ಕೊಯಮತ್ತೂರಿನಲ್ಲಿ ಶ್ರೀ ರಾಮಕೃಷ್ಣ ಮಠ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಶಿಕಾಗೋ ಭಾಷಣದ 125ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.
ಈ ಆಚರಣೆಯು ‘ಭಾರತದ ಬಗ್ಗೆ ಪಾಶ್ಚಿಮಾತ್ಯರು ನೋಡುತ್ತಿದ್ದ ದೃಷ್ಟಿಕೋನವನ್ನು ಬದಲಾಯಿಸುವಲ್ಲಿ ಮತ್ತು ಭಾರತೀಯ ಚಿಂತನೆ ಮತ್ತು ತತ್ವಜ್ಞಾನವನ್ನು ಸರಿಯಾದ ಸ್ಥಾನದಲ್ಲಿ ಗುರುತಿಸುವಂತೆ ಮಾಡುವಲ್ಲಿ ಸ್ವಾಮೀಜಿ ಅವರ ಭಾಷಣ ಎಷ್ಟು ಪ್ರಭಾವ ಬೀರಿದೆ’ ಎಂಬುದನ್ನು ತೋರಿಸುತ್ತದೆ” ಎಂದು ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಹೇಳಿದರು.
ಸ್ವಾಮಿ ವಿವೇಕಾನಂದರು ವೈದಿಕ ತತ್ತ್ವಶಾಸ್ತ್ರದ ಭವ್ಯತೆಯನ್ನು ಜಗತ್ತಿಗೆ ಪರಿಚಯಿಸಿದರು ಎಂದು ಪ್ರಧಾನ ಮಂತ್ರಿ ಹೇಳಿದರು. “ಶಿಕಾಗೋದಲ್ಲಿ ಅವರು ವಿಶ್ವಕ್ಕೆ ವೈದಿಕ ತತ್ವಶಾಸ್ತ್ರದ ಬಗ್ಗೆ ಬೋಧಿಸಿದರು ಮತ್ತು ಭಾರತದ ಶ್ರೀಮಂತ ಪರಂಪರೆ ಮತ್ತು ಅದಮ್ಯ ಸಾಮರ್ಥ್ಯವನ್ನು ನೆನಪಿಸಿದರು ಎಂದರು. ಅವರು ನಮಗೆ ಆತ್ಮವಿಶ್ವಾಸ, ನಮ್ಮ ಹಿರಿಮೆ ಮತ್ತು ನಮ್ಮ ಬೇರುಗಳನ್ನು ಮರಳಿ ತಂದುಕೊಟ್ಟರು” ಎಂದು ಪ್ರಧಾನಮಂತ್ರಿಯವರು ಹೇಳಿದರು.
ಸ್ವಾಮಿ ವಿವೇಕಾನಂದರ ಈ ನಿಲುವಿನಿಂದ “ಭಾರತವು ಪೂರ್ಣ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ” ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ ಸರ್ಕಾರದ ವಿವಿಧ ಉಪಕ್ರಮಗಳು ಮತ್ತು ಯೋಜನೆಗಳ ಬಗ್ಗೆಯೂ ಪ್ರಧಾನಿ ಮಾತನಾಡಿದರು.
ಪ್ರಧಾನಮಂತ್ರಿಯವರ ಭಾಷಣ ಪಠ್ಯ ಈ ಕೆಳಗಿನಂತಿದೆ:
“ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಮಾಡಿದ ಭಾಷಣದ 125ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿರುವುದು ನನ್ನ ಸೌಭಾಗ್ಯ. ಇಲ್ಲಿ 4 ಸಾವಿರ ಯುವ ಮತ್ತು ಹಿರಿಯ ಸ್ನೇಹಿತರು ಭಾಗಿಯಾಗಿದ್ದಾರೆ ಎಂದು ನನಗೆ ತಿಳಿಸಲಾಗಿದೆ.
ಕಾಕತಾಳೀಯ ಎಂಬಂತೆ 125 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಶಿಕಾಗೋದ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದಾಗಲೂ 4 ಸಾವಿರ ಸಭಿಕರಿದ್ದರಂತೆ.
ಶ್ರೇಷ್ಠ ಮತ್ತು ಸ್ಪೂರ್ತಿದಾಯಕವಾದ ಭಾಷಣದ ವಾರ್ಷಿಕೋತ್ಸವ ಆಚರಿಸುವ ಇತರೆ ಯಾವುದೇ ಉದಾಹರಣೆ ಇದೆ ಎಂಬುದು ನನಗೆ ತಿಳಿದಿಲ್ಲ.
ಬಹುಶಃ ಇರಲಿಕ್ಕಿಲ್ಲ.
ಈ ಆಚರಣೆಯು ‘ಭಾರತದ ಬಗ್ಗೆ ಪಾಶ್ಚಿಮಾತ್ಯರು ನೋಡುತ್ತಿದ್ದ ದೃಷ್ಟಿಕೋನವನ್ನು ಬದಲಾಯಿಸುವಲ್ಲಿ ಮತ್ತು ಭಾರತೀಯ ಚಿಂತನೆ ಮತ್ತು ತತ್ವಜ್ಞಾನವನ್ನು ಸರಿಯಾದ ಸ್ಥಾನದಲ್ಲಿ ಗುರುತಿಸುವಂತೆ ಮಾಡುವಲ್ಲಿ ಸ್ವಾಮೀಜಿ ಅವರ ಭಾಷಣ ಎಷ್ಟು ಪ್ರಭಾವ ಬೀರಿದೆ’ ಎಂಬುದನ್ನು ತೋರಿಸುತ್ತದೆ” ಎಂದರು.
ನೀವು ಆಯೋಜಿಸಿರುವ ಶಿಕಾಗೋ ಭಾಷಣದ ಈ ವಾರ್ಷಿಕೋತ್ಸವವು ಇನ್ನೂ ಹೆಚ್ಚು ವಿಶೇಷವಾದುದಾಗಿದೆ.
ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ನೊಂದಿಗೆ ಸಂಪರ್ಕ ಹೊಂದಿರುವ ಪ್ರತಿಯೊಬ್ಬರಿಗೂ, ತಮಿಳುನಾಡು ಸರ್ಕಾರ, ಐತಿಹಾಸಿಕ ಭಾಷಣದ ಸಮಾರೋಪದ ಅಂಗವಾಗಿ ಇಲ್ಲಿ ನೆರೆದಿರುವ ನನ್ನ ಸಾವಿರಾರು ಯುವ ಮಿತ್ರರುಗಳಿಗೆ ಅಭಿನಂದನೆಗಳು.
ಸಂತರ ವಿಶಿಷ್ಠ ಸಾತ್ವಿಕ ಗುಣ ಮತ್ತು ಚೈತನ್ಯದ ಸಂಗಮ ಮತ್ತು ಇಲ್ಲಿ ನೆರೆದಿರುವ ಯುವಜನರ ಉತ್ಸಾಹ ಭಾರತದ ನೈಜ ಶಕ್ತಿಯ ಸಂಕೇತವಾಗಿದೆ.
ನಾನು ನಿಮ್ಮೆಲ್ಲರಿಂದ ಬಹು ದೂರದಲ್ಲಿದ್ದೇನೆ ಆದಾಗ್ಯೂ ನಾನು ಆ ವಿಶಿಷ್ಠ ಚೈತನ್ಯದ ಅನುಭವ ಪಡೆಯುತ್ತಿದ್ದೇನೆ.
ನೀವು ಈ ದಿನವನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸುತ್ತಿಲ್ಲ ಎಂದು ನನಗೆ ತಿಳಿಸಲಾಗಿದೆ. ಮಠ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಸ್ವಾಮೀಜಿಯವರ ಸಂದೇಶಗಳನ್ನು ಪ್ರಸಾರ ಮಾಡಲು ಶಾಲಾ ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿದೆ. ನಮ್ಮ ಯುವ ಜನರು ಮಹತ್ವದ ವಿಷಯಗಳ ಮೇಲೆ ಚರ್ಚಿಸಿ, ಭಾರತ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸಿದ್ದಾರೆ. ಜನರ ಪಾಲ್ಗೊಳ್ಳುವಿಕೆಯ ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು ಈ ಸ್ಫೂರ್ತಿ, ಈ ನಿರ್ಧಾರವು, ಏಕ ಭಾರತ, ಶ್ರೇಷ್ಠ ಭಾರತದ ತತ್ವ – ಇದು ಸ್ವಾಮೀಜಿ ಅವರ ಸಂದೇಶದ ಸಾರವಾಗಿದೆ.
ಸ್ನೇಹಿತರೇ, ಸ್ವಾಮಿ ವಿವೇಕಾನಂದರು ತಮ್ಮ ಭಾಷಣದ ಮೂಲಕ ಇಡೀ ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ, ತತ್ವಜ್ಞಾನದ ಮತ್ತು ಸನಾತನ ಪರಂಪರೆಯ ಬೆಳಕನ್ನು ತೋರಿದರು.
ಹಲವಾರು ಮಂದಿ ಶಿಕಾಗೋ ಭಾಷಣದ ಬಗ್ಗೆ ಬರೆದಿದ್ದಾರೆ. ನೀವು ಇಂದು ನಿಮ್ಮ ದೀರ್ಘಚರ್ಚೆಯ ವೇಳೆ, ಅವರ ಭಾಷಣದ ಪ್ರಮುಖ ಅಂಶಗಳ ಬಗ್ಗೆ ಮಾತನಾಡಿದ್ದೀರಿ. ನಾವು ಸ್ವಾಮೀಜಿ ಅವರ ಸಂದೇಶಗಳತ್ತ ಹೋಗಿ, ಅವುಗಳಿಂದ ಹೊಸ ಸಂಗತಿಗಳನ್ನು ಕಲಿಯುತ್ತೇವೆ. ನಾನು ಅವರ ಭಾಷಣದ ಪರಿಣಾಮವನ್ನು ವಿವರಿಸಲು ಸ್ವಾಮೀಜಿಯವರ ಪದಗಳನ್ನೇ ಬಳಸುತ್ತೇನೆ. ಚೆನ್ನೈನಲ್ಲಿ ಅವರಿಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಹೀಗೆ ಹೇಳಿದ್ದರು “ಶಿಕಾಗೋ ಸರ್ವಧರ್ಮ ಸಮ್ಮೇಳನ ಭಾರತ ಮತ್ತು ಭಾರತೀಯ ಚಿಂತನೆಗಳಿಗೆ ಸಿಕ್ಕ ಅಭೂತಪೂರ್ವ ಯಶಸ್ಸು. ಇದು ಜಗತ್ತಿನಾದ್ಯಂತ ಹರಿಯುತ್ತಿರುವ ವೇದಾಂತದ ಅಲೆಯಿಂದ ಸಾಧ್ಯವಾಯಿತು”.
ಸ್ನೇಹಿತರೇ,
ಸ್ವಾಮೀಜಿ ಅವರ ಜೀವಿತಾವಧಿಯನ್ನು ನೀವು ಸ್ಮರಿಸಿದಲ್ಲಿ, ಸ್ವಾಮೀಜಿಯವರ ಸಾಧನೆ ಹೆಚ್ಚು ಶ್ರೇಷ್ಠವಾಗಿ ಕಾಣುತ್ತದೆ.
ನಮ್ಮ ದೇಶ ಆಗ ವಿದೇಶೀ ಆಡಳಿತದ ಸಂಕೋಲೆಯಲ್ಲಿತ್ತು. ನಾವು ಬಡತನದಲ್ಲಿದ್ದೆವು, ನಮ್ಮ ಸಮಾಜವನ್ನು ಕೀಳಾಗಿ ಕಾಣಲಾಗುತ್ತಿತ್ತು, ಹಲವು ಸಾಮಾಜಿಕ ಪಿಡುಗುಗಳು ನಮ್ಮ ಸಾಮಾಜಿಕ ಚೌಕಟ್ಟಿನ ಭಾಗವಾಗಿದ್ದವು.
ವಿದೇಶೀ ಆಡಳಿತಗಾರರು, ಅವರ ನ್ಯಾಯಮೂರ್ತಿಗಳು, ಅವರ ಬೋಧಕರು, ನಮ್ಮ ಸಾವಿರಾರು ವರ್ಷಗಳ ಸನಾತನ ಪರಂಪರೆ ಮತ್ತು ಜ್ಞಾನವನ್ನು ಕೀಳಾಗಿ ಕಾಣುವ ಯಾವ ಅವಕಾಶವನ್ನೂ ಕೈಚೆಲ್ಲುತ್ತಿರಲಿಲ್ಲ.
ನಮ್ಮ ಸ್ವಂತ ಜನರಿಗೆ ನಮ್ಮ ಸ್ವಂತ ಪರಂಪರೆಯನ್ನು ಕಡೆಗಣಿಸಿ ನೋಡುವಂತೆ ಕಲಿಸಲಾಗುತ್ತಿತ್ತು. ಅವರನ್ನು ತಮ್ಮ ಬೇರುಗಳಿಂದ ಕತ್ತರಿಸಿ ದೂರಮಾಡುತ್ತಿದ್ದರು. ಸ್ವಾಮೀಜಿ ಈ ಮನೋಭಾವವನ್ನು ಪ್ರಶ್ನಿಸಿದರು. ಭಾರತೀಯ ಸಂಸ್ಕೃತಿ ಮತ್ತು ತಾತ್ವಿಕ ಚಿಂತನೆಯ ಜ್ಞಾನದ ಮೇಲೆ ಸಂಗ್ರಹವಾದ ಶತಮಾನಗಳ ಧೂಳನ್ನು ತೆರವುಗೊಳಿಸುವ ಕಾರ್ಯವನ್ನು ಅವರು ವಹಿಸಿಕೊಂಡರು.
ಅವರು ವೈದಿಕ ತತ್ವಜ್ಞಾನದ ವೈಭವವನ್ನು ಜಗತ್ತಿಗೆ ಪರಿಚಯಿಸಿದರು. ಶಿಕಾಗೋದಲ್ಲಿ ವೈದಿಕ ತತ್ವಜ್ಞಾನದ ಬಗ್ಗೆ ಬೋಧಿಸಿದರು ಜೊತೆಗೆ ದೇಶದ ಶ್ರೀಮಂತ ಪರಂಪರೆ ಮತ್ತು ಅದ್ಭುತ ಸಾಮರ್ಥ್ಯವನ್ನೂ ನೆನಪಿಸಿದರು. ಅವರು ನಮಗೆ ನಮ್ಮ ಬೇರು, ನಮ್ಮ ಹಿರಿಮೆ ಮತ್ತು ಆತ್ಮವಿಶ್ವಾಸವನ್ನು ಮರಳಿ ತಂದುಕೊಟ್ಟರು.
ಸ್ವಾಮೀಜಿಯವರು ನಮ್ಮೆಲ್ಲರಿಗೂ “ಆಧ್ಯಾತ್ಮಿಕತೆ ಮತ್ತು ತತ್ವಜ್ಞಾನಗಳು ಮತ್ತೆ ಮತ್ತೆ ಅಲೆಗಳೋಪಾದಿಯಲ್ಲಿ ಹೊರ ಬಂದು, ಜಗತ್ತನ್ನು ಮಹಾಪೂರದಂತೆ ತೊಳೆದಿರುವ ಭೂಮಿ ನಮ್ಮದಾಗಿದೆ; ಮತ್ತು ಇದು ಕದಡುತ್ತಿರುವ ಮನುಕುಲಕ್ಕೆ ಜೀವಂತಿಕೆ, ಚೈತನ್ಯವನ್ನು ತರುವ ಆಲೆಗಳನ್ನು ಎಬ್ಬಿಸುತ್ತಿರುವ ನೆಲವಾಗಿದೆ” ಎಂಬುದನ್ನು ಸ್ಮರಿಸುವಂತೆ ಮಾಡಿದರು. ಸ್ವಾಮೀಜಿ ಈ ವಿಶ್ವದಲ್ಲಿ ತಮ್ಮ ಹೆಜ್ಜೆಗುರುತುಗಳನ್ನಷ್ಟೇ ಬಿಟ್ಟುಹೋಗಲಿಲ್ಲ, ಜೊತೆಗೆ ದೇಶದ ಸ್ವಾತಂತ್ರ್ಯ ಚಳವಳಿಗೆ ಹೊಸ ಚೈತನ್ಯ ಮತ್ತು ಹೊಸ ವಿಶ್ವಾಸವನ್ನು ನೀಡಿದ್ದರು.
ನಾವು ಮಾಡಬಲ್ಲೆವು, ನಾವು ಸಮರ್ಥರು – ಎಂಬ ಭಾವನೆಯನ್ನು ದೇಶದ ಜನರಲ್ಲಿ ಅವರು ಜಾಗೃತಗೊಳಿಸಿದರು. ಇದುವೇ ಆತ್ಮ ವಿಶ್ವಾಸ, ಇದು ಯುವ ಸನ್ಯಾಸಿಯ ರಕ್ತದ ಕಣಕಣದಲ್ಲೂ ಆತ್ಮವಿಶ್ವಾಸ ತುಂಬಿತ್ತು. ಅವರು ದೇಶಕ್ಕೆ ಈ ಆತ್ಮವಿಶ್ವಾಸವನ್ನು ಮರಳಿ ತಂದುಕೊಟ್ಟರು. “ನಿಮ್ಮಲ್ಲಿ ವಿಶ್ವಾಸವಿಡಿ, ದೇಶವನ್ನು ಪ್ರೀತಿಸಿ” ಎಂಬುದು ಅವರ ಮಂತ್ರವಾಗಿತ್ತು.
ಸ್ನೇಹಿತರೇ,
ಸ್ವಾಮಿ ವಿವೇಕಾನಂದರ ಈ ದೃಷ್ಟಿಕೋನದೊಂದಿಗೆ ಭಾರತ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ. ನಮ್ಮಲ್ಲಿ ನಮಗೇ ವಿಶ್ವಾಸವಿದ್ದರೆ ಮತ್ತು ಶ್ರಮಪಟ್ಟ ಕಾರ್ಯ ನಿರ್ವಹಿಸಿದರೆ ನಾವು ಏನನ್ನು ತಾನೆ ಸಾಧಿಸಲು ಸಾಧ್ಯವಿಲ್ಲ ಹೇಳಿ?
ಉತ್ತಮ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಭಾರತವು ಯೋಗ ಮತ್ತು ಆಯುರ್ವೇದದಂಥಹ ಪುರಾತನ ಪರಂಪರೆಯನ್ನು ಹೊಂದಿದೆ; ಅದೇ ವೇಳೆ ಆಧುನಿಕ ತಂತ್ರಜ್ಞಾನದ ಶಕ್ತಿಯನ್ನು ಸಜ್ಜುಗೊಳಿಸುತ್ತಿದೆ ಎಂಬುದನ್ನು ಜಗತ್ತು ಗುರುತಿಸಿದೆ.
ಇಂದು, ಭಾರತ ಏಕಕಾಲದಲ್ಲಿ ನೂರು ಉಪಗ್ರಹಗಳನ್ನು ಉಡಾವಣೆ ಮಾಡುತ್ತಿರುವಾಗ, ಜಗತ್ತು ಮಂಗಳಯಾನ ಮತ್ತು ಗಗನಯಾನದ ಬಗ್ಗೆ ಚರ್ಚಿಸುತ್ತಿರುವಾಗ, ಇತರ ರಾಷ್ಟ್ರಗಳು ನಮ್ಮ ಡಿಜಿಟಲ್ ಆಪ್ ಭೀಮ್ ಪುನರಾವರ್ತಿಸಲು ಪ್ರಯತ್ನಿಸುತ್ತಿರುವುದು ದೇಶದ ಆತ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಾವು ಬಡಜನರ, ಶೋಷಿತರ ಮತ್ತು ದುರ್ಬಲರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದೇವೆ. ಇದರ ಪರಿಣಾಮ ನಮ್ಮ ಯುವಜನರು ಮತ್ತು ನಮ್ಮ ಹೆಣ್ಣುಮಕ್ಕಳ ಆತ್ಮವಿಶ್ವಾಸದಲ್ಲಿ ಕಾಣುತ್ತಿದೆ.
ಇತ್ತೀಚೆಗೆ, ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಆಟಗಾರರು, ನೀವು ಎಷ್ಟು ಬಡವರು, ನೀವು ಎಂಥ ಕುಟುಂಬದಿಂದ ಬಂದಿದ್ದೀರಿ ಎಂಬುದು ಮುಖ್ಯವಲ್ಲ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ನೀವೂ ದೇಶ ಹೆಮ್ಮೆ ಪಡುವಂತೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ದೇಶದಲ್ಲಿ ಇಂದು ದಾಖಲೆಯ ಬೆಳೆ ಉತ್ಪಾದನೆ ನಮ್ಮ ರೈತರಲ್ಲಿರುವ ದೃಷ್ಟಿಕೋನವನ್ನು ಪ್ರದರ್ಶಿಸುತ್ತದೆ. ದೇಶದ ವಾಣಿಜ್ಯ ವ್ಯಕ್ತಿಗಳು, ನಮ್ಮ ಕಾರ್ಮಿಕರು ಕೈಗಾರಿಕಾ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದಾರೆ. ನಿಮ್ಮಂಥ ಯುವ ಎಂಜಿನಿಯರುಗಳು, ಉದ್ಯಮಿಗಳು, ವಿಜ್ಞಾನಿಗಳು ದೇಶವನ್ನು ನವೋದ್ಯಮದ ಕ್ರಾಂತಿಯೆಡೆಗೆ ತೆಗೆದುಕೊಂಡು ಹೋಗುತ್ತಿದ್ದೀರಿ.
ಸ್ನೇಹಿತರೇ,
ಭಾರತದ ಭವಿಷ್ಯ ಯುವಜನರ ಮೇಲೆ ಅವಲಂಬಿತವಾಗಿದೆ ಎಂದು ಸ್ವಾಮೀಜಿ, ದೃಢವಾಗಿ ನಂಬಿದ್ದರು. ವೇದಗಳನ್ನು ಉಲ್ಲೇಖಿಸಿ ಅವರು “ಇದು ಯುವ, ಬಲಿಷ್ಠ ಮತ್ತು ಆರೋಗ್ಯಪೂರ್ಣ, ತೀಕ್ಷ್ಣ ಬುದ್ಧಿಶಕ್ತಿ, ಭಗವಂತನನ್ನು ತಲುಪುತ್ತದೆ.”ಎಂದು ಹೇಳುತ್ತಿದ್ದರು.
ನಮ್ಮ ಯುವಕರು ಒಂದು ಮಹತ್ವದ ಉದ್ದೇಶದೊಂದಿಗೆ ಮುಂದೆ ಸಾಗುತ್ತಿದ್ದಾರೆ ಎಂಬುದನ್ನು ನೋಡಿ ನನಗೆ ಸಂತೋಷವಾಗುತ್ತದೆ. ಯುವಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು, ಹೊಸ ಕಾರ್ಯ ಸಂಸ್ಕೃತಿ ಮತ್ತು ಹೊಸ ದೃಷ್ಟಿಕೋನವನ್ನು ತರುತ್ತಿದೆ. ಸ್ನೇಹಿತರೇ, ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ, ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದ್ದರೂ, ನಮ್ಮ ಹಲವು ಯುವಜನರು ಉದ್ಯೋಗಿಗಳಾಗುವ ನಿಟ್ಟಿನಲ್ಲಿ ಕೌಶಲ್ಯದಲ್ಲಿ ಹಿಂದೆ ಬಿದ್ದಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆ ಅವರಿಗೆ ಸೂಕ್ತವಾದ ಕೌಶಲವನ್ನು ನೀಡುವಲ್ಲಿ ವಿಫಲವಾಗಿದೆ ಎಂಬುದು ದುಃಖದ ಸಂಗತಿ.
ಯುವಕರಿಗೆ ಕೌಶಲ ಅಭಿವೃದ್ಧಿಯ ಮಹತ್ವವನ್ನು ಮನಗಂಡು, ಸರ್ಕಾರ ಕೌಶಲ್ಯಾಭಿವೃದ್ಧಿಗಾಗಿಯೇ ಪ್ರತ್ಯೇಕ ಸಚಿವಾಲಯವನ್ನೇ ರಚಿಸಿದೆ.
ಜೊತೆಗೆ, ನಮ್ಮ ಸರ್ಕಾರ ತಮ್ಮದೆ ಸ್ವಂತ ಕನಸುಗಳನ್ನು ನನಸು ಮಾಡಿಕೊಳ್ಳಲು ಬಯಸುವ ಯುವಜನರಿಗಾಗಿ ನಮ್ಮ ಸರ್ಕಾರ ಬ್ಯಾಂಕ್ ಗಳ ಬಾಗಿಲು ತೆರೆದಿದೆ.
ಮುದ್ರಾ ಯೋಜನೆಯಡಿಯಲ್ಲಿ ಈವರೆಗೆ 13 ಕೋಟಿಗೂ ಹೆಚ್ಚು ಸಾಲ ಸೌಲಭ್ಯ ನೀಡಲಾಗಿದೆ. ಈ ಯೋಜನೆಯು ದೇಶದ ಗ್ರಾಮೀಣ ಮತ್ತು ಪಟ್ಟಣಗಳಲ್ಲಿ ಸ್ವಯಂ ಉದ್ಯೋಗ ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸಿದೆ.
ಸರ್ಕಾರ ಕೂಡ ನವೋದ್ಯಮ ಭಾರತ ಅಭಿಯಾನದ ಅಡಿಯಲ್ಲಿ ನಾವಿನ್ಯಪೂರ್ಣ ಕಲ್ಪನೆಗಳಿಗೆ ಉತ್ತೇಜನ ನೀಡಲು ವೇದಿಕೆ ಒದಗಿಸುತ್ತಿದೆ.
ಇದರ ಫಲವಾಗಿ, 2016ರಲ್ಲಿ ಇದ್ದ ಸುಮಾರು 800ಕ್ಕೆ ಹೋಲಿಸಿದರೆ, ಕಳೆದ ಒಂದು ವರ್ಷದ ಅವಧಿಯಲ್ಲೇ 8000 ನವೋದ್ಯಮಗಳು ಮಾನ್ಯತೆಯ ಪ್ರಮಾಣಪತ್ರವನ್ನು ಪಡೆದಿವೆ. ಅಂದರೆ ಒಂದು ವರ್ಷದಲ್ಲಿ 10ಪಟ್ಟು ಹೆಚ್ಚಳವಾಗಿದೆ.
ಶಾಲೆಗಳಲ್ಲಿ ಕೂಡ ನಾವಿನ್ಯತೆಯ ವಾತಾವರಣ ಸೃಷ್ಟಿಸಲು “ಅಟಲ್ ನಾವಿನ್ಯ ಅಭಿಯಾನ” ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಮುಂದಿನ 5 ವರ್ಷಗಳ ಅವಧಿಯಲ್ಲಿ ದೇಶದಾದ್ಯಂತ ನಾವು 5000 ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಸ್ಥಾಪಿಸುವತ್ತ ಶ್ರಮಿಸುತ್ತಿದ್ದೇವೆ.
ನಾವಿನ್ಯಪೂರ್ಣ ಕಲ್ಪನೆಗಳನ್ನು ಹೊರತರಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ನಂಥ ಕಾರ್ಯಕ್ರಮಗಳನ್ನೂ ಜಾರಿಗೊಳಿಸಲಾಗಿದೆ.
ಸ್ನೇಹಿತರೆ,
ಸ್ವಾಮಿ ವಿವೇಕಾನಂದರು ನಮ್ಮ ಸಾಮಾಜಿಕ-ಆರ್ಥಿಕ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ್ದಾರೆ. ನಾವು ಉತ್ತುಂಗದಲ್ಲಿರುವ ವ್ಯಕ್ತಿಗೆ ಸರಿಸಮನಾಗಿ ಕಡುಬಡವರನ್ನೂ ಮೇಲೆತ್ತಿದಲ್ಲಿ, ಸಮಾಜದಲ್ಲಿ ಸಮಾನತೆ ಬರುತ್ತದೆ ಎಂದು ಹೇಳಿದ್ದಾರೆ. ನಾವು ಈ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಶ್ರಮಿಸುತ್ತಿದ್ದೇವೆ. ಜನ್ ಧನ್ ಖಾತೆಗಳ ಮೂಲಕ ಮತ್ತು ಭಾರತೀಯ ಅಂಚೆ ಪಾವತಿ ಬ್ಯಾಂಕ್ ಗಳ ಮೂಲಕ ನಾವು ಬಡಜನರ ಮನೆಯ ಬಾಗಿಲಿಗೇ ಬ್ಯಾಂಕ್ ಸೇವೆ ತೆಗೆದುಕೊಂಡು ಹೋಗಿದ್ದೇವೆ. ವಸತಿರಹಿತ ಬಡಜನರಿಗೆ ವಸತಿ ಯೋಜನೆ, ಗ್ಯಾಸ್ ಮತ್ತು ವಿದ್ಯುತ್ ಸಂಪರ್ಕ, ಆರೋಗ್ಯ ಮತ್ತು ವಿಮಾ ಯೋಜನೆಗಳನ್ನು ಕಡುಬಡವರ ಏಳಿಗೆಗಾಗಿ ಆರಂಭಿಸಲಾಗಿದೆ.
ಈ ತಿಂಗಳ 25ರಂದು, ನಾವು ಆಯುಷ್ಮಾನ್ ಭಾರತ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸುತ್ತಿದ್ದೇವೆ. ಈ ಯೋಜನೆಯಡಿಯಲ್ಲಿ ಗಂಭೀರವಾದ ಕಾಯಿಲೆಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಉಚಿತ ಆರೋಗ್ಯ ಚಿಕಿತ್ಸೆಯನ್ನು 10 ಕೋಟಿ ಬಡ ಕುಟುಂಬಗಳಿಗೆ ಖಾತ್ರಿ ಪಡಿಸಲಾಗುತ್ತಿದೆ. ಈ ಯೋಜನೆಗೆ ಸೇರ್ಪಡೆಯಾಗಿರುವ ತಮಿಳುನಾಡು ಸರ್ಕಾರ ಮತ್ತು ಅದರ ಜನತೆಯನ್ನು ನಾನು ಅಭಿನಂದಿಸುತ್ತೇನೆ.
ಬಡತನ ನಿರ್ಮೂಲನೆಯಷ್ಟೇ ನಮ್ಮ ದೃಷ್ಟಿಕೋನವಲ್ಲ, ಜೊತೆಗೆ, ದೇಶದಲ್ಲಿ ಬಡತನಕ್ಕೆ ಕಾರಣವಾಗುವುದನ್ನೇ ಮೂಲೋತ್ಪಾಟನೆ ಮಾಡುವುದಾಗಿದೆ.
9/11 ರ ಭಯೋತ್ಪಾದಕ ದಾಳಿಯು ಪ್ರಪಂಚದಾದ್ಯಂತ ಪ್ರತಿಧ್ವನಿಸಿತ್ತು – ಈ ದಿನವು ವಿಭಿನ್ನ ರೀತಿಯ ಘಟನೆಯ ವರ್ಷಾಚರಣೆಯೂ ಆಗಿದೆ ಎಂಬುದನ್ನು ನಾನು ನಿಮಗೆ ನೆನಪಿಸುತ್ತೇನೆ. ಈ ಸಮಸ್ಯೆಗೆ ರಾಷ್ಟ್ರ ಸಮುದಾಯ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿದೆ, ಆದರೆ, ನಿಜವಾಗಿಯೂ ಪರಿಹಾರ ಅಡಗಿರುವುದು ಸ್ವಾಮೀಜಿಯವರು ಜಗತ್ತಿಗೆ ಶಿಕಾಗೋದಲ್ಲಿ ತೋರಿಸಿಕೊಟ್ಟ ಸಹಿಷ್ಣುತೆ ಮತ್ತು ಸ್ವೀಕಾರದ ಮಾರ್ಗದಲ್ಲಿ ಕಾಣುತ್ತದೆ. ಸ್ವಾಮೀಜಿ ‘ಜಗತ್ತಿಗೆ ಸಹಿಷ್ಣುತೆ ಮತ್ತು ಸಾರ್ವತ್ರಿಕ ಸ್ವೀಕಾರವನ್ನು ಬೋಧಿಸಿದ ಧರ್ಮಕ್ಕೆ ಸೇರಿದವನು ಎಂಬ ಹೆಮ್ಮೆ ನನಗಿದೆ’ ಎಂದು ಹೇಳುತ್ತಾರೆ.
ಸ್ನೇಹಿತರೆ,
ಮುಕ್ತ ಕಲ್ಪನೆಗಳ ದೇಶ ನಮ್ಮದು. ಶತಮಾನಗಳಿಂದ ನಮ್ಮದು ವೈವಿಧ್ಯಮಯ ಕಲ್ಪನೆ ಮತ್ತು ಸಂಸ್ಕೃತಿಯ ನೆಲೆವೀಡಾಗಿದೆ. ಚರ್ಚಿಸಿ, ನಿರ್ಣಯಿಸುವ ಸಂಪ್ರದಾಯ ನಮ್ಮಲ್ಲಿದೆ. ಪ್ರಜಾಪ್ರಭುತ್ವ ಮತ್ತು ಚರ್ಚೆ ನಮ್ಮ ಶಾಶ್ವತ ಮೌಲ್ಯಗಳಾಗಿವೆ.
ಆದರೂ, ಸ್ನೇಹಿತರೆ, ನಮ್ಮ ಸಮಾಜ ಎಲ್ಲ ಪಿಡುಗುಗಳಿಂದ ಮುಕ್ತವಾಗಿಲ್ಲ. ವಿಶಿಷ್ಟ ವೈವಿಧ್ಯತೆಯ ಇಷ್ಟು ದೊಡ್ಡ ದೇಶದಲ್ಲಿ ಹಲವು ದೊಡ್ಡ ಸವಾಲುಗಳೂ ಇವೆ.
“ಎಲ್ಲ ಯುಗದಲ್ಲೂ ಹೆಚ್ಚೂ ಕಡಿಮೆ ಎಲ್ಲೆಡೆಯೂ ದೆವ್ವಗಳು ಇದ್ದೇ ಇದ್ದವು” ಎಂದು ವಿವೇಕಾನಂದರ ಆಗಾಗ್ಗೆ ಹೇಳುತ್ತಿದ್ದರು. ನಾವು ಸಮಾಜದಲ್ಲಿ ಅಂಥ ಪಿಡುಗುಗಳ ಬಗ್ಗೆ ಎಚ್ಚರದಿಂದ ಇರಬೇಕು ಮತ್ತು ಅವುಗಳನ್ನು ಮಣಿಸಬೇಕು. ನಮ್ಮ ವಿಲೇವಾರಿ ಎಲ್ಲ ಸಂಪನ್ಮೂಲಗಳ ಹೊರತಾಗಿಯೂ, ಭಾರತೀಯ ಸಮಾಜವನ್ನು ವಿಂಗಡಿಸಿದಾಗ, ಆಂತರಿಕ ಸಂಘರ್ಷಗಳು ಎದುರಾದಾಗ, ಬಾಹ್ಯ ಶತ್ರುಗಳು ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.
ಹೋರಾಟದ ಈ ಅವಧಿಯಲ್ಲಿ, ನಮ್ಮ ಸಂತರು, ಸಮಾಜ ಸುಧಾರಕರು ಸರಿಯಾದ ಮಾರ್ಗವನ್ನು ತೋರಿದ್ದಾರೆ – ಆ ಮಾರ್ಗ ನಮ್ಮನ್ನು ಮತ್ತೆ ಒಗ್ಗೂಡಿಸಿದೆ.
ನಾವು ಸ್ವಾಮಿ ವಿವೇಕಾನಂದರ ಪ್ರೇರಣೆಯೊಂದಿಗೆ ನವ ಭಾರತದ ನಿರ್ಮಾಣ ಮಾಡಬೇಕು.
ನಿಮ್ಮೆಲ್ಲರಿಗೂ ಅನಂತ ವಂದನೆಗಳನ್ನು ಸಲ್ಲಿಸುತ್ತಾ ನಾನು ನಮ್ಮ ಭಾಷಣವನ್ನು ಮುಗಿಸುತ್ತೇನೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ನೀವು ನನಗೆ ನೀಡಿದ್ದೀರಿ. ಶಾಲೆ ಮತ್ತು ಕಾಲೇಜುಗಳಲ್ಲಿ ಸ್ವಾಮೀಜಿ ಅವರ ಸಂದೇಶಗಳನ್ನು ಓದಿ, ಅರಿತು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದ ಎಲ್ಲ ಸಾವಿರಾರು ಸ್ನೇಹಿತರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನಿಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.