ಪೆಟ್ರೋಟೆಕ್ -2019ರ 13ನೇ ಆವೃತ್ತಿ, ಭಾರತದ ಮಹತ್ವಾಕಾಂಕ್ಷೆಯ ಹೈಡ್ರೋಕಾರ್ಬನ್ ಸಮಾವೇಶವನ್ನು ಇಂದು ಗ್ರೇಟರ್ ನೋಯಿಡಾದ ಇಂಡಿಯಾ ಎಕ್ಸ್ ಪೋ ಕೇಂದ್ರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉದ್ಘಾಟಿಸಿದರು.
ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಧಾನಮಂತ್ರಿಯವರು, ಇಂಧನದ ಮಹತ್ವವನ್ನು ಒತ್ತಿ ಹೇಳಿ, ಇಂಧನ ಸಾಮಾಜಿಕ – ಆರ್ಥಿಕ ಪ್ರಗತಿಯ ಪ್ರಮುಖ ಚಾಲಕಶಕ್ತಿಯಾಗಿದೆ ಎಂದರು. ಸೂಕ್ತ ದರದ, ಸ್ಥಿರ ಮತ್ತು ಸುಸ್ಥಿರ ಇಂಧನ ಪೂರೈಕೆ ಆರ್ಥಿಕತೆಯ ತ್ವರಿತ ವೃದ್ಧಿಗೆ ಅಗತ್ಯ ಎಂದರು. ಆರ್ಥಿಕ ಅಭಿವೃದ್ಧಿಯ ಪ್ರಯೋಜನಗಳಲ್ಲಿ ಭಾಗಿಯಾಗಲು ಇದು ಬಡವರು ಮತ್ತು ಸಮಾಜದ ಶೋಷಿತ ವರ್ಗಕ್ಕೆ ನೆರವಾಗಲಿದೆ ಎಂದು ಅವರು ತಿಳಿಸಿದರು.
ಪಶ್ಚಿಮದಿಂದ ಪೂರ್ವದವರೆಗೆ ಇಂಧನ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದ ಪ್ರಧಾನಮಂತ್ರಿಗಳು, ಶೆಲ್ ಕ್ರಾಂತಿಯ ನಂತರ ಅಮೆರಿಕ ವಿಶ್ವದ ಅತಿದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ರಾಷ್ಟ್ರವಾಗಿದೆ ಎಂದರು. ಆದಾಗ್ಯೂ, ಅಗ್ಗದ ನವೀಕರಿಸಬಹುದಾದ ಇಂಧನ, ತಂತ್ರಜ್ಞಾನಗಳು, ಮತ್ತು ಡಿಜಿಟಲ್ ಅನ್ವಯಿಕಗಳನ್ನು ಒಗ್ಗೂಡಿಸುವುದರಿಂದ ಅನೇಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ವೇಗವರ್ಧಕವಾಗಬಹುದು ಎಂದರು.
“ಗ್ರಾಹಕರು ಮತ್ತು ಉತ್ಪಾದಕರಿಬ್ಬರ ಹಿತವನ್ನೂ ರಕ್ಷಿಸುವಂಥ ಜವಾಬ್ದಾರಿಯುತ ದರನಿರ್ಧರಣೆ’’ ಈ ಹೊತ್ತಿನ ಅಗತ್ಯವಾಗಿದೆ. ಅನಿಲ ಮತ್ತು ತೈಲಕ್ಕಾಗಿ ಪಾರದರ್ಶಕ ಮತ್ತು ನಮ್ಯತೆಯ ಮಾರುಕಟ್ಟೆಯತ್ತೆ ಸಾಗುವ ಅಗತ್ಯವೂ ನಮಗಿದೆ ಎಂದರು. ಆಗ ಮಾತ್ರ ಮಾನವತೆಯ ಇಂಧನ ಅಗತ್ಯತೆಗಳನ್ನು ಸೂಕ್ತ ರೀತಿಯಲ್ಲಿ ನಾವು ಪೂರೈಸಬಲ್ಲೆವು. " ಎಂದು ಪ್ರಧಾನಮಂತ್ರಿ ಹೇಳಿದರು.
ಹಮಾಮಾನ ವೈಪರೀತ್ಯದ ಸವಾಲು ಎದುರಿಸಲು ಕೈಜೋಡಿಸುವಂತೆ ಜಾಗತಿಕ ಸಮುದಾಯಕ್ಕೆ ಮನವರಿಕೆ ಮಾಡಿಸಿದ ಅವರು, ಪ್ಯಾರಿಸ್ ನಲ್ಲಿ ನಡೆದ ಕಾಪ್ 21ರಲ್ಲಿ ನಮಗೆ ನಾವೇ ಹಾಕಿಕೊಂಡ ಗುರಿಗಳು ಇದನ್ನು ಸಾಧಿಸುತ್ತವೆ ಎಂದರು. ಈ ನಿಟ್ಟಿನಲ್ಲಿ, ಭಾರತವು ತನ್ನ ಬದ್ಧತೆಯನ್ನು ನಿರ್ವಹಿಸಲು ದಾಪುಗಾಲು ಇಟ್ಟಿದೆ ಎಂದರು.
ಇಂಧನ ವಲಯಕ್ಕೆ ನೀಡಿದ ಕೊಡುಗೆಗಾಗಿ ಮತ್ತು ಭವಿಷ್ಯದ ಮುನ್ನೋಟಕ್ಕಾಗಿ ಘನತೆವೆತ್ತ ಡಾ. ಸುಲ್ತಾನ್ ಅಲ್ ಜಬೆರ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ಕೈಗಾರಿಕೆ 4.0 ಕೈಗಾರಿಕೆಗಳ ಕಾರ್ಯಾಚರಣೆಯನ್ನು ನೂತನ ತಂತ್ರಜ್ಞಾನ ಮತ್ತು ಪ್ರಕ್ರಿಯೆಯೊಂದಿಗೆ ಬದಲಾಯಿಸಲಿದೆ ಎಂದು ಅವರು ಹೇಳಿದರು. ನಮ್ಮ ಕಂಪನಿಗಳು ದಕ್ಷತೆಯ ಸುಧಾರಣೆ, ಸುರಕ್ಷತೆಯ ಹೆಚ್ಚಳ ಮತ್ತು ವೆಚ್ಚ ತಗ್ಗಿಸಲು ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ ಎಂದೂ ತಿಳಿಸಿದರು.
ನಾವು ಬೃಹತ್ ಇಂಧನ ಲಭ್ಯತೆಯ ಯುಗ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ತಾವು ಈಗಾಗಲೇ ವಿವರಿಸಿದಂತೆ ಜನರಿಗೆ ಸಾರ್ವತ್ರಿಕವಾಗಿ ಸ್ವಚ್ಛ, ಕೈಗೆಟಕುವ ದರದ, ಸುಸ್ಥಿರ ಮತ್ತು ಸಮಾನವಾದ ಇಂಧನ ಪೂರೈಕೆ ಲಭ್ಯವಾಗಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಜಗತ್ತಿನಾದ್ಯಂತ ಶತಕೋಟಿಗೂ ಹೆಚ್ಚು ಜನರಿಗೆ ಇಂದಿಗೂ ವಿದ್ಯುತ್ ದೊರಕಿಲ್ಲ. ಇನ್ನೂ ಹಲವರಿಗೆ ಶುದ್ಧ ಅಡುಗೆ ಅನಿಲ ಲಭ್ಯವಾಗಿಲ್ಲ ಎಂದರು. ಈ ಇಂಧನ ಸಮಸ್ಯೆ ಪರಿಹರಿಸಲು ಭಾರತ ಪ್ರಮುಖ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದರು.
ಪ್ರಸ್ತುತ, ಭಾರತ ಜಗತ್ತಿನಲ್ಲೇ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರವಾಗಿದೆ ಎಂದ ಅವರು, 2030ರ ಹೊತ್ತಿಗೆ ಭಾರತ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಲಿದೆ, ಅಲ್ಲದೆ ವಿಶ್ವದ ಮೂರನೇ ಅತಿ ದೊಡ್ಡ ಇಂಧನ ಬಳಕೆದಾರ ರಾಷ್ಟ್ರವಾಗಿದೆ ಎಂದು ತಿಳಿಸಿದರು. ಭಾರತದ ಇಂಧನ ಬೇಡಿಕೆ ವಿಸ್ತರಿಸುತ್ತಿದ್ದು, 2040ರ ಹೊತ್ತಿಗೆ ದುಪ್ಪಟ್ಟಾಗಲಿದೆ ಎಂದರು. ತೈಲ ಕಂಪನಿಗಳಿಗೆ ಭಾರತ ಆಕರ್ಷಕ ಮಾರುಕಟ್ಟೆಯಾಗಿ ಮುಂದವರಿದಿದೆ ಎಂದೂ ಅವರು ತಿಳಿಸಿದರು.
2016ರ ಡಿಸೆಂಬರ್ ನಲ್ಲಿ ನಡೆದ ಪೆಟ್ರೋಟೆಕ್ ಸಮಾವೇಶವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ತಾವು ಅಲ್ಲಿ ಭಾರತದ ಇಂಧನ ಭವಿಷ್ಯದ ನಾಲ್ಕು ಸ್ತಂಭಗಳ ಬಗ್ಗೆ ಅಂದರೆ, ಇಂಧನ ಪ್ರವೇಶ, ಇಂಧನ ದಕ್ಷತೆ, ಇಂಧನ ಸುಸ್ಥಿರತೆ ಮತ್ತು ಇಂಧನ ಭದ್ರತೆಯ ಬಗ್ಗೆ ಪ್ರಸ್ತಾಪಿಸಿದ್ದಾಗಿ ಹೇಳಿದರು. ಇಂಧನ ನ್ಯಾಯವು ಕೂಡ ಪ್ರಮುಖ ಉದ್ದೇಶವಾಗಿದ್ದು, ಈಗ ಭಾರತದ ಉನ್ನತ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ, ನಾವು ಹಲವು ನೀತಿಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು. ಈ ಎಲ್ಲದರ ಫಲ ಈಗ ಕಾಣುತ್ತಿದೆ. ನಮ್ಮ ಎಲ್ಲ ಗ್ರಾಮೀಣ ಪ್ರದೇಶಗಳಿಗೂ ವಿದ್ಯುತ್ ಸಂಪರ್ಕ ದೊರೆತಿದೆ ಎಂದು ತಿಳಿಸಿದರು. ಜನ ತಮ್ಮ ಸಂಘಟಿತ ಶಕ್ತಿಯ ಮೇಲೆ ವಿಶ್ವಾಸವಿಟ್ಟಾಗ ಮಾತ್ರ ಇಂಧನ ನ್ಯಾಯ ದೊರಕಲು ಸಾಧ್ಯ ಎಂದರು.
ನೀತಿ ಉರಿಯ ಕ್ರಾಂತಿ ಪ್ರಗತಿಯಲ್ಲಿದೆ ಎಂದು ಅವರು ಘೋಷಿಸಿದರು. ಎಲ್.ಪಿ.ಜಿ. ವ್ಯಾಪ್ತಿ ಶೇ.90ಕ್ಕೂ ಹೆಚ್ಚು ಜನರನ್ನು ತಲುಪಿದೆ. ಕಳೆದ ಐದು ವರ್ಷಗಳಲ್ಲಿ ಅವದು ಶೇ.55ರಿಂದ ಶೇ.90ಕ್ಕೆ ಹೆಚ್ಚಳವಾಗಿದೆ. ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ತೈಲ ಮತ್ತು ಅನಿಲ ವಲಯದಲ್ಲಿ ಪ್ರಮುಖ ಸುಧಾರಣೆಗಳು ಆಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಇಂದು, ವಿಶ್ವದ ನಾಲ್ಕನೇ ಅತಿ ದೊಡ್ಡ ಶುದ್ಧೀಕರಣ ಸಾಮರ್ಥ್ಯ ಹೊಂದಿದೆ. ಇದು ಮತ್ತಷ್ಟು ಬೆಳೆಯಲಿದ್ದು, 2030ರ ಹೊತ್ತಿಗೆ 200 ದಶಲಕ್ಷ ಮೆಟ್ರಿಕ್ ಟನ್ ಆಗಲಿದೆ ಎಂದರು.
ಅನಿಲ ಆಧಾರಿತ ಆರ್ಥಿಕತೆಯತ್ತ ಭಾರತ ದಾಪುಗಾಲು ಹಾಕಿದೆ ಎಂದು ಹೇಳಿದರು. 16 ಸಾವಿರ ಕಿ.ಮೀ.ಗೂ ಹೆಚ್ಚು ಉದ್ದದ ಅನಿಲ ಕೊಳವೆ ಮಾರ್ಗ ನಿರ್ಮಾಣವಾಗಿದ್ದು, ಹೆಚ್ಚುವರಿಯಾಗಿ 11 ಸಾವಿರ ಕಿಲೋ ಮೀಟರ್ ನಿರ್ಮಾಣ ಪ್ರಗತಿಯಲ್ಲಿದೆ. 10ನೇ ಬಿಡ್ ಸುತ್ತಿನಲ್ಲಿ ನಗರ ಅನಿಲ ಪೂರೈಕೆ ವ್ಯಾಪ್ತಿಯು 400ಕ್ಕೂ ಹೆಚ್ಚು ಜಿಲ್ಲೆಗಳನ್ನು ತಲುಪಿದ್ದು, ನಮ್ಮ ಜನಸಂಖ್ಯೆಯ ಶೇಕಡ 70ರಷ್ಟಕ್ಕೆ ನಗರ ಅನಿಲ ಪೂರೈಕೆಯನ್ನು ವಿಸ್ತರಿಸಿದೆ ಎಂದರು.
ತೈಲ ಮತ್ತು ಅನಿಲ ವಲಯದ ಪ್ರಮುಖರು ಪೆಟ್ರೋಟೆಕ್ 2019ರಲ್ಲಿ ಭಾಗಿಯಾಗಿದ್ದಾರೆ. ಕಳೆದ ಕಾಲು ಶತಮಾನದಿಂದ ಪೆಟ್ರೋಟೆಕ್ ಇಂಧನ ವಲಯ ಎದುರಿಸುವ ಸವಾಲುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ವೇದಿಕೆ ಕಲ್ಪಿಸಿದೆ. ಪೆಟ್ರೋಟೆಕ್ ಇಂಧನ ಕ್ಷೇತ್ರದ ಭವಿಷ್ಯದ ಬಗ್ಗೆ ವಿಚಾರಮಾಡಲು ಸೂಕ್ತವಾದ ವ್ಯವಸ್ಥೆಯನ್ನು ಒದಗಿಸುತ್ತದೆ ಮತ್ತು ಜಾಗತಿಕ ವರ್ಗಾವಣೆಗಳು, ಪರಿವರ್ತನೆಗಳು, ನೀತಿಗಳು ಮತ್ತು ಹೊಸ ತಂತ್ರಜ್ಞಾನಗಳು ಮಾರುಕಟ್ಟೆಯ ಸ್ಥಿರತೆಯನ್ನು ಮತ್ತು ವಲಯದಲ್ಲಿನ ಭವಿಷ್ಯದ ಹೂಡಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಬಿಂಬಿಸಲು ವೇದಿಕೆಯನ್ನು ಕಲ್ಪಿಸುತ್ತದೆ.