ನಿಮಗೆ ಗೊತ್ತಿದೆಯೇ? ಚುನಾವಣಾ ರಾಜಕಾರಣಕ್ಕೆ ಬರುವ ಮೊದಲು ಶ್ರೀ ನರೇಂದ್ರ ಮೋದಿಯವರು ಹಲವು ವರ್ಷಗಳ ಕಾಲ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಅಲ್ಲಿ ಅವರ ಸಂಘಟನಾ ಚತುರತೆ ಮತ್ತು ತಳಮಟ್ಟವನ್ನು ತಲುಪುವಂಥ ಪರಿಣಾಮಕಾರಿ ದೃಷ್ಟಿಕೋನವನ್ನು ಪ್ರದರ್ಶಿಸಿದ್ದರು. ಅದೇ ಅವರನ್ನು ಪ್ರತಿ ಕಾರ್ಯಕರ್ತನ ಮಟ್ಟಕ್ಕೂ ಕೊಂಡೊಯ್ದದ್ದು.
೧೯೮೭ ರಲ್ಲಿ ಶ್ರೀ ಮೋದಿ ಬ ಇಜೆಪಿಯನ್ನು ಸೇರಿದರು. ಆಗ ಅವರಿಗೆ ವಹಿಸಲಾಗಿದ್ದ ಮೊದಲ ಜವಾಬ್ದಾರಿಯೆಂದರೆ ಅಹಮದಾಬಾದ್ ನ ಪೌರಾಡಳಿತ ಚುನಾವಣೆಗೆ ಪ್ರಚಾರ ಮಾಡುವುದು. ಅತ್ಯಂತ ಸ್ಫೂರ್ತಿಯುತ ಪ್ರಚಾರ ನಡೆದಿದ್ದರಿಂದ ಬಿಜೆಪಿ ಜಯಭೇರಿ ಬಾರಿಸಿತು.
೧೯೯೦ ರಲ್ಲಿ, ಗುಜರಾತ್ ವಿಧಾನಸಭಾ ಚುನಾವಣೆಗೆ ರಣತಂತ್ರಗಳನ್ನು ರೂಪಿಸುವ ಪ್ರಮುಖರ ಸಮಿತಿಯಲ್ಲಿ ಶ್ರೀ ಮೋದಿಯವರು ಸ್ಥಾನ ಪಡೆದರು. ಅದರ ಪರಿಣಾಮವೆಂದರೆ ಆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ದಶಕಗಳ ಕಾಂಗ್ರೆಸ್ ಆಡಳಿತವನ್ನು ಕೊನೆಗೊಳಿಸಿತು. ೧೯೮೦ ಮತತು ೧೯೮೫ ರಲ್ಲಿ ಅನುಕ್ರಮವಾಗಿ ೧೪೧ ಮತ್ತು ೧೪೯ ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ೩೩ ಕ್ಕೆ ಇಳಿಯಿತು. ಬಿಜೆಪಿ ೬೭ ಸೀಟುಗಳನ್ನು ಗೆದ್ದು ಶ್ರೀ ಚಿಮಣ್ ಭಾಯಿ ಪಟೇಲ್ ಅವರೊಂದಿಗೆ ಸೇರಿ ಮೈತ್ರಿ ಸರಕಾರ ರಚಿಸಿತು. ಆ ಮೈತ್ರಿ ಕಡಿಮೆ ಅವಧಿಯದ್ದಾದರೂ, ಬಿಜೆಪಿಯು ದೊಡ್ಡ ಶಕ್ತಿಯಾಗಿ ಗುಜರಾತಿನಲ್ಲಿ ಹೊರಹೊಮ್ಮಿತು.
೧೯೯೫ ರಲ್ಲಿ, ಮತ್ತೆ ಶ್ರೀ ಮೋದಿಯವರು ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡರು. ಮೊದಲ ಬಾರಿಗೆ ೧೮೨ ಸೀಟುಗಳಿಗೆ ಸ್ಪರ್ಧಿಸಲು ನಿರ್ಧರಿಸಿತು. ಐತಿಹಾಸಿಕವಾಗಿ ೧೨೧ ಸೀಟುಗಳನ್ನು ಗೆದ್ದು ಸರಕಾರವನ್ನು ರಚಿಸಿತು.
೧೯೯೬ ರಲ್ಲಿ ಶ್ರೀ ಮೋದಿಯವರು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ದಿಲ್ಲಿಗೆ ಹೋದರು. ಉತ್ತರ ಭಾರತದ ಪ್ರಮುಖ ರಾಜ್ಯಗಳಾದ ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಗಳ ಹೊಣೆಯನ್ನು ವಹಿಸಲಾಯಿತು. ೧೯೯೮ ರಲ್ಲಿ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಸರಕಾರ ರಚಿಸಿದರೆ, ಹರಿಯಾಣದಲ್ಲಿ (೧೯೯೬), ಪಂಜಾಬ್ (೧೯೯೭) ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿ ಸರಕಾರವನ್ನು ರಚಿಸಿತು. ದಿಲ್ಲಿಯಲ್ಲಿದ್ದ ಹೊಣೆಗಾರಿಕೆ ಸರ್ದಾರ್ ಪ್ರಕಾಶ್ ಸಿಂಗ್ ಬಾದಲ್, ಬನ್ಸಿಲಾಲ್ ಮತ್ತು ಫರೂಖ್ ಆಬ್ದುಲ್ಲಾರಂಥ ನಾಯಕರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿಸಿತು.
ಶ್ರೀ ಮೋದಿಯವರಿಗೆ ಪಕ್ಷದ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಂಥ ಮಹತ್ವದ ಹುದ್ದೆಯನ್ನು ವಹಿಸಲಾಯಿತು. ಈ ಹುದ್ದೆಯನ್ನು ಹಿಂದೆ ದಿಗ್ಗಜರಾದ ಸುಂದರ್ ಸಿಂಗ್ ಭಂಡಾರಿ, ಕುಶಭಾವು ಠಾಕ್ರೆಯಂಥವರು ನಿರ್ವಹಿಸಿದ್ದರು. ಅ ಹುದ್ದೆಯಲ್ಲಿ ೧೯೯೮ ಮತ್ತು ೧೯೯೯ ರ ಲೋಕಸಭಾ ಚುನಾವಣೆಯ ಪ್ರಚಾರವೇ ಪ್ರಮುಖವಾದವು. ಬಿಜೆಪಿಯು ಎರಡೂ ಚುನಾವಣೆಗಳಲ್ಲಿ ಏಕೈಕ ಬೃಹತ್ ಪಕ್ಷವಾಗಿ ಹೊರಹೊಮ್ಮಿ, ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಸರಕಾರ ರಚಿಸಿತು.
ಅದೇ ಸಂದರ್ಭದಲ್ಲಿ ಪಕ್ಷ ಸಂಘಟನೆಯಲ್ಲಿ ಶ್ರೀ ಮೋದಿಯವರು ಹೊಸ ನಾಯಕರನ್ನು ಬೆಳೆಸಿದರು, ಯುವ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದರು ಹಾಗೂ ತಂತ್ರಜ್ನಾನದ ಉಪಯೋಗವನ್ನು ಚುನಾವಣಾ ಪ್ರಚಾರಕ್ಕೆ ಬಳಸಲು ನಾಂದಿಹಾಡಿದರು. ಇವೆಲ್ಲವೂ ಪಕ್ಷದ ಬಲವನ್ನು ಹೆಚ್ಚಿಸಿತಲ್ಲದೇ, ೨ ಸಂಸದರ ಪಕ್ಷವು ೧೯೯೮ ರಿಂದ ೨೦೦೪ ರ ವರೆಗೆ ಪೂರ್ಣಾವಧಿ ಸರಕಾರವಾಗಿ ಆಡಳಿತ ನಡೆಸುವ ಸಾಮರ್ಥ್ಯಕ್ಕೆ ಬೆಳೆದದ್ದು ಸುಳ್ಳಲ್ಲ.