ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿಂದು ಕೇವಡಿಯಾದ ಏಕತಾ ಪ್ರತಿಮೆಯ ಬಳಿ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ದೇಶಾದ್ಯಂತದ ಪೊಲೀಸ್ ತುಕಡಿಗಳು ಪ್ರದರ್ಶಿಸಿದ ರಾಷ್ಟ್ರೀಯ ಏಕತಾ ದಿನದ ಪರೇಡ್ ಅನ್ನೂ ಅವರು ವೀಕ್ಷಿಸಿದರು.
2014ರ ಅಕ್ಟೋಬರ್ 31ರಿಂದ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದ್ದು, ಸಮಾಜದ ಎಲ್ಲ ವರ್ಗದ ಜನರು ದೇಶಾದ್ಯಂತ ನಡೆಯುವ ಏಕತಾ ಓಟದಲ್ಲಿ ಭಾಗಿಯಾಗುತ್ತಿದ್ದಾರೆ.
ಎಲ್ಲ ರಾಜ್ಯಗಳ ಧ್ವಜ ಹಿಡಿದವರು ಮತ್ತು ಗುಜರಾತ್ ಕೆಡೆಟ್ ಕಾರ್ಪ್ಸ್ ವಿದ್ಯಾರ್ಥಿಗಳು ಪ್ರಧಾನಮಂತ್ರಿಯವರೆದುರು ‘ಏಕ ಭಾರತ ಶ್ರೇಷ್ಠ ಭಾರತ’ದ ಕವಾಯತು ಪ್ರದರ್ಶಿಸಿದರು. ಎನ್.ಎಸ್.ಜಿ., ಸಿಐಎಸ್ಎಫ್, ಎನ್.ಡಿಆರ್.ಎಫ್. ಸಿಆರ್.ಪಿ.ಎಫ್., ಗುಜರಾತ್ ಪೊಲೀಸ್ ಮತ್ತು ಜಮ್ಮು ಹಾಗೂ ಕಾಶ್ಮೀರದ ಪೊಲೀಸರು ಸೇರಿದಂತೆ ಪೊಲೀಸ್ ಪಡೆಗಳು ಪ್ರಧಾನ ಮಂತ್ರಿಯವರ ಮುಂದೆ ಪ್ರತ್ಯೇಕವಾಗಿ ತಮ್ಮ ಪಡೆಗಳ ಪ್ರದರ್ಶನವನ್ನು ನೀಡಿದರು.
ತರುವಾಯ, ಪ್ರಧಾನಮಂತ್ರಿಯವರು ತಂತ್ರಜ್ಞಾನ ಪ್ರದರ್ಶನ ತಾಣವನ್ನು ಕೆವಡಿಯಾದಲ್ಲಿ ಉದ್ಘಾಟಿಸಿದರು. ವಾಯುಯಾನ ಸುರಕ್ಷತೆ, ಪೊಲೀಸ್ ಪಡೆಗಳ ಆಧುನೀಕರಣ ಇತ್ಯಾದಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಆಧುನಿಕ ತಂತ್ರಜ್ಞಾನವನ್ನು ಪ್ರದರ್ಶನಕ್ಕಿಟ್ಟ ಪೊಲೀಸ್ ಪಡೆಗಳ ಮಳಿಗೆಗಳಿಗೆ ಪ್ರಧಾನಮಂತ್ರಿ ಭೇಟಿ ನೀಡಿದರು.