ಸ್ವಾಮಿ ವಿವೇಕಾನಂದರು ಆರಂಭಿಸಿದ, ರಾಮಕೃಷ್ಣ ಆಶ್ರಮದ ಮಾಸಿಕ ಪತ್ರಿಕೆ “ಪ್ರಬುದ್ಧ ಭಾರತ”ದ 125 ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪಾಲ್ಗೊಂಡು ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಸ್ವಾಮಿ ವಿವೇಕಾನಂದರು ಪತ್ರಿಕೆಗೆ “ಪ್ರಬುದ್ಧ ಭಾರತ” ಎಂದು ಹೆಸರಿಟ್ಟು ನಮ್ಮ ದೇಶದ ಸ್ಪೂರ್ತಿಯನ್ನು ಉದ್ದೀಪಿಸಿದರು ಎಂದು ಹೇಳಿದರು. ಸ್ವಾಮೀಜಿ ಅವರು ರಾಜಕೀಯ ಅಥವಾ ಭೌತಿಕ ಅಸ್ತಿತ್ವವನ್ನು ಮೀರಿದ “ಜಾಗೃತ ಭಾರತ” ವನ್ನು ನಿರ್ಮಾಣ ಮಾಡುವ ಆಶಯವನ್ನು ಹೊಂದಿದ್ದರು. “ಸ್ವಾಮಿ ವಿವೇಕಾನಂದರು ಭಾರತವನ್ನು ಶತಮಾನಗಳಿಂದ ಬದುಕಿರುವ ಮತ್ತು ಉಸಿರಾಡುತ್ತಿರುವ ಸಾಂಸ್ಕೃತಿಕ ಜಾಗೃತ ಭಾರತವನ್ನಾಗಿ ಕಂಡಿದ್ದರು” ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.
ಮೈಸೂರು ಮಹಾರಾಜಾ ಅವರಿಗೆ ಮತ್ತು ಸ್ವಾಮಿ ರಾಮಕೃಷ್ಣಾನಂದ ಅವರಿಗೆ ಸ್ವಾಮಿ ವಿವೇಕಾನಂದರು ಬರೆದ ಪತ್ರದ ಬಗ್ಗೆ ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು ಸ್ವಾಮೀಜಿ ಅವರು ಬಡವರನ್ನು ಸಶಕ್ತರನ್ನಾಗಿಸುವ ನಿಟ್ಟಿನಲ್ಲಿ ಮುಂದಿಟ್ಟ ಎರಡು ಪ್ರಮುಖ ಚಿಂತನೆಗಳನ್ನು ಒತ್ತಿ ಹೇಳಿದರು. ಮೊದಲನೆಯದಾಗಿ ಅವರು ಬಡವರಿಗೆ ಸುಲಭದಲ್ಲಿ ಸಶಕ್ತೀಕರಣದತ್ತ ಹೋಗಲು ಸಾಧ್ಯವಾಗದಿದ್ದರೆ ಸಶಕ್ತೀಕರಣವನ್ನು ಬಡವರವರೆಗೆ ಕೊಂಡೊಯ್ಯಬೇಕು ಎಂದರು. ಎರಡನೆಯದಾಗಿ ಅವರು ಭಾರತದ ಬಡವರ ಬಗ್ಗೆ ಹೇಳಿದರು- “ ಅವರಿಗೆ ಚಿಂತನೆಗಳನ್ನು ಕೊಡಬೇಕು, ಅವರ ಸುತ್ತಮುತ್ತಲಿನ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲು ಅವರ ಕಣ್ಣುಗಳನ್ನು ತೆರೆಸಬೇಕು ಮತ್ತು ಆ ಬಳಿಕ ಅವರು ತಮ್ಮ ಒಳಿತಿಗಾಗಿ, ಮುಕ್ತಿಗಾಗಿ ಕೆಲಸ ಮಾಡಲಾರಂಭಿಸುತ್ತಾರೆ” . ಭಾರತವು ಇಂದು ಇಂತಹ ಧೋರಣೆಯ ಮೂಲಕ ಮುನ್ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. “ಬಡವರಿಗೆ ಬ್ಯಾಂಕುಗಳನ್ನು ಸಂಧಿಸಲು ಸಾಧ್ಯವಾಗದಿದ್ದರೆ, ಆಗ ಬ್ಯಾಂಕುಗಳು ಬಡವರನ್ನು ತಲುಪಬೇಕು. ಜನ ಧನ್ ಯೋಜನಾ ಮಾಡಿದ್ದು ಇದನ್ನೇ. ಬಡವರು ವಿಮಾ ಸೌಲಭ್ಯವನ್ನು ಪಡೆಯಲಾರರು ಎಂದಾದರೆ, ಆಗ ವಿಮಾ ಸವಲತ್ತು ಅವರನ್ನು ತಲುಪಬೇಕು. ಜನ ಸುರಕ್ಷಾ ಯೋಜನೆ ಮಾಡಿದ್ದು ಇದನ್ನು. ಬಡವರು ಆರೋಗ್ಯ ರಕ್ಷಣೆ, ಶುಶ್ರೂಷಾ ಸೌಲಭ್ಯವನ್ನು ಪಡೆಯಲು ಅಸಮರ್ಥರಾದರೆ ಆಗ ಆರೋಗ್ಯ ಸೇವೆಯನ್ನು ನಾವೇ ಅವರಲ್ಲಿಗೆ ಕೊಂಡೊಯ್ಯಬೇಕು. ಇದನ್ನು ಆಯುಷ್ಮಾನ ಭಾರತ್ ಯೋಜನೆ ಮಾಡಿತು. ರಸ್ತೆಗಳು, ಶಿಕ್ಷಣ, ವಿದ್ಯುತ್, ಮತ್ತು ಅಂತರ್ಜಾಲ ಸಂಪರ್ಕಗಳನ್ನು ದೇಶದ ಮೂಲೆ ಮೂಲೆಗಳಿಗೆ ಕೊಂಡೊಯ್ಯಲಾಗುತ್ತಿದೆ. ಇದು ಬಡವರಲ್ಲಿ ಆಶೋತ್ತರಗಳನ್ನು ಉದ್ದೀಪಿಸುತ್ತಿದೆ. ಮತ್ತು ಈ ಆಶೋತ್ತರಗಳೇ ದೇಶದ ಬೆಳವಣಿಗೆಯ ಚಾಲಕ ಶಕ್ತಿಯಾಗಿವೆ” ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು.
ಕೋವಿಡ್ -19ರ ಅವಧಿಯಲ್ಲಿ ಭಾರತದ ಮುಂಜಾಗರೂಕತಾ ಕ್ರಮಗಳು ಬಿಕ್ಕಟ್ಟಿನ ಕಾಲದಲ್ಲಿ ಅಸಹಾಯಕರಾಗಬಾರದು ಎಂಬ ಸ್ವಾಮೀಜಿ ಅವರ ಧೋರಣೆಗೆ ಒಂದು ಉದಾಹರಣೆ. ಅದೇ ರೀತಿ ಹವಾಮಾನ ಬದಲಾವಣೆ ಸಮಸ್ಯೆ ಬಗ್ಗೆ ದೂರಿಕೊಳ್ಳುವುದಕ್ಕೆ ಬದಲು ಭಾರತವು ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ಮಾದರಿಯಲ್ಲಿ ಪರಿಹಾರಕ್ಕೆ ಹೊರಟಿತು. “ಇದು ಸ್ವಾಮಿ ವಿವೇಕಾನಂದರ ಚಿಂತನೆ/ಮುಂಗಾಣ್ಕೆಯ ಆಧಾರದಲ್ಲಿ ನಿರ್ಮಾಣವಾಗುತ್ತಿರುವ ಪ್ರಬುದ್ಧ ಭಾರತ. ಇದು ಜಗತ್ತಿನ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುವ ಭಾರತ” ಎಂದು ಪ್ರಧಾನ ಮಂತ್ರಿ ಬೆಟ್ಟು ಮಾಡಿದರು.
ಭಾರತಕ್ಕಾಗಿರುವ ಸ್ವಾಮಿ ವಿವೇಕಾನಂದರ ಬೃಹತ್ ಕನಸುಗಳು ಮತ್ತು ಭಾರತದ ಯುವಜನತೆಯಲ್ಲಿಯ ಅಪಾರ ನಂಬಿಕೆ ಭಾರತದ ವ್ಯಾಪಾರೋದ್ಯಮ ಪ್ರಮುಖರಲ್ಲಿ, ಕ್ರೀಡಾಳುಗಳಲ್ಲಿ, ತಂತ್ರಜ್ಞಾನಿಗಳಲ್ಲಿ, ವೃತ್ತಿಪರರಲ್ಲಿ, ವಿಜ್ಞಾನಿಗಳಲ್ಲಿ, ಅನ್ವೇಷಕರಲ್ಲಿ ಮತ್ತು ಇತರ ಹಲವಾರು ಜನರಲ್ಲಿ ಪ್ರತಿಫಲಿಸುತ್ತಿದೆ ಎಂದ ಪ್ರಧಾನ ಮಂತ್ರಿ ಅವರು ಸ್ವಾಮೀಜಿ ಅವರು ತಮ್ಮ ಉಪನ್ಯಾಸಗಳಲ್ಲಿ ಪ್ರಾಯೋಗಿಕ ವೇದಾಂತ ಕುರಿತಂತೆ ನೀಡಿರುವ ಸಲಹೆಗಳನ್ನು ಅನುಸರಿಸಿ ಮುಂದುವರೆಯುವಂತೆ ಯುವ ಜನತೆಗೆ ಕರೆ ನೀಡಿದರು.ಈ ಉಪನ್ಯಾಸಗಳಲ್ಲಿ ಅವರು ಹಿನ್ನಡೆಗಳನ್ನು ಮೀರುವ ಬಗ್ಗೆ ಮತ್ತು ಅವುಗಳನ್ನು ಕಲಿಕಾ ಸಾಧ್ಯತೆಯ ಭಾಗವನ್ನಾಗಿಸುವ ಬಗ್ಗೆ ಮಾತುಗಳನ್ನಾಡಿದ್ದಾರೆ. ಎರಡನೆಯ ಸಂಗತಿ ಎಂದರೆ ಜನರಲ್ಲ್ಲಿ ಅವರು ಈ ಸಂಗತಿಗಳು ಇರಬೇಕು ಎಂದು ಬಯಸಿದ್ದಾರೆ. ಅದೆಂದರೆ-ಭಯಮುಕ್ತರಾಗಿರಿ ಮತ್ತು ನಿಮ್ಮಲ್ಲಿ ತುಂಬು ನಂಬಿಕೆ ಇಡಿ ಎಂಬುದಾಗಿ. ವಿಶ್ವಕ್ಕೆ ಅಮೂಲ್ಯವಾದುದನ್ನು ನೀಡಿ ಅಜರಾಮರವಾಗಿರುವ ವಿವೇಕಾನಂದರನ್ನು ಅನುಸರಿಸುವಂತೆ ಯುವಜನತೆಗೆ ಕರೆ ನೀಡಿದ ಪ್ರಧಾನ ಮಂತ್ರಿ ಅವರು ಸ್ವಾಮಿ ವಿವೇಕಾನಂದರು ಆಧ್ಯಾತ್ಮ ಮತ್ತು ಆರ್ಥಿಕ ಪ್ರಗತಿಗಳು ಪ್ರತ್ಯೇಕ ಎಂದು ಪರಿಗಣಿಸಿರಲಿಲ್ಲ ಎಂಬುದರತ್ತಲೂ ಗಮನ ಸೆಳೆದರು. ಬಹಳ ಮುಖ್ಯವಾಗಿ ಬಡತನವನ್ನು ರಮ್ಯಗೊಳಿಸುವ ಜನರ ಧೋರಣೆಗೆ ಅವರು ವಿರೋಧಿಯಾಗಿದ್ದರು. ಸ್ವಾಮೀಜಿ ಅವರೊಬ್ಬ ಆಧ್ಯಾತ್ಮಿಕ ದಿಗ್ಗಜ, ಅತ್ಯಂತ ಶ್ರೇಷ್ಟ ಆತ್ಮ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಸ್ವಾಮೀಜಿಯವರು ಬಡವರ ಆರ್ಥಿಕ ಪ್ರಗತಿಯ ಚಿಂತನೆಯನ್ನು ನಿರಾಕರಿಸಿರಲಿಲ್ಲ ಎಂದೂ ನುಡಿದರು.
ಪ್ರಬುದ್ಧ ಭಾರತ 125 ವರ್ಷ ಕಾಲ ನಡೆದಿದೆ, ಸ್ವಾಮಿ ವಿವೇಕಾನಂದ ಜೀ ಅವರ ಚಿಂತನೆಗಳನ್ನು ಪ್ರಸಾರ ಮಾಡಿದೆ. ಯುವಕರಿಗೆ ಶಿಕ್ಷಣ, ಮತ್ತು ದೇಶದಲ್ಲಿ ಜಾಗೃತಿ ತತ್ವಗಳ ಚಿಂತನೆಗಳನ್ನು ಅದು ಅಧರಿಸಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಜರಾಮರಗೊಳಿಸುವಲ್ಲಿ ಅದು ಬಹಳ ಪ್ರಮುಖವಾದ ಕೊಡುಗೆಯನ್ನು ನೀಡಿದೆ ಎಂದೂ ಶ್ರೀ ಮೋದಿ ಬಣ್ಣಿಸಿದರು.