ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಲ್ ಅಂಡ್ ಟಿಯ ರಕ್ಷಾಕವಚ ವ್ಯವಸ್ಥೆಯ ಸಂಕೀರ್ಣವನ್ನು ಹಜೀರಾದಲ್ಲಿ ದೇಶಕ್ಕೆ ಸಮರ್ಪಿಸಿದರು. ಸಂಕೀರ್ಣಕ್ಕೆ ಭೇಟಿ ನೀಡಿದ ಅವರು ಯೋಜನೆಯ ಹಿಂದೆ ಇರುವ ನಾವಿನ್ಯತೆಯ ಸ್ಫೂರ್ತಿಯ ಬಗ್ಗೆ ಆಸಕ್ತಿ ಪ್ರದರ್ಶಿಸಿದರು. ಪ್ರಧಾನಮಂತ್ರಿಯವರು ನವ್ಸಾರಿಯಲ್ಲಿ ನಿರಾಲಿ ಕ್ಯಾನ್ಸರ್ ಆಸ್ಪತ್ರೆಗೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು. ಈ ವಲಯದ ಜನರಿಗೆ ಕ್ಯಾನ್ಸರ್ ಕಾಯಿಲೆಯ ತಡೆ ಮತ್ತು ಚಿಕಿತ್ಸೆಗೆ ಇದು ನೆರವಾಗಲಿದೆ. ಇದರೊಂದಿಗೆ ಪ್ರಧಾನಮಂತ್ರಿಯವರು ತಮ್ಮ ಗುಜರಾತ್ ಭೇಟಿಯನ್ನು ಪೂರ್ಣಗೊಳಿಸಿದರು, ಮೂರು ದಿನಗಳ ಭೇಟಿಯಲ್ಲಿ ಮುಂಬೈ ಅವರ ಮುಂದಿನ ಭೇಟಿಯ ತಾಣವಾಗಿದೆ.
ಮೊದಲ ದಿನ ಪ್ರಧಾನಮಂತ್ರಿಯವರು ಗುಜರಾತ್ ಗೆ ಭೇಟಿ ನೀಡಿ, ವೈಬ್ರೆಂಟ್ ಗುಜರಾತ್ ಶೃಂಗಸಭೆಯ ಭಾಗವಾಗಿ, ವಸ್ತು ಪ್ರದರ್ಶನ ಕೇಂದ್ರದಲ್ಲಿ, ಮಹತ್ವಾಕಾಂಕ್ಷೆಯ ಜಾಗತಿಕ ವಾಣಿಜ್ಯ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಪ್ರಧಾನಮಂತ್ರಿಯವರು– ಸರ್ಧಾರ್ ವಲ್ಲಭಬಾಯ್ ಪಟೇಲ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಸಾರ್ವಜನಿಕ ಆಸ್ಪತ್ರೆಯನ್ನು ಅಹಮದಾಬಾದ್ ನಲ್ಲಿ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲರಿಗೂ ಸಮಾನ ಅವಕಾಶ ನೀಡುವ ತನ್ನ ಬದ್ಧತೆ ಮತ್ತು ಅಭಿವೃದ್ಧಿ – ಸಬ್ ಕ ಸಾತ್ ಸಬ್ ಕ ವಿಕಾಸ್ ಅನ್ನು ಗಮನದಲ್ಲಿಟ್ಟುಕೊಂಡು ನವ ಭಾರತದತ್ತ ಹೆಜ್ಜೆ ಇಟ್ಟಿದ್ದೇವೆ ಎಂದರು.
ಪ್ರಧಾನಮಂತ್ರಿಯವರು ಸಬರಮತಿ ನದಿ ತಟದಲ್ಲಿ ಅಹ್ಮದಾಬಾದ್ ಶಾಪಿಂಗ್ ಉತ್ಸವ 2019ನ್ನು ಉದ್ಘಾಟಿಸಿದ್ದು ಮತ್ತೊಂದು ಆಕರ್ಷಣೆಯಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾಣಿಜ್ಯಕ್ಕೆ ಹಿತಕರವಾದ ವಾತಾವರಣವನ್ನು ಸೃಷ್ಟಿಸಲು ಸತತವಾಗಿ ಶ್ರಮಿಸುತ್ತಿದೆ ಎಂದರು.
ಎರಡನೇ ದಿನ ಪ್ರಧಾನಮಂತ್ರಿಯವರು ಮೂರು ದಿನಗಳ ವೈಬ್ರೆಂಟ್ ಗುಜರಾತ್ ಶೃಂಗಸಭೆ 2019ಕ್ಕೆ ಚಾಲನೆ ನೀಡಿದರು. ಪ್ರಧಾನಮಂತ್ರಿ ಮೋದಿ ಅವರು ಶೃಂಗಸಭೆಯ 9ನೇ ಆವೃತ್ತಿಯನ್ನು ಗಾಂಧಿನಗರದ ಮಹಾತ್ಮಾ ಮಂದಿರ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರದಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದೊಂದಿಗೆ ವಾಣಿಜ್ಯ ನಡೆಸುವುದು ಒಂದು ಶ್ರೇಷ್ಠ ಅವಕಾಶ ಎಂದು ಹೇಳಿದರು.
ಈ ಅವಧಿಯಲ್ಲಿ ಪ್ರಧಾನಮಂತ್ರಿಯವರು ಭಾರತಕ್ಕೆ ಭೇಟಿ ನೀಡಿದ್ದ ಉಜ್ಬೇಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಜಿಯೆಯೋವ್, ಜೆಕ್ ಗಣರಾಜ್ಯದ ಪ್ರಧಾನಮಂತ್ರಿ ಶ್ರೀ ಆಂದ್ರೇಜ್ ಬಾಬಿಸ್, ಮಾಲ್ಟಾ ಪ್ರಧಾನಮಂತ್ರಿ ಡಾ. ಜೋಸೆಫ್ ಮಸ್ಕಟ್ ಮತ್ತು ಡೆನ್ಮಾರ್ಕ್ ಪ್ರಧಾನಮಂತ್ರಿ ಶ್ರೀ ಲಾರ್ಸ್ ಲೊಕ್ಕೆ ರಸ್ಮುಸ್ಸೇನ್ ಅವರೊಂದಿಗೆ 2019ರ ಜನವರಿ 18ರಂದು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದರ ತರುವಾಯ ಗುಜರಾತ್ ನ ಗಾಂಧೀನಗರದ ದಾಂಡಿ ಕುಟೀರದಲ್ಲಿ 3ಡಿ ಲೇಸರ್ ಪ್ರದರ್ಶನ ನಡೆಯಿತು.
ವೈಬ್ರೆಂಟ್ ಗುಜರಾತ್ ಶೃಂಗದ ಅಂಗವಾಗಿ ಕೈಗಾರಿಕೆಗಳ ಮುಖ್ಯಸ್ಥರು ವಿವಿಧ ಹೂಡಿಕೆಯ ಘೋಷಣೆ ಮಾಡಿದರು.