ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಣಿಪುರದಲ್ಲಿ 750 ಕೋಟಿ ರೂಪಾಯಿಗಳ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ, 1000 ಅಂಗನವಾಡಿ ಕೇಂದ್ರಗಳು ಮತ್ತು ಹಲವಾರು ಇತರ ಮಹತ್ವದ ಅಭಿವೃದ್ಧಿ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಲುವಾಂಗ್ ಪೋಕಾ ಬಹು ಕ್ರೀಡಾ ಸಮುಚ್ಛಯ, ರಾಣಿ ಗೈಡಿಂಲಿಯು ಉದ್ಯಾನ ಮತ್ತು ಇತರ ಮಹತ್ವದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿದರು. ಲುವಾಂಗ್ಸಂಬಂನಲ್ಲಿ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದರು.
ಉತ್ಸಾಹಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, ಕಳೆದ ಒಂದು ವರ್ಷದಿಂದ ರಾಜ್ಯ ಸರ್ಕಾರ ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು.
ಇಂದು ಉದ್ಘಾಟಿಸಲಾದ ಯೋಜನೆಗಳು ಯುವಕರ ಆಶೋತ್ತರ ಮತ್ತು ಪ್ರತಿಭೆ, ಅವರ ಉದ್ಯೋಗ, ಮಹಿಳಾ ಸಬಲೀಕರಣ ಮತ್ತು ಸಂಪರ್ಕಕ್ಕೆ ಸಂಬಂಧಿಸಿದ್ದೆಂದು ಹೇಳಿದರು. ಈಶಾನ್ಯದ ಯುವಕರ ಕ್ರೀಡಾ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ ಎಂದರು.
ಇತ್ತೀಚೆಗೆ ಆರಂಭಿಸಲಾಗಿರುವ ಖೇಲೋ ಇಂಡಿಯಾ ಉಪಕ್ರಮದ ಪ್ರಯೋಜನವನ್ನು ಗರಿಷ್ಠ ಪ್ರಮಾಣದಲ್ಲಿ ಪಡೆಯುವಂತೆ ಅವರು ಮಣಿಪುರದ ಯುವಕರಿಗೆ ಆಗ್ರಹಿಸಿದರು. ಇತ್ತೀಚೆಗೆ ಮುಕ್ತಾಯಗೊಂಡ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಮಣಿಪುರದ ಉತ್ತಮ ಪ್ರದರ್ಶನಕ್ಕೆ ಅವರು ಅಭಿನಂದನೆ ಸಲ್ಲಿಸಿದರು. ಬಹು ಕ್ರೀಡಾ ಸಮುಚ್ಛಯವು ತರಬೇತಿ ಮತ್ತು ಸ್ಪರ್ಧೆಗಳಿಗೆ ಉತ್ತಮ ಅವಕಾಶ ಒದಗಿಸಲಿದೆ ಎಂದು ಹೇಳಿದರು.
ಕ್ರೀಡೆ ಮಹಿಳಾ ಸಬಲೀಕರಣಕ್ಕೆ ಹೇಗೆ ಸಾಧನವಾಗಬಲ್ಲದು ಎಂಬುದನ್ನು ಮಣಿಪುರ ತೋರಿಸಿದೆ ಎಂದು ಪ್ರಧಾನಿ ಹೇಳಿದರು. ಮೀರಾಬಾಯಿ ಚನ್ನು ಮತ್ತು ಸರಿತಾ ದೇವಿ ಸೇರಿದಂತೆ ರಾಜ್ಯದ ಪ್ರಖ್ಯಾತ ಕ್ರೀಡಾಪಟುಗಳನ್ನು ಅವರು ಶ್ಲಾಘಿಸಿದರು. ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡಿರುವ ಇತರ ಕಾರ್ಯಗಳನ್ನು ಪ್ರಧಾನಿ ಅಭಿನಂದಿಸಿದರು. ಈ ನಿಟ್ಟಿನಲ್ಲಿ ಇಂದು ಶಂಕುಸ್ಥಾಪನೆ ನೆರವೇರಿಸಲಾದ 1000 ಅಂಗನವಾಡಿ ಕೇಂದ್ರಗಳನ್ನು ಅವರು ಪ್ರಸ್ತಾಪಿಸಿದರು. ಇತ್ತೀಚೆಗೆ ಆರಂಭಿಸಲಾದ ರಾಷ್ಟ್ರೀಯ ಪೌಷ್ಟಿಕ ಅಭಿಯಾನದ ಬಗ್ಗೆಯೂ ಅವರು ಮಾತನಾಡಿದರು.
ಈಶಾನ್ಯದ ಬಗ್ಗೆ ಕೇಂದ್ರ ಸರ್ಕಾರದ ದೃಷ್ಟಿಕೋನ ‘ ಸಾರಿಗೆಯಿಂದ ಪರಿವರ್ತನೆ ಎಂಬುದಾಗಿದೆ’ ಎಂದು ಪ್ರಧಾನಿ ಹೇಳಿದರು. ಭಾರತದ ಪ್ರಗತಿಯಲ್ಲಿ ಈಶಾನ್ಯ ಹೊಸ ಚಾಲಕ ಶಕ್ತಿಯಾಗಿದೆ ಎಂದು ಹೇಳಿದರು. ದೇಶದ ಇತರ ರಾಜ್ಯಗಳಿಗೆ ಸಮನಾಗಿ ಅಭಿವೃದ್ಧಿ ಸಾಧಿಸಲು ಈಶಾನ್ಯ ಭಾಗದ ವಿಶೇಷ ಅಗತ್ಯಗಳನ್ನು ಸರ್ಕಾರ ಪೂರೈಸುತ್ತಿದೆ ಎಂದು ಅವರು ಹೇಳಿದರು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತಾವು 25ಕ್ಕೂ ಹೆಚ್ಚು ಬಾರಿ ಈಶಾನ್ಯಕ್ಕೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದರು.
ವಲಯದಲ್ಲಿ ಮೂಲಸೌಕರ್ಯ ಸುಧಾರಣೆ ಕೇಂದ್ರ ಸರ್ಕಾರ ಬೃಹತ್ ಆಸಕ್ತಿ ತೋರಿದೆ ಎಂದು ಪ್ರಧಾನಿ ಹೇಳಿದರು. ವಲಯದಲ್ಲಿ ರೈಲು ಮತ್ತು ರಸ್ತೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ಪ್ರಸ್ತಾಪಿಸಿದರು.
ವಿನ್ಯಾಸಿತ ಸಂವಾದ ಮತ್ತು ಸಾರ್ವಜನಿಕ ಕುಂದುಕೊರತೆಯ ನಿವಾರಣೆ ಸೇರಿದಂತೆ ರಾಜ್ಯ ಸರ್ಕಾರದ ಜನ ಕೇಂದ್ರಿತ ಉಪಕ್ರಮಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.
1944ರ ಏಪ್ರಿಲ್ ಮಣಿಪುರದಲ್ಲಿ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಐ.ಎನ್.ಎ. ಸ್ವಾತಂತ್ರ್ಯಕ್ಕೆ ಕರೆ ಕೊಟ್ಟಿತ್ತು ಎಂದು ಸ್ಮರಿಸಿದರು. ಇಂದು ಮಣಿಪುರ ನವ ಭಾರತದ ಉದಯಕ್ಕೆ ಮಹತ್ವದ ಪಾತ್ರ ವಹಿಸಲು ನಿರ್ಧರಿಸಿದೆ ಎಂದು ತಿಳಿಸಿದರು.