ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಭಾರತೀಯ ಸೇನೆ ಮತ್ತು ಬಿಎಸ್.ಎಫ್. ಯೋಧರೊಂದಿಗೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯ ಗುರಿಜ್ ಕಣಿವೆಯಲ್ಲಿ ದಿಪಾವಳಿಯನ್ನು ಆಚರಿಸಿದರು. ಅಲ್ಲಿ ಪ್ರಧಾನಿ ಸುಮಾರು 2 ಗಂಟೆಗಳ ಕಾಲ ಇದ್ದರು. ಗಡಿಯಲ್ಲಿ ಯೋಧರೊಂದಿಗೆ ಪ್ರಧಾನಿ ದೀಪಾವಳಿ ಆಚರಿಸುತ್ತಿರುವುದು ಇದು ಸತತ ನಾಲ್ಕನೇ ಬಾರಿ.
ಪ್ರಧಾನಮಂತ್ರಿಯವರು ಯೋಧರಿಗೆ ಸಿಹಿ ನೀಡಿ, ಶುಭಾಶಯ ವಿನಿಮಯ ಮಾಡಿಕೊಂಡರು.
ಯೋಧರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಗಳು ಎಲ್ಲರಂತೆಯೇ ತಾವೂ ಕೂಡ ತಮ್ಮ ಕುಟುಂಬದ ಸದಸ್ಯರೊಂದಿಗೆ ದೀಪಾವಳಿ ಆಚರಿಸಲು ಬಯಸುತ್ತೇನೆ. ತಾವು ಯೋಧರು ಮತ್ತು ಸಶಸ್ತ್ರ ಪಡೆಗಳನ್ನು ತಮ್ಮ ಕುಟುಂಬ ಎಂದು ಪರಿಗಣಿಸಿದ್ದು, ಹೀಗಾಗಿಯೇ ತಾವು ಅವರೊಂದಿಗೆ ದೀಪಾವಳಿ ಆಚರಿಸಲು ಬಂದಿರುವುದಾಗಿ ಹೇಳಿದರು.
ಸಶಸ್ತ್ರ ಪಡೆಗಳ ಯೋಧರು ಮತ್ತು ಸೈನಿಕರೊಂದಿಗೆ ಸಮಯ ಕಳೆದಾಗ ತಮಗೆ ನವ ಚೈತನ್ಯ ಮೂಡುತ್ತದೆ ಎಂದು ಪ್ರಧಾನಿ ಹೇಳಿದರು. ಕಠಿಣ ಸನ್ನಿವೇಶಗಳ ನಡುವೆಯೂ ಅವರ ತಪಸ್ಸು ಮತ್ತು ತ್ಯಾಗವನ್ನು ಪ್ರಶಂಸಿಸಿದರು.
ಈ ಸಭೆಯಲ್ಲಿ ಪಾಲ್ಗೊಂಡಿರುವ ಯೋಧರು ನಿಯಮಿತವಾಗಿ ಯೋಗ ಮಾಡುತ್ತಾರೆ ಎಂದು ನನಗೆ ತಿಳಿಸಲಾಗಿದೆ ಎಂದ ಪ್ರಧಾನಿ, ಇದು ಖಂಡಿತವಾಗಿಯೂ ಅವರ ಕ್ಷಮತೆ ಹೆಚ್ಚಿಸುತ್ತದೆ ಮತ್ತು ನೆಮ್ಮದಿಯ ಭಾವನೆ ಮೂಡಿಸುತ್ತದೆ ಎಂದರು.
ತಮ್ಮ ಕರ್ತವ್ಯದ ಅವಧಿ ಮುಗಿದ ಬಳಿಕ ಸಶಸ್ತ್ರ ಪಡೆಗಳನ್ನು ಬಿಡುವವರು, ಬಳಿಕ ಅದ್ಭುತ ಯೋಗ ತರಬೇತಿದಾರರಾಗಬಹುದು ಎಂದರು.
2022ರಲ್ಲಿ ಭಾರತ ಸ್ವಾತಂತ್ರ್ಯದ 75ನೇ ವರ್ಷ ಆಚರಿಸುವ ಹೊತ್ತಿಗೆ ಪ್ರತಿಯೊಬ್ಬ ಭಾರತೀಯರೂ ಹೊಸ ಸಂಕಲ್ಪ ಮಾಡುವ ಕುರಿತು ಪ್ರಧಾನಿ ಮಾತನಾಡಿದರು. ನಾವಿನ್ಯತೆ ಗಳಿಸಿಕೊಳ್ಳುವಂತೆ ಯೋಧರಿಗೆ ತಿಳಿಸಿದ ಪ್ರಧಾನಿ, ಇದರಿಂದ ನಿಮ್ಮ ದೈನಂದಿನ ಕೆಲಸ ಹಗುರ ಮತ್ತು ಸುರಕ್ಷಿತವಾಗುತ್ತದೆ ಎಂದರು. ಸೇನಾದಿನ, ನೌಕಾ ದಿನ ಮತ್ತು ವಾಯುಪಡೆ ದಿನದಂದು ಹೇಗೆ ನಾವಿನ್ಯತೆಯನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರು.
ಎಲ್ಲ ಸಾಧ್ಯ ಮಾರ್ಗದಲ್ಲಿ ಸಶಸ್ತ್ರ ಪಡೆಗಳ ಕಲ್ಯಾಣ ಮತ್ತು ಉತ್ತಮಿಕೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ತಿಳಿಸಿದರು. ಈ ನಿಟ್ಟಿನಲ್ಲಿ ದಶಕಗಳಿಂದ ಬಾಕಿ ಇದ್ದ ಸಮಾನ ಶ್ರೇಣಿ, ಸಮಾನ ವೇತನ ಅನುಷ್ಠಾನ್ನು ಪ್ರಸ್ತಾಪಿಸಿದರು.
ಸೇನಾ ಪಡೆಯ ಮುಖ್ಯಸ್ಥ ಜನರಲ್ ಬಿ.ಎಸ್. ರಾವತ್ ಮತ್ತು ಇತರ ಹಿರಿಯ ಸೇನಾ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ಹೀಗೆ ಬರೆದರು:
“ ಆಪ್ತರಿಂದ ದೂರವಿದ್ದು, ತ್ಯಾಗದ ಉನ್ನತ ಪರಂಪರೆಯನ್ನು ಪ್ರದರ್ಶಿಸುತ್ತಾ ತಾಯ್ನಾಡನ್ನು ರಕ್ಷಿಸುತ್ತಿರುವ ಗಡಿಯಲ್ಲಿ ಕಾವಲು ಕಾಯುತ್ತಿರುವ ಎಲ್ಲ ಯೋಧರು ಸಮರ್ಪಣೆ ಮತ್ತು ಶೌರ್ಯದ ಸಂಕೇತವಾಗಿದ್ದಾರೆ.
ನಿಮ್ಮೊಂದಿಗೆ ದೀಪಾವಳಿ ಹಬ್ಬದಂದು ಕಾಲ ಕಳೆಯುವ ಅವಕಾಶ ನನಗೆ ದೊರೆತಿದೆ. ಗಡಿಯಲ್ಲಿ ವೀರ ಯೋಧರ ಉಪಸ್ಥಿತಿ, ಹಬ್ಬದ ಸಂದರ್ಭದಲ್ಲಿ ಭರವಸೆಯ ಬೆಳಕನ್ನು ಮೂಡಿಸುತ್ತದೆ ಮತ್ತು ಕೋಟ್ಯಂತರ ಭಾರತೀಯರದಲ್ಲಿ ಹೊಸ ಚೈತನ್ಯ ಹುಟ್ಟಿಸುತ್ತದೆ .
ನವ ಭಾರತದ ಕನಸನ್ನು ನನಸಾಗಿಸಲು ಇದು ಎಲ್ಲರೂ ಒಟ್ಟಾಗಿ ಶ್ರಮಿಸಲು ಒಂದು ಸುವರ್ಣಾವಕಾಶವಾಗಿದೆ. ಸೇನೆ ಕೂಡ ಇದರ ಭಾಗವಾಗಿದೆ.
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.”