#MannKiBaat: PM Modi congratulates all women crew of INSV Tarini for successfully completing the ‘Navika Sagar Parikrama’ expedition
Development is born in the lap of adventure, says PM Modi during #MannKiBaat
#MannKiBaat: PM Modi appreciates those who scaled Mt. Everest
People from all walks of life, be it film actors, sportspersons, our soldiers, teachers, or even the people, everyone is of the same opinion that ‘Hum Fit To India Fit’: PM #MannKiBaat
We are able to freely express our unique qualities while playing: PM Modi #MannKiBaat
Traditional games promote our logical thinking; enhance concentration, awareness and energy: PM Modi during #MannKiBaat
On June 5, India will officially host the World Environment Day Celebrations: PM Modi #MannKiBaat
Let us make sure that we do not use polythene, lower grade plastic as plastic pollution adversely impacts nature, wildlife and even our health: PM #MannKiBaat
Being sensitive towards nature and protecting it should be our motive; we have to live with harmony with nature: PM during #MannKiBaat
#MannKiBaat: PM Modi highlights vitality of Yoga, recalls its ancient connect
As International Day of Yoga nears, let us promote Yoga for unity and harmonious society: PM during #MannKiBaat
It was this month of May in 1857 when Indians had shown their strength to the British: PM Modi during #MannKiBaat
It was Veer Savarkar, who wrote boldly that whatever happened in 1857 was not a revolt but the first fight for independence: PM Modi #MannKiBaat
Veer Savarkar worshiped both ‘Shastra’ and ‘Shaastra.’ He is known for his bravery and his struggle against the British Raj: PM during #MannKiBaat

ನಮಸ್ಕಾರ.

ಮನದ ಮಾತಿನ ಮುಖಾಂತರ ಮತ್ತೊಮ್ಮೆ ನಿಮ್ಮೆಲ್ಲರೊಂದಿಗೆ ಮುಖಾಮುಖಿ ಆಗುವ ಅವಕಾಶ ಸಿಕ್ಕಿದೆ. ನೌಕಾ ಸೇನೆಯ ಆರು ಮಹಿಳಾ ಕಮಾಂಡರ್ ಗಳ ಒಂದು ಪಡೆಯು ಕಳೆದ ಕೆಲವು ತಿಂಗಳುಗಳಿಂದ ಸಮುದ್ರದಲ್ಲಿ ಸಂಚರಿಸುತ್ತಿರುವುದು ನಿಮ್ಮೆಲ್ಲರಿಗೂ ಚೆನ್ನಾಗಿ ನೆನಪಿರಬಹುದು. “ನಾವಿಕಾ ಸಾಗರ ಪರಿಕ್ರಮ” – ಹೌದು, ನಾನು ಅವರ ವಿಷಯವಾಗಿ ಸ್ವಲ್ಪ ಮಾತನಾಡಲು ಇಚ್ಚಿಸುತ್ತೇನೆ. ಭಾರತದ ಈ ಆರು ಸುಪುತ್ರಿಯರ ತಂಡವು ಎರಡುನೂರ ಐವತ್ತನಾಲ್ಕು ದಿನಗಳು – 250 ಕ್ಕಿಂತ ಹೆಚ್ಚು ದಿನಗಳು ಸಮುದ್ರ ಮಾರ್ಗದಲ್ಲಿ INSV ತಾರಿಣಿಯಲ್ಲಿ ಇಡೀ ವಿಶ್ವದ ಪರ್ಯಟನೆ ಮಾಡಿ ಮೇ 21 ರಂದು ಭಾರತಕ್ಕೆ ಹಿಂತಿರುಗಿ ಬಂದಿದ್ದಾರೆ. ಅವರನ್ನು ಇಡೀ ದೇಶವು ಸಾಕಷ್ಟು ಉತ್ಸಾಹದಿಂದ ಸ್ವಾಗತಿಸಿದೆ. ಅವರು ವಿಭಿನ್ನ ಮಹಾಸಾಗರಗಳಲ್ಲಿ ಮತ್ತು ಬಹಳಷ್ಟು ಸಮುದ್ರಗಳಲ್ಲಿ ಪ್ರವಾಸ ಮಾಡುತ್ತಾ ಸುಮಾರು 22 ಸಾವಿರ ನಾಟಿಕಲ್ ಮೈಲಿಗಳಷ್ಟು ದೂರವನ್ನು ಕ್ರಮಿಸಿದ್ದಾರೆ. ಇದು ವಿಶ್ವದಲ್ಲೇ ಇಂತಹ ಮೊದಲ ಘಟನೆಯಾಗಿದೆ. ಕಳೆದ ಬುಧವಾರ ಈ ಎಲ್ಲಾ ಹೆಣ್ಣುಮಕ್ಕಳನ್ನು ಭೇಟಿ ಮಾಡುವ, ಅವರ ಅನುಭವಗಳನ್ನು ಕೇಳುವ ಅವಕಾಶ ಸಿಕ್ಕಿತ್ತು. ನಾನು ಮತ್ತೊಮ್ಮೆ ಈ ಹೆಣ್ಣುಮಕ್ಕಳನ್ನು, ಅವರ ಸಾಹಸವನ್ನು, ನೌಕಾಪಡೆಯ ಗೌರವವನ್ನು, ಭಾರತದ ಗೌರವವನ್ನು ಹೆಚ್ಚಿಸಿದ್ದಕ್ಕಾಗಿ ಮತ್ತು ವಿಶೇಷವಾಗಿ “ಭಾರತದ ಹೆಣ್ಣುಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ ಎಂದು ಜಗತ್ತೇ ತಿಳಿದುಕೊಳ್ಳಲಿ’’ ಎನ್ನುವ ಸಂದೇಶವನ್ನು ತಲುಪಿಸಿದ್ದಕ್ಕಾಗಿ ಬಹಳವಾಗಿ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಸಾಹಸದ ಪರಿಕಲ್ಪನೆ ಯಾರಿಗೆ ಗೊತ್ತಿಲ್ಲ? ಬಹುಶಃ ನಾವು ಮಾನವ ಜೀವಿಗಳ ವಿಕಾಸ ಯಾತ್ರೆಯನ್ನು ಗಮನಿಸಿದಾಗ ಯಾವುದಾದರೊಂದು ಸಾಹಸದ ಗರ್ಭದಲ್ಲೇ ಪ್ರಗತಿ ಎನ್ನುವುದು ಹುಟ್ಟಿಬಂದಿದೆ. ವಿಕಾಸ ಎನ್ನುವುದು ಸಾಹಸದ ಮಡಿಲಲ್ಲೇ ಜೀವ ಪಡೆದುಕೊಳ್ಳುತ್ತದೆ. ಏನಾದರೊಂದು ಮಾಡಿ ಹೋಗುವ ಉದ್ದೇಶ, ವಿಭಿನ್ನವಾಗಿ ಮಾಡುವ ಮನಸ್ಥಿತಿ, ಏನೋ ಅಸಾಮಾನ್ಯವಾದದ್ದನ್ನು ಮಾಡುವಂಥದ್ದು, ನಾನೂ ಏನನ್ನಾದರೂ ಮಾಡಬಲ್ಲೆ ಎನ್ನುವ ಮನೋಭಾವ ಇರುವವರು ಕಡಿಮೆ ಇದ್ದರೂ ಕೂಡ ಇದು ಯುಗ ಯುಗಗಳಲ್ಲಿ, ಕೋಟಿ ಕೋಟಿ ಜನರಿಗೆ ಸ್ಫೂರ್ತಿದಾಯಕವಾಗಿರುತ್ತದೆ. ಕಳೆದ ದಿನಗಳಲ್ಲಿ ಮೌಂಟ್ ಎವರೆಸ್ಟ್ ಹತ್ತುವವರ ವಿಷಯದಲ್ಲಿ ಬಹಳಷ್ಟು ಹೊಸ ಹೊಸ ಮಾತುಗಳು ಗಮನಕ್ಕೆ ಬಂದಿವೆ, ಶತಮಾನಗಳಿಂದ ಎವರೆಸ್ಟ್ ಶಿಖರವು ಮಾನವರಿಗೆ ಸವಾಲುಗಳನ್ನು ಒಡ್ಡುತ್ತಿದೆ ಮತ್ತು ಶೌರ್ಯವಂತರು ಆ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ.

ಮೇ ಹದಿನಾರರಂದು ಮಹಾರಾಷ್ಟ್ರದ ಚಂದ್ರಪುರದ ಒಂದು ಆಶ್ರಮ-ಶಾಲೆಯ 5 ಆದಿವಾಸಿ ಮಕ್ಕಳು – ಮನೀಷಾ ಧುರ್ವೆ, ಪ್ರಮೇಶ್ ಆಲೆ, ಉಮಾಕಾಂತ್ ಮಡವಿ, ಕವಿದಾಸ್ ಕಾತ್ ಮೋಡೆ, ವಿಕಾಸ್ ಸೋಯಾಮ್ – ಈ ನಮ್ಮ ಆದಿವಾಸಿ ಮಕ್ಕಳ ಒಂದು ದಳವು ಪ್ರಪಂಚದಲ್ಲೇ ಎತ್ತರವಾದ ಪರ್ವತವನ್ನು ಹತ್ತಿದರು. ಆಶ್ರಮ ಶಾಲೆಯ ಈ ವಿದ್ಯಾರ್ಥಿಗಳು ಆಗಸ್ಟ್ 2017 ರಲ್ಲಿ ತರಬೇತಿ ಪ್ರಾರಂಭಿಸಿದರು. ವರ್ಧಾ, ಹೈದರಾಬಾದ್, ಡಾರ್ಜಲಿಂಗ್, ಲೇಹ್, ಲಡಾಕ್ – ಈ ಜಾಗಗಳಲ್ಲಿ ಇವರ ತರಬೇತಿ ನಡೆಯಿತು. ಈ ಯುವಕರನ್ನು ‘ಮಿಶನ್ ಶೌರ್ಯ’ ಈ ಕಾರ್ಯಕ್ರಮದ ಅಡಿಯಲ್ಲಿ ಆರಿಸಲಾಗಿತ್ತು. ಹೆಸರಿಗೆ ತಕ್ಕಂತೆ ಎವರೆಸ್ಟ್ ಶಿಖರವನ್ನು ಹತ್ತಿ ಅವರು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ನಾನು ಚಂದ್ರಪುರದ ಶಾಲೆಯ ಜನರಿಗೆ, ನನ್ನ ಈ ಪುಟ್ಟ ಪುಟ್ಟ ಗೆಳೆಯರಿಗೆ ಹೃದಯಪೂರ್ವಕವಾದ ಅಭಿನಂದನೆಗಳನ್ನು ಹೇಳುತ್ತಿದ್ದೇನೆ. ಇತ್ತೀಚೆಗೆ 16 ವರ್ಷದ ಶಿವಾಂಗಿ ಪಾಠಕ್ ನೇಪಾಳದ ಕಡೆಯಿಂದ ಎವರೆಸ್ಟ್ ಹತ್ತಿದ ಎಲ್ಲರಿಗಿಂತ ಕಿರಿಯ ಭಾರತೀಯ ಮಹಿಳೆಯಾದರು. ಹೆಮ್ಮೆಯ ಪುತ್ರಿ ಶಿವಾಂಗಿಗೆ ಅನಂತಾನಂತ ಅಭಿನಂದನೆಗಳು.

ಅಜೀತ್ ಬಜಾಜ್ ಮತ್ತು ಅವರ ಮಗಳು ದಿಯಾ ಎವರೆಸ್ಟ್ ಹತ್ತಿದ ಮೊದಲ ಭಾರತೀಯ ತಂದೆ-ಮಗಳ ಜೋಡಿ ಆಯಿತು. ಬರೀ ಯುವಕರಷ್ಟೇ ಎವರೆಸ್ಟ್ ಹತ್ತುತ್ತಾರೆ ಎಂದೇನಿಲ್ಲ. ಸಂಗೀತಾ ಬಹಲ್ ಅವರು ಮೇ 19 ರಂದು ಎವರೆಸ್ಟ್ ಹತ್ತಿದರು. ಸಂಗೀತಾ ಬಹಲ್ ಅವರ ವಯಸ್ಸು 50 ಕ್ಕಿಂತ ಹೆಚ್ಚಾಗಿದೆ. ಎವರೆಸ್ಟ್ ಹತ್ತಿದವರಲ್ಲಿ ಕೆಲವರು ‘ಅವರ ಬಳಿ ಬರೀ ಕೌಶಲ್ಯ ಮಾತ್ರವೇ ಅಲ್ಲ, ಜೊತೆಗೆ ಅವರು ಸೂಕ್ಷ್ಮಗ್ರಾಹಿಗಳೂ ಆಗಿದ್ದಾರೆ’ ಎಂಬುದನ್ನು ತೋರಿಸಿದಂತಹ ಜನರೂ ಇದ್ದಾರೆ. ಈಗ್ಗೆ, ಕೆಲವು ದಿನಗಳ ಹಿಂದೆ ಸ್ವಚ್ಛ ಗಂಗಾ ಅಭಿಯಾನದ ಅಡಿಯಲ್ಲಿ ಬಿಎಸ್ ಎಫ್ ನ ಒಂದು ತಂಡವು ಎವರೆಸ್ಟ್ ಹತ್ತಿತ್ತು. ಆದರೆ, ಪೂರಾ ತಂಡವು ಎವರೆಸ್ಟ್ ನಿಂದ ಬಹಳಷ್ಟು ತ್ಯಾಜ್ಯ ವಸ್ತುಗಳನ್ನು ತಮ್ಮ ಜೊತೆಗೆ ಕೆಳಗೆ ತಂದಿತ್ತು. ಈ ಕೆಲಸವು ಪ್ರಶಂಸನೀಯವಾಗಿರುವುದರ ಜೊತೆಗೆ ಸ್ವಚ್ಚತೆಯ ಬಗ್ಗೆ, ಪರಿಸರದ ಬಗ್ಗೆ ಅವರಿಗಿರುವ ಬದ್ಧತೆಯನ್ನೂ ಸಹ ತೋರಿಸಿಕೊಡುತ್ತದೆ. ಬಹಳಷ್ಟು ವರ್ಷಗಳಿಂದ ಜನರು ಎವರೆಸ್ಟ್ ಶಿಖರವನ್ನು ಹತ್ತುತ್ತಲೇ ಇದ್ದಾರೆ ಮತ್ತು ಅದರಲ್ಲಿ ಸಫಲತೆಯಿಂದ ಪೂರ್ತಿಗೊಳಿಸಿದವರು ಕೂಡ ಬಹಳಷ್ಟು ಜನ ಇದ್ದಾರೆ. ನಾನು ಈ ಎಲ್ಲಾ ಸಾಹಸಿ ವೀರರಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.

ನನ್ನ ಪ್ರೀತಿಯ ದೇಶವಾಸಿಗಳೇ ಮತ್ತು ವಿಶೇಷವಾಗಿ ನನ್ನ ಯುವ ಮಿತ್ರರೇ, ಈಗ ಎರಡು ತಿಂಗಳ ಹಿಂದೆ ನಾನು ಫಿಟ್ ಇಂಡಿಯಾದ ಬಗ್ಗೆ ಮಾತನಾಡಿದ್ದೆ. ಇದರ ಬಗ್ಗೆ ಇಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ಬರುತ್ತದೆ, ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಎಲ್ಲಾ ಕ್ಷೇತ್ರಗಳಿಂದಲೂ ಜನರು ಇದರ ಬೆಂಬಲಕ್ಕಾಗಿ ಮುಂದೆ ಬರುತ್ತಾರೆ ಎಂದು ನಾನು ಯೋಚಿಸಿರಲಿಲ್ಲ. ಯಾವಾಗ ನಾನು ಫಿಟ್ ಇಂಡಿಯಾದ ಬಗ್ಗೆ ಮಾತನಾಡುತ್ತೇನೆಯೋ, ಆಗ “ನಾವು ಎಷ್ಟು ಆಟವಾಡುತ್ತೇವೆಯೋ ಅಷ್ಟೇ ದೇಶವೂ ಆಡುತ್ತದೆ” ಎನ್ನುವುದನ್ನು ನಾನು ಒಪ್ಪುತ್ತೇನೆ. ಸೋಶಿಯಲ್ ಮೀಡಿಯಾಗಳಲ್ಲಿ ಜನರು ಫಿಟ್ನೆಸ್ ಚಾಲೆಂಜ್ ಗಳ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿ ಒಬ್ಬರನ್ನೊಬ್ಬರು ಟ್ಯಾಗ್ ಮಾಡಿ ಚಾಲೆಂಜ್ ಮಾಡುತ್ತಿದ್ದಾರೆ. ಫಿಟ್ ಇಂಡಿಯಾದ ಈ ಅಭಿಯಾನಕ್ಕೆ ಇಂದು ಚಿತ್ರಜಗತ್ತಿಗೆ ಸೇರಿದ ಜನರಾಗಲಿ, ಕ್ರೀಡೆಗಳಿಗೆ ಸೇರಿದ ಜನರಾಗಲಿ ಅಥವಾ ದೇಶದ ಸಾಮಾನ್ಯ ಜನರು, ಸೇನೆಯ ಯೋಧರಾಗಿರಲಿ, ಶಾಲಾ ಶಿಕ್ಷಕರಾಗಿರಲಿ ಹೀಗೆ ಪ್ರತಿಯೊಬ್ಬರೂ ಇದರಲ್ಲಿ ಸೇರಿಕೊಳ್ಳುತ್ತಿದ್ದಾರೆ. ನಾಲ್ಕೂ ದಿಕ್ಕಿನಿಂದ “ನಾವು ಫಿಟ್ ಆಗಿದ್ದರೆ ಇಂಡಿಯಾ ಫಿಟ್ ಆಗಿರುತ್ತದೆ” ಎಂಬ ಒಂದೇ ಘೋಷ ಕೇಳಿಬರುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ನನಗೆ ಚಾಲೆಂಜ್ ಮಾಡಿದ್ದಾರೆ ಮತ್ತು ನಾನು ಆ ಚಾಲೆಂಜ್ ಅನ್ನು ಸ್ವೀಕರಿಸಿದ್ದೇನೆ ಎನ್ನುವುದು ನನಗೆ ಖುಷಿಯ ವಿಚಾರ. ಈ ರೀತಿಯ ಚಾಲೆಂಜ್ ಗಳು ಒಳ್ಳೆಯದು ಎನ್ನುವುದನ್ನು ನಾನು ಒಪ್ಪುತ್ತೇನೆ. ಈ ರೀತಿಯ ಚಾಲೆಂಜ್ ಗಳು ನಮ್ಮನ್ನು ಫಿಟ್ ಆಗಿ ಇರಿಸಲು ಸಹಾಯ ಮಾಡುವುದರ ಜೊತೆಗೆ ಬೇರೆಯವರನ್ನು ಸಹ ಫಿಟ್ ಆಗಿರುವಂತೆ ಪ್ರೋತ್ಸಾಹಿಸುತ್ತವೆ.

ನನ್ನ ಪ್ರೀತಿಯ ದೇಶವಾಸಿಗಳೇ, ಮನದ ಮಾತು ಕಾರ್ಯಕ್ರಮದಲ್ಲಿ ಕ್ರೀಡೆಗಳಿಗೆ ಸಂಬಂಧಿಸಿದಂತೆ, ಕ್ರೀಡಾಪಟುಗಳಿಗೆ ಸಂಬಂಧಿಸಿದಂತೆ ಏನಾದರೂ ಮಾತುಗಳು ನನ್ನಿಂದ ನೀವು ಕೇಳಿರುತ್ತೀರಿ. ಹಿಂದಿನ ಸಾರಿಯಂತೂ ಕಾಮನ್ ವೆಲ್ತ್ ಕ್ರೀಡಾಕೂಟದ ನಮ್ಮ ನಾಯಕರು ತಮ್ಮ ಮನದ ಮಾತುಗಳನ್ನು ಈ ಕಾರ್ಯಕ್ರಮದ ಮುಖಾಂತರ ನಮಗೆ ಹೇಳುತ್ತಿದ್ದರು –

“ನಮಸ್ಕಾರ ಸರ್. ನಾನು ಛವಿ ಯಾದವ್ ನೊಯಿಡಾದಿಂದ ಮಾತನಾಡುತ್ತಿದ್ದೇನೆ. ನಾನು ನಿಮ್ಮ ಮನದ ಮಾತು ಕಾರ್ಯಕ್ರಮದ ಖಾಯಂ ಶ್ರೋತೃವಾಗಿದ್ದೇನೆ ಮತ್ತು ಇಂದು ನಾನು ನಿಮಗೆ ನನ್ನ ಮನದ ಮಾತುಗಳನ್ನು ಹೇಳಲು ಇಚ್ಚಿಸುತ್ತೇನೆ. ಈ ದಿನಗಳಲ್ಲಿ ಬೇಸಿಗೆಯ ರಜೆ ಶುರುವಾಗಿದೆ. ಮಕ್ಕಳು ಇಂಟರ್ನೆಟ್ ಆಟಗಳನ್ನು ಆಡುವುದರಲ್ಲೇ ಹೆಚ್ಚಿನ ಸಮಯ ವ್ಯಯಿಸುವುದನ್ನು ನಾನು ಒಬ್ಬ ತಾಯಿಯಾಗಿ ನೋಡಿದ್ದೇನೆ. ನಾವು ಚಿಕ್ಕವರಾಗಿದ್ದಾಗ ಸಾಂಪ್ರದಾಯಿಕ ಆಟಗಳು ಅದರಲ್ಲೂ ಹೆಚ್ಚಾಗಿ ಯಾವುದು ಹೊರಾಂಗಣ ಆಟಗಳಾಗಿದ್ದವೋ ಅವುಗಳನ್ನು ಆಡುತ್ತಿದ್ದೆವು. ಅದೇ ರೀತಿ ಒಂದು ಆಟವಿತ್ತು. ಅದರಲ್ಲಿ ಕಲ್ಲಿನ ಏಳು ತುಂಡುಗಳನ್ನು ಒಂದರ ಮೇಲೊಂದರಂತೆ ಇಟ್ಟು ಅದನ್ನು ಚೆಂಡಿನಿಂದ ಹೊಡೆಯುತ್ತಿದ್ದೆವು ಮತ್ತು ಅದು ಮೇಲೆ ಕೆಳಗೆ ಆಗುತ್ತಿತ್ತು, ಅದರಂತೆ, ಖೋ ಖೋ; ಈ ಎಲ್ಲಾ ಆಟಗಳು ಇಂದಿನ ದಿನಗಳಲ್ಲಿ ಕಾಣೆಯಾಗುತ್ತಿವೆ. ನೀವು ಇಂದಿನ ಪೀಳಿಗೆಯವರಿಗೆ ಇಂತಹ ಸಾಂಪ್ರದಾಯಿಕ ಆಟಗಳ ಬಗ್ಗೆ ಹೇಳಿ ಎನ್ನುವುದು ನನ್ನ ಕೋರಿಕೆ. ಅದರಿಂದ ಅವರಿಗೂ ಇದರ ಬಗ್ಗೆ ಆಸಕ್ತಿ ಹೆಚ್ಚಲಿ. ಧನ್ಯವಾದ.”

ಛವಿ ಯಾದವ್ ರವರೇ, ನಿಮ್ಮ ದೂರವಾಣಿ ಕರೆಗಾಗಿ ನಿಮಗೆ ತುಂಬಾ ಧನ್ಯವಾದಗಳು. ಹಿಂದೆ ಗಲ್ಲಿ ಗಲ್ಲಿಗಳಲ್ಲಿ, ಪ್ರತಿ ಮಗುವಿನ ಜೀವನದ ಭಾಗವಾಗಿದ್ದ ಆಟಗಳು ಇಂದು ಕಡಿಮೆಯಾಗುತ್ತಿವೆ ಎನ್ನುವ ಮಾತು ಸತ್ಯ. ಈ ಆಟಗಳು ಮುಖ್ಯವಾಗಿ ಬೇಸಿಗೆ ರಜೆಗಳ ವಿಶೇಷ ಭಾಗವಾಗಿರುತ್ತಿತ್ತು. ಕೆಲವೊಮ್ಮೆ ನಡು ಮಧ್ಯಾನ್ಹದಲ್ಲಿ ಮತ್ತೆ ಕೆಲವೊಮ್ಮೆ ರಾತ್ರಿಯ ಊಟವಾದ ಮೇಲೆ ಯಾವುದೇ ಚಿಂತೆಯಿಲ್ಲದೆ, ಖಡಾಖಂಡಿತವಾಗಿ ಯಾವ ಯೋಚನೆಯನ್ನೂ ಮಾಡದೆ ಮಕ್ಕಳು ಘಂಟೆಗಟ್ಟಲೆ ಆಟವಾಡುತ್ತಿದ್ದರು. ಕೆಲವೊಂದು ಆಟಗಳು ಹೇಗಿದ್ದವೆಂದರೆ ಪೂರ್ತಿ ಪರಿವಾರವು ಜೊತೆಯಲ್ಲಿ ಆಟವಾಡುತ್ತಿತ್ತು. ಪಿಟ್ಟೂ ಅಥವಾ ಕಂಚೆ ಆಗಲಿ, ಖೋ ಖೋ ಅಗಲಿ, ಕೋಲಾಟ ಅಥವಾ ಚಿನ್ನಿ ದಾಂಡು ಅಗಲಿ, ಎಣಿಸಲಾಗದಷ್ಟು ಆಟಗಳು ಕಾಶ್ಮೀರದಿಂದ ಕನ್ಯಾಕುಮಾರಿ, ಕಛ್ಚ್ ನಿಂದ ಕಾಮರೂಪ್ ನವರೆಗೆ ಎಲ್ಲರಿಗೂ ಬಾಲ್ಯದ ಭಾಗವಾಗಿರುತ್ತಿತ್ತು. ಹೌದು, ಬೇರೆ ಬೇರೆ ಪ್ರದೇಶಗಳಲ್ಲಿ ಈ ಆಟಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟಿರುವುದು ಆಗಿರಬಹುದು. ಉದಾಹರಣೆಗೆ – ಪಿಟ್ಟೂ – ಕೆಲವರು ಇದನ್ನು ಲಗೋರಿ, ಸಾತೋಲಿಯಾ, ಸಾತ್ ಪತ್ಥರ್, ಡಿಕೋರಿ, ಸತೋದಿಯಾ ಎಂದೆಲ್ಲ ಅನೇಕ ಹೆಸರುಗಳಿಂದ ಕರೆಯುತ್ತಾರೆ, ಇದೊಂದೇ ಆಟಕ್ಕೆ ಇನ್ನೂ ಎಷ್ಟು ಹೆಸರುಗಳಿವೆಯೋ ಗೊತ್ತಿಲ್ಲ. ಸಾಂಪ್ರದಾಯಿಕ ಆಟಗಳಲ್ಲಿ ಹೊರಾಂಗಣ, ಒಳಾಂಗಣ ಹೀಗೆ ಎರಡೂ ರೀತಿಯ ಆಟಗಳಿವೆ. ನಮ್ಮ ದೇಶದ ವಿವಿಧತೆಯ ಹಿಂದೆ ಬಚ್ಚಿಟ್ಟುಕೊಂಡಿರುವ ಏಕತೆಯನ್ನು ಈ ಆಟಗಳಲ್ಲಿ ಸಹ ನೋಡಬಹುದಾಗಿದೆ. ಒಂದೇ ಆಟ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ. ನಾನು ಗುಜರಾತಿನವನು. ಅಲ್ಲಿ ಚೋಮಲ್- ಇಸ್ತೋ ಎನ್ನುವ ಒಂದು ಆಟವಿದೆ. ಈ ಆಟವು ಕವಡೆ ಅಥವಾ ಹುಣಸೆ ಬೀಜ ಅಥವಾ ದಾಳಗಳ ಜೊತೆಗೆ 8X8 ರ ಚೌಕಾಕಾರದ ಬೋರ್ಡ್ ನ ಸಹಾಯದಿಂದ ಆಡಲ್ಪಡುತ್ತದೆ. ಈ ಆಟವನ್ನು ಸರಿ ಸುಮಾರು ಎಲ್ಲಾ ರಾಜ್ಯಗಳಲ್ಲೂ ಆಡುತ್ತಿದ್ದರು. ಕರ್ನಾಟಕದಲ್ಲಿ ಇದಕ್ಕೆ ಚೌಕ ಬಾರಾ ಎಂದು ಹೇಳಿದರೆ, ಮಧ್ಯಪ್ರದೇಶದಲ್ಲಿ ಅತ್ತೂ; ಕೇರಳದಲ್ಲಿ ಪಕೀಡಾಕಾಲೀ ಎಂದಾದರೆ ಮಹಾರಾಷ್ಟ್ರದಲ್ಲಿ ಚಂಪಲ್, ತಮಿಳುನಾಡಿನಲ್ಲಿ ದಾಯಾಮ್ ಮತ್ತು ಥಾಯಾಮ್, ರಾಜಾಸ್ಥಾನದಲ್ಲಿ ಚಂಗಾಪೋ, ಇನ್ನೂ ಎಷ್ಟು ಹೆಸರುಗಳಿವೆಯೋ ಗೊತ್ತಿಲ್ಲ; ಆದರೆ ಪ್ರತಿ ರಾಜ್ಯದವರಿಗೂ ಭಾಷೆ ಗೊತ್ತಿಲ್ಲದಿದ್ದರೂ ಸಹ “ಅರೇ ವಾವ್, ಈ ಆಟವನ್ನು ನಾವೂ ಆಡಿದ್ದೇವೆ” ಎಂದು ಆಡಿದ ಮೇಲೆ ಅನ್ನಿಸುತ್ತದೆ. ಬಾಲ್ಯದಲ್ಲಿ ಚಿನ್ನಿ ದಾಂಡು ಆಡದವರು ನಮ್ಮಲ್ಲಿ ಯಾರಿದ್ದಾರೆ? ಇದಂತೂ ಹಳ್ಳಿಯಿಂದ ಹಿಡಿದು ಪಟ್ಟಣದವರೆಗೆ ಎಲ್ಲರೂ ಆಡುವಂತಹ ಆಟ. ದೇಶದ ಬೇರೆ ಬೇರೆ ಭಾಗಗಳಲ್ಲಿ ಇದು ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ. ಆಂಧ್ರಪ್ರದೇಶದಲ್ಲಿ ಇದನ್ನು ಗೋಟಿಬಿಲ್ಲಾ ಅಥವಾ ಕಾರ್ರಿಬಿಲ್ಲಾ ಎಂಬ ಹೆಸರಿನಿಂದ ಕರೆಯುತ್ತಾರೆ. ಒರಿಸ್ಸಾದಲ್ಲಿ ಇದನ್ನು ಗುಲಿಬಾಡಿ ಎಂದು ಕರೆದರೆ ಮಹಾರಾಷ್ಟ್ರದಲ್ಲಿ ಇದನ್ನು ವಿತ್ತಿಡಾಲೂ ಎನ್ನುತ್ತಾರೆ. ಕೆಲವು ಆಟಗಳಿಗೆ ಅದರದ್ದೇ ಆದ ಒಂದು ಋತು ಇರುತ್ತದೆ. ಉದಾಹರಣೆಗೆ, ಗಾಳಿಪಟ ಹಾರಿಸುವುದಕ್ಕೆ ಕೂಡ ಒಂದು ಋತು ಇರುತ್ತದೆ. ಯಾವಾಗ ಗಾಳಿಪಟ ಹಾರಿಸುತ್ತಾ ನಾವು ಆಡುತ್ತೇವೆಯೋ ಆಗ ನಮ್ಮಲ್ಲಿ ಇರುವ ವಿಶಿಷ್ಠ ಗುಣಗಳನ್ನು ನಾವು ಮುಕ್ತವಾಗಿ ವ್ಯಕ್ತಪಡಿಸಬಲ್ಲೆವು. ಕೆಲವು ಮಕ್ಕಳು ನಾಚಿಕೆ ಸ್ವಭಾವದವರಾಗಿರುತ್ತಾರೆ, ಆದರೆ ಆಟವಾಡುವ ಸಮಯದಲ್ಲಿ ಬಹಳ ಲವಲವಿಕೆಯಿಂದ ಕೂಡಿರುತ್ತಾರೆ ಮತ್ತು ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳುತ್ತಾರೆ. ತುಂಬಾ ಗಂಭೀರ ಸ್ವಭಾವದವರಾಗಿ ಕಾಣುವವರಲ್ಲಿ ಹುದುಗಿರುವ ಹುಡುಗುತನ ಆಟವಾಡುವ ಸಮಯದಲ್ಲಿ ಹೊರಬರುತ್ತದೆ. ಶಾರೀರಿಕ ಕ್ಷಮತೆಯ ಜೊತೆಜೊತೆಗೆ ನಮ್ಮ ತಾರ್ಕಿಕ ಚಿಂತನೆ, ಏಕಾಗ್ರತೆ, ಜಾಗರೂಕತೆ ಮತ್ತು ಸ್ಫೂರ್ತಿ ಇವುಗಳನ್ನೂ ಸಹ ಪ್ರಚುರಪಡಿಸುವ ರೀತಿಯಲ್ಲಿ ಸಾಂಪ್ರದಾಯಿಕ ಆಟಗಳು ರೂಪುಗೊಂಡಿವೆ. ಆಟಗಳು ಬರೀ ಆಟಗಳಾಗಿರುವುದಿಲ್ಲ, ಅವು ಜೀವನದ ಮೌಲ್ಯಗಳನ್ನು ಕಲಿಸುತ್ತವೆ. ಗುರಿಯನ್ನು ಹೇಗೆ ನಿರ್ಧರಿಸುವುದು, ಧೃಡತೆಯನ್ನು ಹೇಗೆ ಸಾಧಿಸುವುದು, ಒಂದು ತಂಡದ ಭಾವನೆಯನ್ನು ಹೇಗೆ ಹುಟ್ಟುಹಾಕಿಕೊಳ್ಳಬೇಕು, ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡಬೇಕು ಎನ್ನುವುದನ್ನು ಆಟಗಳು ಕಲಿಸುತ್ತವೆ. ವ್ಯವಹಾರ ನಿರ್ವಹಣೆಗೆ ಸಂಬಂಧಪಟ್ಟ ತರಬೇತಿ ಕಾರ್ಯಕ್ರಮಗಳಲ್ಲಿ, ಒಟ್ಟಾರೆ ವೈಯುಕ್ತಿಕ ಅಭಿವೃದ್ಧಿ ಮತ್ತು ಪರಸ್ಪರ ಕೌಶಲ್ಯಗಳ ಅಭಿವೃದ್ಧಿಗೆ ಕೂಡ ನಮ್ಮ ಸಾಂಪ್ರದಾಯಿಕವಾಗಿ ಆಡುವ ಆಟಗಳ ಉಪಯೋಗ ಇಂದಿನ ದಿನಗಳಲ್ಲಿ ಆಗುತ್ತಿದೆ ಮತ್ತು ಬಹಳ ಸುಲಭವಾಗಿ ಸಮಗ್ರ ಅಭಿವೃದ್ಧಿಯಲ್ಲಿ ನಮ್ಮ ಆಟಗಳು ಉಪಯೋಗವಾಗುತ್ತಿವೆ ಎಂಬುದನ್ನು ನಾನು ಕಳೆದ ಕೆಲವು ದಿನಗಳಲ್ಲಿ ನೋಡಿದ್ದೇನೆ. ಜೊತೆಗೆ ಈ ಆಟಗಳನ್ನು ಆಡುವುದಕ್ಕೆ ಯಾವುದೇ ವಯಸ್ಸಿನ ಅಂತರವಿಲ್ಲ. ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿ ಸಹಿತ ಎಲ್ಲರೂ ಆಟವಾಡಿದಾಗ ಪೀಳಿಗೆಯ ನಡುವಿನ ಅಂತರ ಎಂದು ನಾವು ಏನನ್ನು ಹೇಳುತ್ತೇವೆ, ಅದು ಕೂಡ ಮಾಯವಾಗಿ ಹೋಗುತ್ತದೆ. ಜೊತೆಗೆ ನಾವು ನಮ್ಮ ಸಂಸೃತಿ ಮತ್ತು ಪರಂಪರೆಗಳನ್ನೂ ಸಹ ತಿಳಿದುಕೊಳ್ಳುತ್ತೇವೆ. ಕೆಲವು ಆಟಗಳು ಸಮಾಜ ಮತ್ತು ಪರಿಸರದ ಬಗ್ಗೆ ಕೂಡ ನಮ್ಮನ್ನು ಜಾಗರೂಕರನ್ನಾಗಿ ಮಾಡುತ್ತವೆ. ಎಲ್ಲೋ ಒಂದು ಕಡೆ ನಮ್ಮ ಈ ಆಟಗಳನ್ನು ಕಳೆದುಕೊಳ್ಳುವ ಭೀತಿ ಕೆಲವೊಮ್ಮೆ ನನ್ನನ್ನು ಯೋಚನೆಗೆ ದೂಡುತ್ತದೆ. ಅದು ಬರೀ ಆಟವನ್ನು ಮಾತ್ರವಲ್ಲ ಎಲ್ಲೋ ಬಾಲ್ಯವನ್ನೂ ಸಹ ಕಳೆದು ಕೊಳ್ಳುವ ಭೀತಿ ನನ್ನನ್ನು ಕಾಡುತ್ತದೆ ಮತ್ತು ಆಗ –

“ಈ ಐಶ್ವರ್ಯವನ್ನು ತೆಗೆದುಕೋ,

ಈ ಸೌಂದರ್ಯವನ್ನು ತೆಗೆದುಕೋ

ಬೇಕಾದರೆ ನನ್ನ ಯೌವ್ವನವನ್ನೂ ಕಿತ್ತುಕೊ,

ಆದರೆ ಕಾಗದದ ದೋಣಿ ಮತ್ತು ಮಳೆಯ ನೀರನ್ನು ನೆನಪಿಸುವ

ನನ್ನ ಬಾಲ್ಯದ ಶ್ರಾವಣವನ್ನು ನನಗೆ ಹಿಂತಿರುಗಿಸು”

ಎಂಬಂತಹ ಕವಿತೆಯ ಸಾಲುಗಳನ್ನು ನಾವು ಕೇಳುತ್ತೇವೆ; ಕೇಳುತ್ತಲೇ ಇದ್ದುಬಿಡುತ್ತೇವೆ.

ಆದ್ದರಿಂದ ಈ ಪಾರಂಪರಿಕ ಆಟಗಳನ್ನು ನಾವು ಕಳೆದುಕೊಳ್ಳಬಾರದು. ಶಾಲೆಗಳು, ಬಡಾವಣೆಗಳು, ಯುವಮಂಡಳಿಗಳು ಮುಂದೆ ಬಂದು ಈ ಆಟಗಳಿಗೆ ಪ್ರಚಾರ ಕೊಡುವುದನ್ನು ಇಂದು ಅವಶ್ಯಕವಾಗಿ ಮಾಡಬೇಕಾಗಿದೆ. Crowd sourcing ಮುಖಾಂತರ ನಾವು ನಮ್ಮ ಸಾಂಪ್ರದಾಯಿಕ ಆಟಗಳ ಒಂದು ದೊಡ್ಡ ಆರ್ಖೈವ್ ಮಾಡಬಹುದು, ಈ ಆಟಗಳ ವಿಡಿಯೋಗಳನ್ನು ಮಾಡಬಹುದು, ಅದರಲ್ಲಿ ಆಟದ ನಿಯಮಗಳು, ಆಡುವ ರೀತಿಯ ಬಗ್ಗೆ ತೋರಿಸಬಹುದು. ನಮ್ಮ ಈ ಹೊಸ ಪೀಳಿಗೆ – ಯಾರಿಗೆ ನಮ್ಮ ಈ ಗಲ್ಲಿ ಗಲ್ಲಿಗಳಲ್ಲಿ ಆಡುವ ಆಟಗಳು ಕೆಲವೊಮ್ಮೆ ಅಪರೂಪ ಎನಿಸುತ್ತದೆಯೋ ಅವರಿಗಾಗಿ ಈ ಆಟಗಳ ಅನಿಮೇಷನ್ ಫಿಲಂಗಳನ್ನೂ ಮಾಡಬಹುದು. ಅವರು ಅದನ್ನು ನೋಡುತ್ತಾರೆ, ಆಡುತ್ತಾರೆ ಮತ್ತು ಅರಳುತ್ತಾರೆ.

ನನ್ನ ಪ್ರೀತಿಯ ದೇಶವಾಸಿಗಳೇ, ಬರುವ ಜೂನ್ 5 ರಂದು ಅಧಿಕೃತವಾಗಿ ನಮ್ಮ ದೇಶ ಭಾರತವು ವಿಶ್ವ ಪರಿಸರ ದಿನಾಚರಣೆಯನ್ನು (World Environment Day Celebration ) ಅತಿಥೇಯ ದೇಶವಾಗಿ ಆಯೋಜಿಸಲಿದೆ. ಭಾರತಕ್ಕೆ ಇದೊಂದು ದೊಡ್ಡ ಮಹತ್ವಪೂರ್ಣ ಅವಕಾಶವಾಗಿದೆ ಮತ್ತು ಜಲ-ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತಕ್ಕೆ ಹೆಚ್ಚಾಗುತ್ತಿರುವ ನಾಯಕತ್ವಕ್ಕೆ ಸಮ್ಮತಿ ಸಿಗುತ್ತಿದೆ ಎನ್ನುವುದರ ಸಂಕೇತವೂ ಸಹ ಆಗಿದೆ. ಈ ವರ್ಷದ ವಿಷಯ ‘Beat Plastic Pollution’ ಎನ್ನುವುದಾಗಿದೆ. ಈ ವಿಷಯದ ಭಾವನೆಯನ್ನು, ಇದರ ಮಹತ್ವವನ್ನು ಅರಿತುಕೊಂಡು ನಾವೆಲ್ಲರೂ ಪಾಲಿಥೀನ್, ಕಡಿಮೆ ದರ್ಜೆಯ ಗುಣಮಟ್ಟದ ಪ್ಲಾಸ್ಟಿಕ್ ಇವುಗಳ ಉಪಯೋಗವನ್ನು ನಿಲ್ಲಿಸೋಣ. ನಮ್ಮ ಪ್ರಕೃತಿಯ ಮೇಲೆ, ವನ್ಯಜೀವಿಗಳ ಮೇಲೆ ಮತ್ತು ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿರುವ ಈ ಪ್ಲಾಸ್ಟಿಕ್ ಮಾಲಿನ್ಯವನ್ನು ತಗ್ಗಿಸುವ ಪ್ರಯತ್ನವನ್ನು ಮಾಡೋಣ ಎನ್ನುವುದು ನಾನು ನಿಮ್ಮೆಲ್ಲರಿಗೂ ಮಾಡುತ್ತಿರುವ ಮನವಿ. ವಿಶ್ವ ಪರಿಸರ ದಿನಾಚರಣೆ (World Environment Day Celebration ) ಇದರ ವೆಬ್ ಸೈಟ್ ‘wed-india2018’ ನ್ನು ನೋಡಿ. ಅದರಲ್ಲಿ ಬಹಳಷ್ಟು ಸಲಹೆಗಳನ್ನು ತುಂಬಾ ಆಸಕ್ತಿದಾಯಕವಾಗಿ ನೀಡಲಾಗಿದೆ. ಅದನ್ನು ನೋಡಿ, ತಿಳಿದುಕೊಳ್ಳಿ ಮತ್ತು ಅವುಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿ. ಭಯಾನಕ ರೀತಿಯ ಸೆಕೆ ಇದ್ದಾಗ, ಬರ ಉಂಟಾದಾಗ, ಮಳೆ ಬೀಳದೇ ಇದ್ದಾಗ, ಸಹಿಸಲಾರದಂತಹ ಛಳಿ ಆವರಿಸಿಕೊಂಡಾಗ ಎಲ್ಲರೂ ಮೇಧಾವಿಗಳಾಗಿ global warming, climate change ಇವುಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಬರೀ ಮಾತನಾಡುವುದರಿಂದ ಕೆಲಸವಾಗುತ್ತದೆಯೇ? ಪ್ರಕೃತಿಯ ಬಗ್ಗೆ ಸಂವೇದನಾಶೀಲರಾಗುವುದು ಮತ್ತು ಪ್ರಕೃತಿಯನ್ನು ರಕ್ಷಿಸುವುದು ಇವು ನಮ್ಮ ಸಹಜ ಸ್ವಭಾವಗಳಾಗಬೇಕು, ನಮ್ಮ ಸಂಸ್ಕಾರದಲ್ಲಿ ಹಾಸುಹೊಕ್ಕಾಗಬೇಕು. ಕಳೆದ ಕೆಲವು ವಾರಗಳಲ್ಲಿ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಮರಳ ಬಿರುಗಾಳಿ ಎದ್ದು, ಬಲವಾದ ಗಾಳಿಯೊಂದಿಗೆ ಭಾರೀ ಮಳೆಯೂ ಸಹ ಅಕಾಲಿಕವಾಗಿ ಸುರಿಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಇದರಿಂದ ಪ್ರಾಣ ಹಾನಿ, ಧನಹಾನಿ ಸಹ ಸಂಭವಿಸಿದವು. ಹವಾಮಾನ ಮಾದರಿಯಲ್ಲಿ ಆಗಿರುವ ಬದಲಾವಣೆ ಮತ್ತು ಅದರ ಪರಿಣಾಮವೇ ಇವೆಲ್ಲಕ್ಕೂ ಮೂಲ ಕಾರಣವಾಗಿದೆ. ನಮ್ಮ ಸಂಸ್ಕೃತಿ ಹಾಗೂ ನಮ್ಮ ಪರಂಪರೆಯು ನಾವು ಪ್ರಕೃತಿಯ ಜೊತೆಗೆ ಹೋರಾಟ ಮಾಡುವುದನ್ನು ಕಲಿಸಿಲ್ಲ. ನಾವು ಪ್ರಕೃತಿಯೊಂದಿಗೆ ಸದ್ಭಾವನೆಯಿಂದ ಇರಬೇಕು, ಪ್ರಕೃತಿಯೊಂದಿಗೆ ಬೆರೆತುಕೊಂಡಿರಬೇಕು. ಮಹಾತ್ಮಾ ಗಾಂಧಿಯವರಂತೂ ಜೀವನಪರ್ಯಂತ ಪ್ರತೀ ಹೆಜ್ಜೆಯಲ್ಲೂ ಇದನ್ನು ಸಮರ್ಥಿಸಿದ್ದರು. ಭಾರತವು climate justice ಬಗ್ಗೆ ಮಾತನಾಡುವಾಗ, Cop21 ಮತ್ತು Paris ಒಪ್ಪಂದಗಳಲ್ಲಿ ಪ್ರಮುಖ ಪಾತ್ರ ವಹಿಸಿ, international solar alliance ನ ಮುಖಾಂತರ ಇಂದು ಇಡೀ ವಿಶ್ವವನ್ನು ಒಂದುಗೂಡಿಸಿದೆ ಎಂದರೆ ಇದೆಲ್ಲದರ ಮೂಲ, ಮಹಾತ್ಮಾ ಗಾಂಧಿಯವರ ಆ ಕನಸನ್ನು ಪೂರ್ಣಗೊಳಿಸುವ ಒಂದು ಭಾವನೆಯಾಗಿದೆ. ಈ ಪರಿಸರ ದಿನಾಚರಣೆಯಂದು ‘ನಾವು ನಮ್ಮ ಭೂಗ್ರಹವನ್ನು ಸ್ವಚ್ಚ ಮತ್ತು ಹಸಿರನ್ನಾಗಿಸಲು ಏನು ಮಾಡಬಹುದು, ಯಾವ ರೀತಿ ಈ ನಿಟ್ಟಿನಲ್ಲಿ ಮುಂದೆ ಹೋಗಬಹುದು, ಏನು ಅವಿಷ್ಕಾರಗಳನ್ನು ಮಾಡಬಹುದು?’ ಎನ್ನುವುದರ ಬಗ್ಗೆ ಯೋಚಿಸೋಣ. ಮಳೆಗಾಲ ಬರುತ್ತಿದೆ, ನಾವು ಈ ಸಾರಿ ದಾಖಲೆಯ ವನಮಹೋತ್ಸವದ ಗುರಿ ಇಟ್ಟುಕೊಳ್ಳಬಹುದು. ಬರೀ ಗಿಡ ನೆಡುವುದಷ್ಟೇ ಅಲ್ಲದೆ ಅದು ಬೆಳೆದು ದೊಡ್ಡದಾಗುವ ತನಕ ಅದರ ಪಾಲನೆ ಪೋಷಣೆಯ ವ್ಯವಸ್ಥೆ ಮಾಡುವುದು ನಮ್ಮ ಗುರಿಯಾಗಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ ಮತ್ತು ವಿಶೇಷವಾಗಿ ನನ್ನ ಯುವ ಮಿತ್ರರೇ, ನೀವು ಜೂನ್ 21 ನ್ನು ಖಂಡಿತವಾಗಿಯೂ ನೆನಪಿಟ್ಟುಕೊಂಡಿರುತ್ತೀರಾ. ನೀವು-ನಾವಷ್ಟೇ ಅಲ್ಲ, ಇಡೀ ವಿಶ್ವವೇ ಜೂನ್ 21 ನ್ನು ನೆನಪಿಟ್ಟುಕೊಂಡಿರುತ್ತದೆ. ಇಡೀ ವಿಶ್ವದಲ್ಲಿ ಜೂನ್ 21 ಅಂತರ್ರಾಷ್ಟ್ರೀಯ ಯೋಗ ದಿನವಾಗಿ ಆಚರಿಸಲ್ಪಡುತ್ತದೆ. ಇದು ಎಲ್ಲಾ ಕಡೆಯೂ ಸ್ವೀಕೃತವಾಗಿದೆ ಮತ್ತು ಜನರು ತಿಂಗಳುಗಳ ಮೊದಲೇ ಇದಕ್ಕಾಗಿ ತಯಾರಿ ಪ್ರಾರಂಭಿಸುತ್ತಾರೆ. ಇಡೀ ವಿಶ್ವದಲ್ಲಿ ಜೂನ್ 21 ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿ ಆಚರಿಸುವ ಸಲುವಾಗಿ ಸಂಪೂರ್ಣ ಸಿದ್ಧತೆಗಳು ನಡೆಯುತ್ತಿವೆ. yoga for unity ಮತ್ತು harmonious society ಎನ್ನುವ ಸಂದೇಶವನ್ನು ಇಡೀ ವಿಶ್ವವು ಕಳೆದ ಕೆಲವು ವರ್ಷಗಳಿಂದ ಮತ್ತೆ ಮತ್ತೆ ಅನುಭವಕ್ಕೆ ತಂದುಕೊಂಡಿದೆ. ಸಂಸ್ಕೃತದ ಭರ್ತೃಹರಿಯು ಶತಮಾನಗಳ ಮುಂಚೆಯೇ ತನ್ನ ಶತಕತ್ರಯಮ್ ನಲ್ಲಿ –

ಧೈರ್ಯ ಯಸ್ಯ ಪಿತಾ ಕ್ಷಮಾ ಚ ಜನನೀ ಶಾಂತಿಶ್ಚಿರಂ ಗೇಹನೀ

ಸತ್ಯಂ ಸೂನುರಯಮ್ ದಯಾ ಚ ಭಗಿನೀ ಭ್ರಾತಾ ಮನಃ ಸಂಯಮಃ !

ಶಯ್ಯಾ ಭೂಮಿತಲಂ ದಿಶೋSಪಿ ವಸನಂ ಜ್ಞಾನಾಮೃತಮ್ ಭೋಜನಂ

ಏತೇ ಯಸ್ಯ ಕುಟುಂಬಿನಃ ವದ ಸಖೇ ಕಸ್ಮಾದ್ ಭಯಂ ಯೋಗಿನಃ !!

ಎಂದು ಬರೆದಿದ್ದಾನೆ.

ಶತಮಾನಗಳ ಹಿಂದೆಯೇ ಹೇಳಿರುವ ಈ ಮಾತಿನ ನೇರಾನೇರ ಅರ್ಥ – ನಿಯಮಿತ ಯೋಗಾಭ್ಯಾಸ ಮಾಡುವುದರಿಂದ ಕೆಲವು ಒಳ್ಳೆಯ ಗುಣಗಳು ಹತ್ತಿರದ ಸಂಬಂಧಿಗಳಂತೆ ಹಾಗೂ ಮಿತ್ರರಂತೆ ಆಗಿಬಿಡುತ್ತವೆ. ಯೋಗ ಮಾಡುವುದರಿಂದ ಧೈರ್ಯ ಹುಟ್ಟಿಕೊಳ್ಳುತ್ತದೆ ಮತ್ತು ಅದು ಯಾವಾಗಲೂ ತಂದೆಯ ರೀತಿ ನಮ್ಮ ರಕ್ಷಣೆ ಮಾಡುತ್ತದೆ; ಯಾವರೀತಿ ತಾಯಿಯು ತನ್ನ ಮಕ್ಕಳ ಬಗ್ಗೆ ಕ್ಷಮಾಗುಣವನ್ನು ಹೊಂದಿರುತ್ತಾಳೋ ಅಂತಹ ಕ್ಷಮೆಯ ಭಾವ ಉತ್ಪತ್ತಿಯಾಗುತ್ತದೆ; ಮಾನಸಿಕ ಶಾಂತಿ ನಮ್ಮ ಶಾಶ್ವತ ಸ್ನೇಹಿತನಾಗುತ್ತದೆ; ನಿಯಮಿತವಾಗಿ ಯೋಗ ಮಾಡುವುದರಿಂದ ಸತ್ಯವು ನಮ್ಮ ಸಂತಾನವಾಗುತ್ತದೆ; ದಯೆಯು ನಮ್ಮ ಸೋದರಿಯಾಗುತ್ತದೆ; ಆತ್ಮ ಸಂಯಮ ನಮ್ಮ ಸೋದರ; ಸ್ವಯಂ ಭೂಮಿಯೇ ನಮ್ಮ ಹಾಸಿಗೆಯಾಗುತ್ತದೆ; ಜ್ಞಾನವು ನಮ್ಮ ಹಸಿವನ್ನು ಇಂಗಿಸುವ ಭೋಜನವಾಗುತ್ತದೆ ಮತ್ತು ಒಂದುವೇಳೆ ಇಷ್ಟೆಲ್ಲಾ ಗುಣಗಳು ಯಾರಿಗಾದರೂ ಮಿತ್ರರಾದರೆ ಅಂತಹ ಯೋಗಿಯು ಎಲ್ಲಾ ರೀತಿಯ ಭಯದಿಂದ ಮುಕ್ತನಾಗಿ ವಿಜಯವನ್ನು ಹೊಂದುತ್ತಾನೆ ಎಂದು ಭರ್ತೃಹರಿಯು ಹೇಳಿದ್ದಾನೆ. ಯೋಗದ ನಮ್ಮ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿ ಒಂದು ಸ್ವಸ್ಥ, ಆನಂದಮಯ ಮತ್ತು ಸದ್ಭಾವನಾಪೂರ್ಣ ರಾಷ್ಟ್ರವನ್ನು ನಿರ್ಮಾಣ ಮಾಡಲು ನಾನು ಮತ್ತೊಮ್ಮೆ ಎಲ್ಲಾ ದೇಶವಾಸಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮೇ 27. ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರ್ ಲಾಲ್ ನೆಹರೂರವರ ಪುಣ್ಯತಿಥಿ. ನಾನು ಪಂಡಿತ್ ನೆಹರೂರವರಿಗೆ ನಮಸ್ಕರಿಸುತ್ತೇನೆ. ಈ ಮೇ ತಿಂಗಳ ನೆನಪು ಮತ್ತೊಂದು ವಿಷಯದೊಂದಿಗೆ ಸಹ ಬೆಸೆದುಕೊಂಡಿದೆ. ಅದೆಂದರೆ ವೀರ ಸಾವರ್ಕರ್. ಭಾರತೀಯರು ಬ್ರಿಟೀಷರಿಗೆ ತಮ್ಮ ಬಲವನ್ನು ತೋರಿಸಿದ್ದು 1857 ರ ಇದೇ ಮೇ ತಿಂಗಳಿನಲ್ಲಿ. ದೇಶದ ಹಲವು ಭಾಗಗಳಲ್ಲಿ ನಮ್ಮ ಯುವಕರು ಮತ್ತು ರೈತರು ತಮ್ಮ ಶೌರ್ಯವನ್ನು ಪ್ರದರ್ಶಿಸುತ್ತಾ ಅನ್ಯಾಯದ ವಿರುದ್ಧ ಎದ್ದು ನಿಂತಿದ್ದರು. ಆದರೆ ನಾವು ಬಹಳ ದೀರ್ಘಕಾಲದವರೆಗೆ 1857 ರ ಘಟನೆಗಳನ್ನು ಕೇವಲ ದಂಗೆ ಅಥವಾ ಸಿಪಾಯಿ ದಂಗೆ ಎಂದೇ ಹೇಳುತ್ತಿದ್ದುದು ದುಃಖದ ವಿಚಾರ. ವಾಸ್ತವವಾಗಿ ಆ ಘಟನೆಗಳನ್ನು ಬಹಳ ಕಡಿಮೆಗೊಳಿಸಿ ಅಂದಾಜು ಮಾಡಿದ್ದಷ್ಟೇ ಅಲ್ಲದೆ ಅದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟುಮಾಡುವ ರೀತಿಯ ಒಂದು ಪ್ರಯತ್ನವಾಗಿತ್ತು. ಆದರೆ ನಿರ್ಭಯದಿಂದ “1857 ರಲ್ಲಿ ಏನಾಗಿತ್ತೋ ಅದು ಯಾವುದೇ ವಿದ್ರೋಹವಲ್ಲ ಬದಲಾಗಿ ಸ್ವಾತಂತ್ರ್ಯದ ಮೊದಲ ಸಂಗ್ರಾಮ” ಎಂದು ಬರೆದವರು ಇದೇ ವೀರ ಸಾವರ್ಕರ್. ಸಾವರ್ಕರ್ ಸಹಿತ ಲಂಡನ್ ನ ಇಂಡಿಯಾ ಹೌಸ್ ನ ವೀರರು ಇದರ 50 ನೇ ವರ್ಷದ ಆಚರಣೆಯನ್ನು ಅದ್ಧೂರಿಯಿಂದ ಆಚರಿಸಿದರು. ಯಾವ ತಿಂಗಳಿನಲ್ಲಿ ಮೊದಲ ಸ್ವಾತಂತ್ರ್ಯದ ಸಂಗ್ರಾಮ ಆರಂಭವಾಯಿತೋ ಅದೇ ತಿಂಗಳು ವೀರ ಸಾವರ್ಕರ್ ಅವರು ಜನ್ಮ ತಾಳಿದ್ದು ಒಂದು ಅದ್ಭುತ ಸಂಯೋಗ. ಸಾವರ್ಕರ್ ಅವರ ವ್ಯಕ್ತಿತ್ವ ವಿಶೇಷತೆಗಳಿಂದ ತುಂಬಿತ್ತು. ಅವರು ಶಸ್ತ್ರ ಮತ್ತು ಶಾಸ್ತ್ರ ಇವೆರಡರ ಉಪಾಸಕರೂ ಆಗಿದ್ದರು. ಸಾಮಾನ್ಯವಾಗಿ ವೀರ ಸಾವರ್ಕರ್ ಅವರನ್ನು ಅವರ ಶೌರ್ಯ ಮತ್ತು ಬ್ರಿಟೀಷ್ ರಾಜ್ಯದ ವಿರುದ್ಧ ಅವರ ಹೋರಾಟದ ಕಾರಣಕ್ಕೆ ನೆನಪಿಟ್ಟುಕೊಂಡಿದ್ದೇವೆ. ಆದರೆ ಇದೆಲ್ಲದರ ಹೊರತಾಗಿ ಅವರು ಒಬ್ಬ ಉದಯೋನ್ಮುಖ ಕವಿ ಮತ್ತು ಸಮಾಜ ಸುಧಾರಕರೂ ಸಹ ಆಗಿದ್ದರು. ಅವರು ಯಾವಾಗಲೂ ಸದ್ಭಾವನೆ ಮತ್ತು ಏಕತೆ ಇವುಗಳನ್ನು ಸಮರ್ಥಿಸುತ್ತಿದ್ದರು. ನಮ್ಮೆಲ್ಲರ ಪ್ರೀತಿಯ, ಆದರಣೀಯ ಅಟಲ್ ಬಿಹಾರಿ ವಾಜಪೇಯಿಯವರು ಸಾವರ್ಕರ್ ಅವರ ಬಗ್ಗೆ ಒಂದು ಅದ್ಭುತ ವರ್ಣನೆ ಮಾಡಿದ್ದಾರೆ. “ಸಾವರ್ಕರ್ ಅಂದರೆ ತೇಜಸ್ಸು, ಸಾವರ್ಕರ್ ಅಂದರೆ ತ್ಯಾಗ, ಸಾವರ್ಕರ್ ಅಂದರೆ ತಪಸ್ಸು, ಸಾವರ್ಕರ್ ಅಂದರೆ ತತ್ವ, ಸಾವರ್ಕರ್ ಅಂದರೆ ತರ್ಕ, ಸಾವರ್ಕರ್ ಅಂದರೆ ತಾರುಣ್ಯ, ಸಾವರ್ಕರ್ ಅಂದರೆ ಬಾಣ, ಸಾವರ್ಕರ್ ಅಂದರೆ ಕತ್ತಿ“ ಎಂದು ಅಟಲ್ ಜೀ ಯವರು ಹೇಳಿದ್ದರು. ಎಷ್ಟೊಂದು ಹತ್ತಿರದ ಚಿತ್ರಣ ಕೊಟ್ಟಿದ್ದಾರೆ ಅಟಲ್ ಜೀ ಯವರು! ಸಾವರ್ಕರ್ ಅವರು ಕವಿತೆ ಮತ್ತು ಕ್ರಾಂತಿ ಎರಡನ್ನೂ ಜೊತೆಗೆ ತೆಗೆದುಕೊಂಡು ನಡೆದವರು. ಸಂವೇದನಾಶೀಲ ಕವಿಯಾಗಿದ್ದುದರ ಜೊತೆಗೆ ಅವರು ಸಾಹಸಿ ಕ್ರಾಂತಿಕಾರಿಯೂ ಆಗಿದ್ದರು.

ನನ್ನ ಪ್ರೀತಿಯ ಸೋದರ-ಸೋದರಿಯರೇ, ನಾನು ದೂರದರ್ಶನದಲ್ಲಿ ಒಂದು ಕಥೆ ನೋಡುತ್ತಿದ್ದೆ, ರಾಜಾಸ್ಥಾನದ ಸೀಕರ್ ನ ಗುಡಿಸಲುಗಳದ್ದು, ನಮ್ಮ ಬಡ ಹೆಣ್ಣುಮಕ್ಕಳದ್ದು. ಒಂದೊಮ್ಮೆ ತ್ಯಾಜ್ಯ ಎತ್ತುವುದರಿಂದ ಹಿಡಿದು ಭಿಕ್ಷೆ ಬೇಡುವಷ್ಟು ಅಸಹಾಯಕರಾಗಿದ್ದ ನಮ್ಮ ಈ ಹೆಣ್ಣುಮಕ್ಕಳು ಇಂದು ಹೊಲಿಗೆ ಕೆಲಸವನ್ನು ಕಲಿತು ಬಡವರ ದೇಹ ಮುಚ್ಚುವುದಕ್ಕಾಗಿ ಬಟ್ಟೆ ಹೊಲೆಯುತ್ತಿದ್ದಾರೆ. ಇಲ್ಲಿನ ಹೆಣ್ಣುಮಕ್ಕಳು ಇಂದು ತಮ್ಮ ಮತ್ತು ತಮ್ಮ ಕುಟುಂಬದವರ ಬಟ್ಟೆಗಳಲ್ಲದೆ, ಸಾಮಾನ್ಯವಾಗಿರುವ ಬಟ್ಟೆಗಳಿಂದ ಹಿಡಿದು ಒಳ್ಳೊಳ್ಳೆಯ ಬಟ್ಟೆಗಳವರೆಗೆ ಹೊಲೆಯುತ್ತಿದ್ದಾರೆ. ಇದರೊಟ್ಟಿಗೆ ಅವರು ಕೌಶಲ್ಯಾಭಿವೃದ್ಧಿಯ ಕೋರ್ಸ್ ಸಹ ಮಾಡುತ್ತಿದ್ದಾರೆ. ನಮ್ಮ ಈ ಹೆಣ್ಣುಮಕ್ಕಳು ಇಂದು ಸ್ವಾವಲಂಬಿಗಳಾಗಿದ್ದಾರೆ. ಗೌರವದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಮತ್ತು ತಮ್ಮ ತಮ್ಮ ಕುಟುಂಬಗಳಿಗೆ ಒಂದು ಶಕ್ತಿಯಾಗಿದ್ದಾರೆ. ಭರವಸೆ ಮತ್ತು ನಂಬಿಕೆ ತುಂಬಿಕೊಂಡಿರುವ ನಮ್ಮ ಈ ಹೆಣ್ಣುಮಕ್ಕಳಿಗೆ ನಾನು ಅವರ ಉಜ್ವಲ ಭವಿಷ್ಯಕ್ಕೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಒಂದುವೇಳೆ ಏನಾದರೂ ಮಾಡಿತೋರಿಸುವ ಅದಮ್ಯ ಉತ್ಸಾಹ ಇದ್ದು ಅದಕ್ಕೋಸ್ಕರ ನೀವು ದೃಢಸಂಕಲ್ಪ ಹೊಂದಿದ್ದರೆ ಎಲ್ಲಾ ಕಷ್ಟಗಳ ನಡುವೆಯೂ ಕೂಡ ಸಫಲತೆಯನ್ನು ಪಡೆದುಕೊಳ್ಳಬಹುದು ಎಂದು ಇವರು ತೋರಿಸಿಕೊಟ್ಟಿದ್ದಾರೆ. ಇದು ಬರೀ ಸೀಕರ್ ನ ಮಾತಲ್ಲ, ಹಿಂದೂಸ್ಥಾನದ ಪ್ರತಿ ಮೂಲೆಯಲ್ಲೂ ನಿಮಗೆ ಇಂತಹವುಗಳು ನೋಡಲು ಸಿಗುತ್ತದೆ. ನಿಮ್ಮ ಹತ್ತಿರದಲ್ಲಿ, ಅಕ್ಕ ಪಕ್ಕದಲ್ಲಿ ಗಮನಿಸಿ ನೋಡಿದರೆ ಜನರು ಯಾವ ರೀತಿಯಲ್ಲಿ ಕಷ್ಟಗಳನ್ನು ಎದುರಿಸುತ್ತಾರೆ ಎಂದು ನಿಮಗೆ ಗೊತ್ತಾಗುತ್ತದೆ. ಯಾವಾಗಲಾದರೂ ಒಂದು ಚಹಾ ಅಂಗಡಿಗೆ ಹೋದಾಗ, ನಾವು ಅಲ್ಲಿಯ ಚಹಾದ ಆನಂದವನ್ನು ಅನುಭವಿಸುವುದರ ಜೊತೆಗೆ ಕೆಲವು ಜನರೊಂದಿಗೆ ಚರ್ಚೆ ಮತ್ತು ವಿಚಾರ ವಿಮರ್ಶೆಯಲ್ಲಿ ತೊಡಗಿಕೊಳ್ಳುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಈ ಚರ್ಚೆಯು ರಾಜಕೀಯ, ಸಾಮಾಜಿಕ, ಚಲನಚಿತ್ರ, ಕ್ರೀಡೆ ಮತ್ತು ಕ್ರೀಡಾಪಟುಗಳು, ದೇಶದ ಸಮಸ್ಯೆ ಇವೆಲ್ಲವುಗಳ ಬಗ್ಗೆಯೂ ಆಗಬಹುದು; ಇಂತಹ ಸಮಸ್ಯೆ ಇದೆ, ಇದರ ಪರಿಹಾರ ಈ ರೀತಿ ಇದೆ, ಇದನ್ನು ಮಾಡಬೇಕು ಇತ್ಯಾದಿ. ಬಹಳಷ್ಟು ಬಾರಿ ಈ ಕೆಲಸಗಳು ಬರೀ ಚರ್ಚೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಕೆಲವು ಜನರು ಹೇಗಿರುತ್ತಾರೆಂದರೆ ತಮ್ಮ ಕೆಲಸಗಳಿಂದ, ತಮ್ಮ ಶ್ರಮದಿಂದ, ಭಾವೋದ್ರೇಕದಿಂದ ಬದಲಾವಣೆ ತರುವ ದಿಕ್ಕಿನಲ್ಲಿ ಮುಂದುವರೆಯುತ್ತಾರೆ ಮತ್ತು ಅದನ್ನು ನಿಜವಾಗಿಸುವ ರೂಪ ನೀಡುತ್ತಾರೆ. ಬೇರೆಯವರ ಕನಸನ್ನು ತಮ್ಮದನ್ನಾಗಿಸಿಕೊಂಡು, ಅದನ್ನು ಪೂರ್ಣಗೊಳಿಸಲು ಸ್ವತಃ ತಾವೇ ತೊಡಗಿಸಿಕೊಳ್ಳುವ ಇದೇ ರೀತಿಯ ಕಥೆ ಒರಿಸ್ಸಾದ ಕಟಕ್ ನಗರದ ಕೊಳಗೇರಿಯ ಗುಡಿಸಿಲಿನಲ್ಲಿ ವಾಸಿಸುವ ಡಿ. ಪ್ರಕಾಶ್ ರಾವ್ ಅವರದ್ದು. ನಿನ್ನೆಯಷ್ಟೇ ನನಗೆ ಡಿ. ಪ್ರಕಾಶ್ ರಾವ್ ಅವರನ್ನು ಭೇಟಿಯಾಗುವ ಸೌಭಾಗ್ಯವು ಸಿಕ್ಕಿತ್ತು. ಶ್ರೀಮಾನ್ ಡಿ. ಪ್ರಕಾಶ್ ರಾವ್ ಅವರು ಕಳೆದ 5 ದಶಕಗಳಿಂದ ನಗರದಲ್ಲಿ ಚಹಾ ಮಾರುತ್ತಿದ್ದಾರೆ. ಒಬ್ಬ ಮಾಮೂಲಿ ಚಹಾ ಮಾರುವವನು ಇಂದು 70 ಕ್ಕೂ ಹೆಚ್ಚು ಮಕ್ಕಳ ಜೀವನದಲ್ಲಿ ಶಿಕ್ಷಣದ ಬೆಳಕನ್ನು ತುಂಬಿಸುತ್ತಿದ್ದಾರೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ಅವರು ಗುಡಿಸಲು ಮತ್ತು ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ‘ಆಶಾ ಆಶ್ವಾಸನ್’ ಹೆಸರಿನ ಒಂದು ಶಾಲೆಯನ್ನು ತೆರೆದರು. ಈ ಬಡ ಚಹಾ ಮಾರುವವರು ತಮ್ಮ ಗಳಿಕೆಯ ಶೇಕಡಾ 50 ರಷ್ಟು ಹಣವನ್ನು ಅದಕ್ಕಾಗಿಯೇ ಖರ್ಚು ಮಾಡುತ್ತಾರೆ. ಅವರು ಶಾಲೆಗೆ ಬರುವ ಎಲ್ಲಾ ಮಕ್ಕಳಿಗೂ, ಶಿಕ್ಷಣ, ಅರೋಗ್ಯ ಮತ್ತು ಭೋಜನದ ಸಂಪೂರ್ಣ ವ್ಯವಸ್ಥೆಯನ್ನು ಮಾಡುತ್ತಾರೆ. ನಾನು ಡಿ. ಪ್ರಕಾಶ್ ರಾವ್ ಅವರಿಗೆ ಅವರ ಕಠಿಣ ಪರಿಶ್ರಮ, ಕಾರ್ಯತತ್ಪರತೆ ಮತ್ತು ಆ ಬಡ ಮಕ್ಕಳ ಜೀವನಕ್ಕೆ ಹೊಸ ದಿಕ್ಕನ್ನು ಕೊಡುತ್ತಿರುವುದಕ್ಕೆ ತುಂಬಾ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಅವರು ಆ ಮಕ್ಕಳ ಜೀವನದ ಅಂಧಕಾರವನ್ನು ನೀಗಿಸಿದ್ದಾರೆ. “ತಮಸೋಮಾ ಜ್ಯೋತಿರ್ಗಮಯ” ಎನ್ನುವ ವೇದ ವಾಕ್ಯವನ್ನು ತಿಳಿಯದೆ ಇರುವವರು ಯಾರು? ಆದರೆ ಡಿ. ಪ್ರಕಾಶ್ ರಾವ್ ರವರು ಅದನ್ನು ಮನಃಪೂರ್ವಕವಾಗಿ ಮಾಡಿ ತೋರಿಸಿದ್ದಾರೆ. ಅವರ ಜೀವನ ನಮ್ಮೆಲ್ಲರಿಗೆ, ಸಮಾಜಕ್ಕೆ ಮತ್ತು ಇಡೀ ದೇಶಕ್ಕೆ ಒಂದು ಪ್ರೇರಣೆಯಾಗಿದೆ. ನಿಮ್ಮ ಅಕ್ಕ ಪಕ್ಕದಲ್ಲೂ ಇಂತಹ ಪ್ರೇರಕ ಘಟನೆಗಳ ಸರಮಾಲೆಯೇ ಇರಬಹುದು, ಎಣಿಸಲಾರದಷ್ಟು ಇರಬಹುದು. ಬನ್ನಿ, ನಾವು ಸಕಾರಾತ್ಮಕತೆಯನ್ನು ಮುಂದುವರೆಸೋಣ.

ಜೂನ್ ತಿಂಗಳಿನಲ್ಲಿ ಜನರು ಮಳೆಯನ್ನು ಎದುರು ನೋಡುತ್ತಾ ಕಾಯುವಷ್ಟು ಬಿಸಿಲಿನ ಧಗೆ ಇರುತ್ತದೆ. ಇದೇ ನಂಬಿಕೆಯಲ್ಲಿ ಜನರು ಆಕಾಶದಲ್ಲಿರುವ ಮೋಡಗಳ ಕಡೆಗೆ ಬಿಟ್ಟೂ ಬಿಡದೆ ನೋಡುತ್ತಲೇ ಇರುತ್ತಾರೆ. ಇನ್ನು ಸ್ವಲ್ಪ ದಿನಗಳಲ್ಲಿ ಜನರು ಚಂದ್ರನ ನಿರೀಕ್ಷೆಯನ್ನು ಸಹ ಮಾಡುತ್ತಾರೆ. ಚಂದ್ರ ಕಾಣಿಸುವ ಅರ್ಥ ಈದ್ ಆಚರಿಸಬಹುದು ಎಂದು. ರಮ್ಜಾನ್ ನ ಸಲುವಾಗಿ ಒಂದು ತಿಂಗಳ ಉಪವಾಸದ ನಂತರ ಈದ್ ಹಬ್ಬದ ಉತ್ಸವ, ಸಂಭ್ರಮದ ಆಚರಣೆಗಳ ಪ್ರಾರಂಭದ ಪ್ರತೀಕವಾಗಿದೆ. ಎಲ್ಲಾ ಜನರೂ ಈದ್ ಹಬ್ಬವನ್ನು ಅತೀ ಉತ್ಸಾಹದಿಂದ ಆಚರಿಸುತ್ತೀರಿ ಎನ್ನುವ ನಂಬಿಕೆ ನನಗಿದೆ. ಈ ಸಂದರ್ಭದಲ್ಲಿ ಮಕ್ಕಳೂ ಸಹ ಒಳ್ಳೆಯ ಉಡುಗೊರೆಗಳನ್ನು ಪಡೆಯುತ್ತಾರೆ. ಈದ್ ಹಬ್ಬವು ನಮ್ಮ ಸಮಾಜದ ಸದ್ಭಾವನೆಯ ಬಂಧನಕ್ಕೆ ಮತ್ತಷ್ಟು ಬಲ ಕೊಡುತ್ತದೆ ಎಂದು ನಾನು ಆಶಿಸುತ್ತೇನೆ. ಎಲ್ಲರಿಗೂ ಅನಂತಾನಂತ ಶುಭಾಶಯಗಳು.

ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು. ಮತ್ತೊಮ್ಮೆ ಮುಂದಿನ ತಿಂಗಳು ಮನದ ಮಾತಿನಲ್ಲಿ ಭೇಟಿಯಾಗೋಣ.

ನಮಸ್ಕಾರ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Waqf Law Has No Place In The Constitution, Says PM Modi

Media Coverage

Waqf Law Has No Place In The Constitution, Says PM Modi
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.