ಕೋವಿಡ್ -19 ಪರಿಸ್ಥಿತಿಯನ್ನು ಕುರಿತು ಧಾರ್ಮಿಕ ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.
ದೇಶದ ಹಿತದೃಷ್ಟಿಯಿಂದ ಸಮಾಜ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡುತ್ತಿರುವುದಕ್ಕೆ ಈ ಸಂವಾದವು ಮತ್ತೊಂದು ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದರು. ಕೋವಿಡ್ -19 ಸವಾಲುಗಳನ್ನು ಎದುರಿಸಲು ಈ ಸಂಘಟನೆಗಳು ಮಾಡಿದ ಕೆಲಸವನ್ನು ಅವರು ಶ್ಲಾಘಿಸಿದರು. ಜನರಿಗೆ ನೀಡಲಾಗುವ ನೆರವು ಜಾತಿ ಅಥವಾ ಧರ್ಮವನ್ನು ಮೀರಿದ್ದು, ‘ಏಕ್ ಭಾರತ್-ಏಕನಿಷ್ಠ ಪ್ರಯಾಸ್’ಗೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ದೇಶಾದ್ಯಂತ, ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಗುರುದ್ವಾರಗಳು ಆಸ್ಪತ್ರೆಗಳು ಮತ್ತು ಐಸೋಲೇಷನ್ ಕೇಂದ್ರಗಳಾಗಿ ಪರಿವರ್ತಿತಗೊಂಡಿವೆ. ಅಗತ್ಯವಿರುವವರಿಗೆ ಆಹಾರ ಮತ್ತು ಔಷಧಿಗಳನ್ನು ಪಡೆಯಲು ಸಹ ಸಹಾಯ ಮಾಡುತ್ತಿವೆ ಎಂದು ಅವರು ಹೇಳಿದರು.
ದೇಶದಲ್ಲಿ ವೇಗವಾಗಿ ನಡೆಯುತ್ತಿರುವ ಲಸಿಕಾ ಅಭಿಯಾನ ಕುರಿತು ಪ್ರಧಾನಿ ಚರ್ಚಿಸಿದರು. ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ’ ಅಭಿಯಾನವು ಕೊರೊನಾ ವಿರುದ್ಧದ ಹೋರಾಟದಲ್ಲಿ ರಕ್ಷಾ ಕವಚವಾಗಿದೆ ಎಂದು ಹೇಳಿದರು. ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಲಸಿಕೆಗಳ ಬಗೆಗಿನ ವದಂತಿಗಳು ಮತ್ತು ಗೊಂದಲಗಳನ್ನು ನಿವಾರಿಸಲು ಸಹಾಯ ಮಾಡುವ ಮೂಲಕ ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸಬೇಕು ಎಂದು ಅವರು ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರಿಗೆ ಒತ್ತಾಯಿಸಿದರು. ವಿಶೇಷವಾಗಿ ಲಸಿಕೆಯ ಬಗ್ಗೆ ಹಿಂಜರಿಕೆ ಇರುವ ಪ್ರದೇಶಗಳಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡುವಂತೆ ಅವರು ಕರೆ ಕೊಟ್ಟರು. ನಮ್ಮ ಆರೋಗ್ಯ ಕಾರ್ಯಕರ್ತರು ಪ್ರತಿಯೊಬ್ಬ ನಾಗರಿಕರನ್ನು ತಲುಪಲು ಇದು ನೆರವಾಗುತ್ತದೆ ಎಂದು ಪ್ರಧಾನಿ ಹೇಳಿದರು.
ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಭಾಗವಾಗುವಂತೆ ಪ್ರಧಾನಿ ಮುಖಂಡರಿಗೆ ಮನವಿ ಮಾಡಿದರು. ಎಲ್ಲರೂ ‘ಆಜಾ಼ದಿ ಕಾ ಅಮೃತ್ ಮಹೋತ್ಸವ’ದ ಭಾಗವಾಗುವಂತೆ ನೋಡಿಕೊಳ್ಳಬೇಕೆಂದು ಅವರು ಹೇಳಿದರು. ಈ ಸಂದರ್ಭದಲ್ಲಿ, ನಾವು ‘ಭಾರತ್ ಜೋಡೋ ಆಂದೋಲನ’ದ ಮೂಲಕ ರಾಷ್ಟ್ರವನ್ನು ಒಂದುಗೂಡಿಸುವ ಕೆಲಸ ಮಾಡಬೇಕು ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ’ ದ ನೈಜ ಮನೋಭಾವವನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಕೇಂದ್ರೀಯ ಧಾರ್ಮಿಕ ಜನ ಮೋರ್ಚಾ ಸಂಚಾಲಕ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಪ್ರೊ.ಸಲೀಮ್ ಎಂಜಿನಿಯರ್, ಮಹಾ ರಿಷಿ ಪೀಠಾಧೀಶ್ವರ ಗೋಸ್ವಾಮಿ ಸುಶೀಲ್ ಮಹಾರಾಜ್, ಉತ್ತರ ಪ್ರದೇಶದ ಭಾರತೀಯ ಸರ್ವ ಧರ್ಮ ಸಂಸತ್ ರಾಷ್ಟ್ರೀಯ ಸಂಚಾಲಕರು; ನವದೆಹಲಿಯ ಓಂಕರ್ ಧಾಮ್ ಪೀಠಾಧೀಶ್ವರ ಸ್ವಾಮಿ ಓಂಕಾರಾನಂದ ಸರಸ್ವತಿ; ಸಿಂಗ್ ಸಾಹಿಬ್ ಗಿಯಾನಿ ರಂಜಿತ್ ಸಿಂಗ್, ನವದೆಹಲಿಯ ಗುರುದ್ವಾರ ಬಾಂಗ್ಲಾ ಸಾಹಿಬ್, ಮುಖ್ಯ ಗ್ರಂಥಿ; ನವದೆಹಲಿಯ ಸೌಹಾರ್ದ & ಶಾಂತಿ ಅಧ್ಯಯನ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಡಾ. ಎಂ. ಡಿ. ಥಾಮಸ್; ಅಖಿಲ ಭಾರತ ರವಿದಾಸಿಯಾ ಧರಂ ಸಂಘಟನೆಯ ಅಧ್ಯಕ್ಷ ಸ್ವಾಮಿ ವೀರ್ ಸಿಂಗ್ ಹಿತ್ಕಾರಿ, ಜೈಪುರ ಗಾಲ್ತಾ ಪೀಠದ ಸ್ವಾಮಿ ಸಂಪತ್ ಕುಮಾರ್; ನವದೆಹಲಿಯ ಅಂತರರಾಷ್ಟ್ರೀಯ ಮಹಾವೀರ್ ಜೈನ್ ಮಿಷನ್ ಅಧ್ಯಕ್ಷ ಆಚಾರ್ಯ ವಿವೇಕ್ ಮುನಿ; ನವದೆಹಲಿಯ ಲೋಟಸ್ ಟೆಂಪಲ್ ಮತ್ತು ಇಂಡಿಯನ್ ಬಹಾಯಿ ಸಮುದಾಯದ ರಾಷ್ಟ್ರೀಯ ಟ್ರಸ್ಟಿ ಮತ್ತು ಕಾರ್ಯದರ್ಶಿ ಡಾ. ಎ. ಕೆ. ಮರ್ಚೆಂಟ್; ನವದೆಹಲಿಯ ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ಶಾಂತಾತ್ಮನಂದ; ಮತ್ತು ಹರಿಯಾಣದ ಓಂ ಶಾಂತಿ ರಿಟ್ರೀಟ್ ಸೆಂಟರ್ನ ಸಿಸ್ಟರ್ ಬಿ. ಕೆ. ಆಶಾ ಸಂವಾದದಲ್ಲಿ ಭಾಗವಹಿಸಿದ್ದರು.
ಸಾಮಾಜಿಕ ಸಂಘಟನೆಗಳು ಮಾಡಿದ ಅನುಕರಣೀಯ ಕೆಲಸಗಳ ಕುರಿತು ಅವರು ಮಾತನಾಡಿದರು. ಲಸಿಕಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಅವರು ಬೆಂಬಲ ವ್ಯಕ್ತಪಡಿಸಿದರು. ಸಾಂಕ್ರಾಮಿಕದ ಮೂರನೇ ಅಲೆಯನ್ನು ತಡೆಗಟ್ಟುವ ಕುರಿತು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡಿದರು.