ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮೈಸೂರು ಮತ್ತು ಕೆ.ಎಸ್.ಆರ್. ಬೆಂಗಳೂರು ನಡುವೆ ವಿದ್ಯುದ್ದೀಕರಣಗೊಂಡ ರೈಲು ಮಾರ್ಗವನ್ನು ದೇಶಕ್ಕೆ ಸಮರ್ಪಿಸಿದರು. ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮೈಸೂರು ಮತ್ತು ಉದಯಪುರ್ ನಡುವೆ ಪ್ಯಾಲೇಸ್ ಕ್ವೀನ್ ಹಮ್ ಸಫರ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು.
ಇದಕ್ಕೂ ಮುನ್ನ ಪ್ರಧಾನಮಂತ್ರಿಯವರು ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ 2018ಕ್ಕಾಗಿ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದರು. ಎ.ಎಸ್.ಐ. ವಿಂದ್ಯಗಿರಿ ಬೆಟ್ಟದಲ್ಲಿ ಮಾಡಿರುವ ಮೆಟ್ಟಿಲುಗಳನ್ನೂ ಅವರು ಉದ್ಘಾಟಿಸಿದರು. ಬಾಹುಬಲಿ ಜನರಲ್ ಆಸ್ಪತ್ರೆಯನ್ನೂ ಅವರು ಉದ್ಘಾಟಿಸಿದರು.
ಶ್ರವಣಬೆಳಗೊಳದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ನಮ್ಮ ನೆಲದ ಸಂತರು ಮತ್ತು ಶ್ರೀಗಳು ಸಮಾಜ ಸೇವೆ ಮಾಡಿದ್ದಾರೆ ಮತ್ತು ಧನಾತ್ಮಕ ಬದಲಾವಣೆ ತಂದಿದ್ದಾರೆ ಎಂದರು. ನಾವು ಸದಾ ಕಾಲದೊಂದಿಗೆ ಬದಲಾಗುತ್ತಾ, ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುತ್ತಿರುವುದೇ ನಮ್ಮ ಸಮಾಜದ ಶಕ್ತಿ ಎಂದು ಪ್ರಧಾನಿ ಹೇಳಿದರು. ಬಡವರಿಗೆ ಉತ್ತಮ ಗುಣಮಟ್ಟದ ಮತ್ತು ಕೈಗೆಟಕುವ ಆರೋಗ್ಯ ಸೇವೆ ಒದಗಿಸುವುದು ನಮ್ಮ ಕರ್ತವ್ಯ ಎಂದೂ ಪ್ರಧಾನಿ ಹೇಳಿದರು.