ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶ್ವ ಆರೋಗ್ಯ ಸಂಸ್ಥೆಯ( ಡಬ್ಲ್ಯೂಎಚ್ಒ)ದ ಮಹಾ ನಿರ್ದೇಶಕರಾದ ಗೌರವಾನ್ವಿತ ಡಾ. ತೆದ್ರೋಸ್ ಅಧಾನೊಮ್ ಗೆಬ್ರೆಯೆಸಸ್ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದರು.
ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣದಲ್ಲಿ ಜಾಗತಿಕ ಸಮನ್ವಯತೆ ಸಾಧಿಸುವಲ್ಲಿ ಡಬ್ಲ್ಯೂಎಚ್ಒ ಅತ್ಯಂತ ಪ್ರಮುಖ ಪಾತ್ರವಹಿಸಿದೆ ಎಂದು ಪ್ರಧಾನಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಇತರೆ ರೋಗಗಳ ವಿರುದ್ಧದ ಸಮರದಲ್ಲಿ ನಾವು ದೃಷ್ಟಿಯನ್ನು ಕಳೆದುಕೊಳ್ಳಬೇಕಾಗಿಲ್ಲ ಎಂದ ಅವರು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆರೋಗ್ಯ ವ್ಯವಸ್ಥೆ ಬಲವರ್ಧನೆಗೆ ಡಬ್ಲ್ಯೂಎಚ್ಒ ನೀಡುತ್ತಿರುವ ಬೆಂಬಲ ಮತ್ತು ಪ್ರಾಮುಖ್ಯತೆಯನ್ನು ಪ್ರಶಂಸಿಸಿದರು.
ಡಬ್ಲ್ಯೂಎಚ್ಒ ಮತ್ತು ಭಾರತೀಯ ಆರೋಗ್ಯ ಅಧಿಕಾರಿಗಳ ನಡುವಿನ ನಿರಂತರ ಮತ್ತು ನಿಕಟ ಸಹಭಾಗಿತ್ವವನ್ನು ಮಹಾನಿರ್ದೇಶಕರು ಪ್ರತಿಪಾದಿಸಿದರು ಮತ್ತು ವಿಶೇಷವಾಗಿ ಭಾರತದ ದೇಶೀಯ ಉಪಕ್ರಮಗಳಾದ ಆಯುಷ್ಮಾನ್ ಭಾರತ್ ಯೋಜನೆ ಮತ್ತು ಕ್ಷಯರೋಗದ ವಿರುದ್ಧ ಭಾರತದ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಾಗತಿಕ ಆರೋಗ್ಯ ವಿಚಾರದಲ್ಲಿ ಭಾರತ ಅತ್ಯಂತ ಪ್ರಮುಖ ಪಾತ್ರವಹಿಸಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಗಳು ಮತ್ತು ಮಹಾನಿರ್ದೇಶಕರು ಸಾಂಪ್ರದಾಯಿಕ ಔಷಧೀಯ ವ್ಯವಸ್ಥೆಗಳ ಮೌಲ್ಯದ ಬಗ್ಗೆ, ವಿಶೇಷವಾಗಿ ಜಾಗತಿಕ ಜನಸಂಖ್ಯೆಯ ರೋಗ ನಿರೋಧಕ ಶಕ್ತಿ ಹೆಚ್ಚಳ ಮತ್ತು ಸೌಖ್ಯ ವೃದ್ಧಿಯ ಕುರಿತು ಫಲಪ್ರದ ಮಾತುಕತೆ ನಡೆಸಿದರು. ಸಾಂಪ್ರದಾಯಿಕ ವೈದ್ಯಕೀಯ ಪರಿಹಾರಗಳನ್ನು ಆಧುನಿಕ ವೈದ್ಯಕೀಯ ಪದ್ಧತಿಗಳ ಜೊತೆ ಸೇರಿಸಿ ಸಮಗ್ರ ಶಿಷ್ಟಾಚಾರಗಳ ಮೂಲಕ ಮತ್ತು ಸಾಂಪ್ರದಾಯಿಕ ಔಷಧಗಳು ಮತ್ತು ಪದ್ಧತಿಗಳಿಗೆ ವೈಜ್ಞಾನಿಕ ಪ್ರಮಾಣೀಕರಣ ನೀಡುವ ಅಗತ್ಯತೆಯನ್ನು ಇಬ್ಬರು ನಾಯಕರು ಒಪ್ಪಿದರು.
ಸಾಂಪ್ರದಾಯಿಕ ಔಷಧೀಯ ಪದ್ಧತಿಗೆ ಹೆಚ್ಚಿನ ಸಾಮರ್ಥ್ಯವಿದ್ದರೂ ಅದನ್ನು ಈವರೆಗೆ ಸೂಕ್ತ ರೀತಿಯಲ್ಲಿ ಪರಿಗಣಿಸಲ್ಪಟ್ಟಿಲ್ಲ ಎಂದು ಪ್ರತಿಪಾದಿಸಿದ ಮಹಾನಿರ್ದೇಶಕರು, ವಿಶ್ವ ಆರೋಗ್ಯ ಸಂಸ್ಥೆ ಈ ವಲಯದಲ್ಲಿ ಸಂಶೋಧನೆ, ತರಬೇತಿ ಮತ್ತು ಉತ್ತಮ ಪದ್ಧತಿಗಳ ವಿನಿಮಯ ಉತ್ತೇಜನ ನೀಡಲು ಸಕ್ರಿಯವಾಗಿ ಕಾರ್ಯೋನ್ಮುಖವಾಗುತ್ತಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಅವರು, ಡಬ್ಲ್ಯೂಎಚ್ಒ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಮಹಾನಿರ್ದೇಶಕರಿಗೆ ‘ಕೋವಿಡ್-19ಗೆ ಆಯುರ್ವೇದ’ ಎಂಬ ಘೋಷವಾಕ್ಯದಡಿ ನವೆಂಬರ್ 13ಅನ್ನು ಭಾರತದಲ್ಲಿ ಆಯುರ್ವೇದದ ದಿನವನ್ನಾಗಿ ಆಚರಿಸಲು ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಮತ್ತು ಮಹಾನಿರ್ದೇಶಕರು, ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ಜಾಗತಿಕ ಸಮನ್ವಯದ ಕ್ರಮಗಳ ಬಗ್ಗೆ ಸಮಾಲೋಚಿಸಿದರು. ಆ ನಿಟ್ಟಿನಲ್ಲಿ ಮಹಾನಿರ್ದೇಶಕರು, ಮನುಕುಲದ ಒಳಿತಿಗಾಗಿ ಲಸಿಕೆ ಮತ್ತು ಔಷಧೋತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತ ತನ್ನೆಲ್ಲಾ ಸಾಮರ್ಥ್ಯವನ್ನು ನಿಯೋಜಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬದ್ಧತೆ ಸರಿಸಾಟಿಯಿಲ್ಲ ಎಂದು ಪ್ರಸಂಶೆ ವ್ಯಕ್ತಪಡಿಸಿದರು.