ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವ್ಯಾಪಾರೋದ್ಯಮ ನಡೆಸಲು ಅನೂಕೂಲಕರ ವಾತಾವರಣಕ್ಕೆ ಸಂಬಂಧಿಸಿದ ಗ್ರಾಂಡ್ ಚಾಲೆಂಜ್ ಕಾರ್ಯಕ್ರಮಕ್ಕೆ ಹೊಸದಿಲ್ಲಿಯ ಲೋಕ ಕಲ್ಯಾಣ ಮಾರ್ಗದಲ್ಲಿ ನಡೆದ ಸಮಾರಂಭದಲ್ಲಿ ಚಾಲನೆ ನೀಡಿದರು.
ಕೃತಕ ಬುದ್ದಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಬೃಹತ್ ದತ್ತಾಂಶ ವಿಶ್ಲೇಷಣೆ, ಬ್ಲಾಕ್ ಚೈನ್ ಮತ್ತು ಇತರ ಹೊಸ ತಂತ್ರಜ್ಞಾನಗಳನ್ನು ಆಧರಿಸಿ ಸರಕಾರೀ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ತರಲು ನವ ನವೀನ ಆಲೋಚನೆಗಳನ್ನು ಆಹ್ವಾನಿಸುವುದು ಈ ಸವಾಲಿನ ಪ್ರಮುಖ ಧ್ಯೇಯೋದ್ದೇಶ. ಈ ಬೃಹತ್ ಸವಾಲಿಗೆ ವೇದಿಕೆಯಾಗಿರುವುದು ಸ್ಟಾರ್ಟಪ್ ಇಂಡಿಯಾ ಪೋರ್ಟಲ್.
ಸಮಾರಂಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು, ’ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ” (ಇ.ಒ.ಡಿ.ಬಿ.) ಕ್ಕೆ ಸಂಬಂಧಿಸಿದ ಶ್ರೇಯಾಂಕವನ್ನು ಉತ್ತಮಪಡಿಸುವಲ್ಲಿ ಪ್ರಯತ್ನಗಳನ್ನು ಮಾಡಿದುದಕ್ಕಾಗಿ ಹಾಜರಿದ್ದ ಎಲ್ಲಾ ಕೈಗಾರಿಕೋದ್ಯಮದ ಪ್ರತಿನಿಧಿಗಳು ಮತ್ತು ಇತರ ಕ್ಷೇತ್ರಗಳ ಪ್ರತಿನಿಧಿಗಳನ್ನು ಅಭಿನಂದಿಸಿದರು
ಬರಲಿರುವ ವರ್ಷಗಳಲ್ಲಿ ಇ.ಒ.ಡಿ.ಬಿ. ಶ್ರೇಯಾಂಕದಲ್ಲಿ ಭಾರತ ಉನ್ನತ 50 ಶ್ರೇಯಾಂಕದಲ್ಲಿ ಸ್ಥಾನ ಪಡೆಯುವ ಬಗ್ಗೆ ತಾನು ಮೊದಲು ತನ್ನ ಚಿಂತನೆಯನ್ನು ಹೇಳಿದಾಗ ಅದನ್ನು ಸಂದೇಹಗಳೊಂದಿಗೆ ಸ್ವಾಗತಿಸಲಾಯಿತು ಎಂಬುದನ್ನವರು ಸ್ಮರಿಸಿಕೊಂಡರು. ಆದಾಗ್ಯೂ ಕಳೆದ ನಾಲ್ಕು ವರ್ಷಗಳಲ್ಲಿ ಬಹಳ ದೊಡ್ದ ಪ್ರಮಾಣದಲ್ಲಿ ಆದ ಸುಧಾರಣೆ ಈಗ ಕಾಣಸಿಗುತ್ತಿದೆ. ಈ ಅವಧಿಯಲ್ಲಿ ಎ.ಒ.ಡಿ.ಬಿ. ಶ್ರೇಯಾಂಕ 65 ಅಂಶಗಳಷ್ಟು ಸುಧಾರಣೆ ಕಂಡಿದೆ. ಭಾರತ ಈಗ ದಕ್ಷಿಣ ಏಶ್ಯಾದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಮತ್ತು ಉನ್ನತ 50 ಗುರಿಯಿಂದ ತುಸು ಕೆಳಗಿದೆ ಎಂದವರು ಹೇಳಿದರು.ಇ.ಒ.ಡಿ.ಬಿ. ಸುಧಾರಣೆಯಲ್ಲಿ ಸಹಕಾರ ಮತ್ತು ಒಕ್ಕೂಟ ವ್ಯವಸ್ಥೆಯ ಸ್ಪರ್ಧಾತ್ಮಕತೆಯ ಸ್ಪೂರ್ತಿಯಿಂದ ಕೇಂದ್ರ ಹಾಗು ರಾಜ್ಯ ಸರಕಾರಗಳು ಒಗ್ಗೂಡಿ ಕಾರ್ಯ ನಿರ್ವಹಿಸಿವೆ ಎಂದವರು ಅಭಿಪ್ರಾಯಪಟ್ಟರು.
ಕೇಂದ್ರ ಸರಕಾರವು ನೀತಿ ಚಾಲಿತ ಆಡಳಿತ ಮತ್ತು ಕಾಲಜ್ಞಾನದ ಪಾರದರ್ಶಕ ನೀತಿಗಳನ್ನು ತರಲು ಒತ್ತು ನೀಡುತ್ತಿದೆ ಎಂದ ಪ್ರಧಾನ ಮಂತ್ರಿಗಳು ಕೇಂದ್ರ ಸರಕಾರ ಕೈಗೆತ್ತಿಕೊಂಡಿರುವ ಸುಧಾರಣೆಗಳು ಜನ ಸಾಮಾನ್ಯರಿಗೆ ಜೀವಿಸಲು ಹೆಚ್ಚು ಅನುಕೂಲಕರ ವಾತಾವರಣಾ ನಿರ್ಮಾಣ ಮಾಡುವ ಗುರಿಯನ್ನೂ ಹೊಂದಿವೆ ಎಂದರು. ಇಂದು ಸಣ್ಣ ಉದ್ಯಮಗಳು ಸುಲಭವಾಗಿ ವ್ಯಾಪಾರೋದ್ಯಮ ಮಾಡಬಹುದಾಗಿದೆ. ಮತ್ತು ಅತ್ಯಂತ ಸರಳ ಸಂಗತಿಯಾದ ವಿದ್ಯುತ್ ಸಂಪರ್ಕವನ್ನು ಪಡೆಯುವುದು ಸುಲಭವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 1400 ಕ್ಕೂ ಅಧಿಕ ಹಳೆಯ ಕಾಯ್ದೆಗಳನ್ನು ತೆಗೆದುಹಾಕಲಾಗಿದೆ. ವಾಣಿಜ್ಯಿಕ ವಿವಾದಗಳನ್ನು ಪರಿಹರಿಸುವುದಕ್ಕೆ ಸಂಬಂಧಿಸಿದ ಸಮಯಾವಕಾಶದಲ್ಲಿ, ಆಮದು ಮಾಡಲಾದ ಸರಕುಗಳನ್ನು ವಿಲೇವಾರಿ ಮಾಡುವುದಕ್ಕೆ ತಗಲುತ್ತಿದ್ದ ಸಮಯಾವಕಾಶದಲ್ಲಿ ಕಡಿತ ಮಾಡುವ ಮೂಲಕ ಆ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾದ ಸಾಧನೆಗಳನ್ನು ಮಾಡಲಾಗಿದೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದರು. ಅವರು ದೊಡ್ಡ ಪ್ರಮಾಣದಲ್ಲಿ ಸುಧಾರಣೆಗಳನ್ನು ಮಾಡಲಾದ ಇತರ ಕ್ಷೇತ್ರಗಳನ್ನೂ ಪಟ್ಟಿ ಮಾಡಿದರು. ಎಂ.ಎಸ್.ಎಂ.ಇ. ವಲಯದಲ್ಲಿ ಮಾಡಲಾದ ಪ್ರಯತ್ನಗಳನ್ನು ಪ್ರಸ್ತಾವಿಸಿದ ಅವರು 1 ಕೋ.ರೂ. ಸಾಲವನ್ನು 59 ನಿಮಿಷಗಳಲ್ಲಿ ಮಂಜೂರು ಮಾಡುವಂತಹ ಕ್ರಮಗಳನ್ನು ಉಲ್ಲೇಖಿಸಿದರು.
ಐ.ಎಂ.ಎಫ್. ಮತ್ತು ಮೂಡೀಸ್ ಗಳಂತಹ ಸಂಘಟನೆಗಳು ಇಂದು ಭಾರತದ ಭವಿಷ್ಯದ ಬಗ್ಗೆ ಆಶಾವಾದಿಯಾಗಿವೆ ಮತ್ತು ಭರವಸೆಯನ್ನು ಹೊಂದಿವೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಭಾರತವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಶಕ್ತಿಯಾಗಿ ರೂಪಿಸುವ ಧ್ಯೇಯವನ್ನು ಹೊಂದಲಾಗಿದೆ ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಇದಕ್ಕಾಗಿ ಆರ್ಥಿಕತೆಯ ಪ್ರತೀ ಕ್ಷೇತ್ರದಲ್ಲಿಯೂ ಸುಧಾರಣೆ ಆಗುವುದು ಅವಶ್ಯವಾಗಿದೆ ಎಂದರು. ಕೇಂದ್ರ ಸರಕಾರವು ಈಗಿನ ವಾಸ್ತವ ಸ್ಥಿತಿಗಳನ್ನು ಪ್ರತಿಬಿಂಬಿಸುವ ಕೈಗಾರಿಕಾ ನೀತಿಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಮತ್ತು ಅದು ನವಭಾರತದ ಕೈಗಾರಿಕೋದ್ಯಮಿಗಳ ಹೊಸ ಚಿಂತನೆ ಮತ್ತು ಆಶೋತ್ತರಗಳಿಗೆ ಅನುಗುಣವಾಗಿರುತ್ತದೆ ಎಂದೂ ಅವರು ಹೇಳಿದರು. ಇ.ಒ.ಡಿ.ಬಿ.ಶ್ರೇಯಾಂಕದಲ್ಲಿ ಉನ್ನತ 50 ಸ್ಥಾನ ತಲುಪುವ ನಿಟ್ಟಿನಲ್ಲಿ ಕಾರ್ಯನಿರತವಾಗುವಂತೆ ಅವರು ಅಲ್ಲಿ ನೆರೆದಿದ್ದವರಿಗೆ ಕರೆ ನೀಡಿದರು.
ಆಧುನಿಕ ಹಾಗು ಡಿಜಿಟಲ್ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಿ, ಪ್ರಕ್ರಿಯೆಗಳಲ್ಲಿ ಮಾನವ ಮಧ್ಯಪ್ರವೇಶವನ್ನು ಕಡಿಮೆಗೊಳಿಸುವುದು ಅವಶ್ಯಕ ಎಂದು ಪ್ರಧಾನ ಮಂತ್ರಿ ಅವರು ಪ್ರತಿಪಾದಿಸಿದರು. ಇದನ್ನಾಧರಿಸಿದ ಕೆಲಸದ ಸಂಸ್ಕೃತಿ ಮುಂದೆ ನೀತಿ ಆಧಾರದಲ್ಲಿ ಸಾಗುವ ಆಡಳಿತವನ್ನು ಇನ್ನಷ್ಟು ಉತ್ತೇಜಿಸುತ್ತದೆ ಎಂದರು.