ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ 2021 ರ ಜನವರಿ 30 ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ವ ಪಕ್ಷಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಹಾತ್ಮಾ ಗಾಂಧಿ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ಸಲ್ಲಿಸಿ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ಅವರು ಗಾಂಧಿ ಅವರ ಕನಸುಗಳನ್ನು ನನಸು ಮಾಡಲು ನಾವು ಪರಿಶ್ರಮಪಡಬೇಕು ಎಂದರು. ಅಮೆರಿಕಾದಲ್ಲಿ ಇಂದು ಮುಂಜಾನೆ ಮಹಾತ್ಮಾಗಾಂಧಿ ಅವರ ಪ್ರತಿಮೆಯನ್ನು ಅಪವಿತ್ರ ಮಾಡಿರುವುದನ್ನು ಅವರು ಖಂಡಿಸಿದರಲ್ಲದೆ, ಇಂತಹ ಹಗೆಯ ವಾತಾವರಣ ನಮ್ಮ ಭೂಗ್ರಹಕ್ಕೆ ಸ್ವಾಗತಾರ್ಹವಲ್ಲ ಎಂದರು.
ಕೃಷಿ ಕಾನೂನುಗಳಿಗೆ ಸಂಬಂಧಿಸಿ ಸರಕಾರವು ಮುಕ್ತ ಮನಸ್ಸು ಹೊಂದಿದೆ ಎಂದು ಹೇಳಿದ ಪ್ರಧಾನ ಮಂತ್ರಿ ಅವರು ಈ ಬಗ್ಗೆ ಸರಕಾರದ ನಿಲುವು ಜನವರಿ 22 ರಂದು ಏನಾಗಿತ್ತೋ ಅದೇ ಈಗಲೂ ಮುಂದುವರೆದಿದೆ, ಮತ್ತು ಕೃಷಿ ಸಚಿವರು ಕೊಟ್ಟಿರುವ ಪ್ರಸ್ತಾವಗಳು ಈಗಲೂ ಚಾಲ್ತಿಯಲ್ಲಿವೆ ಎಂದರು. ಮುಂದಿನ ಮಾತುಕತೆ ನಡೆಸುವುದಾದರೆ ಕೃಷಿ ಸಚಿವರು ಬರೇ ಒಂದು ದೂರವಾಣಿ ಕರೆ ಮಾಡಿದರೂ ಬರುತ್ತಾರೆ ಎಂಬುದನ್ನು ಅವರು ಪುನರುಚ್ಚರಿಸಿದರು.
ಜನವರಿ 26 ರಂದು ನಡೆದ ದುರದೃಷ್ಟಕರ ಘಟನೆಯ ಕುರಿತಂತೆ ನಾಯಕರು ಮಾಡಿದ ಉಲ್ಲೇಖಗಳಿಗೆ ಉತ್ತರಿಸಿದ ಪ್ರಧಾನ ಮಂತ್ರಿ ಅವರು ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದರು.
ಸಭೆಯಲ್ಲಿ ನಾಯಕರು ಎತ್ತಿರುವ ವಿಷಯಗಳ ಬಗ್ಗೆ ವಿವರವಾದ ಚರ್ಚೆಗೆ ಸರಕಾರ ಬದ್ಧವಿದೆ ಎಂದ ಪ್ರಧಾನ ಮಂತ್ರಿ ಅವರು ಸಂಸತ್ತಿನ ಸುಸೂತ್ರ ಕಾರ್ಯನಿರ್ವಹಣೆಯ ಮಹತ್ವದ ಬಗ್ಗೆ ಪುನರುಚ್ಚರಿಸಿದರಲ್ಲದೆ ಸದನದಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದೂ ಹೇಳಿದರು. ಪದೇ ಪದೇ ಕಾರ್ಯಕಲಾಪಗಳಿಗೆ ಅಡ್ಡಿ ಮಾಡುವುದರಿಂದ ಸಣ್ಣ ಪಕ್ಷಗಳಿಗೆ ತಮ್ಮ ಅಭಿಪ್ರಾಯ ಹೇಳಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತವೆ ಎಂದರು. ಸಂಸತ್ತಿನ ಕಲಾಪಗಳು ಸುಸೂತ್ರವಾಗಿ ನಡೆಯುವಂತೆ ದೊಡ್ಡ ಪಕ್ಷಗಳು ಖಾತ್ರಿಪಡಿಸಬೇಕು ಎಂದ ಅವರು ಆಗ ಕಲಾಪಗಳಿಗೆ ಅಡ್ಡಿಯೊದಗುವುದಿಲ್ಲ, ಮತ್ತು ಸಣ್ಣ ಪಕ್ಷಗಳು ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳ ಬಗ್ಗೆ ಧ್ವನಿ ಎತ್ತಲು ಸಾಧ್ಯವಾಗುತ್ತದೆ ಎಂದೂ ಹೇಳಿದರು.
ಹಲವಾರು ವಲಯಗಳಲ್ಲಿ ಜಾಗತಿಕ ಒಳಿತಿಗಾಗಿ ಭಾರತ ವಹಿಸಬಹುದಾದ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ ಅವರು ನಮ್ಮ ಜನರ ಕೌಶಲ್ಯಗಳು ಮತ್ತು ಪರಾಕ್ರಮ ಜಾಗತಿಕ ಸಮೃದ್ಧಿಯನ್ನು ಹೆಚ್ಚಿಸುವ ಶಕ್ತಿಯಾಗಬಲ್ಲವು ಎಂದರು.