ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಐ.ಎನ್.ಎಸ್. ಕಲ್ವರಿ ಜಲಾಂತರ್ಗಾಮಿಯನ್ನು ದೇಶಕ್ಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದೇಶದ ಜನತೆಯನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು, ಐ.ಎನ್.ಎಸ್. ಕಲ್ವರಿ ಮೇಕ್ ಇನ್ ಇಂಡಿಯಾಕ್ಕೆ ಪ್ರಮುಖ ಉದಾಹರಣೆ ಎಂದರು. ಇದರ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಎಲ್ಲರನ್ನೂ ಅವರು ಪ್ರಶಂಸಿಸಿದರು. ಈ ಜಲಾಂತರ್ಗಾಮಿಯು ಭಾರತ ಮತ್ತು ಫ್ರಾನ್ಸ್ ನಡುವೆ ತ್ವರಿತವಾಗಿ ಬೆಳೆಯುತ್ತಿರುವ ವ್ಯೂಹಾತ್ಮಕ ಪಾಲುದಾರಿಕೆಗೆ ಜ್ವಲಂತ ಉದಾಹರಣೆಯಾಗಿದೆ ಎಂದರು. ಐ.ಎನ್.ಎಸ್. ಕಲ್ವರಿ ಭಾರತೀಯ ನೌಕಾಪಡೆಗೆ ಹೆಚ್ಚಿನ ಬಲ ತರಲಿದೆ ಎಂದೂ ಅವರು ತಿಳಿಸಿದರು.
21ನೇ ಶತಮಾನವನ್ನು ಏಷ್ಯಾದ ಶತಮಾನ ಎಂದು ಬಣ್ಣಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದರು. 21ನೇ ಶತಮಾನದ ಅಭಿವೃದ್ಧಿಯ ಪಥ ಹಿಂದೂ ಮಹಾಸಾಗರದ ಮೂಲಕವೇ ಸಾಗುವುದು ನಿಶ್ಚಿತ ಎಂದೂ ಅವರು ಹೇಳಿದರು. ಹೀಗಾಗಿಯೇ ಹಿಂದೂ ಮಹಾಸಾಗರ ಸರ್ಕಾರದ ನೀತಿಗಳಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದರು.
ಈ ಮುನ್ನೋಟವನ್ನು ಸೆಕ್ಯೂರಿಟಿ ಮತ್ತು ಗ್ರೋಥ್ ಫಾರ್ ಆಲ್ ಇನ್ ದಿ ರೀಜನ್ – SAGAR ( ವಲಯದಲ್ಲಿ ಎಲ್ಲರಿಗಾಗಿ ಭದ್ರತೆ ಮತ್ತು ಅಭಿವೃದ್ಧಿ)ಯಿಂದ ಅರಿಯಬಹುದು ಎಂದರು.
ಹಿಂದೂ ಮಹಾಸಾಗರಕ್ಕೆ ಸಂಬಂಧಿಸಿದಂತೆ ತನ್ನ ಜಾಗತಿಕ, ವ್ಯೂಹಾತ್ಮಕ ಮತ್ತು ಆರ್ಥಿಕ ಹಿತಾಸಕ್ತಿ ಕುರಿತಂತೆ ಭಾರತ ಸಂಪೂರ್ಣ ಎಚ್ಚರದಿಂದಿದೆ ಎಂದು ಪ್ರಧಾನಿ ಹೇಳಿದರು. ಹೀಗಾಗಿಯೇ ಆಧುನಿಕ ಮತ್ತು ಬಹು ಆಯಾಮದ ಭಾರತೀಯ ನೌಕೆಯು ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸಮುದ್ರದ ಸಾಮರ್ಥ್ಯವು ನಮ್ಮ ರಾಷ್ಟ್ರೀಯ ಅಭಿವೃದ್ಧಿಗೆ ಆರ್ಥಿಕ ಬಲ ಒದಗಿಸುತ್ತದೆ ಎಂದು ಅವರು ಹೇಳಿದರು. ಹೀಗಾಗಿಯೇ ಭಾರತಕ್ಕೆ ಸಮುದ್ರ ಮೂಲಕವಾದ ಭಯೋತ್ಪಾದನೆ, ಕಡಲ್ಗಳ್ಳತನ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆಯಂಥ ಸವಾಲುಗಳ ಅರಿವಿದೆ, ಇದು ಭಾರತ ಮಾತ್ರ ಎದುರಿಸುತ್ತಿರುವುದಲ್ಲ, ಜೊತೆಗೆ ವಲಯದ ಇತರ ರಾಷ್ಟ್ರಗಳೂ ಎದುರಿಸಬೇಕಾಗುತ್ತದೆ ಎಂದರು. ಈ ಸವಾಲುಗಳನ್ನು ಎದುರಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದೂ ಅವರು ಹೇಳಿದರು.
ಇಡೀ ವಿಶ್ವವೇ ಒಂದು ಕುಟುಂಬ ಎಂದು ಭಾರತ ನಂಬಿದೆ, ಮತ್ತು ಅದು ತನ್ನ ಜಾಗತಿಕ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಿದೆ ಎಂದೂ ಹೇಳಿದರು. ವಿಷಮಸ್ಥಿತಿಯ ಸಂದರ್ಭಗಳಲ್ಲಿ ಭಾರತವು ತನ್ನ ಪಾಲುದಾರ ರಾಷ್ಟ್ರಗಳೊಂದಿಗೆ “ಪ್ರಥಮ ಪ್ರತಿಸ್ಪಂದಕ”ನ ಪಾತ್ರ ನಿರ್ವಹಿಸಿದೆ ಎಂದೂ ಅವರು ಹೇಳಿದರು. ಭಾರತದ ರಾಜತಾಂತ್ರಿಕತೆ ಮತ್ತು ಭಾರತದ ಸುರಕ್ಷತೆಯ ಸ್ಥಾಪನೆಯಲ್ಲಿ ಮಾನವೀಯ ಮುಖವೇ ನಮ್ಮ ವೈಶಿಷ್ಟ್ಯ ಎಂದು ಅವರು ಹೇಳಿದರು. ಬಲಿಷ್ಠ ಮತ್ತು ಸಮರ್ಥ ಭಾರತ ಮಾನವೀಯತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಶಾಂತಿ ಮತ್ತು ಸ್ಥಿರತೆಯ ಮಾರ್ಗದಲ್ಲಿ ಭಾರತದೊಂದಿಗೆ ಹೆಜ್ಜೆ ಹಾಕಲು ವಿಶ್ವದ ರಾಷ್ಟ್ರಗಳು ಬಯಸುತ್ತವೆ ಎಂದೂ ಅವರು ಹೇಳಿದರು.
ರಕ್ಷಣೆ ಮತ್ತು ಭದ್ರತೆ ಕುರಿತ ಸಂಪೂರ್ಣ ಪರಿಸರ ಕಳೆದ ಮೂರು ವರ್ಷಗಳಲ್ಲಿ ಬದಲಾಗಲು ಆರಂಭಿಸಿದೆ ಎಂದು ಪ್ರಧಾನಿ ಹೇಳಿದರು. ಐ.ಎನ್.ಎಸ್. ಕಲ್ವರಿ ತಯಾರಿಕೆಯ ವೇಳೆ ಕ್ರೋಡೀಕೃತಗೊಂಡ ಕೌಶಲ ಭಾರತಕ್ಕೆ ಒಂದು ಆಸ್ತಿಯಾಗಿದೆ ಎಂದರು.
ಕೇಂದ್ರ ಸರ್ಕಾರದ ಬದ್ಧತೆಯು ದೀರ್ಘಕಾಲದಿಂದ ಬಾಕಿ ಇದ್ದ ಸಮಾನ ಶ್ರೇಣಿ, ಸಮಾನ ಪಿಂಚಣಿಯ ಬಿಕ್ಕಟ್ಟು ಪರಿಹರಿಸಿ, ಸಾಕಾರಗೊಳಿಸಿತು ಎಂದು ಪ್ರಧಾನಿ ಹೇಳಿದರು.
ಸರ್ಕಾರದ ನೀತಿಗಳು ಮತ್ತು ಸಶಸ್ತ್ರಪಡೆಗಳ ಶೌರ್ಯ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಪರ್ಯಾಯ ಯುದ್ಧವಾಗಿ ಯಶಸ್ವಿಯಾಗಿ ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿದೆ ಎಂದರು.
ದೇಶದ ಭದ್ರತೆಗಾಗಿ ಪ್ರಾಣತ್ಯಾಗ ಮಾಡಿದ ಎಲ್ಲರಿಗೂ ಪ್ರಧಾನಮಂತ್ರಿ ಕೃತಜ್ಞತೆ ಸಲ್ಲಿಸಿದರು.