ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನವದೆಹಲಿಯಲ್ಲಿ ರಾಜಸ್ವ ಜ್ಞಾನ ಸಂಗಮ ಉದ್ಘಾಟಿಸಿದರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ಆಡಳಿತಗಾರರನ್ನುದ್ದೇಶಿಸಿ ಭಾಷಣ ಮಾಡಿದರು.
ತಮ್ಮ ಕಾರ್ಯ ನಿರ್ವಹಣಾ ಸಂಸ್ಕೃತಿಯನ್ನು ಸುಧಾರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಪ್ರಧಾನಮಂತ್ರಿ, ತಮ್ಮ ಕಾರ್ಯ ನಿರ್ವಹಣೆಯಲ್ಲಿ "ತುರ್ತು ಭಾವನೆ", ಮತ್ತು "ಮಾನದಂಡ" ಎರಡನ್ನೂ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಜಿಎಸ್ಟಿಯ ಲಾಭಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಗಳು, ದೇಶದ ಆರ್ಥಿಕ ಸಮಗ್ರತೆ ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದರ ಜೊತೆಗೆ, ಕೇವಲ ಎರಡು ತಿಂಗಳುಗಳಲ್ಲಿ 17 ಲಕ್ಷ ಹೊಸ ವ್ಯಾಪಾರಿಗಳನ್ನು ಪರೋಕ್ಷ ತೆರಿಗೆ ವ್ಯವಸ್ಥೆಗೆ ತಂದಿದೆ ಎಂದರು.
ಎಲ್ಲ ವರ್ತಕರೂ ಜಿಎಸ್ಟಿಯ ಗರಿಷ್ಠ ಲಾಭ ಪಡೆಯುವಂತೆ ಮಾಡಲು, 20 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿರುವ ಸಣ್ಣ ವರ್ತಕರೂ ಸೇರಿದಂತೆ ಎಲ್ಲ ವರ್ತಕರೂ ಜಿಎಸ್ಟಿ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವುದನ್ನು ಖಾತ್ರಿಪಡಿಸಿಕೊಳ್ಳಲು, ನಾವು ಶ್ರಮಿಸಬೇಕು ಎಂದು ಪ್ರಧಾನಿ ಹೇಳಿದರು. ಈ ವರ್ಗಕ್ಕೆ ವ್ಯವಸ್ಥೆಯೊಂದನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವಂತೆ ಅಧಿಕಾರಿಗಳಿಗೆ ಅವರು ತಿಳಿಸಿದರು.
ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಿರುವ 2022ರ ಹೊತ್ತಿಗೆ ದೇಶದ ತೆರಿಗೆ ಆಡಳಿತ ಸುಧಾರಿಸಲು ಸ್ಪಷ್ಟ ಗುರಿಯನ್ನು ಹೊಂದುವಂತೆ ಪ್ರಧಾನಿ ತಿಳಿಸಿದರು. ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿಸುವಂಥ ಮತ್ತು ಪ್ರಾಮಾಣಿಕ ತೆರಿಗೆದಾರರಲ್ಲಿ ನಂಬಿಕೆ ವಿಶ್ವಾಸ ಮೂಡಿಸುವಂಥ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಅಂದರೆ ನೋಟು ಅಮಾನ್ಯ ಮತ್ತು ಕಪ್ಪುಹಣ ಮತ್ತು ಬೇನಾಮಿ ಆಸ್ತಿಯ ವಿಚಾರದಲ್ಲಿ ತಂದಿರುವ ಕಠಿಣ ಕಾನೂನುಗಳ ಉಲ್ಲೇಖ ಮಾಡಿದರು.
ತೆರಿಗೆ ಆಡಳಿತದ ವ್ಯವಹಾರದಲ್ಲಿ ಮಾನವರ ಮುಖಾಮುಖಿ ಕಡಿಮೆ ಇರಬೇಕು ಎಂದು ಪ್ರಧಾನಿ ಹೇಳಿದರು. "ಇ-ಮೌಲ್ಯಮಾಪನ" ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಕ್ರಿಯೆಗಳಲ್ಲಿ ಅನಾಮಧೇಯತೆಯನ್ನು ಕಾಪಾಡಲು ಒತ್ತು ನೀಡಬೇಕೆಂದು ಹೇಳಿದ ಅವರು, ಇದರಿಂದ ಕಾನೂನಿನ ಪ್ರಕ್ರಿಯೆಯಲ್ಲಿ ಸ್ವಹಿತಾಸಕ್ತಿಗಳು ನುಸುಳುವುದಿಲ್ಲ ಎಂದರು.
ತೆರಿಗೆ ಸಂಬಂಧಿತ ಪ್ರಕರಣಗಳಲ್ಲಿ ತೀರ್ಪು ಮತ್ತು ಮೇಲ್ಮನವಿ ದೊಡ್ಡ ಸಂಖ್ಯೆಯಲ್ಲಿ ಬಾಕಿ ಇರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅತೃಪ್ತಿ ವ್ಯಕ್ತಪಡಿಸಿದರು. ಈ ಪ್ರಕರಣಗಳಲ್ಲಿ ಬಿಡುಗಡೆಯಾಗದೆ ಉಳಿದಿರುವ ದೊಡ್ಡ ಮೊತ್ತದ ಹಣವನ್ನು ಬಡವರ ಕಲ್ಯಾಣಕ್ಕೆ ಬಳಸಬಹುದಾಗಿತ್ತು ಎಂದರು. ಈ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ರಾಜಸ್ವ ಜ್ಞಾನ ಸಂಗಮದ ವೇಳೆ ಕ್ರಿಯಾ ಯೋಜನೆ ರೂಪಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.
ಅಘೋಷಿತ ಆದಾಯ ಮತ್ತು ಸಂಪತ್ತಿನ ಪತ್ತೆಗೆ ಸಕ್ರಿಯವಾಗಿ ದತ್ತಾಂಶ ವಿಶ್ಲೇಷಣಾ ಸಾಧನಗಳನ್ನು ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚಿಸಿದರು. ಪ್ರತಿ ವರ್ಷ ಅಧಿಕಾರಿಗಳು ತೆರಿಗೆ ಆದಾಯ ಹೆಚ್ಚಳ ಮಾಡಲು ಪ್ರಯತ್ನ ಮಾಡುತ್ತಿದ್ದಾಗ್ಯೂ, ವ್ಯವಸ್ಥೆಗೆ ಸೇರುವ ಅಂದಾಜು ಮಾಡಲಾದಷ್ಟು ತೆರಿಗೆ ಅನೇಕ ಸಂದರ್ಭದಲ್ಲಿ ನಗದಾಗಿರುವುದಿಲ್ಲ (ರಿಯಲೈಜ್) ಆಗಿರುವುದಿಲ್ಲ ಎಂದರು. 'ಸಂಗ್ರಹಿತ ತೆರಿಗೆ ಮತ್ತು ಅದರ ನಗದೀಕರಣ'ಕ್ಕೆ ಕಾಲಮಿತಿಯೊಳಗೆ ಸೂಕ್ತ ಪರಿಹಾರ ಹುಡುಕುವಂತೆಯೂ ಮತ್ತು ಅಪ್ರಾಮಾಣಿಕರು ಮಾಡುವ ತಪ್ಪುಕ್ರಮಗಳಿಂದ ಪ್ರಾಮಾಣಿಕರು ದಂಡ ತೆರುವಂತಾಗಬಾರದು ಎಂದು ಪ್ರಧಾನಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು. ಈ ನಿಟ್ಟಿನಲ್ಲಿ ತೆರಿಗೆ ಇಲಾಖೆಯಲ್ಲಿ ದತ್ತಾಂಶ ವಿಶ್ಲೇಷಣೆ ಮತ್ತು ತನಿಖಾ ದಳ ಬಲಪಡಿಸಲು ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಪೂರ್ಣ ಪುನರ್ ಬಳಕೆಗೆ ಸಲಹೆ ಮಾಡಿದರು.
ಎರಡು ದಿನಗಳ ಜ್ಞಾನ ಸಂಗಮವು ತೆರಿಗೆ ಆಡಳಿತದ ಸುಧಾರಣೆಗೆ ಸಮಗ್ರ ಕಲ್ಪನೆಯೊಂದಿಗೆ ಹೊರಬರಲಿದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.