ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಮ್ಮು ಮತ್ತು ಕಾಶ್ಮೀರದಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ಯುವಕರು ಮತ್ತು ಮಕ್ಕಳ ಗುಂಪನ್ನು ಭೇಟಿ ಮಾಡಿದರು. ‘ವತನ್ ಕೊ ಜಾನೋ’ ಉಪಕ್ರಮದ ಭಾಗವಾಗಿ ಪ್ರಸ್ತುತ ಅವರು ಭಾರತದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.
ಈ ಯುವಕರು ಮತ್ತು ಮಕ್ಕಳು ಪ್ರಧಾನಮಂತ್ರಿಯವರ ದೈನಂದಿನ ಕಾರ್ಯಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ರಾಜ್ಯದಲ್ಲಿ ಕ್ರೀಡಾ ಸೌಲಭ್ಯ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಕೇಳಿದರು.
ಅವರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು ರಾಜ್ಯದಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕ ಸುಧಾರಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಬಗ್ಗೆ ಮಾತನಾಡಿದರು. ಅವರು ಕ್ರೀಡೆ ಮತ್ತು ಜನರಲ್ಲಿ ಕ್ರೀಡಾ ಮನೋಭಾವದ ಮಹತ್ವವನ್ನು ಪ್ರತಿಪಾದಿಸಿದರು. ಶ್ರಮಪಟ್ಟು ಕೆಲಸ ಮಾಡುವುದು ಎಂದಿಗೂ ಆಯಾಸಕ್ಕೆ ಕಾರಣವಾಗಬಾರದು ಮತ್ತು ಕಾಮಗಾರಿ ಪೂರ್ಣವಾಗುವುದು ಸತೃಪ್ತಿ ತರುತ್ತದೆ, ಅದು ಯಾವುದೇ ಆಯಾಸಕ್ಕಿಂತ ಮಿಗಿಲಾದ್ದು ಎಂದರು.
ಪ್ರಧಾನಮಂತ್ರಿಗಳ ಕಾರ್ಯಾಲಯದ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.