ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯಲ್ಲಿ ಜೆ.ಪಿ. ಮಾರ್ಗನ್ ಅಂತಾರಾಷ್ಟ್ರೀಯ ಮಂಡಳಿಯ ಸದಸ್ಯರನ್ನು ಭೇಟಿ ಮಾಡಿದರು. 2007 ರ ಬಳಿಕ ಅಂತಾರಾಷ್ಟ್ರೀಯ ಮಂಡಳಿಯು ಭಾರತದಲ್ಲಿ ಸೇರುತ್ತಿರುವುದು ಇದೇ ಮೊದಲು.
ಜಾಗತಿಕ ಮಟ್ಟದ ರಾಜನೀತಿ ತಜ್ಞರಾದ ಮಾಜಿ ಬ್ರಿಟಿಷ್ ಪ್ರಧಾನ ಮಂತ್ರಿ ಟೋನಿ ಬ್ಲೇರ್, ಆಸ್ಟ್ರೇಲಿಯಾದ ಮಾಜಿ ಪ್ರಧಾನ ಮಂತ್ರಿ ಜಾನ್ ಹೋವಾರ್ಡ್ , ಅಮೆರಿಕದ ಮಾಜಿ ರಾಜ್ಯಾಂಗ ಕಾರ್ಯದರ್ಶಿಗಳಾದ ಹೆನ್ರಿ ಕಿಸ್ಸಿಂಜರ್ ಮತ್ತು ಕಾಂಡೋಲಿಸಾ ರೈಸ್ , ಮಾಜಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಸಹಿತ ವ್ಯಾಪಾರೋದ್ಯಮ ಮತ್ತು ಹಣಕಾಸು ವಲಯದ ಪ್ರಮುಖ ವ್ಯಕ್ತಿಗಳಾದ ಜಮೈ ಡೈಮನ್ (ಜೆ.ಪಿ. ಮಾರ್ಗನ್ ಚೇಸ್ ) ರತನ್ ಟಾಟಾ (ಟಾಟಾ ಗುಂಪು), ಮತ್ತು ಜಾಗತಿಕ ಕಂಪೆನಿಗಳಾದ ನೆಸ್ಲೇ, ಅಲಿಬಾಬ, ಅಲ್ಫಾ, ಇಬರ್ಡೋಲಾ, ಕ್ರಾಫ್ಟ್ ಹೀಂಜ್ ಇತ್ಯಾದಿಗಳ ಪ್ರತಿನಿಧಿಗಳನ್ನು ಈ ಮಂಡಳಿ ಒಳಗೊಂಡಿದೆ.
ಭಾರತಕ್ಕೆ ಈ ಮಂಡಳಿಯನ್ನು ಸ್ವಾಗತಿಸಿದ ಪ್ರಧಾನ ಮಂತ್ರಿ ಅವರು ಭಾರತವನ್ನು 2024 ರೊಳಗೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕತೆಯಾಗಿಸುವ ತಮ್ಮ ಮುನ್ನೋಟವನ್ನು ಚರ್ಚಿಸಿದರು. ವಿಶ್ವ ದರ್ಜೆಯ ಭೌತಿಕ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೇವೆಯ ಸುಧಾರಣೆ ಹಾಗು ಗುಣಮಟ್ಟದ ಶಿಕ್ಷಣ ಒದಗಿಸುವಿಕೆಗಳು ಸರಕಾರದ ಇತರ ಕೆಲವು ನೀತಿ ಆದ್ಯತೆಗಳಾಗಿವೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ನೀತಿ ನಿರೂಪಣೆಯಲ್ಲಿ ಜನತಾ ಸಹಭಾಗಿತ್ವವು ಸರಕಾರದ ಮಾರ್ಗದರ್ಶಿ ತತ್ವ ಸಿದ್ಧಾಂತವಾಗಿ ಉಳಿದಿದೆ. ವಿದೇಶಾಂಗ ನೀತಿ ಕ್ಷೇತ್ರದಲ್ಲಿ ಭಾರತವು ನ್ಯಾಯೋಚಿತ ಮತ್ತು ಸಮಾನ ಬಹುದ್ರುವೀಕೃತ ವಿಶ್ವ ವ್ಯವಸ್ಥೆಯನ್ನು ನಿರ್ಮಿಸುವುದಕ್ಕಾಗಿ ತನ್ನ ವ್ಯೂಹಾತ್ಮಕ ಸಹಭಾಗಿಗಳು ಮತ್ತು ನಿಕಟ ನೆರೆ ಹೊರೆಯ ರಾಷ್ಟ್ರಗಳ ಜೊತೆ ಜೊತೆಗೂಡಿ ಕೆಲಸ ಮಾಡುವುದನ್ನು ಮುಂದುವರೆಸಿದೆ.