ಶ್ರೀ ಗುರು ತೇಘ್ ಬಹದೂರ್ ಜೀ ಅವರ 400ನೇ ಜಯಂತಿ(ಪ್ರಕಾಶ್ ಪೂರಬ್) ಆಚರಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಉನ್ನತ ಮಟ್ಟದ ಸಮಿತಿಯ ವೀಡಿಯೊ ಕಾನ್ಫರೆನ್ಸಿಂಗ್ ಸಭೆ ಆಯೋಜಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶ್ಹಾ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಗುರು ತೇಘ್ ಬಹದೂರ್ ಜೀ ಅವರ 400ನೇ ಜಯಂತಿಯನ್ನು ವರ್ಷಪೂರ್ತಿ ಆಚರಿಸಲು ಯೋಜಿಸಲಾಗಿದ್ದು, ಈ ವಿಶೇಷ ಸಂದರ್ಭಕ್ಕೆ ರೂಪಿಸಬೇಕಾದ ಸರಣಿ ವೈವಿಧ್ಯಮಯ ಕಾರ್ಯಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಉನ್ನತ ಮಟ್ಟದ ಸಮಿತಿ
ಗುರು ತೇಘ್ ಬಹದೂರ್ ಜೀ ಅವರ 400ನೇ ಜಯಂತಿ(ಪ್ರಕಾಶ್ ಪೂರಬ್) ಆಚರಣೆಗೆ ಕೇಂದ್ರ ಸರ್ಕಾರ 2020 ಅಕ್ಟೋಬರ್ 24ರಂದು ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಸಮಿತಿಯು ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸಿ, ಅನುಮೋದಿಸಲಿದೆ. ಜತೆಗೆ, ಜಯಂತಿ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಲಿದೆ. ಪ್ರಧಾನ ಮಂತ್ರಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು 70 ಸದಸ್ಯರನ್ನು ಹೊಂದಿದೆ.