ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಗೌರವಾನ್ವಿತ ಶ್ರೀ ಜೋ ಬೈಡನ್ ಅವರು 2023 ರ ಸೆಪ್ಟೆಂಬರ್ 9 ರಂದು ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಹೊರತಾಗಿ ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆ (ಪಿಜಿಐಐ) ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಕುರಿತ ವಿಶೇಷ ಕಾರ್ಯಕ್ರಮದ ಸಹ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮವು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಯನ್ನು ಮುಕ್ತಗೊಳಿಸುವ ಮತ್ತು ಭಾರತ, ಮಧ್ಯಪ್ರಾಚ್ಯ ಮತ್ತು ಯುರೋಪ್ ನಡುವಿನ ವಿವಿಧ ಆಯಾಮಗಳಲ್ಲಿ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಇಟಲಿ, ಮಾರಿಷಸ್, ಯುಎಇ ಮತ್ತು ಸೌದಿ ಅರೇಬಿಯಾ ಮತ್ತು ವಿಶ್ವ ಬ್ಯಾಂಕ್ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಿಜಿಐಐ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಮೂಲಸೌಕರ್ಯ ಅಂತರವನ್ನು ಕಡಿಮೆ ಮಾಡುವ ಮತ್ತು ಜಾಗತಿಕವಾಗಿ ಎಸ್ ಡಿಜಿಗಳ ಪ್ರಗತಿಯನ್ನು ವೇಗಗೊಳಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿರುವ ಅಭಿವೃದ್ಧಿ ಉಪಕ್ರಮವಾಗಿದೆ.
ಐಎಂಇಸಿ ಭಾರತವನ್ನು ಗಲ್ಫ್ ಪ್ರದೇಶಕ್ಕೆ ಸಂಪರ್ಕಿಸುವ ಪೂರ್ವ ಕಾರಿಡಾರ್ ಮತ್ತು ಗಲ್ಫ್ ಪ್ರದೇಶವನ್ನು ಯುರೋಪಿಗೆ ಸಂಪರ್ಕಿಸುವ ಉತ್ತರ ಕಾರಿಡಾರ್ ಅನ್ನು ಒಳಗೊಂಡಿದೆ. ಇದು ರೈಲ್ವೆ ಮತ್ತು ಹಡಗು-ರೈಲು ಸಾರಿಗೆ ಜಾಲ ಮತ್ತು ರಸ್ತೆ ಸಾರಿಗೆ ಮಾರ್ಗಗಳನ್ನು ಒಳಗೊಂಡಿರುತ್ತದೆ.
ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ ಭೌತಿಕ, ಡಿಜಿಟಲ್ ಮತ್ತು ಹಣಕಾಸು ಸಂಪರ್ಕದ ಮಹತ್ವವನ್ನು ಒತ್ತಿ ಹೇಳಿದರು. ಭಾರತ ಮತ್ತು ಯುರೋಪ್ ನಡುವೆ ಆರ್ಥಿಕ ಏಕೀಕರಣವನ್ನು ಉತ್ತೇಜಿಸಲು ಐಎಂಇಸಿ ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ಭಾರತ, ಅಮೆರಿಕ, ಸೌದಿ ಅರೇಬಿಯಾ, ಯುಎಇ, ಯುರೋಪಿಯನ್ ಯೂನಿಯನ್, ಇಟಲಿ, ಫ್ರಾನ್ಸ್ ಮತ್ತು ಜರ್ಮನಿ ಐಎಂಇಸಿ ಒಪ್ಪಂದಕ್ಕೆ ಸಹಿ ಹಾಕಿದವು.