"ಯಾವುದೇ ಒತ್ತಡವಿಲ್ಲದೆ ಹಬ್ಬದ ಮನೋಸ್ಥಿತಿಯಲ್ಲಿ ಪರೀಕ್ಷೆಗಳಿಗೆ ಹಾಜರಾಗಿ".
"ತಂತ್ರಜ್ಞಾನವನ್ನು ಒಂದು ಅವಕಾಶವಾಗಿ ಪರಿಗಣಿಸಿ, ಒಂದು ಸವಾಲಾಗಿ ಅಲ್ಲ".
"ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ಸಮಾಲೋಚನೆಯು ಸಮಗ್ರವಾಗಿದೆ. ಭಾರತದಾದ್ಯಂತ ಜನರೊಂದಿಗೆ ಈ ಕುರಿತಂತೆ ಸಮಾಲೋಚಿಸಲಾಗೆದೆ"
"20 ನೇ ಶತಮಾನದ ಶಿಕ್ಷಣ ವ್ಯವಸ್ಥೆ ಮತ್ತು ಆಲೋಚನೆಗಳು 21 ನೇ ಶತಮಾನದಲ್ಲಿ ನಮ್ಮ ಅಭಿವೃದ್ಧಿಯ ಪಥವನ್ನು ನಿರ್ಧರಿಸಲು ಸಾಧ್ಯವಿಲ್ಲ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು".
"ಶಿಕ್ಷಕರು ಮತ್ತು ಪೋಷಕರ ಈಡೇರದ ಆಕಾಂಕ್ಷೆಗಳನ್ನು ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಮಕ್ಕಳು ತಮ್ಮ ಸ್ವಂತ ಆಕಾಂಕ್ಷೆಗಳನ್ನು ಅನುಸರಿಸುವುದು ಬಹಳ ಮುಖ್ಯ".
"ಪ್ರೇರಣೆಗೆ ಯಾವುದೇ ಚುಚ್ಚುಮದ್ದು ಅಥವಾ ಸೂತ್ರವಿಲ್ಲ. ನಿಮ್ಮನ್ನು ನೀವು ಉತ್ತಮವಾಗಿ ಮಾಡಿಕೊಳ್ಳಲು ಮತ್ತು ನಿಮ್ಮ ಸಂತೋಷಕ್ಕೆ ಕಾರಣವೇನೆಂಬುದನ್ನು ಕಂಡುಹಿಡಿಯಿರಿ ಮತ್ತು ಅದರಂತೆ ಕಾರ್ಯೋನ್ಮುಖರಾಗಿ ".
"ನೀವು ಆನಂದಿಸುವ ಕೆಲಸಗಳನ್ನು ಮಾಡಿದಾಗ ನೀವು ಗರಿಷ್ಠ ಫಲಿತಾಂಶವನ್ನು ಪಡೆಯುತ್ತೀರಿ".
"ನೀವು ಒಂದು ವಿಶೇಷ ಪೀಳಿಗೆಗೆ ಸೇರಿದವರು. ಹೌದು, ಹೆಚ್ಚು ಸ್ಪರ್ಧೆ ಇದೆ, ಆದರೊಂದಿಗೆ ಹೆಚ್ಚಿನ ಅವಕಾಶಗಳೂ ಇವೆ".
"ಹೆಣ್ಣುಮಗಳು ಕುಟುಂಬದ ಶಕ್ತಿ. ನಮ್ಮ ನಾರಿ ಶಕ್ತಿಯು ಬದುಕಿನ ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದನ್ನು ನೋಡುವುದಕ್ಕಿಂತ ಉತ್ತಮವಾದುದೇನಿದೆ".
"ಇತರರಲ್ಲಿರುವ ಗುಣಗಳನ್ನು ಮೆಚ್ಚುವ ಮತ್ತು ಅವರಿಂದ ಕಲಿಯುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ".
ನಾನು ನಿಮ್ಮೊಂದಿಗೆ ಸಂಪರ್ಕಿತನಾಗುತ್ತಿದ್ದಂತೆ ನಾನು ನಿಮ್ಮ ಆಕಾಂಕ್ಷೆಗಳು ಮತ್ತು ಕನಸುಗಳ ನೋಟವನ್ನು ಕಾಣುತ್ತೇನೆ ಮತ್ತು ಅದಕ್ಕೆ ಅನುಗುಣವಾಗಿ ನನ್ನ ಜೀವನವನ್ನು ರೂಪಿಸಲು ಪ್ರಯತ್ನಿಸುತ್ತೇನೆ. ಆದ್ದರಿಂದ, ಈ ಕಾರ್ಯಕ್ರಮವು ನನಗೂ ಬೆಳೆಯಲು ಸಹಾಯ ಮಾಡುತ್ತಿದೆ".

ಪರೀಕ್ಷಾ ಪೆ ಚರ್ಚಾ (ಪಿಪಿಸಿ)  5ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನವದೆಹಲಿಯ ತಾಲ್ಕಟೋರಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಿದರು. ಸಂವಾದಕ್ಕೆ ಮೊದಲು ಸ್ಥಳದಲ್ಲಿ ಪ್ರದರ್ಶಿಸಲಾದ ವಿದ್ಯಾರ್ಥಿಗಳ ಚಿತ್ರ ಪ್ರದರ್ಶನಗಳನ್ನು ಅವರು ವೀಕ್ಷಿಸಿದರು. ಕೇಂದ್ರ ಸಚಿವರುಗಳಾದ ಶ್ರೀ ಧರ್ಮೇಂದ್ರ ಪ್ರಧಾನ್, ಶ್ರೀಮತಿ ಅನ್ನಪೂರ್ಣ ದೇವಿ, ಡಾ. ಸುಭಾಸ್ ಸರ್ಕಾರ್, ಡಾ. ರಾಜ್ ಕುಮಾರ್ ರಂಜನ್ ಸಿಂಗ್ ಮತ್ತು ಶ್ರೀ ರಾಜೀವ್ ಚಂದ್ರಶೇಖರ್ ಅವರುಗಳೊಂದಿಗೆ,  ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂದರ್ಭದಲ್ಲಿ ವರ್ಚುವಲ್ ವೇದಿಕೆ ಮೂಲಕವೂ ಭಾಗವಹಿಸಿದ್ದರು. ಪ್ರಧಾನಮಂತ್ರಿಯವರು ಕಾರ್ಯಕ್ರಮದುದ್ದಕ್ಕೂ ಸಂವಾದಾತ್ಮಕ, ಉಲ್ಲಾಸಭರಿತ ಮತ್ತು ಸಂಭಾಷಣೆಯನ್ನು ಕಾಯ್ದುಕೊಂಡರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ ವರ್ಷ ನಡೆದ ವರ್ಚುವಲ್ ಸಂವಾದದ ನಂತರ ತಮ್ಮ ಯುವ ಸ್ನೇಹಿತರನ್ನುದ್ದೇಶಿಸಿ ಮಾತನಾಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಪಿಪಿಸಿ ತಮ್ಮ ನೆಚ್ಚಿನ ಕಾರ್ಯಕ್ರಮ ಎಂದು ಅವರು ಹೇಳಿದರು. ಅವರು ನಾಳೆ ವಿಕ್ರಮ್ ಸಂವತ್ ಹೊಸ ವರ್ಷದ ಪ್ರಾರಂಭವನ್ನು ಉಲ್ಲೇಖಿಸಿ, ಮುಂಬರುವ ಅನೇಕ ಹಬ್ಬಗಳಿಗೆ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪಿಪಿಸಿಯ 5ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿಯವರು ಹೊಸ ಪದ್ಧತಿಯನ್ನು ಪರಿಚಯಿಸಿದರು. ತಮಗೆ ತೆಗೆದುಕೊಳ್ಳಲಾಗದ ಪ್ರಶ್ನೆಗಳಿಗೆ, ವೀಡಿಯೊ, ಆಡಿಯೊ ಅಥವಾ ಪಠ್ಯ ಸಂದೇಶದ ಮೂಲಕ ನಮೋ ಆ್ಯಪ್ ನಲ್ಲಿ ಪರಿಹಾರ ಸೂಚಿಸುವ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.

ಮೊದಲ ಪ್ರಶ್ನೆ ದೆಹಲಿಯ ಖುಷಿ ಜೈನ್ ಅವರಿಂದ ಬಂತು. ಛತ್ತೀಸ್ ಗಢದ ಬಿಲಾಸ್ಪುರದ ಶ್ರೀಧರ ಶರ್ಮಾ, ವಡೋದರದ ಕಿನಿ ಪಟೇಲ್ ಕೂಡ ಪರೀಕ್ಷೆಗಳಿಗೆ ಸಂಬಂಧಿಸಿದ ಉದ್ವಿಗ್ನತೆ ಮತ್ತು ಒತ್ತಡದ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ಪ್ರಧಾನಮಂತ್ರಿಯವರು, ಇದು ನೀವು ಬರೆಯುತ್ತಿರುವ ಮೊದಲ ಪರೀಕ್ಷೆಯೇನಲ್ಲ, ಹೀಗಾಗಿ ಒತ್ತಡಕ್ಕೆ ಒಳಗಾಗಬೇಡಿ ಎಂದು ಹೇಳಿದರು. "ಒಂದು ರೀತಿಯಲ್ಲಿ ನೀವು ಪರೀಕ್ಷಾ-ನಿರೋಧಕರಾಗಿದ್ದೀರಿ", ಎಂದು ಅವರು ಹೇಳಿದರು. ಹಿಂದಿನ ಪರೀಕ್ಷೆಗಳಿಂದ ಪಡೆದ ಅನುಭವವು ಮುಂಬರುವ ಪರೀಕ್ಷೆಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ ಎಂದರು. ಅಧ್ಯಯನದಲ್ಲಿ ಕೆಲವು ಭಾಗಗಳನ್ನು ಓದಲು ಆಗದೆ ಇರಬಹುದು, ಅದಕ್ಕಾಗಿ ಒತ್ತಡಕ್ಕೆ ಒಳಗಾಗಬೇಡಿ ಎಂದು ಅವರು ಹೇಳಿದರು. ತಮ್ಮ ಸಿದ್ಧತೆಯ ಶಕ್ತಿಯ ಮೇಲೆ ಗಮನ ಹರಿಸಬೇಕು ಮತ್ತು ತಮ್ಮ ದೈನಂದಿನ ದಿನಚರಿಯಲ್ಲಿ ಆರಾಮವಾಗಿ ಮತ್ತು ಸ್ವಾಭಾವಿಕವಾಗಿ ಇರಬೇಕು ಎಂದು ಅವರು ಸಲಹೆ ನೀಡಿದರು. ಇತರರ ಅನುಕರಣೆ ಮಾಡಿ ಏನನ್ನೂ ಪ್ರಯತ್ನಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಬದಲಿಗೆ ನಿಮ್ಮ ದಿನಚರಿಯೊಂದಿಗೆ ಇದ್ದು, ಹಬ್ಬದ ಆರಾಮದಾಯಕ ಸ್ವರೂಪದಲ್ಲಿ ಕೆಲಸ ಮಾಡಿ ಎಂದು ಹೇಳಿದರು.

ಮುಂದಿನ ಪ್ರಶ್ನೆ ಕರ್ನಾಟಕದ ಮೈಸೂರಿನ ತರುಣ್ ಅವರಿಂದ ಬಂತು. ಯೂಟ್ಯೂಬ್ ನಂತಹ ಅನೇಕ ಆನ್ ಲೈನ್ ಗೊಂದಲಗಳ ಹೊರತಾಗಿಯೂ ಆನ್ ಲೈನ್ ಅಧ್ಯಯನದ ವಿಧಾನವನ್ನು ಹೇಗೆ ಮುಂದುವರಿಸುವುದು ಎಂದು ಅವರು ಕೇಳಿದರು. ದೆಹಲಿಯ ಶಾಹಿದ್ ಅಲಿ, ಕೇರಳದ ತಿರುವನಂತಪುರಂನ ಕೀರ್ತನಾ ಮತ್ತು ತಮಿಳುನಾಡಿನ ಕೃಷ್ಣಗಿರಿಯ ಶಿಕ್ಷಕ ಚಂದ್ರಚೂಡೇಶ್ವರನ್ ಅವರ ಮನಸ್ಸಿನಲ್ಲೂ ಇದೇ ಪ್ರಶ್ನೆ ಇತ್ತು. ಇದಕ್ಕೆ ಉತ್ತರಿಸಿದ ಪ್ರಧಾನಮಂತ್ರಿಯವರು, ಸಮಸ್ಯೆಯು ಇರುವುದು ಆನ್ ಲೈನ್ ಅಥವಾ ಆಫ್ ಲೈನ್ ಅಧ್ಯಯನ ವಿಧಾನಗಳಲ್ಲಿ ಅಲ್ಲ ಎಂದು ಹೇಳಿದರು. ಆಫ್ಲೈನ್ ಅಧ್ಯಯನದ ವಿಧಾನದಲ್ಲಿಯೂ ಸಹ, ಮನಸ್ಸು ತುಂಬಾ ವಿಚಲಿತವಾಗಬಹುದು. "ಸಮಸ್ಯೆ ಇರುವುದು ಮಾಧ್ಯಮದಲ್ಲಿ ಅಲ್ಲ, ಬದಲಿಗೆ ಮನದಲ್ಲಿ ಸಮಸ್ಯೆಯಿದೆ" ಎಂದು ಅವರು ಹೇಳಿದರು. ಮನಸ್ಸು ಸ್ಥಿರವಾಗಿದ್ದಾಗ ಅದು ಆನ್ ಲೈನ್ ಆಗಿರಲಿ ಅಥವಾ ಆಫ್ ಲೈನ್ ಆಗಿರಲಿ, ಚಂಚಲತೆಗಳು ವಿದ್ಯಾರ್ಥಿಗಳನ್ನು ಕಾಡುವುದಿಲ್ಲ ಎಂದು ಅವರು ಹೇಳಿದರು. ತಂತ್ರಜ್ಞಾನವು ವಿಕಸನಗೊಳ್ಳುತ್ತದೆ ಮತ್ತು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕಲಿಕೆಯ ಹೊಸ ವಿಧಾನಗಳನ್ನು ಒಂದು ಅವಕಾಶವಾಗಿ ತೆಗೆದುಕೊಳ್ಳಬೇಕು, ಒಂದು ಸವಾಲಾಗಿ ತೆಗೆದುಕೊಳ್ಳಬಾರದು ಎಂದರು. ಆನ್ ಲೈನ್ ನಿಮ್ಮ ಆಫ್ ಲೈನ್ ಕಲಿಕೆಯನ್ನು ಹೆಚ್ಚಿಸುತ್ತದೆ. ಆನ್ ಲೈನ್ ವಿಷಯ ಸಂಗ್ರಹಣೆಗಾಗಿದ್ದರೆ, ಆಫ್ ಲೈನ್ ಕಲಿಕೆ ಮತ್ತು ಅಧ್ಯಯನ ಮಾಡಲು ಎಂದು ಹೇಳಿದರು. ಅವರು ದೋಸೆಯನ್ನು ತಯಾರಿಸುವ ಉದಾಹರಣೆಯನ್ನು ನೀಡಿ, ಒಬ್ಬರು ಆನ್ ಲೈನ್ ನಲ್ಲಿ ದೋಸೆ ತಯಾರಿಸುವುದನ್ನು ಕಲಿಯಬಹುದು ಆದರೆ ಸಿದ್ಧತೆ ಮತ್ತು ಬಳಕೆ ಆಫ್ ಲೈನ್ ನಲ್ಲಿ ನಡೆಯುತ್ತದೆ. ವಾಸ್ತವ ಜಗತ್ತಿನಲ್ಲಿ ಬದುಕುವುದಕ್ಕೆ ಹೋಲಿಸಿದರೆ ತನ್ನ ಬಗ್ಗೆ ಯೋಚಿಸುವುದರಲ್ಲಿ ಮತ್ತು ತನ್ನ ಸ್ವಂತಿಕೆಯೊಂದಿಗೆ ಉಳಿಯುವುದರಲ್ಲಿ ತುಂಬಾ ಸಂತೋಷವಿದೆ ಎಂದು ಅವರು ಹೇಳಿದರು.

ಹರಿಯಾಣದ ಪಾಣಿಪಟ್ ನ  ಶಿಕ್ಷಕಿ ಸುಮನ್ ರಾಣಿ, ಹೊಸ ಶಿಕ್ಷಣ ನೀತಿಯ ನಿಬಂಧನೆಗಳು ವಿದ್ಯಾರ್ಥಿಗಳ ಜೀವನವನ್ನು ವಿಶೇಷವಾಗಿ ಮತ್ತು ಸಾಮಾನ್ಯವಾಗಿ ಸಮಾಜವನ್ನು ಹೇಗೆ ಸಶಕ್ತಗೊಳಿಸುತ್ತವೆ ಮತ್ತು ಇದು ನವ ಭಾರತಕ್ಕೆ ಹೇಗೆ ದಾರಿ ಮಾಡಿಕೊಡುತ್ತದೆ ಎಂದು ಪ್ರಶ್ನಿಸಿದರು. ಮೇಘಾಲಯದ ಪೂರ್ವ ಕಾಶಿ ಗಿರಿಯ ಶೀಲಾ ಕೂಡ ಇದೇ ರೀತಿಯ ಪ್ರಶ್ನೆ ಕೇಳಿದರು. ಇದು 'ರಾಷ್ಟ್ರೀಯ' ಶಿಕ್ಷಣ ನೀತಿಯೇ ಹೊರತು 'ಹೊಸ' ಶಿಕ್ಷಣ ನೀತಿಯಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ವಿವಿಧ ಬಾಧ್ಯಸ್ಥರೊಂದಿಗೆ ಸಾಕಷ್ಟು ಚಿಂತನ ಮಂಥನ ನಡೆಸಿದ ನಂತರ ನೀತಿಯನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು. ಅದು ಸ್ವತಃ ಒಂದು ದಾಖಲೆಯಾಗುತ್ತದೆ. "ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ಸಮಾಲೋಚನೆಯು ಸಮಗ್ರವಾಗಿದೆ. ಈ ಬಗ್ಗೆ ಭಾರತದಾದ್ಯಂತದ ಜನರೊಂದಿಗೆ ಸಮಾಲೋಚಿಸಲಾಗಿದೆ" ಎಂದು ಅವರು ಹೇಳಿದರು.  ಈ ನೀತಿಯನ್ನು ಸರ್ಕಾರ ರೂಪಿಸಲಿಲ್ಲ, ಆದರೆ ದೇಶದ ಅಭಿವೃದ್ಧಿಗಾಗಿ ನಾಗರಿಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ರೂಪಿಸಿದರು.  ಈ ಹಿಂದೆ ದೈಹಿಕ ಶಿಕ್ಷಣ ಮತ್ತು ತರಬೇತಿಯು ಪಠ್ಯೇತರ ಚಟುವಟಿಕೆಗಳಾಗಿದ್ದವು ಎಂದು ಅವರು ಹೇಳಿದರು. ಆದರೆ ಈಗ ಅದನ್ನು ಶಿಕ್ಷಣದ ಒಂದು ಭಾಗವಾಗಿ ಮಾಡಲಾಗಿದೆ ಮತ್ತು ಹೊಸ ಪ್ರತಿಷ್ಠೆಯೊಂದಿಗೆ ಅದನ್ನು ಪಡೆಯುತ್ತಿದ್ದಾರೆ ಎಂದರು. 20ನೇ ಶತಮಾನದ ಶಿಕ್ಷಣ ವ್ಯವಸ್ಥೆ ಮತ್ತು ಚಿಂತನೆಗಳು 21ನೇ ಶತಮಾನದಲ್ಲಿ ನಮ್ಮ ಅಭಿವೃದ್ಧಿಯ ಪಥವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಬದಲಾಗುತ್ತಿರುವ ವ್ಯವಸ್ಥೆಗಳೊಂದಿಗೆ ನಾವು ವಿಕಸನಗೊಳ್ಳದಿದ್ದರೆ ನಾವು ಹೊರಗುಳಿಯುತ್ತೇವೆ ಮತ್ತು ಹಿಂದೆ ಹೋಗುತ್ತೇವೆ ಎಂದು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯು ಒಬ್ಬರ ಉತ್ಸಾಹವನ್ನು ಅನುಸರಿಸಲು ಅವಕಾಶವನ್ನು ನೀಡುತ್ತದೆ ಎಂದು ಅವರು ಹೇಳಿದರು. ಅವರು ಜ್ಞಾನದ ಜೊತೆಗೆ ಕೌಶಲ್ಯದ ಮಹತ್ವವನ್ನು ಒತ್ತಿ ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿ ಕೌಶಲ್ಯಗಳನ್ನು ಸೇರಿಸಲು ಇದೇ ಕಾರಣ ಎಂದು ಅವರು ಹೇಳಿದರು. ವಿಷಯಗಳ ಆಯ್ಕೆಯಲ್ಲಿ ಎನ್.ಇ.ಪಿ ಒದಗಿಸಿದ ನಮ್ಯತೆಯನ್ನು ಅವರು ಪ್ರತಿಪಾದಿಸಿದರು. ಎನ್ಇಪಿಯ ಸಮರ್ಪಕ ಅನುಷ್ಠಾನವು ಹೊಸ ಅವಕಾಶಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಆವಿಷ್ಕರಿಸಿದ ಹೊಸ ತಂತ್ರಜ್ಞಾನಗಳನ್ನು ಅನುಷ್ಠಾನಗೊಳಿಸಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವಂತೆ ಅವರು ದೇಶಾದ್ಯಂತದ ಶಾಲೆಗಳನ್ನು ಆಗ್ರಹಿಸಿದರು.

ಯುಪಿಯ ಗಾಜಿಯಾಬಾದ್ ನ  ರೋಶಿನಿ ಫಲಿತಾಂಶದ ಬಗ್ಗೆ ತನ್ನ ಕುಟುಂಬದ ನಿರೀಕ್ಷೆಗಳನ್ನು ಹೇಗೆ ನಿಭಾಯಿಸುವುದು ಮತ್ತು ಪೋಷಕರು ಭಾವಿಸಿದಂತೆ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಬೇಕೇ ಅಥವಾ ಅದನ್ನು ಹಬ್ಬವಾಗಿ ಆನಂದಿಸಬೇಕೇ ಎಂದು ಕೇಳಿದರು. ಪಂಜಾಬ್ ನ ಭಟಿಂಡಾದ ಕಿರಣ್ ಪ್ರೀತ್ ಕೌರ್ ಇದೇ ರೀತಿಯ ಪ್ರಶ್ನೆಯನ್ನು ಕೇಳಿದರು. ನಿಮ್ಮ ಆಕಾಂಕ್ಷೆಗಳನ್ನು ವಿದ್ಯಾರ್ಥಿಗಳ ಮೇಲೆ ಹೇರಬೇಡಿ ಎಂದು ಪ್ರಧಾನಮಂತ್ರಿಯವರು ಪೋಷಕರು ಮತ್ತು ಶಿಕ್ಷಕರಿಗೆ ಕರೆ ನೀಡಿದರು. "ಶಿಕ್ಷಕರು ಮತ್ತು ಪೋಷಕರ ಈಡೇರದ ತಮ್ಮ ಆಕಾಂಕ್ಷೆಗಳನ್ನು ವಿದ್ಯಾರ್ಥಿಗಳ ಮೇಲೆ ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಪ್ರತಿಯೊಂದು ಮಗುವೂ ತನ್ನ ಆಕಾಂಕ್ಷೆಗಳನ್ನು ಅನುಸರಿಸುವುದು ಬಹಳ ಮುಖ್ಯ" ಎಂದು ಪ್ರಧಾನಮಮಂತ್ರಿ ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕೆಲವು ವಿಶೇಷ ಸಾಮರ್ಥ್ಯವಿರುತ್ತದೆ ಎಂಬುದನ್ನು ಪೋಷಕರು ಮತ್ತು ಶಿಕ್ಷಕರು ಒಪ್ಪಿಕೊಳ್ಳಬೇಕು ಮತ್ತು ಅದನ್ನು ಕಂಡುಹಿಡಿಯಬೇಕು ಎಂದು ಅವರು ಆಗ್ರಹಿಸಿದರು. ಅವರ ಶಕ್ತಿಯನ್ನು ಗುರುತಿಸಿ ಆತ್ಮವಿಶ್ವಾಸದಿಂದ ಮುಂದುವರಿಯುವಂತೆ ಅವರು ವಿದ್ಯಾರ್ಥಿಗೆ ಹೇಳಿದರು.

ದೆಹಲಿಯ ವೈಭವ್ ಕನ್ನೌಜಿಯಾ ನಮಗೆ ಹೆಚ್ಚು ಬ್ಯಾಕ್ಲಾಗ್ ಇದ್ದಾಗ ಪ್ರೇರೇಪಿತರಾಗಿ ಉಳಿಯುವುದು ಮತ್ತು ಯಶಸ್ವಿಯಾಗುವುದು ಹೇಗೆ ಎಂದು ಕೇಳಿದರು. ಒಡಿಶಾದ ಪೋಷಕರಾದ ಸುಜಿತ್ ಕುಮಾರ್ ಪ್ರಧಾನ್, ಜೈಪುರದ ಕೋಮಲ್ ಶರ್ಮಾ ಮತ್ತು ದೋಹಾದ ಅರೋನ್ ಎಬೆನ್ ಕೂಡ ಇದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದರು. "ಪ್ರೇರಣೆಗಾಗಿ ಯಾವುದೇ ಚುಚ್ಚುಮದ್ದು ಅಥವಾ ಸೂತ್ರವಿಲ್ಲ" ಎಂದು ಪ್ರಧಾನಮಂತ್ರಿ ಹೇಳಿದರು. ಬದಲಾಗಿ, ನಿಮ್ಮನ್ನು ನೀವು ಉತ್ತಮವಾಗಿ ಕಂಡುಕೊಳ್ಳಿ ಮತ್ತು ನಿಮಗೆ ಸಂತೋಷವನ್ನುಂಟುಮಾಡುವ ಸಂಗತಿಯನ್ನು ಕಂಡುಹಿಡಿಯಿರಿ ಮತ್ತು ಅದರ ಮೇಲೆ ಕಾರ್ಯೋನ್ಮುಖರಾಗಿ." ಸ್ವಾಭಾವಿಕವಾಗಿ ಪ್ರೇರೇಪಿಸುವ ಸಂಗತಿಗಳನ್ನು ಗುರುತಿಸುವಂತೆ ಅವರು ವಿದ್ಯಾರ್ಥಿಗಳಿಗೆ ಹೇಳಿದರು, ಈ ಪ್ರಕ್ರಿಯೆಯಲ್ಲಿ ಅವರು ಸ್ವಾಯತ್ತತೆಯನ್ನು ಒತ್ತಿ ಹೇಳಿದರು ಮತ್ತು ವಿದ್ಯಾರ್ಥಿಗಳು ತಮ್ಮ ಕಷ್ಟಗಳಿಗೆ ಸಹಾನುಭೂತಿ ಪಡೆಯಲು ಪ್ರಯತ್ನಿಸಬೇಡಿ ಎಂದು ಹೇಳಿದರು. ಮಕ್ಕಳು, ದಿವ್ಯಾಂಗರು ಮತ್ತು ಪ್ರಕೃತಿ ತಮ್ಮ ಗುರಿಗಳನ್ನು ಸಾಧಿಸಲು ಹೇಗೆ ಪ್ರಯತ್ನಿಸುತ್ತದೆ ಎಂಬುದನ್ನು ತಿಳಿಯಲು ಸುತ್ತಮುತ್ತ ಗಮನಿಸುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. "ನಾವು ನಮ್ಮ ಸುತ್ತಮುತ್ತಲಿನ ಪ್ರಯತ್ನಗಳು ಮತ್ತು ಸಾಮರ್ಥ್ಯಗಳನ್ನು ಗಮನಿಸಬೇಕು ಮತ್ತು ಅದರಿಂದ ಸ್ಫೂರ್ತಿಯನ್ನು ಪಡೆಯಬೇಕು" ಎಂದು ಅವರು ಹೇಳಿದರು. ಅವರು ತಮ್ಮ ಪುಸ್ತಕ “ಎಕ್ಸಾಮ್ ವಾರಿಯರ್’’ ನ ಸಾಲುಗಳನ್ನು ಸ್ಮರಿಸಿ, 'ಪರೀಕ್ಷೆ'ಗೇ ಸ್ವತಃ ಪತ್ರ ಬರೆಯುವ ಮೂಲಕ ಮತ್ತು ಪರೀಕ್ಷೆಯನ್ನೇ ಪ್ರಶ್ನಿಸುವ ಮೂಲಕ, ತಮ್ಮ ಸಿದ್ಧತೆ ಮತ್ತು ಶಕ್ತಿಯೊಂದಿಗೆ ಹೇಗೆ ಒಬ್ಬರು ಪ್ರೇರೇಪಿತರಾಗಬಹುದು ಎಂಬುದನ್ನು ತಿಳಿಸಿದರು. ತೆಲಂಗಾಣದ ಖಮ್ಮಂನ ಅನುಷಾ, ಶಿಕ್ಷಕರು ಕಲಿಸಿದಾಗ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತೇನೆ ಆದರೆ ಸ್ವಲ್ಪ ಸಮಯದ ನಂತರ ಅದನ್ನು ಮರೆತುಬಿಡುತ್ತೇನೆ. ಈ ಸಮಸ್ಯೆ ಹೇಗೆ ನಿಭಾಯಿಸುವುದು ಎಂದು ಕೇಳಿದರು. ಗಾಯತ್ರಿ ಸಕ್ಸೇನಾ, ನಮೋ ಆ್ಯಪ್ ಮೂಲಕ, ನೆನಪು ಮತ್ತು ತಿಳಿವಳಿಕೆಯ ಬಗ್ಗೆ ಒಂದು ಪ್ರಶ್ನೆಯನ್ನು ಕೇಳಿದ್ದರು. ವಿಷಯಗಳನ್ನು ಪೂರ್ಣ ಗಮನವಿಟ್ಟು ಕಲಿತರೆ ಯಾವುದನ್ನೂ ಮರೆಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಆ ಕ್ಷಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಹೇಳಿದರು. ವರ್ತಮಾನದ ಬಗೆಗಿನ ಈ ಜಾಗರೂಕತೆ ಅವರಿಗೆ ಉತ್ತಮವಾಗಿ ಕಲಿಯಲು ಮತ್ತು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆ  ಕ್ಷಣವು ಅತ್ಯಂತ ದೊಡ್ಡ 'ವರ್ತಮಾನ'ವಾಗಿದೆ ಮತ್ತು ಯಾರು ವರ್ತಮಾನದಲ್ಲಿ ಜೀವಿಸುತ್ತಾರೋ ಮತ್ತು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ, ಜೀವನದಿಂದ ಗರಿಷ್ಠ ಮಟ್ಟವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು. ನೆನಪಿನ ಶಕ್ತಿಯನ್ನು ಅಮೂಲ್ಯವಾಗಿಡಲು ಮತ್ತು ಅದನ್ನು ವಿಸ್ತರಿಸುತ್ತಲೇ ಇರುವಂತೆ ಅವರು ತಿಳಿಸಿದರು. ಸ್ಥಿರವಾದ ಮನಸ್ಸು ಓದಿದ ವಿಷಯಗಳನ್ನು ನೆನಪಿಸಿಕೊಳ್ಳಲು ಹೆಚ್ಚು ಸೂಕ್ತವಾಗಿದೆ ಎಂದು ಅವರು ಹೇಳಿದರು.

ಜಾರ್ಖಂಡ್ ನ ಶ್ವೇತಾ ಕುಮಾರಿ ಅವರು ರಾತ್ರಿಯಲ್ಲಿ ಅಧ್ಯಯನ ಮಾಡಲು ಬಯಸುತ್ತೇನೆ ಆದರೆ ಹಗಲಿನಲ್ಲಿ ಅಧ್ಯಯನ ಮಾಡಲು ಕೇಳಲಾಗುತ್ತದೆ ಎಂದು ತಿಳಿಸಿದರು. ರಾಘವ್ ಜೋಶಿ ಅವರು ಅಧ್ಯಯನಕ್ಕಾಗಿ ಸರಿಯಾದ ವೇಳಾಪಟ್ಟಿಯ ಬಗ್ಗೆ ನಮೋ ಅಪ್ಲಿಕೇಶನ್ ಮೂಲಕ ಕೇಳಿದರು. ಒಬ್ಬರ ಪ್ರಯತ್ನದ ಫಲಿತಾಂಶವನ್ನು ಮತ್ತು ಸಮಯವನ್ನು ಹೇಗೆ ಕಳೆಯಲಾಗುತ್ತಿದೆ ಎಂಬುದನ್ನು ಮೌಲ್ಯಮಾಪನ ಮಾಡುವುದು ಒಳ್ಳೆಯದು ಎಂದು ಪ್ರಧಾನಮಂತ್ರಿ ಹೇಳಿದರು. ಫಲಿತಾಂಶ ಮತ್ತು ಫಲಶ್ರುತಿಯನ್ನು ವಿಶ್ಲೇಷಿಸುವ ಈ ಅಭ್ಯಾಸವು ಶಿಕ್ಷಣದ ಪ್ರಮುಖ ಭಾಗವಾಗಿದೆ ಎಂದು ಅವರು ಹೇಳಿದರು. ನಮಗೆ ಸುಲಭವಾದ ಮತ್ತು ಆಸಕ್ತಿದಾಯಕವಾದ ವಿಷಯಗಳಿಗೆ ನಾವು ಆಗಾಗ್ಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತೇವೆ ಎಂದು ಅವರು ಹೇಳಿದರು. ಮನಸ್ಸು, ಹೃದಯ ಮತ್ತು ದೇಹ ಮಾಡುವ ಮೋಸವನ್ನು ನಿವಾರಿಸಲು ಪ್ರಯತ್ನಪೂರ್ವಕ ಪ್ರಯತ್ನದ ಅಗತ್ಯವಿದೆ ಎಂದು ಅವರು ಹೇಳಿದರು. "ನೀವು ಆನಂದಿಸುವ ಕೆಲಸಗಳನ್ನು ಮಾಡಿ ಮತ್ತು ಆಗ ನೀವು ಗರಿಷ್ಠ ಫಲಿತಾಂಶವನ್ನು ಪಡೆಯುತ್ತೀರಿ" ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಉಧಂಪುರದ ಎರಿಕಾ ಜಾರ್ಜ್ ಅವರು ಕೆಲವು ಕಾರಣಗಳಿಂದಾಗಿ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗದ ಜನರಿಗೆ ಏನು ಮಾಡಬಹುದು ಎಂದು ಕೇಳಿದರು. ಗೌತಮ್ ಬುದ್ಧ ನಗರದ ಹರಿ ಓಂ ಮಿಶ್ರಾ ಅವರು ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಬೋರ್ಡ್ ಪರೀಕ್ಷೆಗೆ ಅಧ್ಯಯನ ಮಾಡುವ ಬೇಡಿಕೆಗಳನ್ನು ಹೇಗೆ ನಿಭಾಯಿಸಬೇಕು ಎಂದು ಕೇಳಿದರು. ಪರೀಕ್ಷೆಗಳಿಗಾಗಿ ಅಧ್ಯಯನ ಮಾಡುವುದು ತಪ್ಪು ಎಂದು ಪ್ರಧಾನಮಂತ್ರಿ ಹೇಳಿದರು. ಯಾರೇ ಆದರೂ ಪೂರ್ಣ ಮನಸ್ಸಿನಿಂದ ಪಠ್ಯಕ್ರಮವನ್ನು ಅಧ್ಯಯನ ಮಾಡಿದರೆ, ಯಾವುದೇ ಪರೀಕ್ಷೆಗಳು ಕಷ್ಟವಾಗುವುದಿಲ್ಲ ಎಂದು ಅವರು ಹೇಳಿದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಬದಲು ಆ ವಿಷಯವನ್ನು ಕರಗತ ಮಾಡಿಕೊಳ್ಳುವ ಗುರಿಯನ್ನು ಹೊಂದಬೇಕು ಎಂದು ಅವರು ಹೇಳಿದರು. ಕ್ರೀಡಾಪಟುಗಳು ಕ್ರೀಡೆಗಾಗಿ ತರಬೇತಿ ಪಡೆಯುತ್ತಾರೆ ಮತ್ತು ಸ್ಪರ್ಧೆಗಾಗಿ ಅಲ್ಲ ಎಂದು ಅವರು ಹೇಳಿದರು. "ನೀವು ಒಂದು ವಿಶೇಷ ಪೀಳಿಗೆಗೆ ಸೇರಿದವರು. ಹೌದು, ಹೆಚ್ಚಿನ ಸ್ಪರ್ಧೆ ಇದೆ ಆದರೆ ಹೆಚ್ಚಿನ ಅವಕಾಶಗಳೂ ಇವೆ", ಎಂದು ಅವರು ಹೇಳಿದರು. ಸ್ಪರ್ಧೆಯನ್ನು ತಮ್ಮ ಕಾಲದ ಶ್ರೇಷ್ಠ ಕೊಡುಗೆಯಾಗಿ ಪರಿಗಣಿಸುವಂತೆ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಒಬ್ಬ ಪೋಷಕರಾದ ಗುಜರಾತಿನ ನವಸಾರಿಯ ಸೀಮಾ ಚೇತನ್ ದೇಸಾಯಿ ಅವರು ಗ್ರಾಮೀಣ ಹೆಣ್ಣು ಮಕ್ಕಳ ಉನ್ನತಿಗೆ ಸಮಾಜ ಹೇಗೆ ಕೊಡುಗೆ ನೀಡಬಹುದು ಎಂದು ಪ್ರಧಾನ ಮಂತ್ರಿಯವರನ್ನು ಕೇಳಿದರು. ಹೆಣ್ಣು ಮಕ್ಕಳ ಶಿಕ್ಷಣವನ್ನು ನಿರ್ಲಕ್ಷಿಸಿದ ಸಮಯದಿಂದ ಪರಿಸ್ಥಿತಿ ಸಾಕಷ್ಟು ಬದಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಹೆಣ್ಣುಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಖಾತ್ರಿಪಡಿಸಿಕೊಳ್ಳದೆ ಯಾವುದೇ ಸಮಾಜವು ಸುಧಾರಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ಹೆಣ್ಣುಮಕ್ಕಳ ಅವಕಾಶಗಳು ಮತ್ತು ಸಬಲೀಕರಣವನ್ನು ಸಾಂಸ್ಥೀಕರಿಸಬೇಕು ಎಂದು ಅವರು ಹೇಳಿದರು. ಬಾಲಕಿಯರು ಹೆಚ್ಚು ಮೌಲ್ಯಯುತ ಆಸ್ತಿಯಾಗುತ್ತಿದ್ದಾರೆ ಮತ್ತು ಈ ಬದಲಾವಣೆ ಸ್ವಾಗತಾರ್ಹ. ಆಜಾದಿ ಕಾ ಅಮೃತ್ ಮಹೋತ್ಸವದ ವರ್ಷದಲ್ಲಿ, ಭಾರತವು ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಸಂಖ್ಯೆಯ ಸಂಸತ್ ಸದಸ್ಯರನ್ನು ಹೊಂದಿದೆ ಎಂದು ಅವರು ಹೇಳಿದರು. "ಮಗಳು ಕುಟುಂಬದ ಶಕ್ತಿ. ನಮ್ಮ ನಾರಿ ಶಕ್ತಿಯು ಜೀವನದ ವಿವಿಧ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದನ್ನು ನೋಡುವುದಕ್ಕಿಂತ ಉತ್ತಮವಾದುದೇನಿದೆ", ಎಂದು ಪ್ರಧಾನಮಂತ್ರಿ ಕೇಳಿದರು.

ದೆಹಲಿಯ ಪವಿತ್ರಾ ರಾವ್ ಅವರು ಹೊಸ ಪೀಳಿಗೆಯು ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಲು ಏನು ಮಾಡಬೇಕು ಎಂದು ಕೇಳಿದರು. ಚೈತನ್ಯ ಎಂಬ ವಿದ್ಯಾರ್ಥಿ ತನ್ನ ತರಗತಿ ಮತ್ತು ಪರಿಸರವನ್ನು ಸ್ವಚ್ಛ ಮತ್ತು ಹಸಿರುಗೊಳಿಸುವುದು ಹೇಗೆ ಎಂದು ಕೇಳಿದನು. ಪ್ರಧಾನಮಂತ್ರಿಯವರು ಈ ದೇಶವನ್ನು ಸ್ವಚ್ಛ ಮತ್ತು ಹಸಿರು ಮಾಡಿದ ಶ್ರೇಯವನ್ನು ವಿದ್ಯಾರ್ಥಿಗಳಿಗೆ ನೀಡಿ, ಧನ್ಯವಾದ ಅರ್ಪಿಸಿದರು. ಮಕ್ಕಳು ಪ್ರಧಾನಮಂತ್ರಿಯವರ ಸ್ವಚ್ಛತಾ ಪ್ರತಿಜ್ಞೆಯನ್ನು ನೈಜವಾಗಿ ಅರ್ಥಮಾಡಿಕೊಂಡರು ಎಂದರು. ನಾವು ಆನಂದಿಸುತ್ತಿರುವ ಪರಿಸರವು ನಮ್ಮ ಪೂರ್ವಜರ ಕೊಡುಗೆಯಿಂದಾಗಿದೆ ಎಂದು ಅವರು ಹೇಳಿದರು. ಅಂತೆಯೇ, ನಾವು ಭವಿಷ್ಯದ ಪೀಳಿಗೆಗೆ ಉತ್ತಮ ವಾತಾವರಣವನ್ನು ನಾವು ಬಿಡಬೇಕು. ನಾಗರಿಕರ ಕೊಡುಗೆಯಿಂದ ಮಾತ್ರ ಇದು ಸಾಧ್ಯ ಎಂದು ಅವರು ಹೇಳಿದರು. "ಪಿ 3 ಆಂದೋಲನ"ದ - ಪ್ರೊ ಪ್ಲಾನೆಟ್ ಪೀಪಲ್ (ಭೂಗ್ರಹ ಪರವಾದ ಜನರು) ಮತ್ತು ಲೈಫ್ ಸ್ಟೈಲ್ ಫಾರ್ ದಿ ಎನ್ವಿರಾನ್ಮೆಂಟ್ (ಪರಿಸರಕ್ಕಾಗಿ ಜೀವ ಶೈಲಿ)- ಲೈಫ್ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ನಾವು 'ಬಳಸಿ ಬಿಸಾಡುವ' ಸಂಸ್ಕೃತಿಯಿಂದ ದೂರ ಸರಿದು ಪುನರ್ ಬಳಕೆಯ ಆರ್ಥಿಕತೆಯ ಜೀವನಶೈಲಿಯತ್ತ ಸಾಗಬೇಕು ಎಂದು ಅವರು ಹೇಳಿದರು. ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಯ ಅತ್ಯುತ್ತಮ ವರ್ಷಗಳಿಗೆ ಹೊಂದಿಕೆಯಾಗುವ ಅಮೃತ ಕಾಲದ ಮಹತ್ವವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ಒಬ್ಬರ ಕರ್ತವ್ಯ ಪಾಲನೆಯ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಲಸಿಕೆ ಪಡೆಯುವಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಕ್ಕಾಗಿ ಅವರು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಕಾರ್ಯಕ್ರಮದ ಕೊನೆಯಲ್ಲಿ, ಕಾರ್ಯಕ್ರಮ ನಡೆಸಿದ ವಿದ್ಯಾರ್ಥಿಗಳನ್ನು ಪ್ರಧಾನಮಂತ್ರಿಯವರು ಕರೆದು ಅವರ ಕೌಶಲ್ಯ ಮತ್ತು ಆತ್ಮವಿಶ್ವಾಸಕ್ಕಾಗಿ ಶ್ಲಾಘಿಸಿದರು. ಇತರರಲ್ಲಿರುವ ಗುಣಗಳನ್ನು ಮೆಚ್ಚುವ ಮತ್ತು ಅವರಿಂದ ಕಲಿಯುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಅವರು ಪುನರುಚ್ಚರಿಸಿದರು. ನಾವು ಅಸೂಯೆಯ ಬದಲು ಕಲಿಯುವ ಪ್ರವೃತ್ತಿಯನ್ನು ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸಿಗೆ ಈ ಸಾಮರ್ಥ್ಯವು ಮುಖ್ಯವಾಗಿದೆ ಎಂದರು.

ಪಿಪಿಸಿಯ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳುವ ಮೂಲಕ ಅವರು ತಮ್ಮ ಭಾಷಣ ಮುಕ್ತಾಯಗೊಳಿಸುವಾಗ, ಯುವ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿರುವಾಗ ತಾವು 5೦ ವರ್ಷ ಚಿಕ್ಕವರೆಂದು ಭಾವಿಸುವುದಾಗಿ ತಿಳಿಸಿದರು. "ನಾನು ನಿಮ್ಮ ಪೀಳಿಗೆಯೊಂದಿಗೆ ಸಂಪರ್ಕಿತನಾಗುವ ಮೂಲಕ ನಿಮ್ಮಿಂದ ಕಲಿಯಲು ಪ್ರಯತ್ನಿಸುತ್ತೇನೆ. ನಾನು ನಿಮ್ಮೊಂದಿಗೆ ಸಂಪರ್ಕ ಸಾಧಿಸುತ್ತಿದ್ದಂತೆ ನಾನು ನಿಮ್ಮ ಆಕಾಂಕ್ಷೆಗಳು ಮತ್ತು ಕನಸುಗಳ ನೋಟವನ್ನು ಕಾಣುತ್ತೇನೆ ಮತ್ತು ಅದಕ್ಕೆ ಅನುಗುಣವಾಗಿ ನನ್ನ ಜೀವನವನ್ನು ರೂಪಿಸಲು ಪ್ರಯತ್ನಿಸುತ್ತೇನೆ. ಆದ್ದರಿಂದ ಈ ಕಾರ್ಯಕ್ರಮವು ನನಗೂ ಬೆಳೆಯಲು ಸಹಾಯ ಮಾಡುತ್ತಿದೆ. ನನಗೆ ಸಹಾಯ ಮಾಡಲು ಮತ್ತು ಬೆಳೆಯಲು ನನಗೆ ಸಮಯ ನೀಡಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ", ಎಂದು ಪ್ರಧಾನ ಮಂತ್ರಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi