ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಜಪಾನ್ ಪ್ರಧಾನಮಂತ್ರಿ ಘನತೆವೆತ್ತ ಸುಗಾ ಯೊಶೋಹಿಡೆ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಪ್ರಧಾನಿಯವರು, ಜಪಾನ್ ನ ಪ್ರಧಾನಮಂತ್ರಿಯಾಗಿ ನೇಮಕಗೊಂಡಿರುವ ಸುಗಾ ಅವರನ್ನು ಅಭಿನಂದಿಸಿ, ಗುರಿ ಸಾಧನೆಗೆ ಯಶಸ್ಸು ಕೋರಿದರು.
ಇಬ್ಬರೂ ನಾಯಕರು ಭಾರತ– ಜಪಾನ್ ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಸಹಯೋಗವು ಕಳೆದ ಕೆಲವು ವರ್ಷಗಳಲ್ಲಿ ತುಂಬಾ ಮುಂದುವರಿದಿದೆ ಎಂಬುದನ್ನು ಒಪ್ಪಿಕೊಂಡರು ಮತ್ತು ಪರಸ್ಪರ ನಂಬಿಕೆ ಮತ್ತು ಹಂಚಿಕೆಯ ಮೌಲ್ಯಗಳ ಆಧಾರದಲ್ಲಿ ಅದನ್ನು ಮತ್ತಷ್ಟು ಬಲಪಡಿಸುವ ಇರಾದೆಯನ್ನು ವ್ಯಕ್ತಪಡಿಸಿದರು.
ಇಬ್ಬರೂ ನಾಯಕರು ಕೋವಿಡ್-19 ಸಾಂಕ್ರಾಮಿಕ ರೋಗ ಸೇರಿದಂತೆ ಜಾಗತಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಇಂದಿನ ಸಮಯದಲ್ಲಿ ಉಭಯ ದೇಶಗಳ ಸಹಭಾಗಿತ್ವವು ಹೆಚ್ಚು ಪ್ರಸ್ತುತವಾಗಿದೆ ಎಂಬುದನ್ನು ಒಪ್ಪಿಕೊಂಡರು. ಮುಕ್ತ ಮತ್ತು ಅಂತರ್ಗತ ಭಾರತ –ಪೆಸಿಫಿಕ್ ಪ್ರದೇಶದ ಆರ್ಥಿಕ ಸ್ವರೂಪವು ಸ್ಥಿರ ಪೂರೈಕೆ ಸರಪಳಿಗಳ ಮೇಲೆ ಪ್ರದರ್ಶಿತವಾಗಬೇಕು ಎಂದು ಪ್ರತಿಪಾದಿಸಿದರು, ಈ ನಿಟ್ಟಿನಲ್ಲಿ ಭಾರತ, ಜಪಾನ್ ಮತ್ತು ಇತರ ಸಮಾನ ಮನಸ್ಕ ದೇಶಗಳ ನಡುವಿನ ಸಹಕಾರವನ್ನು ಅವರು ಸ್ವಾಗತಿಸಿದರು.
ಇಬ್ಬರೂ ನಾಯಕರು ಎರಡೂ ದೇಶಗಳ ನಡುವಿನ ಆರ್ಥಿಕ ಸಹಯೋಗದ ಪ್ರಗತಿಯನ್ನು ಶ್ಲಾಘಿಸಿದರು ಮತ್ತು ಈ ನಿಟ್ಟಿನಲ್ಲಿ ವಿಶೇಷ ಕೌಶಲ ಕಾರ್ಮಿಕರಿಗೆ ಸಂಬಂಧಿಸಿದ ಒಪ್ಪಂದದ ಕರಡು ಆಖೈರು ಮಾಡಿರುವುದನ್ನು ಸ್ವಾಗತಿಸಿದರು.
ಪ್ರಧಾನಿಯವರು ಕೋವಿಡ್ -19 ಸಾಂಕ್ರಾಮಿಕದಿಂದ ಉದ್ಭವಿಸಿರುವ ಜಾಗತಿಕ ಪರಿಸ್ಥಿತಿ ಸುಧಾರಿಸದ ತರುವಾಯ ಜಪಾನ್ ಪ್ರಧಾನಿ ಸುಗಾ ಅವರಿಗೆ ವಾರ್ಷಿಕ ದ್ವಿಪಕ್ಷೀಯ ಶೃಂಗಕ್ಕಾಗಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದರು.