ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನುದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಭಾಷಣ ಮಾಡಿದರು.
ಬೃಹತ್ ನೋಯಿಡಾದ ಗೌತಮ ಬುದ್ಧ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನೋತ್ಸವ 2018ರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ಪಿಎಸ್.ಎಲ್.ವಿ. –ಸಿ 40 ಯಶಸ್ವಿ ಉಡಾವಣೆಗಾಗಿ ಇಸ್ರೋಗೆ ಅಭಿನಂದನೆ ಸಲ್ಲಿಸುವ ಮೂಲಕ ತಮ್ಮ ಮಾತು ಆರಂಭಿಸಿದರು. ಬಾಹ್ಯಾಕಾಶದಲ್ಲಿನ ನಮ್ಮ ದಾಪುಗಾಲು ನಮ್ಮ ಜನತೆಗೆ ನೆರವಾಗಲಿದ್ದು, ನಮ್ಮ ಅಭಿವೃದ್ಧಿಯ ಪಯಣವನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ಹೇಳಿದರು.
2017ರ ಡಿಸೆಂಬರ್ ನ ತಮ್ಮ ಮನ್ ಕಿ ಬಾತ್ ವೇಳೆ, ಜಿಲ್ಲೆಗಳಲ್ಲಿ ಅಣಕು ಸಂಸತ್ತು ನಡೆಸಲು ತಾವು ಕರೆ ನೀಡಿದ್ದನ್ನು ಸ್ಮರಿಸಿದರು. ಇಂಥ ಅಣಕು ಸಂಸತ್ತು, ಯುವಜನರಲ್ಲಿ ಚರ್ಚೆಯ ಸ್ಫೂರ್ತಿಯನ್ನು ಹೆಚ್ಚಿಸುತ್ತದೆ ಎಂದೂ ಹೇಳಿದರು. ನಾವೆಲ್ಲ 1947ರ ನಂತರ ಜನಿಸಿದವರು, ಹೀಗಾಗಿ ನಮಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುವ ಗೌರವ ದೊರಕಲಿಲ್ಲ. ಆದರೆ, ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಮಹಾನ್ ಮಹನೀಯರು ಮತ್ತು ಮಹಿಳೆಯರ ಕನಸನ್ನು ನನಸು ಮಾಡುವ ಅವಕಾಶ ನಮಗೆ ಲಭಿಸಿದೆ ಎಂದರು. ನಮ್ಮ ಸ್ವಾತಂತ್ರ್ಯ ಸೇನಾನಿಗಳು ಕನಸುಕಂಡಿದ್ದ ಭಾರತದ ನಿರ್ಮಾಣವನ್ನು ನಾವು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಾವು ನಮ್ಮ ಯುವಜನರನ್ನು ಉದ್ಯೋಗಧಾತರನ್ನಾಗಿ ಮಾಡಬೇಕು ಎಂದು ಪ್ರಧಾನಿ ಹೇಳಿದರು. ಅವರು ನಾವಿನ್ಯತೆ ತರುವ ಯುವಜನರಾಗಿರಬೇಕು ಎಂದರು. ಇಂದಿನ ಯುವಕರಲ್ಲಿ ಧೈರ್ಯ ಅಥವಾ ತಾಳ್ಮೆ ಇಲ್ಲ ಎಂದು ಕೆಲವರು ಹೇಳುವುದನ್ನು ನಾನು ಗಮನಿಸಿದ್ದೇನೆ ಎಂದ ಪ್ರಧಾನಿ, ಆದಾಗ್ಯೂ, ಇದುವೇ ನಮ್ಮ ಯುವಜನರಲ್ಲಿ ನಾವಿನ್ಯತೆಯ ಕಿಚ್ಚು ಹಚ್ಚುತ್ತದೆ ಎಂದರು. ನಮ್ಮ ಯುವಜನರಿಗೆ ಇದು ಪೆಟ್ಟಿಗೆಯಿಂದ ಹೊರ ಬಂದು ಚಿಂತಿಸುವಂತೆ ಮತ್ತು ಹೊಸ ಕಾರ್ಯ ಮಾಡುವಂತೆ ಮಾಡುತ್ತಿದೆ ಎಂದೂ ಅವರು ಹೇಳಿದರು. ಕ್ರೀಡೆಯನ್ನು ತಮ್ಮ ಬದುಕಿನ ಭಾಗ ಮಾಡಿಕೊಳ್ಳುವಂತೆ ಅವರು ಯುವಕರಿಗೆ ಆಗ್ರಹಿಸಿದರು.
ಕರ್ನಾಟಕದ ಬೆಳಗಾವಿಯ ಸರ್ವಧರ್ಮ ಸಭಾದಲ್ಲಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸ್ವಾಮಿ ವಿವೇಕಾನಂದರು ಭ್ರಾತೃತ್ವವನ್ನು ಜಾಗೃತಗೊಳಿಸಿದರು ಎಂದರು. ಭಾರತದ ಅಭಿವೃದ್ಧಿಯಲ್ಲಿ ನಮ್ಮ ಕ್ಷೇಮ ಅಡಗಿದೆ ಎಂದು ಪ್ರಧಾನಿ ಹೇಳಿದರು.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತದ ಬಗ್ಗೆ ಅಪ ಪ್ರಚಾರ ಮಾಡಲಾಗಿತ್ತು, ಸ್ವಾಮಿ ವಿವೇಕಾನಂದರು ಇದು ತಪ್ಪು ಎಂಬುದನ್ನು ನಿರೂಪಿಸಿದರು ಎಂದರು. ಅವರು ಸಾಮಾಜಿಕ ಪಿಡುಗುಗಳ ವಿರುದ್ಧವೂ ದನಿ ಎತ್ತಿದ್ದರು ಎಂದರು.
ಕೆಲವು ಜನರು ರಾಷ್ಟ್ರವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದು, ಅಂತ ಶಕ್ತಿಗಳಿಗೆ ದೇಶದ ಯುವಕರು ತಕ್ಕ ಉತ್ತರ ನೀಡಬೇಕು ಎಂದು ಪ್ರಧಾನಿ ಹೇಳಿದರು. ನಮ್ಮ ಯುವಕರನ್ನು ದಾರಿ ತಪ್ಪಿಸಲು ಎಂದಿಗೂ ಸಾಧ್ಯವಿಲ್ಲ ಎಂದರು. ಭಾರತದ ಯುವ ಜನರು ಸ್ವಚ್ಛ ಭಾರತ ಅಭಿಯಾನವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಪ್ರಧಾನಿ ಹೇಳಿದರು. ಭಾರತ, ಸಮಾಜಕ್ಕೆ ಮತ್ತು ಸುಧಾರಣೆಗೆ ಶ್ರಮಿಸಿದ ಹಲವು ಸಂತರ, ಸ್ವಾಮಿಗಳ ನೆಲೆವೀಡು ಎಂದು ಪ್ರಧಾನಿ ಹೇಳಿದರು.
ಸೇವಾ ಭಾವನೆ ನಮ್ಮ ಸಂಸ್ಕೃತಿ ಎಂದು ಪ್ರಧಾನಿ ಹೇಳಿದರು. ಭಾರತದಾದ್ಯಂತ, ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುತ್ತಿವೆ ಎಂದೂ ಪ್ರಧಾನಿ ಹೇಳಿದರು. ದೇಶವನ್ನು ಬಯಲು ಶೌಚ ಮುಕ್ತಗೊಳಿಸುವತ್ತ ಎಲ್ಲರೂ ಕೆಲಸ ಮಾಡುವಂತೆ ಪ್ರಧಾನಿ ಪ್ರತಿಪಾದಿಸಿದರು.
Click here to read PM's speech at Gautam Buddha University in Noida