ವಿಶ್ವ ಸಂಸ್ಥೆಯಲ್ಲಿ 27 ವರ್ಷಗಳ ಹಿಂದೆ ನಡೆದ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಮೊದಲ ಬಾರಿಗೆ ದಾದಾ ವಾಸ್ವಾನಿಯವರನ್ನು ಭೇಟಿ ಮಾಡಿದ್ದನ್ನು ಪ್ರಧಾನಿಯವರು ಸ್ಮರಿಸಿಕೊಂಡರು. 2013ರಲ್ಲಿ ಪುಣೆಯಲ್ಲಿ ದಾದಾ ವಾಸ್ವಾನಿಯವರನ್ನು ಭೇಟಿ ಮಾಡಿದ್ದನ್ನೂ ಕೂಡಾ ಪ್ರಧಾನಿಯವರು ನೆನಪಿಸಿಕೊಂಡರು.
ಮಾನವ ಕುಲಕ್ಕೆ ದಾದಾ ವಾಸ್ವಾನಿಯವರ ಸ್ವಾರ್ಥರಹಿತ ಸೇವೆಯನ್ನು ಪ್ರಧಾನಿಯವರು ಕೊಂಡಾಡಿದರು. ದಾದಾ ವಾಸ್ವಾನಿಯವರ ಸರಿಯಾದ ಆಯ್ಕೆಯ ಬಗೆಗಿನ ಚಿಂತನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿಯವರು, ಜನತೆ ಸರಿಯಾದ ಆಯ್ಕೆ ಮಾಡಿಕೊಳ್ಳುವ ಮೂಲಕ ಭ್ರಷ್ಟಾಚಾರ, ಜಾತೀಯತೆ, ಮಾದಕ ವಸ್ತು ಸೇವನೆ, ಅಪರಾಧದಂತಹ ಪಿಡುಗುಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು. 2022 ರಲ್ಲಿ ಭಾರತದ ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯ ಬಗ್ಗೆಯೂ ಪ್ರಧಾನಿಯವರು ಮಾತನಾಡಿದರು. ಅಂದಿನ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸನ್ನು ನನಸು ಮಾಡುವ ಕಾಲ ಸನ್ನಿಹಿತವಾಗಿದೆ ಎಂದು ಪ್ರಧಾನಿಯವರು ಹೇಳಿದರು. ದಾದಾ ವಾಸ್ವಾನಿಯವರ ಸಮಾಜಸೇವಾ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಅವರು ಒತ್ತಾಯಿಸಿದರು.
ಪ್ರಧಾನಿಯವರ ಭಾಷಣ ಈ ರೀತಿಯಲ್ಲಿದೆ:
ಪೂಜ್ಯ ದಾದಾ ಜೆ.ಪಿ. ವಾಸ್ವಾನಿಯವರಿಗೆ 99ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು. ಇಂದು ದಾದಾ ವಾಸ್ವಾನಿಯವರ ಜನ್ಮದಿನ, ಅವರಿಂದ ಆಶೀರ್ವಾದ ಪಡೆಯುವ ಸೌಭಾಗ್ಯ ನನ್ನದಾಗಿದೆ. ಇಂದು ದಾದಾ ವಾಸ್ವಾನಿಯವರು 100ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ, ನಾನು ತಮಗೆಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ದಾದಾ ವಾಸ್ವಾನಿಯವರ ಅನುಯಾಯಿಗಳಿಗೆ ಅವರ ನಿರ್ಮಲ ಮತ್ತು ನಿಷ್ಕಲ್ಮಷವಾದ ಮುಗುಳ್ನಗೆ ಚಿರಪರಿಚಿತ. ಅವರ ಸರಳತೆಯ ಪರಿಚಯ ನನಗೆ 27 ವರ್ಷಗಳ ಹಿಂದೆ ಆಗಿತ್ತು.
ವಿಶ್ವಸಂಸ್ಥೆಯಲ್ಲಿ ನಡೆದ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ನನಗೆ ಲಭಿಸಿತ್ತು. ಅಂದು ನಾನು ದಾದಾ ವಾಸ್ವಾನಿಯವರ ಜತೆಗೆ ರಾಷ್ಟ್ರ ನಿರ್ಮಾಣ, ಸಾಮಾಜಿಕ ಜವಾಬ್ದಾರಿಗಳ ಕುರಿತು ಗಂಟೆಗಟ್ಟಲೇ ಚರ್ಚೆ ಮಾಡಿದ್ದೆ.
2013ರಲ್ಲಿ ನಾವಿಬ್ಬರೂ ಸೇರಿ ಸಾಧು ವಾಸ್ವಾನಿ ನರ್ಸಿಂಗ್ ಕಾಲೇಜನ್ನು ಉದ್ಘಾಟನೆ ಮಾಡಿದ್ದೆವು. ಕಳೆದ ವರ್ಷ ದಾದಾ ವಾಸ್ವಾನಿಯವರು ದಿಲ್ಲಿಗೆ ಆಗಮಿಸಿದ್ದ ವೇಳೆ ಅವರನ್ನು ಭೇಟಿಯಾಗುವ ಸೌಭಾಗ್ಯ ನನಗೆ ದೊರೆತಿತ್ತು. ಅಂದೂ ಕೂಡಾ ನಾವಿಬ್ಬರು ಶಿಕ್ಷಣ, ಆರೋಗ್ಯ ಮುಂತಾದ ವಿಷಯಗಳ ಬಗ್ಗೆ ತುಂಬಾ ಹೊತ್ತು ಮಾತನಾಡಿದ್ದೆವು. ಇಂದು ನನಗೆ ತಮ್ಮೊಡನೆ ಮುಖತ: ಭೇಟಿಯಾಗುವ ಅವಕಾಶ ದೊರೆತಿದ್ದರೆ ತುಂಬಾ ಸಂತೋಷವಾಗುತ್ತಿತ್ತು, ಆದರೆ ಕಾರ್ಯದೊತ್ತಡದಿಂದ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ದಾದಾ ವಾಸ್ವಾನಿಯವರ ವ್ಯಕ್ತಿತ್ವ ಆಧುನಿಕ ಭಾರತದ ಸಂತ ಪರಂಪರೆಯ ಆಧ್ಯಾತ್ಮಿಕ ಯಾತ್ರೆಯನ್ನು ಮುಂದುವರೆಸುತ್ತದೆ. ನಾನು ಅವರನ್ನು ಭೇಟಿಯಾದಾಗಲೆಲ್ಲ ಅವರ ವ್ಯಕ್ತಿತ್ವದಲ್ಲಿ ಸಂತೋಷ, ವಿನಮ್ರತೆ ಮತ್ತು ವಿಶ್ವಾಸದ ವಾಸ್ತವಿಕ ಶಕ್ತಿಯ ಅನುಭವವಾಗುತ್ತದೆ.
ಅನ್ಯರಿಗೋಸ್ಕರ ತನ್ನದೆಲ್ಲವನ್ನು ತ್ಯಾಗ ಮಾಡುವ ಪ್ರವೃತ್ತಿ ದಾದಾ ವಾಸ್ವಾನಿಯವರ ಜೀವನಾಧಾರವಾಗಿದೆ. ದಾದಾ ವಾಸ್ವಾನಿಯವರ ಒಂದು ಮಾತು ನನಗೆ ಸದಾ ನೆನಪಾಗುತ್ತದೆ. –
ತಾವು ಎಷ್ಟು ಒಳ್ಳೆಯದನ್ನು ಮಾಡಲು ಸಾಧ್ಯವೋ, ಮಾಡಿ,
ತಾವು ಎಷ್ಟು ಜನರಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಾಗುವುದೋ, ಮಾಡಿ,
ತಮಗೆ ಎಷ್ಟು ವಿಧಾನದಲ್ಲಿ ಒಳ್ಳೆಯದನ್ನು ಮಾಡಲು ಸಾಧ್ಯವೋ, ಮಾಡಿ
ಹಾಗೂ
ಎಷ್ಟು ಅಧಿಕ ಒಳ್ಳೆಯದು ಮಾಡಲಾಗುವುದೋ ಮಾಡಿ !!!
ದಾದಾ ವಾಸ್ವಾನಿಯವರ ಈ ದಿವ್ಯ ವಚನ ಮಾನವತೆ ಮತ್ತು ಸಶಕ್ತಿಕರಣದ ಬಾಗಿಲನ್ನು ತೆರೆದಿಡುತ್ತದೆ. ನಮ್ಮ ಸಮಾಜದಲ್ಲಿ ಎಷ್ಟೋ ದೀನರು, ದು:ಖಿಗಳು, ಬಡವರು, ದಲಿತರು, ಶೋಷಿತರು, ವಂಚಿತ ಸಮುದಾಯಗಳಿವೆ. ಅವರುಗಳು ತಮ್ಮ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಹೋರಾಡುತ್ತಿದ್ದಾರೆ, ಕಷ್ಟಪಡುತ್ತಿದ್ದಾರೆ. ಇಂತಹ ಜನರನ್ನು ಮೇಲೆತ್ತಲು, ಅವರ ಜೀವನ ಮಟ್ಟ ಸುಧಾರಿಸಲು ಸಾಧು ವಾಸ್ವಾನಿ ಮಿಷನ್ ಅನೇಕ ವರ್ಷಗಳಿಂದ ಪರಿಶ್ರಮ ಪಡುತ್ತಿದೆ.ನಾನು ಅವರಿಗೆ ಮನ:ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಮಿತ್ರರೇ, ತಮ್ಮೆಲ್ಲರ ಸಮ್ಮುಖದಲ್ಲಿ ಈ ಉತ್ಸವದ ಪ್ರಾರಂಭವಾಗುತ್ತಿರುವುದು ನನಗೆ ಸಂತಸವನ್ನುಂಟುಮಾಡಿದೆ. ತಾವು ಎರಡು ದಿನಗಳ ಮೊದಲು ಪ್ರಸ್ತಾಪಿಸಿದ ವಿಷಯದ ಬಗ್ಗೆ ನಾನಿಂದು ಮಾತನಾಡಲು ಬಯಸುತ್ತೇನೆ. “ಮೇಕ್ ದಿ ರೈಟ್ ಚಾಯ್ಸ್” – ಸರಿಯಾದ ವಿಷಯದ ಆಯ್ಕೆ – ವಿಷಯದ ಬಗೆಗಿನ ಚರ್ಚೆ ಇಂದು ಹೆಚ್ಚು ಪ್ರಸ್ತುತವಾಗಿದೆ.
ದಾದಾ ವಾಸ್ವಾನಿಯವರು ಜೀವನದಲ್ಲಿ ಸರಿ ಮತ್ತು ತಪ್ಪು ಆಯ್ಕೆಯ ಬಗೆಗೆ ಸುಂದರವಾಗಿ ತಮ್ಮ ವಿಚಾರವನ್ನು ವ್ಯಕ್ತಪಡಿಸಿದ್ದಾರೆ. ನಾನಿಂದು ಅದನ್ನು ಪುನರುಚ್ಚರಿಸಬಯಸುತ್ತೇನೆ.
ದಾದಾ ವಾಸ್ವಾನಿಯವರು ಹೇಳಿರುವಂತೆ –
“ಸರಿಯಾದ ಆಯ್ಕೆ ಮಾಡಿಕೊಳ್ಳಲು ನಾವು ನಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ನಾವು ನಮ್ಮ ಭಾವನೆಯನ್ನು ಶಾಂತರೀತಿಯಲ್ಲಿ ಇಟ್ಟುಕೊಳ್ಳಬೇಕು.
ಎಲ್ಲೆಡೆ ಭಗವಂತ ಇರುವನೆಂಬ ಭಾವನೆಯನ್ನು ಇಟ್ಟುಕೊಂಡು ಬಿಚ್ಚು ಮನಸ್ಸಿನಿಂದ ವಿಚಾರ ಮಾಡಿದರೆ ಸರಿಯಾದ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಜೀವನದ ಪ್ರತಿಯೊಂದು ಅನುಭವವೂ ನಮಗೆ ಪಾಠವನ್ನು ಕಲಿಸುತ್ತದೆ. ಯಾವ ರೀತಿಯ ಪಾಠವನ್ನು ಕಲಿತುಕೊಳ್ಳಬೇಕು ಎಂಬುದು ನಮ್ಮನ್ನು ಅವಲಂಬಿಸಿದೆ.
ಇಂದಿನ ಯುವಜನತೆ ದಾದಾ ವಾಸ್ವಾನಿಯವರ ಈ ಮಾತುಗಳಿಂದ ಪ್ರೇರಣೆಯನ್ನು ಪಡೆದುಕೊಳ್ಳಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದ ಹಾದಿಯಲ್ಲಿ ಇಂತಹ ಪರಿಸ್ಥಿತಿಗಳಿಗೆ ಒಳಗಾಗಬೇಕಾಗುತ್ತದೆ.
ದೇಶದ ನಾಗರಿಕರು ಇಂದು ಸರಿ ಯಾವುದು ಮತ್ತು ತಪ್ಪು ಯಾವುದು ಎಂದು ಅರಿತಾಗಿಯೂ ಕೂಡಾ ತಪ್ಪನ್ನೇ ಆಯ್ಕೆ ಮಾಡಿಕೊಂಡಿರುವುದು ಸಮಾಜದಲ್ಲಿ ಇಂದು ವ್ಯಾಪಿಸಿರುವ ಎಲ್ಲಾ ಕೆಡುಕುಗಳಿಗೆ ಕಾರಣವಾಗಿದೆ. ಮನುಷ್ಯ ತನ್ನ ಜೀವನದಲ್ಲಿ ಸರಿಯಾದ ಆಯ್ಕೆ ಮಾಡುಕೊಳ್ಳುವ ಪ್ರವೃತ್ತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾದರೆ, ಭ್ರಷ್ಟಾಚಾರವಾಗಲಿ, ಜಾತೀಯತೆಯಾಗಲಿ, ಯಾವುದೇ ಅಪರಾಧವಾಗಲಿ, ಮಾದಕ ವಸ್ತು ಸೇವನೆ ಚಟವಾಗಲಿ ಇವೆಲ್ಲದರಿಂದ ನಾವು ಮುಕ್ತರಾಗಬಹುದಾಗಿದೆ. ಸಮಾಜ ಬಲಿಷ್ಠವಾಗಬೇಕಾದರೆ ಪ್ರತಿಯೊಬ್ಬರು ಸರಿಯಾದ ಆಯ್ಕೆಯನ್ನು ಮಾಡಿಕೊಂಡು ಅದರಲ್ಲಿ ಮುನ್ನಡೆದರೆ ಮಾತ್ರ ಸಾಧ್ಯ.
ಮಿತ್ರರೇ,
ಈ ವರ್ಷ ಚಂಪಾರಣ್ ಸತ್ಯಾಗ್ರಹಕ್ಕೆ ನೂರು ವರ್ಷಗಳು ತುಂಬಲಿವೆ, ಇದು ಅತ್ಯಂತ ಸಂತಸದ ವಿಷಯ. ಚಂಪಾರಣ್ ಸತ್ಯಾಗ್ರಹದ ಮೂಲಕ ಮಹಾತ್ಮಾ ಗಾಂಧಿಯವರು ದೇಶಕ್ಕೆ ಸತ್ಯಾಗ್ರಹದ ಶಕ್ತಿಯ ಪರಿಚಯ ಮಾಡಿಕೊಟ್ಟರಲ್ಲದೆ, ಸಾಮಾಜಿಕ ಪಿಡುಗುಗಳ ವಿರುದ್ಧ ಜನರನ್ನು ಒಗ್ಗೂಡಿಸುವ ಒಂದು ಶಕ್ತಿಯನ್ನಾಗಿ ರೂಪಿಸಿದರು. ಚಂಪಾರಣ್ ಸತ್ಯಾಗ್ರಹದ ಶತಾಬ್ಧಿ ವರ್ಷವನ್ನು ಸರ್ಕಾರ “ಸ್ವಚ್ಚಾಗ್ರಹ”ದ ರೂಪದಲ್ಲಿ ಆಚರಿಸುತ್ತಿದೆ. ದಾದಾ ವಾಸ್ವಾನಿ ಅವರ ಆಶೀರ್ವಾದ ಈ ಸ್ವಚ್ಚಾಗ್ರಹಕ್ಕೆ ಹೆಚ್ಚಿನ ಬಲ ನೀಡುತ್ತದೆ. ಇದು ಮಹಾತ್ಮಾಗಾಂಧಿಯವರು ಕಂಡ ಕನಸನ್ನು ಪೂರ್ಣಗೊಳಿಸುವಲ್ಲಿ ಸಹಾಯಕವಾಗಲಿದೆ.
ಸ್ವಚ್ಚತಾ ಆಂದೋಲನ ಇಂದು ದೇಶದಲ್ಲಿ ಜನಾಂದೋಲನವಾಗಿ ರೂಪುಗೊಂಡಿದೆ. 2 ಅಕ್ಟೋಬರ್ 2014 ರಲ್ಲಿ ಈ ಅಭಿಯಾನವನ್ನು ಪ್ರಾರಂಭ ಮಾಡಿದಾಗ ಗ್ರಾಮೀಣ ಸ್ವಚ್ಚತೆಯ ವ್ಯಾಪ್ತಿ ಶೇಕಡಾ 39ರಷ್ಟಿತ್ತು, ಅದು ಇಂದು ಶೇಕಡಾ 66ರಷ್ಟಾಗಿದೆ. ಒಂದು ಆರೋಗ್ಯಕರ ಪರಂಪರೆಯ ಪ್ರಾರಂಭವಾಗಿದೆ. ಇಂದು ಪ್ರತಿಯೊಂದು ಹಳ್ಳಿ, ಜಿಲ್ಲೆ, ರಾಜ್ಯ ತಮ್ಮನ್ನು ತಾವು ಬಯಲು ಶೌಚ ಮುಕ್ತವನ್ನಾಗಿ ಘೋಷಿಸಿಕೊಳ್ಳುವಲ್ಲಿ ಸ್ಪರ್ಧೆಗಿಳಿದಿವೆ. ಇಲ್ಲಿಯವರೆ ದೇಶದ 2 ಲಕ್ಷ, 17 ಸಾವಿರ ಹಳ್ಳಿಗಳು ಬಯಲು ಶೌಚಮುಕ್ತ ಹಳ್ಳಿಗಳೆಂದು ಘೋಷಿಸಿಕೊಂಡಿವೆ. ದೇಶದ 5 ರಾಜ್ಯಗಳು, ಹಿಮಾಚಲ ಪ್ರದೇಶ, ಹರಿಯಾಣ, ಉತ್ತರಾಖಂಡ್, ಸಿಕ್ಕಿಂ ಮತ್ತು ಕೇರಳ ಕೂಡಾ ಈ ಪಟ್ಟಿಯಲ್ಲಿವೆ. ಶಿಕ್ಷಣ, ಮಹಿಳಾ ಕಲ್ಯಾಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಾವೆಲ್ಲರೂ ಏನನ್ನಾದರೂ ಮಾಡುತ್ತಿದ್ದೀರಿ. ಸ್ವಚ್ಚಾಗ್ರಹದಲ್ಲಿ ತಮ್ಮ ಭಾಗವಹಿಸುವಿಕೆ ಜನರನ್ನು ಶಿಕ್ಷಿತರನ್ನಾಗಿ ಮಾಡುವುದಲ್ಲದೇ, ಅವರ ಅರೋಗ್ಯ ಸ್ಥಿತಿಯನ್ನೂ ಸುಧಾರಿಸಬಲ್ಲದು.
ಸ್ನೇಹಿತರೆ, ಇಟ್ಟಿಗೆ ಮತ್ತು ಕಲ್ಲನ್ನು ಜೋಡಿಸಿ ಶೌಚಾಲಯ ನಿರ್ಮಾಣ ಮಾಡಬಹುದು, ಕಾರ್ಮಿಕರನ್ನು ಒಟ್ಟುಗೂಡಿಸಿ ರಸ್ತೆಗಳನ್ನು ಸ್ವಚ್ಚಮಾಡಬಹುದು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳನ್ನು ಸ್ವಚ್ಚ ಮಾಡಬಹುದು ಆದರೆ ಅವುಗಳನ್ನು ನಿರಂತರವಾಗಿ ಸ್ವಚ್ಚವಾಗಿಡಬೇಕಾದರೆ ನಾವೆಲ್ಲರೂ ಒಟ್ಟುಗೂಡಿ ಪ್ರಯತ್ನ ಮಾಡಬೇಕಾಗಿದೆ ಎಂದು ನಾನು ಈ ಕಾರ್ಯಕ್ರಮದ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಪ್ರತಿಯೊಂದು ಸಂಸ್ಥೆಗಳಿಗೆ ಮನವಿ ಮಾಡಬಯಸುತ್ತೇನೆ.
ಸ್ವಚ್ಚತೆ ಒಂದು ವ್ಯವಸ್ಥೆಯಲ್ಲ, ಸ್ವಚ್ಚತೆ ಒಂದು ವೃತ್ತಿ. ಇದು ನಮ್ಮೆಲ್ಲರ ಸ್ವಭಾವವಾಗಲಿ, ಇದು ಬಹಳ ಅಗತ್ಯ. ಸ್ವಚ್ಚತೆಯನ್ನು ಒಂದು ಪ್ರವೃತ್ತಿಯನ್ನಾಗಿ ಸ್ವೀಕರಿಸಿ, ಗಮನವನ್ನು ಕೇಂದ್ರಿಕರಿಸಿ ನಿತ್ಯ ಅಭ್ಯಾಸ ಮಾಡಿದರೆ, ಈ ಪ್ರವೃತ್ತಿ ತನ್ನಿಂತಾನೆ ಸಮಾಜದ ಅಂಗವಾಗುವುದು. ಇದೇ ರೀತಿ ಪರಿಸರ ಸಂರಕ್ಷಣೆಯ ಬಗ್ಗೆಯೂ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವುದು ಅಗತ್ಯ.
ಹವಾಮಾನ ಬದಲಾವಣೆ ಇಂದು ವಿಶ್ವಾದ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ಕಾರ್ಯಕ್ರಮ, ತ್ಯಾಜ್ಯವನ್ನು ಇಂಧನವನ್ನಾಗಿಸುವ ಕಾರ್ಯಕ್ರಮಗಳು, ಸೌರಶಕ್ತಿಯ ಬಗ್ಗೆ ಜನಗಳಲ್ಲಿ ಆಸಕ್ತಿ ಬೆಳೆಸುವಂತಹ ಕಾರ್ಯಕ್ರಮಗಳು, ಜಲಸಂರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಿಂದ ನಮ್ಮ ಪ್ರಕೃತಿ ಮತ್ತು ಹವಾಮಾನವನ್ನು ಹೆಚ್ಚು ಶಕ್ತಿಯುತವನ್ನಾಗಿ ಮಾಡಬಹುದು.
ಸ್ನೇಹಿತರೆ,
ನನ್ನ ಬಗ್ಗೆ ದಾದಾ ವಾಸ್ವಾನಿ ಮತ್ತವರ ಸಂಸ್ಥೆಯ ವಿಶ್ವಾಸ ಎಷ್ಟಿದೆಯೆಂದರೆ ನಾನೂ ಕೂಡಾ ನನ್ನ ಸಂಸ್ಥೆಗೆ ಅಧಿಕಾರಪೂರ್ವಕವಾಗಿ ಒಂದು ಆಗ್ರಹವನ್ನು ಮಾಡಬಯಸುತ್ತೇನೆ. ನಮ್ಮ ದೇಶ 2022ಕ್ಕೆ ಸ್ವಾತಂತ್ರ್ಯೋತ್ಸವದ 75 ವರ್ಷಗಳನ್ನು ಆಚರಿಸಿಕೊಳ್ಳಲಿದೆ. ದಾದಾ ವಾಸ್ವಾನಿ ಅವರು ಸ್ವಯಂ ಸ್ವಾತಂತ್ರ ಸಂಗ್ರಾಮದ ನೇರ ಸಾಕ್ಷಿಯಾಗಿದ್ದಾರೆ. ದೇಶದ ಸ್ವಾತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಸ್ವಾತಂತ್ರ ಯೋಧರ ಕನಸುಗಳು ಇಂದೂ ಕೂಡಾ ಅಪೂರ್ಣವಾಗಿದೆ. 2022ರೊಳಗೆ ಇಂತಹ ಅಪೂರ್ಣ ಕನಸುಗಳನ್ನು ಸಂಪೂರ್ಣ ಮಾಡುವುದಕ್ಕಾಗಿ ದೇಶ ಇಂದು 2017ರಲ್ಲಿ ಒಂದು ಸಂಕಲ್ಪವನ್ನು ಮಾಡುತ್ತಿದೆ, ಆ ಸಂಕಲ್ಪವೇ “ನವ ಭಾರತ” – ನ್ಯೂ ಇಂಡಿಯಾ.
ದಾದಾ ವಾಸ್ವಾನಿಯವರ ಆಶೀರ್ವಾದ, ಸಾಧು ವಾಸ್ವಾನಿ ಮಿಷನ್ ನ ಇಚ್ಚಾಶಕ್ತಿ ಈ ಸಂಕಲ್ಪ ಸಿದ್ಧಿಗೆ ಸಹಾಯಕವಾಗಲಿದೆ. ಆದುದರಿಂದ ತಮ್ಮ ಸಂಸ್ಥೆಯೂ ಕೂಡಾ 2022 ಕ್ಕೆ ಒಂದು ಗುರಿಯನ್ನು ನಿಗದಿಮಾಡಿಕೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ. ಗುರಿಯೂ ಕೂಡಾ ಲೆಕ್ಕವಿಡಬಹುದಾದಷ್ಟಿರಲಿ. ಸ್ವಚ್ಚತಾ ಆಂದೋಲನಕ್ಕಾಗಿ ತಾವು ಪ್ರತಿವರ್ಷ 10 ಸಾವಿರ ಜನರೊಡನೆ ಸಂಪರ್ಕ ಸಾಧಿಸಿ ಅಥವಾ 20 ಸಾವಿರ, ಸೌರಶಕ್ತಿಗೆ ಉತ್ತೇಜನ ನೀಡಲು ಪ್ರತಿವರ್ಷ 5 ಸಾವಿರ ಜನರ ಬಳಿ ಹೋಗಬಹುದು ಅಥವಾ 10 ಸಾವಿರ ಜನರ ಬಳಿ, ಈ ಸಂಕಲ್ಪವನ್ನು ತಮ್ಮ ಸಂಸ್ಥೆ ತೆಗೆದುಕೊಳ್ಳಬೇಕಾಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿ, ಪ್ರತಿ ಪರಿವಾರ, ಪ್ರತಿ ಸಂಸ್ಥೆ ತಮ್ಮ ತಮ್ಮ ಗುರಿಗಳನ್ನು ನಿರ್ಧರಿಸಿಕೊಳ್ಳಬೇಕಿದೆ ಮತ್ತು ಅವುಗಳ ಸಾಧನೆಗೆ ಪರಿಶ್ರಮ ಪಡಬೇಕಿದೆ. ಆಗಿದ್ದಾಗ ಮಾತ್ರ ಗುರಿ ತಲುಪಬಹುದು ಹಾಗೂ ನವ ಭಾರತದ ಕನಸು ನನಸಾಗುವುದು.
ದಾದಾ ವಾಸ್ವಾನಿ ಅವರ ಜೀವನವನ್ನು ನೋಡಿ ನಾವು ಅವರನ್ನು ಪ್ರೀತಿಸುತ್ತೇವೆ, ಮತ್ತು ಅವರು ಯಾರನ್ನು ಪ್ರೀತಿಸುತ್ತಾರೆ ಎಲ್ಲರೂ ಸೇರಿ ಈ ಶತಾಬ್ಧಿ ವರ್ಷವನ್ನು ಹೇಗೆ ಆಚರಿಸಬೇಕು ಎಂದು ನಿರ್ಧರಿಸಬೇಕಾಗಿದೆ. ಈ ಶತಾಬ್ಧಿ ವರ್ಷ ಒಂದು ವಿಷಯದ ಬಗ್ಗೆ ಕೇಂದ್ರಿಕೃತವಾಗಬೇಕಾಗಿದೆ. ಅದರಲ್ಲಿ ಪ್ರತಿ ವ್ಯಕ್ತಿ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕು, ಸಮಾಜಕ್ಕಾಗಿ ಜೀವಿಸಬೇಕು ಎಂದು ನಾನು ಸಲಹೆ ನೀಡುತ್ತೇನೆ. ದಾದಾ ವಾಸ್ವಾನಿಯವರ ತಪಸ್ಸು ಸಾಕಾರಗೊಳ್ಳಲಿದೆ ಎಂಬ ವಿಶ್ವಾಸ ನನ್ನದಾಗಿದೆ. ದಾದಾ ವಾಸ್ವಾನಿಯವರ ಶಿಕ್ಷಣದಿಂದ ನಮಗೆ ಈ ಗುರಿಯನ್ನು ತಲುಪಲು ನಿರಂತರ ಪ್ರೇರಣೆ ದೊರಕಲಿದೆ. ಅವರ ಆಶೀರ್ವಾದ ನಮ್ಮ ಮೇಲೆ ಸದಾ ಹೀಗೆ ಇರಲಿ. ಈ ಆಶಯದೊಂದಿಗೆ ನಾನು ನನ್ನ ಮಾತುಗಳನ್ನು ಪೂರ್ಣಗೊಳಿಸುತ್ತೇನೆ. ಮತ್ತೊಮ್ಮೆ ತಮ್ಮೆಲ್ಲರಿಗೂ ತುಂಬು ಹೃದಯದ ಶುಭಾಶಯಗಳು.
ಧನ್ಯವಾದಗಳು !!!
ಅಂತ್ಯದಲ್ಲಿ, ದಾದಾ ವಾಸ್ವಾನಿಯವರು ಪ್ರಧಾನಿಯವರಿಗೆ ಧನ್ಯವಾದಗಳನ್ನು ಅರ್ಪಿಸಿ, ಮೋದಿಯವರು ವಿಶ್ವದ ಅತ್ಯಂತ ದೊಡ್ಡ ನಾಯಕ ಎಂದು ಬಣ್ಣಿಸಿದರು. ಪ್ರಧಾನಿಯವರು ಕೈಗೊಂಡ ಯೋಜನೆಗಳಾದ ಜನಧನ್ ಯೋಜನೆ, ಮೇಕ್ ಇನ್ ಇಂಡಿಯಾ, ಸ್ವಚ್ಚಭಾರತ ಮೊದಲಾದ ಕಾರ್ಯಕ್ರಮಗಳು ಗೋಚರ ಪರಿಣಾಮಗಳನ್ನು ಉಂಟುಮಾಡಿವೆ ಎಂದು ಅವರು ಬಣ್ಣಿಸಿದರು. ಭಾರತ ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹವಾಗಿ ಬದಲಾವಣೆ ಕಂಡಿದೆ ಎಂದು ವಾಸ್ವಾನಿ ಅವರು ಹೇಳಿದರು. ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷಣ ದೇಶ ಕಟ್ಟುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ರಾಜಕೀಯದಿಂದಲ್ಲ ಎಂದು ದಾದಾ ವಾಸ್ವಾನಿಯವರು ಹೇಳಿದರು. ಎಲ್ಲ ಭಾರತೀಯರು ಹೆಮ್ಮೆ ಪಡುವಂತಹ ರಾಷ್ಟ್ರವೊಂದನ್ನು ನಿರ್ಮಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕೆಂದು ಅವರು ಕರೆ ನೀಡಿದರು.