರೈತರು ಕೃಷಿ ತ್ಯಾಜ್ಯವನ್ನು ಬೆಂಕಿಗೆ ಹಾಕುವುದರ ಬದಲಿಗೆ ಅದನ್ನು ಮೌಲ್ಯಯುತ ಪೌಷ್ಠಿಕಾಂಶದ ಗೊಬ್ಬರವನ್ನಾಗಿ ಮಾಡಲು ಬೃಹತ್ ಆಂದೋಲನವನ್ನು ಕೈಗೆತ್ತಿಕೊಂಡಿದ್ದೇವೆ.
ಸಹೋದರ, ಸಹೋದರಿಯರೇ,
ಇಡೀ ವಿಶ್ವವೇ ಅನುಕೂಲಕರವಲ್ಲದ ಸತ್ಯದತ್ತ ಗಮನಹರಿಸುತ್ತಿರಬೇಕಾದರೆ ನಾವು ಅನುಕೂಲಕರ ಕ್ರಿಯೆಯತ್ತ ಮುಂದಾಗಿದ್ದೇವೆ.
ಭಾರತದ ನೇತೃತ್ವದಲ್ಲಿ ಫ್ರಾನ್ಸ್ ನೊಂದಿಗೆ ಅನುಕೂಲಕರ ಕ್ರಿಯೆ ಕೈಗೆತ್ತಿಕೊಂಡ ಪರಿಣಾಮ ಅಂತಾರಾಷ್ಟ್ರೀಯ ಸೌರ ಮೈತ್ರಿ ಏರ್ಪಟ್ಟಿತು. ಇದು ಬಹುಶಃ ಪ್ಯಾರಿಸ್ ಒಪ್ಪಂದದ ನಂತರ ಪರಿಸರ ಉದ್ದೇಶಕ್ಕಾಗಿಏರ್ಪಟ್ಟ ಏಕೈಕ ಪ್ರಮುಖ ಜಾಗತಿಕ ಬೆಳವಣಿಗೆಯಾಗಿದೆ.
ಮೂರು ತಿಂಗಳ ಹಿಂದೆ ಸುಮಾರು 45 ರಾಷ್ಟ್ರಗಳ ನಾಯಕರು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ನವದೆಹಲಿಯಲ್ಲಿ ಸಭೆ ಸೇರಿದ್ದರು. ಅದು ಅಂತಾರಾಷ್ಟ್ರೀಯ ಸೌರ ಮೈತ್ರಿಯ ಸ್ಥಾಪನಾಸಮಾವೇಶವಾಗಿತ್ತು. ನಮ್ಮ ಅನುಭವ ತಿಳಿಸುವುದೆಂದರೆ ಅಭಿವೃದ್ಧಿ ಪರಿಸರಸ್ನೇಹಿಯಾಗಿರಬೇಕು , ನಮ್ಮ ಹಸಿರು ಆಸ್ತಿಗೆ ದಕ್ಕೆ ಬಾರದಿರುವುದು ಮುಖ್ಯ ಆಶಯವಾಗಿತ್ತು.
ಗೆಳೆಯರೇ,
ವಿಶ್ವ ಪರಿಸರ ದಿನದ ಈ ಭಾಷಣದಲ್ಲಿ ಅತ್ಯಂತ ಮಹತ್ವದ ಈ ವರ್ಷದ ಸವಾಲೆಂದರೆ ಪ್ಲಾಸ್ಟಿಕ್. ಪ್ಲಾಸ್ಟಿಕ್ ಈಗ ಮನುಕುಲ ಎದುರಿಸುತ್ತಿರುವ ಅತಿದೊಡ್ಡ ಪಿಡುಗಾಗಿದೆ. ಇದರಲ್ಲಿ ಬಹುತೇಕ ಸಂಸ್ಕರಣಾ ಘಟಕಗಳಿಗೆಹೋಗುವುದಿಲ್ಲ ಮತ್ತು ಬಹುತೇಕ ಪ್ಲಾಸ್ಟಿಕ್ ಕೊಳೆಯುವುದಿಲ್ಲ ಅರ್ಥಾತ್ ಪರಿಸರದೊಂದಿಗೆ ಬೆರೆಯುವುದಿಲ್ಲ.
ಪ್ಲಾಸ್ಟಿಕ್ ಮಾಲಿನ್ಯ ಈಗಾಗಲೇ ನಮ್ಮ ಕಡಲ ಜೀವವೈವಿಧ್ಯದ ಮೇಲೆ ಮಾರಣಾಂತಿಕ ಪರಿಣಾಮವನ್ನು ಬೀರಿದೆ. ವಿಜ್ಞಾನಿಗಳು ಮತ್ತು ಮೀನುಗಾರರು ಅಪಾಯದ ಮುನ್ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲಿ ಮೀನುಹಿಡಿಯುವ ಪ್ರಮಾಣ ತಗ್ಗುತ್ತಿರುವುದು. ನೀರಿನ ಉಷ್ಣಾಂಶ ಪ್ರಮಾಣ ಹೆಚ್ಚಾಗುತ್ತಿರುವುದು ಮತ್ತು ಜಲಚರಗಳಿಗೆ ತೊಂದರೆಯಾಗುತ್ತಿರುವುದು ಸೇರಿದೆ.
ಕಡಲ ತೀರದಲ್ಲಿ ಬಿಸಾಕುವ ಸಣ್ಣ ಗಾತ್ರದ ಪ್ಲಾಸ್ಟಿಕ್ ದೊಡ್ಡ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.
ಭಾರತ ' ಸಮುದ್ರ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಸಿದ್ಧವಾಗುತ್ತಿವೆ, ನಮ್ಮ ಸಾಗರಗಳನ್ನು ರಕ್ಷಿಸಲು ಕೊಡುಗೆ ನೀಡುತ್ತಿದ್ದೇವೆ.
ಪ್ಲಾಸ್ಟಿಕ್ ಮಾಲಿನ್ಯ ಇದೀಗ ನಮ್ಮ ಆಹಾರ ಸರಪಳಿಯನ್ನು ಪ್ರವೇಶಿಸುತ್ತಿದೆ. ಸಣ್ಣ ಸಣ್ಣ ಪ್ಲಾಸ್ಟಿಕ್ ಇದೀಗ ನಮ್ಮ ಮೂಲ ಆಹಾರವಾದ ಉಪ್ಪು, ನೀರಿನ ಬಾಟಲ್ ಮತ್ತು ನಲ್ಲಿ ನೀರನ್ನು ಪ್ರವೇಶಿಸುತ್ತಿದೆ.
ಗೆಳೆಯರೇ,
ಭಾರತದಲ್ಲಿ ತಲಾ ಪ್ಲಾಸ್ಟಿಕ್ ಬಳಕೆ ಪ್ರಮಾಣ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅತಿ ಕಡಿಮೆ ಇದೆ.
ಸ್ವಚ್ಛತೆ ಮತ್ತು ನೈರ್ಮಲೀಕರಣ ಕುರಿತಂತೆ ನಮ್ಮ ರಾಷ್ಟ್ರೀಯ ಯೋಜನೆಯೆಂದರೆ 'ಸ್ವಚ್ಛ ಭಾರತ ಅಭಿಯಾನ' ಅದರಡಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ವಿಶೇಷ ಗಮನಹರಿಸಲಾಗುತ್ತಿದೆ.
ಈಗ್ಗೆ ಕೆಲ ಸಮಯದ ಹಿಂದೆ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದ ಪ್ರದರ್ಶನ ಮಳಿಗೆಗೆ ನಾನು ಭೇಟಿ ನೀಡಿದ್ದೆ, ಅದು ಕೆಲವು ಸಾಹಸಗಾಥೆಗಳನ್ನು ಪ್ರತಿಬಿಂಬಿಸುತ್ತದೆ. ಅದರಲ್ಲಿ ವಿಶ್ವಸಂಸ್ಥೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದ್ಯಮ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಇದ್ದಾರೆ. ಅವರು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮಾಡುತ್ತಿರುವ ಗಮನಾರ್ಹ ಕೆಲಸವನ್ನುಮುಂದುವರಿಸಲಿದ್ದಾರೆ ಎಂಬ ಭರವಸೆ ನನಗಿದೆ.
ಸಹೋದರ, ಸಹೋದಿಯರೇ,
ಪರಿಸರ ಅವನತಿಯಾಗುತ್ತಿರುವುದರಿಂದ ಹೆಚ್ಚಾಗಿ ಬಡವರು ಹಾಗೂ ದುರ್ಬಲ ವರ್ಗವದರಿಗೆ ತೊಂದರೆಯಾಗುತ್ತದೆ.
ಭೌತಿಕ ಶ್ರೇಯೋಭಿವೃದ್ಧಿ ನಮ್ಮ ಪರಿಸರದ ಜೊತೆ ಯಾವುದೇ ರಾಜಿ ಮಾಡಿಕೊಳ್ಳದಂತೆ ಖಾತ್ರಿ ಪಡಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
2030ರ ಸುಸ್ಥಿರ ಅಭಿವೃದ್ಧಿಯ ಗುರಿಯ ಭಾಗವಾಗಿ 'ಯಾರೊಬ್ಬರನ್ನೂ ಹಿಂದೆ ಬಿಡುವಂತಿಲ್ಲ' ಎಂಬ ಧ್ಯೇಯವಾಕ್ಯವನ್ನು ಇಡೀ ವಿಶ್ವವೇ ಒಪ್ಪಿಕೊಂಡಿದೆ. ನಮಗೆ ಸರ್ವಸ್ವವನ್ನೂ ನೀಡಿರುವ ಪ್ರಕೃತಿ ಮಾತೆಯನ್ನು ರಕ್ಷಿಸಲು ನಾವೆಲ್ಲರೂ ಒಗ್ಗೂಡಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಇದು ಸಾಧ್ಯವಾಗುವುದಿಲ್ಲ.
ಗೆಳೆಯರೇ,
ಇದು ಭಾರತದ ಹಾದಿಯಾಗಿದೆ. ವಿಶ್ವ ಪರಿಸರ ದಿನದ ಈ ಪವಿತ್ರ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ನಾವು ಈ ಅಂಶವನ್ನು ಹಂಚಿಕೊಳ್ಳಲು ನಮಗೆ ಸಂತೋಷವಾಗುತ್ತಿದೆ.
ಒಟ್ಟಾರೆ 2018ರ ವಿಶ್ವ ಪರಿಸರ ದಿನದ ಜಾಗತಿಕ ಆತಿಥ್ಯವಹಿಸಿರುವ ನಾವು ಸುಸ್ಥಿರ ಅಭಿವೃದ್ಧಿಗೆ ಬದ್ಧವಾಗಿದ್ದೇವೆ ಎಂದು ಮತ್ತೆ ಪುನರುಚ್ಚರಿಸುತ್ತಿದ್ದೇವೆ.
ಪ್ಲಾಸ್ಟಿಕ್ ಮಾಲಿನ್ಯ ನಿಯಂತ್ರಣಕ್ಕೆ ಎಲ್ಲರೂ ಒಂದಾಗಿ ಬನ್ನಿ ಮತ್ತು ಈ ಗ್ರಹವನ್ನು ಜನಸಾಮಾನ್ಯರ ವಾಸಕ್ಕೆ ಅತ್ಯುತ್ತಮ ಸ್ಥಳವನ್ನಾಗಿ ಮಾಡೋಣ.
ಇಂದು ನಾವು ಮಾಡುತ್ತಿರುವ ಆಯ್ಕೆಗಳು ನಮ್ಮ ಸಾಮೂಹಿಕ ಭವಿಷ್ಯವನ್ನು ನಿಗದಿಪಡಿಸುತ್ತದೆ.
ಆಯ್ಕೆಗಳು
ಅತ್ಯಂತ ಸುಲಭವೇನಲ್ಲ. ಆದರೆ ತಿಳುವಳಿಕೆ, ತಂತ್ರಜ್ಞಾನ ಮತ್ತು ನಿಜವಾದ ಜಾಗತಿಕ ಪಾಲುದಾರಿಕೆಯಿಂದಾಗಿ ನಾವು ಉತ್ತಮ ಆಯ್ಕೆಯನ್ನು ಮಾಡುತ್ತೇವೆ ಎಂಬ ಖಾತ್ರಿ ನನಗಿದೆ.
ಧನ್ಯವಾದಗಳು