1. ಭಾರತ- ಆಸಿಯಾನ್ ಪಾಲುದಾರಿಕೆಯ 25ನೇ ವರ್ಷದ ಅಂಗವಾದಆಸಿಯಾನ್ – ಭಾರತ ಸ್ಮರಣಾರ್ಥ ಶೃಂಗ (ಎ.ಐ.ಸಿ.ಎಸ್.)ದ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮ್ಯಾನ್ಮಾರ್ ನ ಸ್ಟೇಟ್ ಕೌನ್ಸಿಲರ್ ಘನತೆವೆತ್ತ ಡಾವ್ ಆಂಗ್ ಸಾನ್ ಸ್ಯೂ ಕಿ, ವಿಯಟ್ನಾಂನ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ನ್ಗುಯೇನ್ ಕ್ಸುವಾನ್ ಫುಕ್ ಮತ್ತು ಪಿಲಿಪ್ಪೀನ್ಸ್ ನ ಅಧ್ಯಕ್ಷ ಘನತೆವೆತ್ತ ಶ್ರೀ ರೋಡ್ರಿಗೋ ರೋ ದುತೇರ್ತೆ ಅವರೊಂದಿಗೆ ಬುಧವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು.
2. ಆಸಿಯಾನ್ – ಭಾರತ ಸ್ಮರಣಾರ್ಥ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮತ್ತು ಈ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬರಲು ತಮ್ಮ ಆಹ್ವಾನಕ್ಕೆ ಸಮ್ಮತಿಸಿದ ಮೂವರೂ ನಾಯಕರನ್ನು ಸ್ವಾಗತಿಸಿದರು.
3. ಸ್ಟೇಟ್ ಕೌನ್ಸಿಲರ್ ಆಂಗ್ ಸ್ಯಾನ್ ಸೂ ಕಿ ಅವರೊಂದಿಗೆ ಪ್ರಧಾನಿಯವರು ನಡೆಸಿದ ಸಭೆಯ ವೇಳೆ ಪರಸ್ಪರ ಹಿತಾಸಕ್ತಿಯ ವಿವಿಧ ವಿಷಯಗಳು ಮತ್ತು 2017ರ ಸೆಪ್ಟೆಂಬರ್ ನಲ್ಲಿ ಪ್ರಧಾನಿ ಮೋದಿ ಅವರು ಮ್ಯಾನ್ಮಾರ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದ ಪ್ರಮುಖ ಚರ್ಚೆಗಳ ಮುಂದುವರಿಕೆ ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಲಾಯಿತು.
4. ಪ್ರಧಾನಮಂತ್ರಿ ಫುಕ್ ಅವರೊಂದಿಗಿನ ಸಭೆಯಲ್ಲಿ ಇಬ್ಬರೂ ನಾಯಕರು, ಭಾರತ – ಪೆಸಿಫಿಕ್ ವಲಯದಲ್ಲಿ ಸಾಗರ ಸಹಕಾರ, ರಕ್ಷಣೆ, ತೈಲ ಮತ್ತು ಅನಿಲ, ವಾಣಿಜ್ಯ ಹಾಗೂ ಹೂಡಿಕೆ ಸೇರಿದಂತೆ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯ ಚೌಕಟ್ಟಿನೊಳಗೆ ಎರಡೂ ದೇಶಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಕುರಿತಂತೆ ಸಂತೃಪ್ತಿ ವ್ಯಕ್ತಪಡಿಸಿದರು. ಈ ಭೇಟಿಯ ವೇಳೆ ಸಮಾಚಾರ ಮತ್ತು ಪ್ರಸಾರ ಹಾಗೂ ಆಸಿಯಾನ್ – ಭಾರತ ಬಾಹ್ಯಾಕಾಶ ಸಹಕಾರದ ಅಡಿಯಲ್ಲಿ ವಿಯಟ್ನಾಂನಲ್ಲಿ ನಿಗಾ ಮತ್ತು ದತ್ತಾಂಶ ಸ್ವೀಕಾರ ಕೇಂದ್ರ ಹಾಗೂ ದತ್ತಾಂಶ ಪ್ರಕ್ರಿಯೆ ಸೌಲಭ್ಯವನ್ನು ಸ್ಥಾಪಿಸುವುದೂ ಸೇರಿದಂತೆ ಅಂಕಿತ ಹಾಕಲಾದ ಎರಡು ಒಪ್ಪಂದಗಳು ಭಾರತ ಮತ್ತು ವಿಯಟ್ನಾಂನ ಬಾಂಧವ್ಯವನ್ನು ಮತ್ತಷ್ಟು ಉತ್ತೇಜಿಸುತ್ತವೆ ಎಂಬುದನ್ನು ಇಬ್ಬರೂ ಒಪ್ಪಿಕೊಂಡರು. ಕಡಲಾಚೆಯ ಕಣ್ಗಾವಲು ಹಡಗುಗಳ (ಓಪಿವಿಗಳ)ತಯಾರಿಕೆಗಾಗಿ ಎಲ್ ಅಂಡ್ಟಿಯೊಂದಿಗೆ ಮಾಡಿಕೊಂಡಿರುವ 100 ದಶಲಕ್ಷ ಅಮೆರಿಕನ್ ಡಾಲರ್ ಲೈನ್ ಆಫ್ ಕ್ರೆಡಿಟ್ ನ ಒಪ್ಪಂದದ ಕಾರ್ಯಾನುಷ್ಠಾನದ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು. 500 ದಶಲಕ್ಷ ಅಮೆರಿಕನ್ ಡಾಲರ್ ಗಳ ಮತ್ತೊಂದು ಲೈನ್ ಆಫ್ ಕ್ರೆಡಿಟ್ ಕಾರ್ಯಾನುಷ್ಠಾನಕ್ಕೂ ಅವರು ನಿರ್ಧರಿಸಿದರು.
5. ಅಧ್ಯಕ್ಷ ದುತೇರ್ತೆ ಅವರೊಂದಿಗಿನ ಸಭೆಯ ವೇಳೆ, ಇಬ್ಬರೂ ನಾಯಕರು, 2017ರ ನವೆಂಬರ್ ನಲ್ಲಿ ಮನಿಲಾದಲ್ಲಿ ನಡೆದ ತಮ್ಮ ಸಭೆಯ ನಂತರದ ದ್ವಿಪಕ್ಷೀಯ ಬಾಂಧವ್ಯ ಮತ್ತು ಜಾಗತಿಕ ಮತ್ತು ಪ್ರಾದೇಶಿಕ ಪರಿಸ್ಥಿತಿಯನ್ನು ಪರಾಮರ್ಶಿಸಿದರು. ಎರಡೂ ರಾಷ್ಟ್ರಗಳ ನಡುವಿನ ಸಹಕಾರ ಅದರಲ್ಲೂ ಮೂಲಸೌಕರ್ಯ ಅಭಿವೃದ್ಧಿಯ ಕ್ಷೇತ್ರದ ಸಹಕಾರಕ್ಕೆ ಹೆಚ್ಚಿನ ವೇಗ ನೀಡಲೂ ಅವರು ಸಮ್ಮತಿಸಿದರು. ಭಾರತದ ಪೂರ್ವದತ್ತ ಕ್ರಮ ನೀತಿ ಮತ್ತು ಪಿಲಿಪ್ಪೀನ್ಸ್ ನಿರ್ಮಾಣ-ನಿರ್ಮಾಣ-ನಿರ್ಮಾಣ ಕಾರ್ಯಕ್ರಮದ ಅಡಿಯಲ್ಲಿ, ಎರಡೂ ದೇಶಗಳ ನಡುವಿನ ಖಾಸಗಿ ವಲಯದ ಸಹಕಾರಕ್ಕೆ ಹಲವು ವಲಯಗಳಿಗೆ ಅವರು ಸಮ್ಮತಿ ಸೂಚಿಸಿದರು ಇಬ್ಬರೂ ನಾಯಕರು, ಇನ್ವೆಸ್ಟ್ ಇಂಡಿಯಾ ಮತ್ತು ಪಿಲಿಪ್ಪೀನ್ಸ್ ಹೂಡಿಕೆ ಮಂಡಳಿಯ ನಡುವೆ ತಿಳಿವಳಿಕೆ ಒಪ್ಪಂದಗಳ ವಿನಿಮಯಕ್ಕೂ ಸಾಕ್ಷಿಯಾದರು.
6. ಈ ಮೂರೂ ಸಭೆಗಳಲ್ಲಿ ಭಾರತ ಭೇಟಿಯಲ್ಲಿರುವ ಗಣ್ಯರು, ಭಾರತ- ಪೆಸಿಫಿಕ್ ವಲಯದ ಶಾಂತಿ, ಭದ್ರತೆ ಮತ್ತು ಸಾಮಾಜಿಕ- ಆರ್ಥಿಕ ಅಭಿವೃದ್ಧಿಗಾಗಿ ಆಸಿಯಾನ್ – ಭಾರತ ಬಾಂಧವ್ಯದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಎ.ಐ.ಸಿ.ಎಸ್. ನಲ್ಲಿ ಚರ್ಚೆಯನ್ನು ಎದಿರು ನೋಡುತ್ತಿರುವುದಾಗಿ ತಿಳಿಸಿದರು.